Tuesday, 10th December 2024

Narayana Yaji Column: ಹೆಜ್ಜೆ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ

ಮಾರು-ಕಟ್ಟೆ

ನಾರಾಯಣ ಯಾಜಿ

ಭಾರತದ ಶೇರು ಮಾರುಕಟ್ಟೆಯಮೇಲೆ ನಿಗಾ ಇಡುವ ಹದ್ದಿನ ಕಣ್ಣಿನ ನಿಯಂತ್ರಣ ಸಂಸ್ಥೆ ಸೆಬಿ (Securities and
Exchange Board of India ) ಅಗಸ್ಟ್ ೨೮ ರಂದು ಶೇರು ಮಾರುಕಟ್ಟೆಯಲ್ಲಿ ಹೂಡಿಕೆಮಾಡುವವರಿಗೆ ಒಂದು
ಎಚ್ಚರಿಕೆಯ ವಿeಪನೆಯನ್ನು ಮಾಡಿತು. ಅದರ ಸಾರಾಂಶ ಹೀಗಿದೆ: ‘ಕೆಲವೊಂದು SME ಕಂಪನಿಗಳು ಮತ್ತು/ ಅಥವಾ ಅದರ ಪ್ರವರ್ತಕರು ತಮ್ಮ ಕಂಪನಿಯ IPO ಗಳು ಯಶಸ್ವಿಯಾಗುವಂತೆ ಮಾಡಲು ಅಂತಹ ಕಂಪನಿಗಳ ಕಾರ್ಯಾಚರಣೆಗಳ ಕುರಿತು ಅನೇಕ ಅವಾಸ್ತವ ಚಿತ್ರಣಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ.

ಹೂಡಿಕೆದಾರರಲ್ಲಿ ಧನಾತ್ಮಕ ಅಭಿಪ್ರಾಯಗಳನ್ನು ಮೂಡಿಸಲು ಬೋನಸ್ ಶೇರುಗಳು, ಶೇರುಗಳ ಮುಖಬೆಲೆ ಯನ್ನು ವಿಭಜಿಸುವುದು, ಆದ್ಯತಾ ಶೇರುಗಳನ್ನು ಕೊಡುವ ಪ್ರಕಟಣೆಗಳ ಮೂಲಕ ಸಾರ್ವಜನಿಕ ಹೂಡಿಕೆದಾರರಲಿ ಧನಾತ್ಮಕ ಅಭಿಪ್ರಾಯ ಬರುವಂತಹ ವಿಧಾನಗಳನ್ನು ಅನುಸರಿಸುತ್ತಿದೆ. ಇವುಗಳ Modus operandi (ಆಮಿಷದ ಕಾರ್ಯಾಚರಣೆಗಳು) ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯ.’ ಎನ್ನುವ ಪ್ರಕಟಣೆಯನ್ನು ನೀಡಿ ತನ್ನ ಕೈ ತೊಳೆದುಕೊಂಡಿತು. ಸೆಬಿ ಹೂಡಿಕೆದಾರರನ್ನು ಕಾಲಕಾಲಕ್ಕೆ ಸಲಹಾತ್ಮಕ ವಿeಪನೆಗಳ ಮೂಲಕ ಎಚ್ಚರಿಕೆ ಯನ್ನು ಮಾಡುತ್ತಿರುತ್ತದೆ. ಅದರೆ ಹೂಡಿಕೆದಾರಲ್ಲಿ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಾದ ಮಾಧ್ಯಮ ಗಳು ಈ ಕುರಿತು ತಮ್ಮ ಧ್ವನಿಯನ್ನು ಎತ್ತಲೇ ಇಲ್ಲ. ಇಂಗ್ಲೀಷಿನ ವಾಣಿಜ್ಯ ಪತ್ರಿಕೆಯಲ್ಲಿ ಎರಡು ಪ್ಯಾರಾಗಳಲ್ಲಿ ಬಂದ ಈ ವಿಷಯ ಕನ್ನಡ ಯಾವ ಪತ್ರಿಕೆಗಳ ಗಮನವನ್ನೂ ಸೆಳೆದಂತಿಲ್ಲ.

ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಹಂತದ ಕೈಗಾರಿಕೆಗಳು ಬೆಳೆಯದಿರುವುದಕ್ಕೆ ಮೂಲಕಾರಣ ಅವುಗಳಿಗೆ
ಸಕಾಲದಲ್ಲಿ ಬ್ಯಾಂಕುಗಳ ಹಣಕಾಸಿನ ನೆರವು ದೊರೆಯದೇ ಇರುವುದು. ಈ ಕೊರತೆಯನ್ನು ನೀಗಿಸಲು ೨೦೧೨ರಲ್ಲಿ
ಅಂದಿನ ಸರಕಾರ ಇಪ್ಪತ್ತೈದು ಕೋಟಿ ರುಪಾಯಿಗಳಿಗೆ ಮೀರದಂತೆ ಇರುವ ಸಣ್ಣ ಮತ್ತು ಮದ್ಯಮ ಕಂಪನಿಗಳು ಮಾರುಕಟ್ಟೆಯಲ್ಲಿ ತಮ್ಮ ಐಪಿಒಗಳನ್ನು ತರುವಮೂಲಕ ಬಂಡವಾಳವನ್ನು ಎತ್ತಲು ಅನುಮೋದಿಸಿದರು. ಕೈಗಾರಿಕೆಗಳ ಬೆಳವಣಿಗೆಯಲ್ಲಿ ಇದೊಂದು ಕ್ರಾಂತಿಕಾರಕ ಬೆಳವಣಿಗೆ. ಅವುಗಳ ಹೂಡಿಕೆಯ ಪ್ರಕ್ರಿಯೆ ಸರಳ ವಾಗುವಂತೆ ಆಗಲು BSE SME Platform ಮತ್ತು NSE Emerge ಎನ್ನುವ ಹೊಸ ವೇದಿಕೆಯನ್ನು ಕಲ್ಪಿಸಲಾಯಿತು. ಸ್ಟಾರ್ಟ್- ಅಪ್‌ಗಳಿಗಾಗಲೀ, ಅಥವಾ ಇನ್ನಿತರ ಸಣ್ಣ ಕೈಗಾರಿಕೆಗಳಿಗೆ ಇದು ವರದಾನವಾಗಿದೆ. ಇಂದು ಭಾರತದಲ್ಲಿ Main Board IPO ಮತ್ತು SME IPO ಎನ್ನುವ ಎರಡು ವಿಧಗಳಿವೆ. ಮೈನ್-ಬೋರ್ಡ್ ಐಪಿಒಗಳು ಹಲವು ಹಂತದ ಪರೀಶೀಲನೆಗಳ ನಂತರ ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ.

ಆದರೆ ಎಸ್‌ಎಮ್ಇಗಳಿಗೆ ಹೆಚ್ಚಿನ ಪರಿವೀಕ್ಷಣೆಗಳಿಲ್ಲ. 2012ರಲ್ಲಿ ಪ್ರಾರಂಭಿಸಲಾದ ಈ ಯೋಜನೆಗಳು ಇತ್ತೀಚಿನ
ವರ್ಷಗಳ ವರೆಗೂ ಅಷ್ಟು ಜನಪ್ರಿಯವಾಗಿರಲಿಲ್ಲ. ಕಳೆದ ಹನ್ನೊಂದು ವರ್ಷಗಳಲ್ಲಿ ಈ ವೇದಿಕೆಯಲ್ಲಿ ಕೇವಲ
೮೦೦೦ಕೋಟಿ ರುಪಾಯಿಗಳಷ್ಟೇ ಹಣವನ್ನು ಸಂಗ್ರಹಿಸಿದರೆ ಈ ವರ್ಷವೊಂದರಲ್ಲಿಯೇ ಇದುತನಕ 6000 ಕೋಟಿ ರು. ಗಳಷ್ಟು ಬೃಹತ್ ಮೊತ್ತವನ್ನು ಎಸ್‌ಎಮಇಐಪಿಒ ಮೂಲಕ ಸಂಗ್ರಹಿಸಿರುವುದು ಗಮನಾರ್ಹ. ಒಟ್ಟು ರೂಪಾಯಿ 14000 ಕೋಟಿ ರು. ರಷ್ಟು ಬಂಡವಾಳವನ್ನು ಮಾರುಕಟ್ಟೆಯಿಂದ ಸಂಗ್ರಹಿಸಿದೆ. ಇಲ್ಲಿ ಗಮನಿಸ ಬೇಕಾದ ಸಂಗತಿಯೆಂದರೆ ಮೇಯಿನ್ ಬೋರ್ಡ್ ಐಪಿಒಗಳಲ್ಲಿ ಕನಿಷ್ಟ ಹದಿನೈದು ಸಾವಿರದ ಮೊತ್ತದಲ್ಲಿ ಹೂಡಿಕೆ ಮಾಡಬಹುದು. ಆದರೆ SME IPO ಗಳಲ್ಲಿ ಅರ್ಜಿ ಸಲ್ಲಿಕೆಗೆ ಕನಿಷ್ಟ ಒಂದು ಲಕ್ಷ ರುಪಾಯಿ ಬೇಕು.

ಮಧ್ಯಮ ಹಂತದ ಕೈಗಾರಿಕೆಗಳು ಬೆಳೆಯಬೇಕೆನ್ನುವ ಉದ್ದೇಶದಿಂದ ಈ ಯೋಜನೆಯಲ್ಲಿ ಇತ್ತೀಚೆಗೆ ಸುದ್ದಿ
ಮಾಡುತ್ತಿರುವುದು ಇಲ್ಲಿ ಪ್ರವೇಶಿಸಿದ ಕಂಪನಿಗಳ ಯಶಸ್ಸಿನಿಂದಾಗಿ. ಒಮ್ಮಿಂದೊಮ್ಮೆಲೇ ಹಣಕಾಸು ಸಂಸ್ಥೆಗಳಿಗೆ ಮತ್ತು ಸಾಮಾನ್ಯ ಹೂಡಿಕೆದಾರರಿಗೆ ಹಣಮಾಡುವ ಅಕ್ಷಯಪಾತ್ರೆಗಳಾಗಿ NSE SME ಎಮರ್ಜ್ ಕಾಣಿಸ ತೊಡಗಿದೆ. ಮಾರುಕಟ್ಟೆಯನ್ನು ಪ್ರವೇಶಿಸಿದ ಕಂಪನಿಗಳಿಗೆ ಬೇಕಾದ ಹಣಕ್ಕಿಂತ ಕೆಲವು ನೂರುಪಟ್ಟು ಹೆಚ್ಚಿನ ಬೇಡಿಕೆ ಬರುತ್ತಿದೆ. Key Cee Energy ಎನ್ನುವ ಕಂಪನಿ ಕೇವಲ ಹದಿನೈದು ಕೋಟಿ ರುಪಾಯಿ ಸಂಗ್ರಹಿಸುವ ಉದ್ದೇಶದಿಂದ ಮಾರುಕಟ್ಟೆಗೆ ಬಂದರೆ ಅದಕ್ಕೆ ಬೇಡಿಕೆ ಬಂದಿರುವುದು 960 ಪಟ್ಟಿಗೂ ಅಧಿಕ!

೫೪ ರುಪಾಯಿಯ ಬೆಲೆಯ ಶೇರು ಇಂದು ರೂಪಾಯಿ 304 ನ್ನು ಮೀರಿದೆ. ವಾಸ್ತವ ಎಂದರೆ ಅನೇಕ ಕಂಪನಿಗಳು ಲಾಭದ ವಿವರಗಳನ್ನು ತೋರಿಸುತ್ತಾ ಹೂಡಿಕೆದಾರರನ್ನು ಸೆಳೆಯುತ್ತಾ ಇರುವಾಗ ಅವುಗಳ ಉದ್ದೇಶವನ್ನು ಹದ್ದಿನ ಕಣ್ಣಿನಿಂದ ಸೆಬಿ ಪರೀಕ್ಷಿಸತೊಡಗಿದೆ. ಇದಕ್ಕೆ ಮುಖ್ಯ ಕಾರಣ ಕಳೆದ ಅಗಸ್ಟ್ 22, 2024ರಂದು ಬಂದ Resourceful Automobile ಎನ್ನುವ ಕಂಪನಿ. ಈ ಕಂಪನಿ ಹತ್ತು ರುಪಾಯಿ ಮುಖಬೆಲೆಯ ಶೇರನ್ನು 117 ರುಪಾಯಿಗೆ ಸಾರ್ವಜನಿಕರಿಗೆ ಬಿಡುಗಡೆ ಮಾಡಿತು. ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದಂತೆ ಕೇವಲ ‌೮ ಪೂರ್ಣ ಕಾಲಿಕ ಉದ್ಯೋಗಿಗಳಿದ್ದಾರೆ.

ದೆಹಲಿಯಲ್ಲಿ ಇದರ ಎರಡು ಯಮಹಾ ಬೈಕುಗಳ ಶೋರೂಮುಗಳಿವೆ. (ಈ ಕಂಪನಿಯನ್ನು ಕೇವಲ ಉದಾಹರಣೆ ಗಾಗಿ ಉಲೇಖಿಸಿದ್ದಷ್ಟೇ ಅಲ್ಲದೇ ಸೆಬಿಯ ಜ್ಞಾಪನಾ ಪತ್ರಕ್ಕಾಗಲಿ, ಅಥವಾ ಕಂಪನಿಯ ಉದ್ದೇಶದಲ್ಲಿಯಾಗಲೀ ಯಾವುದೇ ದೋಷಪೂರಿತ ಅಂಶಗಳು ಇದುವರೆಗೂ ಕಂಡುಬಂದಿಲ್ಲ) ಹೂಡಿಕೆದಾರರಲ್ಲಿ ಹೆಚ್ಚಿನವರು ಸಾಧಕ ಬಾಧಕಗಳ ಪಟ್ಟಿಯನ್ನು ಗಮನಿಸದೇ ರಸ್ತೆಯಲ್ಲಿ ಪಲ್ಟಿಯಾದ ಟ್ಯಾಂಕರಿನಿಂದ ಪೆಟ್ರೋಲ್ ತುಂಬಿಕೊಳ್ಳುವ ಧಾವಂತದಲ್ಲಿ ಇರುವಂತೆ ಅವಸರಿಸುತ್ತಾನೆ. ಕೇವಲ 11.99 ಕೋಟಿ ರುಪಾಯಿ ಮೊತ್ತದ ಹೂಡಿಕೆಗೆ ಬೇಡಿಕೆ ಬಂದಿರುವುದು 419 ಪಟ್ಟು ಅಧಿಕ. ಇಂದು ಈ ಶೇರೊಂದಕ್ಕೆ ಕೇವಲ 107 ರುಪಾಯಿಗಳಾಗಿ ಹೂಡಿಕೆದಾರ ತನ್ನ ಕೈಸುಟ್ಟುಕೊಂಡಿದ್ದಾನೆ. ಕೇವಲ ಹತ್ತು ದಿನಗಳಲ್ಲಿ ಸಾಮಾನ್ಯ ಹೂಡಿಕೆದಾರನ ಕಿಸೆಯಿಂದ ಸುಮಾರು ಹತ್ತು ಸಾವಿರ ರುಪಾಯಿ ಮಾಯವಾಗಿದೆ.

ಇನ್ನೊಂದು ಸೀರೆ ಅಂಗಡಿಯೂ ಸಹ ಮೇಯಿನ್ ಬೋರ್ಡ್ ಶೇರುಮಾರು ಕಟ್ಟೆಗೆ ಬಂದು ಹೂಡಿಕೆದಾರರಿಗೆ ಬರೆಯನ್ನು ಕೊಟ್ಟಿವೆ. ಕಳೆದ ಮಾರ್ಚ್ ತಿಂಗಳಲ್ಲಿ ಸೆಬಿಯ ಅಧ್ಯಕ್ಷೆ ಮಾಧುರಿ ಬುಚ್ ಅವರು ಎಸ್‌ಎಮ್ಇ ವಿಭಾಗದಲ್ಲಿ ಕೆಲವೊಂದು ಕೈಚಳಕಗಳನ್ನು (manipulation in‌ the SME segment) ಗಮನಿಸಿದ್ದೇನೆ, ಈ ಲೋಪ ದೋಷಗಳನ್ನು ಸರಿಮಾಡಲು ಕೆಲ ಸಮಯಗಳು ಬೇಕಾಗುತ್ತದೆ ಎಂದಿದ್ದರು. ಎಲ್ಲಿ ಹಣದ ಹರಿವು ಇರುತ್ತದೆಯೋ ಅಲ್ಲಿಗೆ ಅದನ್ನು ಕಮಾಯಿಸುವವರು ಬಂದೇ ಬರುತ್ತಾರೆ. ಹೂಡಿಕೆದಾರರ ಈ ಧಾವಂತಕ್ಕೆ ಕಾರಣಗಳಲ್ಲಿ ಪ್ರಮುಖವಾದ ಅಂಶವೆಂದರೆ ಇಂದು ಭಾರತದಲ್ಲಿ ಒಟ್ಟೂ ಡಿಮ್ಯಾಟ್ ಖಾತೆದಾರ ಸಂಖ್ಯೆ 17.11 ಕೋಟಿ ದಾಟಿದೆ.

ಇದು ರಷ್ಯ, ಮೆಕ್ಸಿಕೋ ಮತ್ತು ಜಪಾನಿನ ಒಟ್ಟೂ ಜನಸಂಖ್ಯೆಗಳಿಗಿಂತ ಹೆಚ್ಚು. ಹೆಚ್ಚಿನ ಕೆಲವರಿಗೆ ರುಮಾರುಕಟ್ಟೆ ಎಂದರೆ ಹಣ ಒಂದು ವರುಷದಲ್ಲಿಯೇ ದುಪ್ಪಟ್ಟು ಆಗಿಬಿಡುತ್ತದೆ ಎನ್ನುವ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿರು ವುದು. ಜುಲೈ ತಿಂಗಳಲ್ಲಿ ಒಟ್ಟೂ SIP ಮೂಲಕ ಪರಸ್ಪರ ನಿಧಿಗೆ ಹರಿದು ಬಂದ ಹಣ 23, 332 ಕೋಟಿ ರುಪಾಯಿ ಗಳು. ಇಷ್ಟೊಂದು ಹಣವನ್ನು ಮ್ಯುಚುವಲ್ ಫಂಡ್‌ಗಳು ಹೂಡಿಕೆ ಮಾಡಿ ಲಾಭವನ್ನು ತೋರಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಇದ್ದಾವೆ. ಹಾಗಾಗಿ ಹೊಸತಾಗಿ ಬರುತ್ತಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಿ ಲಾಭದಲ್ಲಿ ಮಾರುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಬ್ಯಾಂಕಿನ ಬಡ್ಡಿದರ ಹಣದುಬ್ಬರಕ್ಕೆ ಹೋಲಿಸಿದರೆ ಬಹಳಷ್ಟೂ ಕೆಳಮಟ್ಟದಲ್ಲಿರುವ ಕಾರಣ ಜನಸಾಮಾನ್ಯರು
ಶೇರು ಮಾರುಕಟ್ಟೆಯತ್ತ ಲಕ್ಷಹರಿಸಿದ್ದಾರೆ. ಇತೀಚಿನ ವರದಿಯಂತೆ 25 ವರ್ಷಗಳ ಒಳಗಿನ ಯುವಜನಾಂಗ ಡಿಮ್ಯಾಟ್ ಖಾತೆಯನ್ನು ಹೆಚ್ಚು ತೆರೆದಿದ್ದಾರೆ. ಶೇರು ಹೂಡಿಕೆಯ ಕುರಿತು ತಿಳಿವಳಿಕೆಯ ಅರಿವಿಲ್ಲದೇ ಹೆಚ್ಚಿನವರು ನಷ್ಟ ಅನುಭವಿಸುತ್ತಿದ್ದಾರೆ. ನಷ್ಟಗಳಿಸುತ್ತಿರುವ ಕಂಪನಿಗಳೂ ಸಹ ಮಾರುಕಟ್ಟೆಯನ್ನು ಪ್ರವೇಶಿಸಬಹುದು.

ಅಂತಹ ಸಂದರ್ಭಗಳಲ್ಲಿ ಅದರ ಶೇ.75 ಶೇರುಗಳನ್ನು ಸಾಂಸ್ಥಿಕ ಖರೀದಿದಾರರು (QIB) ಹೂಡಿಕೆಯನ್ನು ಮಾಡ
ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸೆಬಿ ಕೇವಲ ಎಚ್ಚರಿಕೆಯ ನೋಟಿಸನ್ನು ಕೊಡಬಹುದೇ ಹೊರತೂ
ಕಾನೂನಾತ್ಮಕವಾಗಿ ಪ್ರತಿಬಂಧಿಸಲು ಸಾಧ್ಯವಿಲ್ಲ. ಈ ಲೇಖನದ ಉದ್ದೇಶ ಹೂಡಿಕೆದಾರರನ್ನು ವಿಮುಖ ರನ್ನಾಗಿಸುವುದಲ್ಲ. ಯಾವುದೇ ಹೂಡಿಕೆಯನ್ನು ಮಾಡುವಾಗ ಮೊದಲು ಚನ್ನಾಗಿ ಆ ಕಂಪನಿಯ ಹಣಕಾಸಿನ
ವಿವರಗಳನ್ನು ಗಮನಿಸಿ. ನಾಲ್ಕುನೂರು ಪುಟಗಳಿಷ್ಟಿರುವ ಎಲ್ಲವನ್ನೂ ನೋಡಲಿಕ್ಕೆ ಆಗಲಾರದು, ಅವುಗಳ ಸಂಕ್ಷಿಪ್ತ ವರದಿಯನ್ನು ಇಂದು ಬೇಕಾದಷ್ಟು ಆರ್ಥಿಕ ಪತ್ರಿಕೆಗಳಲ್ಲಿ ಮತ್ತು ವೆಬ್‌ಗಳಲ್ಲಿ ಲಭ್ಯವಿರುತ್ತದೆ. ಹಾಗಾಗಿ ಯಾವುದಕ್ಕೂ ಒಮ್ಮೆ ಪರೀಕ್ಷಿಸಿ ಹೂಡಿಕೆಯನ್ನು ಮಾಡಿ. ಶೇರು ಮಾರುಕಟ್ತೆ ಎನ್ನುವುದು ಹಾವು ಏಣಿಯ ಆಟ. ನಿಮ್ಮ ಹಣಕ್ಕೆ ನೀವೇ ಜವಾಬ್ದಾರರು.