Saturday, 14th December 2024

ವಾತಾವರಣದ ಮಾಲಿನ್ಯದಿಂದಾಗುವ ಸಮಸ್ಯೆಗಳು

ಕಲುಷಿತ ವಾತಾವರಣ ಹಲವು ಆರೋಗ್ಯ ಸಮಸ್ಯೆಗಳನ್ನು ತರಬಲ್ಲದು. ವಾತಾವರಣದಲ್ಲಿನ ಸೂಕ್ಷ್ಮಕಣಗಳು ರಕ್ತನಾಳಗಳ ಕೆಲಸವನ್ನು ಹಾಳುಗೆಡಹುತ್ತವೆ. ಮುಟ್ಟು ನಿಂತ ಮಹಿಳೆಯರು ನೈಟ್ರೋಜನ್ ಆಕ್ಸೈಡ್‌ಗೆ ಒಡ್ಡಿಕೊಳ್ಳುವುದರಿಂದ, ರಕ್ತಸ್ರಾವದಿಂದ ಉಂಟಾಗುವ ಪಾರ್ಶ್ವವಾಯುವಿನ ಸಾಧ್ಯತೆ ಅವರಲ್ಲಿ ಜಾಸ್ತಿಯಾಗುತ್ತದೆ ಎನ್ನಲಾಗಿದೆ.

ತಮಗೆಲ್ಲ ಗೊತ್ತಿರುವಂತೆ ವಾತಾವರಣದ ಮಲಿನತೆ ಅಥವಾ ಕಲುಷಿತ ವಾತಾವರಣ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತರಬಲ್ಲದು. ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ಆವರಿಸಿದ್ದ ದಟ್ಟಹೊಗೆ, ಅದರ ಮಲಿನತೆ ಬಹಳ ದಿನಗಳ ಕಾಲ ಜನರಿಗೆ ತೊಂದರೆ ಕೊಟ್ಟಿದ್ದಲ್ಲದೆ,
ಅಧಿಕಾರಿ ಗಳು ಇದನ್ನು ನಿಯಂತ್ರಿಸಲು ಸಾಧ್ಯ ವಾಗದೆ ಹೈರಾಣಾದ ವಿಚಾರ ಎಲ್ಲರಿಗೆ ಗೊತ್ತಿದೆ.

ಕಾಡ್ಗಿಚ್ಚು ಉಂಟು ಮಾಡುವ ದಟ್ಟಹೊಗೆ, ಹೆದ್ದಾರಿಗಳಲ್ಲಿ ವಿವಿಧ ವಾಹನಗಳಿಂದ ಉಂಟಾಗುವ ಮಲಿನತೆ ಇವೂ ಗಮನ ಸೆಳೆಯುವಂಥವು. ಕಣ್ಣಿಗೆ ಕಾಣದ ಆದರೆ ಮೂಗಿಗೆ ಅಸಾಧ್ಯವಾಗಿ ವಾಸನೆ ಉಂಟುಮಾಡುವ ಮಲಿನತೆಗಳೂ ಇವೆ. ಇತ್ತೀಚಿನ ದಿನಗಳಲ್ಲಿ ಮಾನವನ ಆರೋಗ್ಯಕ್ಕೆ ಇದು ಬಹಳ ಅಪಾಯಕಾರಿ ಎಂದು ತಿಳಿಯಲಾಗಿದೆ. ಒಂದು ಅಂದಾಜಿನ ಪ್ರಕಾರ, ಜಗತ್ತಿನಾದ್ಯಂತ ವಾತಾವರಣದ ಮಲಿನತೆಯ ಕಾರಣದಿಂದ ಪ್ರತಿ ವರ್ಷ ೬.೫ ಮಿಲಿಯನ್ ಜನರು ಮರಣ ಹೊಂದುತ್ತಿದ್ದಾರೆಂದರೆ ಇದರ ಗಂಭೀರತೆಯನ್ನು ಗಮನಿಸಿ.

ವಾತಾವರಣದ ಮಲಿನತೆ ಎಂದರೇನು?
ಇದು, ಮಾನವನ ಕಾರಣದಿಂದ ಅಥವಾ ಸಹಜ ವಾತಾವರಣದ ಕಾರಣದಿಂದ ಉತ್ಪತ್ತಿಗೊಳ್ಳುವ ಬೇಡದ ವಸ್ತುಗಳ ಮಿಶ್ರಣ ಎಂದು ಹೇಳಬಹುದು. ಮುಖ್ಯವಾಗಿ ವಾಹನಗಳಿಂದ, ಪೆಟ್ರೋಲ್ ಡೀಸೆಲ್‌ಗಳ ಸುಡುವಿಕೆಯಿಂದ ಉಂಟಾಗುವ ಮಲಿನತೆ, ಮನೆಯಲ್ಲಿ ಉಂಟಾಗುವ ವಿವಿಧ ರೀತಿಯ ಮಲಿನತೆ, ವಿದ್ಯುತ್ ಉತ್ಪಾದನೆಯಲ್ಲಿ ಉಂಟಾಗುವ ಕಲುಷಿತ ವಸ್ತುಗಳು, ಮುಖ್ಯವಾಗಿ ಕಲ್ಲಿದ್ದಲು ಪ್ಲಾಂಟ್‌ಗಳು ಉಂಟುಮಾಡುವ ಮಲಿನತೆ, ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುವ ಫ್ಯಾಕ್ಟರಿಗಳು ಉಂಟು ಮಾಡುವ ವಾತಾವರಣದ ಮಲಿನತೆ ಇವೆಲ್ಲ ಮಾನವ ನಿರ್ಮಿತ ಮಲಿನತೆಗಳು.

ವಾತಾವರಣದಲ್ಲಿ ತನ್ನಿಂದ ತಾನೇ ಉಂಟಾಗುವ ಮಲಿನತೆಗಳಲ್ಲಿ ಮುಖ್ಯವಾದವುಗಳೆಂದರೆ, ಅಕಸ್ಮಾತಾಗಿ ಕಾಡ್ಗಿಚ್ಚಿನಿಂದಾಗುವ ದಟ್ಟಹೊಗೆ ಮೈಲುಗಟ್ಟಲೆ ಪ್ರದೇಶದಲ್ಲಿ ಹರಡಿ ತೀವ್ರ ಮಲಿನತೆ ಉಂಟುಮಾಡಬಹುದು. ಕೆಲವೊಮ್ಮೆ ಹೀಗೆ ಬೆಂಕಿಯಾಡಲು ಮಾನವನೂ ಕಾರಣ ಎನ್ನಬಹುದು. ಜ್ವಾಲಾಮುಖಿಗಳು ಉಂಟುಮಾಡುವ ಅನಿಲಗಳಿಂದ ಮಲಿನತೆ, ಭೂಮಿಯಲ್ಲಿ ರಾಸಾಯನಿಕ ವಸ್ತುಗಳು ರೂಪಾಂತರ ಹೊಂದಿ ಬಿಡುಗಡೆಯಾಗುವ ಮೀಥೇನ್ ರೀತಿಯ ಅನಿಲಗಳು ಉಂಟುಮಾಡುವ ಮಲಿನತೆ ಈ ವರ್ಗಕ್ಕೆ ಸೇರುತ್ತವೆ. ಕೆಲವು ಮಲಿನತೆಗಳ ಬಗ್ಗೆ
ಗಮನಿಸೋಣ.

ಸಾರಿಗೆ ವ್ಯವಸ್ಥೆ ಉಂಟುಮಾಡುವ ಮಲಿನತೆ: ಇದರಲ್ಲಿ ಹಲವು ರೀತಿಯ ಅನಿಲಗಳು ಮತ್ತು ಸೂಕ್ಷ್ಮ ಕಣಗಳು ವಾತಾವರಣ ಕೆಡಿಸುತ್ತವೆ.
ಭೂಮಿಯ ಮಟ್ಟದ ಓಜೋನ್ ಅನಿಲ, ವಿವಿಧ ರೀತಿಯ ಇಂಗಾಲಾಮ್ಲಗಳು, ನೈಟ್ರೋಜನ್ ಆಕ್ಸೈಡ್, ಸಲರ್ ಆಕ್ಸೈಡ್ ಅನಿಲಗಳು, ಹಲವು
ರಾಸಾಯನಿಕ ಘಟಕಗಳು, ಪಾಲಿಸಿಸ್ಟಿಕ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು, ಸೂಕ್ಷ್ಮ ಪಾರ್ಟಿಕ್ಯುಲೇಟ್ ಕಣಗಳು ಇವುಗಳನ್ನು ಉತ್ಪಾದಿಸಿ
ಮಲಿನತೆ ಉಂಟುಮಾಡುತ್ತವೆ.

ಓಜೋನ್: ಇದೊಂದು ವಾತಾವರಣದ ಅನಿಲ. ಇದು ನೆಲದ ಮಟ್ಟದಲ್ಲಿದ್ದಾಗ ಸ್ಮಾಗ್ ಅಥವಾ ಮಲಿನ ಹೊಗೆ ಎನ್ನುತ್ತೇವೆ. ಕಾರುಗಳು, ವಿದ್ಯುತ್
ಘಟಕಗಳು, ಕೈಗಾರಿಕೋದ್ಯಮದಲ್ಲಿ ಉಪಯೋಗಿಸುವ ದೊಡ್ಡ ಗಾತ್ರದ ಬಾಯ್ಲರ್‌ಗಳ ಹೊರಸೂಸಿಕೆಗಳು ಸೂರ್ಯನ ಕಿರಣದಲ್ಲಿ ರಾಸಾಯನಿಕ ವಾಗಿ ಮಾರ್ಪಾಟು ಹೊಂದಿದಾಗ ಓಜೋನ್ ಅನಿಲ ಉತ್ಪಾದನೆಯಾಗುತ್ತದೆ.

ವಿಷಾನಿಲಗಳು: ಇದರಲ್ಲಿ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ನೈಟ್ರೋಜನ್ ಆಕ್ಸೈಡ್ ಗಳು, ಸಲರ್ ಆಕ್ಸೈಡ್ ಗಳು ಇವೆಲ್ಲ ವಾಹನಗಳು ಹೊರಹಾಕುವ ಹೊಗೆಯಲ್ಲಿ ಹಾಗೂ ವಿವಿಧ ಕೈಗಾರಿಕೋದ್ಯಮಗಳಲ್ಲಿ ಉತ್ಪಾದನೆಗೊಂಡು ವಾತಾವರಣ ಕೆಡಿಸುತ್ತವೆ.

ಪಾರ್ಟಿಕ್ಯುಲೇಟ್ ಮ್ಯಾಟರ್: ಇದರಲ್ಲಿ ಸಲ್ಫೇಟ್ ಗಳು, ನೈಟ್ರೇಟ್‌ಗಳು, ಇಂಗಾಲಾಮ್ಲ ಹಾಗೂ ಹಲವು ರೀತಿಯ ಧೂಳುಗಳು ಸೇರಿವೆ. ವಾಹನಗಳು ಮತ್ತು ಕೈಗಾರಿಕೋದ್ಯಮದಲ್ಲಿ ಹೊರಬರುವ ವಿವಿಧ ರೀತಿಯ ಹೊಗೆ, ಸಿಗರೇಟ್ ಹೊಗೆ, ಕಾಡ್ಗಿಚ್ಚಿನಂಥ ದಟ್ಟ ಹೊಗೆಗಳಲ್ಲಿ ಪಾರ್ಟಿಕ್ಯುಲೇಟ್ ಮ್ಯಾಟರ್ ರೀತಿಯ ಕಲ್ಮಶಗಳು ಇವೆ. ಮಾನವ ಕೂದಲಿಗಿಂತ ೩೦ ಪಟ್ಟು ಚಿಕ್ಕದಾದ ಪಾರ್ಟಿಕ್ಯುಲೇಟ್ ಮ್ಯಾಟರ್‌ಗಳು ಮನುಷ್ಯನ ಶ್ವಾಸಕೋಶದ ಆಳದ ಅಂಗಾಂಶಗಳಲ್ಲಿ ಹೀರಲ್ಪಟ್ಟು ಗಂಭೀರ ಆರೋಗ್ಯ ಸಮಸ್ಯೆ ತರಬಲ್ಲವು.

ಗಾಳಿಯಲ್ಲಿ ಹರಡುವ ರಾಸಾಯನಿಕಗಳು: ಇವು ಇಂಗಾಲಾಮ್ಲ ಇರುವ ರಾಸಾಯನಿಕಗಳು. ಇವು ಸಾಮಾನ್ಯವಾಗಿ ಬಣ್ಣಗಳು, ಕೀಟನಾಶಕಗಳು
ಇಂಥವುಗಳಿಂದ ಹೊರಸೂಸಲ್ಪಡುತ್ತವೆ. ಗ್ಯಾಸೋಲಿನ್ ಮತ್ತು ಸಹಜ ಅನಿಲಗಳಿಂದಲೂ ಇವು ಹೊರಹಾಕಲ್ಪಡುತ್ತವೆ.

ಪಾಲಿಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು: ಇವು ಕಾರ್ಬನ್ ಅಥವಾ ಇಂಗಾಲಾಮ್ಲ ಮತ್ತು ಸಸಾರಜನಕ (ಹೈಡ್ರೋಜನ್)
ಒಳಗೊಂಡ ರಾಸಾಯನಿಕಗಳು. ಈ ರೀತಿಯ ಸುಮಾರು ೧೦೦ಕ್ಕೂ ಹೆಚ್ಚು ವಸ್ತುಗಳನ್ನು ಪಟ್ಟಿಮಾಡಲಾಗಿದೆ. ಅವುಗಳಲ್ಲಿ ೧೫ಕ್ಕೂ ಹೆಚ್ಚಿನವು ವಿವಿಧ ರೀತಿಯ ಕ್ಯಾನ್ಸರ್ ಉಂಟುಮಾಡುತ್ತವೆ ಎನ್ನಲಾಗಿದೆ. ಹಲವು ಕೈಗಾರಿಕೋದ್ಯಮಗಳಲ್ಲಿ ಕಬ್ಬಿಣ, ಉಕ್ಕು, ರಬ್ಬರ್ ಉತ್ಪಾದನೆ, ವಿದ್ಯುತ್
ಉತ್ಪಾದನೆ ಈ ರೀತಿಯವು ಈ ಹೈಡ್ರೋಕಾರ್ಬನ್ ಗಳನ್ನು ಹೊರಹಾಕುತ್ತವೆ.

ಗಾಳಿಯ ಮಲಿನತೆ ಮತ್ತು ವಾತಾವರಣದ ಬದಲಾವಣೆ: ಇವು ಒಂದಕ್ಕೊಂದು ಸಂಕೀರ್ಣವಾದ ಸಂಬಂಧವನ್ನು ಹೊಂದಿವೆ. ಇವೆರಡೂ
ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.

ಗಾಳಿಯ ಮಲಿನತೆ ಮತ್ತು ಆರೋಗ್ಯ: ೧೯೭೦ರವರೆಗೂ, ಗಾಳಿಯ ಮಲಿನತೆ ಕೇವಲ ಶ್ವಾಸಕೋಶದ ಕಾಯಿಲೆ ಉಂಟುಮಾಡಿ ಮಾನವನ
ಆರೋಗ್ಯ ಕೆಡಿಸುತ್ತದೆ ಎಂದು ತಿಳಿಯಲಾಗಿತ್ತು. ೧೯೯೩ರಲ್ಲಿ ಸಂಶೋಧಕರು ಅಮೆರಿಕದಲ್ಲಿನ ೬ ನಗರಗಳ ಅಧ್ಯಯನವನ್ನು ಪ್ರಕಟಿಸಿದಾಗ ಈ
ಭಾವನೆ ಬದಲಾಯಿತು. ವಾತಾವರಣದ ಅತಿಸೂಕ್ಷ್ಮ ಪಾರ್ಟಿಕ್ಯುಲೇಟ್ ಮ್ಯಾಟರ್‌ಗಳಿಂದ ಮಾನವನ ಪ್ರಾಣಕ್ಕೆ ಕುತ್ತು ಬರುತ್ತದೆ ಎಂದು ಈ
ಅಧ್ಯಯನಗಳಿಂದ ಸಾಬೀತಾಯಿತು. ವಾತಾವರಣದ ಮಲಿನತೆಯಿಂದ ಮಾನವನ ದೇಹದಲ್ಲಿ ಆಕ್ಸಿಡೇಟೀವ್ ಪ್ರೆಸ್ ಮತ್ತು ಉರಿಯೂತಗಳಾಗಿ
ಜೀವಕೋಶಗಳ ಒಳಗೆ ಒಂದು ರೀತಿಯ ಒತ್ತಡ ಉಂಟಾಗುತ್ತದೆ. ಇವು ಮುಂದುವರಿದು ದೀರ್ಘ ಕಾಲೀನ ಕಾಯಿಲೆಗಳು ಮತ್ತು ವಿವಿಧ ಕ್ಯಾನ್ಸರ್
ಗಳಿಗೆ ತಿರುಗುವ ಸಾಧ್ಯತೆ ಜಾಸ್ತಿ. ೨೦೧೩ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್‌ಗೆ ಸಂಬಂಧಪಟ್ಟ ಅಂಗಸಂಸ್ಥೆಯು, ಗಾಳಿಯ ಮಲಿನತೆಯನ್ನು
‘ಕಾರ್ಸಿನೋಜನ್’ ಅಂದರೆ ಕ್ಯಾನ್ಸರ್ ಬರಲು ಉತ್ತೇಜಿಸುವ ವಸ್ತು ಎಂದು ವರ್ಗೀಕರಿಸಿದೆ. ಈಗ ಗಾಳಿಯ ಮಲಿನತೆ ಮತ್ತು ಆರೋಗ್ಯದ
ಪರಿಣಾಮಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದು, ಅದು ಮನುಷ್ಯನಲ್ಲಿ ಕ್ಯಾನ್ಸರ್ ಉಂಟು ಮಾಡುವುದಲ್ಲದೆ ಹೃದಯ ಮತ್ತು ರಕ್ತನಾಳ ಗಳು, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಡಯಾಬಿಟಿಸ್, ಸ್ಥೂಲಕಾಯ, ನರವ್ಯೂಹಗಳು, ಪ್ರತಿರೋಧ ವ್ಯವಸ್ಥೆ ಹಾಗೂ ಮಕ್ಕಳನ್ನು ಪಡೆಯುವ ಪ್ರಕ್ರಿಯೆಗಳ ಮೇಲೆ ದುಷ್ಪರಿಣಾಮಗಳು ಹೀಗೆ ತನ್ನ ಪ್ರಭಾವ ತೋರಿಸುತ್ತದೆ ಎಂಬುದು ಈಗ ದೃಢಪಟ್ಟಿದೆ.

ಕ್ಯಾನ್ಸರ್: ದೊಡ್ಡ ಹೆದ್ದಾರಿಯ ಪಕ್ಕದಲ್ಲಿ ಜೀವಿಸುವ ೫೭,೦೦೦ ಮಹಿಳೆಯರಲ್ಲಿ ಕೈಗೊಂಡ ಬೃಹತ್ ಅಧ್ಯಯನದಲ್ಲಿ, ಇಂಥ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಜಾಸ್ತಿ ಎಂದು ಗೊತ್ತಾಗಿದೆ. ಹಾಗೆಯೇ ಬಣ್ಣ ತೆಗೆಯಲು ಉಪಯೋಗಿಸುವ ರಾಸಾಯನಿಕದಲ್ಲಿ ಇರುವ ಮಿಥಿಲಿನ್ ಕ್ಲೋರೈಡ್ ಕೂಡ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಜಾಸ್ತಿ ಮಾಡುತ್ತದೆ ಎನ್ನಲಾಗಿದೆ. ಗ್ಯಾಸೋಲಿನ್‌ನಲ್ಲಿರುವ ಮತ್ತು ಕೈಗಾರಿಕೋದ್ಯಮದಲ್ಲಿ ಉಪಯೋಗಿಸುವ ಬೆನ್ ಜೀನ್ ರಕ್ತದ ಕ್ಯಾನ್ಸರ್ ಲ್ಯುಕೀಮಿಯ ಮತ್ತು ನಾನ್ ಹಾಡ್ ಕಿನ್ ಲಿಂ-ಮ ರೀತಿಯ ಕ್ಯಾನ್ಸರ್ ಉಂಟುಮಾಡ ಬಹುದು.

ಹಾಗೆಯೇ ೨೦೦೦- ೨೦೧೬ರ ಮಧ್ಯೆ ಕೈಗೊಂಡ ಒಂದು ಬೃಹತ್ ಅಧ್ಯಯನದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಉಪಯೋಗಿಸುವ ಕಲ್ಲಿದ್ದಲು ಶ್ವಾಸಕೋಶದ ಕ್ಯಾನ್ಸರ್ ಉಂಟು ಮಾಡಬಲ್ಲದು ಎಂದು ಹೇಳಲಾಗಿದೆ.

ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು: ವಾತಾವರಣದಲ್ಲಿನ ಮಲಿನತೆಯ ಸೂಕ್ಷ್ಮಕಣಗಳು ರಕ್ತನಾಳಗಳ ಕ್ಯಾಲ್ಸಿಫಿಕೇಶನ್ ಉಂಟುಮಾಡಿ ರಕ್ತ ನಾಳಗಳ ಕೆಲಸವನ್ನು ಹಾಳುಗೆಡಹುತ್ತವೆ. ಮುಟ್ಟು ನಿಂತ ಮಹಿಳೆಯರು ನೈಟ್ರೋಜನ್ ಆಕ್ಸೈಡ್‌ಗೆ ಒಡ್ಡಿಕೊಳ್ಳುವುದರಿಂದ, ರಕ್ತಸ್ರಾವದಿಂದ ಉಂಟಾಗುವ ಪಾರ್ಶ್ವವಾಯುವಿನ ಸಾಧ್ಯತೆ ಅವರಲ್ಲಿ ಜಾಸ್ತಿಯಾಗುತ್ತದೆ ಎನ್ನಲಾಗಿದೆ. ಹೆದ್ದಾರಿಯಲ್ಲಿ ಉಂಟಾಗುವ ಮಲಿನತೆಯು ರಕ್ತದಲ್ಲಿನ ಒಳ್ಳೆಯ ಕೊಲೆಸ್ಟರಾಲ್ ಅಂಶವನ್ನು ಕಡಿಮೆ ಮಾಡಿ ವಯಸ್ಸಾದವರಲ್ಲಿ ಹೃದಯದ ಕಾಯಿಲೆ ಬರುವ ಸಾಧ್ಯತೆ ಜಾಸ್ತಿ ಮಾಡುತ್ತದೆ. ಹಾಗೆಯೇ
ಹೆದ್ದಾರಿಯ ಮಲಿನತೆಯು ಗರ್ಭಿಣಿಯರಲ್ಲಿ ರಕ್ತದೊತ್ತಡವನ್ನು ಜಾಸ್ತಿ ಮಾಡುತ್ತದೆ.

ಪರಿಣಾಮವಾಗಿ ಗರ್ಭಸ್ಥ ಶಿಶು ಅವಽಯ ಮೊದಲೇ ಜನಿಸುವುದು, ಕಡಿಮೆ ತೂಕದ ಶಿಶು ಜನಿಸುವುದು ಈ ತರಹ ತೊಂದರೆ ಉಂಟಾಗುವುದಲ್ಲದೆ ಕೆಲ ವೊಮ್ಮೆ ಶಿಶು ಮತ್ತು ಕೆಲವೊಮ್ಮೆ ತಾಯಿ ಅಥವಾ ಇಬ್ಬರೂ ಮರಣಕ್ಕೆ ತುತ್ತಾಗುವ ಸಾಧ್ಯತೆ ಇದೆ.

ಶ್ವಾಸಕೋಶ ಮತ್ತು ಉಸಿರಾಟದ ಅಂಗಗಳ ಕಾಯಿಲೆಗಳು: ಗಾಳಿಯ ಮಲಿನತೆ ಶ್ವಾಸಕೋಶದ ಬೆಳವಣಿಗೆಯನ್ನೇ ಕುಂಠಿಸುತ್ತದೆ. ಹಾಗೆಯೇ ಈ
ಭಾಗದ ಕಾಯಿಲೆಗಳಾದ ಎಂಫಿಸೀಮಾ, ಅಸ್ತಮಾ, ಕ್ರಾನಿಕ್ ಅಬ್ಸ್‌ಟ್ರಕ್ಟಿವ್ ಪಲ್ಮನರಿ ಕಾಯಿಲೆಗಳು ಬರಲು ಕಾರಣವಾಗುತ್ತದೆ. ಅಸ್ತಮಾ ಕಾಯಿಲೆಯ ಹೆಚ್ಚಳ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಜಾಸ್ತಿ. ಅದು ಹೊರಗಿನ ಗಾಳಿಯ ಮಲಿನತೆಯಿಂದ ಆದುದು. ಕಡಿಮೆ ವರಮಾನವಿರುವ ವ್ಯಕ್ತಿಗಳಗುಡಿಸಲು ಮತ್ತು ಮನೆಗಳಲ್ಲಿರುವ ಮಕ್ಕಳಲ್ಲಿ ಅಸ್ತಮಾ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ.

ಇತ್ತೀಚೆಗೆ ಅಂದರೆ ೨೦೨೩ರಲ್ಲಿ ಪ್ರಕಟವಾದ ಎರಡು ಸಂಶೋಧನೆಗಳು ಓಜೋನ್ ಮತ್ತು ಪಿಎಂ ೨.೫ ಈ ಮಲಿನ ವಸ್ತುಗಳು ಮಕ್ಕಳಲ್ಲಿ ಅಸ್ತಮಾವು ಹೆಚ್ಚುಬರಲು ಕಾರಣ ಎನ್ನಲಾಗಿದೆ. ಶ್ವಾಸಕೋಶದ ಕಾಯಿಲೆಯಾದ ಕ್ರಾನಿಕ್ ಬ್ರಾಂಕೈಟಿಸ್, ಪಿಎಂ ಮತ್ತು ನೈಟ್ರೋಜನ್ ಆಕ್ಸೈಡ್‌ಗಳಿಗೆ ಲಿಂಕ್ ಆಗಿದೆ. ಗಾಳಿಯ ಮಲಿನತೆ ಯಾರನ್ನು ಹೆಚ್ಚು ತೊಂದರೆಗೀಡುಮಾಡುತ್ತದೆ? ಗಾಳಿಯ ಮಲಿನತೆ ಎಲ್ಲರಿಗೂ ತೊಂದರೆ ಮಾಡುತ್ತದೆ. ಆದರೆ ಕೆಲವೊಂದು ಗುಂಪಿನ ಜನರಿಗೆ ಹೆಚ್ಚು ತೊಂದರೆ ಕೊಡುತ್ತದೆ.

ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ೧೦ರಲ್ಲಿ ೯ ಜನರು ಗಾಳಿಯ ಮಲಿನತೆಯಿಂದ ತೊಂದರೆಗೀಡಾಗುತ್ತಾರೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾ ಲಯದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಒಂದು ವಿವರವಾದ ಅಧ್ಯಯನ ನಡೆಸಲಾಯಿತು. ಇದರಲ್ಲಿ ಉಸಿರಾಟದ ಅಂಗಗಳ ಮೇಲೆ ಗಾಳಿಯ ಮಲಿನತೆಯ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಅಧ್ಯಯನ ಕೈಗೊಳ್ಳಲಾಯಿತು.

ಅದರಲ್ಲಿ ಕಂಡುಬಂದ ಅಂಶಗಳು: ಗಾಳಿಯ ಮಲಿನತೆ ಜಾಸ್ತಿ ಪ್ರಮಾಣದಲ್ಲಿದ್ದಾಗ ಮಕ್ಕಳಲ್ಲಿ ಒಮ್ಮೆಲೆ ಉಸಿರಾಟದ ಅಂಗಗಳ ಸೋಂಕು ಕಂಡುಬರುತ್ತದೆ. ಪರಿಣಾಮವಾಗಿ ಅವರು ಶಾಲೆಗೆ ಹಾಜರಾಗುವ ದಿನಗಳು ಕಡಿಮೆಯಾಗುತ್ತವೆ. ಬಯಲಿನಲ್ಲಿ ಆಟ ಆಡುವ ಮಕ್ಕಳು ಮತ್ತು ಹೆಚ್ಚು ಓಜೋನ್ ಅನಿಲ ಕಂಡುಬರುವ ಸ್ಥಳಗಳಲ್ಲಿ ವಾಸಿಸುವ ಮಕ್ಕಳಲ್ಲಿ ಅಸ್ತಮಾ ಬರುವ ಸಾಧ್ಯತೆ ಜಾಸ್ತಿ. ಹಾಗೆಯೇ ಹೆದ್ದಾರಿ ರಸ್ತೆಗಳು ಮತ್ತು ಹೆಚ್ಚು ಟ್ರಾಫಿಕ್ ಇರುವ ರಸ್ತೆಗಳ ಪಕ್ಕದಲ್ಲಿ ವಾಸಿಸುವ ಮಕ್ಕಳಲ್ಲಿ ಅಸ್ತಮಾ ಬರುವ ಸಾಧ್ಯತೆ ಜಾಸ್ತಿ. ಹೆಚ್ಚು ಮಲಿನತೆ ಇರುವ ಪ್ರದೇಶದಲ್ಲಿ ವಾಸಿಸುವ ಮಕ್ಕಳಲ್ಲಿ ಶ್ವಾಸಕೋಶದ ಹಾನಿ ಆಗುವ ಸಾಧ್ಯತೆ ಜಾಸ್ತಿ. ಹೆಚ್ಚು ವಯಸ್ಸಾದ ವ್ಯಕ್ತಿಗಳಲ್ಲಿ ಗಾಳಿ ಜಾಸ್ತಿ ಮಲಿನತೆ ಇರುವ ಸ್ಥಳದಲ್ಲಿ ವಾಸಿಸುತ್ತಿರು ವವರಲ್ಲಿ ಆಲ್ಜೀಮರ್ಸ್, ಡಿಮೆನ್ಶಿಯ ರೀತಿಯ ಕಾಯಿಲೆಗಳು ಹಾಗೂ ಪಾರ್ಕಿನ್ಸನ್ ಬರುವ ಸಾಧ್ಯತೆ ಜಾಸ್ತಿ ಎನ್ನಲಾಗಿದೆ.