ಕಳಕಳಿ
ಮಹಾದೇವ ಬಸರಕೋಡ
ನಾವು ಸಮುದಾಯದ ಹಿತಕ್ಕೆ ಅಗತ್ಯವಾದ ನೂರೆಂಟು ಕ್ರಮಗಳನ್ನು ಕೈಗೊಳ್ಳುವುದು ತೀರಾ ಅಗತ್ಯವಾದರೂ ಅವುಗಳು ಪರಿಸರ ಸಂರಕ್ಷಣೆಯನ್ನು ಕೂಡ
ಜತೆಜತೆಗೆ ಸರಿದೂಗಿಸಿಕೊಂಡು ಹೋಗುವಂತಿರಬೇಕು. ಸಾಧ್ಯವಾದಷ್ಟು ನಿಸರ್ಗವನ್ನು ಕದಲಿಸದೇ ಅದರ ಜತೆಗೆ ಬದುಕುವ ಕ್ರಮ ನಮ್ಮದಾಗಿರಬೇಕು.
ಅಭಿವೃದ್ಧಿಶೀಲತೆಯ ನೆಪದಲ್ಲಿ ನಿರಂತರ ವಾಗಿ ನಡೆಯುತ್ತಿರುವ ಪರಿಸರ ನಾಶದ ತಲ್ಲಣಗಳು ಬಹುತೇಕರನ್ನು ಇನ್ನೂ ಧೃತಿಗೆಡಿಸದೆ ಇರುವುದು ನಮ್ಮ ಕಾಲಘಟ್ಟದ ಆಶ್ಚರ್ಯಕರ ಸಂಗತಿಗಳಲ್ಲೊಂದು. ಭೂಮಿಯನ್ನು ಕೇವಲ ನಮ್ಮ ಉಪಭೋಗದ ವಸ್ತು ಎನ್ನುವ ನಮ್ಮ ಪ್ರಾಯೋಜನಿಕ ಬುದ್ಧಿಯ ಕಾರಣದಿಂದಾಗಿ ನೆಲದ ಜೀವಧಾತುಗಳೆನಿಸಿದ ಅರಣ್ಯ, ಜಲ, ಸಸ್ಯ ಸಂಪತ್ತಿನ ಮೇಲೆ ಅತ್ಯಾಚಾರವೆಸಗುತ್ತಿದ್ದೇವೆ.
ನಿಸರ್ಗದ ಸಮತೋಲನವೆಲ್ಲ ಏರುಪೇರಾಗಿದೆ. ನಮ್ಮದೇ ಆದ ಸ್ವಯಂಕೃತ ಅಪರಾಧಗಳಿಂದಾಗಿ ಆಗಾಗ ತಲೆದೋರುತ್ತಲೇ ಇರುವ ಬರಗಾಲದ ಕಾರಣ ದಿಂದಾಗಿ ಜೀವ ಸಂಕುಲಕ್ಕೆ ಅಮೃತಸಮಾನವಾದ ನೀರಿನ ಕೊರತೆಯುಂಟಾಗುತ್ತಲೇ ಇರುತ್ತದೆ. ಮತ್ತೊಮ್ಮೆ, ಈ ವರ್ಷವೂ ಅಂತಹುದೇ ಗಂಡಾಂತರವನ್ನು ಎದುರುಗೊಂಡಿದ್ದೇವೆ. ಜನರು ಇನಿಲ್ಲದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳು ದಿಕ್ಕುತೋಚದ ಸ್ಥಿತಿಯಲ್ಲಿ ಸಿಲುಕಿವೆ. ಪಶು ಪಕ್ಷಿಗಳು, ವನ್ಯ ಮೃಗಗಳು ಕಂಗೆಟ್ಟಿವೆ. ರೈತರೂ ಸೇರಿದಂತೆ ಇತರ ಜನ ಸಾಮಾನ್ಯರು ಆದಾಯದ ಮಾರ್ಗಗಳನ್ನು ಕಳೆದುಕೊಂಡು ಗುಳೆ ಹೋಗುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳು ಭಣಭಣ ಎನ್ನುತ್ತಿರುವುದರ ಜತೆಗೆ ವಯೋವೃದ್ಧರು ಮಾತ್ರ ಅಲ್ಲಿ ಉಳಿದು ಅವರ ಅಸಹಾಯಕ ಆರ್ತನಾದವೂ ಕೇಳುತ್ತಿದೆ. ಕೃಷಿ
ಸಂಬಂಽತ ಚಟುವಟಿಕೆಗಳೆಲ್ಲ ಸ್ತಬ್ಧಗೊಂಡ ಕಾರಣಕ್ಕಾಗಿ ರೈತರು ತಮ್ಮ ಜೀವದಂತೆ ಕಾಪಿಟ್ಟುಕೊಂಡು ಬಂದ ದನಕರುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಹೈನುಗಾರಿಕೆ ಕೂಡ ನಿಂತುಹೋಗಿದೆ. ಗ್ರಾಮೀಣ ಪ್ರದೇಶದ ಜನಜೀವನ ಅಕ್ಷರಶಃ ನಿಶ್ಶಬ್ದಗೊಳ್ಳುವತ್ತ ಸಾಗುತ್ತಿದೆ. ಜೀವಸಂಕುಲದ ಬಹುದೊಡ್ಡ ಆಸರೆ
ಯಾಗಿ ಸಜೀವಿ ಪ್ರಪಂಚವನ್ನು ಸಲುಹುತ್ತಿದ್ದ ಬಹು ತೇಕ ಕೆರೆಗಳೂ ಭೂಮಾಫಿಯಾಗಳಿಗೆ ಬಲಿಯಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ. ಇನ್ನು, ಅರಣ್ಯ
ಪ್ರದೇಶಕ್ಕೆ ಹೊಂದಿಕೊಂಡಿದ್ದ ಕೆಲವು ಕೆರೆಗಳ ಕೂಡ ಬತ್ತಿಹೋಗುತ್ತಿವೆ. ಈ ಕಾರಣದಿಂದಾಗಿ ವನ್ಯಜೀವಿ ಗಳು ನೀರಿಗಾಗಿ ತತ್ತರಿಸುತ್ತಿವೆ. ಒಟ್ಟಿನಲ್ಲಿ ನಮ್ಮದೇ
ತಪ್ಪಿನಿಂದಾಗಿ ತೀರಾ ಸಂಕಷ್ಟದ ಸ್ಥಿತಿಯನ್ನು ನಾವೇ ತಂದುಕೊಂಡಿದ್ದೇವೆ.
‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಟ ರಂತೆ’ ಎನ್ನುವ ಗಾದೆಮಾತಿನಂತೆ, ಬರಗಾಲ ಉಂಟಾದಾಗ ಮತ್ತು ನೀರಿನ ತೀವ್ರ ಅಭಾವ ಸೃಷ್ಟಿಯಾದಾಗ ಆಗ ಅಸ್ತಿತ್ವದಲ್ಲಿರುವ ಎಲ್ಲ ಆಡಳಿತ ವ್ಯವಸ್ಥೆಗಳು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತವೆ. ಈ ವರ್ಷ ಮತ್ತೊಮ್ಮೆ ಬೇಸಗೆಯ ಪ್ರಾರಂಭಿಕ ಕಾಲಘಟ್ಟದಲ್ಲಿಯೇ ಬಹುತೇಕ ಸ್ಥಳಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಕಾಣಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಸರಕಾರಗಳು ಸಮರೋ ಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿವೆ.
ಸಮಸ್ಯೆಯ ಪರಿಹಾರಕ್ಕೆ ಮೀಸಲಾಗಿಟ್ಟಿರುವ ಹಣವನ್ನು ಬಳಸಿಕೊಂಡು ಅಗತ್ಯವಿರುವ ಬಹುತೇಕ ಸ್ಥಳಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಪ್ರಾರಂಭಿಸಿವೆ. ಅಂತರ್ಜಲದ ಮಟ್ಟದಲ್ಲಿ ತೀರಾ ಕುಸಿತ ಕಂಡಿರುವ ಕಾರಣ ಆ ಕಾರ್ಯ ನಿರೀಕ್ಷಿಸಿದಷ್ಟು ಸ-ಲತೆಯನ್ನು ಕಾಣುತ್ತಿಲ್ಲ. ಎಂದಿನಂತೆ ಮಳೆಯ ನೀರಿನ ಸಂಗ್ರಹಕ್ಕೆ ಆದ್ಯತೆಯನ್ನು ನೀಡಲು ಮುಂದಾಗಿದೆ. ಜಲಸರಂಕ್ಷಣೆಯ ಜಾಗೃತಿ ಯನ್ನು ಮೂಡಿಸುವ ಪ್ರಯತ್ನಗಳು ಕೂಡ ಕಾಣಸಿಗುತ್ತಿವೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ
ಹೋಗಿ, ವಿಜ್ಞಾನಿಗಳು ಆಧುನಿಕ ತಂತ್ರಜ್ಞಾನದ ಬಳಕೆಯ ನೆರವಿನಿಂದ, ನೀರಿನ ಕೊರತೆಯುಂಟಾಗ ದಂತೆ ತೀವ್ರ ಪರಿಹಾರದ ಪ್ರಯತ್ನದಲ್ಲಿ ತೊಡಗಿದ್ದಾರೆ. ತನ್ಮೂಲಕ, ತಾತ್ಕಾಲಿಕವಾಗಿ ಯಾದರೂ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ. ಅಂಥ ಹಲವು ಪ್ರಯತ್ನಗಳಲ್ಲಿ ಮೋಡಬಿತ್ತನೆ, ವಾಯುಮಂಡಲದಲ್ಲಿರುವ ಗಾಳಿಯನ್ನು ಹೀರಿಕೊಂಡು ನೇರವಾಗಿ ನೀರು ಉತ್ಪಾದಿಸುವುದು ಮಾತ್ರವಲ್ಲದೆ ಇನ್ನೂ ಹತ್ತು ಹಲವು ಕ್ರಮಗಳು ಸೇರಿವೆ.
೨೦೦೫ರಲ್ಲಿಯೇ ಪ್ರಯೋಗಿಸಿದ, ಮುಂಬೈ ಮೂಲದ ವಾಟರ್ ಮೇಕರ್ ಜಲೋತ್ಪಾದಕ ಯಂತ್ರಗಳ ಮಾದರಿಗಳನ್ನು ಅನುಸರಿಸುವ ಮೂಲಕ ವಾಯು ಮಂಡಲದಲ್ಲಿ ಗಾಳಿಯನ್ನು ಹೀರಿಕೊಂಡು ನೇರವಾಗಿ ನೀರನ್ನು ಉತ್ಪಾದಿಸುವ ಯಂತ್ರಗಳನ್ನು ಅಳವಡಿಸಿಕೊಳ್ಳುವ ವಿನೂತನ ಕ್ರಮಗಳನ್ನು ಕೂಡ ಅಲ್ಲಲ್ಲಿ ಕೈಗೊಂಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಈಗಾಗಲೇ ಚೆನ್ನೈ ನಗರ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಲಡಾಕ್ ಗಡಿ ಪ್ರದೇಶ
ಗಳು ಸೇರಿದಂತೆ ಬೆಂಗಳೂರಿನ ಅನೇಕ ತಾರಾ ಹೋಟೆಲ್‌ಗಳಲ್ಲಿ ಇಂಥ ಕ್ರಮಗಳು ಜಾರಿಯಲ್ಲಿವೆ.
ವಿಜ್ಞಾನಿಗಳ ಈ ಬಗೆಯ ಪ್ರಯೋಗಗಳು ನಮ್ಮ ಪುರಾಣದ ಕಥೆಗಳಲ್ಲಿ ಕಂಡುಬರುವ ಭಗೀರಥನನ್ನು ನೆನಪಿಸುತ್ತದೆ. ತನ್ನನ್ನು ಒಲಿಸಿಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾದ ಭಗೀರಥನಿಗೆ ಗಂಗೆಯು, ‘ನಾನು ಸ್ವರ್ಗ ದಿಂದ ಭೂಮಿಗೆ ಒಂದೊಮ್ಮೆ ಇಳಿದು ಬಂದರೆ ನನ್ನ ಪತನದ ಬಲವನ್ನು ಭೂಮಿಯು ಸಹಿಕೊಳ್ಳುವುದು
ತುಂಬಾ ಕಷ್ಟದ ಕೆಲಸ’ ಎನ್ನುತ್ತಾಳೆ. ‘ಹಾಗಿದ್ದಲ್ಲಿ ಮಾರ್ಗೋಪಾಯವೇನು?’ ಎಂದು ಮತ್ತೆ ಭಗೀರಥ ಗಂಗೆಯಲ್ಲಿ ಕೇಳಿದಾಗ, ‘ಇದು ಪರಶಿವನಿಂದ ಮಾತ್ರವೇ ಸಾಧ್ಯವಾಗಬಲ್ಲದು. ಅವನನ್ನು ನೀನು ಒಲಿಸಿಕೊಳ್ಳದೆ ಅನ್ಯಮಾರ್ಗವಿಲ್ಲ’ ಎಂದು ಹೇಳುತ್ತಾಳೆ. ಅವಳ ಮಾತಿನಂತೆ ಶಿವನನ್ನು ಒಲಿಸಿಕೊಳ್ಳಲು, ಒಂದಷ್ಟು ಪಟ್ಟು ಸಡಿಲಿಸದೇ ಸಹಸ್ರ ವರುಷಗಳ ಕಾಲ ಭಗೀರಥ ತಪಸ್ಸು ಮಾಡುತ್ತಾನೆ.
ಸಾಕಷ್ಟು ಸಂಕಟ, ನೋವು, ಪರೀಕ್ಷೆಗಳನ್ನೆಲ್ಲ ದಿಟ್ಟತನ ದಿಂದ ಸಹಿಸಿಕೊಳ್ಳುತ್ತಾನೆ. ಆದರೂ ತನ್ನ ಗುರಿ ಯಿಂದ ಒಂದಷ್ಟೂ ವಿಚಲಿತನಾಗದೆ ತಪಸ್ಸು
ಮುಂದುವರಿಸುತ್ತಾನೆ. ತನ್ನ ತಪೋಕಾರ್ಯದಲ್ಲಿ ಕೊನೆಗೊಮ್ಮೆ ಯಶಸ್ಸು ಕಾಣುತ್ತಾನೆ. ಜಟೆಯ ಮೂಲಕ ಹರಿಯುವುದಕ್ಕೆ ಗಂಗೆಗೆ ಅನುವು ಮಾಡಿ
ಕೊಡುವಂತೆ ಶಿವನನ್ನು ಯಾಚಿಸುತ್ತಾನೆ. ಅನ್ಯಮಾರ್ಗ ಕಾಣದೆ ಭಕ್ತಪ್ರಿಯ ಶಿವ ಅವನಿಗೆ ತಥಾಸ್ತು ಎನ್ನುತ್ತಾನೆ. ಗಂಗೆಯ ತೊರೆಯ ಪತನದ ಪ್ರಭಾವಕ್ಕೆ ಒಂದಿನಿತೂ ಅಲುಗಾಡದೆ ತನ್ನ ಸ್ಥಾನದಲ್ಲಿ ಗಟ್ಟಿಯಾಗಿ ನಿಲ್ಲುತ್ತಾನೆ ಶಿವ. ಗಂಗೆಯು ಶಿವನ ಜಡೆಯ ಕೂದಲಿನಿಂದ ಸಹಸ್ರ ಸಹಸ್ರ ವರ್ಷಗಳ ಕಾಲ ಹರಿಯುತ್ತಾಳೆ. ಇದನ್ನೇ ಭಗೀರಥ ಪ್ರಯತ್ನ ಎನ್ನುತ್ತಾರೆ. ಅಂದೊಮ್ಮೆ ನೀರಿನ ಕೊರತೆಯುಂಟಾದಾಗ ತನ್ನ ಅವಿರತ ಪರಿಶ್ರಮದಿಂದ ಭಗೀರಥ ನೀರಿನ ಅಭಾವವನ್ನು ನೀಗುತ್ತಾನೆ ಎಂಬ ಕಥೆ ನಮಗೆಲ್ಲ ತೀರಾ ಪರಿಚಿತವೇ.
ಗಂಗೆ ನೇರವಾಗಿ ಭೂಮಿಗೆ ಇಳಿದರೆ ಆಕೆಯ ಪತನಶಕ್ತಿಯನ್ನು ಭೂಮಿಯು ಸಹಿಸಿಕೊಳ್ಳಲಾರದು ಎಂಬ ಎಚ್ಚರಿಕೆಗೆ ಭಗೀರಥ ಶಿವನನ್ನು ಒಲಿಸಿಕೊಂಡು ಭೂಮಿಗೆ ಯಾವುದೇ ತೊಂದರೆಯಾಗದಂತೆ ಉಪಕ್ರಮ ಕೈಗೊಳ್ಳುವುದನ್ನು ನಾವು ತೀವ್ರವಾಗಿ ಗಮನಿಸಬೇಕಿದೆ. ಆದರೆ ನಮ್ಮ ಇಂದಿನ ಬಹುತೇಕ ಪ್ರಯತ್ನ
ಗಳು ಕೇವಲ ತಾತ್ಕಾಲಿಕವಾಗಿ ಯೋಚಿಸುವುದರ ಫಲವಾಗಿ ಜಾರಿಗೊಳ್ಳುತ್ತವೆಯೇ ವಿನಾ, ಮುಂದಾಗುವ ದುಷ್ಪರಿಣಾಮಗಳ ಕುರಿತಾಗಿ ನಾವು ಅಷ್ಟಾಗಿ
ಯೋಚಿಸುವುದೇ ಇಲ್ಲ. ಇದು ಇಂದಿನ ಬಹುತೇಕ ಅವಘಡಗಳಿಗೆ ಕಾರಣವಾಗಿದೆ.
ಜಲೋತ್ಪಾದಕ ಯಂತ್ರಗಳನ್ನು ಬಳಸಿ ವೈಜ್ಞಾನಿಕವಾಗಿ ನೀರು ಸೃಜಿಸುವ ಕ್ರಮದ ಕುರಿತು ಹೇಳುವುದಾದರೆ ನಮ್ಮ ಭೂಮಿಯ ಸುತ್ತಲೂ ಇರುವ
ವಾಯುಮಂಡದಲ್ಲಿ ಇತರ ಅನಿಲಗಳ ಸಂಯೋಜನೆಯೊಂದಿಗೆ ನೀರಾವಿಯೂ ಸಮ್ಮಿಳಿತಗೊಂಡಿರುವುದು ನಮಗೆ ಅಪರಿಚಿತ ಸಂಗತಿಯೇನಲ್ಲ. ಅನಿಲ
ಸ್ಥಿತಿಯಲ್ಲಿರುವ ಇಂಥ ನೀರು ದಟ್ಟವಾಗಿರದೇ ವಿರಳವಾಗಿ ಹರಡಿಕೊಂಡಿರುತ್ತದೆ. ನಮಗೆ ತಿಳಿದಿರುವಂತೆ ಎಲ್ಲ ವಸಂತಗಳಲ್ಲಿಯೂ ವಾಯುಮಂಡಲ ದಲ್ಲಿರುವ ನೀರಾವಿಯ ಪ್ರಮಾಣವೂ ಭೂಮಿಯಲ್ಲಿರುವ ಅಂತರ್ಜಲದ ರೂಪದಲ್ಲಿರುವ ನೀರಿನ ಪ್ರಮಾಣಕ್ಕಿಂತ ಹೆಚ್ಚು ಎಂಬುದನ್ನು ವೈಜ್ಞಾನಿಕವಾಗಿ
ಒಪ್ಪಿಕೊಳ್ಳಲಾಗಿದೆ.
ಆಗಾಗ ಗಾಳಿಯ ಉಷ್ಣತೆ ಕಡಿಮೆಯಾದಾಗ ನೀರಾವಿ ನೈಸರ್ಗಿಕವಾಗಿ ಸಾಂದ್ರೀಕರಣಗೊಂಡು ಹಿಮದ ರೂಪದಲ್ಲಿ, ಇಬ್ಬನಿಯಾಗಿ ಕಾಣಿಸಿಕೊಳ್ಳುವುದು ಅನುಭವವೇದ್ಯ ಸಂಗತಿಯೇ ಸರಿ. ಇಂಥದ್ದೇ ತಂತ್ರಜ್ಞಾನವನ್ನು ಕೃತಕವಾಗಿ ಉಪಯೋಗಿಸುವುದೇ ಜಲೋತ್ಪಾದಕ ಯಂತ್ರಗಳ ಕಾರ್ಯವಾಗಿದೆ. ಇಂಥ ಮಾನವ ನಿರ್ಮಿತ ಕ್ರಮಗಳು ಪರಿಸರ ವಿರೋಧಿಗಳಾಗಿರುತ್ತವೆಯೇ ವಿನಾ ಪೂರಕ ಕ್ರಮಗಳಲ್ಲ. ಕ್ರಮೇಣ ವಾಗಿ ಅವುಗಳು ಕೂಡ ಪರಿಸರದ ಸಮತೋಲನದ
ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಗಳನ್ನು ಅಲ್ಲಗಳೆಯಲಾಗುವುದಿಲ್ಲ.
ನಾವು ಸಮುದಾಯದ ಹಿತಕ್ಕೆ ಅಗತ್ಯವಾದ ನೂರೆಂಟು ಕ್ರಮಗಳನ್ನು ಕೈಗೊಳ್ಳುವುದು ತೀರಾ ಅಗತ್ಯವಾದರೂ ಅವುಗಳು ಪರಿಸರ ಸಂರಕ್ಷಣೆಯನ್ನು ಕೂಡ ಜತೆಜತೆಗೆ ಸರಿದೂಗಿಸಿಕೊಂಡು ಹೋಗುವಂತಿರಬೇಕು. ಸಾಧ್ಯವಾದಷ್ಟು ನಿಸರ್ಗ ವನ್ನು ಕದಲಿಸದೇ ಅದರ ಜತೆಗೆ ಬದುಕುವ ಕ್ರಮ ನಮ್ಮದಾಗಿರಬೇಕು. ಮಾನವ ನಿರ್ಮಿತ ಇಂಥ ಅನೇಕ ಪ್ರಯೋಗಗಳು ಖಂಡಿತವಾಗಿಯೂ ಹವಾಮಾನದಲ್ಲಿ ಏರಿಳಿತಗಳನ್ನು ಹುಟ್ಟುಹಾಕಬಲ್ಲವು. ಇದರಿಂದ ನಿರಂತರ ಹಸಿರನ್ನು ಉಳಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿ ನಮಗೆ ಎದುರಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ನಮಗೆ ಎದುರಾಗುತ್ತಿರುವ ಇಂಥ ಅನೇಕ ಸಮಸ್ಯೆಗಳಿಗೆ ನಮ್ಮ ಸ್ವಾರ್ಥದ ಹಸಿವು ಮೂಲ ಕಾರಣವೇ ಸರಿ.
‘ನಾವೆಲ್ಲ ತುಂಬ ಬುದ್ಧಿವಂತರು, ಏನೆಲ್ಲವನ್ನು ನಮ್ಮ ಕಪಿಮುಷ್ಟಿಯಲ್ಲಿ ಬಂಧಿಸಿಡಬಹುದು’ ಎಂಬ ಭ್ರಾಮಕತೆಯಿಂದ ನಾವು ಹೊರಬರಬೇಕಿದೆ. ಮಹಾಭಾರತದ ಪ್ರಸಂಗವೊಂದರಲ್ಲಿ ನಮಗೆಲ್ಲ ತಿಳಿದಿರುವಂತೆ ದ್ರೌಪದಿಯ ವಸಾಪಹರಣ, ಕೇಶಾಪಕರ್ಷಣದ ನಂತರ ತುಂಬ ಅವಮಾನಿತರಾದ ಪಾಂಡವರು ವನವಾಸಕ್ಕೆ ತೆರಳುತ್ತಾರೆ. ತಮ್ಮನ್ನೆಲ್ಲ ದಹಿಸುವ ನೋವು ಸಂಕಟಗಳನ್ನು ಸಹಿಸಿಕೊಳ್ಳುತ್ತಲೇ ದಟ್ಟವಾದ ಕಾಡಿನಲ್ಲಿ ಗುಡಿಸಲಿನಲ್ಲಿ ಕಾಲ ಕಳೆಯುತ್ತಾರೆ. ತಂಗಾಳಿಯಲ್ಲಿ ತೇಲಿಬಂದ ಹೂವಿನ ಕಂಪನ್ನು ಗ್ರಹಿಸಿದ ದ್ರೌಪದಿ ತನ್ನೆಲ್ಲ ನೋವನ್ನು ಮರೆತು ಆ ಹೂವು ನನಗೆ ಬೇಕೆಂಬ ಬೇಡಿಕೆಯನ್ನು ಭೀಮನ ಮುಂದೆ ಇಡುತ್ತಾಳೆ. ಭೀಮ ಎಲ್ಲ ನೋವುಗಳನ್ನು ಮರೆತು ಸಂಕಷ್ಟಗಳನ್ನು ಎದುರಿಸಿ ಹೂವು ತಂದುಕೊಡುತ್ತಾನೆ.
ತನ್ನೆಲ್ಲ ದುಃಖ ಅವಮಾನಗಳನ್ನು ಮರೆತು ಹೂವಿನ ಕಂಪಿಗೆ ಮನಸೋತ ದ್ರೌಪದಿಯ ಪರಿಸರ ಪ್ರೇಮ ನಮಗೆಲ್ಲ ಇಂದು ಮಾರ್ಗದರ್ಶಿಯಾಗಬೇಕಿದೆ. ನಮ್ಮ
ಸುತ್ತಲಿರುವ ಗಿಡ, ಮರ, ಹೂವು, ಹಕ್ಕಿ, ಬೆಟ್ಟ- ಗುಡ್ಡವನ್ನು ಪ್ರೀತಿಸಲು ಕಲಿಯಬೇಕು. ಇರುವ ನೀರನ್ನು ವ್ಯರ್ಥವಾಗಿಸಿಕೊಳ್ಳದೇ ಜಾಗರೂಕತೆಯಿಂದ ಬಳಸಿಕೊಳ್ಳಬೇಕು. ಸಾಧ್ಯವಾದಷ್ಟು ಮಿತ ವ್ಯಯಿಗಳಾಗಬೇಕು. ಅದುವೇ ನಮ್ಮ ಬದುಕಿನ ಭಾಗವಾಗಬೇಕು. ಜೀವನ ಕ್ರಮಗಳಲ್ಲಿ ಒಂದಷ್ಟು ಬದಲಾವಣೆ ತಂದುಕೊಳ್ಳಬೇಕು. ಅದು ಪ್ರಕೃತಿಗೆ ಹತ್ತಿರವಾಗುವಂತಿರಬೇಕು. ಗಿಡ-ಮರಗಳನ್ನು ನಮ್ಮ ಮನೆಯ ವಾಸ್ತುವಿನ ಅಂಗವನ್ನಾಗಿಸಿಕೊಳ್ಳಬೇಕು. ನಮ್ಮ ಬದುಕಿನ ಜೀವಸೆಲೆಯಾಗಿರುವ ಪ್ರಕೃತಿಯನ್ನು ಸರಿಯಾದ ರೀತಿಯಲ್ಲಿ ಬಳಸಿ ಕೊಳ್ಳುವುದು ಮಾತ್ರವಲ್ಲದೆ ಸಂರಕ್ಷಿಸಿಕೊಳ್ಳಬಲ್ಲ ವಿವೇಚನೆಯನ್ನು ನಾವೆಲ್ಲ ತೋರಬೇಕಿದೆ.
ನಿಸರ್ಗವನ್ನು ಪ್ರೀತಿಸುವುದು ಎಂದರೆ ಅದೊಂದು ಸಾಮಾಜಿಕ ಅಗತ್ಯ ಎಂಬುದನ್ನು ಅರ್ಥೈಸಿಕೊಳ್ಳಬೇಕು. ನಮ್ಮ ಪ್ರಕೃತಿ-ಸ್ನೇಹಿ ನಡೆಗಳು ಮಾತ್ರ, ನಮಗೆ ಮತ್ತೆ ಮತ್ತೆ ಎದುರಾಗಬಹುದಾದ ಪ್ರಕೃತಿ ವೈಪರೀತ್ಯಗಳಿಂದ ನಮ್ಮನ್ನು ಮುಕ್ತವಾಗಿಸಬಲ್ಲವು.
(ಲೇಖಕರು ಪ್ರೌಢಶಾಲಾ ಶಿಕ್ಷಕರು)