ಅಭಿಮತ
ಕೀರ್ತನಾ ಎನ್.ಎಂ.
vanikeerthananm@gmail.com
ಜೂನ್ ತಿಂಗಳು ಬಂತೆಂದರೆ ಸಾಕು ಶಾಲೆಗೆ ಹೋಗುವ ಮಕ್ಕಳಿಗೆ ಹೊಸ ವರ್ಷ ಪ್ರಾರಂಭವಾದಂತೆ. ಚಿಕ್ಕವಳಿದ್ದಾಗ ಹೊಸ ವರ್ಷ ಎಂದರೆ ಅದು ಜೂನ್‌ನಿಂದಲೇ ಶುರುವಾಗುತ್ತದೆ ಎಂದ್ದೇ ನಂಬಿದ್ದ ನನಗೆ, ಬುದ್ಧಿ ಬಂದ ನಂತರ ಜನವರಿ 1 ನೂತನ ವರ್ಷಾರಂಭ ಎನ್ನುವ ಸತ್ಯ ಬೇಸರ ಮೂಡಿಸಿದ್ದಿದೆ.
ಇಂದಿಗೂ ಜೂನ್ ಮಾಸದ ಮೇಲಿರುವ ನನ್ನ ವ್ಯಾಮೋಹ ಕಿಂಚಿತ್ತೂ ಕಡಿಮೆಯಾಗಿಲ್ಲ. ಈ ತಿಂಗಳೆಂದರೇ ಹಾಗೆ, ಒಂದು ರೀತಿಯ ಪುಳಕ. ಜಿಟಿ ಜಿಟಿ ಸುರಿವ ಸೋನೆ ಮಳೆ ಭೂಮಿಗೆ ತಂಪೆರೆಯುತ್ತಿದ್ದರೆ ಪ್ರಕೃತಿಯೇ ಮೈನೆರೆದು ನಿಂತಂತೆ ಭಾಸವಾಗುತ್ತದೆ. ಹಾಗೆ ನೋಡಿದರೆ ಒಂದು ರೀತಿಯಲ್ಲಿ ಈ ಮಾತು ನಿಜವೇ.
ಯುವತಿಯೊಬ್ಬಳು ಮೈನೆರೆದು ಪ್ರೌಢಾವಸ್ಥೆಗೆ ಬಂದು ಪ್ರತಿ ತಿಂಗಳು ಋತುಮತಿಯಾಗುವಂತೆ ನಮ್ಮ ಭೂತಾಯಿಯೂ ಕೂಡ ಪ್ರತಿ ವರ್ಷ ಋತುಮತಿ ಯಾಗುತ್ತಾಳೆಂಬ ಸಂಗತಿ ತಿಳಿದು ಆಶ್ಚರ್ಯವಾಯಿತು.
ಹೆಣ್ಣು ಋತುಮತಿಯಾಗುವುದು ಒಂದು ಅದ್ಭುತ ಪ್ರಕ್ರಿಯೆ. ಮುಂದೊಂದು ದಿನ ತಾಯಿಯಾಗುವ, ಹೊಸದೊಂದು ಜೀವವನ್ನು ತನ್ನೊಡಲಲ್ಲಿ ಪೋಷಿಸುವ ವಿಸ್ಮಯದ ಕ್ಷಣಗಳಿಗೆ ನಾಂದಿ ಹಾಡುವ ಸುಂದರ ಘಳಿಗೆಯದು. ಆದ್ದರಿಂದಲೇ ನಮ್ಮಲ್ಲಿ ಇದನ್ನು ಒಂದು ಹಬ್ಬದಂತೆ ಆಚರಿಸಲಾಗುತ್ತದೆ. ನಮ್ಮ ದೇಶದ ಹಲವು ಕಡೆಗಳಲ್ಲಿ ಜೂನ್ ತಿಂಗಳಿನಲ್ಲಿ ಭೂಮಿತಾಯಿ ಋತುಚಕ್ರಕ್ಕೆ ಕಾಲಿಡುತ್ತಾ . ಆ ಸಮಯದಲ್ಲಿ ಊರಿನ ಜನರೆ ಕೃಷಿ ಸಂಬಂಽ ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಳ್ಳದೆ ಅವಳೊಡಲಿಗೆ ವಿಶ್ರಾಂತಿ ನೀಡಿ ಅವಳನ್ನು ಪೂಜಿಸಿ ಸಂಭ್ರಮಿಸುತ್ತಾರೆ.
ಅಸ್ಸಾಮಿನ ಗುವಾಹಟಿ ಎಂಬ ಪ್ರಾಂತ್ಯದಲ್ಲಿ ಈ ರೀತಿಯ ಹಬ್ಬಾಚರಣೆ ಸಂಪನ್ನಗೊಳ್ಳುತ್ತದೆ. ಇಲ್ಲಿನ ಕಾಮಾಖ್ಯ ದೇವಿಯು ಪ್ರತಿ ವರ್ಷ ಆಷಾಡ ಮಾಸದಲ್ಲಿ ( ಜೂನ್ ) ಋತುಮತಿಯಾಗುತ್ತಾಳೆ. ಇದರ ಸಂಕೇತವಾಗಿ ಇಲ್ಲಿನ ಜನರು ಅಂಬುಬಾಚಿ ಎಂಬ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಮೂರು ದಿನಗಳ ಕಾಲ ದೇವಿಗೆ ವಿಶ್ರಾಂತಿ ನೀಡಲೆಂದು ದೇಗುಲವನ್ನು ಮುಚ್ಚಿ ನಾಲ್ಕನೇ ದಿನದಂದು ಹಬ್ಬವನ್ನು ಆಚರಿಸಲಾಗುತ್ತದೆ. ‘ಅಂಬು’ ಎಂದರೆ ‘ನೀರು’ ಮತ್ತು ಬಾಚಿ’ ಎಂದರೆ ಹರಿಯುವುದು’.
ಯೋನಿಯ (vagina) ಆಕಾರದಲ್ಲಿರುವ ತಾಯಿಯ ಪೂಜಾ ಸ್ಥಳದಿಂದ ಕೆಂಪು ಬಣ್ಣದ ನೀರು ಹೊರ ಹೊಮ್ಮುತ್ತದೆ. ಹಾಗಾಗಿ ಇದನ್ನು ಅಂಬುಬಾಚಿ ಹಬ್ಬ
ಎಂದೇ ಕರೆಯಲಾಗಿದೆ. ಪುರಾಣಗಳ ಪ್ರಕಾರ ಕಾಮಾಖ್ಯ ದೇವಿಯೂ ಶಿವನ ಮಡದಿಯಾದ ಸತಿ ದೇವಿಯ ಒಂದು ಅಂಶ. ಸತಿ ದೇವಿಯೂ, ತಂದೆ ದಕ್ಷ ತನ್ನ ಪತಿಯಾದ ಪರಶಿವನನ್ನು ಅವಮಾನಿಸಿದಾಗ, ಗಂಡನಿಗಾದ ಅವಮಾನ ಸಹಿಸಲಾಗದೆ ಯಜ್ಞ ಕುಂಡಕ್ಕೆ ಹಾರುತ್ತಾಳೆ. ಹೀಗೆ ಅಗ್ನಿಗೆ ಆಹುತಿಯಾದ ತನ್ನ ಮಡದಿಯನ್ನುಹೆಗಲ ಮೇಲೇರಿಸಿಕೊಂಡು ದುಃಖ ಮತ್ತು ಕೋಪದಿಂದ ಶಿವನು ಪ್ರಳಯ ತಾಂಡವವಾಡುತ್ತಿದ್ದಾಗ, ಅವನನ್ನು ಶಾಂತಗೊಳಿಸಲು ಶ್ರೀ ವಿಷ್ಣುವು
ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ಕತ್ತರಿಸುತ್ತಾನೆ. ಆಗ ಸತಿಯ ದೇಹ ೫೧ ತುಂಡುಗಳಾಗಿ ಭೂಮಿಗೆ ಬಿದ್ದು ಆ ಪ್ರಾಂತ್ಯಗಳು ಶಕ್ತಿ ಪೀಠಗಳಾದವು
ಎಂದು ಹೇಳಲಾಗುತ್ತದೆ.
ಹಾಗೆ ಬಿದ್ದ ಸತಿಯ ಗರ್ಭ ಮತ್ತು ಯೋನಿಯೂ ಕಾಮಾಖ್ಯವೆಂಬ ದೇವಿಯಾಗಿ ಅಸ್ಸಾಮಿನ ಗುವಾಹಟಿಯಲ್ಲಿ ನೆಲೆ ನಿಂತಳು. ಅಂದಿನಿಂದ ಇಂದಿನವರೆಗೂ ಪ್ರತಿ
ವರ್ಷಕ್ಕೊಮ್ಮೆ, ಎಂದರೆ ಜೂನ್ ತಿಂಗಳ ಕೊನೆಯಲ್ಲಿ ದೇವಿಯು ಋತುಮತಿಯಾಗುತ್ತಾಳೆಂದು ಹೇಳಲಾಗುತ್ತದೆ. ಮತ್ತೊಂದು ಅಚ್ಚರಿಯ ವಿಷಯವೆಂದರೆ ಈ ದೇವಾಲಯದ ಬಳಿ ಹರಿಯುವ ಬ್ರಹ್ಮಪುತ್ರ ನದಿಯ ನೀರು ಅಂಬುಬಾಚಿ ಹಬ್ಬದ ವೇಳೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಕಾರಣ ಇಲ್ಲಿನ ನೀರು ಮತ್ತು ಮಣ್ಣಿನಲ್ಲಿ ಕಬ್ಬಿಣದ ಅಂಶ ಅಧಿಕವಾಗಿರುವುದು ಎನ್ನಲಾಗುತ್ತದೆ. ಹಾಗೆಯೇ ಈ ತಿಂಗಳಿನಲ್ಲಿ ಒಂದು ರೀತಿಯ ಕೆಂಪು ಪಾಚಿ ನೀರಿನಲ್ಲಿ ಬೆಳೆಯುತ್ತದೆ ಎಂದೂ ಮತ್ತು ಈ ದೇವಾಲಯವಿರುವಬೆಟ್ಟ ಸಿನ್ನಾಬಾರ್ ( ಸಿಂಧೂರ್) ನಿಕ್ಷೇಪಗಳಿಂದ ಕೂಡಿದ್ದು ಮತ್ತು ಇದು ರಕ್ತ ಕೆಂಪು ಬಣ್ಣವನ್ನು ಹೊಂದ್ದಿದರಿಂದ ನದಿಯು ಕೆಂಪು ಬಣ್ಣಕ್ಕೆ ತಿರುಗುತ್ತದೆ ಎಂದು ವೈಜ್ಞಾನಿಕ ಕಾರಣವನ್ನು ಹೇಳುತ್ತಾರೆ.
ನೀರು ಏಕೆ ಕೆಂಪಾಗುತ್ತದೆ ಎಂಬುದರ ಕುರಿತು ಇಂತಹ ಅನೇಕ ವೈಜ್ಞಾನಿಕ ಕಾರಣ ಗಳಿದರೂ, ಇದು ಕೇವಲ ಮೂರು ದಿನಗಳವರೆಗೆ ಏಕೆ ಕೆಂಪಾಗಿರುತ್ತದೆ ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಆದರೆ ಇಲ್ಲಿನ ಜನರು ದೇವಿಯ ಋತುವತಿಯಾಗುವ ಕಾರಣ ನದಿಯ ನೀರಿನ ಬಣ್ಣ ಬದಲಾಗುತ್ತದೆಂದು
ಈಗಲೂ ನಂಬುತ್ತಾರೆ. ಇದರಂತೆಯೇ ಒಡಿಶಾದಲ್ಲಿ ನಡೆಯುವ ರಜಾ ಎಂಬ ಹಬ್ಬವೂ ಹೆಣ್ತನವನ್ನು ಆಚರಿಸುವ ಒಂದು ಪ್ರಮುಖ ಹಬ್ಬವಾಗಿದೆ. ’ರಜಾ’ ಎಂಬ ಪದವು ಸಂಸ್ಕೃತದ ’ರಜಸ್’ ಎಂಬ ಪದದಿಂದ ಬಂದಿದೆ. ರಜಸ್ ಎಂದರೆ ಮುಟ್ಟಾಗುವಿಕೆ ಎಂದೂ ಆದರಿಂದ ಮುಟ್ಟಾಗುವ ಹೆಣ್ಣನ್ನು ’ರಜಸ್ವಲೆ’ ಎನ್ನುತ್ತಾರೆಂದು ಹೇಳಲಾಗುತ್ತದೆ. ಇದರಿಂದಲೇ ಈ ಹಬ್ಬವನ್ನು ರಜಾ ಎಂದು ಹೆಸರಿಸಲಾಗಿದೆ.
ಜೂನ್ 14, 15 ಮತ್ತು 16 ರಂದು ನಡೆಯುವ ಈ ಹಬ್ಬದ ದಿನದಂದು ಭೂತಾಯಿಯು ಋತುಮತಿಯಾಗುತ್ತಾಳೆಂದು ನಂಬಲಾಗುತ್ತದೆ. ಮೂರು ದಿನ ಕಳೆದು
ಹಬ್ಬದ ನಾಲ್ಕನೇ ದಿನದಂದು ವಸುಮತಿ ಸ್ನಾನ ಅಥವಾ ಭೂದೇವಿಯ ವಿಧ್ಯುಕ್ತ ಸ್ನಾನ ಮಾಡಲಾಗುತ್ತದೆ. ಹಾಗೆ ಈ ದಿನದೊಂದು ಭೂದೇವಿಯ ಆರಾಧನೆ ಯನ್ನು ಮಾಡಿ ಕೃಷಿ ರಜಾ ದಿನವಾಗಿ ಮತ್ತು ಹೆಣ್ಣು ಮಕ್ಕಳನ್ನು ಪೂಜಿಸುವ ಹಬ್ಬವಾಗಿ ಆಚರಿಸಲಾಗುತ್ತದೆ. ಇಂದಿಗೂ ಮುಟ್ಟಿನ ಬಗ್ಗೆ ಪಿಸು ಮಾತುಗಳಲ್ಲಿ ಮಾತನಾಡುವ ನಮ್ಮ ಸಮಾಜದ ಮುಂದೆ ಇದು, ಪ್ರತೀ ಮಹಿಳೆಯ ಶಕ್ತಿಯನ್ನು ಸಂಭ್ರಮಿಸುವ ಒಂದು ಪ್ರಮುಖ ಜೈವಿಕ ಪ್ರಕ್ರಿಯೆ ಎಂದು ಪರಿಗಣಿಸಿ ಹಬ್ಬದಂತೆ ಆಚರಿಸುತ್ತಿರುವ ಮತ್ತು ಜಗತ್ತಿಗೇ ಮಾದರಿಯಂತಿರುವ ಇಂತಹ ದೇವಾಲಯಗಳು ಮತ್ತು ಆಚರಣೆಗಳು ನಮಗೆ ಸ್ಪೂರ್ತಿಯಾಗಬೇಕು.
ಕನ್ಯೆಯೊಬ್ಬಳು ಹೆಣ್ತನಕ್ಕೆ ಕಾಲಿಡುವ ಈ ಪ್ರಕ್ರಿಯೆ ಜೀವಕ್ಕೊಂದು ನವಚೇತನ ತಂದಂತೆ. ಹೀಗಾಗಿಯೇ ಏನೋ ಜೂನ್ ತಿಂಗಳೆಂದರೆ ಒಂದು ರೀತಿಯ ಹರುಷ ಮತ್ತು ಹೊಸತನ. ಭೂಮಿಯೇ ಮೈನೆರೆದು ನಿಂತು ಕಸುವಾದಂತೆ. ನವಿರಾದ ಚೇತನ, ಪ್ರಕೃತಿಯಲೊಂದು ಹೊಸತನ.