ಅಭಿಮತ
ಪ್ರಕಾಶ್ ಹೆಗಡೆ
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಂತೆ, ನಾವು ಯಾರೇ ಸಂಕಷ್ಟದಲ್ಲಿದ್ದರೂ ಸಹಾಯಹಸ್ತ ಚಾಚುತ್ತೇವೆ. ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಿನ ಬಿಕ್ಕಟ್ಟಿನಿಂದಾಗಿ ಮುನ್ನೆಲೆಗೆ ಬಂದ ಹೌತಿ ಭಯೋತ್ಪಾದಕರು ಹಾಗೂ ಸೊಮಾಲಿಯಾದ ಕಡಲ್ಗಳ್ಳರು ಕೆಂಪುಸಮುದ್ರ ವಲಯದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದ್ದು ಗೊತ್ತಿರುವ ವಿಷಯವೇ. ಈ ಭಯೋತ್ಪಾದಕ ಚಟುವಟಿಕೆಗಳನ್ನು ಎದುರಿಸಲು ಭಾರತೀಯ ನೌಕಾಪಡೆಯು ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಗಳನ್ನು ಹೆಚ್ಚಿಸಿದ ವಿಷಯವನ್ನು ಮಾಧ್ಯಮಗಳು ಅದೇಕೋ ವ್ಯಾಪಕವಾಗಿ ತಿಳಿಯಪಡಿಸಲಿಲ್ಲ.
‘ಐಎನ್‌ಎಸ್ ಸುಮಿತ್ರಾ’ ಎಂಬ ಭಾರತೀಯ ನೌಕಾಪಡೆಯ ಕಡಲಾಚೆಯ ಗಸ್ತುಹಡಗು, ಸೊಮಾಲಿಯಾದ ೧೧ ಸಶಸ ಕಡಲ್ಗಳ್ಳರನ್ನು ಬಂಧಿಸಿದ ನಂತರ, ೧೯ ಪಾಕಿಸ್ತಾನಿ ಸಿಬ್ಬಂದಿಯನ್ನೊಳಗೊಂಡಿದ್ದ ‘ಅಲ್ ನಯೀಮಿ’ ಎಂಬ ಮೀನುಗಾರಿಕಾ ನೌಕೆಯನ್ನು ರಕ್ಷಿಸಲು ಮುಂದಾಯಿತು. ತನ್ಮೂಲಕ, ೩೬ ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಕಡಲ್ಗಳ್ಳತನ-ವಿರೋಧಿ ಕಾರ್ಯಾಚರಣೆಯನ್ನು ಅದು ನಡೆಸಿದಂತಾಯಿತು. ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯ ನೌಕಾದಳದ ಈ ಕಾರ್ಯಾಚರಣೆಯ ಬಗ್ಗೆ ಭಾರಿ ಶ್ಲಾಘನೆ ವ್ಯಕ್ತವಾಯಿತು.
ಮಾತ್ರವಲ್ಲದೆ, ಎರಡು ದಿನಗಳ ಹಿಂದೆ, ಅಪಹರಣಕ್ಕೀಡಾದ ಇರಾನಿನ ಮೀನುಗಾರಿಕಾ ಹಡಗನ್ನು (ಇದರಲ್ಲಿ ೧೭ ಸಿಬ್ಬಂದಿಯಿದ್ದರು) ಭಾರತೀಯ ನೌಕಾದಳ ರಕ್ಷಿಸಿತು. ಇದಲ್ಲದೆ, ಸೊಮಾಲಿಯಾದ ಮೊಗಾದಿಶು ವಿನ ಪೂರ್ವಕ್ಕೆ ಅಪಹರಣ ಕ್ಕೀಡಾದ ೬ ಸಿಬ್ಬಂದಿಗಳಿದ್ದ ‘ಲೊರೆಂಜೋ ಪುಥಾ ೦೪’ ಎಂಬ ಶ್ರೀಲಂಕಾದ ಮೀನುಗಾರಿಕಾ ನೌಕೆಯನ್ನು ಭಾರತೀಯ ನೌಕಾಪಡೆಯು ಸೆಷೆಲ್ಸ್ ರಕ್ಷಣಾ ಪಡೆ ಮತ್ತು ಶ್ರೀಲಂಕಾ ನೌಕಾಪಡೆಯ ಸಹಯೋಗ ದೊಂದಿಗೆ ಯಶಸ್ವಿಯಾಗಿ ರಕ್ಷಿಸಿತು.
ಇದಕ್ಕೂ ಮುನ್ನ ಜನವರಿಯಲ್ಲಿ, ಭಾರತೀಯ ನೌಕಾಪಡೆಯ ಕಮಾಂಡೋ ಗಳು ಸೊಮಾಲಿಯನ್ ಕರಾವಳಿಯಲ್ಲಿ ಕಡಲ್ಗಳ್ಳರಿಂದ ದಾಳಿಗೊಳಗಾದ,
ಲೈಬೀರಿಯನ್ ಧ್ವಜವುಳ್ಳ ಹಡಗಿನಿಂದ ೨೧ ಸಿಬ್ಬಂದಿಯನ್ನು ರಕ್ಷಿಸಿದರು. ಜನವರಿ ೨೬ರಂದು, ಭಾರತೀಯ ನೌಕಾಪಡೆಯು ತನ್ನ ಯುದ್ಧನೌಕೆ ‘ಐಎನ್‌ಎಸ್ ವಿಶಾಖಪಟ್ಟಣಂ’ ಅನ್ನು ಅಡೆನ್ ಕೊಲ್ಲಿಯಲ್ಲಿ ನಿಯೋಜಿಸಿದ್ದು, ಹೌತಿಗಳಿಂದ ನಡೆದ ಕ್ಷಿಪಣಿ ದಾಳಿಯ ಪರಿಣಾಮ ಹಲವಾರು ಗಂಟೆಗಳ ಕಾಲ ಬೆಂಕಿಗೆ ಆಹುತಿಯಾಗಿದ್ದ, ಯುನೈಟೆಡ್ ಕಿಂಗ್‌ಡಂನೊಂದಿಗೆ ಸಂಪರ್ಕ ಹೊಂದಿರುವ ಟ್ಯಾಂಕರ್ ಅನ್ನು ಅದು ಕಾಪಾಡಿತು; ಲುವಾಂಡಾದಿಂದ ಬಂದ ತುರ್ತು ಕರೆಗೆ ಪ್ರತಿಕ್ರಿಯೆಯಾಗಿ ಭಾರತೀಯ ನೌಕಾದಳ ನೀಡಿದ ಸಹಾಯಹಸ್ತ ಇದಾಗಿತ್ತು ಎಂಬುದು ಗಮನಾರ್ಹ ಸಂಗತಿ. ಹೀಗೆ ಕಳೆದೆರಡು ತಿಂಗಳಲ್ಲಿ ಭಾರತೀಯ ನೌಕಾಪಡೆಯು ಇಂಥ ಹಲವಾರು ಕಡಲ ಕಾರ್ಯಾಚರಣೆಗಳನ್ನು ನಡೆಸಿ ಜಗದ ಗಮನ ಸೆಳೆದಿದೆ, ಬಹು ಪ್ರಶಂಸೆ ಗಳಿಸಿದೆ.
ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿ ಕಾಣಬರುವ ಎಲ್ಲಾ ಕಡಲ ಬೆದರಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವ ಮತ್ತು ಸಾಗರ ಮಾರ್ಗದಲ್ಲಿನ ಎಲ್ಲಾ ನಾವಿಕರು ಹಾಗೂ ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಾಗರ ಮಾರ್ಗಗಳ ಸುರಕ್ಷತೆ ಗೆಂದು ಭಾರತೀಯ ನೌಕಾಪಡೆಯು ಹಮ್ಮಿಕೊಂಡಿರುವ ಇಂಥ ಸಕಾಲಿಕ ಪ್ರಯತ್ನಗಳಿಗೆ ಎಲ್ಲೆಡೆಯಿಂದ ಪ್ರಶಂಸೆ ದಕ್ಕಿದೆ. ಇದು ಸಾಗರ ವಲಯದಲ್ಲಿ ಹೊಮ್ಮುವ ಬಿಕ್ಕಟ್ಟಿಗೆ ಪ್ರತಿಸ್ಪಂದಿಸುವ ಭಾರತದ ಸಾಮರ್ಥ್ಯ, ಪ್ರಭಾವ ಮತ್ತು ತನ್ಮೂಲಕ ದೇಶಕ್ಕೆ ದಕ್ಕಿರುವ ಖ್ಯಾತಿಯ ದ್ಯೋತ ಕವಾಗಿದೆ. ಇದು ಎಲ್ಲಾ ಭಾರತೀಯರಿಗೆ ಹೆಮ್ಮೆಯ ವಿಷಯವೂ ಹೌದು.
(ಲೇಖಕರು ಹವ್ಯಾಸಿ ಬರಹಗಾರರು)