Wednesday, 11th December 2024

ಚಿತ್ರಗೀತೆಗಳಲ್ಲಿಯೇ ಸಾಗುವ ಚಿತ್ರ ಜೀವನ

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ವೃದ್ಧಾಪ್ಯಕ್ಕೆ ಕಾಲಿಟ್ಟ ಮೇಲೆ ಯಾರೋ ಅಂದ ಮಾತಿಗಿಂತ, ಯಾರೋ ಹಾಡಿದ ಹಾಡು, ನುಡಿಸಿದ ವಾದ್ಯ, ಗಾಳಿಯಲ್ಲಿ ತೇಲಿ ಬರುವ ಹೂವಿನ ಪರಿಮಳ ಹೊತ್ತು ತರುವ ನೆನಪುಗಳಿವೆಯಲ್ಲ ಅದು ದೇಹ, ಮನಸುಗಳನ್ನು ಸ್ವಸ್ಥವಾಗಿಡಬಲ್ಲದು. ಅವು ಸವಿ ನೆನಪುಗಳಾಗಿರಬೇಕು.

‘ಸವಿ ನೆನಪುಗಳು ಬೇಕು, ಸವಿಯಲೀ ಬದುಕು, ಕಹಿ ನೆನಪು ಸಾಕೊಂದು ಮಾತಲಿ ಬದುಕು ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ ಕಾಡುತಿದೆ ಮನವಾ ….’ ‘ಅಪರಿಚಿತ ’ ಚಿತ್ರದ ಈ ಹಾಡು, 1978ನೇ ಇಸವಿಯದ್ದು, ಆಗ ನನಗಿನ್ನೂ 17ರ ಪ್ರಾಯ. ಈ ಸಿನಿಮಾ ಬಿಡುಗಡೆ ಆಗಿ ನಡೆಯುತ್ತಿದ್ದಾಗ ರೇಡಿಯೊದಲ್ಲಿ ಈ ಹಾಡು ಮೆಚ್ಚಿದವರು ಹಾಕಿದ ಪತ್ರಕ್ಕೆ ಉತ್ತರವಾಗಿ ಅವರು ಬಯಸಿದ ಈ ಹಾಡನ್ನು ಆಕಾಶವಾಣಿಯವರು ಪ್ರಸಾರ ಮಾಡಿದಾಗ ‘ಅಯ್ಯೋ! ಈ ಗೋಳಿನ ಹಾಡು ಬರೆದವರು ಯಾರಪ್ಪಾ.. ಇವನ್ನೆಲ್ಲ ಯಾರು ಕೇಳ್ತಾರೋ’ ಎನಿಸುತ್ತಿತ್ತು.

‘ಅಪರಿಚಿತ’ ಚಿತ್ರದ ಈ ಹಾಡು ‘ಕಿಕ್ ದಿ ಪಾಸ್ಟ್, ಡೋಂಟ್ ಥಿಂಕ್ ಟುಮಾರೋ, ಥಿಂಕ್ ಎಟ್ ಪ್ರೆಸೆಂಟ್’ ಎಂಬ ದಿನಗಳವು. ಆದರೆ ವಿದ್ಯಾರ್ಥಿ ದೆಸೆ ಮುಗಿದು, ಉದ್ಯೋಗ ಹುಡುಕುವ ಪರ್ವ ಆರಂಭವಾಗಿ, ಸಿಗದಾಗ ನಿರಾಸೆ ಕವಿದು, ಅಲ್ಪರ ಮುಂದೆಲ್ಲ ಅಂಗೈ ಚಾಚಿ, ಕಂಡವರ ಬಾಗಿಲು ಕಾಯ್ದು, ದುರಹಂಕಾರಿಗಳ ಮುಂದೆಲ್ಲ ವಿನೀತವಾಗಿ ನಿಲ್ಲುವ ಸ್ಥಿತಿ ಬಂದಾಗ ಆದರ್ಶ, ಸೇವೆ, ಪರೋಪಕಾರ ಎಂಬೆಲ್ಲ ಪದಗಳು ಕೇವಲ ಹಣದ ಹಿಂದಿನ ನೆರಳುಗಳು ಎಂದು ಅರಿವಾದಾಗ ಆದ ನಿರಾಸೆ ಅಷ್ಟಿಷ್ಟಲ್ಲ.

ಮೈ ತುಂಬಾ ಸದ್ಗುಣಗಳಿದ್ದರೂ, ಕೊರಳಲ್ಲಿ ಬಂಗಾರದ ಒಂದೆಳೆ ಚೈನು, ಹತ್ತು ಬೆರಳುಗಳಲ್ಲಿ ಹತ್ತೂ ಬೆರಳು ಗಳಿಗೆ ಉಂಗುರವಿದ್ದವನಿಗೆ ಸಿಗುವ ಗೌರವ, ಅಧಿಕಾರ, ಪ್ರೀತಿಗಳನ್ನು ಕಂಡಾಗ, ರಾತ್ರಿಯ ಕನಸಿಗೂ, ಹಗಲಿನ ಬೆಳಕಿಗೂ ಇರುವ ವ್ಯತ್ಯಾಸದ ಅರಿವಾಗಲು ಶುರುವಾಯ್ತು. ಹಣವೊಂದನೆ ಗಳಿಸು ಲವಿಲ್ಲ ಕಲೆಗೆ’ ಎಂಬ ಸಾಹಿತ್ಯದ ಸಾಲುಗಳೇ ಸತ್ಯ ಎನಿಸಿತು. ಅಲ್ಲಿಂದ ಕೈ ಹಿಡಿದಿದ್ದು ಕರ್ನಾಟಕ ಹಾಸ್ಯಪ್ರಿಯರು. ಮೂವತ್ತು ವರ್ಷಗಳ ಕಾಲ ಸುತ್ತಿದ ದೇಶ, ಊರು, ನಗರ, ಹಳ್ಳಿಗಳು ಓಹ್! ನೆನೆಸಿಕೊಂಡರೆ, ಸಿನಿಮಾದ ರೀಲುಗಳಂತೆ ಮೆದುಳಲ್ಲಿ ಟರ್ರರ್ರರ್ರ್ ಗುಟ್ಟುತ್ತವೆ. ಮೆದುಳ ಪರದೆಯಲ್ಲಿ ಚಿತ್ರಗಳು ಮೂಡುತ್ತವೆ.

ಇತ್ತೀಚಿನ ಇಪ್ಪತ್ತೈದು ವರ್ಷಗಳಂತೂ ಅಕ್ಷರಶಃ ನನ್ನೂರು, ನನ್ನ ಮನೆಮಂದಿ, ನಮ್ಮೂರ ಜತ್ರೆಗಳು, ಊರ ಹಬ್ಬಗಳು ಎಲ್ಲವನ್ನೂ ಮರೆತಿದ್ದೆ. ನಿತ್ಯ ಮುನ್ನೂರು,
ನಾಲ್ಕುನೂರು ಕಿಲೋಮೀಟರ್‌ಗಳ ಪಯಣ, ಪ್ರತಿನಿತ್ಯ ಹೊಸ ಊರು, ಹೊಸ ಜನಗಳ ಪರಿಚಯ, ಹೊಸ ಹೊಸ ವೇದಿಕೆಗಳು, ಹಳ್ಳ, ಕೊಳ್ಳ, ನದಿಗಳಾಗಿ, ನದಿಗಳು ಸಮುದ್ರ ಸೇರಿ ವಿಶಾಲವಾಗುವಂತೆ ನನ್ನ ಜಗತ್ತು ವಿಸ್ತಾರವಾಗುತ್ತಲೇ ಹೋಯಿತು. ಮಿದುಳು ಚಿಕ್ಕದು, ಎಷ್ಟು ಅಂತ ನೆನಪಿಡುತ್ತದೆ ಹೇಳಿ? ಹಳೆಯ ದನ್ನು ಮರೆಯುತ್ತ, ಸ್ಥಳ ಮಾಡಿಕೊಂಡು ಹೊಸದನ್ನು ತುಂಬಿಕೊಳ್ಳಲಾರಂಭಿಸಿತು.

ಮರೆತವರು ಮುನಿಸಿಕೊಂಡರು, ಗುರುತಿಸಿದರು, ಗೌರವ ಕೊಟ್ಟರು. ಹೀಗೆ ದಿನಗಳು ಉರುಳಿ ಉರುಳಿ, ಕೊರೋನಾ ಈ ಎರಡು ವರ್ಷಗಳು ಮತ್ತೆ ಊರು, ಮನೆ ಸೇರುವಂತೆ ಮಾಡಿದವು. ಆಗ ನೆನಪಾದದ್ದೇ ಈ ನಲವತ್ತೈದು ವರ್ಷಗಳ ಹಿಂದಿನ ಹಾಡು, ‘ಸವಿ ನೆನಪುಗಳು ಬೇಕು, ಸವಿಯಲೀ ಬದುಕು’ ಎಂದು. ‘ಎರಡು ಮುಖ’ ಎಂಬ ಕಪ್ಪು-ಬಿಳುಪು ಸಿನಿಮಾ ಒಂದಿದೆ. 1969ರ ಇಸ್ವಿಯದು, ಅದರಲ್ಲಿ ಜಯಂತಿ, ರಾಜೇಶ ಮಧ್ಯೆ ಬಹು ಮಧುರ ಮಾರ್ಮಿಕವಾದ
ಹಾಡೊಂದಿದೆ, ಬಾಳಿಗೊಂದು ಬಯಕೆ ಆಸರೆ ಬಯಕೆ ತುಂಬಲು ಮನವು ಆಸರೆ ಮನದ ಮನವು ನೀನೇ ಆಗಿರೆ ನೀನೇ ನನಗೆ ಆಸರೆ ಮನದ ಮುಂದೊಂದು ಗುರಿ, ಒಂದು ಬಯಕೆ, ಒಂದು ಕನಸು ಇದ್ದರೆ ಬದುಕಿಗೆ ಬಲ ಬರುತ್ತದೆ. ಕೆಲವರು ‘ಲೈಫ್ ಬೋರ್’ ಎನ್ನುತ್ತಾರೆ.

ಇಂಥವರಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಹೀಗೊಂದು ಹಾಸ್ಯದ ಹಸಿರು ನಿಶಾನೆ ಇಟ್ಟುಕೊಂಡು ಹಡಗನ್ನೇರಿದ್ದ ನನಗೆ, ನಿವೃತ್ತಿಯ ಅಂಚು ಅರವತ್ತಕ್ಕೆ ಬಂದಾಗ ಮತ್ತೆ ಬಾಲ್ಯದ ನೆನಪೆಲ್ಲ ಮರುಕಳಿಸುತ್ತಿವೆ. ತೆಗಳಿದವರೆಲ್ಲ ತೆಪ್ಪಗಾಗಿದ್ದಾರೆ. ಊರೂರಿಗೆ, ಕರ್ನಾಟಕದ ಮೂಲೆಮೂಲೆಗಳಲ್ಲಿ ಹರಸುವವರಿದ್ದಾರೆ. ನಮ್ಮೂರಿಗೆ ಬನ್ನಿ, ನಮ್ಮ ಮನೆಗೆ ಬನ್ನಿ ಎನ್ನುವವರಿದ್ದಾರೆ. ಒಬ್ಬನೇ ಕೂತಾಗ ಬದುಕು ಶೂನ್ಯ ಎನಿಸದಿದ್ದರೆ ಸಾಕು. ಕಳೆದ ದಿನಗಳು ಪಶ್ಚಾತ್ತಾಪ ತರದಿದ್ದರೆ
ಸಾಕು, ಅದುವೇ ನಿಜದ ಸಾಧನೆ.

ನಿಮಗನಿಸಿದೆಯೋ, ಇಲ್ಲವೋ ನನಗಂತೂ ವೃದ್ಧಾಪ್ಯಕ್ಕೆ ಕಾಲಿಟ್ಟ ಮೇಲೆ ಯಾರೋ ಅಂದ ಮಾತಿಗಿಂತ, ಯಾರೋ ಹಾಡಿದ ಹಾಡು, ನುಡಿಸಿದ ವಾದ್ಯ, ಗಾಳಿಯಲ್ಲಿ ತೇಲಿ ಬರುವ ಹೂವಿನ ಪರಿಮಳ ಹೊತ್ತು ತರುವ ನೆನಪುಗಳಿವೆಯಲ್ಲ ಅದು ದೇಹ, ಮನಸುಗಳನ್ನು ಸ್ವಸ್ಥವಾಗಿಡಬಲ್ಲದು. ಅವು ಸವಿ ನೆನಪು ಗಳಾಗಿರಬೇಕು. ಊರೂರು ತಿರುಗುವ ನನ್ನನ್ನು ಅನೇಕರು, ವಿಶೇಷವಾಗಿ ‘ಹೋಮ್‌ಸಿಕ್’ ಗೆಳೆಯರು ಆಕ್ಷೇಪಿಸುತ್ತಿರುತ್ತಾರೆ. ನಮ್ಮ ಮನೆಯಲ್ಲೇನಾದರೂ ಆಕಸ್ಮಿಕ ಅವಘಡಗಳಾದಾಗ, ಅವರ ನಾಲಿಗೆಗೆ ಚೈತನ್ಯ ಬಂದು ನೀನು ಊರೂರು ತಿರುಗುತ್ತಿ, ಹಣ, ಹೆಸರಿನ ಬೆನ್ನು ಹತ್ತೀದಿ, ಅನುಭವಿಸು ಎಂದೇ ಆಕ್ಷೇಪಿಸಿ ತಮ್ಮದು ಸೇಫ್ ಜೋನ್ ಎಂಬಂತೆ ಬೀಗುತ್ತಿರುತ್ತಾರೆ. ಶ್ರೀ ಪ್ರಭಾಕರ ಶಾಸ್ತ್ರಿ ಅವರ ಬೃಹತ್ ಸಂಸ್ಕೃತ ಸುಭಾಷಿತ ಭಂಡಾರ ಗ್ರಂಥದಲ್ಲಿ ಒಂದು ಸುಭಾಷಿತ ಹೀಗಿದೆ. ಪ್ರವಾಸ ಮಾಡದ ಮನುಷ್ಯ, ಪಂಡಿತರ ಜತೆ ಚರ್ಚಿಸದ ಮನುಷ್ಯ, ಸ್ನೇಹಿತ ಇಲ್ಲದ ಮನುಷ್ಯ ನೀರಿನ ಮೇಲೆ ತುಪ್ಪದಂತೆ ಇದ್ದಲ್ಲಿಯೇ ಇರುತ್ತಾನೆ, ಇವುಗಳನ್ನು ಮಾಡುವ ಮನುಷ್ಯ ನೀರಿನ ಮೇಲಿನ ಎಣ್ಣೆಯಂತೆ ತಕ್ಷಣ ಪಸರಿಸುತ್ತಾನೆ ಸತ್ಯವಾದ ಮಾತು ಎನಿಸುತ್ತದೆ.

ಸಂತರಾದ ರಾಮತೀರ್ಥರು ಒಂದೆಡೆ ಹೇಳುತ್ತಾರೆ. ಮನೆಯು ಪ್ರೇಮದ ಕೇಂದ್ರವಾಗಬೇಕು. ಅದೇ ಪರಿಧಿಯಾಗಬಾರದು. ಎಲ್ಲೋ ಓದಿದ್ದು; ಅರವತ್ತು
ತುಂಬಿದೊಡೆ ಮರು ಮಾತುಬೇಡ, ಉಸಿರೇ ಪರಿಮಳವಾಗೆ ಬೆಲೆಗೊಂಬ ಹೂವೇಕೆ? ವಾಚಾಳಿತನ ಅಗೌರವಕ್ಕೆ ಕಾರಣ, ಮೌನ ಉನ್ನತಿಗೆ ಕಾರಣ ಉದಾ ಹರಣೆಗೆ ಶಬ್ದ ಮಾಡುವ ಗೆಜ್ಜೆಯನ್ನು ಕಾಲಿಗೆ ಕಟ್ಟಿಕೊಳ್ಳುತ್ತೇನೆ. ಮೌನವಾಗಿರೋ ಹೂವನ್ನು ಮಾಲೆ ಮಾಡಿ, ಮುಡಿಗೇರಿಸಿಕೊಳ್ಳುತ್ತೇವೆ, ಕೊರಳಿಗೂ ಹಾಕಿ ಕೊಳ್ಳುತ್ತೇವೆ. ಬೇಕಾದರೆ ಗಮನಿಸಿ ನೋಡಿ, ನಿಮ್ಮ ಜೀವನದಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಬದಲಾವಣೆ ಬರುತ್ತಿರುತ್ತದೆ.

ನಗು ನಗುತಾ ನಲಿ ನಲಿ.. ಏನೇ ಆಗಲಿ, ಅದರಿಂದಾ ನೀ ನಲಿ ಎಂಬ ಹಾಡಿನೊಂದಿಗೆ ಆರಂಭವಾಗುವ ನಮ್ಮ ಜೀವನ, ಹೆಣ್ಣೊಂದು ಜೀವನದಲ್ಲಿ ಬಂತೆಂದರೆ ಆಕಾಶವೇ ಬೀಳಲಿ ಮೇಲೆ, ನಾನೆಂದು ನಿನ್ನವನು, ಭೂಮಿಯೇ ಬಾಯ್ಬಿಡಲಿ ಇಲ್ಲೇ, ನಾ ನಿನ್ನ ಕೈ ಬಿಡೆನು ಎಂದೇ ಹಾಡುತ್ತದೆ. ನಂತರದ ಹಾಡೇ ನಮ್ಮ ಸಂಸಾರ ಆನಂದ ಸಾಗರ, ಪ್ರೀತಿ ಎಂಬ ದೈವವೇ ನಮಗಾಧಾರ, ಆ ದೈವ ತಂದ ವರದಿಂದ ಬಾಳೇ ಬಂಗಾರ ನಂತರ ಮಕ್ಕಳ ಹುಟ್ಟು, ಬೆಳವಣಿಗೆ ಆಗ ಬರುವ ಹಾಡು? ತೆಂಗಿನಮರ ಹಾಕಿದ್ರೆ ಎಳೆನೀರು ಕೊಡ್ತದೆ, ಪ್ರೀತ್ಸಿ ಬೆಳ್ಸಿದ ಮಕ್ಳಿಂದ ಕಣ್ಣೀರ್ ಸಿಕ್ತದೆ ಎಂಬ ಬೆಳವಲದ ಮಡಿಲಲ್ಲಿ ಚಿತ್ರದ ಹಾಡು, ಮಕ್ಕಳು
ಬೆಳೆದು ತಮ್ಮ ತಮ್ಮ ಪ್ರಪಂಚವನ್ನು ಅರಸಿ ಹೊರಟರೆಂದರೆ, ನಮ್ಮ ಹಾಡು ದೇವರ ದುಡ್ಡು ಚಿತ್ರದ ನಾನೇ ಎಂಬ ಭಾವ ನಾಶವಾಯಿತು, ನೀನೇ ಎಂಬ ನೀತಿ ನಿಜವಾಯಿತು, ಹೇ ಕೃಷ್ಣಾ… ಎಂದು ಕೂಗುವ ಸರದಿಯ ಹಾಡು, ಇನ್ನೂ ಸಂಕಷ್ಟಗಳು ಹೆಚ್ಚಾದವು, ನಾವೇ ಸಾವು ಕರೆದರೂ ಬರದಿದ್ದರೆ, ಇಲ್ಲೇ ಸ್ವರ್ಗ, ಇಲ್ಲೇ ನರಕ, ಬೇರೇನಿಲ್ಲಾ ಸುಳ್ಳು, ಹುಟ್ಟು ಸಾವು ಎರಡರ ನಡುವೆ ಮೂರು ದಿನದಾ ಬಾಳು…ಹೇ ಮೂರು ದಿನದ ಬಾಳು; ಎಂದು ತತ್ವಜನದ ಹಾಡು ಶುರು. ಹೀಗೆ ಇಡೀ ನಮ್ಮ ಬದುಕು ಚಿತ್ರಗೀತೆಗಳ ಮಧ್ಯೆಯೇ ಚಿತ್ರವಾಗಿ ಸಾಗುತ್ತದೆ.