Sunday, 8th September 2024

ಬಂಡುಕೋರರ ಬಿಗಿಮುಷ್ಠಿಯಲ್ಲಿ ಮ್ಯಾನ್ಮಾರ್‌

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆಕೋರರ ದಾಳಿಯಿಂದಾಗಿ ಯುವಕರು ಅಂಗಾಂಗಗಳನ್ನು ಕಳೆದುಕೊಂಡು ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆದರೂ ಅಲ್ಲೇ ಇದ್ದು ಮಿಲಿಟರಿ ದಂಗೆಕೋರರ ವಿರುದ್ಧ ಹೋರಾಡುವ ಹುಮ್ಮಸ್ಸನ್ನು ತೋರಿಸುತ್ತಿದ್ದಾರೆ. ನಾಗರಿಕರು ದಾಳಿಯಿಂದ ತಪ್ಪಿಸಿಕೊಳ್ಳಲು ಬಂಕರ್‌ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇನ್ನು ಕೆಲವರು ಸಂಬಂಧಿಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.

ಒಂದು ದೇಶಕ್ಕೆ ಸೇನಾವ್ಯವಸ್ಥೆ ಬಹಳ ಮುಖ್ಯ. ಅದು ರಕ್ಷಾಕವಚವಾಗಿರಬೇಕು. ಆದರೆ ಅದೇ ಸೇನೆ ಆಳುವ ಸರಕಾರವನ್ನೇ ದಮನ ಮಾಡಲು ಹೊರ ಟರೆ, ಆಡಳಿತ ಸರಕಾರದ ವಿರುದ್ಧ ನಿಂತರೆ ದೇಶಕ್ಕೆ ನೇಣಿನ ಕುಣಿಕೆಯಾಗುತ್ತದೆ. ದೇಶದ ರಕ್ಷಣೆಗೆ ಪ್ರತಿe ತೆಗೆದುಕೊಂಡ ಸೈನಿಕರು ತಮ್ಮದೇ ಸರಕಾರದ ವಿರುದ್ಧ ತೊಡೆ ತಟ್ಟಿ ನಿಂತು, ಪ್ರಜೆಗಳ ಹತ್ಯೆಗೆ ಕಾರಣರಾಗುತ್ತಾರೆ ಎಂದರೆ ಅವರ ಪ್ರತಿಜ್ಞೆಗೆ ಏನು ಬೆಲೆ ಕೊಟ್ಟಂತಾಗುತ್ತದೆ? ಇದೀಗ ಮಿಲಿಟರಿ ಆಡಳಿತಕ್ಕೆ ಒಳಪಟ್ಟ ರಾಷ್ಟ್ರಗಳಲ್ಲಿ ಒಂದಾದ, ನಮ್ಮ ನೆರೆಯ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಬಂಡುಕೋರರ ಅಟ್ಟಹಾಸ ಎಲ್ಲೆ ಮೀರಿದೆ.

ಬಂಡುಕೋರರ ದಾಳಿಯಿಂದ ದೇಶ ತತ್ತರಿಸಿದೆ. ಸುಮಾರು ೧೯೬೨ರವರೆಗೆ ಮ್ಯಾನ್ಮಾರ್ ಜಗತ್ತಿನ ಶ್ರೀಮಂತ ದೇಶಗಳಲ್ಲಿ ಒಂದಾಗಿತ್ತು. ನಂತರ ಮಿಲಿಟರಿ ಆಡಳಿತಕ್ಕೆ ಒಳಪಟ್ಟು ಆರ್ಥಿಕ ಅಧಃಪತನದತ್ತ ಸಾಗಿತು. ಇದೀಗ ಆಂತರಿಕ ದಂಗೆಯಿಂದ ಸಾವು-ನೋವಿನ ದಳ್ಳುರಿಗೆ ಸಿಲುಕಿದೆ. ಹಾಗಾದರೆ ಇದಕ್ಕೆಲ್ಲ ಕಾರಣ ಏನು? ಮಿಲಿಟರಿ ಪಡೆಗಳು ಏಕೆ ಬಂಡಾಯ ಎದ್ದಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲು ಮ್ಯಾನ್ಮಾರ್‌ನ ಇತಿಹಾಸದ ಬಗ್ಗೆ ತಿಳಿಯುವುದು ಮುಖ್ಯ. ೧೯ನೇ ಶತಮಾನದಲ್ಲಿ ಬ್ರಿಟಿಷರು ಮ್ಯಾನ್ಮಾರ್ ಅನ್ನು ವಶಪಡಿಸಿಕೊಂಡರು. ೧೯೪೮ರ ಜನವರಿ ೪ರಂದು ಮ್ಯಾನ್ಮಾರ್ ಸ್ವತಂತ್ರ ದೇಶವಾಗಿ ಹೊರಹೊಮ್ಮಿತು. ೧೯೬೨ರಲ್ಲಿ ಮಿಲಿಟರಿ ಸರ್ವಾಧಿಕಾರದ ಆಡಳಿತಕ್ಕೆ ಒಳಪಟ್ಟಿತು.

ಒಂದು ಮಿಲಿಟರಿಯು ಅಸಾಂವಿಧಾನಿಕವಾಗಿ, ಕಾನೂನುಬಾಹಿರವಾಗಿ ಅಧಿಕಾರವನ್ನು ವಶಪಡಿಸಿಕೊಳ್ಳುವುದನ್ನು ‘ಕೂ’ (ಟ್ಠm) ಎನ್ನಲಾಗುತ್ತದೆ. ೨೦೧೧ರಲ್ಲಿ ಮಿಲಿಟರಿ ಸರ್ವಾಧಿಕಾರ ಔಪಚಾರಿಕವಾಗಿ ಕೊನೆಗೊಂಡಿತು. ಆದರೆ ಪ್ರಜಾಪ್ರಭುತ್ವ ರಾಷ್ಟ್ರವಾದರೂ ಮಾಜಿ ಮಿಲಿಟರಿ ಅಧಿಕಾರಿಗಳೇ ಹೆಚ್ಚಾಗಿ ಆಡಳಿತ ನಡೆಸಿದ್ದರು. ಆಗ್ನೇಯ ಏಷ್ಯಾದ ಮುಖ್ಯ ಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾದ ಬರ್ಮಾ, ಸ್ವಾತಂತ್ರ್ಯದ ನಂತರ ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು. ೧೯೮೯ರಲ್ಲಿ ಮ್ಯಾನ್ಮಾರ್ ಎಂದು ಪುನರ್ನಾಮಕರಣ ಹೊಂದಿತು. ಮ್ಯಾನ್ಮಾರ್ ದೇಶ ಹುಟ್ಟಿಕೊಳ್ಳಲು ಕಾರಣವಾದ
ಆಂಗ್ ಸಾನ್‌ರನ್ನು ಆ ದೇಶದ ರಾಷ್ಟ್ರಪಿತ ಎಂದು ಕರೆಯುತ್ತಾರೆ.

ನಂತರ ೧೯೬೨ ಮತ್ತು ೧೯೮೮ರಲ್ಲಿ ದಂಗೆಗಳು ನಡೆದವು. ಆಂಗ್ ಸಾನ್‌ರ ಮಗಳಾದ ಅಂಗ್ ಸಾನ್ ಸೂಕಿಯು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷದಿಂದ ರಾಜಕೀಯಕ್ಕೆ ಇಳಿದದ್ದು ಆಗಲೇ. ಮೊದಲಿನಿಂದಲೂ ಯಾವ ಪಕ್ಷ ರಾಜಕೀಯವಾಗಿ ಗೆದ್ದರೂ ಆಡಳಿತವು ಮಿಲಿಟರಿಯ ಸ್ವಾಮ್ಯದಿಂದಲೇ ನಡೆಯುತ್ತಿತ್ತು. ೧೯೮೮-೨೦೧೦ರ ನಡುವೆ ಆಂಗ್ ಸಾನ್ ಸೂಕಿ ಅಧಿಕಾರಕ್ಕೆ ಬರದಿರುವಂತೆ ಮಿಲಿಟರಿ ಸರಕಾರ ಆಕೆಯ ಮೇಲೆ ಅಧಿಕಾರದ ದುರುಪಯೋಗದ ಆರೋಪ ಹೊರಿಸಿ ೧೫ ವರ್ಷಕ್ಕಿಂತ ಹೆಚ್ಚು ಕಾಲ ಬಂಧನದಲ್ಲಿ ಇರಿಸಿತ್ತು. ಒಂದು ವರದಿಯ ಪ್ರಕಾರ ಆಕೆ ಸುಮಾರು ೨೭ ವರ್ಷಗಳ ಕಾಲ ಬೇರೆ ಬೇರೆ ಸಂದರ್ಭಗಳಲ್ಲಿ, ಗೃಹಬಂಧನವೂ ಸೇರಿದಂತೆ ಜೈಲುವಾಸ ಅನುಭವಿಸಿದ್ದಾರೆ.

೧೯೯೦ರಲ್ಲಿ ನಡೆದ ಸಾರ್ವಜನಿಕ ಚುನಾವಣೆಯಲ್ಲಿ ಎನ್ ಎಲ್‌ಡಿ ರಾಷ್ಟ್ರೀಯ ಪಕ್ಷ ಬಹುಮತದಿಂದ ಗೆದ್ದರೂ ಮ್ಯಾನ್ಮಾರ್‌ನ ಜುಂಟಾ ಮಿಲಿಟರಿ ಪಡೆ ಆಕೆಗೆ ದೇಶದ ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿತು. ಆಗ ಎನ್ ಎಲ್‌ಡಿ ಪಕ್ಷ. ಶೇ.೮೯ರಷ್ಟು ದಾಖಲೆಯ ಬಹುಮತ ಪಡೆದಿತ್ತು. ೧೯೯೫ರವರೆಗೆ ಸೂಕಿ ಗೃಹ ಬಂಧನದಲ್ಲಿದ್ದರು. ಮ್ಯಾನ್ಮಾರ್ ದೇಶದಲ್ಲಿ ನಾಗರಿಕರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಪ್ರತಿರೋಧ ಒಡ್ಡಿದ್ದಕ್ಕಾಗಿ ಆಕೆಗೆ ೧೯೯೧ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ದೊರೆಯಿತು. ೨೦೦೦ನೇ ವರ್ಷದಲ್ಲಿ ಮತ್ತೊಮ್ಮೆ ಆಕೆಯನ್ನು ೧೯ ತಿಂಗಳ ಕಾಲ ಗೃಹಬಂಧನಕ್ಕೆ ಒಳಪಡಿಸಲಾಯಿತು.

೨೦೧೦ರ ಚುನಾವಣೆಯಲ್ಲಿ ಎನ್‌ಎಲ್‌ಡಿ ಪಕ್ಷ ಬಹುಮತದಿಂದ ಗೆದ್ದಿದ್ದರೂ ಆ ಚುನಾವಣೆಯಲ್ಲಿ ಲೋಪ ಉಂಟಾಗಿದೆ, ಭ್ರಷ್ಟಾಚಾರವಾಗಿದೆ ಎಂದು ಮಿಲಿಟರಿ ಬಂಡುಕೋರರು ಆರೋಪಿಸಿ ಚುನಾವಣೆಯನ್ನೇ ಬಹಿಷ್ಕರಿಸಿದರು. ಸೂಕಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮಿಲಿಟರಿಯ ಆದೇಶದಂತೆ ಎಲ್ಲ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ದೇಶದಲ್ಲಿ ಕೆಲವೊಂದು ಸುಧಾರಣೆ, ಕಾಯ್ದೆ ಜಾರಿಗೆ ಬರಬೇಕಾದರೆ ಮಿಲಿಟರಿಯ ಸಹಕಾರ ಬೇಕಾಗಿರು ತ್ತದೆ.

ಅದೇ ಚಿಂತನೆಯಿಂದ ಸೂಕಿ ಎಲ್ಲವನ್ನೂ ಸಹಿಸಿಕೊಂಡು ಐದು ವರ್ಷಗಳ ಕಾಲ ಆಡಳಿತ ನಡೆಸಿದರು. ಗಾಂಧಿಯ ತತ್ತ್ವದಂತೆ ಆಂಗ್ ಸಾನ್ ಸೂಕಿ ಅಹಿಂಸಾತ್ಮಕ ದಾರಿಯಲ್ಲಿ ನಡೆದರು ಎನ್ನಬಹುದು. ಫೆಬ್ರವರಿ ೨೦೨೧ರಂದು ‘ಕೂ’ ಮಿಲಿಟರಿ ಪಡೆಯ ದೌರ್ಜನ್ಯ ಮತ್ತೆ ಆರಂಭವಾಯಿತು. ೨೦೨೦ ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಎಲ್‌ಡಿ ಪಕ್ಷ ಭಾರಿ ಬಹುಮತದಿಂದ ಗೆದ್ದಿತು. ಆದರೆ ಮ್ಯಾನ್ಮಾರ್ ಆರ್ಮಿಯ ಜನರಲ್ ಆಗಿದ್ದ ಮಿನ್ ಆಂಗ್ ಹ್ಲಿನ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ನವೆಂಬರ್‌ನಲ್ಲಿ ಆರೋಪ ಮಾಡಿ, ತನಿಖೆಗಾಗಿ ಚುನಾವಣಾ ಆಯೋಗವನ್ನು ವಿನಂತಿಸಿ ಕೊಂಡರು. ಆದರೆ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ.

೨೦೨೧ರ ಫೆಬ್ರವರಿಯಲ್ಲಿ ಸಂಸತ್ತಿನ ಮೊದಲ ಅಧಿವೇಶನವನ್ನು ನಡೆಸಬೇಕಿದ್ದಾಗ, ಸಂಸತ್ತಿನ ಚುನಾವಣೆಗಳಲ್ಲಿ ಮತದಾನದ ವಂಚನೆಯನ್ನು
ಉಲ್ಲೇಖಿಸಿ ಮಿಲಿಟರಿ ಒಂದು ವರ್ಷ ತುರ್ತು ಪರಿಸ್ಥಿತಿ ವಿಧಿಸಿತು. ಮುಖ್ಯವಾಗಿ ಮಿಲಿಟರಿ ಪಡೆಗಳು ಪ್ರಜಾಪ್ರಭುತ್ವ ಸರಕಾರ ಬರುವುದನ್ನು ಬಯಸಿರ ಲಿಲ್ಲ. ಹಾಗಾಗಿ ಸೂಕಿಯವರನ್ನು ಹೇಗಾದರೂ ಸರಕಾರದಿಂದ ಕೆಳಗಿಳಿಸಬೇಕೆಂಬ ದೃಢವಾದ ಗುರಿ ಇತ್ತು. ಅಲ್ಲದೆ ಅವರ ಸರಕಾರ ಬಂದರೆ ಮಿಲಿಟರಿ ಯನ್ನು ಹತ್ತಿಕ್ಕುವ ಅಥವಾ ನಿಯಂತ್ರಣ ಮಾಡುವ ಕಾಯ್ದೆ ತರಬಹುದೆಂಬ ಭೀತಿ ಇತ್ತು.

ಅದಾಗಲೇ ಪೂರ್ಣ ಬಹುಮತದ ಒಟ್ಟು ೩೯೬ ಸ್ಥಾನಗಳು ಎನ್‌ಎಲ್‌ಡಿ ಬಳಿ ಇತ್ತು. ಇದೇ ಕಾರಣಕ್ಕೆ ಮಿಲಿಟರಿಯು ಎನ್ ಎಲ್‌ಡಿ ಸರಕಾರ ಅಧಿಕಾರಕ್ಕೆ ಬರುವುದನ್ನು ತಡೆಹಿಡಿಯಿತು. ಸೂಕಿಯವರನ್ನು ಗೃಹಬಂಧನದಲ್ಲಿರಿಸಿತು. ಇಂಟರ್ನೆಟ್ ಸೌಲಭ್ಯ ಕಡಿತಗೊಳಿಸಿತು. ನಂತರ ಮ್ಯಾನ್ಮಾರ್ ದೇಶ ಮಿಲಿಟರಿ ನಿಯಂತ್ರಣದಲ್ಲಿದೆ ಎಂದು ಘೋಷಿಸಿಕೊಂಡಿತು. ಭಾರತ ಈ ವಿಚಾರದ ಕುರಿತು ಮಾನವೀಯ ಕಳಕಳಿಯನ್ನು ವ್ಯಕ್ತಪಡಿಸಿದೆ. ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್ ಕೂಡ ‘ಕೂ’ ಅನ್ನು ವಿರೋಧಿಸಿ, ಸರಕಾರಕ್ಕೆ ತನ್ನ ಆರ್ಥಿಕ ಸಹಾಯ ಮಾಡುವುದಾಗಿ ಘೋಷಿಸಿವೆ. ಮ್ಯಾನ್ಮಾರ್‌ನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯುವಕರು ದೇಶಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡಲು ಸಿದ್ಧರಿದ್ದಾರೆ. ಕೆಲವರು ಮಿಲಿಟರಿ ದಂಗೆಕೋರರ ದಾಳಿಯಿಂದಾಗಿ ತಮ್ಮ ಅಂಗಾಂಗಗಳನ್ನು ಕಳೆದುಕೊಂಡು ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆದರೂ ಅವರಲ್ಲಿ ಹುಮ್ಮಸ್ಸು ಕುಂದಿಲ್ಲ.

ಇಲ್ಲೇ ಇದ್ದು ಮಿಲಿಟರಿ ದಂಗೆಕೋರರ ವಿರುದ್ಧ ಹೋರಾಡುವ ಹುಮ್ಮಸ್ಸನ್ನು ತೋರಿಸುತ್ತಿದ್ದಾರೆ. ನಾಗರಿಕರು ದಾಳಿಯಿಂದ ತಪ್ಪಿಸಿಕೊಳ್ಳಲು ಬಂಕರ್‌ ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇನ್ನು ಕೆಲವರು ತಮ್ಮ ಸಂಬಂಧಿಗಳು, ಸ್ನೇಹಿತರು, ಆತ್ಮೀಯರನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಅದೆಷ್ಟೋ ಮಕ್ಕಳು ತಮ್ಮ ಪೋಷಕರ ಕೈಯಲ್ಲೇ ಪ್ರಾಣಬಿಟ್ಟಿವೆ. ಪ್ಯಾಲೆಸ್ತೀನಿ ಮಹಿಳೆಯರು ಮತ್ತು ಮಕ್ಕಳ ಪ್ರಾಣಗಳ ಬಗ್ಗೆ ಮಾತನಾಡುವ ಶಾಂತಿ ದೂತರಿಗೆ, ವಿದೇಶಿ ಮಾಧ್ಯಮಮಿತ್ರರಿಗೆ, ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಕಣ್ಣಿಗೆ ಕಾಣುತ್ತಿಲ್ಲ. ಈ ಬಗ್ಗೆ ಕರುಣೆ ತೋರಲು ಮತಾಂಧತೆಯ ಪೊರೆಯು ಅಡ್ಡಗಟ್ಟಿದೆ.

ಕಳೆದೆರಡು ವರ್ಷಗಳಿಂದ ಮ್ಯಾನ್ಮಾರ್‌ನ ಸ್ಥಿತಿ ಹದಗೆಟ್ಟಿದೆ. ನಾಗರಿಕರಿಗೆ ತಮ್ಮದೇ ಆದ ಹಕ್ಕುಗಳಿಲ್ಲ. ರಕ್ಷಣೆಯಂತೂ ಮೊದಲೇ ಇಲ್ಲ. ಅದರಲ್ಲೂ ದಕ್ಷಿಣ ಮ್ಯಾನ್ಮಾರ್‌ನಲ್ಲಿ ಈಮಿಲಿಟರಿ ಗುಂಪಿನ ದೌರ್ಜನ್ಯ ಇನ್ನಷ್ಟು ಹೆಚ್ಚಿದೆ. ಕಂಡಕಂಡಲ್ಲಿ ಏರ್‌ಸ್ಟ್ರೈಕ್, ಬಾಂಬ್ ದಾಳಿ ನಡೆಯುತ್ತಿದೆ. ಅಲ್ಲಿನ ಪ್ರಜೆಗಳು ಜೀವಭಯದಿಂದ ಥಾಯ್ಲೆಂಡ್, ಭಾರತದತ್ತ ಕಾನೂನುಬಾಹಿರವಾಗಿ ಗಡಿಯಲ್ಲಿ ನುಸುಳುತ್ತಿದ್ದಾರೆ. ಈಗಾಗಲೇ ಗಡಿಪ್ರದೇಶಕ್ಕೆ ಸಾವಿರಾರು ಮಂದಿ ಜುಂಟಾ ಸೈನಿಕರು ಸೇರಿದಂತೆ, ಅನೇಕ ನಾಗರಿಕರು ನುಸುಳಿದ್ದಾರೆ.

ಭಾರತದ ಗಡಿಭಾಗದ ರಾಜ್ಯಗಳಾದ ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಆತಂಕ ಎದುರಿಸುತ್ತಿವೆ. ಫೆಬ್ರವರಿ ೨೦೨೧ರ ಕ್ಷಿಪ್ರ ದಂಗೆಯ ಬಳಿಕ ೪೦,೦೦೦ಕ್ಕೂ ಹೆಚ್ಚು ಚಿನ್ ನಿರಾಶ್ರಿತರು ಮಿಜೋರಾಂ ಪ್ರವೇಶಿಸಿರುವುದರಿಂದ, ಮ್ಯಾನ್ಮಾರ್ ದಂಗೆಯ ಕಹಿ ಅನುಭವ ಭಾರತವನ್ನು ಕಾಡುತ್ತಿದೆ. ಅಮೆರಿಕದ ಒಂದು ವರದಿಯಂತೆ ಸುಮಾರು ೨ ಲಕ್ಷ ಮಂದಿ ನಾಗರಿಕರು ಸ್ಥಳಾಂತರಗೊಂಡಿದ್ದಾರೆ. ಬಂಡುಕೋರ ಮಿಲಿಟರಿಯ ಸುಮಾರು ೩೯ ಸದಸ್ಯರು ಶಸ್ತ್ರಾಸ್ತ್ರಗಳ ಸಮೇತ ಮಿಜೋರಾಂ ಪೊಲೀಸರಿಗೆ ಶರಣಾಗಿದ್ದಾರೆ ಎಂಬ ಮಾಹಿತಿಯನ್ನು ಮಿಜೋರಾಂ ಪೊಲೀಸರೇ ನೀಡಿದ್ದಾರೆ.

ಮ್ಯಾನ್ಮಾರ್‌ನ ಅದೆಷ್ಟೋ ನಾಗರಿಕರು ಬೇರೆ ದೇಶಕ್ಕೆ ವಲಸೆ ಹೋಗಲು ಸಿದ್ಧರಾಗಿ ನಿಂತಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮ್ಯಾನ್ಮಾರ್‌ನ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ಮ್ಯಾನ್ಮಾರ್‌ನ ಆಂತರಿಕೆ ಬಿಕ್ಕಟ್ಟಿಗೆ ಒಂದು ಶಾಂತಿಯುತ ಪರಿಹಾರ ಕಂಡು ಕೊಳ್ಳಲು ಕರೆ ನೀಡಿದ್ದು, ಅದಕ್ಕಾಗಿ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಬೇಕು ಎಂದಿದೆ. ವಿಚಿತ್ರವೆಂದರೆ ಮ್ಯಾನ್ಮಾರ್‌ನಲ್ಲಿ ನಡೆಯು ತ್ತಿರುವ ಈ ದೌರ್ಜನ್ಯದ ಕುರಿತು ಜಗತ್ತು ಮೌನ ವಹಿಸಿದೆ. ಇಸ್ರೇಲ್ -ಪ್ಯಾಲೇಸ್ತೀನ್ ಯುದ್ಧದಲ್ಲಿ ಶಾಂತಿ, ಅಹಿಂಸೆಯ ಮಾತಾಡಿ, ಪ್ಯಾಲೆಸ್ತೀನಿಯರ
ಕುರಿತು ಮರುಕ ಪಟ್ಟವರು ಇಂದು ಮ್ಯಾನ್ಮಾರ್‌ನಲ್ಲಿ ಹತ್ಯೆಯಾಗುತ್ತಿರುವ ಅಮಾಯಕರ ಕುರಿತು ತುಟಿ ಬಿಚ್ಚುತ್ತಿಲ್ಲ.

ಮಾತೆತ್ತಿದರೆ ಪ್ರಜಾಪ್ರಭುತ್ವದ ರಕ್ಷಣೆಯ ಕುರಿತು ಹುಯಿಲೆಬ್ಬಿಸುವ ತಥಾಕಥಿಕ ಬುದ್ಧಿಜೀವಿಗಳಿಗೆ ಮ್ಯಾನ್ಮಾರ್‌ನಲ್ಲಿ ಗುಂಡೇಟಿನಿಂದ ನಲುಗುತ್ತಿರುವ ಮಕ್ಕಳು-ಮಹಿಳೆಯರ ಆಕ್ರಂದನ ಕಿವಿಗೆ ಬೀಳುತ್ತಿಲ್ಲ. ಇಂಥ ವೈರುಧ್ಯಗಳ ನಡುವೆ ಭಾರತವು ಮ್ಯಾನ್ಮಾರ್‌ನೊಟ್ಟಿಗೆ ತಾನಿದ್ದೇನೆ ಎಂಬ ಮಾನವೀಯ
ಸಂದೇಶವನ್ನು ನೀಡಿ ಇಡೀ ಜಗತ್ತಿಗೆ ಮಾದರಿಯಾಗಿ ನಿಂತಿದೆ. ಆದಷ್ಟು ಬೇಗ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಲಿ. ಮಿಲಿಟರಿಯ ದಮನಕಾರಿ ಆಡಳಿತ, ಆಂತರಿಕ ಬಿಕ್ಕಟ್ಟು, ಮಾನವ ಹತ್ಯೆಯ ದಳ್ಳುರಿಯಿಂದ ಮುಕ್ತಿ ಪಡೆದು ಮ್ಯಾನ್ಮಾರ್ ಎದ್ದು ನಿಲ್ಲಲಿ. ಅಲ್ಲಿನ ಅಮಾಯಕ
ನಾಗರಿಕರ ಜೀವನ ಮತ್ತೆ ಸುಸ್ಥಿತಿಯನ್ನು ತಲುಪಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *

error: Content is protected !!