Friday, 13th December 2024

ರಾಷ್ಟ್ರ ನಿರ್ಮಾಣದ ಸಂಕಲ್ಪ ಯಾತ್ರೆಗೆ ಕೈ ಜೋಡಿಸೋಣ

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ನೇರ ಹಣ ವರ್ಗಾವಣೆ’ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್- ಡಿಬಿಟಿ) ವ್ಯವಸ್ಥೆಯು ಆಧುನಿಕ ಭಾರತದ ಇತಿಹಾಸದಲ್ಲೇ ಬಹುದೊಡ್ಡ ಸಾಮಾಜಿಕ, ಆರ್ಥಿಕ ಕ್ರಾಂತಿಯಾಗಿದೆ ಎಂದಿರುವ ಬಹುತೇಕ ಮುಂದುವರಿದ ರಾಷ್ಟ್ರಗಳು, ಈ ಯೋಜನೆಯನ್ನು ಮತ್ತು ಅದರ ಪ್ರವರ್ತಕ ನರೇಂದ್ರ ಮೋದಿಯವರನ್ನು
ಹಾಡಿಹೊಗಳುತ್ತಿವೆ. ಈ ಹಿಂದೆ ಜನಸಾಮಾನ್ಯ ತನಗೆ ದಕ್ಕಬೇಕಾದ ಅಥವಾ ಅರ್ಹ ಯೋಜನೆಯ ಫಲ ಪಡೆಯಲು ಜಿಲ್ಲಾಧಿಕಾರಿಗಳ/ತಾಲೂಕು ಕಚೇರಿಗೆ ಚಪ್ಪಲಿ ಸವೆಸಬೇಕಿತ್ತು.

ಅಂದರೆ ಅರ್ಹ ಯೋಜನೆಯೊಂದರ ಫಲಾನುಭವಿಯಾದರೂ ಅದರ ಹಣಕ್ಕಾಗಿ ಮತ್ತೂ ಅಲೆದಾಡಬೇಕಾದ ಪರಿಸ್ಥಿತಿ. ನಮ್ಮ ಕಡೆ, ‘ಬೊಡ್ಡುಗತ್ತಿ ಯನ್ನು ಹಿಡಿದು ಕೆಲಸಕ್ಕೆ ನಿಂತಂತೆ’ ಎಂಬುದೊಂದು ಮಾತಿದೆ! ಅಂದರೆ ಮಾಡಿದ ಕೆಲಸವನ್ನು ಮಾಡುತ್ತಲೇ ಇರುವುದು, ಕೆಲಸ ಮಾತ್ರ ಎಂಥದೂ ಆಗುವುದಿಲ್ಲ. ಆ ಬೊಡ್ಡುಗತ್ತಿಯನ್ನು ಮಸೆದು ಕೆಲಸಕ್ಕೆ ನಿಂತರೆ ಮಾತ್ರವೇ ಅದರ ಪರಿಣಾಮ ಕಾಣಬರುತ್ತದೆ. ಆದರೆ ನಮ್ಮಲ್ಲಿ ಹಾಗಾಗದೆ, ಜನರು ಅದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಹೆಣಗಾಡಬೇಕಾದ ಪರಿಸ್ಥಿತಿಯಿತ್ತು. ಜತೆಗೆ, ಹಣ ಪೂರ್ತಿಯಾಗಿ ಬಂದಿದೆಯೋ ಇಲ್ಲವೋ? ಎಂಬಿತ್ಯಾದಿ ಸಮಸ್ಯೆಗಳ ಗೋಜು ಗೊಂಚಲು ಇತ್ತು. ಇದೆಲ್ಲವನ್ನೂ ಒಂದೇ ಏಟಿಗೆ ಹೊಡೆದು ಹಾಕುವಂತೆ ಮೋದಿಯವರು ತಂದಿದ್ದು ‘ಡಿಬಿಟಿ ಯೋಜನೆ’.

ಇದರನ್ವಯ, ಯಾವುದೇ ಭ್ರಷ್ಟತೆ ಇಲ್ಲದೆ ಫಲಾನುಭವಿಯ ಖಾತೆಗೆ ನೇರವಾಗಿ ಜಮೆಯಾಗುವ ಹಣವು, ಆತನ ಬದುಕಿಗೆ ಬಹುದೊಡ್ಡ ಆಸರೆಯಾಗಿ ಪರಿಣಮಿಸುತ್ತದೆ. ಇದರೊಟ್ಟಿಗೆ, ಆಳುವ ಸರಕಾರ ಮತ್ತು ಅದರ ಯೋಜನೆಗಳು ಜನಸಾಮಾನ್ಯರ ಬಳಿಯೇ ಬರುವುದು, ಸರಕಾರದ ಮತ್ತು ಜನರು ಚುನಾಯಿಸಿದ ವ್ಯವಸ್ಥೆಯ ಕಾರ್ಯಸಫಲತೆಯ ಸಂಕೇತವಾಗಿದೆ. ಇದೀಗ ಫಲಾನುಭವಿಯು ಯಾವುದೇ ಮಧ್ಯವರ್ತಿ, ತಾರತಮ್ಯದ ತೊಂದರೆಯಿಲ್ಲದೆ ಆಧುನಿಕ ತಂತ್ರಜ್ಞಾನದ ಮೂಲಕ ಅರ್ಜಿ ಸಲ್ಲಿಸಿ, ಅರ್ಹ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

ಇದು ಮೋದಿ ಸರಕಾರದ ಮತ್ತೊಂದು ಡಿಜಿಟಲ್ ಕ್ರಾಂತಿಯೇ ಸರಿ. ಜನರಿಗೆ ಅವಶ್ಯವಿರುವ ವಿವಿಧ ಯೋಜನೆಗಳ ಪರಿಚಯ ಮತ್ತು ಅವನ್ನು ಪಡೆಯುವ ಬಗೆಯ ಕುರಿತು ಸಮಗ್ರವಾಗಿ ಮಾಹಿತಿ ಒದಗಿಸುವ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಎಂಬ ಜನಸಂಪರ್ಕ ಸಭೆಯನ್ನು ಕೇಂದ್ರ ಸರಕಾರ
ಹಮ್ಮಿಕೊಂಡಿದೆ. ಬಿರ್ಸಾ ಮುಂಡಾ (೧೮೭೫ ನವೆಂಬರ್ ೧೫-೧೯೦೦ ಜೂನ್ ೯) ಭಾರತೀಯ ಮುಂಡಾ ಬುಡಕಟ್ಟು ಜನಾಂಗಕ್ಕೆ ಸೇರಿದ ಒಬ್ಬ ಜಾನಪದ ಗಾಯಕರು. ಊರೂರು ಸುತ್ತುತ್ತ, ಜಾನಪದ ಗೀತೆ, ಗೊಂದಲೀ ಹಾಡುಗಳನ್ನು ಹಾಡುತ್ತ ಬದುಕು ಸಾಗಿಸುವ ಸಮುದಾಯಕ್ಕೆ ಸೇರಿದ್ದ ಇವರು ೧೯ನೇ ಶತಮಾನದ ಕೊನೆಯಲ್ಲಿ ಬ್ರಿಟಿಷ್ ರಾಜ್ ವಿರುದ್ಧ ದಂಗೆಯೆದ್ದರು.

ಈ ಮೂಲಕ, ಮಿಷನರಿಗಳ ಶಿಕ್ಷಣದ ರಭಸಕ್ಕೆ ಬುಡಕಟ್ಟು ಸಮುದಾಯಗಳು, ಸಂಸ್ಕೃತಿ-ಆಚರಣೆಗಳು ಅಳಿಸಿಹೋಗುತ್ತಿವೆಯೆಂದು ತಮ್ಮ ಜನರಿಗೆ ಮನವರಿಕೆ ಮಾಡಿಕೊಟ್ಟು, ತಮ್ಮತನದ ಉಳಿಕೆಗಾಗಿ ಮೊದಲ ಬಾರಿಗೆ ಸಂಘಟಿತ ಹೋರಾಟಕ್ಕೆ ಧುಮುಕಿದ ವೀರನಾಯಕ ಇವರು. ಈ ಮೂಲಕ ‘ಬಿರ್ಸೇಟ್’ ಎಂಬ ವಿಚಾರವಂತ ಗುಂಪನ್ನು ಹುಟ್ಟುಹಾಕಿ, ಮುಂಡಾ ಮತ್ತು ಓರಾನ್ ಎಂಬ ಆದಿವಾಸಿಗಳ ಅಸ್ತಿತ್ವಕ್ಕಾಗಿ, ಈ ನೆಲದ ವಾಸಿಗಳ ಸಂಸ್ಕೃತಿ, ಬದುಕನ್ನು ಕಾಪಿಡುವ ರಕ್ತಕ್ರಾಂತಿಯ ಕಾರಣಕ್ಕೆ ದೇಶದ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಚಿರಸ್ಥಾಯಿಯಾದವರು.

ಆದಿವಾಸಿ ಕ್ರಾಂತಿನಾಯಕ ಬಿರ್ಸಾ ಮುಂಡಾ ಹೋರಾಟದ ಗೌರವಾರ್ಥ ಮೋದಿ ಸರಕಾರವು ಅವರ ಜನ್ಮದಿನವನ್ನು ‘ಜನಜಾತೀಯ ದಿವಸ’ ಎಂದೂ, ‘ಟ್ರೈಬಲ್ ಪ್ರೈಡ್ ಡೇ’ ಎಂದೂ ದೇಶಾದ್ಯಂತ ಆಚರಿಸಲು ಘೋಷಿಸಿತು. ವಿವಿಧ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಲು, ಪರಿಪೂರ್ಣತೆಯನ್ನು ಸಾಽಸಲು, ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು, ಬಿರ್ಸಾ ಮುಂಡಾ ಜನ್ಮ ತಳೆದ ಜಾರ್ಖಂಡ್
ರಾಜ್ಯದ ‘ಖುಂಟಿ’ಯಿಂದಲೇ ಪ್ರಾರಂಭಿಸಲಾಯಿತು; ಪ್ರಧಾನಿ ಮೋದಿಯವರು, ೨೦೨೩ರ ನವೆಂಬರ್ ೧೫ರ ಜನಜಾತೀಯ ದಿನದಂದು ದೇಶಾದ್ಯಂತದ ವಿವಿಧ ಸ್ಥಳಗಳಿಂದ ಏಕಕಾಲದಲ್ಲಿ, ಅನೇಕ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸೌಲಭ್ಯ ಹೊಂದಿದ ವಾಹನಗಳಿಗೆ ಹಸಿರುನಿಶಾನೆ ತೋರುವ ಮೂಲಕ ಈ ಯಾತ್ರೆಗೆ ಚಾಲನೆ ನೀಡಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆಯು ದೇಶಾದ್ಯಂತ ಇದುವರೆಗೂ, ೯,೨೦೦ರಷ್ಟು ನಗರ ಪ್ರದೇಶಗಳು, ೨,೧೬,೫೮೭ಕ್ಕೂ ಹೆಚ್ಚು ಗ್ರಾಮ ಪಂಚಾಯತಿ ಪ್ರದೇಶಗಳ ಮೂಲಕ ಯಶಸ್ವಿಯಾಗಿ ಸಂಚರಿಸುತ್ತಿದೆ. ಈ ಯಾತ್ರೆಯ ಭಾಗವಾಗಿ, ಪಿಎಂ ಉಜ್ವಲ ನೋಂದಣಿ ಯೋಜನೆ, ‘ಮೈ ಭಾರತ್’ ಸ್ವಯಂ ಸೇವಕರ ನೋಂದಣಿ, ಆಯುಷ್ಮಾನ್ ಕಾಡ್ ಗಳ ವಿತರಣೆಯಂಥ ವಿವಿಧ ಸೇವೆಗಳನ್ನು ಕೂಡ ಸ್ಥಳದಲ್ಲೇ ಒದಗಿಸಲಾಗುತ್ತಿದೆ. ಯಾತ್ರೆಯ ಸಮಯದಲ್ಲಿ ಗಮನಾರ್ಹ ಸಂಖ್ಯೆಯ ನಾಗರಿಕರು ಸರಕಾರದ ವಿವಿಧ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ.

ಈ ವೇಳೆ, ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ೯.೪೭ ಲಕ್ಷಕ್ಕೂ ಹೆಚ್ಚು ಜನರಿಗೆ ಅಡುಗೆ ಇಂಧನವನ್ನು ಒದಗಿಸಲಾಗಿದೆ. ಪ್ರತಿ ಕುಟುಂಬಕ್ಕೆ
ವರ್ಷಕ್ಕೆ ೫ ಲಕ್ಷ ರು.ಗಳ ಸಮಗ್ರ ಆರೋಗ್ಯ ರಕ್ಷಣೆ ಖಾತ್ರಿಪಡಿಸುವ ೧.೬೮ ಕೋಟಿ ಆಯುಷ್ಮಾನ್ ಕಾರ್ಡ್‌ಗಳ ವಿತರಣೆ ಮೂಲಕ ಆಯುಷ್ಮಾನ್ ಯೋಜನೆಯನ್ನು ತಲುಪಿಸಲಾಗಿದೆ. ಹಾಗೆಯೇ, ಪ್ರಧಾನಮಂತ್ರಿ ಬಿಮಾ ಸುರಕ್ಷಾ ಯೋಜನೆಯ ಮೂಲಕ ೧೮.೧೫ ಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಅಪಘಾತ ವಿಮೆಯನ್ನು ಒದಗಿಸಲಾಗಿದೆ; ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಪ್ರಯೋಜನಗಳನ್ನು ೧೦.೮೬ ಲಕ್ಷಕ್ಕೂ ಹೆಚ್ಚು ಜನರು ಪಡೆದಿದ್ದಾರೆ. ಈ ಎರಡೂ ಯೋಜನೆಗಳು ದೇಶಾದ್ಯಂತದ ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುತ್ತ, ಭಾರತವನ್ನು ಕಟ್ಟುವಲ್ಲಿ ಪ್ರಮುಖಪಾತ್ರ ವಹಿಸುತ್ತಿವೆ.

‘ಬಡವರ ಕಲ್ಯಾಣ-ದೇಶದ ಕಲ್ಯಾಣ’ ಎಂಬಂತೆ ಮೋದಿ ಸರಕಾರವು ಜನರ ಹಿತಕಾಯುವ, ಅವರನ್ನು ಸದೃಢರನ್ನಾಗಿಸುವ ಯೋಜನೆಗಳನ್ನು ಜನರಿಗೆ ತಲುಪುವಂತೆ ಮಾಡಲು ಅಗತ್ಯ ಕ್ರಮ ಕೈಗೊಂಡಿದೆ. ಪಿಎಂ-ವಿಶ್ವಕರ್ಮ ಯೋಜನೆಗೆ ೧೩,೦೦೦ ಕೋಟಿ ರು. ಹಣವನ್ನು ಮೀಸಲಿಟ್ಟಿದ್ದು, ಅರ್ಹರು ಉಚಿತವಾಗಿ ನೋಂದಣಿಯಾಗುವ ಮೂಲಕ ಯಾವ ಅಡಮಾನವಿಲ್ಲದೆ ೩ ಲಕ್ಷ ರು.ವರೆಗೆ ಸಾಲ ಪಡೆಯಬಹುದಾಗಿದೆ. ಹಾಗೆಯೇ, ಪಿಎಂ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ೧,೪೨೪ ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಆಹಾರವನ್ನು ‘ಒನ್ ನೇಷನ್, ಒನ್ ರೇಷನ್’ ಯೋಜನೆಯಡಿ ಉಚಿತವಾಗಿ ಹಂಚಲಾಗುತ್ತಿದೆ. ತನ್ಮೂಲಕ ಅದು ವಿಶ್ವದಲ್ಲೇ ವಿನೂತನವಾದ ಒಂದು ಯೋಜನೆಯಾಗಿ ಮನ್ನಣೆ ಪಡೆದಿದೆ.

ಹಣಕಾಸು ವಲಯಕ್ಕೆ ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸುವ ಉಪಕ್ರಮವಾಗಿ ಹೊರಹೊಮ್ಮಿದ ಜನಧನ ಖಾತೆ ಯೋಜನೆಯು ಇಲ್ಲಿಯವರೆಗೆ ೫೦ ಕೋಟಿಗೂ ಅಧಿಕ ಖಾತೆದಾರರನ್ನು ಹೊಂದಿದೆ. ಈ ಮೂಲಕ ಕೇಂದ್ರ ಸರಕಾರದ ಯೋಜನೆಗಳ ಭಾಗವಾಗಿ ಡಿಬಿಟಿ ಮೂಲಕ ೩೨.೨೯ ಲಕ್ಷ ಕೋಟಿ ರು. ಹಣವನ್ನು ನೇರವಾಗಿ ಜನರ ಖಾತೆಗೆ ಯಶಸ್ವಿಯಾಗಿ ವರ್ಗಾಯಿಸಲಾಗಿದೆ ಕೂಡ. ಕೃಷಿ ಕ್ಷೇತ್ರದಲ್ಲೂ ಮೋದಿ ಸರಕಾರವು ಅಗತ್ಯ ಸೌಲಭ್ಯಗಳನ್ನು
ಒದಗಿಸುವ ನಿಟ್ಟಿನಲ್ಲಿ ಮಹತ್ತರ ಕಾರ್ಯ ಮಾಡುತ್ತಿದೆ.

ಎಲ್ಲರೂ ಬಾಯಿಮಾತಿನಲ್ಲಿ ‘ರೈತ ಈ ದೇಶದ ಬೆನ್ನೆಲುಬು’ ಅಂತ ಹೇಳಿದ್ದೇ ಬಂತು. ಆದರೆ ಅವಕಾಶ ಸಿಕ್ಕಾಗ, ಆತನ ಬೆನ್ನು ಮುರಿದಿದ್ದಾರೆಯೇ ಹೊರತು ಯಾರೂ ಆತನ ಸಹಾಯಕ್ಕೆ ನಿಂತ ಉದಾಹರಣೆ ಕಡಿಮೆ. ಇತ್ತೀಚಿನ ದಿನಗಳಲ್ಲಿ ಯುವಕರು ಕೂಡ ಕೃಷಿಯತ್ತ ನಿರ್ಲಕ್ಷ್ಯ ತೋರುತ್ತಿದ್ದಾರೆ;
ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ರಸ್ತೆಗೆ ಚೆಲ್ಲುವ ಸ್ಥಿತಿಯಿದೆಯೆಂದು ಅಲವತ್ತುಕೊಳ್ಳುತ್ತಿದ್ದಾರೆ. ‘ಮೋರಿ ಚೊಕ್ಕಮಾಡಲು ಹೊಸ ಉಪಕರಣಗಳು ಬಂದಿವೆ; ನಾವು ರೈತನ ಮಕ್ಕಳು ಮಾತ್ರ ಯಾವೊಂದು ಸಹಾಯವಿಲ್ಲದೆ ಅದೇ ಅಜ್ಜನ ಕಾಲದಲ್ಲಿದ್ದಂತೆ ಉಳುಮೆ ಮಾಡುತ್ತಾ ಸಾಲದ ಸುಳಿಯಲ್ಲಿ ಸಿಕ್ಕಿ ಸಾಯು ವಂತೆ ಮಾಡಲೆಂದೇ ಈ ಸರಕಾರ, ಮಂತ್ರಿ-ಮಹೋದಯರು ಮತ್ತು ಅಧಿಕಾರಿಗಳು, ಬ್ಯಾಂಕುಗಳು ಕಾದು ಕುಳಿತಿರುವಂತಿದೆ’ ಎಂದು ನೊಂದು ಕೊಳ್ಳುವ ಈ ಕಾಲಘಟ್ಟದಲ್ಲಿ, ಇಸ್ರೇಲ್‌ನಂಥ ದೇಶಗಳಲ್ಲಿನ ಆಧುನಿಕ ಉಪಕರಣಗಳ ಬಳಕೆಯ ಕೃಷಿಕಾರ್ಯ ನೋಡಿ, ಅವನ್ನು ಭಾರತದ ರೈತರಿಗೆ ದೊರೆಯು ವಂತೆ ಮಾಡಲು ಮೋದಿ ಸರಕಾರವು ಜಂಟಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು.

ಈಗ, ನಮ್ಮದೇ ರಾಜ್ಯದ ಕೆಲವೆಡೆ ಡ್ರೋನ್‌ಗಳ ಮೂಲಕ ಔಷಧಿ ಸಿಂಪಡಣೆ, ಇತರೆ ಯಂತ್ರಗಳ ಮೂಲಕ ಕೃಷಿಕಾರ್ಯ ನಡೆಯುತ್ತಿದ್ದು ಇದನ್ನು ನಮ್ಮ ರೈತರು, ಯುವಕರು ಬೆರಗುಗಣ್ಣಿನಿಂದ ನೋಡುವಂತಾಗಿದೆ. ಹೀಗೆ ಕೃಷಿಗೆ ವಿಜ್ಞಾನದ ಸಹಕಾರ ದೊರೆತರೆ, ಎಂಥ ಕಠಿಣ ಕಾರ್ಯಗಳನ್ನೂ ಸರಳವಾಗಿ ಒಬ್ಬೊಬ್ಬರೇ ನಿಭಾಯಿಸಿಕೊಂಡು ಹೋಗುವಂತಾದರೆ, ಸಾಮಾನ್ಯ ವ್ಯಕ್ತಿಗೂ ಉಳುಮೆ- ದುಡಿಮೆಯಲ್ಲಿ ಆಸಕ್ತಿ ಉಂಟಾಗುತ್ತದೆ. ಆದ್ದರಿಂದ, ತಂತ್ರ ಜ್ಞಾನ ಆಧಾರಿತ ಕೃಷಿಕಾರ್ಯಗಳನ್ನು ಕೈಗೊಳ್ಳಲು ಆಯಾ ಸರಕಾರಗಳು, ಸಂಬಂಧಿತ ಸ್ಥಳೀಯ ಅಧಿಕಾರಿಗಳು ಗಮನಹರಿಸಬೇಕಿದೆ. ಇದರ ಭಾಗವಾಗಿ ಮೋದಿ ಸರಕಾರವು ಪಿಎಂ ಕಿಸಾನ್, ಫಸಲ್ ಬಿಮಾ, ಸಾಯಿಲ್ ಹೆಲ್ತ್ ಕಾರ್ಡ್, ಕಿಸಾನ್ ಕ್ರೆಡಿಟ್ ಕಾರ್ಡ್, ಪಿಎಂ ಸಿಂಚಾಯಿ, ಪಿಎಂ ಪ್ರಣಾಮ್‌ನಂಥ ಇತರೆ ಯೋಜನೆಗಳನ್ನು ಈ ವಿಕಸಿತ ಯಾತ್ರೆಯ ಮೂಲಕ ಜನರಿಗೆ ತಾರತಮ್ಯವಿಲ್ಲದೆ ತಲುಪಿಸುತ್ತಿರುವುದೂ ಸಾಧನೆಯಾಗಿದೆ.

ಭಾರತವು ಸ್ವತಂತ್ರಗೊಂಡು ೧೦೦ ವರ್ಷ ತಲುಪುವುದರ ಒಳಗೆ ಪೂರ್ಣಮಟ್ಟದಲ್ಲಿ ವಿಕಸಿತಗೊಂಡು ವಿಶ್ವಮಟ್ಟದಲ್ಲಿ ತನ್ನನ್ನು ಗುರುತಿಸಿಕೊಳ್ಳಬೇಕು. ಅದು ನೆರವೇರಲು ಪ್ರತಿಯೊಬ್ಬ ಭಾರತೀಯನೂ ಪರಿಪೂರ್ಣ ರಾಷ್ಟ್ರ ನಿರ್ಮಾಣದ ಸಂಕಲ್ಪಯಾತ್ರೆಗೆ ಕೈಜೋಡಿಸಿ ಯಶಸ್ವಿಗೊಳಿಸಬೇಕು.