ವಿಶ್ಲೇಷಣೆ
ಪ್ರಕಾರ್ಶ ಶೇಷರಾಘವಾಚಾರ್
sprakashbjp@gmail.com
ನರೇಂದ್ರ ಮೋದಿಯವರನ್ನು ವಿರೋಧಿಸುವುದಕ್ಕಾಗಿಯೇ ವಿರೋಧ ಮಾಡುವ ಪ್ರವೃತ್ತಿ ದೇಶದಲ್ಲಿ ತಡೆಯಿಲ್ಲದೆ ಮುಂದು ವರಿದಿದೆ. ಇದಕ್ಕೆ ಹೊಸ ಸೇರ್ಪಡೆ ನೂತನ ಸಂಸತ್ ಭವನದ ಮೇಲಿನ ರಾಷ್ಟ್ರೀಯ ಲಾಂಛನ ವಿವಾದ. ‘ನಾಲ್ಕು ಸಿಂಹಗಳು
ಕ್ರೌರ್ಯವನ್ನು ಪ್ರತಿಬಿಂಬಿಸುತ್ತಿವೆ.
ಉದ್ದೇಶಪೂರ್ವಕ ಅದರ ಕೋರೆಹಲ್ಲು ಕಾಣುವಂತೆ ಕೆತ್ತಲಾಗಿದೆ. ಈ ಮೊದಲು ಇರುವ ರಾಷ್ಟ್ರೀಯ ಲಾಂಛನದ ಸಿಂಹಗಳು ಸೌಮ್ಯ ಹಿತಭಾವ ಬಿಂಬಿಸುವ ಶಾಂತಿ ಸಂಕೇತ ಗಳಾಗಿದ್ದವು. ಆದರೆ ಕೇಡುಂಟು ಮಾಡುವ ಆಕ್ರಮಣ ಶೈಲಿಯ ಸಿಂಹಗಳನ್ನು ಈಗ ಸ್ಥಾಪಿಸಲಾಗಿದೆ ಇದು ಹೊಸ ಭಾರತದ ಸಂಕೇತವಾ?’ ಎಂದು ಬೊಬ್ಬೆ ಹೊಡೆಯಲು ಆರಂಭಿಸಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದ ತರುವಾಯ ಡಿಸೆಂಬರ್ 30, 1947ರಲ್ಲಿ ಸಾರನಾಥದಲ್ಲಿನ ಚಕ್ರವರ್ತಿ ಅಶೋಕ ಸಾಮ್ರಾಜ್ಯದ ಸ್ತೂಪವನ್ನು ದೇಶದ ಲಾಂಛನವಾಗಿ ಸ್ವೀಕರಿಸಲಾ ಯಿತು. ಬುಡದಲ್ಲಿ ‘ಸತ್ಯಮೇವ ಜಯತೆ’ ಘೋಷವಾಕ್ಯ ನಮೂದಿಸಿರುವ ಆಯತಾಕಾರದ ಚೌಕಟ್ಟಿನ ಮೇಲೆ ಸಿಂಹಗಳು ನಿಂತಿವೆ. ಈ ೪ ಸಿಂಹಗಳು ಶಕ್ತಿ, ಧೈರ್ಯ, ವಿಶ್ವಾಸ ಮತ್ತು ಹೆಮ್ಮೆಯ ಪ್ರತೀಕ. ತಳದಲ್ಲಿ ಕುದುರೆ, ಎತ್ತು, ಆನೆ ಹಾಗೂ ಇವುಗಳ ಮಧ್ಯದಲ್ಲಿ ಧರ್ಮಚಕ್ರವಿದೆ.
1950ರಲ್ಲಿ ಈ ಲಾಂಛನವನ್ನು ಅಽಕೃತವಾಗಿ ಅಳವಡಿಸಿಕೊಳ್ಳಲಾಯಿತು. ಸರಕಾಋದ ಎಲ್ಲ ಹಂತಗಳಲ್ಲಿ, ಭಾರತದ ಕರೆನ್ಸಿ ನೋಟು ಮತ್ತು ನಾಣ್ಯಗಳ ಮೇಲೆ ಹಾಗೂ ಪಾಸ್ ಪೋರ್ಟ್ ಈ ಲಾಂಛನ ಬಳಕೆಯಾ ಗುತ್ತದೆ. 2005ರಲ್ಲಿ ಭಾರತದ ಲಾಂಛನ (ಅನಧಿಕೃತ ಬಳಕೆ ನಿರ್ಬಂಧ) ಕಾಯಿದೆಯಡಿಯಲ್ಲಿ ವೈಯಕ್ತಿಕವಾಗಿ ಅಥವಾ ಖಾಸಗಿ ಸಂಸ್ಥೆಗಳು ತಮ್ಮ ಯಾವುದೇ ಅಧಿಕೃತ ಪತ್ರ ವ್ಯವಹಾರಗಳಿಗೆ ಬಳಸದಿರುವಂತೆ ನಿರ್ಬಂಧ ಹೇರಲಾಗಿದೆ.
ಸಾರನಾಥದ ಮೂಲ ಲಾಂಛನವಾದ ನಿಂತಿರುವ ಸಿಂಹಗಳು ಬಾಯಿ ತೆರೆದಿದ್ದವು ಹಲ್ಲು ಕೂಡ ಕಾಣುತ್ತಿತ್ತು. ಆದರೆ 1950ರಲ್ಲಿ ಇದನ್ನು ಲಾಂಛನವಾಗಿ ಅಳವಡಿಸಿಕೊಂಡಾಗ ಸಿಂಹಗಳ ಬಾಯಿ ಮುಚ್ಚಲಾಗಿತ್ತು. ವಾಸ್ತವವಾಗಿ ಅಂದೇ ಸಾರನಾಥದ ಸಿಂಹ ಗಳ ಸ್ವರೂಪ ಬದಲಾಗಿದ್ದು. ಆದರೂ ಅಂದಿನ ಕಾಂಗ್ರೆಸ್ ನಾಯಕತ್ವದ ವಿರುದ್ಧ ಯಾರೂ ಧ್ವನಿ ತೆಗೆಯುತ್ತಿರಲಿಲ್ಲ. ಹೀಗಾಗಿ ಮೂಲ ಲಾಂಛನಕ್ಕೆ ಮಾಡಿದ್ದ ಬದಲಾವಣೆ ವಿವಾದವಾಗಲಿಲ್ಲ.
ಇನ್ನು 2019 ರಲ್ಲಿ ಸೆಂಟ್ರಲ್ ವಿಸ್ತಾ ಯೋಜನೆಯು ಆರಂಭವಾದಾಗಲೇ ಮೋದಿ ದ್ವೇಷಿಗಳು ಮತ್ತು ಕಾಂಗ್ರಸಿಗರು ಯೋಜನೆ ಯನ್ನು ಪ್ರಬಲವಾಗಿ ವಿರೋಧಿಸಿದವು. 20 ಸಾವಿರ ಕೋಟಿ ವೆಚ್ಚದಲ್ಲಿ ಸಂಸತ್ ಭವನ, ಪ್ರಧಾನಿ ನಿವಾಸ, ಸೆಂಟ್ರಲ್ ಸೆಕ್ರಟೇರಿ ಯೆಟ್ ಮತ್ತು ರಾಜಪಥದ ನವೀಕರಣ ಹೀಗೆ ಕೇಂದ್ರ ಸರಕಾರದ ಹೃದಯ ಭಾಗಕ್ಕೆ ಹೊಸ ತನದ ಆಧುನಿಕ ಸ್ಪರ್ಶ ಕೊಡುವ ಕೆಲಸವು ಮೋದಿ ವಿರೋಧಿಗಳ ಕಣ್ಣನ್ನು ಕೆಂಪಾಗಿಸಿದವು.
ಅದನ್ನು ಶತಾಯು ಗತಾಯ ತಡೆಯಲು ಅನೇಕ ರೀತಿ ಅಡೆ ತಡೆಗಳನ್ನು ಒಡ್ಡಲಾಯಿತು. ಹೆಜ್ಜೆ ಹೆಜ್ಜೆಗೂ ಕೋರ್ಟ್ ಮೊರೆ ಹೋಗಲಾಯಿತು. ಎಲ್ಲವನ್ನೂ ದಾಟಿ ಕೊನೆಗೂ ಕಾಮಗಾರಿ ಅಬಾಧಿತವಾಗಿ ನಡೆಯುತ್ತಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದ ಅಧಿವೇಶನವನ್ನು ನೂತನ ಪಾರ್ಲಿಮೆಂಟ್ ಕಟ್ಟಡದಲ್ಲೇ ನಡೆಸುವ ಸಲುವಾಗಿ ಹಗಲಿರುಳೆನ್ನದೇ ಭರದಿಂದ ಕಾಮಗಾರಿ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲೇ ನೂತನ ಸಂಸತ್ ಭವನದ 33 ಮೀಟರ್ ಎತ್ತರದ ಮೇಲೆ 9.5 ಟನ್ ಭಾರವಿರುವ 6.5 ಮೀಟರ್ ಎತ್ತರದ ದೇಶದ ಲಾಂಛನವನ್ನು ಪ್ರಧಾನಿಯವರು ಅನಾವರಣ ಮಾಡಿದ್ದು. ಸಾರನಾಥದ ವಸ್ತು ಸಂಗ್ರಹಾಲಯದಲ್ಲಿರುವ ಮೂಲ
ಲಾಂಛನಕ್ಕೂ ಇದಕ್ಕೂ ಇರುವ ವ್ಯತ್ಯಾಸವೆಂದರೆ ಮೂಲ ಲಾಂಛನದ ಎತ್ತರವು 1.6ಮೀಟರ್ ಮಾತ್ರ. ಸಂಸತ್ ಭವನದ ಮೇಲೆ ಇರುವ ಪ್ರತಿಮೆಯನ್ನು 33 ಮೀಟರ್ ಎತ್ತರದಲ್ಲಿ ಸ್ಥಾಪಿಸಿರುವುದರಿಂದ ಆ ದೂರದಿಂದ ಲಾಂಛನ ಕಾಣಲು ಅದಕ್ಕೆ ತಕ್ಕದಾದ ಗಾತ್ರ ಹಾಗೂ ಇತರ ಭಾಗಗಳನ್ನು ಕೆತ್ತಲಾಗಿದೆ.
ಲಾಂಛನವನ್ನು ಕೆತ್ತಿದ ಶಿಲ್ಪಿ ಸುನೀಲ್ ದಿಯೋರಾ ಮತ್ತು ಲಕ್ಷ್ಮಣ್ ವ್ಯಾಸ್‌ರವರ ಪ್ರಕಾರ ಲಾಂಛನದ ಪ್ರಮಾಣ ಮತ್ತು ಗಾತ್ರಕ್ಕೆ ತಕ್ಕ ಹಾಗೆ ಪ್ರತಿಯೊಂದು ಅಂಶವನ್ನೂ ಕೆತ್ತಲಾಗಿದೆ. ನೂರಕ್ಕೂ ಹೆಚ್ಚು ಅಡಿ ಎತ್ತರದ ಮೇಲೆ ಅಳವಡಿಸಿದ ತರುವಾಯ ಇದರಲ್ಲಿ ಯಾವ ವ್ಯತ್ಯಾಸವು ಕಂಡು ಬರುವುದಿಲ್ಲ. ಎನ್ನುತ್ತಾರೆ.
ಲಾಂಛನದ ಶಿಲ್ಪಿ ಸುನೀಲ್ ಡಿಯೋರೆ ಹೇಳುವ ಪ್ರಕಾರ, ವಾರಣಾಸಿಯ ಸಾರನಾಥದಲ್ಲಿರುವ ಅಶೋಕ ಸ್ತಂಭದ ಮೇಲಿನ
ಸಿಂಹಗಳನ್ನು ಕೆಳಭಾಗದಿಂದ ನೋಡಿದರೆ ಸದ್ಯ ನೂತನ ಸಂಸತ್ ಭವನದ ಮೇಲೆ ನಿರ್ಮಾಣವಾಗಿರುವ ಲಾಂಛನದಲ್ಲಿನ ಸಿಂಹಗಳನ್ನೇ ಹೋಲುತ್ತದೆ. ಸಾರಾನಾಥದ ಸಿಂಹಗಳ ಗಾತ್ರಕ್ಕೂ ಸಂಸತ್ತಿನ ನೂತನ ಲಾಂಛನದ ಗಾತ್ರಕ್ಕೂ ಭಾರಿ ವ್ಯತ್ಯಾಸವಿದೆ. ಮುಖಭಾವದಲ್ಲಿ ಸಾಮ್ಯ ಕಾಪಾಡಿಕೊಳ್ಳಲಾಗಿದೆ.
ವಿವಿಧ ಕೋನಗಳಿಂದ ನೋಡಿದಾಗ ಕೊಂಚ ಭಿನ್ನವಾಗಿ ಗೋಚರಿಸುತ್ತದೆ. ಆದರೆ ತದ್ರೂಪು ಬರುವಂತೆ ಎಚ್ಚರವಹಿಸಿದ್ದೇವೆ ಎಂದು ವಿವರಿಸುತ್ತಾರೆ. ಸೆಂಟ್ರಲ್ ವಿಸ್ತಾ ಯೋಜನೆಗೆ ಬಲವಾಗಿ ವಿರೋಧಿಸಿ ಅನೇಕ ವಿಘ್ನಗಳನ್ನು ಒಡ್ಡಿದವರು ಈಗ ಲಾಂಛನದ ಅನಾವರಣದ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ಕೊಟ್ಟಿಲ್ಲ ಎಂದು ಆಕ್ಷೇಪ ಮಾಡುತ್ತಿದ್ದಾರೆ. ಪಾರ್ಲಿಮೆಂಟಿನ ಪಾಲಕರು ಎರಡೂ ಸದನದ ಅಧ್ಯಕ್ಷರಿಂದ ಲಾಂಛನ ಉದ್ಘಾಟನೆಯಾಗಬೇಕಿತ್ತು ಆದರೆ ಶಿಷ್ಟಾಚಾರ ಉಲ್ಲಂಘಿಸಿ ಪ್ರಧಾನಿ ಯವರು ಉದ್ಘಾಟನೆ ಮಾಡುವ ಮೂಲಕ ಸಂವಿಧಾನಕ್ಕೆ ವಿರುದ್ಧ ನಡೆದುಕೊಂಡಿದ್ದಾರೆ ಎಂಬುದು ಇವರ ಆರೋಪ.
ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಯವರು ಟ್ವೀಟ್ ಮೂಲಕ ವಿವಾದಕ್ಕೆ ನಾಂದಿ ಹಾಡಿದವರು.
ಸಲಿಗೆ ಇದಕ್ಕೆಲ್ಲ ಕಾರಣ ಕಾಳಿಮಾತೆಯ ವಿವಾದ ಮುಚ್ಚಿ ಹಾಕುವುದು. ತೃಣಮೂಲ ಕಾಂಗ್ರೆಸ್ ಸಂಸದೆ ಮೌವಾ ಮೋಯಿತ್ರಾ
ಕಾಳಿ ಮಾತೆ ಮದ್ಯಪಾನ ಪ್ರಿಯೆ ಎಂದು ಹೇಳಿ ದೊಡ್ಡ ವಿವಾದದಲ್ಲಿ ಸಿಲುಕಿದ್ದರು. ಲಾಂಛನ ವಿವಾದದ ಮೂಲಕ ವಿಷಯಾಂತರ ಮಾಡಲು ಮುಂದಾದವರು ಕೇಂದ್ರದ ಸಂಸ್ಕೃತಿ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಲಿ ಟಿಎಂಸಿ ರಾಜ್ಯಸಭಾ ಸದಸ್ಯ ಜವಾಹರ್ ಸಿಕಾರರ್ ಮೂಲಕ ವಿವಾದಕ್ಕೆ ಇನ್ನಷ್ಟು ತುಪ್ಪ ಸುರಿಸಿದ್ದಾರೆ.
ಇನ್ನು ಸಿಪಿಎಂ, ಲಾಂಛನ ಅನಾವರಣ ಮಾಡುವ ವೇಳೆ ಕೈಗೊಂಡ ಪೂಜಾ ವಿಧಾನಗಳ ಬಗ್ಗೆ ಆಕ್ಷೇಪ ಎತ್ತಿದೆ. ಲಾಂಛನವನ್ನು ದಾಖಲೆ ಅವಧಿಯಲ್ಲಿ ನಿರ್ಮಾಣ ಮಾಡಿದ ಶಿಲ್ಪಿಗಳನ್ನು ಪ್ರಶಂಸಿಸುವ ಬದಲು ಇಂಥವುಗಳ ಮೂಲಕ ಅನಗತ್ಯ ಹುಯಿ ಲೆಬ್ಬಿಸಿದ್ದಾರೆ. ಸಂವಿಧಾನಕ್ಕೇ ಅಪಚಾರ ಎಸಗಲಾಗಿದೆ ಎಂದು ಕಾಂಗ್ರೆಸ್ ಬೊಬ್ಬಿರಿದಿದೆ. ಆದರೆ 1950ರಲ್ಲಿ ಭಾರತ ಸಂವಿಧಾನ ವನ್ನು ಅಳವಡಿಸಿಕೊಂಡಾಗ ಅದರ ಪೀಠಿಕೆಯಲ್ಲಿ ಜಾತ್ಯತೀತ ಶಬ್ದವನ್ನು ಸೇರಿಸಲು ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿರೋಧಿಸಿದ್ದರು.
ನಮ್ಮ ಸಂವಿಧಾನವೇ ಜಾತ್ಯತೀತವಾಗಿದೆ ಎಂದು ಹೇಳಿದ್ದ ಅವರು ಆ ಕಾರಣಕ್ಕೆ ಆ ಶಬ್ದವನ್ನು ಕೈ ಬಿಟ್ಟಿದ್ದರು. ಸ್ವತಃ ಅಂದಿನ ಪ್ರಧಾನಿ ನೆಹರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಆದರೆ ೧೯೭೬ರಲ್ಲಿ ಇಂದಿರಾ ಗಾಂಧಿ ಸಂವಿಧಾನಕ್ಕೆ ೪೨ನೇ ತಿದ್ದುಪಡಿ
ತಂದು ಸಮಾಜವಾದಿ ಮತ್ತು ಜಾತ್ಯತೀತ ಶಬ್ದವನ್ನು ಮೂಲ ಸಂವಿಧಾನದ ಪೀಠಿಕೆಯಲ್ಲಿ ಸೇರ್ಪಡೆ ಮಾಡಿದರು. ತುರ್ತು ಪರಿಸ್ಥಿತಿಯಲ್ಲಿ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಸಂವಿಧಾನದ ಮೂಲ ಸ್ವರೂಪವನ್ನೇ ತಿದ್ದಿರುವುದನ್ನು ಮರೆತು ಈಗ ರಾಷ್ಟ್ರೀಯ ಲಾಂಛನದ ಸಿಂಹದ ಬಾಯಿಯು ತೆಗೆದಿದೆ ಮತ್ತು ಅದರ ಕೋರೆ ಹಲ್ಲು ಕಾಣುತ್ತಿದೆ ಎಂಬ ಬಾಲಿಶ ಆರೋಪದ ಮೂಲಕ ಕಾಂಗ್ರೆಸ್ ನವರು ಅನಗತ್ಯ ವಿವಾದ ಎಬ್ಬಿಸಿದ್ದಾರೆ.
ಮೋದಿ ವಿರೋಧಿಸಬೇಕು ಎಂಬ ವಾಂಛೆಯಲ್ಲಿ ಕೋವಿಡ್ ಲಸಿಕೆ ವಿರೋಧಿಸಿದರು. ರೈತರಿಗೆ ಅನುಕೂಲವಾಗಿದ್ದ ಕೃಷಿ ಕಾಯಿದೆಗೆ ವಿಘ್ನ ಒಡ್ಡಿದರು. ಅಗ್ನಿಪಥ್ ಯೋಜನೆಯ ವಿರುದ್ಧ ಯುವಕರನ್ನು ಎತ್ತಿ ಕಟ್ಟುವ ಕುಟಿಲತನ ತೋರಿದರು. ಜಿಎಸ್‌ಟಿ ಯನ್ನು ಲೇವಡಿ ಮಾಡಿದರು. ಆದರೆ ಅದ್ಯಾವುದಕ್ಕೂ ಪ್ರಬುದ್ಧ ಭಾರತೀಯರು ಸೊಪ್ಪು ಹಾಕಲಿಲ್ಲ. ಕೊನೆಗೆ ಸರಕಾರಕ್ಕೆ ಮಸಿ ಬಳಿಯುವ ದುರುದ್ದೇಶದಿಂದ ಲಾಂಛನದ ವಿಷಯವನ್ನು ರಾಢಿ ಎಬ್ಬಿಸುತ್ತಿರುವುದೂ ಜನರಿಗೆ ಅರ್ಥವಾಗಿದೆ.
ವಿಪರ್ಯಾಸವೆಂದರೆ, ಪ್ರಧಾನಿ ಮೋದಿಯವರು ದೇಶಕ್ಕೆ ಪ್ರಬಲ ಪ್ರತಿಪಕ್ಷದ ಅವಶ್ಯಕತೆಯಿದೆ ಎಂದು ಅನೇಕ ಬಾರಿ ಹೇಳಿದ್ದಾರೆ.
ಆದರೆ ಪ್ರತಿ ಪಕ್ಷಗಳು ಮಾತ್ರ ತಮ್ಮ ಮೋದಿ ವಿರೋಧಿ ನೀತಿಯಿಂದ ದೂರ ಸರಿಯುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ