ತನ್ನಿಮಿತ್ತ
ಡಾ.ರಾಮಮೂರ್ತಿ ರಾವ್
ಮನುಷ್ಯನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಂಗೀತ ಬೆರೆತುಕೊಂಡಿದೆ. ಮಗು ಹುಟ್ಟಿ ಭೂಮಿಗೆ ಬಂದೊಡನೆ ತಾಯಿ ಇಂಪಾದ ಜೋಗುಳ ಹಾಡುತ್ತ ಮಗುವನ್ನು ನಿದ್ರೆ ಮಾಡಿಸುತ್ತಾಳೆ.
ಜೋಗುಳ ಹಾಡಲು ಬರದವರು ಯಾವುದಾದರೂ ಧ್ವನಿ ಮುದ್ರಿತ ಸಂಗೀತವನ್ನು ಹಾಕಿಯಾದರೂ ಮಗುವನ್ನು ಮಲಗಿಸು ತ್ತಾಳೆ. ಹೀಗೆ ಹುಟ್ಟಿದಾಗಿನಿಂದಲೆ ಎಲ್ಲರ ಪ್ರಯಾಣ ಸಂಗೀತದೊಂದಿಗೆ ಸಾಗುತ್ತದೆ. ರೈತ ಭೂಮಿಯನ್ನು ಉಳುವಾಗ, ಬಿತ್ತುವಾಗ, ಬೀಸುವಾಗ, ಕುಟ್ಟುವಾಗ, ಕೊಯ್ಲು ಮಾಡುವಾಗ ಎಲ್ಲಾ ಸಂದರ್ಭಗಳಲ್ಲೂ ತನ್ನಷ್ಟಕ್ಕೆ ತಾನೇ ಹಾಡುತ್ತಿರುತ್ತಾನೆ.
ಒಟ್ಟಿನಲ್ಲಿ ಸಂಗೀತದಿಂದ ದೊರೆಯುವ ಸಂತೋಷ ಆತನ ಹೃದಯದಲ್ಲಿ ಆನಂದದ ತರಂಗಗಳನ್ನು ಎಬ್ಬಿಸುತ್ತದೆ. ಇದು ಅಂತ ರಂಗವನ್ನು ತಣಿಸುತ್ತದೆ. ಅವನನ್ನು ಸುಸಂಸ್ಕೃತ ನನ್ನಾಗಿ ಮಾಡುತ್ತದೆ. ಸಂಗೀತವು ಜಾತಿ, ಮತ, ದೇಶ, ಭಾಷೆ, ಪಂಗಡ ಎಂಬ ಬಂಧನಕ್ಕೆ ಸಿಲುಕದೆ ವಿಶ್ವವಾಣಿಯಾಗಿ ನಿಲ್ಲುವ ಯೋಗ್ಯತೆ ಪಡೆದಿದೆ ಎಂದರೆ ತಪ್ಪಾಗಲಾರದು. ಹಿಂದೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಲೆಂದು ಪ್ರೇರೇಪಿಸುವ ಹಲವಾರು ಹೋರಾಟ ಗೀತೆಗಳು ಬೇರೆ ಬೇರೆ ಭಾಷೆಗಳಲ್ಲಿ ರಚಿತವಾಗಿದ್ದವು. ಇವು ಮನೆಮನೆಗಳಲ್ಲೂ ಕೇಳಿಬರುತ್ತಿತ್ತು.
ಇವುಗಳಿಂದ ಸ್ಫೂರ್ತಿ ಪಡೆದ ಹಲವು ದೇಶಭಕ್ತರು ತಮ್ಮಮನೆ ಮಠ ಉದ್ಯೋಗ ಹುಟ್ಟೂರು ಎಲ್ಲಾ ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಘಟನೆಗಳಿವೆ. ಸ್ವಾತಂತ್ರ್ಯ ಸಂಗ್ರಾಮದ ಆ ಕಾಲಘಟ್ಟದಲ್ಲಿ ವಿದೇಶಿ ಸರಕುಗಳ
ವಿರೋಧ ಹಾಗೂ ಸ್ವದೇಶಿ ಚಳವಳಿಗಳ ಅಂಗವಾಗಿ ಮತ್ತು ನೂಲು ತೆಗೆಯುವ ಕಾರ್ಯದ ಬಗ್ಗೆ ಪ್ರೇರಣೆ ಮೂಡಿಸುವ ನೂರಾರು ಗೀತೆಗಳು ಚಾಲ್ತಿ ಯಲ್ಲಿದ್ದವು.
ಹಾಗೆಯೇ ನಮ್ಮ ದೇಶದ ಕೆಲವು ಯುದ್ಧದ ಸಂದರ್ಭಗಳಲ್ಲಿ ಯೋಧರಿಗೆ ಸಮರೋತ್ಸಾಹ ತುಂಬಲು ಹಲವಾರು ರಣಗೀತೆ ಗಳು, ವೀರಗೀತೆಗಳು ರಚಿತವಾಗಿದ್ದವು. ಇವು ಯೋಧರ ಧೈರ್ಯ, ಸ್ಥೆರ್ಯ ಹೆಚ್ಚಿಸು ವಂತಿರುತ್ತಿದ್ದವು. ಸಂಗೀತದ ವಿಷಯದಲ್ಲಿ ಒಂದು ಮಾತಿದೆ – ಇದು ಕಿವಿಗೆ ಸೊದೆ ’, ಮನಕೆ ಸಂತರ್ಪಣಂ ಅಂತ ಅಂದರೆ ಸಂಪೂರ್ಣ ಸುಖ ಸಂಗೀತದಿಂದ ಲಭಿಸುತ್ತದೆ. ಇಲ್ಲಿ ಇನ್ನೂ ಒಂದು ಕವಿ ಮಾತಿದೆ – ಮುದಮಲ್ಲಿ, ಮುದಮಿಲ್ಲಿ, ಮುದಮೆತ್ತಲೂ ನಾದಮಿದು ತುಂಬಿದಲ್ಲಿ ಅಂದರೆ ಸಂಗೀತ
ವಿzಡೆಯೆ ಆನಂದ ತುಂಬಿರುತ್ತದೆಂಬುದೇ ಇಲ್ಲಿನ ಕವಿಭಾವ.
ಹಾಗಾದರೆ, ಸಂಗೀತ ಎಂದರೇನು? ಇದು ಕೇಳುಗರೆಲ್ಲರಿಗೂ ಆಹ್ಲಾದವನ್ನು ನೀಡುವ ಧ್ವನಿ ವಿಶೇಷ . ಸಂಗೀತವು ನಾದದಿಂದ ಹುಟ್ಟಿದ್ದು, ಇದು ವಿದ್ಯೆಯೂ ಹೌದು, ಕಲೆಯೂ ಹೌದು, ವಿಜ್ಞಾನವೂ ಹೌದು. ವಿದ್ಯೆಯಾಗಿ ಇದನ್ನು ಗಂಭೀರ ಶಿಸ್ತಾಗಿ ಸಾಧನೆ
ಮಾಡಬೇಕಾಗುತ್ತದೆ. ಕಲೆಯಾಗಿ ಇದು ವೈಯಕ್ತಿಕ ಪ್ರತಿಭೆ ಮತ್ತು ಕೌಶಲ್ಯಕ್ಕೆ ಅವಕಾಶ ನೀಡುತ್ತದೆ.
ವಿಜ್ಞಾನವಾಗಿ ಮಿದುಳಿಗೂ ಸಾಕಷ್ಟು ಕಸರತ್ತನ್ನು ನೀಡುತ್ತದೆ. ಜನರನ್ನು ಸುಸಂಸ್ಕೃತರನ್ನಾಗಿ ಮಾಡಲು ಸಂಗೀತ ಒಂದು ಅದ್ಭುತ ಮಾಧ್ಯಮ. ನಮ್ಮ ಸಂಗೀತದ ವಾಗ್ಗೇಯಕಾರರು, ದಾಸವ ರೇಣ್ಯರು ಸಂಗೀತದಿಂದಲೇ ಜನಜೀವನ ಹಸನಾಗು ವಂತೆ
ಮಾಡಿದರು. ಬರಿಯ ಉಪದೇಶ, ಉಪನ್ಯಾಸಗಳಿಂದ ಮಾತ್ರವೇ ಜನರನ್ನು ಸುಸಂಸ್ಕೃತರನ್ನಾಗಿ ಮಾಡಲು ಸಾಧ್ಯವಾಗಲಾರದು. ಅದೇ ಉಪದೇಶಗಳ ತತ್ತ್ವಗಳನ್ನು ಮಧುರವಾದ ಗಾಯನದ ಮೂಲಕ ಸಂಗೀತ ರೂಪದಲ್ಲಿ ಸೊಗಸಾಗಿ ಹಾಡಿ ನಿರೂಪಿಸಿದಾಗ ಆ ತತ್ತ್ವಗಳು ಜನಮನ ತಲುಪುವುದು ಖಂಡಿತ.
ಸಂಗೀತವನ್ನು ಮನರಂಜನೆಗೆ ಮಾತ್ರ ಎಂದು ಸೀಮಿತ ಗೊಳಿಸುವುದು ಸರಿಯಲ್ಲ. ಇದು ಅಮರವಾದ ಆತ್ಮಾನಂದ ಕೊಡುವ ಒಂದು ರಾಜಯೋಗ. ಇದು ಹಾಡುವವನನ್ನೂ ಹಾಗೂ ಕೇಳುವವನನ್ನೂ ಆನಂದದಲ್ಲಿ ಲೀನಗೊಳಿಸುತ್ತದೆ. ಸಂಗೀತಕ್ಕೆ ಭಾಷೆಯ ಬೇಲಿ ಎಂಬುದೇ ಇಲ್ಲ. ಅದು ಯಾವ ಭಾಷೆಯಲ್ಲಿದ್ದರೂ ಅದನ್ನು ಎಲ್ಲ ಭಾಷಿಕರೂ ಆಸ್ಪಾದಿಸಬಹುದು. ಏಕೆಂದರೆ, ನಾವು ವಾದ್ಯ ಸಂಗೀತವನ್ನು ಆಸ್ವಾದಿಸುವಾಗ ನಮಗೆ ಅಲ್ಲಿ ಭಾಷೆ, ಸಾಹಿತ್ಯ ಮುಖ್ಯವಾಗಲಾರದು. ಅಲ್ಲಿನ ಮಧುರತೆಯನ್ನು ಮಾತ್ರ ನಾವು ಸವಿಯುತ್ತೇವೆ.
ಶಾಸ್ತ್ರೀಯ, ಜಾನಪದ, ಪಾಶ್ಚಾತ್ಯ, ಹೀಗೆ ಯಾವುದೇ ಪ್ರಕಾರವು ನಮಗೆ ಸಂತೋಷ ಕೊಡಬಹುದು. ಹಾಗಾಗಿ ವಿಶ್ವ ಕೌಟುಂಬಿಕ ಭಾವನೆಯನ್ನು ಬಿತ್ತುವುದಕ್ಕೆ ಸಂಗೀತಕ್ಕಿಂತಲೂ ಉತ್ತಮವಾದ ಸಾಧನ ಬೇರೊಂದಿಲ್ಲ. ಆದ್ದರಿಂದಲೇ ಸಂಗೀತವನ್ನು ವಿಶ್ವದ ಮಾಧುರ್ಯಮಯ ಭಾಷೆ ಎಂದು ಕರೆಯಲು ಅಡ್ಡಿ ಏನಿಲ್ಲ. ಸಂಗೀತವು ಮಾನವನ ಕಲ್ಪನಾಶಕ್ತಿಯ ದೊಡ್ಡ ಕೊಡುಗೆ ಯಾಗಿದೆ. ಅನಾದಿ ಕಾಲದ ಆದಿಮಾನವನು ಧ್ವನಿಯ ಮೂಲಕವೇ ತನ್ನ ಮನದ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ. ನಿಸರ್ಗದ ವಾತಾವರಣದಲ್ಲಿ ಪಶುಪಕ್ಷಿಗಳ ಧ್ವನಿಗಳು ಆತನ ಚಿತ್ತವೃತ್ತಿಯ ಮೇಲೆ ಪರಿಣಾಮ ಬೀರಿದವು.
ವನಸಿರಿಯ ಸಪ್ಪಳ, ಹಕ್ಕಿಗಳ ಕಲರವ, ಕೋಗಿಲೆಯ ಮಧುರಧ್ವನಿ ಎಲ್ಲವೂ ಆತನಿಗೆ ಸ್ಫೂರ್ತಿ ತುಂಬಿದವು. ನಿಸರ್ಗ ನಿರ್ಮಿತ
ಹಲವು ರೀತಿಯ ಸಹಜ ಮಧುರ ಧ್ವನಿಗಳನ್ನು ಕೇಳಿದ ಆತ ಅದನ್ನು ಅನುಕರಿಸಲಾರಂಭಿಸಿದ. ಮುಂದೆ ತನ್ನ ಸ್ವಂತ ಕಲ್ಪನಾ ಶಕ್ತಿಯಿಂದ ಅನೇಕ ಮಧುರ ಸ್ವರಗಳನ್ನು ಸೃಷ್ಟಿ ಮಾಡಲಾರಂಭಿಸಿದ. ಅದೇ ಸಂಗೀತದ ಉಗಮಕ್ಕೆ ನಾಂದಿಯಾಯ್ತು.
ಸಂಗೀತ ಕಲೆಯು ಸ್ವರ, ರಾಗ, ಭಾವ, ಲಯ, ಹಾಗೂ ಶೃತಿಗಳ ಮಿಳಿತದಿಂದ ಕೂಡಿದ ಧ್ವನಿಯ ಒಂದು ಸಮನ್ವಯ. ಸುಮಧುರ ಸಂಗೀತವನ್ನು ಕೇಳುವುದರಿಂದ ಮಾನವನ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಸಾಕಷ್ಟು ಉತ್ತಮ ಪರಿಣಾಮ ಉಂಟಾಗುತ್ತದೆಂಬುದನ್ನು ಹಲವಾರು ಸಂಶೋಧಕರು ಪ್ರಮಾಣೀಕರಿಸಿದ್ದಾರೆ. ರಾಗವು ಸುಮಧುರವಾದ ಧ್ವನಿಯ ಸಂಯೋಜನೆ ಆಗಿದ್ದು ಮಾನವನ ಮನಸ್ಸಿಗೆ ಪ್ರಪುಲ್ಲತೆ ನೀಡುವ ಶಕ್ತಿ ಹೊಂದಿದೆ.
ಒಂದು ರಾಗವನ್ನು ನಿರ್ದಿಷ್ಟವಾಗಿ ಮೇಲಿಂದ ಮೇಲೆ ಕೇಳುವುದರಿಂದ ದೇಹದಲ್ಲಿ ನಿರ್ದಿಷ್ಟವಾದ ತರಂಗಗಳು ಉತ್ಪತ್ತಿಯಾಗಿ, ರೋಗ ಪೀಡಿತ ನರಗಳಿಗೆ ಹಾಗೂ ಸ್ನಾಯುಗಳಿಗೆ ವಿಶೇಷ ಸಂವೇದನೆಯನ್ನು ನೀಡಿ ಅವುಗಳಿಗೆ ಸರಿಯಾದ ರೀತಿಯಲ್ಲಿ ರಕ್ತಪರಿಚಲನೆ ಉಂಟು ಮಾಡಿ ಶಕ್ತಿ ಹಾಗೂ ಚೇತನವನ್ನು ತುಂಬುತ್ತದೆ. ಸಂಗೀತ ಕೇಳ್ಮೆಯು ಮನುಷ್ಯನಿಗೆ ಮಾನಸಿಕ ಸ್ವಾಸ್ಥ್ಯದ
ದೃಷ್ಟಿಯಿಂದ ಈ ಕೆಳಕಂಡ ಪ್ರಯೋಜನಗಳನ್ನು ನೀಡುತ್ತದೆ.
ಸಂಗೀತದ ಕೆಲವು ಬೆಳಗಿನ ರಾಗಗಳನ್ನು ಬೆಳಿಗ್ಗೆ ಕೇಳುವುದರಿಂದ ಆ ದಿನವಿಡೀ ಉತ್ಪಾಹದಿಂದಿರಲು ಸಾಧ್ಯವಾಗುತ್ತದೆ. ಹಾಗೆಯೇ ಸಂಜೆಗೆ ಹಾಡಲು ಶ್ರೇಷ್ಠವೆಂದು ಪರಿಗಣಿಸಲ್ಪಟ್ಟ ಕೆಲವು ರಾಗಗಳನ್ನು ಸಂಜೆ ಕೇಳಿದರೆ ಇಡೀ ದಿನದ ಬಳಲಿಕೆ
ಮಾಯವಾಗುತ್ತದೆ. ಸಂಗೀತದ ಕೇಳ್ಮೆ ಯಾವ ಸಮಯದದರೂ ಆಹ್ಲಾದತೆಯನ್ನು ಹೆಚ್ಚಿಸುತ್ತದೆ.
ಮನುಷ್ಯನ ಒತ್ತಡವನ್ನು ದೂರ ಮಾಡುವ ಶಕ್ತಿ ಅದಕ್ಕಿದೆ. ಮನದ ನೋವನ್ನು ಉಪಶಮನಗೊಳಿಸುತ್ತದೆ. ಜನರ ಜತೆ ಸ್ನೇಹ, ಸಹಕಾರ, ಸೌಹಾರ್ಧ, ಪ್ರೀತಿ ಬೆಳೆಯುವಂತೆ ಸಂಗೀತ ಕಚೇರಿಗಳು ಅನುವು ಮಾಡಿಕೊಡುತ್ತದೆ. ಮಗುವೂ ತನ್ನ ಅಳಲು, ನೋವನ್ನು ಸಂಗೀತದಿಂದ ಮರೆಯುತ್ತದೆ. ಸಂಗೀತಾಭ್ಯಾಸ ಹಾಗೂ ಕೇಳ್ಮೆ ಎರಡರಿಂದಲೂ ನಮ್ಮ ಏಕಾಗ್ರತೆ ಹಾಗೂ ಜ್ಞಾಪಕಶಕ್ತಿ ಹೆಚ್ಚುತ್ತದೆ. ಹೀಗೆ ನಿರ್ದಿಷ್ಟ ರಾಗವನ್ನು ಹಾಡುವುದರಿಂದ ನಿರ್ದಿಷ್ಟ ಕಾಯಿಲೆಗಳು ಉಪಶಮನಗೊಳ್ಳುತ್ತವೆ ಎಂಬ ಸಿದ್ಧಾಂತ ಪ್ರಾಚೀನ ಭಾರತದಲ್ಲಿಯೇ ರಾಗ ಚಿಕಿತ್ಸೆ ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿತ್ತು.
ಈಗ ಪಾಶ್ವಾತ್ಯ ರಾಷ್ಟ್ರಗಳಲ್ಲೂ ಸಂಗೀತ ಚಿಕಿತ್ಸೆಯು ಹೆಚ್ಚು ಪ್ರಸಿದ್ಧಿಗೆ ಬರುತ್ತಿದೆ. ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ 1944ರ
ಮಿಚಿಗನ್ ರಾಜ್ಯ ವಿಶ್ವವಿದ್ಯಾನಿಲಯದಲ್ಲಿ ಸಂಗೀತ ಚಿಕಿತ್ಸೆ ಪದವಿಯನ್ನು ಆರಂಭಿಸಲಾಗಿದೆಯಂತೆ, ಇಂದು ಅಮೆರಿಕದಲ್ಲಿ ಸರ್ಟಿಫಿಕೇಶನ್ ಬೋರ್ಡ್ ಫಾರ್ ಮ್ಯೂಸಿಕ್ ಥೆರಪಿಸ್ಟ್ ಎಂಬ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸುತ್ತದೆ ಯಂತೆ.
ಸಂಗೀತ ಚಿಕಿತ್ಸೆಯ ಉದ್ದೇಶದಿಂದಲೇ 1998ರಲ್ಲಿ ವಿಶೇಷವಾಗಿ ದಿ ಅಮೆರಿಕನ್ ಮ್ಯೂಸಿಕ್ ಥೆರಪಿ ಅಸೋಸಿಯೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಒಟ್ಟಿನಲ್ಲಿ ಸಂಗೀತ ಕಲೆಯು ಮಾನವನಿಗೆ ದೈವದತ್ತವಾಗಿ ಲಭಿಸಿರುವ ಒಂದು ಅತ್ಯಮೂಲ್ಯ
ವಾದ ವರ ಪ್ರಸಾದ. ಇಡೀ ವಿಶ್ವದ ಸಮಾಜವು ಶಾಂತಿ, ಪ್ರೇಮ , ಸೌಹಾರ್ದದಿಂದ ಬಾಳುವಂತೆ ಮಾಡಿ ಭಾವೈಕ್ಯವನ್ನು ಸಾಽಸಲು ಸಂಗೀತ ಸಾಧನವಾಗಿದೆ.
ಇಂದು ಅಂದರೆ ಜೂನ್ 21ರಂದು ವಿಶ್ವ ಸಂಗೀತ ದಿನ. ಇದು ಫ್ರಾನ್ಸ್‌ನ ಸಂಸ್ಕೃತಿ ಸಚಿವನಾಗಿದ್ದ ಜಾಕ್ ಲಾಂಗ್ ಎಂಬಾತನ ಕನಸಿನ ಕೂಸು. ಫ್ರಾನ್ಸ್‌ನ ಜನರ ಸಾಂಸ್ಕೃತಿಕ ಅಭಿರುಚಿಗಳನ್ನು ಅರಿತಿದ್ದ ಆತ 1982ರಲ್ಲಿ ಪ್ಯಾರಿಸ್‌ನಲ್ಲಿ ಪ್ರಪ್ರಥಮವಾಗಿ ಒಂದು ಬೃಹತ್ ಸಂಗೀತ ಉತ್ಸವವನ್ನು ಏರ್ಪಡಿಸಿದ್ದನು. ಅಲ್ಲಿಂದ ಮುಂದೆ ಇದೊಂದು ಅಂತಾರಾಷ್ಟ್ರೀಯ ಆಚರಣೆಯಾಗಿ ಸುಮಾರು 130 ದೇಶಗಳ ಒಂದು ಸಾವಿರಕ್ಕೂ ಹೆಚ್ಚು ನಗರಗಳಲ್ಲಿ ಜೂನ್ 21ರಂದು ವಿಶ್ವ ಸಂಗೀತ ದಿನವೆಂದು ಆಚರಿಸಲಾಗು ತ್ತಿದೆ. ಇದರಲ್ಲಿ ಭಾರತ, ಜರ್ಮನಿ, ಇಟಲಿ, ಗ್ರೀಸ್, ರಷ್ಯ, ಆಸ್ಟ್ರೇಲಿಯಾ, ಪೆರು, ಬ್ರೆಜಿಲ್ ಮುಂತಾದ ರಾಷ್ಟ್ರಗಳೂ ಸೇರಿಕೊಂಡಿವೆ. ಇದರ ಮುಖ್ಯ ಉದ್ದೇಶ ವೇನೆಂದರೆ ಸಂಗೀತವನ್ನು ಸಾಧ್ಯವಾದಷ್ಟು ಮಟ್ಟಿಗೆ ಜನರ ಬಳಿಗೆ ತೆಗೆದುಕೊಂಡು ಹೋಗುವುದೇ ಆಗಿದೆ.
ಕೆಲವು ನಗರಗಳಲ್ಲಿ ಹವ್ಯಾಸಿ ಹಾಗೂ ವೃತ್ತಿಪರ ಸಂಗೀತ ಕಲಾವಿದರು ಪ್ರಮುಖ ಬೀದಿಗಳಲ್ಲೇ ಸಂಗೀತ ಗೋಷ್ಠಿಗಳನ್ನು ಅಂದು ನಡೆಸಿಕೊಡುತ್ತಾರೆ. ಇದು ಎಲ್ಲರಿಗೂ ಉಚಿತ ಹಾಗೂ ಕಲಾವಿದರೂ ಇದಕ್ಕಾಗಿ ಅಂದು ಯಾವುದೇ ಸಂಭಾವನೆಯನ್ನು
ಪಡೆಯುವುದಿಲ್ಲ. ಮೇಕ್ ಮ್ಯೂಸಿಕ್ ಎಂಬ ಘೋಷಣೆಯೊಂದಿಗೆ ಅಂದು ಎಲ್ಲೂ ಶಾಸ್ತ್ರೀಯ, ಪಾಪ್, ಜಾಸ್, ರ‍್ಯಾಪ್ ಹಾಗೂ ವಾದ್ಯ ಸಂಗೀತದಂಥ ವಿವಿಧ ಪ್ರಕಾರಗಳ ಸಂಗೀತ ಎಲ್ಲೂ ದಿನವಿಡೀ ನಡೆಯುತ್ತದೆ. ಆದರೆ, ಈ ವರ್ಷ ಕೋವಿಡ್ ಸಾಂಕ್ರಾಮಿಕದ ಕಿರಿಕಿರಿಯಿಂದ ಹೇಗೆ ನಡೆಯುತ್ತವೋ ದೇವರೇ ಬಲ್ಲ.
ಏನೇ ಇರಲಿ, ನೀವು ಸಂಗೀತಗಾರರಾಗಿದ್ದಲ್ಲಿ ವಿಶ್ವ ಸಂಗೀತ ದಿನವನ್ನು ಮನೆಯ ಕೂತು ಆಚರಿಸಿ. ನಿಮಗಿಷ್ಟವಾದ ಸಂಗೀತ ವನ್ನು ಹಾಡಿ ಅಥವಾ ವಾದ್ಯದಲ್ಲಿ ನುಡಿಸಿ ಸಾಮಾಜಿಕ ಜಾಲತಾಣಕ್ಕೆ ಹಾಕಿ. ಎಲ್ಲರೂ ಕೇಳಿ ಆನಂದಿಸಲಿ. ಈ ವಿಶ್ವ ಸಂಗೀತ ದಿನವನ್ನು ಯಾರಾದರೂ ಘೋಷಿಸಿರಲಿ, ಯಾವುದೇ ರಾಷ್ಟ್ರಗಳು ಆಚರಿಸುತ್ತಿರಲಿ ಸಂಗೀತವನ್ನು ಜನರ ಬಳಿ ತೆಗೆದುಕೊಂಡು ಹೋಗಬೇಕು ಎಂಬ ಇದರ ಹಿಂದಿನ ಉದ್ದೇಶ ಪವಿತ್ರವಾದದ್ದು.
ಇಡೀ ವಿಶ್ವವೇ ಕೋವಿಡ್ ಎಂಬ ಮಾಯಾವಿಗೆ ಹೆದರಿ ನಡುಗುತ್ತಿರುವ ಇಂದಿನ ಸಂದರ್ಭದಲ್ಲಿ ಜನರ ಆತಂಕ ನಿವಾರಿಸಲು ಅವರ ಒತ್ತಡಗಳನ್ನು ನೀಗಿಸಲು ದುರಿತ ದುಮ್ಮಾನಗಳನ್ನು ಮರೆಸಲು ಸಂಗೀತವೇ ಒಳ್ಳೆಯ ಪರಿಹಾರ.