ಅಭಿಪ್ರಾಯ
ಪ್ರೊ.ಸಿದ್ದು ಯಾಪಲಪರವಿ
ಹೊಸ ಶಿಕ್ಷಣ ನೀತಿಯ ಅನುಷ್ಠಾನ ವಿವಿಧ ಹಂತಗಳಲ್ಲಿ ಜಾರಿಯಾಗುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಉದ್ಯೋಗಾವಕಾಶವನ್ನು ಗಮನದಲ್ಲಿಟ್ಟುಕೊಂಡು ಆರಂಭವಾದ ಪಾಲಿಟೆಕ್ನಿಕ್ ಡಿಪ್ಲೊಮಾ ಕೋರ್ಸ್ ಈಗ ಸಂಪೂರ್ಣ ಹೊಸ ರೂಪ ತಾಳಿದೆ. ಹೊಸ ಶಿಕ್ಷಣ ನೀತಿಯ ಅಭಿಲಾಷೆಯಂತೆ ಸದರಿ ವರ್ಷದಿಂದಲೇ ತನ್ನ ಬದಲಾವಣೆಯನ್ನು ಜಾರಿ ಮಾಡಿದೆ.
ಜಾಣರು,ಅತೀ ಜಾಣರು ಮಾತ್ರ ಡಿಪ್ಲೊಮೊ ಅಧ್ಯಯನ ಮಾಡಲು ಸಾಧ್ಯ ಎಂಬ ಅಭಿಪ್ರಾಯ ಬಲವಾಗಿ ಇತ್ತು. ಕಾರಣ ‘ಡಿಪ್ಲೊಮೊ ಇನ್ ಎಂಜಿನಿಯರಿಂಗ್’ ಎಂಬ ಟ್ಯಾಗ್ ಗಮನಿಸಿ ಕಠಿಣ ಸಿಲೆಬಸ್ ಇಡಲಾಗಿತ್ತು. ಹತ್ತನೇ ತರಗತಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾ ಲಯಗಳಲ್ಲಿ ಪ್ರವೇಶ ಪಡೆಯುವ ಅವಕಾಶ ಇತ್ತು. ಸಾಧಾರಣ ಜಾಣರನ್ನು ಗಮನದಲ್ಲಿಟ್ಟುಕೊಂಡು ಅನೇಕ ಖಾಸಗಿ ಸಂಸ್ಥೆಗಳು ಪಾಲಿಟೆಕ್ನಿಕ್ ಕಾಲೇಜುಗಳನ್ನು ಆರಂಭಿಸಿದವು.
ಒಂದು ಕಾಲಕ್ಕೆ ಎಂಜಿನಿಯರಿಂಗ್ ವ್ಯಾಸಂಗಕ್ಕೆ ಇದ್ದ ಬೇಡಿಕೆಯೂ ಇತ್ತು. ಬರು ಬರುತ್ತಾ ಪಾಲಿಟೆಕ್ನಿಕ್ ಕೋರ್ಸ್ ಬೇಡಿಕೆ ಕುಸಿಯಲಾರಂಭಿಸಿತು. ಒಂದು ಕಡೆ ಖಾಸಗಿ ಕಾಲೇಜುಗಳ ದುಬಾರಿ ಶುಲ್ಕ, ಮತ್ತೊಂದೆಡೆ, ಸುಲಭವಾಗಿ ದಕ್ಕದ ವಿಷಯ ಬೇರೆ! ಡಿಪ್ಲೊಮಾ ಗೊಡವೆಯೇ ಬೇಡ ಎಂಬ ಆತಂಕ ಶುರುವಾಯಿತು. ಇಂತಹ ಅನೇಕ ಕಾರಣಗಳನ್ನು ಸಮರ್ಪಕವಾಗಿ ಗ್ರಹಿಸಿದ ತಾಂತ್ರಿಕ ಶಿಕ್ಷಣ ಇಲಾಖೆ, ಎಐಸಿಟಿಇ ಮತ್ತು ರಾಷ್ಟ್ರೀಯ ಮಟ್ಟದ ಶಿಕ್ಷಣ ತಜ್ಞರು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ರೂಪಿಸುವಾಗ, ಅನೇಕ ಬದಲಾವಣೆಗಳ ಮಾರ್ಗಸೂಚಿ ನೀಡಿದರು.
ವಿದೇಶಿ ಶಿಕ್ಷಣ ವ್ಯವಸ್ಥೆಯ ಪ್ರ್ಯಾಕ್ಟಿಕಲ್ ಆಧಾರಿತ ಕಲಿಕಾ ವಿಧಾನವನ್ನು ಪರಿಚಯಿಸುವ ಅರ್ಥಪೂರ್ಣ ನಿರ್ಧಾರ ಮಾಡಿದರು. ಕೋರ್ಸ್ ಮುಗಿದ ಮೇಲೆ ವಿದ್ಯಾರ್ಥಿಗಳು -ಕ್ಟರಿಗಳಲ್ಲಿ ತಮ್ಮ ವೃತ್ತಿಯನ್ನು ಮುಂದುವರೆಸಬೇಕು. ಆದರೆ ಅಲ್ಲಿ ಇವರು ಡಿಪ್ಲೊಮೊ ಕಾಲದಲ್ಲಿ ಓದಿದ್ದು ಬರೀ ಥಿಯರಿಯಾದ್ದರಿಂದ ನಿರೀಕ್ಷಿತ ಯಶಸ್ಸು ಸಾಧ್ಯವಾಗದೇ ಒzಡುತ್ತಿದ್ದರು. ಇದನ್ನು ಅರ್ಥ ಮಾಡಿಕೊಂಡ ಶಿಕ್ಷಣ ತಜ್ಞರು ಪಠ್ಯಕ್ರಮ ನಿಯಮಗಳನ್ನು ಬದಲಾವಣೆ ಮಾಡಿರುವುದು ಸ್ವಾಗತಾರ್ಹ. ಮೊದಲನೆಯದು ಹೆಚ್ಚು ಪ್ರ್ಯಾಕ್ಟಿಕಲ್ ಆಧಾರಿತ ಸಿಲೆಬಸ್ ಹೆಚ್ಚಿಸಿ, ಥಿಯರಿ ಕಡಿಮೆ ಮಾಡಿರುವುದು ಮತ್ತು ಪ್ರವೇಶ ನಿಯಮಗಳನ್ನು ಕೂಡ ಸರಳಗೊಳಿಸಿರು ವುದು.
ಮೂರು ವರ್ಷದ ಕೋರ್ಸ್ ಮುಗಿಸಲು ನಾಲ್ಕಾರು ವರ್ಷ ಬೇಕಾಗುತ್ತಿತ್ತು, ಸಾಲದ್ದಕ್ಕೆ ಅನೇಕ ವಿದ್ಯಾರ್ಥಿಗಳು ಕಠಿಣವೆನಿಸಿ ಡ್ರಾಪ್ ಔಟ್ ಆಗುತ್ತಿದ್ದರು. ಹಾಗೆ ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದ ವಿದ್ಯಾರ್ಥಿ ಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದರು. ಒಂದೆರಡು ವರ್ಷ ಓದಿದ್ದೂ ನಿರುಪಯುಕ್ತ ಎನಿಸಿಬಿಡುತ್ತಿತ್ತು. ಆದರೆ ಈಗ ರೂಪಿಸಿರುವ ನಿಯಮ ಅತ್ಯಂತ ಉಪಯುಕ್ತ ಮತ್ತು ಆಕರ್ಷಕವಾಗಿದೆ. ಒಂದು ವೇಳೆ ವಿದ್ಯಾರ್ಥಿ ಒಂದೇ ವರ್ಷ ಅಧ್ಯಯನ ಮಾಡಿ ಅನಿವಾರ್ಯವಾಗಿ ಮೊಟಕುಗೊಳಿಸಿದರೆ, ಒಂದು ವರ್ಷದ -ಂಡೇಶನ್ ಸರ್ಟಿಫಿಕೇಟ್ ನೀಡಲಾಗುತ್ತದೆ. ಎರಡು ವರ್ಷ ಪೂರೈಸಿದರೆ, ಪ್ರೊ-ಸಿಯನ್ಸಿ ಸರ್ಟಿಫಿಕೇಟ್ ಮತ್ತು ಮೂರು ವರ್ಷ ಪೂರೈಸಿದರೆ ಡಿಪ್ಲೊಮಾ ಪದವಿ ನೀಡುವುದು ವಿನೂತನ ಮತ್ತು ಕೌಶಲ್ಯಪೂರ್ಣ. ಈ ವಿಧಾನ ವಿದ್ಯಾರ್ಥಿಗಳ ಕಲಿಯುವ ಉತ್ಸಾಹ ಮತ್ತು ಆತ್ಮವಿಶ್ವಾಸ ವನ್ನು ಹೆಚ್ಚಿಸುತ್ತದೆ.
ಐಟಿಐ ಮಾದರಿ ಹೆಚ್ಚು ಯಶಸ್ಸು ಕಾಣಲು ಇದೇ ವಿಧಾನವೇ ಕಾರಣ. ಡಿಪ್ಲೊಮೊ ಕೋರ್ಸ್ ಕಠಿಣ ಇದ್ದರೆ ಮಾತ್ರ ಬೆಲೆ ಎಂಬ ಹಳೆ ಸಿದ್ಧಾಂತವನ್ನು ಸಮಯಾನು ಸಾರ ಕೈ ಬಿಟ್ಟು, ಕೌಶಲಗಳನ್ನು ಹೆಚ್ಚಿಸುವ ಕಲಿಕಾ ವಿಧಾನ ಅಭಿನಂದನೀಯ. ಹೊಸ ಶಿಕ್ಷಣ ನೀತಿಯ ಸಂಪೂರ್ಣ ಅನುಷ್ಠಾನ ಪಾಲಿಟೆಕ್ನಿಕ್ ಕೋರ್ಸ್ ಮೂಲಕ ಜಾರಿಯಾಗಿದೆ. ನಮ್ಮ ಮಕ್ಕಳು ಪಡೆಯುವ ಶಿಕ್ಷಣ ಕೇವಲ ಸರ್ಟಿಫಿಕೇಟ್ ಪಡೆದರೆ ಸಾಲದು, ಉದ್ಯೋಗಾವಕಾಶ ಕಲ್ಪಿಸಿ, ಬದುಕು ಸಾಗಿಸುವ ಮಾರ್ಗ ತೋರಬೇಕು. ಈ ಕೆಲಸವನ್ನು ನೂತನ ಶಿಕ್ಷಣ ನೀತಿ ಆಧಾರಿತ ಪಾಲಿಟೆಕ್ನಿಕ್ ಆರಂಭಿಸಿದೆ. ವಿದೇಶಿ ಶಿಕ್ಷಣ ನೀತಿ ಮಾದರಿಯ ಸರ್ಟಿಫಿಕೇಟ್ ಕೋರ್ಸುಗಳನ್ನು ಆರಂಭಿ ಸುವ ಮೂಲಕ ಗ್ರಹಿಕೆ ಮತ್ತು ಕಲಿಕೆಯ ಆಸಕ್ತಿಯನ್ನು ಸರಳೀಕರಿಸಿ, ವಿದ್ಯಾರ್ಥಿಗಳ ಕುತೂಹಲವನ್ನು ಹೆಚ್ಚಿಸಬೇಕಾಗಿದೆ. ಈ ವರ್ಷದಿಂದ ಹೊಸ ವ್ಯವಸ್ಥೆ ಜಾರಿಯಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಅರಿವು ಮೂಡಿಸುವ ಹೊಣೆಗಾರಿಕೆ ಶಿಕ್ಷಣ ತಜ್ಞರ ಮೇಲಿದೆ.