Saturday, 14th December 2024

ರಾಷ್ಟ್ರೀಯತೆ ಅನ್ನುವುದು ಜಾತಿಯನ್ನು ಮೀರಿದ ಜೀವನ ಕ್ರಮ

ತನ್ನಿಮಿತ್ತ

ವಿನಾಯಕ ಭಟ್ಟ

vinayak.oni@gmail.com

ಒಳ್ಳೆಯ ವಿದ್ಯೆಯನ್ನು, ಸಂಸ್ಕಾರವನ್ನು ಕಲಿತ ಮಗು ಮುಂದೆ ಬೆಳೆದು ದೇಶದ ನಾಗರಿಕನಾಗಿ ಬೆಳೆದು, ದಿನ ನಿತ್ಯದ ವ್ಯವಹಾರಗಳಲ್ಲಿ ಕೂಡ ರಾಷ್ಟ್ರೀಯವಾದಿ ಆಗಿಯೇ ಬದುಕಬಹುದು. ನಮ್ಮಿಂದ ಸಾಧ್ಯವಿರುವ ಜೀವನ ಶೈಲಿಯಿಂದಲೇ ದೇಶವನ್ನು ಕಟ್ಟುವ ಕಾರ್ಯ, ದೇಶಾಭಿಮಾನ ಮೆರೆಯುವ ಕಾಳಜಿ ಸಾಧ್ಯವಿದೆ. ರಾಷ್ಟ್ರಾಭಿಮಾನ, ದೇಶ ಭಕ್ತಿ ಅಂದಕೂಡಲೇ ಒಂದು ಧರ್ಮವನ್ನು ಗಂಟು ಹಾಕಿ ನೋಡುವ, ಒಂದು ರಾಜಕೀಯ ಪಕ್ಷಕ್ಕೆ ಮೀಸಲಿಡುವ ರಾಜಕೀಯ ದುರುದ್ದೇ ಶದ ವಿಚಿತ್ರ ಚಿಂತನೆಗಳಿಗೆ ಯಾವ ಅರ್ಥವೂ ಇಲ್ಲ.

ಸನಾತನ ಸಂಸ್ಕೃತಿಯನ್ನು ಹೊಂದಿದ, ಭವ್ಯ ಇತಿಹಾಸವನ್ನು ಹೊಂದಿರುವ ಪ್ರಪಂಚದ ಶ್ರೇಷ್ಠ ರಾಷ್ಟ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಮ್ಮ ಭಾರತದಲ್ಲಿ ರಾಷ್ಟ್ರೀಯತೆ ಅನ್ನುವ ಶಬ್ದ ಬಳಕೆ ಆದ ಕೂಡಲೇ ಅದು ರಾಜಕೀಯ ವಸ್ತುವಾಗಿ ಮಾರ್ಪಾಟು ಆಗಿರುವುದು ತಥಾ ಕಥಿತ ಬು(ಲ)ದ್ಧಿ ಜೀವಿಗಳಿಂದ. ರಾಷ್ಟ್ರ ಭಕ್ತಿ, ರಾಷ್ಟ್ರಾಭಿಮಾನ ಅನ್ನುವುದು ಯಾವುದೇ ದೇಶದ ಪ್ರಜೆಯ ಮೂಲ ಮನಸಿನ ಪ್ರತಿಬಿಂಬ ಅನ್ನುವುದು ಈ ಜನಕ್ಕೆ ಅರ್ಥ ಆಗುವುದಿಲ್ಲ ಅಥವಾ ರಾಜಕಾರಣಕ್ಕಾಗಿ ಅದನ್ನ ತಿರುಚುವ ಪ್ರಯತ್ನ ಸದಾ ಇದ್ದೇ ಇರುತ್ತದೆ.

ಈ ರಾಷ್ಟ್ರ ಭಕ್ತಿ, ಅಭಿಮಾನ ಅನ್ನುವುದನ್ನು ಪ್ರತಿಯೊಬ್ಬ ಪ್ರಜೆ ಕೂಡ ತನ್ನಲ್ಲಿ ಬೆಳೆಸಿಕೊಳ್ಳುವುದು ಮಾತ್ರ ಅಲ್ಲ, ಜತೆಗೆ ಅದನ್ನ ತನ್ನ ವರ್ತನೆಗಳಲ್ಲಿ, ದಿನ ನಿತ್ಯದ ಜೀವನದಲ್ಲಿ ಕೂಡ ಅಳವಡಿಸಿಕೊಂಡುಬಿಟ್ಟರೆ ಇಡೀ ದೇಶದ ಜನರ ಬದುಕೇ ಬಂಗಾರ ಆಗುತ್ತದೆ ಅನ್ನುವ ಚಿಕ್ಕ ಕಲ್ಪನೆ ಕೂಡಾ ಇಂಥ ಸಂಕುಚಿತ ಮನೋ ಭಾವದ ಪ್ರಭೃತಿಗಳಿಗೆ ಇರುವುದಿಲ್ಲ. ಇಂಥ ವಿಷಯಗಳನ್ನು ಪ್ರಬುದ್ಧವಾಗಿ ಮಾತನಾಡುವ ಅಥವಾ ಕ್ರಿಯಾತ್ಮಕವಾದ ವಿಚಾರವನ್ನು ಮಂಡಿಸುವ ತಾಕತ್ತು ದೂರದ ಮಾತು. ಒಟ್ಟಿನಲ್ಲಿ ಇಂಥ ವಿಷಯಗಳು ಬಂದಾಗ ಜಾತಿಯ ವಿಷಯವನ್ನು ತಂದು, ರಾಷ್ಟ್ರೀಯತೆಯನ್ನು ಜಾತಿಗೆ ನಂಟು ಮಾಡಿ, ಕೋಮುವಾದಿ ಹಣೆಪಟ್ಟಿ ಕಟ್ಟಿ ಜನರನ್ನು ಮೋಸವಾಗಿಸುವ ಕೆಲಸ ಅದೆಷ್ಟೋ ದಶಕದಿಂದ ರಾಜಕೀಯ ಲಾಭಕ್ಕಾಗಿ ನಡೆದು ಬಂದಿದ್ದನ್ನ ನೋಡಿದ್ದೇವೆ. ಇವತ್ತೂ ನೋಡು ತ್ತಿದ್ದೇವೆ.

ಇಂಥ ಒಂದು ಸಂದರ್ಭದಲ್ಲಿ ರಾಷ್ಟ್ರೀಯತೆಯನ್ನು ಆಚರಿಸುವುದು ಅಂದರೆ ಏನು ಅನ್ನುವುದರ ಸರಳ ಕಲ್ಪನೆಯನ್ನು ಎಲ್ಲರಲ್ಲೂ ಬೆಳೆಸುವ ಅವಶ್ಯಕತೆ ಖಂಡಿತಾ
ಕಂಡು ಬರುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಾವೆಲ್ಲಾ ರಾಷ್ಟ್ರೀಯತೆಯನ್ನು ಆಚರಿಸುವುದು ಹೇಗೆ ಅನ್ನುವ ಜಿಜ್ಞಾಸೆ ಹುಟ್ಟುವುದು ಮೊದಲ ಹಂತ. ಹಿರಿಯ ರೊಬ್ಬರು ಹೇಳಿದ ಮಾತು- ದೇಶ ನಮಗೆ ಏನು ಮಾಡಿದೆ ಅನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ಮಾಡಿದ್ದೇವೆ ಅನ್ನುವ ಪ್ರಶ್ನೆ ಸದಾ ನಮ್ಮನ್ನು ಎಚ್ಚರವಾಗಿ ಇಟ್ಟರೆ, ನಮ್ಮ ಯಾವುದೇ ಕೆಲಸ ಕೂಡ ದೇಶ ಕಟ್ಟುವ ಕೆಲಸ ಆಗಬಹುದು.

ಆಡುವ ಪ್ರತಿ ಮಾತು, ಮಾಡುವ ಪ್ರತಿ ಕೆಲಸ ಕೂಡ ದೇಶಕ್ಕೆ  ವುದೋ ಒಂದು ಅಭ್ಯುದಯಕ್ಕೆ ಕಾರಣ ಆಗುವ ಎಲ್ಲ ಸಾಧ್ಯತೆಗಳಿವೆ. ಇದಕ್ಕೆ ಪೂರಕವಾಗಿ ಸುಲಭದ ಅನೇಕ ಮಾರ್ಗಗಳು ಖಂಡಿತಾ ಇವೆ. ಕೆಲವೊಂದು ಉದಾಹರಣೆಗಳ ಮೂಲಕ ಇದನ್ನ ಅರ್ಥ ಮಾಡಿಕೊಳ್ಳಬಹುದು. ಮತ್ತೆ ಅದೇ ವಿಚಾರ- ಈ ಎಲ್ಲ ಉದಾಹರಣೆಗಳು ಎಲ್ಲ ಜಾತಿ, ಮತ ಪಂಗಡಕ್ಕೂ ಅನ್ವಯಿಸಬಹುದು! ರಾಷ್ಟ್ರೀಯತೆಯ ಆಚರಣೆಗೂ ಜಾತಿ ಮತ ಪಂಗಡಗಳಿಗೂ ಯಾವುದೇ ಸಂಬಂಧ ಇಲ್ಲ.
ನಮ್ಮ ಮನೆಯಿಂದಲೇ ಪ್ರಾರಂಭ ಮಾಡೋಣ.

ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರುವು. ತಾಯಿಯಾದವಳು ತಾನು ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾ ಹುಟ್ಟಿದ ಮಗುವಿಗೆ
ದೇಶಾಭಿಮಾನವನ್ನು ಬೆಳೆಸುವ ಪ್ರಕ್ರಿಯೆಯಿಂದ ಈ ರಾಷ್ಟ್ರಾಭಿಮಾನ ಅನ್ನುವುದು ಹುಟ್ಟುತ್ತದೆ. ತನ್ನ ಮಗುವನ್ನು ರಾಷ್ಟ್ರ ಪ್ರೇಮಿಯನ್ನಾಗಿ ಮಾಡುವ ಅದ್ಭುತ ಕೆಲಸವೇ ರಾಷ್ಟ್ರೀಯತೆಯನ್ನು ಆಚರಿಸುವುದು. ಮುಂದೆ ಅದೇ ಮಗು ಶಾಲೆಗೇ ಸೇರಿದ ಮೇಲೆ, ಅಲ್ಲಿ ಪಾಠ ಮಾಡುವ ಶಿಕ್ಷಕ ಶಿಕ್ಷಕಿಯರು ಮಕ್ಕಳಲ್ಲಿ ದೇಶ ಭಕ್ತಿಯನ್ನು, ಅಭಿಮಾನವನ್ನು ತುಂಬುವ ಕೆಲಸ ಮಾಡುವುದು ರಾಷ್ಟ್ರಾಭಿಮಾನ. ಪವಿತ್ರವಾದ ವಿದ್ಯಾದಾನದ ಕೆಲಸ ಸರಿಯಾದ ದಿಕ್ಕಿನಲ್ಲಿ ಆದಲ್ಲಿ, ಅಂತಹ ಶಾಲೆಗಳಲ್ಲಿ ಕಲಿತ ಮಕ್ಕಳು ದೇಶ ದ್ರೋಹದ ಕೆಲಸಗಳಾದ ಕಳ್ಳತನ, ಕೊಲೆ, ಸುಲಿಗೆ ಮುಂತಾದ ಚಟುವಟಿಕೆಗಳಿಗೆ ಖಂಡಿತಾ ಮುಂದಾಗುವುದಿಲ್ಲ.

ಮುಗ್ಧ ಮನಸುಗಳಲ್ಲಿ ಜಾತೀಯತೆಯ, ಧರ್ಮಾಂಧತೆಯ ದೇಶ ವಿರೋಧಿ ಭಾವನೆಗಳನ್ನು ತುಂಬುವ ಶಿಕ್ಷಣ ವ್ಯವಸ್ಥೆಯ ಅಡಿಯಲ್ಲಿ ಕಲಿತಾಗ ಅಲ್ಲಿನ ಮಕ್ಕಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ಮುಳುಗುವುದು ಹೆಚ್ಚು. ಅಂಥದಕ್ಕೆ ಆಸ್ಪದ ಕೊಡದೇ, ಸರಿಯಾದ ದಾರಿಯಲ್ಲಿ ಕಲಿಸುವ ಗುರುವೃಂದ ಕೂಡ ರಾಷ್ಟ್ರೀಯತೆ
ಯನ್ನು ದೇಶ ಭಕ್ತ ವಿದ್ಯಾರ್ಥಿಗಳನ್ನು ರೂಪಿಸುವುದರ ಮೂಲಕ ಆಚರಿಸಬಹುದಾಗಿದೆ.

ಒಳ್ಳೆಯ ವಿದ್ಯೆಯನ್ನು, ಸಂಸ್ಕಾರವನ್ನು ಕಲಿತ ಆ ಮಗು ಮುಂದೆ ಬೆಳೆದು ದೇಶದ ನಾಗರಿಕನಾಗಿ ಬೆಳೆದಾಗ, ದಿನ ನಿತ್ಯದ ವ್ಯವಹಾರಗಳಲ್ಲಿ ಕೂಡ ರಾಷ್ಟ್ರೀಯ ವಾದಿ ಆಗಿಯೇ ಬದುಕಬಹುದು. ನಿತ್ಯ ನಮ್ಮ ನಡುವೆ ಸೇವೆಯಲ್ಲಿ ನಿರತ ಆಗಿರುವ ಪೌರ ಕಾರ್ಮಿಕರು ನಮ್ಮ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ದೇಶ ಭಕ್ತಿಯ, ಅಭಿಮಾನದ ವಿಷಯವೇ ಆಗಿದೆ. ಮಾಡುವ ಉದ್ಯೋಗ- ವ್ಯಾಪಾರ ಆಗಿದ್ದರೆ, ಸುಳ್ಳು ಲೆಕ್ಕಗಳನ್ನು ತೋರಿಸದೇ, ಸರಿಯಾದ ತೆರಿಗೆ ಕಟ್ಟುವುದು ದೇಶಾಭಿಮಾನದ ಸಂಕೇತ.

ತಾನು ಅತ್ಯಂತ ಶ್ರೀಮಂತ ಆಗಿದ್ದಾಗ ಕೂಡ , ಕೇವಲ ಜಾತಿಯ ಆಧಾರದಲ್ಲಿ ಸರಕಾರದ ಸವಲತ್ತುಗಳನ್ನು ತಾನೂ ಪಡೆಯದೇ, ಮಕ್ಕಳನ್ನೂ ಸ್ವಾವಲಂಬಿ ಗಳನ್ನಾಗಿ ಮಾಡಿ, ದೇಶದ ತೆರಿಗೆದಾರರ ಹಣ ತನಗಿಂತ ಹೆಚ್ಚು ಅವಶ್ಯ ಇರುವ ಬಡವರಿಗೆ ಸಿಗಲು ಅವಕಾಶ ಮಾಡಿಕೊಡುವುದು ದೇಶದ ಬಗೆಗಿನ ಪ್ರೀತಿಯ ಪ್ರತೀಕ. ವೈದ್ಯರುಗಳು ಅತ್ಯಂತ ಪ್ರಾಮಾಣಿಕವಾಗಿ, ಮತಾಂತರದಂತಹ ಆಮಿಷಗಳನ್ನು ಒಡ್ಡದೇ ಚಿಕಿತ್ಸೆ ನೀಡುವುದು ದೇಶಕ್ಕೆ ಸಲ್ಲಿಸುವ ಸೇವೆಯಲ್ಲವಾ. ವಕೀಲರು ಸತ್ಯದ ಪರವಾಗಿ ಮಾಡುವ ವಾದ, ವಿಜ್ಞಾನಿಗಳು ಮಾಡುವ ಹೊಸ ಸಂಶೋಧನೆಗಳಿಂದ ದೇಶಕ್ಕೆ ಬರುವ ಕೀರ್ತಿ, ತಂತ್ರಜ್ಞರು ಬೆಳೆಸುವ ಹೊಸ
ತಂತ್ರಜ್ಞಾನಗಳು, ಹೀಗೆ ಪ್ರತಿಯೊಬ್ಬ ಪ್ರಜೆ ಕೂಡ ತಾನು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ , ಯಾರಿಗೂ ಮೋಸ ಮಾಡದೆ ತನ್ನ ಜೀವನವನ್ನು ನಡೆಸಿದಲ್ಲಿ ಅದು ಕೂಡ ದೇಶ ಕಟ್ಟುವ ಕೆಲಸವೇ ಹೌದು.

ಅನಗತ್ಯವಾಗಿ ವಿದೇಶಿ ವಸ್ತುಗಳನ್ನು ಬಳಸದೇ, ದೇಶದ ಉತ್ಪನ್ನಗಳನ್ನು ಬಳಸಿ, ವಿದೇಶಿ ವಿನಿಮಯವನ್ನು ಉಳಿಸುವುದು, ಸ್ವಂತಕ್ಕೆ ಮಾತ್ರ ಅಲ್ಲ, ದೇಶದ ಆರ್ಥಿಕ ವ್ಯವಸ್ಥೆಗೂ ಒಳ್ಳೆಯದೇ. ಒಂದು ವೇಳೆ ಉದ್ಯಮಿ ಆಗಿದ್ದಲ್ಲಿ, ಹೆಚ್ಚು ಹೆಚ್ಚು ರಫ್ತುಗಳನ್ನು ಮಾಡಿ, ದೇಶದ ಆರ್ಥಿಕತೆಗೆ ಬಲ ತುಂಬುವುದು ಕೂಡ ದೇಶವನ್ನು ಬೆಳೆಸುವ ಕೆಲಸವೇ ಹೌದು. ಸಾಮಾನ್ಯ ನಾಗರಿಕರಾದ ನಮ್ಮಂಥವರು, ದೇಶದ ಸೈನಿಕರ ರೀತಿಯ ಸ್ವಾರ್ಥ ರಹಿತ ಜೀವನವನ್ನು, ಜೀವವನ್ನು
ದೇಶಕ್ಕೆ ಮುಡಿಪಿಟ್ಟ ಜೀವನವನ್ನು ಮಾಡುವುದಿಲ್ಲ. ಅದರ ಬದಲಿಗೆ, ನಮ್ಮಿಂದ ಸಾಧ್ಯವಿರುವ ಜೀವನ ಶೈಲಿಯಿಂದಲೇ ದೇಶವನ್ನು ಕಟ್ಟುವ ಕಾರ್ಯ, ದೇಶಾಭಿಮಾನ ಮೆರೆಯುವ ಕಾಳಜಿ ಸಾಧ್ಯವಿದೆ.

ಇವುಗಳೆಲ್ಲ ಕೆಲವೊಂದು ಉದಾಹರಣೆಗಳು ಮಾತ್ರ. ಹೀಗೆ ನೋಡುತ್ತಾ ಹೋದಲ್ಲಿ ಅದೆಷ್ಟೋ ಇಂತಹ ಉದಾಹರಣೆಗಳು ನಮ್ಮ ಜೀವಿತದ ಪ್ರತಿ ಹೆಜ್ಜೆಗೆ, ಪ್ರತಿ ಕ್ಷಣಕ್ಕೆ ಸಿಗುತ್ತವೆ. ಹೀಗಿರುವಾಗ ರಾಷ್ಟ್ರಾಭಿಮಾನ, ದೇಶ ಭಕ್ತಿ ಅಂದಕೂಡಲೇ ಒಂದು ಧರ್ಮವನ್ನು ಗಂಟು ಹಾಕಿ ನೋಡುವ, ಒಂದು ರಾಜಕೀಯ ಪಕ್ಷಕ್ಕೆ ಮೀಸಲಿಡುವ ರಾಜಕೀಯ ದುರುದ್ದೇಶದ ವಿಚಿತ್ರ ಚಿಂತನೆಗಳಿಗೆ ಯಾವ ಅರ್ಥವೂ ಇಲ್ಲ. ಎಲ್ಲರೂ ತಮ್ಮಿಂದಾದ ದೇಶ ಸೇವೆಯನ್ನು, ಯಾರು ಏನೇ ಹೇಳಿದರೂ ಪ್ರಾಮಾಣಿಕವಾಗಿ ಮಾಡುತ್ತಾ ಹೋದಾಗ ಭಾರತ ವಿಶ್ವಗುರು ಆಗುವುದನ್ನು ತಡೆಯುವುದಕ್ಕೆ ಯಾರಿಂದಲೂ ಆಗುವುದಿಲ್ಲ