Friday, 13th December 2024

ಇಂಥ ಬೆಳವಣಿಗೆಗೆ ಲಗಾಮು ಹಾಕಬೇಕಿದೆ

ಕಳಕಳಿ

ಬೆಳ್ಳೆ ಚಂದ್ರಶೇಖರ ಶೆಟ್ಟಿ

ಐದು ತಿಂಗಳಿಂದ ವೇತನವಿಲ್ಲದ ‘ನಮ್ಮ ಕ್ಲಿನಿಕ್’ ಸಿಬ್ಬಂದಿಯ ಅವಸ್ಥೆಯ ಸುದ್ದಿ ಓದಿ ಕರುಳು ಚುರುಕ್ ಎಂದಿತು. ಜನರ ಸ್ವಾಸ್ಥ್ಯ ರಕ್ಷಣೆಗೆ ಕಟಿಬದ್ಧರಾಗಿ ದುಡಿಯುವ ಈ ಸಿಬ್ಬಂದಿವರ್ಗಕ್ಕೆ ವೇತನ ನೀಡದೆ ಅವರ ಸ್ಥಿತಿಗತಿಯನ್ನು ಅಸ್ವಸ್ಥಗೊಳಿಸಿರುವುದು ಸರಿಯಲ್ಲ. ಇದು ‘ನಮ್ಮ ಕ್ಲಿನಿಕ್’ಗೆ ಬರುವ ರೋಗಿಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಸಂಕಷ್ಟದಲ್ಲಿರುವ ಗುತ್ತಿಗೆ ಸಿಬ್ಬಂದಿಯು ಜೀವನ ನಿರ್ವಹಣೆಗಾಗಿ ಅನಿವಾರ್ಯವಾಗಿ ಅಡ್ಡದಾರಿಯನ್ನು ಹುಡುಕಲು ಸಂಸ್ಥೆಯೇ ಪ್ರೋತ್ಸಾಹಿಸಿದಂತಾಗುತ್ತದೆ.

ಗುತ್ತಿಗೆ ಕೆಲಸಗಾರರ ಶೋಷಣೆಯನ್ನು ತಡೆದು ಅವರಿಗೆ ರಕ್ಷಣೆ ಒದಗಿಸುವ ಸಲುವಾಗಿಯೇ ‘ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತಯ ರದ್ದತಿ) ಕಾಯ್ದೆ ೧೯೭೦’ ನಮ್ಮಲ್ಲಿ ಅಸ್ತಿತ್ವದಲ್ಲಿದೆ. ಸದರಿ ಕಾಯ್ದೆಯನುಸಾರ, ಹೊರಗುತ್ತಿಗೆ ನೌಕರರಿಗೆ ನಿಗದಿತ ದಿನಾಂಕದೊಳಗೆ ನಿಶ್ಚಿತ ವೇತನ ಮತ್ತು ಸೌಲಭ್ಯಗಳನ್ನು ಗುತ್ತಿಗೆದಾರ ಒದಗಿಸದಿದ್ದಲ್ಲಿ, ಅವರನ್ನು ಗೊತ್ತುಪಡಿಸಿದ ಸಂಸ್ಥೆಯೇ (ಪ್ರಧಾನ ಮಾಲೀಕನಾಗಿ) ಸಕಾಲದಲ್ಲಿ ಭರಿಸಿ ನಿರ್ವಹಿಸದಿದ್ದಲ್ಲಿ ಅದು ಕಾನೂನಿನ
ಉಲ್ಲಂಘನೆ ಎನಿಸಿಕೊಂಡು ದಂಡನಾರ್ಹವಾಗುತ್ತದೆ. ಆರೋಪ ನಿಜವಾದಲ್ಲಿ, ಬಿಬಿಎಂಪಿಯು ಕಾನೂನು ಉಲ್ಲಂಸಿದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಹಲವಾರು ಕಾರ್ಮಿಕ ಕಾನೂನುಗಳ ಉಲ್ಲಂಘನೆಗಳು ಹೆಚ್ಚಾಗಿ ಸರಕಾರಿ, ಸರಕಾರದ ಅಂಗಸಂಸ್ಥೆ/ನಿಗಮಗಳು ಅಥವಾ ಸ್ಥಳೀಯ ಸಂಸ್ಥೆಗಳಿಂದಲೇ ಆಗುತ್ತಿದ್ದರೂ, ಅದರ ಅನುಪಾಲನೆಯ ಕಾವಲುಗಾರನಂತಿರಬೇಕಾದ ರಾಜ್ಯ ಕಾರ್ಮಿಕ ಇಲಾಖೆಯು ಕುಂಭಕರ್ಣನ ನಿದ್ರೆಯಲ್ಲಿರುವುದು ಅಥವಾ ಸಿನಿಮಾ ದಲ್ಲಿ ಎಲ್ಲ ಮುಗಿದ ಮೇಲೆ ಬರುವ ಪೊಲೀಸರಂತೆ ವಿಳಂಬನೀತಿ ತೋರುವುದು ಅಚ್ಚರಿಯ ಸಂಗತಿ.

ಖಾಸಗಿ ಸಂಸ್ಥೆಗಳಲ್ಲಿ ಕೇವಲ ಸಣ್ಣ-ಪುಟ್ಟ ನಿರ್ವಹಣಾ ದೋಷವಿದ್ದರೂ ಉದ್ದುದ್ದ ನೋಟಿಸ್ ನೀಡಿ ಕಚೇರಿಗೆ ಆಹ್ವಾನಿಸುವ ಕಾರ್ಮಿಕ ಇನ್ಸ್‌ಪೆಕ್ಟರ್ ರಾಜರಿಗೆ ಸರಕಾರಿ ಸಂಸ್ಥೆಗಳೆಂದರೆ ಅಲರ್ಜಿಯೇ? ಇಂಥ ಸಂಸ್ಥೆಗಳ ಆವರಣಗಳಲ್ಲಿ ಕಾನೂನಿನ ಅನುಸಾರ ಸೂಚನಾ ಫಲಕದಲ್ಲಿ ಸೂಕ್ತ ನಮೂದುಗಳನ್ನು ಮಾಡಿ ಬದ್ಧತೆಯಿಂದ ಪ್ರದರ್ಶಿಸದೆ ದಂಡನಾರ್ಹ ಅಪರಾಧ ಎಸಗುತ್ತಿರುವುದು ಇಂಥ ಅಧಿಕಾರಿಗಳಿಗೆ ಗೊತ್ತಿಲ್ಲವೇ? ಈ ಕುರಿತು ಅರಿವು ಮೂಡಿಸುವ ಬದ್ಧತೆ ಇಲಾಖೆಗಿಲ್ಲವೇ? ಅದೇನೇ ಇರಲಿ, ಗುತ್ತಿಗೆ ಕೆಲಸಗಾರರ ವೇತನವನ್ನು ಸಕಾಲದಲ್ಲಿ ಪಾವತಿಸಿ ಘೋಷಣಾ ಪತ್ರ ನೀಡದ ಹೊರತು, ಸಂಬಂಧಿಸಿದ ಮೇಲಧಿ ಕಾರಿಗಳ ಸಂಬಳವನ್ನು ಬಿಡುಗಡೆ ಮಾಡಲಾಗದು ಎಂಬ ಕಠಿಣ ಷರತ್ತು ವಿಧಿಸಿ, ಪಾಲಿಕೆ ‘ನಮ್ಮ ಕ್ಲಿನಿಕ್’ ಗುತ್ತಿಗೆ ಸಿಬ್ಬಂದಿಯನ್ನು ವಾಡಿಕೆಯ ನೌಕರರಂತೆಯೇ ಪರಿಗಣಿಸಿ ತನ್ನ ವರ್ಚಸ್ಸನ್ನು ಕಾಪಾಡಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಆಯುಕ್ತರು ಮತ್ತು ಇಲಾಖೆಗಳು ದಿಟ್ಟಕ್ರಮವನ್ನು ಕೈಗೊಳ್ಳಬೇಕು.

(ಲೇಖಕರು ಹವ್ಯಾಸಿ ಬರಹಗಾರರು)