ಭಾಸ್ಕರಾಯಣ
ಎಂ.ಕೆ.ಭಾಸ್ಕರ ರಾವ್
ನಿರುದ್ಯೋಗ, ಹಸಿವು ಮನುಷ್ಯರಿಂದ ಎಂಥ ಕೆಲಸವನ್ನಾದರೂ ಮಾಡಿಸುತ್ತದೆ. ನಿರುದ್ಯೋಗ ನಿವಾರಣೆಗೆ ನಮ್ಮ ಸರಕಾರಗಳು ಆದ್ಯತೆ ಕೊಡಲಿಲ್ಲ. ನಾಯಿಗೆ ಹಳಸಿದ ಬ್ರೆಡ್ ಎಸೆದಂತೆ ಪುಡಿಗಾಸು ಚೆಲ್ಲಿ ಜನರನ್ನು ಮರುಳು ಮಾಡುವ ಕೆಲಸಕ್ಕೆ ಸರಕಾರಗಳು ಮುಂದಾದರೆ ಸಮಸ್ಯೆ ಯಾವತ್ತೂ ಬಗೆಹರಿಯುವುದು ಸಾಧ್ಯವಿಲ್ಲ.
ಮುಂದಿನ ೨ ವರ್ಷದಲ್ಲಿ ಈ ನೆಲದಿಂದ ಎಡಪಂಥೀಯ ಉಗ್ರವಾದವನ್ನು ಅರ್ಥಾತ್ ನಕ್ಸಲೀಯ ಚಳವಳಿಯನ್ನು ಮೂಲೋತ್ಪಾಟನ ಮಾಡುವ
ಪ್ರತಿeಯನ್ನು ಗೃಹ ಸಚಿವ ಅಮಿತ್ ಶಾ ಸ್ವೀಕರಿಸಿದ್ದಾರೆ. ಈಗಾಗಲೇ ಈ ಚಳವಳಿ ತನ್ನ ಪ್ರಭಾವವನ್ನು ಗಣನೀಯ ಅಂದರೆ ಶೇ.೬೫ರಿಂದ
೭೦ರಷ್ಟು ಪ್ರಮಾಣದಲ್ಲಿ ಕಳೆದುಕೊಂಡಿದ್ದು ಮುಂದಿನ ೨ ವರ್ಷದಲ್ಲಿ ಬೇರುಸಹಿತ ಹೊಸಕಿ ಹಾಕುವ ಛಲ ಅವರ ಮಾತುಗಳಲ್ಲಿ ವ್ಯಕ್ತವಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಗೆ ಭಾರಿ ಕಂಟಕ ಪ್ರಾಯವಾಗಿರುವ, ಜನತೆಯನ್ನು ದಿಕ್ಕು ತಪ್ಪಿಸುತ್ತಿರುವ ನಕ್ಸಲೀಯ ಆಂದೋಲನಕ್ಕೆ ಶಾಶ್ವತವಾಗಿ
ಅಂತ್ಯ ಹೇಳದಿದ್ದರೆ ದೇಶದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಆಗದೆಂಬ ತೀರ್ಮಾನಕ್ಕೆ ಕೇಂದ್ರ ಸಚಿವರು ಬಂದಿದ್ದಾರೆ. ಶಾಂತಿ-ನೆಮ್ಮದಿ ಸ್ಥಾಪನೆಯ ಸರಕಾರದ ಯತ್ನವನ್ನು ಯಾರೂ ಪ್ರಶ್ನಿಸಲಾರರು. ಆದರೆ ಈ ನೆಲದಲ್ಲಿ ನಕ್ಸಲೀಯ ಚಳವಳಿ ಉಗಮಗೊಂಡಿದ್ದು ಯಾಕೆ ಮತ್ತು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕದೆ ಮಿಲಿಟರಿಯನ್ನೋ ಪೊಲೀಸ್ ಬಲವನ್ನೋ ಬಳಸಿ ಹತ್ತಿಕ್ಕುವ ಕ್ರಮಕ್ಕೆ ಮುಂದಾದರೆ, ಪಂಚಾಂಗ ಸುಟ್ಟು ನಕ್ಷತ್ರವನ್ನು ಸುಟ್ಟಂತಾಯಿತೆಂದು ಭ್ರಮಿಸಿದಂತೆ ಆಗಬಹುದು.
ಹಿಂಸಾಚಾರಕ್ಕೆ ಯಾವ ಸರಕಾರವೂ ಯಾವತ್ತೂ ಬಹಿರಂಗ ಬೆಂಬಲ ಕೊಟ್ಟಿರುವ ನಿದರ್ಶನಗಳು ಅಪರೂಪ. ಭಾರತದಂಥ ದೇಶದಲ್ಲಿ ಯಾವುದೇ
ಪಕ್ಷದ ಸರಕಾರವಿದ್ದರೂ ಅವುಗಳ ಘೋಷಿತ ಆದ್ಯತೆ- ಅಭಿವೃದ್ಧಿ ಮತ್ತು ಹಿಂಸೆಮುಕ್ತ ಸಮಾಜ. ಭಾರತ ಹೇಳಿಕೇಳಿ ಅಹಿಂಸಾವಾದವನ್ನು ಜಗತ್ತಿಗೆ
ಸಾರಿದ ದೇಶ. ಬುದ್ಧ, ಮಹಾವೀರ ಮುಂತಾದ ಅನೇಕರು ಸಾರಿದ ಉಪದೇಶದಲ್ಲಿ ಹಿಂಸೆಗೆ ಸ್ಥಾನವೇ ಇಲ್ಲ. ಭಾರತ ಸ್ವಾತಂತ್ರ್ಯ ಹೋರಾಟದ
ಅಗ್ರಗಣ್ಯ ನಾಯಕ ಮಹಾತ್ಮ ಗಾಂಧಿಯವರು ತುಳಿದ ಅಹಿಂಸಾ ಮಾರ್ಗ ಈ ಹೊತ್ತು ಜಗತ್ತಿಗೇ ಮಾದರಿ.
ಇಂತಿಪ್ಪ ದೇಶದಲ್ಲಿ ಎಡಪಂಥೀಯ ಉಗ್ರವಾದ ತನ್ನ ಕುರೂಪಿ ಹೆಡೆ ಅಗಲಿಸಿ ಬುಸುಗುಡುತ್ತಿರುವುದು ಅನಪೇಕ್ಷಿತ ಬೆಳವಣಿಗೆ. ಇದೇನೋ ಸರಿಯೇ. ಆದರೆ ಶಾಂತಿಪ್ರಿಯ ಭಾರತದಲ್ಲಿ ಮಾವೋವಾದ ಪ್ರತಿಪಾದಕ ನಕ್ಸಲಿಸಂ ಯಾವ ಕಾರಣಕ್ಕಾಗಿ ಜನ್ಮ ತಾಳಿತು ಎನ್ನುವುದನ್ನು ಅರ್ಥಮಾಡಿ ಕೊಳ್ಳದಿದ್ದರೆ ಅದರ ವಿರುದ್ಧದ ಕಾರ್ಯಾಚರಣೆ ಕೇವಲ ‘ಹುತ್ತವ ಬಡಿದಂತೆ’ ಆಗಬಹುದು. ಮಾವೋವಾದ ಎಂದು ನಕ್ಸಲೀಯರು ತಮ್ಮನ್ನು ಕರೆದುಕೊಂಡಾಗಲೇ ಚೀನಾ ದೇಶವನ್ನು ಕೈವಶ ಮಾಡಿಕೊಳ್ಳುವುದಕ್ಕೆ ಕೆಂಪು ನಾಯಕ ಮಾವೋತ್ಸೆ ತುಂಗ್ ಆಯ್ದುಕೊಂಡ ಸಶಸ್ತ್ರ ಕ್ರಾಂತಿಯ ಪ್ರಭಾವಕ್ಕೆ ಇವರು ಒಳಗಾಗಿರುವುದು ನಿಚ್ಚಳವಾಗುತ್ತದೆ. ಭಾರತ ಮೂಲತಃ ಕೃಷಿ ಪ್ರಧಾನ ದೇಶ.
ರೈತರು, ಕೃಷಿ ಕೂಲಿ ಕಾರ್ಮಿಕರು ಯಾವತ್ತೂ ಗೌರವದ ಬಾಳ್ವೆ ನಡೆಸಿದವರಲ್ಲ. ಕೃಷಿ ಉತ್ಪಾದನೆಗೆ ಮರ್ಯಾದೆಯ ಬೆಲೆಯನ್ನು ಈ ದೇಶ ಯಾವತ್ತೂ ಕೊಟ್ಟಿಲ್ಲ. ದೇಶದಲ್ಲಿ ಔದ್ಯಮಿಕ ಕ್ರಾಂತಿ ವ್ಯಾಪಕವಾಗುತ್ತ ಹೋದಂತೆ ಅದರಲ್ಲಿ ದುಡಿಯುವ ಜನ ಸಂಘಟಿತ ವಲಯದ ಕಾರ್ಮಿಕರೆನಿಸಿ ಮುಷ್ಕರ ಪ್ರತಿಭಟನೆಗಳ ಮೂಲಕ ತಮಗೆ ಬೇಕಾದ ಸವಲತ್ತನ್ನು ಪಡೆದರೆ ಅಸಂಘಟಿತ ವಲಯ ಇನ್ನಷ್ಟು ತಾತ್ಸಾರಕ್ಕೆ ಒಳಗಾಯಿತು. ಪಶ್ಚಿಮ ಬಂಗಾಳ ದಲ್ಲಿ ಈ ಶೋಷಣೆಯ ವಿರುದ್ಧ ಎದ್ದ ಪ್ರತಿಭಟನಾತ್ಮಕ ಕೂಗು ನಕ್ಸಲಿಸಂ ಎಂಬ ಹೆಸರು ಪಡೆದುಕೊಂಡಿತು. ಆ ರಾಜ್ಯದ ಪಶ್ಚಿಮ ಪರಗಣ ಜಿಲ್ಲೆಯ ನಕ್ಸಲಬರಿ ಎಂಬ ಅಭಿವೃದ್ಧಿ ಹೀನ ಹಳ್ಳಿಯಲ್ಲಿ ಹುಟ್ಟಿಕೊಂಡ ಆಂದೋಲನ ದೇಶವ್ಯಾಪಿ ಆಳುಗರಲ್ಲಿ ನಡುಕ ಸೃಷ್ಟಿಸಿದ ನಕ್ಸಲೀಯ ಚಳವಳಿ ಎನಿಸಿದ್ದು ಕಾಲಾಂತರದ ಬೆಳವಣಿಗೆ.
೬೦ರ ದಶಕದಲ್ಲಿ ಹುಟ್ಟಿಕೊಂಡ ಈ ಚಳವಳಿಗೆ ಐದೂವರೆ ದಶಕಕ್ಕೂ ಹೆಚ್ಚಿನ ಇತಿಹಾಸವಿದೆ. ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ, ಛತ್ತೀಸ್ ಗಢ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಜಮ್ಮು-ಕಾಶ್ಮೀರಗಳಲ್ಲಿ ವ್ಯಾಪಕವಾಗಿ, ಕರ್ನಾಟಕ, ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ಅಲ್ಲಲ್ಲಿ ನಕ್ಸಲೀಯ ಚಟುವಟಿಕೆ ಸಾಗಿದೆ. ಈ ಚಳವಳಿಯನ್ನು ಹತ್ತಿಕ್ಕುವುದಕ್ಕಾಗಿ ಬಹುತೇಕ ಎಲ್ಲ ರಾಜ್ಯಗಳೂ ನಕ್ಸಲೀಯ ನಿಗ್ರಹ ಪಡೆಯನ್ನು ರಚಿಸಿವೆ. ಕೇಂದ್ರ ಸರಕಾರವೂ ತನ್ನದೇ ಆದ ರೀತಿಯಲ್ಲಿ ನಕ್ಸಲೀಯರನ್ನು ಬಗ್ಗು ಬಡಿಯುವ ವ್ಯವಸ್ಥೆಯನ್ನು ಹೊಂದಿದೆ.
‘ನಕ್ಸಲೀಯ ಚಳವಳಿಯನ್ನು ಬೆಂಬಲಿಸಿ’ ಎಂಬ ಪುಟ್ಟದೊಂದು ಕರಪತ್ರ ಭಾರತದ ಯಾವುದೇ ಮೂಲೆಯಲ್ಲಿ ಕಾಣಸಿಕ್ಕಿದರೂ ಅದು ದೇಶದ ಬಹುದೊಡ್ಡ ಸುದ್ದಿಯಾಗುತ್ತದೆ. ಅದರ ಮೂಲವನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಆಯಾ ರಾಜ್ಯ ಸರಕಾರದ ಜತೆ ಕೇಂದ್ರ ಕೈಜೋಡಿಸುತ್ತದೆ. ನಕ್ಸಲೀಯ ಚಳವಳಿ ಯಲ್ಲಿ ಎಂಜಿನಿಯರುಗಳು, ವೈದ್ಯರು, ವಿಶ್ವವಿದ್ಯಾಲಯದ ಅಧ್ಯಾಪಕರು, ಪ್ರಾಧ್ಯಾಪಕರು, ಉಪ ನ್ಯಾಸಕರು, ಕವಿಗಳು, ಕಾದಂಬರಿಕಾರರು, ನಾಟಕಕಾರರು, ಕಲಾವಿದರು, ಒಳಿತಿನ ಕನವರಿಕೆ ಯಲ್ಲಿರುವ ಯುವ ಸಮುದಾಯ ಒಳಗೊಂಡಂತೆ ದೇಶದ ಬಹಳಷ್ಟು ಮಂದಿ ಬುದ್ಧಿಜೀವಿಗಳು ಶಾಮೀಲಾಗಿದ್ದಾರೆ.
ಅವರೆಲ್ಲ ಬುದ್ಧಿಗೇಡಿಗಳೇನು? ಹೋದಲ್ಲಿ ಬಂದಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗುವ ಅಪಾಯವು ತೂಗುಕತ್ತಿಯಂತೆ ನೆತ್ತಿ ಮೇಲೆ
ತೂಗುತ್ತಿರುವಾಗ ಜೀವ ಒತ್ತೆ ಇಡುವ ಧೈರ್ಯ ಅವರಿಗೆ ಎಲ್ಲಿಂದ ಮತ್ತು ಯಾಕಾಗಿ ಬರುತ್ತದೆ? ಸರಕಾರ ಇದನ್ನು ಯೋಚಿಸಿದಂತೆ ಕಾಣುವುದಿಲ್ಲ.
ಮೂಲತಃ ನಕ್ಸಲಿಸಂ ಎಂದರೆ ಏನು? ಅದು ಸಾಮಾಜಿಕ-ಆರ್ಥಿಕ ಸಮಸ್ಯೆಯೇ ಅಥವಾ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಗಂಭೀರ ಯತ್ನ ಅಗತ್ಯ ಪ್ರಮಾಣದಲ್ಲಿ ಈ ದೇಶದಲ್ಲಂತೂ ನಡೆದಿಲ್ಲ.
ವೈ.ಬಿ. ಚೌಹಾಣರು ಗೃಹ ಸಚಿವರಾಗಿದ್ದಾಗ, ಇದೊಂದು ಸಾಮಾಜಿಕ-ಆರ್ಥಿಕ ಸಮಸ್ಯೆಯಾಗಿದ್ದು ಶೋಷಣೆ ಮುಕ್ತ ಅಭಿವೃದ್ಧಿ ಮುನ್ನಡೆ ಸಾಧಿಸುತ್ತ ಹೋದಂತೆ ನಕ್ಸಲೀಯ ಆಂದೋಲನ ತನ್ನ ಕಸುವನ್ನು ತಾನೇ ಕಳೆದುಕೊಳ್ಳುತ್ತದೆ ಎಂಬ ಆಶಾಭಾವ ಹೊಂದಿದ್ದರು. ಶೋಷಣೆ ಮುಕ್ತ ಅಭಿವೃದ್ಧಿ ಯಾವ ಪ್ರಮಾಣದಲ್ಲಿ ಆಗಬೇಕಿತ್ತೋ ಆ ಪ್ರಮಾಣದಲ್ಲಿ ಆಗಲೇ ಇಲ್ಲ. ಉದಾರೀಕರಣ, ಜಾಗತೀಕರಣ, ಖಾಸಗೀಕರಣದಂಥ ‘ತ್ರಿ-ಕರಣ’ವೂ ಜಾದೂ ಮಾಡಲಿಲ್ಲ. ಬಡವರು ಇನ್ನಷ್ಟು ಬಡವರಾದರು, ಶ್ರೀಮಂತರು ಮತ್ತಷ್ಟು ಶ್ರೀಮಂತರಾದರು. ದೇಶದ ಸಂಪತ್ತು ಹಿಡಿಯಷ್ಟು ಮಂದಿ ಕೈಯಲ್ಲಿರುವ ವಿಪರ್ಯಾಸವನ್ನು ನೋಡಿದರೆ ಸಮಸ್ಯೆಗೆ ಸುಲಭದಲ್ಲಿ ಪರಿಹಾರ ಸಿಕ್ಕೀತೆನ್ನಿಸದು.
ಉಳ್ಳವರ ಮತ್ತು ಇಲ್ಲದವರ ನಡುವಣ ಅಂತರ ಇತ್ತೀಚಿನ ಕೆಲವು ದಶಕಗಳಲ್ಲಿ ಹೆಚ್ಚಿರುವುದನ್ನು ನೋಡಿದರೆ ಬಡವರು ಅನುಭವಿಸುತ್ತಿರುವ
ಹೀನಾಯ ಸ್ಥಿತಿ ಮನದಟ್ಟಾಗುತ್ತದೆ. ಮನಮೋಹನ್ ಸಿಂಗ್ ೧೦ ವರ್ಷ ಯುಪಿಎ ಸರಕಾರದ ಪ್ರಧಾನಿ ಆಗಿದ್ದರು. ಅದಕ್ಕೂ ಮೊದಲು ಪ್ರಧಾನಿ ಪಿ.ವಿ. ನರಸಿಂಹ ರಾವ್ ಸಂಪುಟದಲ್ಲಿ ಅರ್ಥ ಸಚಿವರಾಗಿದ್ದ ಅವರು ಹೊಸ ಆರ್ಥಿಕ ನೀತಿಯನ್ನು ಜಾರಿಗೊಳಿಸಿದವರು. ಅಲ್ಲಿಂದ ಮುಂದಕ್ಕೆ ಸ್ವತಃ ಪ್ರಧಾನಿ ಸ್ಥಾನದಲ್ಲಿ ಕುಳಿತ ಅವರು ಭ್ರಮನಿರಸನದಲ್ಲಿ ನರಳಿದರು. ಈ ಮಾತಿಗೆ ಅವರು ಪ್ರಧಾನಿಯಾಗಿ ಕೆಂಪುಕೋಟೆ ಮೇಲೆ ಆಗಸ್ಟ್ ೧೫ರಂದು ಧ್ವಜಾರೋಹಣ ಮಾಡಿ ಆಡಿದ ಮಾತು ಪುರಾವೆ.
‘ಹಳೆಯ ಆರ್ಥಿಕ ನೀತಿಯಿಂದ ಅಪೇಕ್ಷಿತ ಬೆಳವಣಿಗೆ ಆಗಿಲ್ಲ ಎಂಬ ದೃಷ್ಟಿಯಲ್ಲಿ ಅದಕ್ಕೆ ಬದಲಿಯಾಗಿ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತಂದೆವು. ಅದಕ್ಕೆ ಪೂರ್ವದಲ್ಲಿ ಹಲವು ಪಂಚವಾರ್ಷಿಕ ಯೋಜನೆ ಗಳನ್ನು ಅನುಷ್ಠಾನ ಮಾಡಿದೆವು. ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಪ್ರಯೋಗಕ್ಕೆ ದೇಶವನ್ನು ಒಡ್ಡಿದೆವು. ಇಷ್ಟೆಲ್ಲ ಮಾಡಿದ ಬಳಿಕವೂ ದೇಶದ ೨೫ ಕೋಟಿ ಜನರಿಗೆ ಎರಡು ಹೊತ್ತಿನ ಊಟಕ್ಕೆ ತತ್ವಾರದ ಸ್ಥಿತಿ ಇದೆ’ ಎಂದು ಸಿಂಗ್ ದುಃ ಖಿಸಿದ್ದರು. ನರೇಂದ್ರ ಮೋದಿಯವರು ಪ್ರಧಾನಿ ಯಾಗಿ ಐದಾರು ವರ್ಷ ಕಳೆದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರು, ದೇಶದ ೨೦ ಕೋಟಿ ಜನ ಹಸಿವಿನಲ್ಲಿ ನರಳುತ್ತಿದ್ದಾರೆಂಬ ಆತಂಕ ವ್ಯಕ್ತಪಡಿಸಿದ್ದರು. ಇದರ ಅರ್ಥ ಬಹಳ ಸ್ಪಷ್ಟ.
ದೇಶವನ್ನು ಅತಿಹೆಚ್ಚು ಅವಽಗೆ ಆಳಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ದೇಶದ ಬಹಳ ದೊಡ್ಡ ಸಮಸ್ಯೆ ಹಸಿವು ಎಂಬ ಕಾರಣ ಗೊತ್ತಿದೆ; ಆದರೆ
ಪರಿಹಾರೋಪಾಯ ಗೊತ್ತಿಲ್ಲ. ನಿರುದ್ಯೋಗ, ಹಸಿವು ಮನುಷ್ಯರಿಂದ ಎಂಥ ಕೆಲಸವನ್ನಾದರೂ ಮಾಡಿಸುತ್ತದೆ. ನಿರುದ್ಯೋಗ ನಿವಾರಣೆಗೆ ನಮ್ಮ ಸರಕಾರಗಳು ಆದ್ಯತೆ ಕೊಡಲಿಲ್ಲ. ನಾಯಿಗೆ ಹಳಸಿದ ಬ್ರೆಡ್ ಎಸೆದಂತೆ ಪುಡಿಗಾಸು ಚೆಲ್ಲಿ ಜನರನ್ನು ಮರುಳು ಮಾಡುವ ಕೆಲಸಕ್ಕೆ ಸರಕಾರಗಳು ಮುಂದಾದರೆ ಸಮಸ್ಯೆ ಯಾವತ್ತೂ ಬಗೆಹರಿಯುವುದು ಸಾಧ್ಯವಿಲ್ಲ.
ಹಸಿವಿನಿಂದ ನರಳುತ್ತಿರುವವರು, ಜಾತಿ ಮುಂತಾದ ಕಾರಣಕ್ಕೆ ಅವಹೇಳನಕ್ಕೆ ಈಡಾದವರು, ದುಡಿಯುವ ಶಕ್ತಿ ಇದ್ದರೂ ಕೈಗಳಿಗೆ ಕೆಲಸವಿಲ್ಲದ ಅನಾಥ ಪ್ರeಯಲ್ಲಿರುವವರು, ಕೀಳರಿಮೆಯಲ್ಲಿ ಬಳಲುತ್ತಿರುವವರು, ಸಾಮಾಜಿಕ ಅಸಮತೋಲನದಿಂದ ಕಂಗೆಟ್ಟವರು ಹೊಟ್ಟೆಯ ಸಿಟ್ಟು ರಟ್ಟೆಗೆ ಬರುವ ಸಮಯಕ್ಕೆ ಕಾಯುತ್ತಿರುತ್ತಾರೆ. ಅಂಥ ಮನಃಸ್ಥಿತಿಯವರಲ್ಲಿ ನಕ್ಸಲೀಯ ಬೀಜಾಂಕುರವಾದರೆ ಕ್ರಮೇಣ ಅವರು ಶೋಷಕ ಸಮಾಜ ಮತ್ತು ಅದಕ್ಕೆ ಒತ್ತಾಸೆಯಾಗಿ ನಿಂತ ಸರಕಾರದ ವಿರುದ್ಧ ಬಂಡಾಯದ ಲಡಾಯಿ ಸಾರುತ್ತಾರೆ. ಒಂದು ಕಾಲದಲ್ಲಿ ದೇಶದ ೨೦ ರಾಜ್ಯಗಳ ೮೩ ಜಿಲ್ಲೆಗಳಲ್ಲಿ ನಕ್ಸಲಿಸಂ ವ್ಯಾಪಕವಾಗಿತ್ತು. ಈಗ ಅದು ಗಣನೀಯ ಪ್ರಮಾಣದಲ್ಲಿ ತಗ್ಗಿದೆ.
ಆದರೆ ಅದರತ್ತ ಜನಮಾನಸದ ಒಲವು ಕಡಿಮೆ ಆಗಿಲ್ಲ ಎಂದೇ ಅಮಿತ್ ಶಾ ಬೇರು ಸಹಿತ ನಕ್ಸಲಿಸಂ ಅನ್ನು ಕಿತ್ತುಹಾಕುವ ಮಾತಾಡುತ್ತಿದ್ದಾರೆ.
ಚೌಹಾಣರು ಗೃಹ ಸಚಿವರಾಗಿದ್ದ ಎಷ್ಟೋ ವರ್ಷದ ಬಳಿಕ ಮನಮೋಹನ್ ಸಿಂಗ್ ಸಂಪುಟದಲ್ಲಿ ಕೆಲವು ಸಮಯ ಪಿ.ಚಿದಂಬರಂ ಗೃಹ ಸಚಿವ ರಾಗಿದ್ದರು. ಆ ಸಂದರ್ಭದಲ್ಲಿ ಛತ್ತೀಸ್‌ಗಢದಲ್ಲಿ ಮೇರೆ ಮೀರಿದ ನಕ್ಸಲೀಯ ಹಾವಳಿ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ನಕ್ಸಲೀಯರ ನಿಯಂತ್ರಣಕ್ಕೆ ಪೊಲೀಸು, ಮಿಲಿಟರಿ ಬಲ ಬಳಸುವುದಾಗಿಯೂ ಅದರಿಂದ ನಿಯಂತ್ರಣಕ್ಕೆ ಬರಲಿಲ್ಲ ಎಂದಾದರೆ ನಕ್ಸಲೀಯರು ಅಡಗಿಕೊಂಡು ಚಟುವಟಿಕೆ ನಡೆಸಿರುವ ಛತ್ತೀಸ್‌ಗಢದ ಅರಣ್ಯ ಪ್ರದೇಶದಲ್ಲಿ ಬಾಂಬ್ ದಾಳಿ ನಡೆಸುವುದಾಗಿಯೂ ಹೇಳಿದ್ದು ವರದಿಯಾಗಿ ನಾಗರಿಕ ಸಮುದಾಯ ಬೆಚ್ಚಿ ಬೀಳುವಂತಾಗಿತ್ತು.
ಬಾಂಬ್ ಕೇವಲ ನಕ್ಸಲೀಯರನ್ನು ಮಾತ್ರವೇ ಹುಡುಕಿ ಹುಡುಕಿ ಕೊಲ್ಲುತ್ತದೆಯೆ? ಅರಣ್ಯದಲ್ಲಿರುವ ಅಮಾಯಕ ಆದಿವಾಸಿಗಳನ್ನೂ ಸಕಲ ಚರಾಚರಗಳನ್ನೂ ಸುಟ್ಟು ಬೂದಿ ಮಾಡು ತ್ತದಲ್ಲವೆ? ಆದರೆ ಚಿದಂಬರಂ ಆ ದೃಷ್ಟಿಯಿಂದ ಯೋಚಿಸಿರಲೇ ಇಲ್ಲ. ಅವರ ಹೇಳಿಕೆಯು, ನಕ್ಸಲಿಸಂ ಅನ್ನು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎಂದು ಭ್ರಮಿಸಿರುವ ಪೊಲೀಸರ ನಿಲುವನ್ನು ಆಧರಿಸಿದ್ದಾಗಿತ್ತು. ಕಟ್ಟಕಡೆಯ ಮನುಷ್ಯರಿಗೆ ಮೊತ್ತಮೊದಲ ಮನ್ನಣೆ ಸಿಗಬೇಕು ಎಂದು ರಾಮಮನೋಹರ ಲೋಹಿಯಾ ಪದೇ ಪದೆ ವಾದಿಸುತ್ತಿದ್ದರು.
ಕಡುಬಡವನು ಸರಕಾರದ ಕಾರ್ಯಕ್ರಮಗಳ ಮೊದಲ ಫಲಾನುಭವಿ ಆದ ದಿವಸ ಈ ಮಣ್ಣಿನಲ್ಲಿ ಶಾಂತಿ ನೆಲೆಸುತ್ತದೆ. ಹಸಿವುಮುಕ್ತ ಸಮಾಜ, ಹಿಂಸೆಮುಕ್ತ ಸಮಾಜವೂ ಆಗುತ್ತದೆ. ಸರಕಾರಗಳು ಈ ನಿಟ್ಟಿನಲ್ಲಿ ಯೋಚಿಸುತ್ತಿಲ್ಲ ಎಂಬ ಕಾರಣಕ್ಕೆ ಸಮಾಜ ‘ಹರಕೆಯ ಕುರಿ’ ಆಗಿದೆ.