Saturday, 14th December 2024

ಸಂಗೀತ ಎಂಬುದು ಅನುಸಂಧಾನವನ್ನು ಬೇಡುವ ಸಭಾಕಲೆ

ಸಪ್ತ ಸ್ವರ

ದೀಪಾ ಫಡ್ಕೆ

ಒಂದು ಡಿಸ್ಕ್ಲೇಮರ್ ಅಥವಾ ಹಕ್ಕು ನಿರಾಕರಣೆಯೊಂದಿಗೆ ಈ ಲೇಖನವನ್ನು ಪ್ರಾರಂಭಿಸುವುದು ಒಳಿತೇನೋ! ಏಕೆಂದರೆ ಪ್ರತಿ ಮಾತನ್ನೂ ಜಾತಿ, ಪಂಥ, ಪಕ್ಷದೊಂದಿಗೇ ನೋಡುವ ಅಭ್ಯಾಸವಾಗಿರುವ ಈ ಹೊತ್ತಿನಲ್ಲಿ ಈ ಲೇಖನ ಸಿದ್ಧಪಡಿಸಲು ಕಾರಣ ಕೇವಲ ಸಂಗೀತ, ಸಂಗೀತ ಮತ್ತು ಸಂಗೀತ ಅಷ್ಟೇ ಎಂದು ವಿನೀತಳಾಗಿ ಹೇಳಬಯಸುತ್ತೇನೆ.

ಕಲೆ ಮತ್ತು ವಿಜ್ಞಾನ, ಮನುಷ್ಯನ ಮನಸ್ಸು ವಿಕಾಸಗೊಂಡಿರುವುದರ ಸೊಗಸಾದ ಗುರುತುಗಳು. ಅದರೆ ಕಲೆ, ಮನುಷ್ಯನ ವಿಕಾಸವನ್ನು ಪ್ರತಿಫಲಿಸುತ್ತಲೇ ಅವನಿಗೆ ಅಲೌಕಿಕ ಸ್ಪರ್ಶದ ಪರಿಚಯವನ್ನೂ ನೀಡಿತು ಎನ್ನಬೇಕು. ಇದಕ್ಕೊಂದು ಉದಾ ಹರಣೆ ನೀಡುವುದಾದರೆ, ಮೇಘಮಲ್ಹಾರ ರಾಗವನ್ನು ಇಂತಿಂಥವರು ಹಾಡಿದಾಗ ವರ್ಷಧಾರೆಯಾಯಿತು ಎನ್ನುವ ದಂತಕತೆ ಗಳನ್ನು ಕೇಳಿದ್ದೇವೆ. ಇಂಥ ಕತೆಗಳನ್ನು ಪಕ್ಕಕ್ಕಿಟ್ಟು ನೋಡಿದರೂ, ಮೇಘಮಲ್ಹಾರ ರಾಗ ಕೇಳಿದಾಗ ಹುಟ್ಟಿದಾಗಿನಿಂದ ಮಳೆಯನ್ನು ನೋಡುತ್ತಲೇ ಬೆಳೆದ ಪ್ರತಿಯೊಬ್ಬನ ಮನದಲ್ಲೂ ವರ್ಷಧಾರೆಯ ಚಿತ್ರಣ ಬಂದು ಹಿತಾನುಭವ ಮೂಡುತ್ತದೆ.

ಅದೇ ಸಂಗೀತದ ವಿಶೇಷತೆ. ಅದು ಅಮೂರ್ತವನ್ನು ಮೂರ್ತವಾಗಿಸುವ ಯಕ್ಷಿಣಿಕಲೆ. ಹೀಗೆ ಸಂಗೀತವು ಮನುಷ್ಯನಿಗೆ
ಸಂತೋಷ, ಸಾಂತ್ವನ, ತೃಪ್ತಿ ನೀಡಿಕೊಂಡು ಬಂದಿದೆ. ಭಾರತೀಯ ಸಂಗೀತವು ‘ಕರ್ನಾಟಕ ಸಂಗೀತ’ ಮತ್ತು ‘ಹಿಂದೂಸ್ತಾನಿ ಸಂಗೀತ’ ಎಂಬೆರಡು ವಿಶಿಷ್ಟ ಸಂಪ್ರದಾಯಗಳಲ್ಲಿ ಬೆಳೆದು ಬಂದಿದೆ. ಅದೇ ಸಪ್ತಸ್ವರಗಳು, ಅದೇ ರಾಗಗಳು ಎರಡು ಭಿನ್ನ ನೆಲೆಗಳಲ್ಲಿ ಭಿನ್ನ ಹೆಸರುಗಳಿಂದ ಅಮೂರ್ತ ಚೈತನ್ಯವನ್ನು ಹುಡುಕುತ್ತಾ ಪ್ರವರ್ಧಮಾನವಾಗಿವೆ. ಕರ್ನಾಟಕ ಸಂಗೀತದ
ಪಾಠಗಳ ಕುರಿತು ಹೇಳುವುದಾದರೆ ಅದರ ಪಠ್ಯ ಅಪ್ಪಟ ಭಾರತೀಯ ಮಹಾಕಾವ್ಯಗಳಿಂದ ಪ್ರೇರಿತವಾದದ್ದು.

ನಮ್ಮ ಮಹಾಕಾವ್ಯಗಳಲ್ಲಿ ಬರುವ ರಾಮ- ಕೃಷ್ಣರು, ಸೊಂಡಿಲ ಗಣಪ, ಭಸ್ಮಭೂಷಿತ ಶಿವನೂ, ಶಿವೆಯ ಶಕ್ತಿಯೂ ಈ ಪಠ್ಯ ದಲ್ಲಿನ ಕೃತಿಗಳ ನಾಯಕ ನಾಯಕಿಯರು. ಮೊದಲ ಪಾಠಗಳಾದ ಸರಳೆವರಸೆ, ಜಂಟಿಗಳ ಅಭ್ಯಾಸ ನಾಲಗೆಗೆ ಚುರುಕು ಮುಟ್ಟಿಸಿದ ಮೇಲೆ ಪಿಳ್ಳಾರಿ ಗೀತೆಗಳ ಪಾಠ ಆರಂಭವಾಗುತ್ತದೆ. ಇತ್ತೀಚೆಗೆ ಮಕ್ಕಳಿಗೆ ಬೋರ್ ಹೊಡೆಸಬಾರದು ಎಂದು ಕೆಲವರು ಬೇಗನೆ ಪಿಳ್ಳಾರಿ ಗೀತೆಗಳನ್ನು ಹೇಳಿಕೊಡುವುದುಂಟು. ಏಕೆಂದರೆ ಅಲ್ಲಿರುವುದು ನೇರಸ್ವರಗಳು:  ಅಲ್ಲಿ ಕ್ಲಿಷ್ಟಕರ ಗಮಕಗಳಿನ್ನೂ ಆರಂಭವಾಗದಿರುವುದರಿಂದ ಮಕ್ಕಳ ಎಳೆಯ ಶಾರೀರದಲ್ಲಿ ಸುಲಭವಾಗಿ ನುಡಿಯುತ್ತವೆ ಅನ್ನುವ ಕಾರಣದಿಂದ. ಈ ಪಿಳ್ಳಾರಿ
ಗೀತೆಯಲ್ಲಿ ಕಾಣಿಸಿಕೊಳ್ಳುವವರೇ ಶ್ರೀಗಣನಾಥ, ಗೌರೀವರ, ಪದುಮನಾಭ ಹೀಗೆ ದೇವದೇವಿಯರು.

‘ಶ್ರೀಗಣನಾಥ ಸಿಂಧೂರ ವರ್ಣ ಕರುಣಸಾಗರ ಕರಿವದನ| ಲಂಬೋದರ ಲಕುಮಿಕರಾ ಅಂಬಾಸುತ ಅಮರವಿನುತ…’ ಇದು ಒಂದು ಗೀತೆಯಾದರೆ ಮುಂದೆ ‘ಪದುಮನಾಭ ಪರಮಪುರುಷ ಪರಂಜ್ಯೋತಿ ಸ್ವರೂಪ’ ಹೀಗೆ ಪಿಳ್ಳಾರಿ ಗೀತೆಗಳು ಹಾಡಲ್ಪ
ಡುತ್ತವೆ. ದೇವರ ನೂರೊಂದು ನಾಮಗಳು ನಮ್ಮ ನಾಲಗೆಯ ಮೂಲಕ ಮನಸ್ಸಿಗೆ ಲಗ್ಗೆ ಇಟ್ಟದ್ದು ಹೀಗೆ. ಈ ಮೂಲಕ ನಾನು ಹೇಳಹೊರಟಿದ್ದು ಶಾಸ್ತ್ರೀಯ ಸಂಗೀತ ನಮ್ಮ ಪುರಾಣದ ಅದೆಷ್ಟು ದೇವದೇವಿಯರ ಪರಿಚಯವನ್ನು ನೀಡುತ್ತಾ ಹೋಗುತ್ತದೆ ಎಂಬುದನ್ನು. ಜಾನಪದ ಪಠ್ಯವೂ ಇದಕ್ಕೆ ಹೊರತಲ್ಲ.

ಇದರಲ್ಲಿ ಯಾವುದೇ ಷಡ್ಯಂತ್ರವನ್ನು ಊಹಿಸುವುದೂ ಹಾಸ್ಯಾಸ್ಪದ ವಿಷಯ. ಏಕೆಂದರೆ ಈ ಹಾಡುಗಳು ಶತಮಾನಗಳ ಹಿಂದೆ ಬೇರೆ ಧರ್ಮಗಳು ಈ ನೆಲಕ್ಕೆ ಪರಿಚಿತವಾಗುವ ಮೊದಲೇ ರಚಿತವಾದಂಥವು. ೭-೮ನೇ ಶತಮಾನದಲ್ಲೇ ಅಥವಾ ಅದಕ್ಕೂ ಮುನ್ನವೇ ತಮಿಳುನಾಡಿನಲ್ಲಿ ಆಳ್ವಾರರು ಮತ್ತು ನಾಯನ್ಮಾರರು ‘ಪಾಶುರ’ಗಳನ್ನು (ಕನ್ನಡದಲ್ಲಿ ದಿವ್ಯಪ್ರಬಂಧಗಳೆಂದು ಹೇಳುವ ಅಭ್ಯಾಸ) ಹಾಡುತ್ತಾ ಭಜಿಸುತ್ತಿದ್ದರೆನ್ನುವುದು ತಿಳಿಯುತ್ತದೆ. ಅದು ಭಕ್ತಿ ಪರಂಪರೆ ಆರಂಭಗೊಂಡ ಕ್ಷಣ. ನಂತರದ ಹರಿದಾಸರ ಸಂಗೀತಲೋಕದ ಬಗೆಗಂತೂ ಗೊತ್ತೇ ಇದೆ. ಇದರಿಂದ, ಭಾರತೀಯ ಸಂಗೀತವು ಇಲ್ಲಿನ ಭಕ್ತಿ ಪರಂಪರೆಗೆ ಸೇರಿದ್ದು ಎಂದು ಸ್ಪಷ್ಟವಾಗುತ್ತದೆ. ಆ ಕಾರಣಕ್ಕೆ ಇಂದಿಗೂ ಸಂಗೀತವು ಮುಖ್ಯವಾಗಿ ಕರ್ನಾಟಕ ಸಂಗೀತವು ಭಕ್ತಿಮೂಲವಾಗಿರುವುದು. ಹಿಂದೂಸ್ತಾನಿ ಸಂಗೀತವೂ ಭಕ್ತಿಮೂಲವೇ ಆದರೂ ಅದು ಶೃಂಗಾರಭಕ್ತಿಯೆಂದೂ ಕರ್ನಾಟಕ ಸಂಗೀತವನ್ನು ಸಮರ್ಪಣಾ ಭಕ್ತಿಮೂಲವೆಂದೂ ಗುರುತಿಸಿದ್ದೂ ಇದೆ. ಒಟ್ಟಿನಲ್ಲಿ ಭಾವದಲ್ಲಿ ಕೊಂಚ ಭಿನ್ನತೆಯಷ್ಟೇ ಬಿಟ್ಟರೆ ಭಕ್ತಿಯೇ ಸಂಗೀತದ
ಮೂಲ ದ್ರವ್ಯವಾಗಿದೆ.

ಮುಂದೆ, ಕಲೆ ಅನ್ನುವುದು ಪ್ರದರ್ಶಕ ಕಲೆಯಾಗಿ ರೂಪುಗೊಂಡಾಗ ಸಂಗೀತವೂ ಸಭಾಸಂಪ್ರದಾಯಗಳನ್ನು ಮೈಗೂಡಿಸಿ ಕೊಂಡು ತನ್ನ ಮೂಲದ್ರವ್ಯವಾದ ಭಕ್ತಿಯನ್ನು ಉಳಿಸಿಕೊಂಡೇ ಬೆಳೆಯಿತು. ಸಂಗೀತವು ಸಭಾ ಸಂಪ್ರದಾಯದ ಮೂಲಕ ಸಾಽಸಿದ ಎತ್ತರ ಕುತೂಹಲಕಾರಿಯಾದುದು. ಸಂಗೀತಾಭ್ಯಾಸಕ್ಕೆ ಒಂದು ಶಿಸ್ತನ್ನು ಹೇಳಿಕೊಟ್ಟ ಕಾರಣಕ್ಕೆ ಪುರಂದರದಾಸರನ್ನು
ಸಂಗೀತ ಪಿತಾಮಹನೆಂದು ಕರೆದಿರುವುದು ಒಂದು ಬೆಳವಣಿಗೆಯಾದರೆ, ನಂತರ ಸಂಗೀತದ ತ್ರಿಮೂರ್ತಿಗಳ ಕೃತಿಗಳ ಗಾಯನವೂ ಒಂದು ಪರಂಪರೆಯಾಗಿದೆ.

ಇಲ್ಲಿ ಸಭಾಸಂಪ್ರದಾಯದ ಕುರಿತು ಒಂದಷ್ಟನ್ನು ಹೇಳಬೇಕು. ಸಂಗೀತ, ಹಾಡುವ ಕಲೆ. ಯಾರ ಕುರಿತೂ ಹಾಡಬಹುದು, ಯಾರೂ ಹಾಡಬಹುದು. ಇದರಲ್ಲಿ ಯಾರ ಅಪ್ಪಣೆ, ಕೃಪೆಯ ಅಗತ್ಯವಿಲ್ಲ. ಹಾಡುವುದರಲ್ಲೂ ೨ ವಿಧಗಳನ್ನು ಗುರುತಿಸುವು
ದಾದರೆ ಆತ್ಮಸಂತೋಷಕ್ಕಾಗಿ ಹಾಡುವುದು ಮತ್ತು ಶ್ರೇಯಸ್ಸಿಗಾಗಿ ಅಥವಾ ಸಭೆಯಲ್ಲಿ ಹಾಡುವುದು ಎನ್ನಬಹುದು. ಆತ್ಮ ಸಂತೋಷಕ್ಕಾಗಿ ಹಾಡುವವರು ಯಾವುದೇ ವಸ್ತು/ವ್ಯಕ್ತಿಯ ಕುರಿತಾಗಿಯೂ ಹಾಡಿಕೊಳ್ಳಬಹುದು. ಆದರೆ ಸಭಾ ಸಂಪ್ರದಾಯದ ಪ್ರಕಾರ ಹೀಗೆ ಹಾಡುವುದು ಅಸಂಬದ್ಧ. ಇದಕ್ಕೆ ಪೂರಕವಾಗಿ ‘ಭಾರತೀಯ ಕಲಾ ದರ್ಶನ’ ಎಂಬ ಕೃತಿಯಲ್ಲಿನ ಸಂಗೀತ ಕಲಾನಿಧಿ ಟಿ.ಚೌಡಯ್ಯನವರ ಲೇಖನದ ಒಂದು ಪ್ಯಾರಾವನ್ನು ಇಲ್ಲಿ ಪ್ರಸ್ತಾಪಿಸುವೆ: “ಪ್ರಧಾನ ಸಂಗೀತಗಾರನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ.

ಸಭೆಗೆ ಬಂದಾಗ ತಾನು ಸರಸ್ವತೀದೇವಿಯ ಸೇವೆಗಾಗಿ ಬರುತ್ತಿದ್ದೇನೆಂಬುದನ್ನು ಆತ ಮರೆಯಬಾರದು. ಅದಕ್ಕಾಗಿ, ಸಭೆಗೆಲ್ಲಾ ಆಪ್ಯಾಯಮಾನವಾಗುವಂತೆ ಯಾವ ರೀತಿ ಕಛೇರಿ ನಡೆಸಬೇಕೆಂದು ಮುಂಚೆಯೇ ನಿಘಂಟುಮಾಡಿಕೊಂಡು ಬರಬೇಕು. ಮನೋಧರ್ಮವೆಂದು ಹೇಳಿಕೊಂಡು ‘ಸಂತೆಯ ಹೊತ್ತಿಗೆ ಮೂರು ಮೊಳ’ ಎಂಬಂತೆ ಬರಬಾರದು. ಅದು ಅಶ್ರದ್ಧೆಯನ್ನು ಸೂಚಿಸುತ್ತದೆ. ಆತನು ಸಭೆಯ ರಮ್ಯತೆ ಮತ್ತು ಗಾಂಭೀರ್ಯಗಳನ್ನು ವೃದ್ಧಿಪಡಿಸುವಂತಿರಬೇಕು. ಕೆಲವು ಸಂಗೀತಗಾರರು ತಂಬೂರಿ ಮೀಟುವ ತಮ್ಮ ಶಿಷ್ಯರನ್ನು ನಿಷ್ಕಾರಣವಾಗಿ ಪದೇ ಪದೆ ಗದರಿಸುವುದು, ಪಕ್ಕವಾದ್ಯಕ್ಕೆ ಬಿಡದೇ ಪಟ್ಟು ಹಿಡಿದು ಹಾಡುವುದು, ಅವರನ್ನು ಅವಮಾನಿಸಲೆಂದು ಮುಂಚೆಯೇ ಸಿದ್ಧಮಾಡಿಕೊಂಡು ಬಂದ ಪಲ್ಲವಿಗಳಿಂದ ಅಡ್ಡಗಾಲು ಹಾಕುವುದು ಮುಂತಾದ ಹೀನಕಾರ‍್ಯಗಳನ್ನು ಮಾಡುತ್ತಾರೆ.

ಅದು ತಪ್ಪು. ಇನ್ನು ಕೆಲವರು ಲಾಘವವಾಗಿ ವ್ಯವಹರಿಸುವುದು, ಸಭಿಕರೊಡನೆ ವಾಗ್ವಾದ ಮಾಡುವುದು, ಪೊಳ್ಳುಮಾತು ಆಡುವುದು, ಭಾಷಣ ಮಾಡುವುದು ಇತ್ಯಾದಿ ಕೆಲಸಗಳಿಂದ ಸಭೆಯ ಗಾಂಭೀರ್ಯವನ್ನು ಹಾಳುಮಾಡುತ್ತಾರೆ. ಅದು ಬಹು ತಪ್ಪು. ಅದು, ತಮ್ಮ ಕರ್ತವ್ಯ ವೇನು ಎಂಬುದನ್ನರಿತವರ ಲಕ್ಷಣವಲ್ಲ. ಸಂಗೀತಸೇವೆಗೆ ನೆರೆದಿರುವಾಗ ಕರಡಿ ಬಿಟ್ಟಂತೆ ಮಾಡುವ ಈ ಕಾರ‍್ಯಗಳು ಬಹು ಅಸಂಪ್ರದಾಯ ಮತ್ತು ಕಲೆಯ ಬಗೆಗೆ ಅಲಕ್ಷ್ಯವನ್ನು ಸೂಚಿಸುವಂತಿರುವುವು”.

ಈಗ ನಡೆಯುತ್ತಿರುವ, ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಪ್ರಶಸ್ತಿ ಕುರಿತಾದ ಚರ್ಚೆಗೆ ಮೇಲಿನೆಲ್ಲ ಅಂಶಗಳನ್ನು ಮುಂದಿಟ್ಟು ಕೊಂಡು ನೋಡುವುದಾದರೆ, ಪ್ರಶಸ್ತಿ ಯಾರಿಗೇ ಬರಲಿ ವಿದ್ವತ್ತಿಗೆ ಬರಬೇಕು. ಟಿ.ಎಂ. ಕೃಷ್ಣ ಅವರ ‘ಜಗದೋದ್ಧಾರನ’ ಪ್ರಸ್ತುತಿ ಯನ್ನು ಎಲ್ಲರೂ ಕೇಳಿದವರೇ. ರಂಜಿನಿ ಗಾಯತ್ರಿ ಅವರ ಅನುಪಮ ಗಾಯನಕ್ಕೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆದರೆ ಕೃಷ್ಣ ಅವರು ತಮ್ಮ ಸಿದ್ಧಾಂತದ ಪ್ರತಿ ಪಾದನೆಗೆ ಸಂಗೀತದ ವೇದಿಕೆಯನ್ನು ಬಳಸಿಕೊಂಡದ್ದಕ್ಕೆ ಕಲಾವಿದರು ಮಾತ್ರವಲ್ಲ ಶ್ರೋತೃ ಗಳೂ ಬೇಸರಿಸಿಕೊಂಡಿದ್ದಾರೆ. ಇದನ್ನು ನೋಡುವಾಗ ನಟಸಾರ್ವ ಭೌಮ ಡಾ.ರಾಜಕುಮಾರ್ ಅವರ ‘ಅಭಿಮಾನಿ ದೇವರುಗಳು’ ಎನ್ನುವ ಮುಗ್ಧಮಾತು ನೆನಪಾಗುತ್ತಿದೆ.

ಪ್ರತಿ ಕಲಾವಿದ ಜೀವಂತವಿರುವುದೇ ಅಭಿಮಾನಿಗಳ ಮನಸ್ಸಿನಲ್ಲಿ. ರಾಜಕುಮಾರ್ ಎಂಬ ಅದ್ಭುತ ಕಲಾವಿದರು ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿಯಲು ಅವರ ನವರಸಭರಿತ ಅಭಿನಯದ ಜತೆಗೆ ವಿನಯವೂ ಕಾರಣವಾಗಿದೆ. ಕಲೆಯ ನೈಜ ಸತ್ವವೇ ಅದಲ್ಲವೇ? ಕೃಷ್ಣ ಅವರ ಗಾಯನದ ಬಗ್ಗೆ ಮಾತಾಡುವುದಾದರೆ ಅವರು ‘ಜಗದೋದ್ಧಾರನ ಆಡಿಸಿದಳೇ ಯಶೋದಾ’ ಹಾಡುವಾಗ ಪರಮಪುರುಷನನ್ನು ಕೃಷ್ಣ ಅವರ ಗಾಯನದೊಂದಿಗೆ ಕೇಳುಗರೂ ಆಡಿಸಿರುತ್ತಾರೆ, ತೊಟ್ಟಿಲು ತೂಗುತ್ತಾರೆ. ಅವರವರ ಇಷ್ಟದೈವದ ಕುರಿತು ಹಾಡುವಾಗ ಭಕ್ತಿಯಿಂದ ತನ್ಮಯತೆಯಿಂದ ಒಳಗೊಳ್ಳುವುದು ಮನುಷ್ಯನ ಸಹಜಗುಣ. ಹೀಗಿರುವಾಗ ಯಾವುದೇ ಕಲಾವಿದರು ಕೇಳುಗರ ಈ ತನ್ಮಯತೆಯನ್ನು ಬಯಸುವುದಷ್ಟೇ ಅಲ್ಲದೆ, ಅದಕ್ಕಾಗಿ ಪೂರ್ಣತಯಾರಿ ಯೊಂದಿಗೆ ಬರಬೇಕಾದ್ದು ಸಹಜ ಲಕ್ಷಣ. ನಾನು ಸುಮಾರು ೫೦೦ಕ್ಕೂ ಹೆಚ್ಚು ಸಂಗೀತ ಕಾರ‍್ಯಕ್ರಮಗಳನ್ನು ಸವಿದಿದ್ದೇನೆ.

ಅಂಥ ಪ್ರತಿಯೊಂದರಲ್ಲೂ ಕಲಾವಿದರು ಒಂದೆರಡಾದರೂ ಕೋರಿಕೆಯ ಮೇರೆಗೆ ಹಾಡಿದ್ದೂ ಇದೆ. ಅಂದರೆ ಕಲಾವಿದರು ಶ್ರೋತೃವನ್ನು ಅಷ್ಟು ಗೌರವ ದಿಂದ ನೋಡಿಕೊಂಡು ಬರುವ, ಬಂದ ಪರಂಪರೆಯೇ ಇದೆ ಎನ್ನುವುದು ತಿಳಿಯುತ್ತದೆ. ಈ ಮಾತನ್ನು ಕೃಷ್ಣ ಅವರಿಗೂ ಅನ್ವಯಿಸಿದಾಗ, ಅವರು ಬೇರೆ ಧರ್ಮದ ಕುರಿತಾದ ಹಾಡುಗಳನ್ನು ಹಾಡಿದ್ದಾರೆನ್ನುವುದು  ಅವರನ್ನು ವಿರೋಧಿಸುತ್ತಿರುವವರ ಅನೇಕ ಬೇಸರಗಳಲ್ಲಿ  ಒಂದು. ಇಷ್ಟನ್ನೇ ನೋಡುವುದಾದರೆ ಪ್ರತಿಯೊಬ್ಬ ಗಾಯಕ ಕಛೇರಿಯಲ್ಲಿ ಹಾಡುತ್ತಿರುವುದು ಯಾರಿಗಾಗಿ? ಅಲ್ಲಿರುವ ಶ್ರೋತೃಗಳಿಗಾಗಿ, ಅಲ್ಲವೇ? ಆ ಶ್ರೋತೃಗಳೆಲ್ಲರೂ ಒಂದೇ ಧರ್ಮ ದವರಾಗಿರುವಾಗ ಅಲ್ಲಿ ಅನ್ಯಧರ್ಮದ ಹಾಡುಗಳನ್ನು ಹಾಡುವ ಔಚಿತ್ಯವೇನಿದೆ? ಎಂಬ ಪ್ರಶ್ನೆ ಮೂಡುವುದು ಸಹಜ.

ಕೃಷ್ಣ ಅವರನ್ನು ಆಯಾ ಧರ್ಮದ ಸಭೆ/ಕಛೇರಿಗಳಲ್ಲಿ ಹಾಡಿಸಿದಾಗ ಆಯಾ ದೇವರ ಕುರಿತು ಹಾಡಿದರೆ ಯಾರಿಗೂ
ಆಕ್ಷೇಪಿಸುವ ಹಕ್ಕು ಇರದು, ಇರಲೂಬಾರದು. ಆದರೆ ಇಡೀ ಕಛೇರಿಯ ಶ್ರೋತೃಗಳು ಯಾರೆಂಬುದು ತಿಳಿದಿದ್ದರೂ ಅನ್ಯಧರ್ಮದ ಹಾಡುಗಳನ್ನು ಹಾಡುವುದು ಇಡೀ ಕೇಳುಗರನ್ನು ನೇರವಾಗಿ ಕಡೆಗಣಿಸಿದಂತೇ ಆಗದೇ? ಮತ್ತೊಂದು ಅಂಶವೆಂದರೆ, ಭಾರತೀಯ ಸಂಗೀತವನ್ನೊಳಗೊಂಡಂತೆ ಎಲ್ಲಾ ಕಲೆಗಳೂ ಸರಸ್ವತಿಯನ್ನು ವಿದ್ಯಾಧಿದೇವತೆಯಾಗಿ ಒಪ್ಪಿರುವಾಗ, ಸರಸ್ವತಿಯು ಅನ್ಯಧರ್ಮೀಯರಿಗೆ ಅಸ್ತಿತ್ವವಿಲ್ಲದ ದೈವವಾಗಿರುವಾಗ ಅನ್ಯಧರ್ಮದ ಹಾಡು ಹಾಡುವ
ಯತ್ನ ಪ್ರಯೋಗವಾಗಿ ಕಾಣಬಹುದಷ್ಟೇ. ಪ್ರಯೋಗ ಅನ್ನುವುದೂ ಹೇರುವಿಕೆಯಾಗಬಾರದಲ್ಲವೇ!

ಇಷ್ಟಕ್ಕೂ ಕೃಷ್ಣ ಅವರು ಸಾಮಾಜಿಕ ಸುಧಾರಣೆಯ ಹಂಬಲದಿಂದ ಹೀಗೆ ಮಾಡುತ್ತಿದ್ದಾರೆ ಅನ್ನುವುದಾದರೆ ಸಂಗೀತ ಕಛೇರಿಗಳಲ್ಲಿ ಒಂದು ಹಾಡಿನ ಮೂಲಕ ಮಾಡುವ ಸುಧಾರಣೆ ನಿಜಕ್ಕೂ ಯಾವ ಪರಿಣಾಮವನ್ನು ಮೂಡಿಸೀತು! ಅದೊಂದು ಭ್ರಮೆಯಷ್ಟೇ. ಸುಧಾರಣೆ ಎಂಬುದನ್ನು ನೆಲದ ಕಾನೂನು ಮಾತ್ರವೇ ಮೂಡಿಸಬಲ್ಲದು; ಇಂಥ ಸುಧಾರಣೆಗೆ ಸಂಗೀತದ
ವೇದಿಕೆಗಳೇ ಯಾಕೆ ಬೇಕು? ಎಂಬ ಪ್ರಶ್ನೆಯೂ ಬರಬಹುದು. ನಿಜ, ಸಂಗೀತವನ್ನು ಇತರ ರಂಗಗಳ ಜತೆ ಸೇರಿಸಿ ನಡೆಸುವ ಪ್ರಯೋಗಗಳಿಗೂ, ಶಾಸ್ತ್ರೀಯ ಸಂಗೀತದ ವೇದಿಕೆಯನ್ನೇ ಬಳಸುವುದಕ್ಕೂ ವ್ಯತ್ಯಾಸವಿದೆ ಅಲ್ಲವೇ. ಸಂಗೀತದಿಂದ ಹಿಡಿದು ಪ್ರತಿಯೊಂದೂ ಈಗ ಬೆರಳ ತುದಿಯಲ್ಲೇ ಸಿಗುತ್ತಿರುವ ಈ ಕಾಲದಲ್ಲಿ ಶ್ರೋತೃಗಳು ಕಛೇರಿಗೇ ಹೋಗಿ ಕಲಾವಿದರ ಪ್ರತ್ಯಕ್ಷ
ಕಾರ‍್ಯಕ್ರಮಗಳನ್ನು ಆಸ್ವಾದಿಸುತ್ತಾರೆಂದರೆ ಅದಕ್ಕಿರುವ ಕಾರಣ ಕಲಾವಿದರು ಸೃಷ್ಟಿಸುವ ರಸಲೋಕ. ಆದ್ದರಿಂದ ಕೇಳುಗರನ್ನು ಗೌರವಿಸಬೇಕಾಗಿರುವುದು ಕಲಾವಿದರ ಕರ್ತವ್ಯ.

ಸಾಮಾಜಿಕ ಸುಧಾರಣೆಗಳು ನಡೆಯಲೇಬೇಕು, ಒಳಗೊಳ್ಳುವಿಕೆಯೆಂಬ ಆಂದೋಲನ ಆರಂಭವಾಗಲೇ ಬೇಕು. ಆದರೆ ಅದು ಸಾಮಾಜಿಕ ಆಂದೋಲನವಾಗ ಬೇಕು. ‘ಸಾಮಾಜಿಕ’ ಎನ್ನುವಾಗ ಸಮಾಜದ ಎಲ್ಲಾ ಧರ್ಮಗಳೂ, ಸಮುದಾಯಗಳೂ ಭಾಗಿ ಯಾಗ ಬೇಕು. ಇಲ್ಲವಾದಲ್ಲಿ ಅದು ಯಾವ ಪರಿಣಾಮವನ್ನೂ ಮೂಡಿಸದು. ಒಂದು ಧರ್ಮವನ್ನಷ್ಟೇ ಯಾವಾಗಲೂ
ಕಟಕಟೆ ಯಲ್ಲಿ ನಿಲ್ಲಿಸಿದರೆ ಇಂಥ ಗದ್ದಲಗಳು ನಿರಂತರವಾಗಿರುತ್ತವೆ. ಹಾಗಾಗಿಯೇ ಸಂಗೀತ ಕಛೇರಿಗಳಲ್ಲಿ ಇಂಥ ಪ್ರಯೋಗ ಗಳನ್ನು ಮಾಡಿದರೆ ನೀರಿನಲ್ಲಿ ಹುಣಸೇಹಣ್ಣು ತೊಳೆದಂತೆ ಆಗದೇ!

ನಿತ್ಯವೂ ಮನಸ್ಸುಗಳನ್ನು ಮಲಿನಗೊಳಿಸುವಲ್ಲಿ ಯಾವೊಂದು ಅವಕಾಶವನ್ನೂ ಬಿಡದಿರುವ ಜಾತಿ ಧರ್ಮದ ರಾಜಕೀಯವು
ಸಂಗೀತ ಕ್ಷೇತ್ರವನ್ನೂ ಬಿಡದಿರುವುದು ಕಲೆಯ ದುರಂತವೇ. ಮುಕ್ತ ಮನಸ್ಸು, ಉದಾರತೆ, ಒಳಗೊಳ್ಳುವಿಕೆ ಇದೆಲ್ಲವೂ ಪ್ರವಚನಕ್ಕೆ ಸೊಗಸಾದ ಪಠ್ಯವಾಗಿದೆಯೇ ಹೊರತು ವಾಸ್ತವದಲ್ಲಿ ನಾವೆಲ್ಲರೂ ದಿನೇದಿನೆ ಸಂಕುಚಿತ ಮನಸ್ಸಿನವರಾಗುತ್ತಿದ್ದೇವೆ. ಕಲೆಯು ಎಲ್ಲಾ ಜಾತಿ ಧರ್ಮಗಳನ್ನೂ ಮೀರಿದ ಕ್ರಿಯಾಶೀಲ ಸಂಗತಿ. ಆದರೆ ಕಲಾವಿದರು ಆಯಾ ಕಲೆಯ ಪ್ರಾಥಮಿಕ ಅಂಶಗಳನ್ನು ಗಾಳಿಗೆ ತೂರಿದರೆ ಕಲೆ ನಿರ್ಮಾಣ ಮಾಡಬಹುದಾದ ಅಲೌಕಿಕತೆ ಅಲ್ಲಿ ಸೃಷಿಯಾಗದೇ ಹೋದೀತು.

ಸಿತಾರ್ ಮಾಂತ್ರಿಕ ಬಾಲೇಖಾನರನ್ನು ಒಂದು ಟಿವಿ ವಾಹಿನಿಗಾಗಿ ನಾನು ಸಂದರ್ಶಿಸುವಾಗ, ಮಾತಿನ ವೇಳೆ ಅವರು ವಿನೀತರಾಗಿ ತಮ್ಮೆರಡು ಕಿವಿಗಳನ್ನು ಮುಟ್ಟಿ ‘ಮಾ ಸರಸ್ವತಿಯ ಕೃಪೆ ನನ್ನ ಮೇಲಿದೆ’ ಎಂದಿದ್ದು ಇನ್ನೂ ಹಸಿರಾಗಿದೆ. ಅಲ್ಲಿ ಅವರು ಯಾವುದೇ ಧರ್ಮದ ವಕ್ತಾರಿಕೆ ಮಾಡಿದರೆನ್ನುವ ಭಾವ ಕ್ಷಣ ಕಾಲವೂ ಮೂಡಲಿಲ್ಲ, ಅವರು ಸಂಗೀತದ ಅಧಿದೇವತೆಯನ್ನಷ್ಟೇ ಸ್ಮರಿಸಿದ್ದು ಎಂದೇ ನನ್ನೆಣಿಕೆ.

ಭಾರತೀಯ ಸಂಗೀತ ಅಷ್ಟರಮಟ್ಟಿಗೆ ವಿಶೇಷವಾದುದು. ಅದರ ಚೌಕಟ್ಟು ಮುರಿಯದೇ ಅದರ ಮೂಲಕ ಅಂತಃಕರಣ ಹರಡಬೇಕು. ಆದರಿಲ್ಲಿ, ಒಂದು ವಿಚಾರ ಸಿಕ್ಕಿತು ಎಂದೊಡನೆ ಅದರ ಗಂಧಗಾಳಿ ಗೊತ್ತಿಲ್ಲದವರೂ ಅದಕ್ಕೆ ಜಾತಿ, ಧರ್ಮದ ಲೇಪ
ಬಳಿದು ತಮ್ಮ ಕೊಳಕು ಮನಸ್ಸಿನ ಪ್ರದರ್ಶನಕ್ಕೆ ಮುಂದಾಗಿದ್ದು ಹೇಯಕರ. ಅದರಲ್ಲೂ, ‘ಪರವಿದ್ದರೆ ಒಂದು ಪಂಥ, ವಿರೋಧಿಸಿದೊಡನೆ ಇಂಥದ್ದೇ ಪಂಥ’ ಎಂದು ಹಣೆಪಟ್ಟಿ ಕಟ್ಟುವವರಿಗೆ ಸಂಗೀತ ನೀಡುವ ಆನಂದದ ಅರಿವಿರದು. ಪ್ರದರ್ಶಕ ಕಲೆಗಳು ಅನುಸಂಧಾನಕ್ಕೆ ಆಸ್ಪದವಿರುವ ಮಾಂತ್ರಿಕ ನೆಲೆಗಳು. ಅಲ್ಲಿ ಪ್ರೇಕ್ಷಕ ಕೂಡ ಕಲಾವಿದನಷ್ಟೇ ಮುಖ್ಯನಾಗುತ್ತಾನೆ.

ಹೀಗಾಗಿ ಕಲೆಯ ಮಹತ್ವ ಮತ್ತು ಔನ್ನತ್ಯ ಅರಿತು ಹಾಡಿದರೆ ಅಲ್ಲಿ ರಸಲೋಕ ಸೃಷ್ಟಿಯಾಗುವುದು ಸತ್ಯ. ಸಂಗೀತವೇ ಇರಲಿ, ಯಕ್ಷಗಾನವೇ ಇರಲಿ ಅಲ್ಲಿನ ಪ್ರೇಕ್ಷಕರು ಒಂದೇ ಧರ್ಮದವರು ಆಗಿರುವುದು ಬೇಸರದ ಸಂಗತಿಯೇ. ಸುಮಾರು ೩೫ ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಪಂ.ಭೀಮಸೇನ ಜೋಶಿಯವರ ಕಾರ‍್ಯಕ್ರಮಕ್ಕೆ ನಾನು ಓದುತ್ತಿದ್ದ ಕ್ರೈಸ್ತ ಕಾನ್ವೆಂಟ್ ಹೈಸ್ಕೂಲಿನ, ಕ್ರೈಸ್ತ ಸನ್ಯಾಸಿನಿಯರಾಗಿದ್ದ ಇಬ್ಬರು ಶಿಕ್ಷಕಿ ಯರು ಬಂದಿದ್ದನ್ನು ನೋಡಿದ್ದು ಬಿಟ್ಟರೆ ಇದುವರೆಗೂ ಅಂಥ ಸಂಗೀತ ಕಾರ‍್ಯಕ್ರಮಗಳಲ್ಲಿ ಅನ್ಯಧರ್ಮದ ಸಂಗೀತ ಪ್ರೇಮಿಗಳನ್ನು ನೋಡಿದ ನೆನಪಿಲ್ಲ.

ಅಂಥವರು ಇದ್ದರೂ ಬೆರಳೆಣಿಕೆಯವರು ಅಷ್ಟೇ. ಬೆಂಗಳೂರಿನ ಪುರಭವನದಲ್ಲಿ ನಡೆದ ಕವ್ವಾಲಿ ಕಾರ‍್ಯಕ್ರಮಕ್ಕೆ  ನಾನು ಪತಿ ಯೊಂದಿಗೆ ಹೋದದ್ದು ನೆನಪಿದೆ. ಸಂಗೀತ, ಎಲ್ಲರಿಗೂ ಬಾಗಿಲು ತೆರೆದಿಡುವ ಲೋಕ. ಒಳ ಹೋಗುವ ಮನಸ್ಸು ನಾವು ಮಾಡಬೇಕಷ್ಟೇ. ಸಂಗೀತ, ನೃತ್ಯದಂಥ ಕಲೆಗಳು ಪ್ರತಿಯೊಬ್ಬನ ಸೊತ್ತು. ಶ್ರದ್ಧೆಯಿಂದ ಪ್ರವೇಶ ಪಡೆದ ಪ್ರತಿಯೊಬ್ಬನಿಗೂ ಜಾತಿ ಧರ್ಮದ ಭೇದವೆಣಿಸದೆ ಅದು ಅಕ್ಕರೆಯಿಂದ ಮಡಿಲಿಗೆಳೆದುಕೊಂಡಿದೆ. ಆದರೆ ಅಂಥ ಹೊತ್ತಿನಲ್ಲಿ ಕಲಾವಿದರು ಅದರ ಪ್ರಾಥಮಿಕ ಸಂಪ್ರದಾಯಗಳನ್ನು ಗೌರವಿಸಿಕೊಂಡು ಮುನ್ನಡೆವ ಹೊಣೆಗಾರಿಕೆಯನ್ನೂ ಮರೆಯಬಾರದು. ಮುರಿದು
ಕಟ್ಟುವುದು ಎಂದರೆ ಕಟ್ಟುವಾಗ ಬೇರುಗಳಿಗೆ ನೋವಾ ದರೆ ಅಂಥ ಚಿಗುರು ವೃಕ್ಷವಾಗದು.

ವೈಯಕ್ತಿಕ ಆಸಕ್ತಿಗಳನ್ನು ತಂತಮ್ಮ ಮನೆಗಳಲ್ಲಿ ನಡೆಸುವ ಎಲ್ಲ ಸ್ವಾತಂತ್ರ್ಯವನ್ನೂ ನಮ್ಮ ಪ್ರಜಾಪ್ರಭುತ್ವ ನೀಡಿದೆ. ಆದರೆ ಅದನ್ನು ಬೇರೆಯವರ ಮೇಲೆ ಹೇರುವ ಸ್ವಾತಂತ್ರ್ಯ ನಮಗಾರಿಗೂ ಇಲ್ಲ. ಕೆ.ಜೆ.ಯೇಸುದಾಸ್, ‘ನಟವರ ಗಂಗಾಧರ’ ಹಾಡಿನ ಕರೀಂಖಾನರು, ‘ನೀನೇ ಗತಿ’ ಎಂದು ಹಾಡಿದ ರಫೀಕ್ ಖಾನರು ಇಂಥ ಸಭಾ ಸಂಪ್ರದಾಯವನ್ನು ಶ್ರದ್ಧೆಯಿಂದ ಪಾಲಿಸಿದವರು.
ಇವರಿಗೆಲ್ಲ ಸಂಗೀತವೆಂಬುದು ಜಗತ್ತಿನೊಂದಿಗೆ ನಡೆಸುವ ಅನುಸಂಧಾನವಾಗಿತ್ತು.

ತಂತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ನೂರೊಂದು ವೇದಿಕೆಗಳು ಸುಲಭವಾಗಿ ದೊರೆಯುತ್ತಿರುವ ಈ ಹೊತ್ತಿನಲ್ಲಿ ಸಂಗೀತದ ವೇದಿಕೆಯನ್ನು ಇಂಥ ಕಾರಣಗಳಿಗೆ ಬಳಸಿದ್ದು ಅಪಚಾರವಾಗುತ್ತದೆಯೇ ಹೊರತು, ಅದರಿಂದ ಬೇಸರಗೊಂಡು ಅಭಿಪ್ರಾಯ ವ್ಯಕ್ತಪಡಿಸಿದ್ದು ಅಪಚಾರವಾಗದು. ಗಾಯಕನಿಗೆ ‘ನಾನು ಏನು ಹಾಡಿದರೂ ಕೇಳುಗರು ಸ್ವೀಕರಿಸಬೇಕು’ ಎಂಬ ಉಡಾ-ಯಿದ್ದಲ್ಲಿ ಆತ ಕಲಾವಿದನಾಗಲಾರ. ಏಕೆಂದರೆ ಸಂಗೀತ, ನೃತ್ಯ ಎಲ್ಲವೂ ನಿವೇದನಾ ಕಲೆಗಳೂ ಹೌದು.

ಪಾಶ್ಚಾತ್ಯ ಸಂಗೀತವೇ ಇರಲಿ, ಅದು ಪ್ರಪಂಚದೊಂದಿಗೆ ಮಾಡುವುದು ಅನುಸಂಧಾನಮೂಲವಾದ ನಿವೇದನೆ. ಅಲ್ಲದೆ ಸಂಗೀತವು ಆಬಾಲವೃದ್ಧರನ್ನು ಆಕರ್ಷಿಸುವ ಮಾಂತ್ರಿಕ ಕಲೆ. ಯಾವುದೇ ಸಂಗೀತಸಭೆಗಳಿಗೆ ರಸಿಕರು ಹೋಗಲು ಬಯಸುವುದೇ
ಅಲ್ಲಿ ಸಿಗುವ ರಾಗಲೋಕದ ಆನಂದವನ್ನು ಅನುಭವಿಸಲು, ತನ್ಮೂಲಕ ಅಲೌಕಿಕಲೋಕದ ಭಾಗೀದಾರರಾಗಲು. ಹಾಗಿರುವಲ್ಲಿ ಇಂಥ ಅನುಸಂಧಾನವಿಲ್ಲದ ಪ್ರಯೋಗಗಳನ್ನು ನಡೆಸಿ ಶ್ರೋತೃಗಳನ್ನು ವೇದನೆಗೆ ತಳ್ಳುವುದೂ ಕಲೆಗೆ ಮಾಡುವ ಅಪಚಾರ ವಾಗುವದಿಲ್ಲವೇ ಎಂಬುದು ಯೋಚಿಸಬೇಕಾದ ಸಂಗತಿ.

ಪ್ರತಿ ವಿಷಯವನ್ನೂ ಜಾತಿ, ಪಂಥ, ಪಕ್ಷದ ಹಿನ್ನೆಲೆಯಿಂದಲೇ ನೋಡುವಂತಾಗಿರುವ ಶೋಚನೀಯ ಸ್ಥಿತಿಯಲ್ಲಿ ನಾವಿರುವಾಗ, ಯಾವುದೇ ವಸ್ತುನಿಷ್ಠ ಅಭಿಪ್ರಾಯ ಮಂಡನೆಗೂ ಸೂಕ್ಷ್ಮಪ್ರವೃತ್ತಿಯ ಜನರು ಮತ್ತೊಮ್ಮೆ ಆಲೋಚಿಸುವಂತಾಗಿರುವುದು ಈ ಕಾಲದ ದುರಂತವೂ ಹೌದು.

(ಲೇಖಕಿ ಸೃಜನಶೀಲ ಬರಹಗಾರ್ತಿ ಹಾಗೂ
ಪ್ರದರ್ಶಕ ಕಲೆಗಳ ವಿಶ್ಲೇಷಕಿ)