ಸಹಕಾರಪಥ
ಲಕ್ಷ್ಮೀಪತಯ್ಯ ಕೆ.ಸಿ.ಎಸ್
ಭಾರತದ ಸಹಕಾರಿ ಚಳವಳಿಗೆ ಭರ್ಜರಿ ಇತಿಹಾಸವಿದೆ. ಜನರ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಶ್ರಮಿಸುತ್ತಾ ಬಂದಿರುವ ಈ ಚಳವಳಿಯು ಗಾತ್ರದಲ್ಲಿ, ವ್ಯಾಪ್ತಿಯಲ್ಲಿ, ಸಾಧನೆಯಲ್ಲಿ ವಿಶ್ವದಲ್ಲೇ ಮಹತ್ತರ ಸ್ಥಾನವನ್ನು ಪಡೆದಿದೆ ಹಾಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಬಡವರ ಮತ್ತು
ಮಹಿಳೆಯರ ಆಧಾರಸ್ತಂಭವಾಗಿದೆ. ಈ ಚಳವಳಿಯ ಆರೋಗ್ಯಕರ ಬೆಳವಣಿಗೆಗೆ ತನು-ಮನ ಸಮರ್ಪಿಸಿ ಹಲವಾರು ನಾಯಕರು ಶ್ರಮಿಸಿದ್ದಾರೆ.
ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಈ ಪೈಕಿ ಅಗ್ರಗಣ್ಯರು. ಸಹಕಾರಿ ತತ್ತ್ವದ ಆಚರಣೆಯಲ್ಲಿ ಅಪಾರ ನಂಬಿಕೆ-ನಿಷ್ಠೆ ಇಟ್ಟಿದ್ದ ನೆಹರು ಅವರು ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸಲು ಈ ತತ್ತ್ವದ ಮೊರೆಹೋದರು. ರಾಷ್ಟ್ರದಲ್ಲಿ ಸಹಕಾರಿ ಚಳವಳಿ ಪ್ರಗತಿ ಪಥದಲ್ಲಿ ಸಾಗಲು ಹಲವಾರು ಕ್ರಮಗಳನ್ನು ಕೈಗೊಂಡರು. ಅವರ ದೂರದೃಷ್ಟಿಯ ಫಲವಾಗಿ ಸಹಕಾರ ಚಳವಳಿಯಿಂದು ವೈಶಿಷ್ಟ್ಯಪೂರ್ಣವಾಗಿ ಬೆಳೆದಿದೆ.
೧೯೫೨ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಎಂ.ವಿ.ಕೃಷ್ಣಪ್ಪನವರು, ಸಹಕಾರಿ ಕ್ಷೇತ್ರದ ಮಹತ್ವ, ದೇಶದ ರೈತರ ಸಮಸ್ಯೆಗಳು, ಅವರ ಮೇಲಿನ ಶೋಷಣೆಗಳ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದರ ಜತೆಗೆ, ಸಹಕಾರಿ ಕ್ಷೇತ್ರದ ಮೂಲಕ ಗ್ರಾಮೀಣ ಪ್ರದೇಶದ ರೈತರ, ಮಹಿಳೆಯರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ಸಾಧ್ಯವೆಂದು ಒತ್ತಿಹೇಳಿದರು. ಕೃಷ್ಣಪ್ಪನವರ ಮಾತನ್ನು ಆಲಿಸಿದ ನೆಹರುರವರು ಕಲಾಪ ಮುಗಿದಾಕ್ಷಣ ಅವರನ್ನು ಕಚೇರಿಗೆ ಆಹ್ವಾನಿಸಿ ಚರ್ಚಿಸಿದರು. ಸಹಕಾರಿ ಕ್ಷೇತ್ರದ ಬಗ್ಗೆ ಅವರಿಗಿರುವ ಜ್ಞಾನ ಮತ್ತು ಕಳಕಳಿಯನ್ನು ಅರಿತು, ಮರುದಿನವೇ ಅವರನ್ನು
ಕೃಷಿಖಾತೆ ಸಚಿವರನ್ನಾಗಿ ನೇಮಕ ಮಾಡಿದರು.
ನಂತರ ಹಾಲೆಂಡ್ ಮತ್ತು ನೆದರ್‌ಲ್ಯಾಂಡ್ಸ್ ದೇಶಗಳಿಗೆ ಅಧ್ಯಯನ ಪ್ರವಾಸಕ್ಕೆ ತೆರಳಿದ ಕೃಷ್ಣಪ್ಪನವರು ಅಲ್ಲಿಂದ ಹಸುಗಳನ್ನು ಭಾರತಕ್ಕೆ ತಂದು ನಮ್ಮಲ್ಲಿನ ಹೈನುಗಾರಿಕೆಗೆ ಹೊಸ ಆಯಾಮವನ್ನು ದೊರಕಿಸಿಕೊಟ್ಟರು. ಅದರ ಫಲವಾಗಿ ೧೯೬೫ರಲ್ಲಿ ಕೆಎಂಎಫ್ ಸಂಸ್ಥೆಯನ್ನು ಸ್ಥಾಪಿಸಿದರು. ಕೃಷ್ಣಪ್ಪನವರ ಪ್ರೇರಣೆಯಿಂದಾಗಿ ನೆಹರು ಅವರು ಪಂಚವಾರ್ಷಿಕ ಯೋಜನೆಗಳ ಮೂಲಕ ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಿದರು. ಸಹಕಾರಿ ಚಳವಳಿಯ ಬೆಳವಣಿಗೆಗೆ ನೆಹರು ನೀಡಿದ ಕೊಡುಗೆಯ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬವಾದ ನವೆಂಬರ್ ೧೪ರಿಂದ ಶುರುವಾಗಿ ೨೦ರವರೆಗೆ ಅಖಿಲ ಭಾರತ ಮಟ್ಟದಲ್ಲಿ ಸಹಕಾರಿ ಸಪ್ತಾಹವನ್ನು ಆಚರಿಸಲಾಗುತ್ತದೆ.
ಈ ಅವಧಿಯಲ್ಲಿ ಸಹಕಾರಿ ವಲಯದ ಸಾಧಕರೆಲ್ಲ ಒಂದೆಡೆ ಸೇರಿ ಚಳವಳಿಯ ಸಾಧನೆ, ಪ್ರಗತಿಯ ಆತ್ಮಾವಲೋಕನ ನಡೆಸುತ್ತಾರೆ ಮತ್ತು ಮುಂದಿನ ಬೆಳವಣಿಗೆಯ ಬಗ್ಗೆ ಚಿಂತನೆ ನಡೆಸುತ್ತಾರೆ. ಒಂದೊಮ್ಮೆ ವೈಫಲ್ಯಗಳಿದ್ದಲ್ಲಿ ಅದನ್ನು ಸರಿಪಡಿಸುವ ಬಗ್ಗೆಯೂ ಪರಸ್ಪರ ಸಮಾಲೋಚನೆಗಳು ನಡೆಯುತ್ತವೆ. ಸಪ್ತಾಹದ ಆಚರಣೆ ಬಹುತೇಕ ಪಟ್ಟಣ ಪ್ರದೇಶಗಳಲ್ಲಾಗುತ್ತದೆ ಮತ್ತು ಕೆಲವೇ ಜನರು ಪಾಲ್ಗೊಳ್ಳುತ್ತಾರೆ. ಸಹಕಾರಿ ಕ್ಷೇತ್ರದ
ಮಹತ್ವವನ್ನು ಪ್ರತಿಯೊಬ್ಬರೂ ಮನಗಾಣಬೇಕೆಂದರೆ ಗ್ರಾಮಾಂತರ ಪ್ರದೇಶಗಳಲ್ಲೂ ಈ ಸಪ್ತಾಹದ ವ್ಯವಸ್ಥೆಯಾಗಬೇಕು ಮತ್ತು ಸಾವಿರಾರು ಜನರು ಅದರಲ್ಲಿ ಪಾಲ್ಗೊಳ್ಳುವಂತಾಗಬೇಕು.
ಇದನ್ನು ರಾಜ್ಯಾದ್ಯಂತ ಪ್ರತಿವರ್ಷ ಆಚರಿಸುವುದರಿಂದ, ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಮಹಿಳೆಯರು, ಯುವಜನರು ಮತ್ತು ದುರ್ಬಲ ವರ್ಗ ದವರು ಸಕ್ರಿಯವಾಗಿ ಅದರಲ್ಲಿ ಪಾಲ್ಗೊಳ್ಳುವುದು ಸಾಧ್ಯವಾಗುತ್ತಿದೆ. ಪ್ರತಿವರ್ಷವೂ ಒಂದು ಧ್ಯೇಯವಾಕ್ಯದೊಂದಿಗೆ ಈ ಸಪ್ತಾಹವನ್ನು ಹಮ್ಮಿ ಕೊಳ್ಳುವುದು ವಿಶೇಷ. ‘೫ ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು’ ಎಂಬುದು ಈ ವರ್ಷದ ಧ್ಯೇಯವಾಕ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಸಪ್ತಾಹದ ಅವಧಿಯಲ್ಲಿ ಈ ಧ್ಯೇಯದ ಬಗ್ಗೆ ಚಿಂತನೆ-ಸಮಾಲೋಚನೆಗಳು ನಡೆಯಬೇಕಿವೆ.
ಸಪ್ತಾಹದ ಆಚರಣೆಯು ಅರ್ಥಪೂರ್ಣವೂ ಪರಿಣಾಮಕಾರಿಯೂ ಆಗಿರಲಿ ಮತ್ತು ಇದರ ಯಶಸ್ಸು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರೇರಣಾಶಕ್ತಿಯಾಗಲಿ ಎಂಬುದು ಸಹೃದಯಿಗಳ ಆಶಯವಾಗಿದೆ.
(ಲೇಖಕರು ಸಹಕಾರ ಸಂಘಗಳ ಜಂಟಿ ನಿಬಂಧಕರು ಹಾಗೂ
ಕಾರ್ಯದರ್ಶಿ)