Saturday, 14th December 2024

ಶಿಕ್ಷಣ ನೀತಿಯೂ ರಾಜಕೀಯ ವಿಚಾರವೇ ?

ಅಶ್ವತ್ಥಕಟ್ಟೆ

ranjith.hoskere@gmail.com

ಕಳೆದ ಶುಕ್ರವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ೧೪ನೇ ಬಜೆಟ್ ಮಂಡಿಸಿದರು. ಇತಿಮಿತಿಯಲ್ಲಿ ಪಂಚ ಗ್ಯಾರಂಟಿಗಳಿಗೆ ಸೂಕ್ತ ಅನುದಾನದೊಂದಿಗೆ ಹಲವು ಯೋಜನೆಗಳನ್ನು, ಘೋಷಣೆಗಳನ್ನು ಮಾಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕಷ್ಟೆ ಸೀಮಿತವಾಗಿ ನೋಡುವುದಾದರೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸುವ ವಿಷಯ ಸದ್ಯದ ಮಟ್ಟಿಗೆ ಅತಿ ಹೆಚ್ಚು ಚರ್ಚಿತ ಹಾಗೂ ಆಕ್ಷೇಪಿತ ವಿಷಯ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದಾಗಿನಿಂದಲೂ ವಿರೋಧಿಸುತ್ತಲೇ ಬಂದಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಎನ್‌ಇಪಿ ಯನ್ನು ರದ್ದುಗೊಳಿಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿತ್ತು. ಇದೀಗ ‘ಕೊಟ್ಟ ಮಾತಿನಂತೆ’ ಮೊದಲ ಬಜೆಟ್‌ನಲ್ಲಿಯೇ ರಾಷ್ಟ್ರೀಯ ಶಿಕ್ಷಣ ನೀತಿ ಬದಲಿಗೆ ರಾಜ್ಯದ ಪ್ರತ್ಯೇಕ ನೀತಿಯನ್ನು ಸಿದ್ಧಪಡಿಸುವ ಮಾತುಗಳನ್ನು ಹೇಳಿದ್ದಾರೆ. ಈ ನೀತಿ ಯಾವ ರೀತಿ ಇರಲಿದೆ? ಯಾವಾಗಿನಿಂದ ಜಾರಿಯಾಗಲಿದೆ? ಎನ್ನುವ ಬಗ್ಗೆ ಬಜೆಟ್‌ನಲ್ಲಿ ಸ್ಪಷ್ಟತೆ ನೀಡಿಲ್ಲ.

ಮುಖ್ಯಮಂತ್ರಿಗಳು ತಮ್ಮ ಬಜೆಟ್ ಭಾಷಣದಲ್ಲಿ, ‘ರಾಷ್ಟ್ರೀಯ ಶಿಕ್ಷಣ ನೀತಿಯೂ ಒಕ್ಕೂಟ ವ್ಯವಸ್ಥೆಗೆ ಮಾರಕ ವಾಗಿರುವಂತಹ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾ ಗಿರುವ ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿದೆ. ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿ ಇರುವ ನಮ್ಮ ದೇಶಕ್ಕೆ ಏಕರೂಪದ ಶಿಕ್ಷಣ ವ್ಯವಸ್ಥೆ ಹೊಂದಿಕೊಳ್ಳುವುದಿಲ್ಲ. ರಾಜ್ಯದ ಅಸ್ಮಿತೆ ಯನ್ನು ಎತ್ತಿ ಹಿಡಿಯುವ, ಉನ್ನತ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಿ ಯುವಜನರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲಗೊಳಿ ಸಲು ಒತ್ತು ನೀಡುವ ನಿಟ್ಟಿನಲ್ಲಿ ಸ್ಥಳೀಯವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಾಸ್ತವಾಂಶಗಳನ್ನು ಒಳಗೊಂಡ ಹೊಸ ಶಿಕ್ಷಣ ನೀತಿ ಯನ್ನು ರೂಪಿಸಲಾಗುವುದು’ ಎನ್ನುವ ಮಾತನ್ನು ಹೇಳಿದ್ದರು.

ಎನ್‌ಇಪಿ ಬದಲಿಗೆ ರಾಜ್ಯದ ಪ್ರತ್ಯೇಕ ನೀತಿ ಯಾವಾಗಿನಿಂದ ಜಾರಿಯಾಗುತ್ತದೆ ಎನ್ನುವುದು ಗೊತ್ತಿಲ್ಲವಾದರೂ, ಈ ಘೋಷಣೆ ಶಿಕ್ಷಣ ವ್ಯವಸ್ಥೆಯಲ್ಲಿ ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ. ಅದರಲ್ಲಿಯೂ ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು
ಮುಂದೇನು ಮಾಡಬೇಕು ಎನ್ನುವ ಗೊಂದಲ ಶುರುವಾಗಿದೆ. ಈ ಹಿಂದಿನ ಬಿಜೆಪಿ ಸರಕಾರ ಇಡೀ ದೇಶದಲ್ಲಿಯೇ ಮೊದಲ ರಾಜ್ಯವಾಗಿ ಉನ್ನತ ಶಿಕ್ಷಣಕ್ಕೆ ಎನ್‌ಇಪಿಯನ್ನು ಅಳವಡಿಸಿಕೊಂಡಿತ್ತು. ಈಗಾಗಲೇ ಮೂರು ಬ್ಯಾಚ್‌ನ ಪದವೀದರರು ಎನ್‌ಇಪಿಯಲ್ಲಿಯೇ ವ್ಯಾಸಾಂಗ ಮಾಡುತ್ತಿದ್ದಾರೆ.
ಎನ್‌ಇಪಿ ರದ್ದು ಘೋಷಣೆ ಹೊರಬೀಳುತ್ತಿದ್ದಂತೆ, ಮುಂದೇನು ಎನ್ನುವ ಮಾಡಬೇಕು ಎನ್ನುವ ಆತಂಕಕ್ಕೆ ವಿದ್ಯಾರ್ಥಿಗಳು ಬಿದ್ದಿದ್ದಾರೆ. ಆದರೆ, ಶಿಕ್ಷಣ ತಜ್ಞರ ಹಾಗೂ ಅಧಿಕಾರಿಗಳ ಪ್ರಕಾರ, ಯಾಯ್ಯಾರು ಎನ್‌ಇಪಿ ಯೋಜನೆಯಲ್ಲಿ ಪದವಿಗಳಿಗೆ ನೋಂದಣಿ ಮಾಡಿಕೊಂಡಿದ್ದಾರೋ ಅವರಿಗೆ ಯಾವುದೇ ಸಮಸ್ಯೆಯಿಲ್ಲ. ಅವರೆಲ್ಲರೂ ತಮ್ಮ ಕೋಸ್ ಗಳನ್ನು ಎನ್‌ಇಪಿ ನೀತಿಯ ಅನ್ವಯವೇ ಮುಗಿಸಲಿದ್ದಾರೆ.

ಒಂದು ವೇಳೆ ಪ್ರತ್ಯೇಕ ನೀತಿ ಮುಂದಿನ ವರ್ಷಕ್ಕೆ ಸಿದ್ಧವಾದರೆ ಮಾತ್ರ, ಆ ವರ್ಷದ ಬ್ಯಾಚ್‌ಗೆ ರಾಜ್ಯ ಶಿಕ್ಷಣ ನೀತಿ ಜಾರಿಯಾಗಲಿದೆ ಎನ್ನುವ ಸ್ಪಷ್ಟತೆ ನೀಡುವ ಪ್ರಯತ್ನ ಮಾಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೆಲವೊಂದು ಲೋಪದೋಷಗಳಿರಬಹುದು. ಆದರೆ ಕೌಶಲಾಭಿವೃದ್ಧಿ ಕೇಂದ್ರಿತ,
ನಾನಾ ಹಂತದಲ್ಲಿ ಶಿಕ್ಷಣ ಪಡೆಯುವ ಹಾಗೂ ಐಚ್ಛಿಕ ವಿಷಯಗಳ ಆಯ್ಕೆ ವಿದ್ಯಾರ್ಥಿ ಕೇಂದ್ರಿತವಾಗಿರುವುದ ರಿಂದ, ವಿದ್ಯಾರ್ಥಿಗಳಿಗೆ ಪೂರಕ ವಾಗಿರುವ ನೀತಿ ಎನ್ನುವ ಮಾತುಗಳು ಮೊದಲಿನಿಂದಲೂ ಕೇಳಿಬಂದಿತ್ತು.

ಇದರೊಂದಿಗೆ ದೇಶದ ಸಂಸ್ಕೃತಿ, ಸಂಸ್ಕಾರ ಸೇರಿದಂತೆ ಹಲವು ವಿಷಯಗಳನ್ನು ಸೇರಿಸುವುದರೊಂದಿಗೆ, ಉದ್ಯಮ ವಲಯದಲ್ಲಿ ಕೇಳುವ ‘ಪ್ರಾಕ್ಟಿಕಲ್’ ಶಿಕ್ಷಣವೂ ಎನ್ ಇಪಿನಲ್ಲಿ ಜಾರಿಯಲ್ಲಿತ್ತು. ಇನ್ನು ಈ ಹಿಂದಿನ ಶಿಕ್ಷಣ ನೀತಿಗಿಂತ ಭಿನ್ನವಾಗಿದ್ದ ಎನ್‌ಇಪಿಯಲ್ಲಿ, ಕೇವಲ ‘ಪಠ್ಯ’ದ
ವಿಷಯಕ್ಕೆ ಸೀಮಿತವಾದರೇ ಪ್ರಾಯೋಗಿಕ ತರಗತಿಗಳಿಗೂ ಹೆಚ್ಚಿನ ಒತ್ತು ನೀಡಿದ್ದರಿಂದ ಹಲವರು ಇದನ್ನು ಒಪ್ಪಿಕೊಂಡಿದ್ದರು. ಆರಂಭದಲ್ಲಿ ಎನ್‌ಇಪಿ ಬೋಧನೆಗೆ ಹೆಚ್ಚಿನ ತರಬೇತಿ ಅಗತ್ಯ ಎನ್ನುವ ಮಾತುಗಳು ಕೇಳಿಬಂದಿದ್ದೂ ಈ ಎಲ್ಲ ಕಾರಣಗಳಿಗಾಗಿಯೇ. ಆದರೀಗ ಕರ್ನಾಟಕ ದಲ್ಲಿರುವ ಬಹುತೇಕ ಕಾಲೇಜುಗಳು, ಎನ್‌ಇಪಿ ಬೋಧನೆ ಬೇಕಿರುವ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಬೋಧಕರೂ ಇದಕ್ಕೆ ಹೊಂದಿ ಕೊಂಡಿದ್ದಾರೆ.

ಆದರೀಗ ಏಕಾಏಕಿ ಎನ್‌ಇಪಿ ರದ್ದು ಎನ್ನುವ ಘೋಷಣೆ ಈ ಎಲ್ಲರಿಗೂ ಕೊಂಚ ಗೊಂದಲವನ್ನು ಮೂಡಿಸಿದೆ. ಹಾಗೇ ನೋಡಿದರೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ‘ಎನ್‌ಇಪಿ ಒಕ್ಕೂಟ ವ್ಯವಸ್ಥೆಗೆ ವಿರೋಧವಿದೆ, ಸ್ಥಳೀಯ ಭಾಷೆ, ವಿಷಯಗಳಿಗೆ ಹೆಚ್ಚಿನ ಸ್ಕೋಪ್ ಇಲ್ಲ’ ಎನ್ನುವ ಆರೋಪವನ್ನು ಮಾಡಿತ್ತು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಬಿಜೆಪಿ ಎನ್‌ಇಪಿಯ ಮೂಲಕ ಮನುಸ್ಮೃತಿಯನ್ನು ಹೇರುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ವ್ಯಾಖ್ಯಾನ ವನ್ನೂ ಕಾಂಗ್ರೆಸ್ ನಾಯಕರು ನೀಡಿದ್ದಾರೆ. ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ಎನ್‌ಇಪಿ ಜಾರಿಯಲ್ಲಿ ಹಲವು ಗೊಂದಲಗಳಿವೆ ಎನ್ನುವುದು ಕಾಂಗ್ರೆಸ್ ನಾಯಕರ ವಾದ.

ಎಲ್ಲ ರಾಜ್ಯಗಳಿಗಿಂತ ಮೊದಲು ಎನ್‌ಇಪಿ ಜಾರಿಗೊಳಿಸಿದ ಕೀರ್ತಿ ಪಡೆಯಬೇಕು ಎನ್ನುವ ಕಾರಣಕ್ಕೆ ಬಿಜೆಪಿ ಸರಕಾರ ಅವಸರಕ್ಕೆ ಬಿದ್ದು ಜಾರಿಗೊಳಿ ಸಿದ್ದರಿಂದ ಗೊಂದಲ ಸೃಷ್ಟಿಯಾಗಿದ್ದು ನಿಜ. ಆದರೀಗ ದಿನ ದಿನಕ್ಕೆ ಒಂದೊಂದೇ ಸಮಸ್ಯೆಗಳು ಪರಿಹಾರವಾಗುತ್ತಿದೆ. ಆದರೆ, ಕಾಂಗ್ರೆಸ್ ತನ್ನ ಪ್ರಣಾಳಿಕೆ ಯಲ್ಲಿ ಎನ್‌ಇಪಿಯನ್ನು ಹಿಂಪಡೆಯುವ ಭರವಸೆ ನೀಡಿ ದ್ದರಿಂದ ಇದೀಗ, ಈ ನೀತಿ ರದ್ದುಗೊಳಿಸುವ ಘೋಷಣೆ ಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ.

ಶಿಕ್ಷಣ ತಜ್ಞರ ಪ್ರಕಾರ, ಈ ರೀತಿ ಇಡೀ ರಾಷ್ಟ್ರ ಒಪ್ಪಿಕೊಂಡು ಆರಂಭಿಸಿರುವ ಈ ಶಿಕ್ಷಣ ನೀತಿಗೆ ಸಡ್ಡು ಹೊಡೆದು, ಪ್ರತ್ಯೇಕ ನೀತಿ ಜಾರಿಗೊಳಿಸು ವುದು ಸುಲಭದ ಮಾತಲ್ಲ. ಆರಂಭದಲ್ಲಿ ಈ ನೀತಿಯನ್ನು ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಬಿಜೆಪಿಯೇತರ ರಾಜ್ಯಗಳು ವಿರೋಧಿ ಸಿದ್ದವು. ಆದರೆ, ಬಳಿಕ ಪಶ್ಚಿಮ ಬಂಗಳದಲ್ಲಿಯೂ ಎನ್‌ಇಪಿ ಜಾರಿ ಯಾಗಿದೆ. ಭಾರತದಂಥ ರಾಷ್ಟ್ರದಲ್ಲಿ ಈ ರೀತಿ ಕೇಂದ್ರ ಸರಕಾರದ ಒಂದು ನೀತಿಯನ್ನು ಸಾರಸಗಟಾಗಿ ತಗೆದು ಹಾಕು ವುದು ಸುಲಭದ ವಿಷಯಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿರುವ ಸಮಯದಲ್ಲಿ ಕೆಲವೊಂದು ವಿಷಯವನ್ನು ವಿರೋಧಿಸಿದರೆ ಭವಿಷ್ಯದಲ್ಲಿ ಬಹುದೊಡ್ಡ ಸಮಸ್ಯೆ ಎದುರಿಸ ಬೇಕಾಗುತ್ತದೆ.

ಈ ರೀತಿಯ ನಿರ್ಧಾರಗಳನ್ನು ನ್ಯಾಯಾ ಲಯಗಳೂ ಒಪ್ಪುವುದು ಕಷ್ಟ ಎನ್ನುವುದು ಹಲವರ ಮಾತಾಗಿದೆ. ಬಿಜೆಪಿ ವಿರುದ್ಧ ನಿಲ್ಲಬೇಕು ಎನ್ನುವ ಕಾರಣಕ್ಕೆ, ಎನ್‌ಇಪಿ ಜಾರಿಯನ್ನು ತಡ ಮಾಡಬಹುದೇ ಹೊರತು, ತಿರಸ್ಕರಿಸುವುದು ಸುಲಭವಲ್ಲ. ಏಕೆಂದರೆ, ಇಡೀ ದೇಶದಲ್ಲಿ ಒಂದು ಶಿಕ್ಷಣ ಪದ್ಧತಿಯಲ್ಲಿರುವಾಗ, ಯಾವುದೋ ಒಂದು ರಾಜ್ಯ ಅದನ್ನು ತಿರಸ್ಕರಿಸಿ ರಾಜ್ಯ ನೀತಿಯನ್ನು ಅಳವಡಿಸಿಕೊಂಡರೆ ವಿದ್ಯಾರ್ಥಿಗಳಿಗೆ ಸಮಸ್ಯೆ ಯಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಉದಾಹರಣೆಗೆ, ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಎಂಜಿನಿಯರಿಂಗ್ ಕಾಲೇಜಿಗಿಂತ ನೂರು ಪಟ್ಟು ಉತ್ತಮ ಶಿಕ್ಷಣವನ್ನು ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನೀಡುತ್ತಿದ್ದರೂ, ಪ್ರತಿಷ್ಠಿತ ಕಂಪನಿಗಳು
ವಿಟಿಯು ವಿದ್ಯಾರ್ಥಿಗಳಿಗೆ ಮೊದಲು ಮಣೆ ಹಾಕುತ್ತಾರೆ.

ಅದೇ ರೀತಿ ಮುಂದೊಂದು ದಿನ ಯಾವುದೋ ಒಂದು ರಾಜ್ಯ ಮಾತ್ರ ಎನ್‌ಇಪಿಯಿಂದ ಹೊರಗುಳಿದು, ಇಡೀ ದೇಶ ಎನ್‌ಇಪಿಯನ್ನು ಅಳವಡಿಸಿ ಕೊಂಡರೆ ಸಹಜವಾಗಿಯೇ, ಈ ರಾಜ್ಯದ ವಿದ್ಯಾರ್ಥಿಗಳು ‘ಔಟ್ ಆಫ್ ದಿ ಸಿಲೆಬಸ್’ ರೀತಿಯಾಗುವ ಆತಂಕವಿದೆ. ಆದ್ದರಿಂದ ಒಂದು
ವೇಳೆ ಎನ್‌ಇಪಿ ಜಾರಿಯನ್ನು ಮಾಡದಿದ್ದರೆ ಮುಂದಿನ ದಿನದಲ್ಲಿ ಆ ರಾಜ್ಯಗಳ ವಿದ್ಯಾರ್ಥಿಗಳಿಗೆ ಅವಕಾಶಗಳು ಕ್ಷೀಣಿಸುವ ಸಾಧ್ಯತೆಗಳಿರುತ್ತದೆ ಎನ್ನುವುದು ಹಲವು ಶಿಕ್ಷಣ ತಜ್ಞರ ಲೆಕ್ಕಾಚಾರವಾಗಿದೆ.

ಈ ಅವಕಾಶಗಳೊಂದಿಗೆ ಮತ್ತೊಂದು ಪ್ರಮುಖ ವಿಷಯ ವೇನೆಂದರೆ, ಶಿಕ್ಷಣ ವಲಯದ ರಾಜ್ಯ ಹಾಗೂ ಕೇಂದ್ರ ಎರಡರ ನಡುವೆ ಬರುವುದರಿಂದ ಎರಡು ಸರಕಾರಗಳಿಗೂ ನಿರ್ಣಯ ಕೈಗೊಳ್ಳುವ ಅಽಕಾರವಿರುತ್ತದೆ. ಅದರಲ್ಲಿಯೂ ಉನ್ನತ ಶಿಕ್ಷಣದ ಬಹುಮುಖ್ಯ ಸಂಸ್ಥೆಯಾಗಿರುವ ಯುಜಿಸಿ
ಕೇಂದ್ರ ಸರಕಾರದ ಸುರ್ಪದಿಗೆ ಬರಲಿದೆ. ಯುಜಿಸಿ ಮೂಲ ಕವೇ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆಯಾಗುವುದು. ಯುಜಿಸಿ, ನ್ಯಾಕ್ ಶ್ರೇಣಿಯ ಮೇಲೆ ಅನುದಾನ ಹಂಚಿಕೆಯಾಗುವುದರಿಂದ, ಭವಿಷ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯೇ ಯುಜಿಸಿ ಅನುದಾನ
ಪಡೆಯಲು ಪ್ರಮುಖ ಅಂಶವಾಗುತ್ತದೆ.

ಯುಜಿಸಿ ನೀಡುವ ಮಾರ್ಗಸೂಚಿಯಲ್ಲಿ ಎಷ್ಟನ್ನು ಪೂರ್ಣಗೊಳಿಸಲಾಗಿದೆ ಎನ್ನುವ ಆಧಾರದಲ್ಲಿಯೇ ಅನುದಾನ ಬಿಡುಗಡೆಯಾಗುವುದರಿಂದ, ಒಂದು ವೇಳೆ ಎನ್‌ಇಪಿ ಜಾರಿಯಾಗದಿದ್ದರೆ ಅನುದಾನ ಕಡಿತವಾಗುವ ಆತಂಕವಿದೆ. ಕರ್ನಾಟಕದಲ್ಲಿ ಒಂದು ವೇಳೆ ಎನ್‌ಇಪಿ ಅಳವಡಿಸಿಕೊಳ್ಳದೇ, ರಾಜ್ಯದಿಂದಲೇ ಪ್ರತ್ಯೇಕ ನೀತಿಯನ್ನು ಜಾರಿಗೊಳಿ ಸಿದರೆ ಯುಜಿಸಿಯ ಮಾರ್ಗಸೂಚಿ ಪಾಲನೆಯಾಗಿಲ್ಲ ಎನ್ನುವ ಅಂಶ ಮುಂದಿಟ್ಟುಕೊಂಡು ಅನುದಾನ ಕಡಿತವಾಗುವ ಆತಂಕವಿದೆ. ಈ ಕಾರಣಕ್ಕಾಗಿಯೇ ಬಿಜೆಪಿಯೇತರ ರಾಜ್ಯಗಳಲ್ಲಿಯೂ ಹಂತ-ಹಂತವಾಗಿ ಎನ್‌ಇಪಿ ಜಾರಿಗೆ
ಸಿದ್ಧತೆ ನಡೆಸಿಕೊಳ್ಳಲಾಗಿದೆ.

ಈ ಎಲ್ಲವನ್ನು ಮೀರಿ ಶಿಕ್ಷಣ ಎನ್ನುವುದು ವ್ಯಕ್ತಿಯ ವಿಕಸನಕ್ಕೆ ಅಡಿಗಲ್ಲು ಆಗಬೇಕಿರುವ ವಿಷಯ. ಈ ವಿಷಯದಲ್ಲಿ ಸ್ಪಷ್ಟತೆಯಿದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡುವುದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಅದನ್ನು ಬಿಟ್ಟು, ಒಂದು ಸರಕಾರ ಬಂದಾಗ ಅವರಿಗೆ
ಬೇಕಾದ ಶಿಕ್ಷಣ ನೀತಿ ರಚಿಸುವುದು, ಇನ್ನೊಂದು ಸರಕಾರ ಬರುತ್ತಿದ್ದಂತೆ ಆ ನೀತಿಯನ್ನು ರದ್ದುಗೊಳಿಸುವ ಪರಂಪರೆ ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಕ್ಷೇತ್ರದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ. ಆ ವಿಷಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಂದು ರಾಜಕೀಯ ವಿಷಯವಾಗಿ ನೋಡುವುದೇ ದುರಂತ.

ಕರ್ನಾಟಕದಲ್ಲಿ ಎನ್‌ಇಪಿಯಿಂದ ಕೊಂಚ ಅಡೆತಡೆಯಾಗುತ್ತಿರುವುದು, ನೀತಿಯಿಂದ ಎನ್ನುವುದಕ್ಕಿಂತ ಹಿಂದಿನ ರಾಜ್ಯ ಬಿಜೆಪಿ ಸರಕಾರದ ‘ಅವಸರ’ವೇ ಕಾರಣ. ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಶಿಕ್ಷಣ ನೀಡುವ ಎನ್ ಇಪಿಯನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸು ವುದು ಸರಿಯಲ್ಲ. ಒಂದು ವೇಳೆ ಎನ್‌ಇಪಿಯಲ್ಲಿ ಲೋಪಗಳಿದ್ದರೆ, ರಾಜ್ಯದ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಆ ವ್ಯಾಪ್ತಿಯಲ್ಲಿಯೇ ಬದಲಾವಣೆ ಮಾಡಿಕೊಂಡು ಈಗಾಗಲೇ ಜಾರಿಯಲ್ಲಿರುವ ಎನ್‌ಇಪಿಯಲ್ಲಿಯೇ ಮುಂದುವರಿಯುವುದು ಸೂಕ್ತ.