ತನ್ನಿಮಿತ್ತ
ಹಿರೇಮಗಳೂರು ಕಣ್ಣನ್
ನವರಾತ್ರಿಯ ಶುಭಾಶಯಗಳು. ಒಂಬತ್ತು ದಿನಗಳ ಕಾಲ ಪಾಡ್ಯದಿಂದ ಶುರುವಾಗಿ ವಿಜಯದಶಮಿಯ ಪಟ್ಟಾಭಿಷೇಕದವರೆಗೆ ನಡೆಯುವ ಈ ಹಬ್ಬಕ್ಕೆ ನಾಡಿಗೆ ನಾಡೇ ಸಂಭ್ರಮಿಸುತ್ತದೆ. ಈ ನವರಾತ್ರಿ ಎಂಬ ಶಬ್ದವನ್ನು ಕೇಳುವುದೇ ಒಂದು ಸೊಗಸು. ನಳನಳಿಸುವ ಪ್ರಕೃತಿ; ಹಸುರು ಚಿಗುರಿ ಕಣ್ಣಿಗೆ ಆನಂದ; ಮನಕೆ ಆಹ್ಲಾದ.
ಕುವೆಂಪುರವರ ಈ ಸಾಲುಗಳು ನೆನಪಾಗುತ್ತಿವೆ :
ನವರಾತ್ರಿಯ ನವಧಾತ್ರಿಯ ಈ ಶ್ಯಾಮಲ ವನಧಿಯಲಿ
ಹಸುರಾದುದೊ ಕವಿಯಾತ್ಮಂ
ರಸಪಾನ ಸ್ನಾನದಲಿ !
ಹಸುರತ್ತಲ್ ! ಹಸುರಿತ್ತಲ್ !
ಹಸುರೆತ್ತಲ್ ಕಡಲಿನಲಿ
ಹಸುರ್ಗಟ್ಟಿತೊ ಕವಿಯಾತ್ಮಂ
ಹಸುರ್ನೆತ್ತರ್ ಒಡಲಿನಲಿ !
ಎಲ್ಲರೂ ಶ್ರದ್ಧಾಭಕ್ತಿಯಿಂದ ದೇವಿ ಪಾರಾಯಣ, ರಾಮಾಯಣ, ಭಾಗವತ, ಸ್ತೋತ್ರ ಪಠಣ, ಸರಸ್ವತಿ ಪೂಜೆ, ದುರ್ಗಾ ಪೂಜೆ, ಆಯುಧ ಪೂಜೆ, ಬನ್ನಿ ಮಂಟಪ ಪೂಜೆ -ಹೀಗೆ ಎಲ್ಲಾ ರೀತಿಯಿಂದ ಆಚರಿಸಿ, ಬೊಂಬೆಗಳ ನ್ನಿರಿಸಿ, ಮಕ್ಕಳನ್ನು ಕರೆಸಿ, ಹೊಸ ಉಡುಗೆಗಳನ್ನು ತೊಡಿಸಿ, ಸಿಹಿತಿಂಡಿಗಳನ್ನು ತಿನ್ನಿಸಿ, ಮನೆಮನೆಗೆ ಕಳಿಸಿ, ಜಾತ್ಯಾತೀತವಾಗಿ ಆಚರಿಸುವ ಹಬ್ಬ. ಪ್ರಕೃತಿಯು ಕಾಲ ಕಾಲಕ್ಕೆ ನಮಗೆ ಸಂದೇಶ ನೀಡಿ, ಕಣ್ಣಿಗೆ ಮುದವೀ ಯುವುದು. ಅದಕ್ಕೆ ಮುದ್ದುರಾಮ ಹೇಳುತ್ತಾನೆ
ಹೊಸ ಹೊಸತ ಕೊಡಬಲ್ಲ ಶಕ್ತಿ ಸೃಷ್ಟಿಗೆ ಮಾತ್ರ;
ಹೂ ಬಣ್ಣ ಮುಗಿಲಗತಿ ಒಂದೊಂದು ಭಿನ್ನ.
ಆಲಸ್ಯ, ಹಳಸಿಕೆಯ ಮಾತೆಲ್ಲಿ ಪ್ರಕೃತಿಯಲಿ?
ಸೊಬಗು ನಿಯತಿಯ ಲೀಲೆ – ಮುದ್ದುರಾಮ
ಕಣ್ಣ ತೆರೆದರೆ ಬೆಳಕು; ಮುಚ್ಚಿದರದುವೆ ಕತ್ತಲು.
ಇದುವೆ ಹೊರಲೋಕ ಸಾಮಾನ್ಯ ನಿಯಮ.
ಚಿತ್ತದೊಳ ನೋಟದಲಿ ಹಗಲು ಇರುಳುಗಳಿಲ್ಲ;
ಶೂನ್ಯ ಚಿತ್ಪ್ರಭೆಲಹರಿ – ಮುದ್ದುರಾಮ
ಗಗನದಂಚನು ಯಾರು ನೋಡಿಹರೊ ಪಯಣದಲಿ?
ಸುಗಮವಲ್ಲವೊ ಇಲ್ಲಿ ಈ ಸೃಷ್ಟಿ ಅರಿವು!
ಉಗಮ ಅಂತ್ಯದ ಬೇರು ಎಲ್ಲೆಲ್ಲಿ ಹುದುಗಿದೆಯೊ!
ಸೊಗನಿಚಯ ಈ ಲೋಕ – ಮುದ್ದುರಾಮ
ಜಗದಗಲವನ್ನು ನಾವು ಇಲ್ಲಿಯೇ ಕುಳಿತು ಊಹಿಸಬಹುದಷ್ಟೆ. ಆದರೆ ನಿರ್ಧರಿಸಲು ಸಾಧ್ಯವಿಲ್ಲ. ಈಗ ವಸುಂಧರೆ ನವನವೋಲ್ಲಾಸದಿಂದ ಕಂಗೊಳಿಸುತ್ತಿದ್ದಾಳೆ.
ನಾವು ಈ ಪ್ರಕೃತಿಯನ್ನು ಉಪಾಸನೆಯ ಮೂಲಕ ಸಂರಕ್ಷಿಸಬೇಕು. ಬ್ರಹ್ಮ ಜ್ಞಾನಿ ರಮಣ ಮಹರ್ಷಿಗಳು ಪರಬ್ರಹ್ಮನನ್ನು ನಿರಾಕಾರ ಭಾವದಲ್ಲಿ ಸಾಕ್ಷಾತ್ಕ ರಿಸಿಕೊಂಡ ಮಹಾನುಭಾವರು.
ತಿರುವಣ್ಣಾಮಲೈ ಎಂಬ ಹೆಸರು ಹೇಳಿದರೆ ಸಾಕು; ಅವರ ಹೆಸರು ಜಗದ್ವಿಖ್ಯಾತ. ಬಾಹ್ಯದಲ್ಲಿ ಆತ್ಮಜ್ಞಾನದ ಬೋಧನೆಯನ್ನು ಮಾಡಿದರೂ, ಅವರು
ಜಗನ್ಮಾತೆಯ ಉಪಾಸಕರೆಂಬ ಅಂಶ ಬಹಳ ಗುಪ್ತವಾಗಿ ಉಳಿದಿರುವಂತಹ ವಿಷಯ. ರಮಣರಿಗೆ ರಮಣ ಮಹರ್ಷಿ ಎಂದು ನಾಮಾಂಕಿತ ಮಾಡಿದವರು ಅವರ ಅಂತರಂಗದ ಶಿಷ್ಯರೂ, ಪ್ರಸಿದ್ಧ ವಿದ್ವಾಂಸರೂ ಆಗಿದ್ದ ಶ್ರೀ ವಾಸಿಷ್ಠ ಗಣಪತಿ ಮುನಿಗಳು. ಇವರು ರಮಣರ ಪ್ರೇರಣೆ ಮತ್ತು ಗುಪ್ತ ಮಾರ್ಗದರ್ಶನದಲ್ಲಿ ರಚಿಸಿದ ಕೃತಿ ಉಮಾ ಸಹಸ್ರಮ್ ಎಂಬ ಅದ್ಭುತ ಸ್ತೋತ್ರ.
ಪಿಂಡಾಂಡದಿಂದ ಬ್ರಹ್ಮಾಂಡದವರೆಗೆ ವ್ಯಾಪ್ತವಾಗಿರುವ ತಾಯಿಯ ವಿಶ್ವರೂಪ ದರ್ಶನವನ್ನು ಅರ್ಥಾತ್ ಪ್ರಕೃತಿಯ ದರ್ಶನವನ್ನು ಇಲ್ಲಿ ಮಾಡಿಸಿದ್ದಾರೆ. ಗಣಪತಿ ಮುನಿಗಳು ಪ್ರಕಾಂಡ ಪಂಡಿತರು ಮತ್ತು ಮಹಾ ಯೋಗಿಗಳು. ತಮಗಾದ ದೇವಿಯ ಮಹಾ ದರ್ಶನದ ದಿವ್ಯಾನುಭವವನ್ನು ಅವರು ಈ ಸಹಸ್ರ ಶ್ಲೋಕಗಳ ಮೂಲಕ ಬೆಳಕಿನ ಹೊಳೆಯಾಗಿ ಹರಿಸಿದ್ದಾರೆ.
ಖಂ ಕ್ರೀಡಾಭವನಂ ತೇ ಕಾರ್ಯಾಲಯ ಏಷಃ ಪೃಥ್ವ್ಯಾಂ ಬಹುಲಾನಾಂ ಮಾತಾ ಭೋಜನಶಾಲಾ ಇಡೀ ಅಂತರಿಕ್ಷವೇ ವಿಶ್ವ ಮಾತೆಯು ಸಂಚರಿಪ ಸ್ಥಳ.
ಸೂರ್ಯ ಮಂಡಲವೇ ಅವಳ ಕಾರ್ಯಾಲಯ. ಬಹು ಆಹಾರ ಪದಾರ್ಥಗಳಿಂದ ಕೂಡಿದ ಭೂಮಂಡಲವೆಲ್ಲವೂ ಅವಳ ಪಾಕಶಾಲೆ. ಇಲ್ಲಿ ವ್ಯಕ್ತವಾಗಿರುವ ಅರ್ಥವ್ಯಾಪ್ತಿ ಬಹಳ ಬೃಹತ್ತಾದುದು. ಮೂರು ಲೋಕಗಳಲ್ಲಿಯೂ ನೆಲೆಗೊಂಡಿರುವ ಜಗಜ್ಜನನಿಯ ಮೂರು ಸ್ವರೂಪಗಳನ್ನು ಗಣಪತಿ ಮುನಿಗಳು ಇಲ್ಲಿ ವರ್ಣಿಸಿದ್ದಾರೆ.
ಉಕ್ಕಿದರೆ ಕಾಳಿ, ನಕ್ಕಿದರೆ ಲಲಿತೆ, ಸೊಕ್ಕಿದರೆ ಲಕ್ಷ್ಮೀ, ದಕ್ಕಿದರೆ ಸರಸ್ವತಿ. ಮಳೆ ಬಂದು ಕಡಲುಕ್ಕಿ ಹರಿಯುತಿರೆ ಕಾಳಿ. ಪರಬ್ರಹ್ಮನಲ್ಲಿ ಮೂಲಮಾಯೆಯಾಗಿ, ಭೋಗಲೋಕಗಳಲ್ಲಿ ಜಾಲಮಾಯೆಯಾಗಿ, ಕಾಲರೂಪನಲ್ಲಿ ಆದಿತ್ಯಮಾಯೆಯಾಗಿ, ಸಂಸಾರಾಸಕ್ತರಲ್ಲಿ ಪಾಶಮಾಯೆ ಯಾಗಿ, ತನ್ನ ಲೀಲಾ ವಿಲಾಸವನ್ನು ನಡೆಸುತ್ತಿರುವ ಈ ಪ್ರಕೃತಿ ದೇವಿಯನ್ನು ಆರಾಽಸುವುದು ಈ ನವರಾತ್ರಿಯ ಉದ್ದೇಶ. ಪ್ರಕೃತಿಯ ಉಪಾಸನೆ ಮಾಡಿ ಅವಳಿಗೆ ಗೌರವ ಸಲ್ಲಿಸಬೇಕು.
ಅರ್ಚನ ಕಾಲೇ ರೂಪಗತಾ
ಸಂಸ್ತುತಿ ಕಾಲೇ ಶಬ್ದಗತಾ
ಚಿಂತನ ಕಾಲೇ ಪ್ರಾಣಗತಾ
ತತ್ತ್ವ ವಿಚಾರೇ ಸರ್ವಗತಾ
ಈ ಮಹಾಮಾತೆಯನ್ನು ನಾವು ನಾಲ್ಕು ವಿಧಗಳಿಂದ ಅರ್ಚಿಸುತ್ತೇವೆ. ಪುಷ್ಪ ಚಂದನಗಳಿಂದ ಅರ್ಚಿಸುವಾಗ ತಾಯಿಯು ದಿವ್ಯ ರೂಪದಲ್ಲಿ, ಅವಳನ್ನು ಸ್ತುತಿಸು ವಾಗ ಪದಗಳ ಅರ್ಥಸೌಂದರ್ಯದಲ್ಲಿ, ಹೃದಯಾಂತರಾಳದಿಂದ ಚಿಂತನೆ ಮಾಡುವಾಗ ಪ್ರಾಣರೂಪದಲ್ಲಿ, ತತ್ತ್ವವಿಚಾರ ಬಂದಾಗ
ಸ್ವರೂಪವೂ ಅವಳೇ! ಸ್ತುತಿಯೂ ಅವಳೇ! ಸ್ತುತಿಯಲ್ಲಿನ ಅರ್ಥವೂ ಅವಳೇ! ಅರ್ಥ ಅನುಭವದಲ್ಲಿ ನಿಮಗ್ನವಾಗಿ ಆಂತರ್ಯದಲ್ಲಿರುವವಳೂ ಅವಳೆ ಎಂಬುದು ಅರಿವಾದಾಗ ಎಲ್ಲೆಲ್ಲಿಯೂ ನಮಗೆ ಜಗಜ್ಜನನಿಯೇ ಕಾಣುತ್ತಾಳೆ. ಜಗವನ್ನಾಳುವ ಮಾತೆಯನ್ನು ಸಾಧಕರು ೧೦ ಸ್ವರೂಪಗಳಲ್ಲಿ ಕಂಡಿದ್ದಾರೆ. ಇದನ್ನು ದಶಮಹಾವಿದ್ಯಾ ಎನ್ನುತ್ತಾರೆ.
ಮೊದಲನೆಯದು ಕಾಳಿ, ಕಾಲಸ್ವರೂಪಿಣಿ. ಎರಡನೆಯದಾಗಿ ತಾರಾ ಪ್ರಣವ ಸ್ವರೂಪಿಣಿ, ಶಬ್ದ ಸಂಚಾಲಕಿ. ಮೂರನೆಯದಾಗಿ ತ್ರಿಪುರ ಸುಂದರಿ, ಸೌಂದರ್ಯದ
ಅಽದೇವತೆ. ನಾಲ್ಕನೆಯದಾಗಿ ಭುವನೇಶ್ವರಿ, ಲೋಕ ಸಾಮ್ರಾಜ್ಞಿ. ಐದನೆಯದಾಗಿ ಭೈರವಿ, ತೇಜೋಸ್ವರೂಪಿಣಿ. ಆರನೆಯದಾಗಿ ಛಿನ್ನಮಸ್ತಾ, ಅಸುರೀ ಶಕ್ತಿಯನ್ನು ದಮನ ಮಾಡುವವಳು. ಏಳನೆಯದಾಗಿ ಧೂಮಮತಿ, ಮನುಷ್ಯನ ಅಹಂಕಾರವನ್ನು ನಿಶ್ಶೇಷಗೊಳಿಸುವ ದಂಡಿನಿ.
ಎಂಟನೆಯದಾಗಿ ಬಕುಲಾಮುಖಿ, ದೈವಶಕ್ತಿಗೆ ಮಾರಕವಾದುದನ್ನು ಸ್ತಂಭನ ಗೊಳಿಸುವವಳು. ಒಂಬತ್ತನೆಯದಾಗಿ ಮಾತಂಗಿ, ವಾಕ್ಷಕ್ತಿ ಪ್ರದಾಯಿನಿ. ಹತ್ತನೆಯದಾಗಿ ಸಂಪತ್ ಸ್ವರೂಪಿಣಿ. ಇವಿಷ್ಟೂ ಸಾಧಕರು ಕಂಡಿರುವ ವಿಶ್ವ ಮಾತೆಯ ಬೃಹತ್ ಸ್ವರೂಪ ದರ್ಶನವನ್ನು ನಾವು ನವರಾತ್ರಿಯ ಒಂಬತ್ತು
ದಿನಗಳೂ ಕಾಣುತ್ತೇವೆ. ಶೃಂಗೇರಿಯಲ್ಲಿ ಶಾರದಾ ಮಾತೆಗೆ ಒಂದೊಂದು ದಿನಕ್ಕೂ ಒಂದೊಂದು ಅಲಂಕಾರ.
ಚಂಡಿ ಪಾರಾಯಣವೂ ಅಲ್ಲಿ ನಡೆಯುತ್ತದೆ. ಜಗದ್ಗುರುಗಳು ಶಾರದೆಯ ಮುಂದೆ ಭಕ್ತಿಯಿಂದ ಜಗತ್ತಿಗೆ ಒಳಿತನ್ನು ಬಯಸುತ್ತಾರೆ. ನಮ್ಮ ನಮ್ಮ ಮನೆಗಳಲ್ಲಿ ಒಂಬತ್ತೂ ದಿನಗಳು ದೇವೀ ಪಾರಾಯಣವನ್ನು, ರಾಮಾಯಣದ ಕೃತಿಯನ್ನು ಓದುವ ಸಂಕಲ್ಪ ಮಾಡಿದರೆ ನವರಾತ್ರಿಯ ಆಚರಣೆ ಸಾರ್ಥಕವಾದಂತೆ.
ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶಿನೀ? ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನಂ … ಶಮೀವೃಕ್ಷವು (ಆಲದ ಮರ) ಪಾಪವನ್ನು ಶಮನ
ಮಾಡುತ್ತದೆ. ಶಮೀ ವೃಕ್ಷವು ಶತ್ರುಗಳನ್ನು ನಿವಾರಣೆ ಮಾಡುತ್ತದೆ. ಅರ್ಜುನನ ಧನುಸ್ಸು ಮುಂತಾದ ಆಯುಧಗಳನ್ನು (ಅಜ್ಞಾತ ವಾಸದ ಸಮಯದಲ್ಲಿ)
ಇಟ್ಟುಕೊಳ್ಳುವುದು. ರಾಮನಿಗೆ ಪ್ರಿಯವಾಗಿ ತೋರುವಂಥದ್ದು ಶಮೀವೃಕ್ಷ.
ಶತ್ರುಗಳ ನಿವಾರಣೆಯಾಗಿ, ಮಿತ್ರರು ಹತ್ತಿರಕ್ಕೆ ಬಂದು, ನಮ್ಮ ಪ್ರೀತಿ-ಬಾಂಧವ್ಯ ಸ್ಥಿರವಾಗಿರಲಿ, ಬನ್ನಿ ಕೊಟ್ಟು ಬಂಗಾರದ್ಹಾಂಗಿರೋಣ ಎಂದು ಪ್ರಾರ್ಥಿಸುವುದೇ ಈ ನವರಾತ್ರಿ ಸಂದರ್ಭದ ನಮ್ಮ ಸಂಕಲ್ಪ. ಮನೆಯಲ್ಲಿ ಸರಸ್ವತಿ ರೂಪದ ಪುಸ್ತಕಗಳನ್ನು ಇಟ್ಟು ಪೂಜಿಸಿ, ಅವುಗಳ ಪುಟ ತೆರೆದು ಓದಿ, ಅವುಗಳನ್ನು ಆಸ್ವಾದಿಸುವುದರ ಮೂಲಕ ಆನಂದವನ್ನು ಗಳಿಸಿದರೆ ಆಗ ನಮಗೆ ಅದು ದಶಮಿ, ಅದು ವಿಜಯದಶಮಿ. ವಿನಯ ನಮದಾದರೆ ವಿಜಯ ನಮ್ಮದೆ.
ಸಹನೆ ನಮದಾದರೆ, ಸಕಲವೂ ನಮ್ಮದೆ. ಹಗಲೂ ರಾತ್ರಿ ಸಂಭ್ರಮ ತಂದುಕೊಡುವ ಈ ನವರಾತ್ರಿಯಲ್ಲಿ ಚಾಮುಂಡಿ ದರ್ಶನವನ್ನು ಮಾಡೋಣ. ದೇವಿಗೆ ದೀಪ ಹಚ್ಚಿ ಅಂಧಕಾರ ಕಳೆದು ಬೆಳಕನ್ನು ನೀಡಲಿ ಎಂದು ನಮಿಸೋಣ.
ನಿರೂಪಣೆ: ಸುಜಯ ಆರ್ ಕೊಣ್ಣೂರ್