ಸಮರ್ಥನೆ
ಪ್ರಕಾಶ್ ಶೇಷರಾಘವಾಚಾರ್
‘ನಮ್ಮ ಬ್ಯಾಂಕ್ ಖಾತೆಗೆ ತಾವು ಆಶ್ವಾಸನೆ ಕೊಟ್ಟ ೧೫ ಲಕ್ಷ ರುಪಾಯಿ ಎಂದು ಹಾಕುತ್ತೀರ?’ ಎಂದು ಕಾಂಗ್ರೆಸ್ ನಾಯಕರು ಮತ್ತು ಮೋದಿ ವಿರೋಧಿಗಳು ಕಳೆದ ೯ ವರ್ಷದಿಂದ ಪ್ರಧಾನಿ ಮೋದಿಯವರನ್ನು ಕೇಳುತ್ತಲೇ ಇದ್ದಾರೆ.
ರಾಹುಲ್ ಗಾಂಧಿಯವರಿಂದ ಹಿಡಿದು ಡಿ.ಕೆ. ಶಿವಕುಮಾರ್‌ವರೆಗೆ ಒಂದೇ ವರಾತ- ‘೧೫ ಲಕ್ಷ ಎಲ್ಲಿ?’. ಆಧಾರವಿಲ್ಲದ ಈ ಅಪಪ್ರಚಾರವು ವ್ಯವಸ್ಥಿತ ರೀತಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನಲಡ್ಡಿಯಿಲ್ಲ.
ನರೇಂದ್ರ ಮೋದಿಯವರು ೨೦೧೩ರಲ್ಲಿ ಛತ್ತೀಸ್‌ಗಢದ ಕನ್ ಕೇರ ಎಂಬಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡು ವಾಗ ದೇಶದ ಕೆಲವರು ವಿದೇಶಗಳಲ್ಲಿಟ್ಟಿರುವ ಕಪ್ಪುಹಣದ ಅಗಾಧತೆಯನ್ನು ವಿವರಿಸಲು, ‘ಹೊರದೇಶ ದಲ್ಲಿ ಇಟ್ಟಿರುವ ಪ್ಪುಹಣವನ್ನು ಭಾರತಕ್ಕೆ ತಂದರೆ ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ ೧೫ರಿಂದ ೨೦ ಲಕ್ಷ ರು. ಜಮಾ ಮಾಡ ಬಹುದು’ ಎಂದು ಉಲ್ಲೇಖಿಸಿದ್ದರು. ಈ ಭಾಷಣದ ವಿಡಿಯೋ ಯೂಟ್ಯೂಬ್‌ನಲ್ಲಿ (https://youtu.be/uanOJs48KLg) ಲಭ್ಯವಿದೆ.
ಹಿಟ್ಲರ್ ಆಡಳಿತದಲ್ಲಿ ಅವನ ಪ್ರಚಾರದ ಮಂತ್ರಿ ಗೋಬೆಲ್ಸ್, ‘ಒಂದು ಸುಳ್ಳನ್ನು ಸಾವಿರ ಬಾರಿ ಹೇಳುತ್ತಿದ್ದರೆ ಅದು ಸತ್ಯವಾಗುತ್ತದೆ’ ಎನ್ನುತ್ತಿದ್ದ. ಬಿಜೆಪಿ ವಿರೋಧಿಗಳು ಈ ೧೫ ಲಕ್ಷ ರು. ವಿಚಾರದಲ್ಲೂ ಈಗ ಅದೇ ತಂತ್ರವನ್ನು ಅನುಕರಿಸು ತ್ತಿದ್ದಾರೆ! 2013ರಲ್ಲಿ ಕಪ್ಪುಹಣ ಬಹುಚರ್ಚಿತ ವಿಷಯವಾಗಿತ್ತು. ಕಪ್ಪುಹಣದ ಬಗ್ಗೆ ತನಿಖೆ ಮಾಡಲು ನ್ಯಾಯಾಲಯದ ಸುಪರ್ದಿನಲ್ಲಿ ಎಸ್‌ಐಟಿ ರಚನೆ ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿತ್ತು.
ಆದರೆ ಈ ತೀರ್ಪಿನ ವಿರುದ್ಧ ಅಂದಿನ ಯುಪಿಎ ಸರಕಾರ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿತ್ತು. ಕಪ್ಪುಹಣದ ಬಗ್ಗೆ ಬದ್ಧತೆ
ಇದ್ದಿದ್ದರೆ ತೀರ್ಪು ಒಪ್ಪಿಕೊಂಡು ತಡಮಾಡದೆ ಎಸ್‌ಐಟಿ ರಚಿಸಬೇಕಾಗಿತ್ತು, ಅಲ್ಲವೇ? ೨೦೧೪ರಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರವು ಅಧಿಕಾರಕ್ಕೆ ಬರುತ್ತಿದ್ದಂತೆ ಎಸ್‌ಐಟಿ ಸ್ಥಾಪನೆಗೆ ಅನುಮೋದಿಸಿತು.
೨೦೧೬ರಲ್ಲಿ, ಕೋರ್ಟ್ ರಚಿತ ಎಸ್‌ಐಟಿ ಉಪಾಧ್ಯಕ್ಷ ಅರ್ಜಿತ್ ಪಸಯಾತ್‌ರವರು 70000 ಕೋಟಿ ರು. ಕಪ್ಪುಹಣ ಹೊರ ತೆಗೆದಿರುವ ಮಾಹಿತಿ ಹಂಚಿಕೊಂಡರು. ಕಪ್ಪುಹಣದ ಹಾವಳಿ ತಡೆಗೆಂದು ಕಾನೂನಾತ್ಮಕವಾದ ಅನೇಕ ಬದಲಾವಣೆ ಗಳ ಜಾರಿಗೆ ಎಸ್‌ಐಟಿ ಮಾಡಿದ ಶಿಫಾರಸುಗಳಿಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿತು. ಅದಲ್ಲದೆ, ಎಸ್‌ಐಟಿ ಮೂಲಕ ತನಿಖೆ ಮಾಡಿಸಲು, ವಿದೇಶದಲ್ಲಿ ಅಕ್ರಮವಾಗಿ ಹಣವಿಟ್ಟಿರುವ ಅನುಮಾನವಿರುವ 627 ಜನರ ಹೆಸರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತು.
ಕಪ್ಪುಹಣದ ವಿರುದ್ಧ ಕೇಂದ್ರ ಸರಕಾರ ಕೈಗೊಂಡ ಎಂಟು ರೀತಿಯ ಹೋರಾಟ ಹೀಗಿದೆ: ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಎಸ್ ಐಟಿ ರಚನೆಗೆ ಒಪ್ಪಿಗೆ. ಜನಧನ್ ಯೋಜನೆಯ ಮೂಲಕ ದೇಶದ ಕುಗ್ರಾಮಗಳಲ್ಲಿರುವವರೂ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗಿಸಿದ್ದು. ಈ ಖಾತೆಗಳ ಒಟ್ಟು ಠೇವಣಿಯು ೧.೫ ಲಕ್ಷ ಕೋಟಿ ರು. ದಾಟಿದೆ. ತೆರಿಗೆ ಧಾಮ (tax haven) ಎಂದು ಖ್ಯಾತಿ ಪಡೆದಿರುವ ಮಾರಿಷಸ್, ಸ್ವಿಜರ್ಲೆಂಡ್ ಮುಂತಾದ ದೇಶಗಳೊಂದಿಗೆ ಸಂಧಾನ
ಕೈಗೊಂಡು ಭಾರತೀಯರ ಹೂಡಿಕೆಗಳ ವಿವರವನ್ನು ಹಂಚಿ ಕೊಳ್ಳುವಂತೆ ಒಪ್ಪಿಸಲಾಯಿತು.
ಇದರಿಂದಾಗಿ ಕಳ್ಳಮಾರ್ಗದಲ್ಲಿ ಬಂಡವಾಳ ಹೂಡಿಕೆಗೆ ಕಡಿವಾಣ ಬಿದ್ದಿದೆ. ಕಪ್ಪುಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು) ಮತ್ತು ವಿದೇಶಿ ಕಪ್ಪುಹಣಕ್ಕಾಗಿ 2015ರ ತೆರಿಗೆ ಕಾಯಿದೆ ಜಾರಿ. ತೆರಿಗೆ ವಂಚಿಸಿ ಹೊರದೇಶಗಳಲ್ಲಿ ಹೂಡಿದ್ದ ಹಣವನ್ನು ವಶಪಡಿಸಿಕೊಳ್ಳಲು ಈ ಕಠಿಣ ಕಾಯಿದೆಯು ಸಹಾಯಕವಾಗಿದೆ. ೨೦೧೬ರಲ್ಲಿ, ಆದಾಯ ಬಹಿರಂಗ ಪಡಿಸುವ ಯೋಜನೆಯನ್ನು ಜಾರಿಗೆ ತರಲಾಯಿತು. ಆಸ್ತಿ ಘೋಷಿಸಿ ಶೇ. ೪೫ರಷ್ಟು ತೆರಿಗೆ ಮತ್ತು ದಂಡವನ್ನು ಪಾವತಿಸಲು ಅವಕಾಶ ನೀಡಲಾಯಿತು.ಈ ಕ್ರಮದಿಂದ 65,250 ಕೋಟಿ ರು. ಮೊತ್ತದ ಹಣವು ಬಹಿರಂಗವಾಯಿತು.
೨೦,೦೦೦ ರು.ಗಿಂತ ಹೆಚ್ಚಿನ ಹಣದ ನಗದು ವಹಿವಾಟು ನಡೆಸಿದರೆ ದಂಡ ವಿಽಸಲಾಗುತ್ತಿದೆ. ರಿಯಲ್ ಎಸ್ಟೇಟ್ ವ್ಯವ
ಹಾರದಲ್ಲಿ ಕಪ್ಪುಹಣದ ಪ್ರಭಾವ ತಗ್ಗಿಸಲು ಇದು ಸಹಕಾರಿಯಾಗಿದೆ. ೨ ಲಕ್ಷ ರು.ಗಿಂತ ಹೆಚ್ಚಿನ ನಗದು ಮಾರಾಟದ ಮೇಲೆ ಮೂಲದಲ್ಲಿಯೇ ತೆರಿಗೆ ಸಂಗ್ರಹಿಸುವ ಪದ್ಧತಿ ಜಾರಿಯಾಗಿದೆ. ಬೇನಾಮಿ ವಹಿವಾಟು (ನಿಷೇಧ) ತಿದ್ದುಪಡಿ ಕಾಯಿದೆಯು
೨೦೧೬ರಿಂದ ಜಾರಿಗೆ ಬಂದಿದ್ದು, ಬೇನಾಮಿ ವಹಿವಾಟುಗಳನ್ನು ತಡೆಯುವಲ್ಲಿ ಇದು ಅಽಕಾರಿಗಳಿಗೆ ಹೆಚ್ಚಿನ ಶಕ್ತಿ ನೀಡಿದೆ.
ಕಪ್ಪುಹಣದ ವಿರುದ್ಧದ ಹೋರಾಟವು ಕಾಯಿದೆ ರಚನೆಗಷ್ಟೇ ನಿಲ್ಲಲಿಲ್ಲ; ಅದರ ಮುಂದುವರಿದ ಭಾಗವಾಗಿ, ಕಪ್ಪುಹಣವು ಉತ್ಪತ್ತಿಯಾಗುವ ಮೂಲಕ್ಕೆ ಕೊಡಲಿಪೆಟ್ಟು ನೀಡುವ ಹಲವಾರು ಕ್ರಮಗಳು ಜಾರಿಗೆ ಬಂದವು.
ಸ್ವಿಜರ್ಲೆಂಡ್, ಮಾರಿಷಸ್, ಲೀಚನ್ ಸ್ಟೈನ್ ಮತ್ತು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್‌ನಂಥ ತೆರಿಗೆ ಧಾಮಗಳಲ್ಲಿನ ಹೂಡಿಕೆಗಳ ಮೇಲೆ ಗದಾಪ್ರಹಾರ ಆರಂಭವಾಯಿತು. ೨೦೧೬ರ ನವೆಂಬರ್‌ನಲ್ಲಿ ದೇಶದಲ್ಲಿ ೫೦೦ ಮತ್ತು ೧೦೦೦ ರು. ಮುಖಬೆಲೆಯ ಹಳೆಯ ನೋಟುಗಳು ಅಮಾನ್ಯಗೊಂಡವು. ಇದರಿಂದಾಗಿ ಮನೆಯಲ್ಲಿಯೇ ಶೇಖರಣೆಯಾಗಿದ್ದ ಲಕ್ಷಾಂತರ ಕೋಟಿ ರು. ಹಣವು ಮೊದಲ ಬಾರಿಗೆ ಬ್ಯಾಂಕ್ ಮುಖ ನೋಡುವಂತಾಯಿತು. ಬ್ಯಾಂಕ್ ಖಾತೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣವು ಹರಿದು, ಆದಾಯ ತೆರಿಗೆ ಪಾವತಿಸುವವರ ಸಂಖ್ಯೆಯು ೪ ಕೋಟಿಯಿಂದ ೬ ಕೋಟಿಗೆ ಹೆಚ್ಚಿತು.
ಜಿಎಸ್‌ಟಿ ಜಾರಿಗೆ ತಂದಿದ್ದು ಎರಡನೇ ದೊಡ್ಡ ಅಸ್ತ್ರವಾಗಿದೆ. ತೆರಿಗೆ ನೀಡದೆ ಯಾವುದೇ ಪದಾರ್ಥಗಳನ್ನು ಖರೀದಿಸಲು
ಸಾಧ್ಯವಿಲ್ಲದ ಈ ವ್ಯವಸ್ಥೆಯನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಜಾರಿಗೆ ತರಲಾಗಿದೆ. ಈ ಮೊದಲು ತೆರಿಗೆ ಪಾವತಿ ಸದೆ ಸುಲಭವಾಗಿ ಖರೀದಿಸುತ್ತಿದ್ದ ಪದಾರ್ಥಗಳನ್ನು ಈಗ ಬಿಲ್ಲು ಪಡೆದೇ ಖರೀದಿಸಬೇಕಾಗಿರುವುದರಿಂದ, ಅಧಿಕೃತ ವಹಿವಾಟು ಹೆಚ್ಚಾಗಿ ಕಪ್ಪುಹಣ ಉತ್ಪತ್ತಿಗೆ ಬ್ರೇಕ್ ಹಾಕಲು ಸಹಕಾರಿಯಾಗಿದೆ.
ಇದರರ್ಥ, ಬಿಲ್ಲು ಪಡೆಯದ ವ್ಯವಹಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದಲ್ಲ; ಆದರೆ ಅನಧಿಕೃತವಾಗಿ ನಡೆಯುತ್ತಿದ್ದ
ವಹಿವಾಟುಗಳು ಶೇ. ೭೫ರಷ್ಟು ಕಡಿಮೆಯಾಗಿವೆ ಎಂದರ್ಥ. ಹೀಗಾಗಿಯೇ ಮಾಸಿಕ ಜಿಎಸ್‌ಟಿ ಸಂಗ್ರಹವು ೧.೫೦ ಲಕ್ಷ ಕೋಟಿ ರುಪಾಯಿಗಳನ್ನು ದಾಟಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಹೆಚ್ಚು ಬಳಕೆಗೆ ತಂದಿರುವುದು ಮೂರನೆಯ ಅಸ. ನೋಟುಗಳ ಅಮಾನ್ಯೀಕರಣದ ನಂತರ ಜನರು ಆನ್‌ಲೈನ್ ಪಾವತಿ ವ್ಯವಸ್ಥೆಯತ್ತ ಹೆಚ್ಚು ಗಮನ ಹರಿಸಿದರು. ಅದೇ ವೇಳೆಗೆ ಅಪ್ಪಳಿಸಿದ ಕೋವಿಡ್ ಪಿಡುಗು ಡಿಜಿಟಲ್ ಪಾವತಿಯೆಡೆಗೆ ಜನರನ್ನು ಉತ್ತೇಜಿಸಿತು. ಹೀಗಾಗಿ ಈ ಪದ್ಧತಿಯು ಬಿರುಗಾಳಿಯ ವೇಗದಲ್ಲಿ ಜನಪ್ರಿಯವಾಯಿತು.
ಇಂದು ಶೇ. ೮೭ರಷ್ಟು ವ್ಯವಹಾರಗಳು ಆನ್‌ಲೈನ್ ಮುಖಾಂತರ ನಡೆಯುತ್ತಿರುವುದು ಇದರ ಅಗಾಧತೆಗೆ ಸಾಕ್ಷಿ.
೨೦೨೨-೨೩ರ ವರ್ಷದಲ್ಲಿ ೯,೧೯೨ ಲಕ್ಷ ಕೋಟಿಯಷ್ಟು ಡಿಜಿಟಲ್ ವಹಿವಾಟು ನಡೆದಿದ್ದು, ಇದರ ಒಟ್ಟು ಮೊತ್ತವು ೨,೦೫೦ ಲಕ್ಷ ಕೋಟಿಯಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆಗೂ ಮುನ್ನ ಬಹುತೇಕ ವಹಿವಾಟು ನಗದು ರೂಪದಲ್ಲಿ ನಡೆಯುತ್ತಿತ್ತು. ಬಿಲ್ಲು ಪಡೆದು ಖರೀದಿಸುವುದು ಅನೇಕರಿಗೆ ಮರೆತೇಹೋಗಿತ್ತು. ಆದರೀಗ ವ್ಯವಹಾರಗಳು ಡಿಜಿಟಲ್ ಸ್ವರೂಪ ಪಡೆದು ಪ್ರತಿಯೊಂದು ವಹಿವಾಟಿಗೂ ಜಿಎಸ್‌ಟಿ ಸಂಗ್ರಹವಾಗಿ ಸರಕಾರದ ಸಂಪನ್ಮೂಲವು ಹೆಚ್ಚಾಗಿದೆ ಮತ್ತು ದೇಶದ ಆರ್ಥಿಕ ಕ್ಷೇತ್ರವು ಸ್ವಚ್ಛವಾಗುತ್ತಿದೆ.
೨೦೧೪ರ ನಂತರ ಕಪ್ಪುಹಣದ ಮೇಲೆ ಸಾರಿರುವ ಯುದ್ಧದಲ್ಲಿ ಸರಕಾರವು ಇಲ್ಲಿಯ ತನಕ ೧.೩೦ ಲಕ್ಷ ಕೋಟಿ ರು. ಕಪ್ಪುಹಣವನ್ನು ಪತ್ತೆಮಾಡಿದೆ ಮತ್ತು ೫೦ ಸಾವಿರ ಕೋಟಿ ರು. ಮೌಲ್ಯದ ಆಸ್ತಿ ಯನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಕಪ್ಪುಹಣದ ಚಲಾವಣೆಗೆ ಮತ್ತು ವಿವಿಧ ಕಂಪನಿಗಳಲ್ಲಿ ಕಾಗದಕ್ಕೆ ಸೀಮಿತವಾಗಿ ಬಂಡವಾಳ ಹೂಡಿಕೆ ತೋರಿಸಿ ಕಪ್ಪುಹಣ ಅಡಗಿಸಿಡಲು ದುರ್ಬಳಕೆಯಾಗುತ್ತಿದ್ದ ೩,೩೮,೦೦೦ ಶೆಲ್ ಕಂಪನಿಗಳಿಗೆ ಬೀಗಹಾಕಲಾಗಿದೆ.
ವಿದೇಶಿ ಬ್ಯಾಂಕುಗಳಲ್ಲಿ ಹಣ ಇಡುವುದು ಕಾನೂನುಬಾಹಿರ ಕೃತ್ಯವಲ್ಲ; ಅದನ್ನು ಸರಕಾರದ ಸಂಬಂಧಿತ ಇಲಾಖೆಗೆ ತಿಳಿಸದಿದ್ದರೆ ಮಾತ್ರ ಅದು ಅಕ್ರಮ ಹೂಡಿಕೆಯಾಗಿತ್ತದೆ. ಭಾರತೀಯರು ವಿದೇಶದಲ್ಲಿ ಹೂಡಿರುವ ಹಣದ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ವರದಿ ಬರುತ್ತಿದ್ದಂತೆ, ‘ಕಪ್ಪುಹಣದ ವಿರುದ್ಧದ ಸರಕಾರದ ಹೋರಾಟ ವಿಫಲ’ ಎಂದು ವಿರೋಽಗಳು ಕೂಗಲು ಆರಂಭಿಸುತ್ತಾರೆ.
ವಾಸ್ತವದಲ್ಲಿ ಹೂಡಿಕೆದಾರರಿಗೆ ವಿದೇಶದ ಬ್ಯಾಂಕುಗಳಲ್ಲಿ ನ್ಯಾಯಬದ್ಧವಾಗಿ ಹಣವನ್ನಿರಿಸುವ ಅವಕಾಶವಿದ್ದು, ಅದರನ್ವಯ ಇಟ್ಟ ಹಣದ ಮಾಹಿತಿಯನ್ನು ಅವರು ಸರಕಾರಕ್ಕೆ ಸಲ್ಲಿಸಿರುತ್ತಾರೆ. ಅಂಥ ಹಣವನ್ನು ಅಕ್ರಮ ಹೂಡಿಕೆ ಎನ್ನಲು ಸಾಧ್ಯವಿಲ್ಲ. ಇಂಥ ಹೂಡಿಕೆಯ ಮೇಲೆ ಸರಕಾರಕ್ಕೆ ನೀಡಬೇಕಾದ ತೆರಿಗೆಯನ್ನು ಅವರು ಪಾವತಿಸಿರುತ್ತಾರೆ. ಹೀಗಾಗಿ ಸಾರಾಸಗಟಾಗಿ ಎಲ್ಲವನ್ನೂ ಕಪ್ಪುಹಣದ ಪಟ್ಟಿಗೆ ಸೇರಿಸಿ ‘ಅಕ್ರಮ ಹೂಡಿಕೆ’ ಎಂದು ವರ್ಗೀಕರಿಸಲಾಗುವುದಿಲ್ಲ.
ಇಂದಿರಾ ಗಾಂಧಿಯವರು ೧೯೭೧ರಲ್ಲಿ ‘ಗರೀಬಿ ಹಠಾವೊ’ ಘೋಷಣೆಯ ಮೇಲೆ ಚುನಾವಣೆ ಗೆದ್ದರು. ಹೀಗೆ ಘೋಷಿಸಿದ ತರುವಾಯ ಕಾಂಗ್ರೆಸ್ ೩ ದಶಕಗಳ ಕಾಲ ದೇಶವನ್ನಾಳಿದರೂ ಬಡತನ ನಿರ್ಮೂಲನೆ ಮಾಡಲು ಆಗಲಿಲ್ಲ. ಇಂಥ ಪಕ್ಷದ ವರು ಇಂದು ಸುಳ್ಳನ್ನು ಮುಂದಿಟ್ಟುಕೊಂಡು ಮೋದಿಯವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಕಳೆದ ೯ ವರ್ಷದಿಂದ ಯತ್ನಿಸುತ್ತಲೇ ಇದ್ದಾರೆ.
ವಿಷಯರಹಿತವಾಗಿರುವ ವಿಪಕ್ಷಗಳು ಮೋದಿಯವರನ್ನು ಇಕ್ಕಟ್ಟಿಗೆ ಸಿಲುಕಿಸಲು ಮತ್ತು ಜನರನ್ನು ದಾರಿ ತಪ್ಪಿಸಲು, ೨೦೧೪ರ ಚುನಾವಣೆಗೂ ಮುನ್ನ ಮೋದಿಯವರು ಮಾಡಿದ್ದ ಭಾಷಣವನ್ನು ತಿರುಚಿ, ‘ನಮ್ಮ ಖಾತೆಗೆ ೧೫ ಲಕ್ಷ ಎಲ್ಲಿ?’ ಎಂದು ಪ್ರಶ್ನಿಸುತ್ತಿವೆ. ತನ್ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡು ವಿವಾದವನ್ನು ಜೀವಂತವಿಡಲು ಯತ್ನಿಸುತ್ತಿವೆ. ಆದರೆ ಈ ತಂತ್ರಗಾರಿಕೆಯು ಗೋಬೆಲ್ಸ್‌ನನ್ನೂ ನಾಚಿಸುವಂತಾಗಿರುವುದು ಶೋಚನೀಯ ಸಂಗತಿ.