Friday, 13th December 2024

Narayana Yaji Column: ಬಾಹುಬಲದಲ್ಲಿ ಸೋತ ರಾವಣ ಮತಿಯಿಂದ ವಾಲಿಯನ್ನು ಗೆದ್ದ

vali ravana

ಅವನಿ ಅಂಬರ ಅಂಕಣ: ದೌರ್ಬಲ್ಯವನ್ನು ಅಸ್ತ್ರವಾಗಿಸಿಕೊಳ್ಳುವ ರಾಜತಂತ್ರ

narayana yaji
  • ನಾರಾಯಣ ಯಾಜಿ

Narayana Yaji Column: ದುಡುಕುತನ ಮೇರೆ ಮೀರಿಸಿತು:

ಅಹೋ ಬಲಮಹೋ ವೀರ್ಯಮಹೋ ಗಾಮ್ಭೀರ್ಯಮೇವ ಚ I
ಯೇನಾಹಂ ಪಶುವದ್ಗೃಹ್ಯ ಭ್ರಾಮಿತಶ್ಚತುರೋSರ್ಣವಾನ್ II ರಾ. ಉ. 34-37 II

ಅಬ್ಬ! ನಿನ್ನ ಬಲವೇನು! ನಿನ್ನ ಶೌರ್ಯವೇನು ! ನಿನ್ನ ಗಾಂಭೀರ್ಯವೇನು ! ಪಶುವಿನಂತೆ ನನ್ನನ್ನು ಬಗಲಿನಲ್ಲಿ ಸಿಕ್ಕಿಸಿಟ್ಟುಕೊಂಡು ನಾಲ್ಕು ಸಮುದ್ರಗಳನ್ನೂ ಅಲೆಯಿಸಿಬಿಟ್ಟೆಯೆಲ್ಲವೇ ? ಸ್ವಲ್ಪವಾದರೂ ಆಯಾಸವಿಲ್ಲದೇ ನನ್ನಂತಹವನನ್ನು ಎತ್ತಿಕೊಂಡು ನೀನಲ್ಲದೇ ಬೇರೆ ಯಾವನು ತಾನೇ ಇಷ್ಟು ಶೀಘ್ರವಾಗಿ ಸಂಚರಿಸಬಲ್ಲನು.

ವಾಲಿಯ ಬಲ ಮತ್ತು ಪರಾಕ್ರಮದ ಕುರಿತು ಈ ಮೇಲಿನ ವರ್ಣನೆ ಸಾಕ್ಷಾತ್ ರಾವಣನಿಂದಲೇ ಹೊರಟಿರುವುದು. ರಾಮಾಯಣದಲ್ಲಿ ವಾಲಿ ಬಲಶಾಲಿಯಾಗಿದ್ದ, ರಾವಣನೆನ್ನುವವ ಮಹಾ ಭಯಂಕರನಾಗಿದ್ದ ಹೀಗೆಲ್ಲ ವರ್ಣನೆ ಆಗಾಗ ಉಲ್ಲೇಖಿಸಲ್ಪಡುತದೆ. ಉತ್ತರಕಾಂಡದಲ್ಲಿ ಅವೆಲ್ಲದರ ವಿವರಗಳಿವೆ. ಅಗಸ್ತ್ಯರು ರಾವಣನ ಪರಾಕ್ರಮವನ್ನು ವರ್ಣಿಸುವವರೆಗೆ ಆತನ ಪರಾಕ್ರಮವು ಹೀಗಿತ್ತೋ ಎನ್ನುವುದು ತಿಳಿದಿರುವುದಿಲ್ಲ. ಅದೇರೀತಿ ವಾಲಿಯ ಬಲದ ವರ್ಣನೆ ಸಹ ಅಗಸ್ತ್ಯರೇ ರಾಮನಿಗೆ ವಿವರಿಸಿದ್ದು ಉತ್ತರಖಾಂಡದಲ್ಲಿದೆ. ವಾಲಿ ಕಿಷ್ಕಿಂಧೆಯ ವಾನರ ಸಾಮ್ರಾಜ್ಯದ ಸಂಸ್ಥಾಪಕನಲ್ಲ. ಆತನ ತಂದೆ ಋಕ್ಷರಜಸ್ ಎನ್ನುವವ ವಾನರ ಸಾಮ್ರಾಜ್ಯದ ಸಂಸ್ಥಾಪಕ. ಬ್ರಹ್ಮ ಒಮ್ಮೆ ಮೇರು ಪರ್ವತದಲ್ಲಿ ತಪಸ್ಸುಮಾಡುತ್ತಿರುವಾಗ ಅವನ ಕಣ್ಣೀರಿನಿಂದ ಜನಿಸಿದವ. ಆತನಿಂದ ವಾನರಕುಲ ಅಭಿವೃದ್ಢಿಯಾಯಿತು. ಒಮ್ಮೆ ಸರೋವರವೊಂದರಲ್ಲಿ ಋಕ್ಷರಜಸ್ ಇಣಿಕಿ ನೋಡುತ್ತಿರುವಾಗ ತನ್ನ ಪ್ರತಿಬಿಂಬವನ್ನು ಕಂಡು ಆ ಸರೋವರದೊಳಗೆ ಧುಮುಕಿ ಹುಡುಕಾಡಿ ಮೇಲೆ ಬರುವಾಗ ಹೆಣ್ಣಾಗಿದ್ದ. ಆಗ ಆತನ ರೂಪವನ್ನು ನೋಡಿದ ಸಂದ್ಯಾಕಾಲದ ಸೂರ್ಯ ಮತ್ತು ಇಂದ್ರ ಇಬ್ಬರೂ ಮೋಹಗೊಂಡರು. ಇಂದ್ರನ ತೇಜಸ್ಸು ಬಾಲದ ಮೇಲೆ ಮತ್ತು ಸೂರ್ಯನ ತೇಜಸ್ಸು ಗ್ರೀವದ (ಕುತ್ತಿಗೆ)ಮೇಲೆ ಬಿದ್ದಾಗ ಹುಟ್ಟಿದವರೇ ವಾಲಿ ಸುಗ್ರೀವರು. ಬ್ರಹ್ಮನ ಆಣತಿಯಂತೆ ಋಕ್ಯರಜಸ್ ಕಿಷ್ಕಿಂಧೆಗ ಹೋಗಿ ಅಲ್ಲಿ ವಾನರರ ಸಾಮ್ರಾಜ್ಯವನ್ನು ಸ್ಥಾಪಿಸಿದ. ಮುಂದೆ ವಯಸ್ಸಾಗಲು ಹಿರಿಯವನಾದ ವಾಲಿಗೆ ಪಟ್ಟಗಟ್ಟಿ ಸುಗ್ರೀವನನ್ನು ಯುವರಾಜನನ್ನಾಗಿ ಮಾಡಿ, ತಾನು ತಪಸ್ಸಿಗೆ ಹೋದ.

ವಾಲಿ ಸುಗ್ರೀವರೊಳಗೆ ಲೋಕಕ್ಕೆ ಆದರ್ಶವನ್ನು ಬೋಧಿಸುವ ಬಾಂಧವ್ಯ ಇತ್ತು ಎಂದು ಪ್ರಚಲಿತವಿರುವ ಸಂಗತಿ. ರಾಮ ಲಕ್ಷ್ಮಣರ ಸಾಹೋದರ್ಯ ಭಾವಕ್ಕೆ ಸರಿಸಮವಾಗುವಂತೆ ವಾಲಿ ಸುಗ್ರೀವರ ನಡುವೆ ಪ್ರೀತಿ ಇತ್ತು, ಮಾಯಾವಿಯ ಪ್ರಕರಣದ ನಂತರ ಅದು ದ್ವೇಷಕ್ಕೆ ತಿರುಗಿತು ಎನ್ನುವ ಕಥೆ ನಂತರ ಹುಟ್ಟಿದ್ದೇ ಹೊರತೂ ರಾಮಾಯಣದಲ್ಲಿ ವಿವರಗಳಿಲ್ಲ. ಆದರೆ ವಾಲಿ ಎರಡನೆಯ ಸಾರಿ ಸುಗ್ರೀವನೊಡನೆ ಯುದ್ಧಕ್ಕೆ ಹೋಗುವಾಗ ಆತನನ್ನು ತಡೆದ ತಾರೆಯನ್ನು ಸಮಾಧಾನಿಸುತ್ತಾ “ದರ್ಪಮಾತ್ರಂ ವಿನೇಷ್ಯಾಮಿ ನ ಚ ಪ್ರಾಣೈರ್ವಿಮೋಕ್ಷ್ಯತೇ- ಅವನ ದರ್ಪವನ್ನು ಮಾತ್ರ ನಾಶಮಾಡುತ್ತೇನೆ, ಪ್ರಾಣವನ್ನಲ್ಲ” ಎನ್ನುವ ಮಾತುಗಳನ್ನು ಓದಿದವರು ವಾಲಿಯಲ್ಲಿ ಸುಗ್ರೀವನ ಮೇಲೆ ಅಪಾರವಾದ ಪ್ರೀತಿ ಇತ್ತು ಎನ್ನುವ ನಿರ್ಣಯಕ್ಕೆ ಬಂದಹಾಗೆ ತೋರುತ್ತದೆ. ಈ ಮಾತನ್ನು ವಾಲಿ ತನ್ನ ಪತ್ನಿಯನ್ನು ಸಮಾಧಾನಿಸಲು ಹೇಳುವ ಮಾತೇ ಹೊರತೂ ಮತ್ತೇನೂ ಅಲ್ಲ. ಒಂದುವೇಳೆ ಆತನಿಗೆ ಸುಗ್ರೀವನ ಮೇಲೆ ಪ್ರೀತಿ ಇದ್ದಿದ್ದರೆ ಸುಗ್ರೀವ ತನ್ನ ಜೀವ ಉಳಿಸಿಕೊಳ್ಳಲು ದೇಶಾಂತರ ಸುತ್ತಬೇಕಾದ ಅಗತ್ಯವೇ ಇರಲಿಲ್ಲ. ಮತಂಗ ಋಷಿಯ ಶಾಪವಿದ್ದ ಕಾರಣ ಮತಂಗಾಶ್ರಮದ ಪರಿಸರಕ್ಕೆ ಹೋಗಲಾರದೇ ಅವಡುಗಚ್ಚಿಕೊಂಡಿದ್ದ. ಮೊದಲ ಸಲ ಯುದ್ಧಮಾಡುವಾಗ ಸುಗ್ರೀವ ೠಷ್ಯಮೂಕ ಪರ್ವತಕ್ಕೆ ಹತ್ತಿಕೊಂಡು ಅಂತೂ ಪ್ರಯಾಸದಿಂದ ತನ್ನ ಜೀವವನ್ನು ಉಳಿಸಿಕೊಂಡಿದ್ದ. “ಅಂತೂ ಈ ದಿನ ನೀನು ತಪ್ಪಿಸಿಕೊಂಡೆ; ಇನ್ನೊಮ್ಮೆ ಕೈಗೆ ಸಿಕ್ಕು, ನೋಡಿಕೊಳ್ಳುವೆ” ಎಂದು ಅಬ್ಬರಿಸಿ ಅಲ್ಲಿಂದ ಕಿಷ್ಕಿಂಧೆಗೆ ಮರಳಿದ್ದ. ವಾಲಿ ಸುಗ್ರೀವರಿಬ್ಬರೂ ಸಮಪ್ರಾಯದವರು. ಹಾಗಾಗಿ ತಮ್ಮನಾದ ಸುಗ್ರೀವನನ್ನು ವಾಲಿ ಬೆನ್ನಮೇಲೆ ಕುಳ್ಳಿರಿಸಿ ಉಪ್ಪುಮೂಟೆ ಆಟ ಆಡಿದ್ದ ಕತೆಗಳೆಲ್ಲ ನಡೆದಿರಲು ಅಸಾಧ್ಯ. ವಾಲಿಗೆ ಸುಗ್ರೀವನ ಮೇಲೆ ತಮ್ಮನೆನ್ನುವ ಭಾವ ಇತ್ತು. ಸುಗ್ರೀವನಿಗೆ ಅಣ್ಣನೆನ್ನುವ ಗೌರವ ಇತ್ತು, ಓರ್ವ ಯುವರಾಜ ಹೇಗೆ ನಿಷ್ಠೆಯನ್ನು ತೋರಿಸಬೇಕೋ ಆ ಪ್ರಮಾಣದಲ್ಲಿ ಆತ ಅಣ್ಣನನ್ನು ಗೌರವಿಸುತ್ತಿದ್ದ. ಅಣ್ಣತಮ್ಮರಿಬ್ಬರಲ್ಲಿಯೂ ಯಾವ ವಿಧವಾದ ಬೇಧವೂ ಉಂಟಾಗುವಂತಹ ಪ್ರಸಂಗ ನಡೆಯದೇ ಇದ್ದುದರಿಂದ ಅವರ ನಡುವೆ ಏಕತ್ರಾಭಿಪ್ರಾಯವೇ ಇತ್ತು. ಮಾಯಾವಿಯ ಪ್ರಕರಣದಲ್ಲಿ ಸುಗ್ರೀವ ಕಾದು ಕಾದು ಕೊನೆಗೆ ವಾಲಿಗೆ ಏನೋ ಅಪಾಯವಾಯಿತೆನ್ನುವ ಅನುಮಾನದಿಂದ ಕಿಷ್ಕಿಂಧೆಗೆ ಬಂದವ ನೇರವಾಗಿ ಸಿಂಹಾಸನವನ್ನು ಏರಿರಲಿಲ್ಲ. ಕೆಲದಿನಕಳೆದ ಮೇಲೆ ಮ್ಲಾನವದನನಾದ ಸುಗ್ರೀವನನ್ನು ಮಂತ್ರಿ ಪ್ರಮುಖರೆಲ್ಲರೂ ವಿಷಯವನ್ನು ಕೇಳಿದಾಗ ವಾಲಿ ಮಾಯಾವಿಯಜೊತೆಯ ಹೋರಾಟದಲ್ಲಿ ಮಡಿದಿರಬೇಕೆನ್ನವ ತನ್ನ ಅನುಮಾನವನ್ನು ಮುಂದಿಟ್ಟ. ಜೊತೆಗೆ ವಾಲಿಗೆ ಜಲತರ್ಪಣವನ್ನೂ ನೀಡಿ ಬಂದಿದ್ದ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ವಾನರ ಪ್ರಮುಖರ ಒತ್ತಾಯಕ್ಕೆ ಕಿಷ್ಕಿಂಧೆಯ ಸಿಂಹಾಸನವನ್ನು ಏರಿದ. ತಾರೆಯೂ ಆತನ ಜೊತೆಗೆ ಸಿಂಹಾಸನದಲ್ಲಿ ಕುಳಿತಿದ್ದಳು. ಈ ಸಮಯದಲ್ಲಿ ಕಿಷ್ಕಿಂಧೆಗೆ ಬಂದ ವಾಲಿಗೆ ಈ ದೃಶ್ಯವನ್ನು ಕಂಡಾಗ ರೋಷ ಸಹಜವಾಗಿ ಬಂದಿರುವುದು ಅಪರಾಧವೇನೂ ಅಲ್ಲ. ನಂಬಿದ ತನ್ನವರೇ ತನಗೆ ಮೋಸಮಾಡಿದರೆನ್ನುವ ವಿಷಯ ತಿಳಿದಾಗ ಬಂದ ರೋಷ ಅದು. ಹಾಗಾಗಿ ಸುಗ್ರೀವನನ್ನು ದಂಡಿಸಿದ. ಆತನ ಮಾತುಗಳನ್ನು ಕೇಳುವ ತಾಳ್ಮೆಯೂ ಅವನಲ್ಲಿರಲಿಲ್ಲ. ಜೊತೆಗೆ ಅವನ ಮಂತ್ರಿಗಳನ್ನು ಸೆರೆಯಲ್ಲಿಟ್ಟಿದ್ದ. ಕಬಂಧ ಸುಗ್ರೀವನ ಪರಿಚಯವನ್ನು ಹೇಳುವಾಗ ವಾಲಿಯ ಗುಣದೋಷಗಳ ವಿಷಯದಲ್ಲಿ “ಭಾಸ್ಕರಸ್ಯೌರಸಃ ಪುತ್ರೋ ವಾಲಿನಾ ಕೃತಕಿಲ್ಬಿಷಃ – ಸೂರ್ಯನ ಔರಸಪುತ್ರನಾದ ವಾಲಿಯೊಂದಿಗೆ ವೈರವನ್ನು ಬೆಳೆಸಿಕೊಂಡು ಪ್ರಾಣಭಯದಿಂದ ಪಂಪಾಸರೋವರದ ದಂಡೆಯಮೇಲೆ ಅಲೆದಾಡುತ್ತಿರುತ್ತಾನೆ” ಎಂದು ಹೇಳಿದ್ದ. ವಾಲಿ ಮತ್ತು ಸುಗ್ರೀವರಿಬ್ಬರ ದ್ವೇಷಕ್ಕೆ ಕಾರಣವಾದ ಸಂಗತಿಯನ್ನು ಗಮನಿಸಿದಾಗ ಇಬ್ಬರಿಗೂ ಕಾಲವೇ ವೈರವನ್ನು ಉಂಟಾಗುವಂತೆ ಮಾಡಿಸಿತು ಎಂದು ಹೇಳಬಹುದು. ಸುಗ್ರೀವನದ್ದು ಆತುರಗೆಟ್ಟ ನಡವಳಿಕೆಯಾದರೆ ವಾಲಿಯದು ದುಡುಕು ಬುದ್ಧಿ. ಅದುವೇ ಸುಗ್ರೀವನನ್ನು ಹೊರಹಾಕಿ ಆತನ ಪತ್ನಿಯನ್ನು ಬಲತ್ಕಾರದಿಂದ ವಾಲಿ ಇರಿಸಿಕೊಂಡಲ್ಲಿಯ ವರೆಗೆ ಸಾಗಿತು (ಇದರ ವಿವರ ಮುಂದೆ ವಾಲಿವಧೆಯ ಕುರಿತು ರಾಮನ ಸಮರ್ಥನೆಯ ವಿಷಯಬಂದಾಗ ವಿವರವಾಗಿ ಬರುತ್ತದೆ).

ramayana 3

ಜಗತ್ತಿಗೇ ಆಶ್ಚರ್ಯಭೂತನಾಗಿರುವ ವಾಲಿ

ಪರಾಕ್ರಮದಲ್ಲಿ ವಾಲಿಯು ಮಹಾ ಬಲಶಾಲಿಯಾಗಿದ್ದ. ದಿನನಿತ್ಯವೂ ಸಂಧ್ಯಾವಂದನೆಯನ್ನು ಬಿಡುತ್ತಿರಲಿಲ್ಲ. ಆತನ ಸಂಧ್ಯಾವಂದನೆಯ ವಿಶೇಷವೆಂದರೆ ಒಂದು ಕಡೆ ಅಲ್ಲ, ನಾಲ್ಕು ಸಮುದ್ರದಲ್ಲಿಯೂ ಸಂಧ್ಯಾವಂದನೆಯನ್ನು ಮಾಡುತ್ತಿದ್ದ. ಆ ಸಂದರ್ಭದಲ್ಲಿ ಯಾವ ತೊಂದರೆ ಆದರೂ ತನ್ನ ಆಚರಣೆಯನ್ನು ಬಿಡುತ್ತಿರಲಿಲ್ಲ. ಇವೆಲ್ಲವೂ ವಿಪರೀತವೆನ್ನುವುದನ್ನು ಗಮನಿಸಬೇಕು. ಸಂಧ್ಯಾವಂದನೆಯನ್ನು ಪ್ರಾತಃಕಾಲದಲ್ಲಿ ಮಾಡಬೇಕೇ ಹೊರತೂ ಕಂಡ ಕಂಡ ಕಡೆ ಮಾಡುವುದಲ್ಲ. ಬುದ್ಧಿಯನ್ನು ಬೆಳಕಿನಕಡೆಗೆ ಕೊಂಡೊಯ್ಯುವಂತೆ ಪ್ರಚೋದಿಸಲು ತನ್ನ ನ್ನು ತಾನು ಜಾಗ್ರತಗೊಳಿಸಲು ಇರುವ ಸಾಧನಾಮಾರ್ಗ ಅದು. ಯಾವುದೇ ಜಪವನ್ನು ಮಾಡುವಾಗ ತಾನು ಎನ್ನುವ ಭಾವ ಬರಕೂಡದು. ಗಾಯತ್ರಿಯ ಕೊನೆಯ ಚರಣದಲ್ಲಿ “ಧಿಯಃ ಯಃ ನಃ ಪ್ರಚೋದಯಾತ್” ಎಂದರೆ ನಮ್ಮನ್ನು ಎನ್ನುವ ಬಹುವಚನದ ಪ್ರಯೋಗವಿದೆ. ಇದರರ್ಥ ಕೇವಲ ನನ್ನಲ್ಲ, ಸಮಷ್ಠಿಯನ್ನು ಪ್ರಚೋದಿಸಲಿ ಎಂದಾಗುತ್ತದೆ. ತೋರಿಕೆಗೆ ಮಾಡುವ ಜಪ ಫಲ ಕೊಡುವುದಿಲ್ಲ, ವಾಲಿ ಮತ್ತು ರಾವಣರಿಬ್ಬರದೂ ಎಲ್ಲವೂ ಬಹಿರಂಗವಾದ ಆಚರಣೆಯಾಗಿತ್ತು. ಜನ ನೋಡಿ ಹೌದು ಹೌದು ಎನ್ನಬೇಕಿತ್ತು. ಹಾಗಾಗಿ ರಾವಣನ ವೇದ ಭಾಷ್ಯವಾಗಲೀ, ಸಂಗೀತವಾಗಲೀ ಬಳಕೆಗೆ ಬರಲಿಲ್ಲ. ವಾಲಿಯ ಈ ಸಂಧ್ಯಾವಂದನೆಯ ಕ್ರಮವೂ ಹಾಗೇ ಆಗಿತ್ತು.

ಪ್ರಕೃತದಲ್ಲಿ ದೇವತೆಗಳನ್ನು ಜಯಿಸಿದ ರಾವಣ ಆಗ ತಾನೇ ಕಾರ್ತ್ಯವೀರ್ಯಾರ್ಜುನನಿಂದ ಪರಾಭವಗೊಂಡಿದ್ದ. ಆದರೂ ಅಧಿಕಬಲವಿರುವವರನ್ನು ತುಡುಕುವ ಆತನ ಕೊಬ್ಬು ಕಡಿಮೆಯಾಗಿರಲಿಲ್ಲ. ಹೀಗಿರುತ್ತ ಒಂದು ದಿನ ಆತ ನೇರವಾಗಿ ಕಿಷ್ಕಿಂಧೆಗೆ ಬಂದು ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸುತ್ತಾನೆ. ಕಿಷ್ಕಿಂಧೆಯ ಹೊರವಲಯದಲ್ಲಿ ಶಂಖದಂತೆ ಬಿಳುಪಾಗಿರುವ ಮೂಳೆಯ ರಾಶಿಯ ದಿಬ್ಬವೇ ಇತ್ತು. ಸುಗ್ರೀವ ಅದನ್ನು ತೋರಿಸಿ “ಇವೆಲ್ಲವೂ ವಾಲಿಯನ್ನು ಎದುರಿಸಲು ಬಂದ ಮಹಾವೀರರ ಮೂಳೆರಾಶಿಗಳು. ನೀನು ಅಮೃತವನ್ನು ಕುಡಿದಿದ್ದರೂ ಅವನೊಡನೆ ಯುದ್ಧಮಾಡುವವರೆಗೆ ಮಾತ್ರವೇ ಜೀವಿಸಿರಬಲ್ಲೆ. ಮುಹೂರ್ತಕಾಲ ಕಾದಿರು, ಜಗತ್ತಿಗೇ ಆಶ್ಚರ್ಯಭೂತನಾಗಿರುವ (ಪಶ್ಯೇದಾನೀಂ ಜಗಚ್ಛಿತ್ರಮಿಮಂ) ವಾಲಿಯನ್ನು ಕಾಣುವೆ, ಅಲ್ಲಿಯವರೆಗೆ ಬದುಕಿರು. ಒಂದು ವೇಳೆ ಸಾಯಲೇ ಬೇಕೆಂದು ಅವಸರ ಪಡುತ್ತಿದ್ದರೆ ಈಗಲೇ ದಕ್ಷಿಣ ಸಮುದ್ರಕ್ಕೆ ಹೋಗು. ಯಜ್ಞೇಶ್ವರನಂತೆ ಪ್ರಜ್ವಲಿಸುವ ವಾಲಿಯನ್ನು ಅಲ್ಲಿ ನೀನು ಕಾಣುವೆ” ಎಂದು ವಾಲಿಯ ಪರಾಕ್ರಮದ ವಿವರವನ್ನು ಹೇಳುತ್ತಾನೆ.

ವಿಕ್ರಮಿಗಳನ್ನು ತುಡುಕುವ ಸ್ವಭಾವದ ರಾವಣ ತಕ್ಷಣವೇ ವಾನರರನ್ನು ಬೆದರಿಸಿ ಪುಷ್ಪಕವಿಮಾನದಲ್ಲಿ ಕುಳಿತು ಸಮುದ್ರತೀರಕ್ಕೆ ಬಂದು ಅಲ್ಲಿ ಧ್ಯಾನಸ್ಥನಾದ ವಾಲಿಯನ್ನು ನೋಡುತ್ತಾನೆ. ಹಿಂದಿನಿಂದ ಅವನನ್ನು ಹಿಡಿಯಲು ಮೆಲ್ಲಗೆ ಹೋಗುವಾಗ ಸಂಧ್ಯಾವಂದನೆಯನ್ನು ಮಾಡುತ್ತಿರುವ ವಾಲಿಗೆ ಇದು ಗೊತ್ತಾಗುತ್ತದೆ (ವಾಲಿಯದು ಅಂತರಂಗದ ಧ್ಯಾನವಲ್ಲವೆಂದು ಇದರಿಂದಲೇ ಗೊತ್ತಾಗುತ್ತದೆ). ಫಕ್ಕನೆ ರಾನಣನನ್ನು ತನ್ನ ಕಂಕುಳಿನಿಂದ ಹಿಡಿದು ಅವನನ್ನು ಎತ್ತಿಕೊಂಡು ಆಕಾಶಕ್ಕೆ ಹಾರುತ್ತಾನೆ. ವಾಲಿಯ ಬಿಗಿಪಟ್ಟಿಗೆ ಸೋತ ರಾವಣ ಅವನಿಂದಬಿಡಿಸಿಕೊಳ್ಳಲು ಅವನ ಮೈಯನ್ನು ಪರಚಿದರೂ ಬಿಡುವುದಿಲ್ಲ. ವಾಲಿಯ ತೋಳುಗಳು ಮತ್ತು ತೊಡೆಗಳ ವೇಗದಿಂದ ಹುಟ್ಟಿದ ಗಾಳಿಯ ವೇಗಕ್ಕೆ ರಾವಣನಿಗೆ ವಿಪರೀತವಾಗಿ ಬಳಲಿಕೆಯಾಗುತ್ತದೆ. ಅವನನ್ನು ಹಿಡಿದುಕೊಂಡು ಉಳಿದ ಮೂರೂ ಸಮುದ್ರದಲ್ಲಿ ಅದ್ದಿಸಿ ಎತ್ತಿ ಮತ್ತೆ ಅನೇಕ ಸಾವಿರ ಯೋಜನಗಳವರೆಗೆ ವಾಯುವೇಗ-ಮನೋವೇಗದಲ್ಲಿ ಹಾರಿದ ರಭಸಕ್ಕೆ ರಾವಣ ಅವಸ್ಥೆ ಯಾರಿಗೂ ಬೇಡ. ಹಾಗೇ ಅವನನ್ನುಕಿಷ್ಕಿಂಧೆಗೆ ತಂದು ಕಂಕುಳಿನಿಂದ ಕೆಳಗಿಳಿಸಿ “ಕುತಸ್ತ್ವಮಸಿ- ನೀನೆಲ್ಲಿಂದ ಬಂದೆ?” ಎಂದು ಗಹಗಹಿಸಿ ನಗುತ್ತಾ ಕೇಳಿದರೆ, ರಾವಣ ಯುದ್ಧ ಮಾಡುವ ಮೊದಲೇ ಸೋತು ಹೋಗಿದ್ದ, ಉತ್ತರಕೊಡುವ ಸಾಮರ್ಥ್ಯವೂ ಇರಲಿಲ್ಲ. ರಾವಣ ಮೊದಲು ಮಾಡುವ ಕೆಲಸ ವಾಲಿಯ ಪರಾಕ್ರಮವನ್ನು ಹೊಗಳುವುದು. ಅದನ್ನೇ ಅಗ್ರಶ್ಲೋಕದಲ್ಲಿ ಹೇಳಿದೆ. ಹೊಗಳಿಕೆಗೆ ವಾಲಿ ಅರ್ಧ ತಣ್ಣಗೆ ಆದ. ಇನ್ನುಳಿದಿದ್ದು ಭೋಗದ ವಿಷಯ.

ಹೆಣ್ಣಿನ ಮೋಹ

ರಾವಣ ಬಾಹುಬಲದಲ್ಲಿ ಆಗದೇ ಇದ್ದಾಗ ಯುಕ್ತಿಯಿಂದ ತನ್ನ ಕೆಲಸ ಮಾಡುತ್ತಿದ್ದ. ಆತ ಬಲಿಯೊಡನೆ, ಮಯನೊಡನೆ, ಕಾರ್ತವೀರ್ಯನೊಡನೆ ಸಾಧಿಸಿದ್ದು ಇದನ್ನೇ. ಕೆಲವೊಮ್ಮೆ ಅವನ ತಂದೆ ಬಂದು ಬಿಡಿಸುತ್ತಿದ್ದ, ಇನ್ನು ಕೆಲಕಡೆ ಶತ್ರುಗಳ ದೌರ್ಭಲ್ಯವನ್ನು ಉಪಯೋಗಿಸಿ ಅವರೊಡನೆ ಮಿತ್ರತ್ವವನ್ನು ಮಾಡಿಕೊಳ್ಳುತ್ತಿದ್ದ. ಇಲ್ಲಿಯೂ ಆತ ಮಾಡಿದ್ದು ಅದನ್ನೇ. ವಾಲಿಯ ದೌರ್ಭಲ್ಯ ಯಾವುದೆಂದು ಆತನಿಗೆ ಮೊದಲೇ ತಿಳಿದಿತ್ತು. ತನ್ನ ಪರಾಕ್ರಮದ ಕುರಿತು ಅಮಿತ ಗರ್ವ, ಹೆಣ್ಣುಗಳ ವಿಷಯದಲ್ಲಿ ಅಪರಿಮಿತವಾದ ಆಸಕ್ತಿ ವಾಲಿಯಲ್ಲಿತ್ತು. ಆತನ ಮಡದಿ ತಾರೆಯನ್ನು ಪಡೆಯುವ ವಿಷಯದಲ್ಲಿಯೂ ಆತನಿಗೂ ಸುಷೇಣನಿಗೂ ಜಗಳ ಉಂಟಾಗಿತ್ತು. ರಾವಣನಷ್ಟು ಪ್ರಚಾರಕ್ಕೆ ಅದು ಬರಲಿಲ್ಲ ಏಕೆಂದರೆ ಕಿಷ್ಕಿಂಧೆ ಬುಡಕಟ್ಟು ಪ್ರದೇಶವಾದುದರಿಂದ ಮತ್ತು ಕಥಾಭಾಗಕ್ಕೆ ಮುಖ್ಯವಾದ ವಿಷಯ ವಾಲಿಯ ಭಾಗ ಅಲ್ಲದೇ ಇರುವುದರಿಂದ ಅದರ ವಿವರಕ್ಕೆ ವಾಲ್ಮೀಕಿ ಹೋಗಿಲ್ಲ. ಮುಂದೆ ಮಯನೊಡನೆ ವೈರವೂ ಸಹ ಸ್ತ್ರೀಯೋರ್ವಳ ವಿಷಯದಲ್ಲಿಯೇ ಆಗಿತ್ತು (ಮದ್ವೈರಂ ಸ್ತ್ರೀಕೃತಂ) ದುಂದುಭಿಯ ವಿಷಯದಲ್ಲಿಯೂ ಇದೇ ಕಾರಣವೆಂದು ಸೂಕ್ಷ್ಮವಾಗಿ ಕೆಲ ರಾಮಾಯಣಗಳಲ್ಲಿ ಬಂದಿದೆ. ಮಧುಪಾನ ಮತ್ತು ಪರಸ್ತ್ರೀ ಗಮನ ಇವೆರಡೂ ವಾಲಿಯ ದೌರ್ಬಲ್ಯವೆಂದು ತಿಳಿದ ರಾವಣ ಅವನಿಂದ ತಪ್ಪಿಸಿಕೊಂಡು ಲಂಕೆಗೆ ಹೋಗಲು ಎಸೆವ ದಾಳವೇ ಸ್ತ್ರೀ ವಿಷಯಯದಲ್ಲಿ. ವಾಲಿಗೆ ತೋರಿಸುವ ಆಮೀಷ ಸಾಮಾನ್ಯರಿಗೂ ಹೇಸಿಗೆಯಾಗುವಂತಹದ್ದು. ರಾವಣ ಇಲ್ಲಿ ಅಗ್ನಿಸಾಕ್ಷಿಯಾಗಿ ವಾಲಿಯೊಡನೆ ಮಾಡಿಕೊಂಡ ಗೆಳೆತನ.

                    ದಾರಾಃ ಪುತ್ರಾಃ ಪುರಂ ರಾಷ್ಟ್ರಂ ಭೋಗಾಚ್ಛಾದನ ಭೋಜನಮ್ I
                    ಸರ್ವಮೇವಾವಿಭಕ್ತಂ ನೌ ಭವಿಷ್ಯತಿ ಹರೀಶ್ವರ II

ಹರೀಶ್ವರನೇ ! ಮಡದಿ-ಮಕ್ಕಳು, ನಗರ, ರಾಜ್ಯ, ಭೋಗ, ವಸ್ತ್ರ ಭೋಜನ-ಈ ಎಲ್ಲವೂ ವಿಭಾಗವಿಲ್ಲದೇ ನಮ್ಮಿಬ್ಬರಲ್ಲಿ ಸಮಾನವಾಗಿರಲಿ.

ವಾಲಿ ರಾವಣರ ನಡುವೆ ಆದ ಒಪ್ಪಂದಕ್ಕಿಂತ ರಾವಣ ಇಲ್ಲಿ ತನ್ನ ರಾಜ್ಯದ, ತನ್ನ ಸ್ತ್ರೀಯರ, ನಗರ ಮತ್ತು ಎಲ್ಲದರ ಕುರಿತು ವಾಲಿಗೆ ಆಮಿಷ ತೋರುತ್ತಾನೆ. ಸಂಧಾನಕ್ಕೆ ಬಂದ ಕುಬೇರನ ದೂತನನ್ನು ಕರುಣೆಯಿಲ್ಲದೇ ಹುರಿದು ತಿಂದವ ರಾವಣ. ಆತನಿಗೆ ಕಾರ್ಯ ಸಾಧನೆ ಮುಖ್ಯ. ಹಾಗಾಗಿ ಮಂಡೋದರಿ ಸಹಿತವಾಗಿ ಎಲ್ಲರಲ್ಲಿಯೂ ವಾಲಿಗೆ ಸಮಾನವಾಗಿ ಅನುಭೋಗಿಸಲು ಅವಕಾಶವನ್ನು ಕೊಡುವೆನೆಂದು ಮಾತು ಕೊಟ್ಟ. ಸೋತ ರಾಜ ಗೆದ್ದವನ ಅಧಿಪತ್ಯವನ್ನು ಒಪ್ಪಿಕೊಂಡಂತೆ ಆದ ಒಪ್ಪಂದವಿದು!

ಅದಾಗಲೇ ಕನಕ ಲಂಕೆಯ ವೈಭವ, ರಾವಣನ ಅಂತಃಪುರದ ವರ್ಣನೆ ಎಲ್ಲಾಕಡೆಯೂ ಹಬ್ಬಿತ್ತು. ಸ್ವರ್ಗವನ್ನು ಮೀರಿಸುವ ಭೋಗಗಳಿಗೆ ರಾವಣ ಸಮಾನ ಅವಕಾಶ ಕೊಡುತ್ತೇನೆ ಎಂದಾಗ ವಾಲಿ ರಾವಣ ತನ್ನಿಂದ ಸೋತವ ಎನ್ನುವುದನ್ನು ಮರೆತು ಪರಸ್ಪರ ಗಾಢಾಲಿಂಗನ ಮಾಡಿಕೊಂಡು ಒಬ್ಬರು ಮತ್ತೊಬ್ಬರ ಕೈಹಿಡಿದು “ವಾಲಿಯ ಅಂತಃಪುರವನ್ನು(???)” ಪ್ರವೇಶಿಸಿದರು. ರಾವಣನನ್ನು ವಾಲಿ ಒಂದು ತಿಂಗಳ ಕಾಲ ಕಿಷ್ಕಿಂಧೆಯಲ್ಲಿ ಸಮ್ಮಾನಿತನಾಗಿ ಇರಿಸಿಕೊಂಡಿದ್ದ. ಆ ಸಮಯವನ್ನು ಹೇಗೆ ಅವರಿಬ್ಬರೂ ಕಳೆದಿರಬಹುದು ಎನ್ನುವುದನ್ನು ವಾಲ್ಮೀಕಿ ನಮ್ಮ ಕಲ್ಪನೆಗೇ ಬಿಟ್ಟಿದ್ದಾನೆ. ಕಿಷ್ಕಿಂಧೆಯಲ್ಲಿ ರಾವಣನಿಗೆ ಸಮ್ಮಾನ ಹೇಗಿತ್ತೆಂದರೆ ಆತ ಅಲ್ಲಿಂದಹೋಗಲು ಸಿದ್ದನಿರಲಿಲ್ಲ. ಆತನ ಮಂತ್ರಿಗಳು ಅಲ್ಲಿಗೆ ಬಂದು ಭೂಮಂಡಲದ ಸಂಚಾರಕ್ಕಾಗಿ ಕರೆದೊಯ್ಯಬೇಕಾಯಿತು. ರಾವಣ ಸೋತರೂ ಉಂಡೂ ಹೋದ, ಕೊಂಡೂ ಹೋದ! ಕಿಷ್ಕಿಂಧೆಯಲ್ಲಿ ಸಕಲ ಉಪಚಾರವನ್ನು ಸವಿದ ರಾವಣ ವಾಲಿಯನ್ನು ಲಂಕೆಗೆ ಕರೆಯಲಿಲ್ಲ! ಮುಖ್ಯವಾದ ವಿಷಯವೆಂದರೆ ಅಂಗದನ ತೊಟ್ಟಿಲಿಗೆ ರಾವಣನನ್ನು ಕಟ್ಟಿದ ವಿಷಯ ವಾಲ್ಮೀಕಿ ರಾಮಾಯಣದಲ್ಲಿಲ್ಲ.

ಇದನ್ನೂ ಓದಿ: New Column: ಅವನಿ ಅಂಬರ ಅಂಕಣ: ಋಷ್ಯಮೂಕದೊಳಿಪ್ಪ ಸುಗ್ರೀವನೆಂಬ ವಾನರ