Friday, 13th December 2024

ನೆಪೋಲಿಯನ್‌ನನ್ನು ಸೋಲಿಸಿದ ನಿಂಬೆಹಣ್ಣು !

ಹಿಂದಿರುಗಿ ನೋಡಿದಾಗ

‘ನನ್ನ ವಸಡುಗಳು ಕೊಳೆಯಲಾರಂಭಿಸಿ ಅವುಗಳಿಂದ ದುರ್ಗಂಧಸಹಿತವಾದ ಕಪ್ಪುಬಣ್ಣದ ರಕ್ತವು ಒಸರಲಾರಂಭಿಸಿತು. ನನ್ನ ತೊಡೆಗಳು ಮತ್ತು ಕಾಲುಗಳು ಕಪ್ಪಾಗಿ ಕೊಳೆಯಲಾರಂಭಿಸಿದವು. ಪ್ರತಿದಿನವೂ ನಾನು ಚೂರಿಯಿಂದ ನನ್ನ ತೊಡೆಯ ಸ್ನಾಯುಗಳನ್ನು ಛೇದಿಸಿ, ಅದರೊಳಗೆ ಸಂಗ್ರಹವಾಗಿದ್ದ ಅತ್ಯಂತ ಕೆಟ್ಟ ವಾಸನೆಯ ಕಪ್ಪು ರಕ್ತವನ್ನು ಹೊರಹರಿಸುತ್ತಿದ್ದೆ.

ನನ್ನ ವಸಡುಗಳು ಮಿತಿಮೀರಿ ಹಲ್ಲುಗಳ ಮೇಲೆ ಬೆಳೆದಿದ್ದವು. ನಾನು ಅದೇ ಚೂರಿಯಿಂದ ಹೆಚ್ಚುವರಿ ವಸಡನ್ನು ಕತ್ತರಿಸಿ ಎಸೆಯುತ್ತಿದ್ದೆ. ಆಗಲೂ ಕೆಟ್ಟ ರಕ್ತವು ಧಾರಾಕಾರವಾಗಿ ಹರಿಯುತ್ತಿತ್ತು. ನಾನು ಸ್ವಮೂತ್ರದಿಂದ ಬಾಯಿಯನ್ನು ಮುಕ್ಕಳಿಸಿದೆ, ಮೂತ್ರವನ್ನು ವಸಡುಗಳಿಗೆ ಹಚ್ಚಿ ಬಲವಾಗಿ ತಿಕ್ಕಿದೆ. ವಿಪರೀತ ನೋವಾದರೂ ರಕ್ತಸ್ರಾವವು ತಾತ್ಕಾಲಿಕವಾಗಿ ನಿಂತಿತು. ಆದರೆ ನಾನು ಆಹಾರವನ್ನು ಅಗಿಯಲು ಅಸಮರ್ಥನಾದೆ. ವಿಪರೀತ ನೋವು. ಹಾಗಾಗಿ ಅನ್ನದ
ಉಂಡೆಗಳನ್ನು ನುಂಗಲಾರಂಭಿಸಿದೆ. ಪ್ರತಿದಿನವೂ ಜನರು ಸಾಯುತ್ತಿದ್ದರು. ಸತ್ತವರನ್ನು ಎತ್ತಿ ಸಮುದ್ರಕ್ಕೆ ಎಸೆಯುತ್ತಿದ್ದರು. ಒಮ್ಮೆಲೆ ೩-೪ ಶವಗಳನ್ನು
ಎಸೆಯುವುದು ಸರ್ವಸಾಮಾನ್ಯವಾಗಿತ್ತು!’. ಇದು ಸ್ಕರ್ವಿ ರೋಗಪೀಡಿತನ ಕಥನ.

ಭಾರತದೊಡನೆ ನೆಲಮಾರ್ಗದ ಮೂಲಕ ವಾಣಿಜ್ಯ ವಹಿವಾಟನ್ನು ನಡೆಸುವ ಏಕಸ್ವಾಮ್ಯವನ್ನು ಅರಬ್ಬರು, ಪರ್ಷಿಯನ್ನರು, ತುರುಕರು ಪಡೆದಿದ್ದ ಕಾರಣ,
ಯುರೋಪಿಯನ್ನರಿಗೆ ಹೊಟ್ಟೆ ಉರಿಯುತ್ತಿತ್ತು. ಹೇಗಾದರೂ ಭಾರತಕ್ಕೆ ಒಂದು ಸಮುದ್ರಮಾರ್ಗವನ್ನು ಕಂಡುಹಿಡಿದು, ಅವರೊಡನೆ ವ್ಯಾಪಾರ, ವಾಣಿಜ್ಯ
ವ್ಯವಹಾರಗಳನ್ನು ನಡೆಸಿ ಶ್ರೀಮಂತರಾಗಬೇಕು ಎನ್ನುವ ದುರಾಸೆಯ ಛಲ ಯುರೋಪಿಯನ್ನರನ್ನು ಕಾಡಿತು. ಕೊನೆಗೆ ಪೋರ್ಚುಗಲ್ಲಿನ ವಾಸ್ಕೊ-ಡ-ಗಾಮ
(೧೪೬೯-೧೫೨೪) ಭಾರತಕ್ಕೆ ಒಂದು ಸಮುದ್ರಮಾರ್ಗವನ್ನು ಕಂಡುಹಿಡಿದ. ೧೪೯೮ರಲ್ಲಿ ಗಾಮ ಭಾರತವನ್ನು ತಲುಪಿದ ದಿನದಿಂದ ಹಿಡಿದು, ೧೭೮೩ರಂದು ಮೊದಲ ಉಗಿ ಜಹಜು ತನ್ನ ಕಾರ್ಯವನ್ನು ಆರಂಭಿಸುವ ದಿನದವರೆಗೆ, ಅಂದರೆ ೨೮೫ ವರ್ಷಗಳ ಕಾಲ ಸುದೀರ್ಘ ನೌಕಾಯಾನವನ್ನು ಯುರೋಪಿಯನ್ನರು ನಡೆಸಿದರು.

ಈ ನೌಕಾಯಾನಗಳು ಸುರಕ್ಷಿತವಾಗಿರಲಿಲ್ಲ. ನಾವಿಕರನ್ನು ಕಾಡುತ್ತಿದ್ದ ಹಲವು ದುಃ ಸ್ವಪ್ನಗಳಲ್ಲಿ ಸ್ಕರ್ವಿಯೂ ಒಂದು. ೨೮೫ ವರ್ಷಗಳ ಅವಧಿಯಲ್ಲಿ ೨೦ ಲಕ್ಷ ನಾವಿಕರು ಸ್ಕರ್ವಿ ಕಾಯಿಲೆಗೆ ತುತ್ತಾಗಿ ಅಸುನೀಗಿದ್ದರು. ಸ್ಕರ್ವಿ ಸಂಬಂಧಿತ ಸಾವು-ನೋವುಗಳನ್ನು ನೋಡುತ್ತಿದ್ದರೆ, ಇದೆಂಥ ಕಾಯಿಲೆ, ಇದು ಹೇಗೆ ಬರುತ್ತದೆ,
ಇದನ್ನು ಗುಣಪಡಿಸಲು ಸಾಧ್ಯವಿಲ್ಲವೆ, ಇದನ್ನು ಹೇಗೆ ತಡೆಗಟ್ಟಬಹುದು ಮುಂತಾದ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತವೆ. ಆದರೆ ಈ ಬಗ್ಗೆ ಅಗತ್ಯ ತಿಳಿವಳಿಕೆಯು ಮಧ್ಯಯುಗದ ನಾಗರಿಕರಿಗಾಗಲಿ, ನಾವಿಕರಿಗಾಗಲಿ, ವೈದ್ಯರಿಗಾಗಲಿ ಏನೇನೂ ಇರಲಿಲ್ಲ. ನಮ್ಮ ದೇಹವನ್ನು ರಾಸಾಯನಿಕ ವಸ್ತುಗಳು ನಿರ್ಮಿಸಿವೆ. ನಮ್ಮ ದೇಹದ ಜೈವಿಕ ಕಾರ್ಯಗಳು, ಅಂದರೆ ಉಸಿರಾಡುವುದು, ಮಾತನಾಡುವುದು, ನಡೆಯುವುದು, ಓದುವುದು, ಆಲೋಚಿಸುವುದು, ಗಾಯ ಮಾಗುವುದು, ಗರ್ಭದಲ್ಲಿ ಶಿಶುವು ವರ್ಧಿಸುವುದು, ಹೊಸ ಹೊಸ ಜೀವಕೋಶಗಳನ್ನು ರೂಪಿಸುವುದು- ಇಂಥ ಪ್ರತಿಯೊಂದು ಕೆಲಸವೂ ರಾಸಾಯನಿಕ ಕ್ರಿಯೆಗಳ ಫಲವಾಗಿ ನಡೆಯುತ್ತದೆ. ಈ ರಾಸಾಯನಿಕ ಕ್ರಿಯೆಗಳು ನಮ್ಮ ಶರೀರದ ಸ್ನಾಯುಗಳನ್ನು ಕಟ್ಟುತ್ತವೆ ಹಾಗೂ ಕೆಡವುತ್ತವೆ.

ದೇಹದ ಉಷ್ಣತೆಯನ್ನು ನಿಗದಿತ ವ್ಯಾಪ್ತಿಯಲ್ಲಿ ಕಾಪಾಡುತ್ತವೆ. ಅಪಾಯಕಾರಿ ವಿಷವಸ್ತುಗಳನ್ನು ಸೋಸುತ್ತವೆ. ಸೋಸಿದ ವಿಷ ಹಾಗೂ ತ್ಯಾಜ್ಯ ಪದಾರ್ಥಗಳನ್ನು ಕ್ಲುಪ್ತವಾಗಿ ಶರೀರದಿಂದ ವಿಸರ್ಜಿಸುತ್ತವೆ. ನಮ್ಮ ದೇಹದ ಮೇಲೆ ಆಕ್ರಮಣ ಮಾಡುವ ರೋಗಜನಕಗಳನ್ನು ಸಕಾಲದಲ್ಲಿ ಗುರುತಿಸಿ ಅವನ್ನು ನಾಶಮಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆಲೋಚನೆ, ಭಾವನೆ, ಅರಿಷಡ್ವರ್ಗಾದಿಗಳನ್ನು ನಿಯಂತ್ರಿಸುತ್ತವೆ. ನಾವು ಸೇವಿಸುವ ಆಹಾರವನ್ನು ಜೀರ್ಣಿಸುತ್ತವೆ. ಗ್ಲೂಕೋಸ್ ಎಂಬ ಇಂಧನವನ್ನು ಜೀವಕೋಶ ಎಂಬ ಒಲೆಯಲ್ಲಿ ಇರಿಸಿ, ಉಸಿರಾಟದಿಂದ ದೊರೆತ ಆಕ್ಸಿಜನ್ ಎಂಬ ಕಿಡಿಯನ್ನು ಬಳಸಿ ಗ್ಲೂಕೋಸನ್ನು ಉರಿಸುವುದರ ಮೂಲಕ ನಮ್ಮ ದೇಹದ ಎಲ್ಲ ಕೆಲಸ ಕಾರ್ಯಗಳಿಗೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ.

ರಾಸಾಯನಿಕ ಕ್ರಿಯೆಗಳೇ ನಮ್ಮ ಬದುಕು! ಅವು ಒಂದು ಕ್ಷಣ ನಡೆಯಲಿಲ್ಲವೆಂದರೆ ಅದುವೇ ಸಾವು! ಈ ರಾಸಾಯನಿಕ ಕ್ರಿಯೆಗಳ ಬಹುದೊಡ್ಡ ಸಮಸ್ಯೆಯೆಂದರೆ ಅವು ತೀರಾ ನಿಧಾನವಾಗಿ ನಡೆಯುತ್ತವೆ. ಎಷ್ಟು ನಿಧಾನವೆಂದರೆ ಜೀವವೇ ಸ್ಥಗಿತವಾಗುವಷ್ಟು ಯಮನಿಧಾನ! ಹಾಗಾಗಿ ಈ ಜೋಭದ್ರಗಳನ್ನು ಝಾಡಿಸಿ ಒದ್ದು ತ್ವರಿತವಾಗಿ ಕೆಲಸ ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸುವ ಕಿಣ್ವಗಳು (ಎನ್‌ಜ಼ೈಮ್ಸ್) ಎಂಬ ವಿಶೇಷ ರಾಸಾಯನಿಕಗಳಿವೆ. ಇವು ರಾಸಾಯನಿಕ ಕ್ರಿಯೆ ಗಳ ವೇಗವನ್ನು ದಶಲಕ್ಷಗಟ್ಟಲೇ ತ್ವರಿತವಾಗಿ ಉದ್ದೀಪಿಸಬಲ್ಲವು! ಈ ಕಿಣ್ವಗಳ ನಿರ್ಮಾಣಕ್ಕೆ ಹಾಗೂ ಕೆಲಸ ಕಾರ್ಯಗಳಿಗೆ ನೆರವು ಬೇಕಾಗುತ್ತದೆ. ಆ ನೆರವನ್ನು ವಿಟಮಿನ್ನುಗಳು ಒದಗಿಸುತ್ತವೆ. ಕಿಣ್ವಗಳು ರಾಸಾಯನಿಕ ಕ್ರಿಯೆಗಳಲ್ಲಿ ಬದಲಾಗದೆ ತಮ್ಮ ಮೂಲಸ್ವರೂಪವನ್ನು ಹಾಗೆಯೇ ಉಳಿಸಿಕೊಳ್ಳಬಲ್ಲವು. ಆದರೆ ಕಿಣ್ವಗಳಿಗೆ ನೆರವಾಗುವ ವಿಟಮಿನ್ನುಗಳು, ನೆರವು ನೀಡುತ್ತಲೇ ಆತ್ಮಾರ್ಪಣೆ ಮಾಡಿಕೊಳ್ಳುತ್ತವೆ.

ಶರೀರದಲ್ಲಿ ವಿಟಮಿನ್ನುಗಳ ಕೊರತೆಯು ಕಾಣಿಸಿಕೊಳ್ಳುವ ಕಾರಣ, ಅವುಗಳ ಸಂಖ್ಯೆ ಸದಾ ಕಡಿಮೆಯಾಗುತ್ತಿರುತ್ತವೆ. ಹಾಗಾಗಿ ಶರೀರದಲ್ಲಿ ಸಾಮಾನ್ಯವಾಗಿ ವಿಟಮಿನ್ನುಗಳ ಕೊರತೆಯಿರುತ್ತವೆ. ಈ ಕೊರತೆಯನ್ನು ನಿಯತವಾಗಿ ಸರಿದೂಗಿಸಬೇಕು. ಇಲ್ಲದಿದ್ದರೆ ವಿಟಮಿನ್ ಕೊರತೆಯ ಸಮಸ್ಯೆಗಳು ಹುಟ್ಟಿಕೊಂಡು, ನಾನಾ ರೀತಿಯ ರೋಗಗಳಿಗೆ ಎಡೆಕೊಟ್ಟು ಸಾವು ನೋವುಗಳಿಗೆ ಕಾರಣವಾಗುತ್ತವೆ. ಅಂಥ ರೋಗಗಳಲ್ಲಿ ಸ್ಕರ್ವಿಯೂ ಒಂದು!

ನಮ್ಮ ದೇಹವನ್ನು ಕಟ್ಟುವ ಪ್ರಧಾನ ರಾಸಾಯನಿಕಗಳಲ್ಲಿ ಪ್ರೋಟೀನುಗಳು ಮುಖ್ಯವಾದವು. ಈ ಪ್ರೋಟೀನುಗಳಲ್ಲಿ ‘ಕೊಲಾಜೆನ್’ ಎಂಬ ಬಂಧಕ ಊತಕವು (ಕನೆಕ್ಟಿವ್ ಟಿಶ್ಯೂ) ಮುಖ್ಯವಾದದ್ದು. ನಮ್ಮ ದೇಹದಲ್ಲಿರುವ ಒಟ್ಟು ಪ್ರೋಟೀನುಗಳಲ್ಲಿ ಶೇ.೩೦ರಷ್ಟು ಈ ಕೊಲಾಜೆನ್ ವರ್ಗಕ್ಕೆ ಸೇರಿವೆ. ಹೆಸರೇ ಸೂಚಿಸುವ ಹಾಗೆ ಕೊಲಾಜೆನ್ ಒಂದು ಅಂಗವನ್ನು ಮತ್ತೊಂದಕ್ಕೆ ಭದ್ರವಾಗಿ ಬಿಗಿದು ಜೋಡಿಸುತ್ತದೆ. ಗ್ರೀಕ್ ಭಾಷೆಯಲ್ಲಿ ‘ಕೊಲ್ಲಾ’ ಎಂದರೆ ‘ಅಂಟು’ ಅಥವಾ ‘ಗೋಂದು’. ‘ಜೆನ್’ ಎಂದರೆ ‘ಜನಕ’ ಎಂದರ್ಥ. ಕೊಲಾಜೆನ್ ತನ್ನ ಅಂಟಿನ ಗುಣದಿಂದ ನಮ್ಮ ಚರ್ಮ, ಸ್ನಾಯು, ಮೂಳೆ, ರಕ್ತನಾಳ, ಮೃದ್ವಸ್ಥಿ (ಕಾರ್ಟಿಲೇಜ್) ಇತ್ಯಾದಿ  ಗಳನ್ನು ಸ್ವಸ್ಥಾನದಲ್ಲಿ ಬಂಧಿಸಿ ಇರಿಸಿದೆ.

ಕೊಲಾಜೆನ್ ಇರದೇ ಹೋಗಿದ್ದಲ್ಲಿ ಇವೆಲ್ಲ ಕಳಚಿ ಎಲ್ಲೆಂದರಲ್ಲಿ ಉದುರಿಬಿಡುತ್ತಿದ್ದವು! ಹಾಗಾಗಿ ನಮ್ಮ ಕೊಲಾಜೆನ್ ಆರೋಗ್ಯಕರ ಪ್ರಮಾಣದಲ್ಲಿ ಉತ್ಪಾದನೆ ಯಾಗಬೇಕಾದರೆ ಕಿಣ್ವಗಳು ಅಗತ್ಯ. ಆ ಕಿಣ್ವಗಳು ಸಮಗ್ರವಾಗಿ ಕೆಲಸ ಮಾಡಬೇಕಾದರೆ, ವಿಟಮಿನ್-ಸಿ ಅಗತ್ಯ! ಸ್ಕರ್ವಿಯಲ್ಲಿ ವಿಟಮಿನ್-ಸಿ ಕೊರತೆಯು ಅತ್ಯುಗ್ರವಾಗಿರುವ ಕಾರಣ, ಮೊದಲು ಮಹಾಸೋಮಾರಿತನ ಕಾಣಿಸಿಕೊಳ್ಳುತ್ತದೆ. ದೇಹವು ಸಂಪೂರ್ಣವಾಗಿ ನಿಶ್ಶಕ್ತವಾಗುತ್ತದೆ. ಕೀಲುಗಳು ತೀವ್ರವಾಗಿ ನೋಯುತ್ತವೆ. ಕೈಕಾಲುಗಳು ಊದಿಕೊಳ್ಳುತ್ತವೆ. ಮುಟ್ಟಿದರೆ ಸಾಕು ಚರ್ಮದ ಮೇಲೆ ‘ಬಾಸುಂಡೆಗಳು’ ಏಳುತ್ತವೆ. ವಸಡುಗಳು ಸ್ಪಂಜಿನಂತೆ ಊದಿಕೊಳ್ಳುತ್ತವೆ. ಮುಟ್ಟಿದರೆ ಸಾಕು ರಕ್ತಸ್ರಾವವಾಗಿ, ಹಲ್ಲುಗಳು ಕಳಚಿ ಬೀಳುತ್ತವೆ.

ಮೂಳೆಗಳು ಹಂಚಿಕಡ್ಡಿಯಂತೆ ಲಟಕ್ ಎಂದು ಮುರಿಯುತ್ತವೆ. ಸ್ನಾಯುಗಳೆಲ್ಲ ಕಳಚಿಕೊಂಡು ಉದುರುತ್ತವೆ. ಉದರದಲ್ಲಿ ರಕ್ತಸ್ರಾವವಾಗುತ್ತದೆ.
ಹೃದಯ ಅಥವಾ ಮಿದುಳಿನಲ್ಲಿ ರಕ್ತಸ್ರಾವವಾದಾಗ ಸದ್ದಿಲ್ಲದ ಹಾಗೆ ಸಾವು ಬರುತ್ತದೆ. ಮಧ್ಯಯುಗದ ನಾವಿಕರಿಗೆ ತಮ್ಮ ಆರೋಗ್ಯವನ್ನು ನಿಯಂತ್ರಿಸುವ ಕೊಲಾಜೆನ್, ಎನ್‌ಜ಼ೈಮ್, ವಿಟಮಿನ್ ಮುಂತಾದವುಗಳ ಬಗ್ಗೆ ಏನೇನೂ ಗೊತ್ತಿರದಿದ್ದ ಕಾರಣ, ಅವರು ಸ್ಕರ್ವಿಯನ್ನು ಪ್ರಜ್ಞಾಪೂರ್ವಕವಾಗಿ ತಡೆಗಟ್ಟಲು
ಅಸಮರ್ಥರಾಗಿದ್ದರು. ಆದರೆ ಮನುಷ್ಯನ ಅನ್ವೇಷಣಾ ಗುಣದ ಕಾರಣ, ಹಲವು ಜನರು ‘ವಿಟಮಿನ್-ಸಿ’ಯುಕ್ತ ಪದಾರ್ಥಗಳನ್ನು ಸೇವಿಸುವುದರ ಮೂಲಕ
ಉಪಶಮನವನ್ನು ಪಡೆಯುತ್ತಿದ್ದದ್ದು ಸುಳ್ಳಲ್ಲ. ೧೫೩೫ರಲ್ಲಿ ಫ್ರೆಂಚ್ ಅನ್ವೇಷಕ ಜಾಕ್ವೆಸ್ ಕಾರ್ಟೀರ್ ಎಂಬಾತನ ನೌಕೆಯು ಸೈಂಟ್ ಲಾರೆನ್ಸ್ ನದಿಯ ಮಂಜಿನಲ್ಲಿ ಹೂತುಹೋಯಿತು. ತಿಂಗಳುಗಟ್ಟಲೆ ನದಿಯ ನಡುವೆ ಉಳಿಯಬೇಕಾದ ಕಾರಣ ಅವರು ಸ್ಕರ್ವಿಗೆ ತುತ್ತಾಗುವ ಭೀತಿಯಿತ್ತು.

ಆದರೆ ಸ್ಥಳೀಯ ಗುಡ್ಡಗಾಡು ಜನರು ಮರದ ತೊಗಟೆ ಮತ್ತು ಎಲೆಯಿಂದ ಒಂದು ಕಷಾಯವನ್ನು ಕಾಸಿ ಕೊಡುತ್ತಿದ್ದರು. ಅದು ಸ್ಕರ್ವಿಯನ್ನು ದೂರವಿಟ್ಟಿತು. ಜಾನ್ ವೂಡಾಲ್ ಎಂಬ ಬ್ರಿಟಿಷ್ ಮಿಲಿಟರಿ ಸರ್ಜನ್ ಪ್ರತಿಯೊಬ್ಬ ಸೈನಿಕನಿಗೂ ಹುಳಿಹಣ್ಣನ್ನು ನೀಡಬೇಕೆಂದು ಶಿಫಾರಸು ಮಾಡಿದ. ಆದರೆ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಅಧಿಕಾರಿಗಳು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಜಾನ್ ಫೈಯರ್ ಎಂಬ ಇಂಗ್ಲಿಷ್ ವೈದ್ಯನೂ ೧೬೯೮ರಲ್ಲಿ ನಾವಿಕರಿಗೆ ಹುಳಿಹಣ್ಣುಗಳನ್ನು ನಿತ್ಯ ಕೊಡುವಂತೆ ಸೂಚಿಸಿದ್ದ.

ಕೊನೆಗೆ ೧೯ನೆಯ ಶತಮಾನದಲ್ಲಿ, ಬ್ರಿಟಿಷರು ನೌಕಾದಳದಲ್ಲಿದ್ದ ಎಲ್ಲ ಸೈನಿಕರಿಗೆ ತಿನ್ನಲು ಮೂಸಂಬಿ (ಲೈಮ್) ಕೊಡಬೇಕೆಂದು ಆಜ್ಞೆಯಾಯಿತು. ನಿಂಬೆಯಲ್ಲಿ
ಮೂಸಂಬಿಗಿಂತಲೂ ಹೆಚ್ಚು ವಿಟಮಿನ್-ಸಿ ಇದ್ದರೂ, ಬ್ರಿಟಿಷರು ಮೂಸಂಬಿಯನ್ನೇ ಸೈನಿಕರಿಗೆ ನೀಡಿದರು. ಏಕೆಂದರೆ ಮೂಸಂಬಿಯನ್ನು ಬೆಳೆಯುವ ಪ್ರದೇಶ ಗಳೆಲ್ಲ ಬ್ರಿಟಿಷರ ವಶದಲ್ಲಿದ್ದವು. ಹಾಗಾಗಿ ಅವರು ‘ಬಿಟ್ಟಿ’ ಮೂಸಂಬಿ ಹಂಚಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಇಂಗ್ಲಿಷ್ ಸೈನಿಕರನ್ನು ವ್ಯಂಗ್ಯವಾಗಿ ‘ಲೈಮೀ’ ಎಂದು ಕರೆಯುವುದು ಸಾಮಾನ್ಯವಾಯಿತು. ಮೂಸಂಬಿಯನ್ನು ಹೆಚ್ಚುದಿನ ಸಂಗ್ರಹಿಸಿಡುವುದು ಕಷ್ಟ. ಹಾಗಾಗಿ ಅದರ ರಸವನ್ನು ಚೆನ್ನಾಗಿ ಕುದಿಸಿ, ಗಟ್ಟಿ ಮಾಡಿ, ತಿನ್ನಲು ನೀಡಿದರು. ಇದು ನೂರಕ್ಕೆ ನೂರರಷ್ಟು ಅನುಪಯುಕ್ತವಾಗಿತ್ತು. ಏಕೆಂದರೆ ಶಾಖಕ್ಕೆ ವಿಟಮಿನ್-ಸಿ ನಾಶವಾಗಿ ಹೋಗುತ್ತಿತ್ತು. ಇದು ಅವರಿಗೆ ತಿಳಿದಿರ ಲಿಲ್ಲ.

ಸ್ಕಾಟಿಶ್ ವೈದ್ಯನಾಗಿದ್ದ ಜೇಮ್ಸ್ ಲಿಂಡ್ ಬ್ರಿಟನ್ನಿನ ರಾಯಲ್ ನೇವಿಯಲ್ಲಿ ಅತ್ಯುತ್ತಮ ಸುಧಾರಣಾ ಕಾರ್ಯಗಳನ್ನು ಮಾಡಿದ ಕಾರಣ ಇಂದಿಗೂ ಪ್ರಾತಃ
ಸ್ಮರಣೀಯ. ಜಗತ್ತಿನ ಪ್ರಪ್ರಥಮ ವೈದ್ಯಕೀಯ ‘ಕ್ಲಿನಿಕಲ್ ಟ್ರಯಲ್ಸ್’ ಅಧ್ಯಯನವನ್ನು ನಡೆಸಿದ ಇವನು, ಹುಳಿಹಣ್ಣುಗಳು ಸ್ಕರ್ವಿ ಕಾಯಿಲೆಯನ್ನು ಗುಣಪಡಿಸು ತ್ತವೆ ಎನ್ನುವುದನ್ನು ಸಾಬೀತುಮಾಡಿದ. ನೌಕೆಯಲ್ಲಿ ಗಾಳಿ-ಬೆಳಕು ಧಾರಾಳವಾಗಿ ಬರುತ್ತಿದ್ದರೆ ನಾವಿಕರು ಆರೋಗ್ಯವಾಗಿರುತ್ತಾರೆ ಎಂದ. ನಾವಿಕರು ವೈಯಕ್ತಿಕ ಸ್ವಚ್ಛತೆಯನ್ನು ನಿತ್ಯ ಪಾಲಿಸಬೇಕೆಂದ. ಬಟ್ಟೆ, ಹಾಸಿಗೆ, ಹೊದಿಕೆಗಳನ್ನು ನಿಯತವಾಗಿ ಬದಲಿಸಬೇಕೆಂದ. ಹಡಗಿನ ತಳಭಾಗಗಳಲ್ಲಿ ಗಂಧಕ (ಸಲರ್) ಮತ್ತು ಶಂಖಪಾಷಾಣಗಳ (ಅರ್ಸೆನಿಕ್) ಧೂಪ ಹಾಕಿಸಿ ಕ್ರಿಮಿಕೀಟಗಳನ್ನು ದೂರವಿಟ್ಟ. ಸಮುದ್ರದ ನೀರನ್ನು ಭಟ್ಟಿಯಿಳಿಸಿ ಕುಡಿಯುವ ಶುದ್ಧ ನೀರನ್ನು ತಯಾರಿಸುವ ಬಗೆಯನ್ನು ತೋರಿಸಿಕೊಟ್ಟ.

ನಾವಿಕರಿಗೆ ಸಮತೋಲಿತ ಆಹಾರ ನೀಡುವುದರ ಮೂಲಕ ಮುಂಜಾಗ್ರತಾ ವೈದ್ಯಕೀಯಕ್ಕೆ (ಪ್ರಿವೆಂಟಿವ್ ಮೆಡಿಸಿನ್) ಆದ್ಯತೆ ನೀಡಿದ. ಜೇಮ್ಸ್ ಲಿಂಡ್ ೧೭೪೭ರಲ್ಲಿ ‘ಎಚ್‌ಎಂಎಸ್ ಸ್ಯಾಲಿಸ್ಬರಿ’ ಎಂಬ ಹಡಗಿನಲ್ಲಿ ವೈದ್ಯನಾಗಿದ್ದ. ಅದರಲ್ಲಿ ಸ್ಕರ್ವಿ ಪೀಡಿತರಾಗಿದ್ದ ೧೨ ನಾವಿಕರನ್ನು ಆಯ್ಕೆ ಮಾಡಿಕೊಂಡು
ಇಬ್ಬಿಬ್ಬರ ಒಂದು ಗುಂಪಿನಂತೆ ಆರು ಗುಂಪುಗಳಲ್ಲಿ ವಿಂಗಡಿಸಿದ. ಈ ಗುಂಪುಗಳ ನಾವಿಕರು ಹಡಗಿನ ಒಂದೇ ಕಡೆ ವಾಸಮಾಡುತ್ತಾ ಒಂದೇ ತರಹದ ಆಹಾರವನ್ನು ಸೇವಿಸುತ್ತಿದ್ದರು. ಇದರ ಜತೆಗೆ ಮೊದಲನೆಯ ಗುಂಪಿನ ಇಬ್ಬರಿಗೆ ಪ್ರತಿದಿನವೂ ಕುಡಿಯಲು ಒಂದು ಲೀಟರಿನಷ್ಟು ಪ್ರಬಲ ಸೇಬಿನರಸವನ್ನು (ಕ್ವಾರ್ಟ್ ಹಾರ್ಡ್ ಸಿಡರ್) ನೀಡಿದ. ೨ನೇ ಗುಂಪಿಗೆ ವಿಟ್ರಿಯೋಲ್ (ಗಂಧಕಾಮ್ಲ) ೨೫ ಹನಿಗಳು, ಮೂರನೆಯವರಿಗೆ ೨ ಚಮಚೆ ವಿನಿಗರ್, ನಾಲ್ಕನೆಯವರಿಗೆ ಅರ್ಧ ಲೀಟರ್ ಸಮುದ್ರನೀರು, ಐದನೆಯವರಿಗೆ ೨ ಕಿತ್ತಳೆ ಹಾಗೂ ೧ ನಿಂಬೆ, ಆರನೆಯವರಿಗೆ ‘ಎಲೆಕ್ಚುವರಿ’ (ಬೆಳ್ಳುಳ್ಳಿ+ಸಾಸಿವೆ+ರಾಳ+ಒಣಮೂಲಂಗಿ
ಬೇರು+ಮಿರ್ರ ಗೋಂದನ್ನು ಕಲೆಸಿದ ಮಿಶ್ರಣ) ಹಾಗೂ ಬಾರ್ಲಿ ನೀರನ್ನು ನೀಡಿದ.

೧೪ ದಿನಗಳ ಈ ಪ್ರಯೋಗದಲ್ಲಿ ಕಿತ್ತಳೆ ಮತ್ತು ನಿಂಬೆ ಹಣ್ಣುಗಳು ೬ನೇ ದಿನಕ್ಕೇ ಖಾಲಿಯಾದವು! ಆದರೂ ಕಿತ್ತಳೆ-ನಿಂಬೆಯನ್ನು ಸೇವಿಸಿದವರು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡದ್ದು ಮಾತ್ರವಲ್ಲದೆ, ಜೇಮ್ಸ್ ಲಿಂಡ್ ನಡೆಸುತ್ತಿದ್ದ ಪ್ರಯೋಗದಲ್ಲಿ ಉಳಿದ ನಾವಿಕರಿಗೆ ನೀಡುತ್ತಿದ್ದ ಚಿಕಿತ್ಸೆಯಲ್ಲಿ ನೆರವಾದರು.
ಹೀಗೆ ಜೇಮ್ಸ್ ಲಿಂಡ್ ಹುಳಿಹಣ್ಣುಗಳ ನಿತ್ಯ ಸೇವನೆಯಿಂದ ಸ್ಕರ್ವಿಯನ್ನು ತಡೆಗಟ್ಟಬಹುದು ಎನ್ನುವುದನ್ನು ತೋರಿಸಿಕೊಟ್ಟ.

೧೭೯೫ರಲ್ಲಿ ಬ್ರಿಟಿಷ್ ರಾಯಲ್ ನೇವಿಯ ವೈದ್ಯಾಧಿಕಾರಿಯಾಗಿದ್ದ ಗಿಲ್ಬರ್ಟ್ ಬ್ಲೇನ್, ನಾವಿಕರು ಪ್ರತಿದಿನವೂ ನಿಂಬೆರಸ ಸೇವಿಸುವುದನ್ನು ಕಡ್ಡಾಯ  ಮಾಡಿದ. ಇವನ ಈ ಒಂದು ಆeಯು ಗ್ರೇಟ್ ಬ್ರಿಟನ್ನಿನ ಇತಿಹಾಸವನ್ನು ಬದಲಾಯಿಸಿತು. ಫ್ರಾನ್ಸಿನ ನೆಪೋಲಿಯನ್ ಬೊನಪಾರ್ಟೆ ಇಂಗ್ಲಿಷ್ ಚಾನೆಲ್ ಮೂಲಕ ದಂಡೆತ್ತಿ ಬಂದ. ಬ್ರಿಟಿಷರು ಅವನನ್ನು ಅಲ್ಲಿಯೇ ತಡೆಹಿಡಿದರು. ಈ ತಡೆಹಿಡಿಯುವಿಕೆಯು ಸುಮಾರು ೨೦ ವರ್ಷಗಳ ಕಾಲ ಮುಂದುವರಿಯಿತು. ಹಡಗುಗಳು ತಿಂಗಳು ಗಟ್ಟಲೆ, ವರ್ಷಗಟ್ಟಲೆ ಸಮುದ್ರದಲ್ಲಿಯೇ ಉಳಿಯಬೇಕಾಯಿತು.

ಈ ಅವಧಿಯಲ್ಲಿ ಅವರೆಲ್ಲರೂ ನಿಯತವಾಗಿ ನಿಂಬೆರಸವನ್ನು ಕುಡಿಯುತ್ತಿದ್ದರು. ಇಲ್ಲದಿದ್ದರೆ ಸಮಸ್ತ ಬ್ರಿಟಿಷ್ ಸೈನಿಕರು ಸ್ಕರ್ವಿಗೆ ತುತ್ತಾಗಿ ತರಗೆಲೆಗಳಂತೆ
ಉದುರಿ ಸಾಯುತ್ತಿದ್ದರು. ಹೀಗೆ ಒಂದು ನಿಂಬೆಹಣ್ಣು ನೆಪೋಲಿಯನ್‌ನನ್ನು ಸೋಲಿಸಿತು.