Friday, 13th December 2024

ಹೊಸ ರೂಪಾಂತರಿ ವೈರಸ್‌ ಅಪಾಯಕಾರಿಯೇ ?

ವೈದ್ಯವೈವಿಧ್ಯ

ಎಚ್‌.ಎಸ್‌.ಮೋಹನ್‌

ಈಗ ಕರೋನಾ ವೈರಸ್‌ನ ಹೊಸ ಸಂತತಿ ಬಹಳ ಸುದ್ದಿಯಲ್ಲಿದೆ. ಇದರ ಕಾರಣದಿಂದ ಇಂಗ್ಲೆಂಡಿನಲ್ಲಿ ಎಚ್ಚರಿಕೆಯ ಕ್ರಮ ಗಳನ್ನು ಕೈಗೊಂಡು ಆರಂಭದ ಲಾಕ್ ಡೌನ್ ಪರಿಸ್ಥಿತಿಗೇ ಹಿಂತಿರುಗುತ್ತಿದ್ದಾರೆ.

ಹಾಗಾದರೆ ಈ ಹೊಸ ಸಂತತಿ ಯಾವುದು? ಇದು ಹಳೆಯ ಕರೋನಾ ವೈರಸ್‌ನಲ್ಲಿ ಜೆನೆಟಿಕ್ ಬದಲಾವಣೆ ಅಥವಾ ಮ್ಯುಟೇಷನ್ ಹೊಂದಿ ಹೊಸ ಸಂತತಿಯಾಗಿದೆ. ಇಂಗ್ಲೆಂಡ್‌ನಲ್ಲಿಯಂತೂ ಹಳೆಯ ಮಾದರಿಯ ವೈರಸ್ ಮೀರಿಸಿ ಈ ಹೊಸ ಮಾದರಿ ವೇಗ ವಾಗಿ ಹರಡುತ್ತಿದೆ. ಇದು ವೈರಸ್‌ನ ಮುಖ್ಯ ಭಾಗದಲ್ಲಿ ಜೆನೆಟಿಕ್ ಮ್ಯುಟೇಷನ್ ಹೊಂದಿ ಹೊಸ ಮಾದರಿಯಾಗಿರು ವಂತಹದ್ದು. ಈ ಹೊಸ ಮಾದರಿ ಮಾನವ ಜೀವಕೋಶಗಳನ್ನು ಬೇಗ ಆಕ್ರಮಿಸಬಲ್ಲವು ಎನ್ನಲಾಗಿದೆ.

ಹಾಗಾಗಿ ಇದು ಬಹಳ ಬೇಗ ಹರಡುತ್ತದೆ ಎಂಬ ಸುದ್ದಿ ಜನಜನಿತವಾಗಿದೆ. ಆರಂಭದ ಮೊದಲ ದಿನ ಇದು ಹಳೆಯ ಮಾದರಿಗಿಂತ ಶೇ.70ಕ್ಕಿಂತ ಜಾಸ್ತಿ ವೇಗವಾಗಿ ಹರಡುತ್ತದೆ ಎನ್ನಲಾಗಿತ್ತು. ಆದರೆ ನಂತರದ 2 ದಿನಗಳಲ್ಲಿ ಅದು ಶೇ.70ರಷ್ಟು ಅಲ್ಲ ಶೇ.40 ರಷ್ಟು ಎನ್ನಲಾಯಿತು. ಇದ್ಯಾವುದಕ್ಕೂ ನಿಖರವಾದ ವೈಜ್ಞಾನಿಕ ಪುರಾವೆಯಿಲ್ಲ. ಇದು ಮಾಧ್ಯಮಗಳಲ್ಲಿ – ಟಿ ವಿ, ಇಂಟರ್ನೆಟ್ ಮತ್ತು ಪತ್ರಿಕೆಗಳಲ್ಲಿ ಕೆಟ್ಟ ರೀತಿಯಲ್ಲಿ ಬಿಂಬಿತಗೊಂಡು ಪ್ರಚಾರಗೊಳ್ಳುತ್ತಿದೆ ಎನ್ನಬಹುದು.

ಮೇಲಿನ ಯಾವ ಹೇಳಿಕೆಗಳಿಗೂ ಸ್ಪಷ್ಟ ಪುರಾವೆ ದೊರಕಿಲ್ಲ ಎಂದು ಜಗತ್ತಿನ ಹಲವು ಭಾಗದ ವಿಜ್ಞಾನಿಗಳು ಈಗಾಗಲೇ ಅಭಿಪ್ರಾಯ ಪಟ್ಟಿದ್ದಾರೆ. ಈ ಹೊಸ ತಳಿಯ ವೈರಸ್ ದಿಢೀರನೆ ಅವತರಿಸಿದ್ದೇನಲ್ಲ. ಇದು ಸೆಪ್ಟೆಂಬರ್‌ನಲ್ಲಿಯೇ ಲಂಡನ್ನಿನಲ್ಲಿ
ಕಂಡುಬಂದಿತ್ತು. ನವೆಂಬರ್ ಹೊತ್ತಿಗೆ ಆ ಭಾಗದ ಸುಮಾರು ಶೇ.25ರಷ್ಟು ಸೋಂಕು ಈ ಹೊಸ ತಳಿಯಿಂದ ಉಂಟಾದದ್ದು. ಡಿಸೆಂಬರ್ ಮಧ್ಯಭಾಗದ ಹೊತ್ತಿಗೆ ಇದು 2/3 ರಷ್ಟಾಯಿತು. ಇದರಲ್ಲಿ ಎಷ್ಟು ಅಂಶ ಜನರ ನಡವಳಿಕೆಯ ಮೇಲೆ ಅವಲಂಬಿ ಸಿದೆ, ಎಷ್ಟು ಅಂಶ ವೈರಸ್ ತನ್ನದೇ ಗುಣದ ದೆಸೆಯಿಂದ ಆಗಿದೆ ಎಂದು ಹೇಳುವುದು ಕಷ್ಟ ಎಂದು ವಿಜ್ಞಾನಿಗಳ ಅಭಿಮತ.

ಈ ಹೊಸ ತಳಿಯ ವೈರಸ್ ಈಗಾಗಲೇ ಜಗತ್ತಿನ ಹಲವೆಡೆ ಕಂಡುಬಂದಿದೆ. ಮುಖ್ಯವಾಗಿ ಯುರೋಪಿನ ದೇಶಗಳಾದ ಡೆನ್ಮಾರ್ಕ್, ಬೆಲ್ಜಿಯಂ, ನೆದರ್‌ಲ್ಯಾಂಡ್, ಅಲ್ಲದೆ ಆಸ್ಟ್ರೇಲಿಯಾ ಖಂಡದಲ್ಲಿಯೂ ಕಂಡುಬಂದಿದೆ. ದಕ್ಷಿಣ ಆಫ್ರಿಕಾದಲ್ಲಿ ಸ್ವಲ್ಪ ಭಿನ್ನ ರೀತಿಯ ಮತ್ತೊಂದು ತಳಿಯ ವೈರಸ್ ವೇಗವಾಗಿ ಹರಡುತ್ತಿದೆ ಎಂದು ಗೊತ್ತಾಗಿದೆ. ಈ ಹೊಸ ತಳಿಯ ವೈರಸ್ ಮೊದಲಿನ ತಳಿಗಿಂತಲೂ ಅಪಾಯಕಾರಿಯೇ? ಎಂಬ ಪ್ರೆಶ್ನೆ ಉದ್ಭವಿಸಿದೆ.

ಹಲವು ತಜ್ಞರ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ತಳಿ ಹೆಚ್ಚು ಅಪಾಯಕಾರಿ ಎನ್ನಲು ಇನ್ನೂ ಸ್ಪಷ್ಟವಾದ ಪುರಾವೆ ದೊರಕಿಲ್ಲ. ವೈರಸ್ ಬಗ್ಗೆ ಹೆಚ್ಚು ಸಂಶೋಧನೆ ಈವರೆಗೆ ಕೈಗೊಂಡ ತಜ್ಞರ ಪ್ರಕಾರ ಈ ರೀತಿ ತಮ್ಮ ಜೆನೆಟಿಕ್ ಮಟ್ಟದಲ್ಲಿ ಮುಟ್ಯೇಷನ್ ಹೊಂದಿ ರೂಪಾಂತರಗೊಳ್ಳುವ ವೈರಸ್‌ಗಳು ಹೆಚ್ಚು ವೇಗವಾಗಿ ಪಸರಿಸುತ್ತವೆ ಅಥವಾ ಹರಡುತ್ತವೆ. ಆದರೆ ಅವುಗಳ ಅಪಾಯಕಾರಿ ಮಟ್ಟ ಮೊದಲಿಗಿಂತ ಕಡಿಮೆಯಾಗುತ್ತಾ ಹೋಗುತ್ತದೆ – ಹೀಗೆಂದು ಲಂಡನ್‌ನ ಸ್ಕೂಲ್ ಆಫ್ ಹೈಜೀನ್
ಮತ್ತು ಟ್ರಾಪಿಕಲ್ ಮೆಡಿಸಿನ್‌ನಲ್ಲಿ ಸೋಂಕು ರೋಗಗಳ ಪ್ರೊಫೆಸರ್ ಮಾರ್ಟಿನ್ ಹಿಬರ್ಡ್ ಅಭಿಪ್ರಾಯ ಪಡುತ್ತಾರೆ.

ಎಲ್ಲರ ಮನದಲ್ಲಿ ಈ ಸಂದರ್ಭದಲ್ಲಿ ಮೂಡುವ ಪ್ರಶ್ನೆ ಎಂದರೆ ಈಗಾಗಲೇ ಸಿದ್ದಗೊಂಡಿರುವ ವ್ಯಾಕ್ಸೀನ್ಗಳು ಈ ಹೊಸ ತಳಿಯ ಮೇಲೆ ಪರಿಣಾಮ ಹೊಂದಿವೆಯೇ ಅಥವಾ ಇಲ್ಲವೇ? ತಜ್ಞ ವಿಜ್ಞಾನಿಗಳ ಪ್ರಕಾರ ವ್ಯಾಕ್ಸೀನ್‌ಗಳು ಖಂಡಿತಾ ಇವುಗಳ ಮೇಲೂ
ಪರಿಣಾಮ ಬೀರಬಲ್ಲವು. ಈ ದಿಸೆಯಲ್ಲಿ ಈಗಾಗಲೇ ಅಮೆರಿಕದ ವ್ಯಾಕ್ಸೀನ್‌ಗಳಾದ ಫೆಜರ್ ಬಯೋನ್ ಟೆಕ್ ಮತ್ತು ಮಾಡೆರ್ನಾ ವ್ಯಾಕ್ಸೀನ್‌ಗಳನ್ನು ಈ ತಳಿಗಳ ಮೇಲೆ ಪ್ರಯೋಗಿಸಿ ಪರೀಕ್ಷೆ ನಡೆಸಲು ಆರಂಭಿಸಲಾಗಿದೆ. ಸದ್ಯದಲ್ಲಿಯೇ ಅವುಗಳ ಫಲಿತಾಂಶ
ಗೊತ್ತಾಗಲಿವೆ.

ಹಾಗೆಂದು ಈ ಕರೋನಾ ವೈರಸ್ ಮ್ಯುಟೇಷನ್ ಹೊಂದುತ್ತಿರುವುದು ಮೊದಲ ಬಾರಿ ಏನೂ ಅಲ್ಲ. ಈಗಾಗಲೇ ಅವು ಸಣ್ಣ ಸಣ್ಣ ರೀತಿಯಲ್ಲಿ ಎರಡು ಮೂರು ಬಾರಿ ರೂಪಾಂತರ ಹೊಂದಿವೆ. ಆ ಎಲ್ಲಾ ಮೊದಲಿನ ರೂಪಾಂತರಗಳ ಮೇಲೂ ಈ ವ್ಯಾಕ್ಸೀನ್ ‌ಗಳು ಪರಿಣಾಮ ಬೀರಬಲ್ಲವು ಎಂದು ಪ್ರಯೋಗಾಲಯದ ಪರೀಕ್ಷೆಗಳಿಂದ ಗೊತ್ತಾಗಿವೆ ಎಂದು ಆ ಎರಡೂ ವ್ಯಾಕ್ಸೀನ್‌ಗಳ ತಯಾರಕರು ಅಭಿಪ್ರಾಯ ಪಡುತ್ತಾರೆ. ಆದರೆ ಇನ್ನೂ ಕೆಲವು ವಿಜ್ಞಾನಿಗಳು ಫೈಜರ್‌ ಬಯೋನ್ ಟೆಕ್ ವ್ಯಾಕ್ಸೀನ್ ಏನು ಶೇ.95ರಷ್ಟು ಸಫಲ ಎನ್ನುತ್ತಿದ್ದಾರೆ. ಆ ಅಂಕಿ ಸ್ವಲ್ಪ ಕಡಿಮೆ ಆಗಬಹುದು ಎಂದು ಅಭಿಪ್ರಾಯಪಡುತ್ತಾರೆ.

ಫ್ರೆಡ್ ಹಚಿನ್ ಸನ್ ಕ್ಯಾನ್ಸರ್ ಸಂಶೋಧನಾ ಕೇಂದ್ರದ ವ್ಯಾಕ್ಸೀನ್ ಮತ್ತು ಸೋಂಕು ರೋಗಗಳ ಅಸೋಸಿಯೇಟ್ ಪ್ರೊಫೆಸರ್ ಟ್ರೆವರ್ ಬೆಡ್ ಫೆರ್ಡ್ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಬಯೋನ್ ಟೆಕ್‌ನ ವಿಜ್ಞಾನಿ ಸಾಹಿನ್ ಈ ಹೊಸ ತಳಿ ಹೀಗೆ
ರೂಪಾಂತರಗೊಂಡದ್ದರಿಂದ ಹೆಚ್ಚಿನ ಎಲ್ಲಾ ದೇಶಗಳು ಹರ್ಡ್ ಇಮ್ಯುನಿಟಿ ಉಂಟುಮಾಡಲು ಹೆಚ್ಚಿನ ಸಂಖ್ಯೆಯ ಜನರಿಗೆ ವ್ಯಾಕ್ಸೀನ್ ಕೊಡುವ ಅವಶ್ಯಕತೆ ಬಂದಿದೆ ಎಂದು ಅಭಿಪ್ರಾಯ ಪಡುತ್ತಾರೆ.

ಕೈಗೊಳ್ಳಲಾಗುತ್ತಿರುವ ಕ್ರಮಗಳು: ಇಂಗ್ಲೆಂಡಿನಲ್ಲಿ 6 ತಿಂಗಳ ಮೊದಲಿನಂತೆ ತುಂಬಾ ಕಠಿಣ ಲಾಕ್ ಡೌನ್ ಘೋಷಿಸಲಾಗಿದೆ. ಯುರೋಪಿನ ಡಜನ್ ಗಟ್ಟಲೆ ದೇಶಗಳು, ಮಧ್ಯ ಪ್ರಾಚ್ಯದ ದೇಶಗಳು, ಅಮೆರಿಕಾ, ಹಾಗೆಯೇ ಭಾರತ ಸಹ ಇಂಗ್ಲೆಂಡಿನ ಪ್ರವಾಸ ವನ್ನು ಡಿಸೆಂಬರ್ ಕೊನೆಯವರೆಗೆ ಸಂಪೂರ್ಣವಾಗಿ ರದ್ದುಪಡಿಸಿವೆ.

ಅಮೆರಿಕದ ಶ್ವೇತ ಭವನವು ಇಂಗ್ಲೆಂಡಿನಿಂದ ಬರುವ ಪ್ರವಾಸಿಗರಿಗೆ ದೇಶ ಪ್ರವೇಶಿಸುವ ಮೊದಲು ಕರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಮಾತ್ರ ಪ್ರವೇಶ ಎಂದು ಕಠಿಣ ಆದೇಶ ಹೊರಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕರೋನಾ ವೈರಸ್ ವಿರುದ್ಧದ ಪ್ರಾಥಮಿಕ ಕ್ರಮಗಳಾದ ಜನಜಂಗುಳಿ ಸೇರದಿರುವುದು, ಅಪರಿಚಿತ ಜನರಿಂದ ಆದಷ್ಟು ದೂರ ಇರುವುದು, ಪದೇ ಪದೆ ಕೈ ತೊಳೆಯುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು – ಇವುಗಳನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅಭಿಪ್ರಾಯ
ಪಡುತ್ತದೆ.

ಕೋವಿಡ್ ಕಾಯಿಲೆ ಉಂಟು ಮಾಡುವ ಈ ಕರೋನಾ ವೈರಸ್ ಮೊದಲು ತಿಳಿಸಿದಂತೆ ಹಲವು ಬಾರಿ ರೂಪಾಂತರಗೊಂಡಿದೆ. ಚೀನಾದ ವುಹಾನ್‌ನಲ್ಲಿ ಆರಂಭದಲ್ಲಿ ಕಾಣಿಸಿಕೊಂಡ ವೈರಸ್‌ನ ತಳಿ ಜಗತ್ತಿನ ಹಲವೆಡೆ ಆ ಮೇಲೆ ಕಂಡುಬಂದ ತಳಿಯಲ್ಲ. ಕಳೆದ ಫೆಬ್ರವರಿಯ ಯುರೋಪಿನಲ್ಲಿ ಡಿ 6 14 ಜಿ ಮ್ಯುಟೇಷನ್ ಕಂಡುಬಂದು ಜಗತ್ತಿನಾದ್ಯಂತ ಆಮೇಲೆ ಕಂಡುಬಂದಿದ್ದ ವೈರಸ್ ಇದೇ ಆಗಿತ್ತು.

ಯುರೋಪಿನಲ್ಲಿ ಕಂಡುಬಂದಿದ್ದ ಇನ್ನೊಂದು ತಳಿ ಎಂದರೆ ಎ 222ವಿ ತಳಿ. ಇದು ಸ್ಪೇನ್‌ನ ಬೇಸಿಗೆಯ ರಜೆಯಲ್ಲಿ ಆರಂಭ ವಾದದ್ದು ಎನ್ನಲಾಗಿದೆ. ಈ ಹೊಸ ತಳಿಯ ವಿಶೇಷತೆ ಏನು? ಈ ಹೊಸ ತಳಿಯನ್ನು ವಿಯುಐ 202012/01 ಎಂದು
ಗುರುತಿಸಲಾಗಿದೆ. ಈ ಹೊಸ ತಳಿಯ ಆರಂಭದ ವಿಶ್ಲೇಷಣೆಯ ಪ್ರಕಾರ ವೈರಸ್‌ನಲ್ಲಿ 17 ಪ್ರಮುಖ ಬದಲಾವಣೆಗಳು ಕಂಡು ಬಂದಿವೆ. ಎನ್ 501 ವೈ ಎಂಬ ಮುಖ್ಯ ರೂಪಾಂತರವು ಸ್ಪೆ ಕ್ ಪ್ರೋಟೀನ್‌ನ ಮುಖ್ಯ ಭಾಗವಾದ ರೆಸಪ್ಟಾರ್ ಬೈಂಡಿಂಗ್
ಡೊಮೈನ್‌ನನ್ನು ಬದಲಾಯಿಸುತ್ತದೆ.

ನಮ್ಮ ದೇಹದ ಜೀವಕೋಶಗಳ ಹೊರಭಾಗದೊಂದಿಗೆ ಸ್ಪೈಕ್ ಸಂಪರ್ಕಕ್ಕೆ ಬರುವ ಸ್ಥಳವೇ ಇದು. ಇನ್ನೊಂದು ರೂಪಾಂತರ ಎಂದರೆ – ಹೆಚ್ 69 / ವಿ 70 ಡಿಲೀಷನ್ – ಅಂದರೆ ಇದರಲ್ಲಿ ಸ್ಪೆ ಕ್‌ನ ಸ್ವಲ್ಪ ಭಾಗವನ್ನು ತೆಗೆಯಲಾಗಿದೆ. ಈ ರೂಪಾಂತರ
ಈಗಾಗಲೇ ಹಲವು ಬಾರಿ ಆಗಿವೆ ಎನ್ನುತ್ತಾರೆ ವಿಜ್ಞಾನಿಗಳು. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಪ್ರೊ.ರವಿ ಗುಪ್ತಾ ಅವರ ಅಧ್ಯಯನದ ಪ್ರಕಾರ ಪ್ರಯೋಗಾಲಯದಲ್ಲಿ ಕೈಗೊಂಡ ಪ್ರಯೋಗಗಳಲ್ಲಿ ಈ ರೀತಿಯ ರೂಪಾಂತರ, ಸೋಂಕು ಹರಡುವ ಶಕ್ತಿ
ಯನ್ನು ಎರಡರಷ್ಟು ಹೆಚ್ಚಿಸುತ್ತದೆ.

ಮೇಲಿನ ಡಿಲೀಷನ್ ಕ್ರಿಯೆಯು ಸೋಂಕಿತರಾಗದೆ ಹೊರಗಿರುವ ವ್ಯಕ್ತಿಗಳ ರಕ್ತದಲ್ಲಿನ ಆಂಟಿಬಾಡಿಗಳ ವೈರಸ್‌ನ ಮೇಲೆ ಆಕ್ರಮಿಸುವ ಶಕ್ತಿಯನ್ನು ಕುಂಠಿತಗೊಳಿಸುತ್ತವೆ. ಅಂದರೆ ಅದರ ಅರ್ಥ ದೇಹದ ಪ್ರತಿರೋಧ ಶಕ್ತಿ ಕಡಿಮೆಯಾಗುತ್ತಾ ಬರುತ್ತದೆ. ಇದು ಸ್ವಲ್ಪ ಗಂಭೀರವಾಗಿ ಯೋಚಿಸಬೇಕಾದ ವಿಚಾರ ಎಂದು ಪ್ರೊ.ರವಿ ಗುಪ್ತಾ ಅಭಿಪ್ರಾಯಪಡುತ್ತಾರೆ. ಈ ಮ್ಯುಟೇಷನ್‌ಗೆ ಕಾರಣವೇನು? ವಿಜ್ಞಾನಿಗಳ ಪ್ರಕಾರ ಒಬ್ಬ ನಿರ್ದಿಷ್ಟ ವ್ಯಕ್ತಿಯ (ಬಹುಶಃ ಲಂಡನ್ನಿನಲ್ಲಿ ) ಪ್ರತಿರೋಧ ವ್ಯವಸ್ಥೆ ತೀವ್ರವಾಗಿ ಕುಂಠಿತಗೊಂಡಿತ್ತು. ಆ ವ್ಯಕ್ತಿಗೆ ಕರೋನಾ ವೈರಸ್ ಸೋಂಕು ಆದಾಗ ಆತನ ದೇಹ ವೈರಸ್‌ಗೆ ಶರಣಾಯಿತು. ಪರಿಣಾಮ ಎಂದರೆ ಆತನ ದೇಹ ವೈರಸ್‌ಗೆ ಒಂದು ರೀತಿಯ ಬ್ರೀಡಿಂಗ್ ವಿಕ್ಟರಿಯಾಗಿ ಪರಿಣಮಿಸಿ ವೈರಸ್ ಈ ರೂಪಾಂತರ ಹೊಂದಿತು.

ಈಗಾಗಲೇ ತಿಳಿಸಿರುವಂತೆ ಈ ರೂಪಾಂತರ ಕ್ರಿಯೆ ಹೆಚ್ಚು ಅಪಾಯಕಾರಿ ಎಂದು ಅಧಿಕೃತವಾಗಿ ಹೇಳಲು ಸಾಧ್ಯವಾಗದಿದ್ದರೂ ಸೋಂಕು ಹರಡುವ ಗತಿ ಅಥವಾ ವೇಗ ಜಾಸ್ತಿಯಾಗುವುದರಿಂದ ಹೆಚ್ಚು ಜನರು ಕಾಯಿಲೆ ಪೀಡಿತರಾಗಿ ಹೆಚ್ಚು ಜನರು ಆಸ್ಪತ್ರೆಗೆ
ದಾಖಲಾಗಬೇಕಾದ ಪರಿಸ್ಥಿತಿ ಉಂಟಾಗಬಹುದು. ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಿ ಅಸಾಮಾನ್ಯ ಪರಿಸ್ಥಿತಿ ಉಂಟಾಗಬಹುದು.
ವ್ಯಾಕ್ಸೀನ್‌ಗಳ ಪರಿಣಾಮಗಳ ಬಗ್ಗೆ ಮತ್ತೊಮ್ಮೆ ವಿಶ್ಲೇಷಿಸುವುದಾದರೆ ಈಗಾಗಲೇ ಹೊರಬಂದಿರುವ 3 ವ್ಯಾಕ್ಸೀನ್‌ಗಳು – ಫೈಜರ್ ಬಯೋನ್ ಟೆಕ್, ಮಾಡೆರ್ನಾ ಮತ್ತು ಆಕ್ಸರ್ಡ್ ಆಸ್ಟ್ರಾಜೆನೆಕಾಗಳು ವೈರಸ್‌ನಲ್ಲಿರುವ ಸ್ಪೆಕ್‌ಗಳ ಮೇಲೆ ಪ್ರತಿರೋಧ
ಶಕ್ತಿ ಯನ್ನು ಉಂಟುಮಾಡುತ್ತವೆ.

ರೂಪಾಂತರ ಕ್ರಿಯೆಯಲ್ಲಿ ಈ ಸ್ಪೆ ಕ್‌ನ ಒಂದು ಭಾಗ ಮಾತ್ರ ಆ ರೂಪಾಂತರ ಕ್ರಿಯೆಗೆ ಒಳಗಾಗುತ್ತದೆ. ಉಳಿದ ಭಾಗ ವೈರಸ್ ವಿರುದ್ಧ ಪರಿಣಾಮ ಹೊಂದಿಯೇ ಹೊಂದಿದೆ. ವ್ಯಾಕ್ಸೀನ್‌ಗಳ ಪರಿಣಾಮದಿಂದ ತಪ್ಪಿಸಿಕೊಳ್ಳಲು ಈ ವೈರಸ್ ತೋರುತ್ತಿರುವ ಮೊದಲ ಉಪಾಯ ಅಥವಾ ಹೆಜ್ಜೆ ಇದು. ಇದರ ನಂತರದ ಹೆಜ್ಜೆ ಏನು ಎಂದು ನಾವು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಪ್ರೊ.ಗುಪ್ತಾ ಅಭಿಪ್ರಾಯ ಪಡುತ್ತಾರೆ.

ವ್ಯಾಕ್ಸೀನ್‌ನಿಂದ ತಪ್ಪಿಸಿ ಕೊಳ್ಳಲು ಅಗತ್ಯವಿರುವ ಇನ್ನೂ ಹಲವು ಮ್ಯುಟೇಷನ್ ಈ ವೈರಸ್ ಹೊಂದುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿ ಉಂಟಾದರೆ ಮನುಷ್ಯನಿಗೆ ಅದು ತೀರಾ ಅಪಾಯಕಾರಿ ಎಂದು ಗ್ಲಾಸ್ಗೋ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡೇವಿಡ್
ರಾಬರ್ಟ್ ಸನ್ ಅಭಿಪ್ರಾಯ ಪಡುತ್ತಾರೆ. ಹಾಗಾದಾಗ ಈ ಕರೋನಾ ವೈರಸ್ – ವೈರಸ್ನಂತಾಗಿ ಆಗ ನಾವು ಪದೇ ಪದೆ ವ್ಯಾಕ್ಸೀನ್‌ ಗಳನ್ನು ಬದಲಿಸುವ ಪರಿಸ್ಥಿತಿ ಬರಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ.

ಮೊದಲ ತಳಿಗಿಂತ ಭಿನ್ನವೇ? ಈ ತಳಿಯ ಒಟ್ಟು 10 ರೋಗ ಲಕ್ಷಣಗಳನ್ನು ವೈದ್ಯರು – ವಿಜ್ಞಾನಿಗಳು ಗುರುತಿಸಿದ್ದಾರೆ. ಮೊದಲಿನ ಕೋವಿಡ್ 19 ತಳಿಯ ಮುಖ್ಯ ಲಕ್ಷಣಗಳಾದ ಜ್ವರ, ಒಣ ಕೆಮ್ಮು ಹಾಗೂ ವಾಸನೆ ಮತ್ತು ರುಚಿ ನಾಶವಾಗುವುದು – ಇವುಗಳ ಜತೆ ಇನ್ನೂ 7 ಲಕ್ಷಣಗಳು ಎಂದರೆ – ತೀವ್ರ ಸುಸ್ತಾಗುವುದು, ಹಸಿವು ಆಗದಿರುವುದು, ತೀವ್ರ ರೀತಿಯ ತಲೆನೋವು, ಬೇಧಿ, ಮನಸ್ಸಿನಲ್ಲಿ ಕಸಿವಿಸಿ ಉಂಟಾಗಿ ನಿರ್ಧಾರ ತೆಗೆದುಕೊಳ್ಳುವಲ್ಲಿ ತೊಂದರೆ, ದೇಹದ ಹಲವಾರು ಮಾಂಸ ಖಂಡಗಳ ನೋವು, ಚರ್ಮದ ಮೇಲೆ ವಿವಿಧ ರೀತಿಯ ದದ್ದುಗಳು ಅಥವಾ ಗುಳ್ಳೆಗಳು (Rashes) ಕಾಣಿಸಿಕೊಳ್ಳುವುದು.

ಮತ್ತೊಂದು ಭಿನ್ನ ತಳಿ:  ಇಂಗ್ಲೆಂಡಿನಲ್ಲಿ ಕರೋನಾ ವೈರಸ್‌ನ ಹೊಸ ತಳಿ ಕಾಣಿಸಿಕೊಂಡ ಬೆನ್ನ ದಕ್ಷಿಣ ಆಫ್ರಿಕಾದಲ್ಲಿ ಭಿನ್ನ
ರೀತಿಯ ಮತ್ತೊಂದು ಹೊಸ ತಳಿ ಅಥವಾ ರೂಪಾಂತರ ಕಂಡು ಬಂದಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ಇಂಗ್ಲೆಂಡಿಗೆ ಬಂದ ೨ ರೋಗಿಗಳಲ್ಲಿ ಈ ಹೊಸ ರೂಪಾಂತರದ ತಳಿ ಕಂಡುಬಂದಿದೆ.

ದಕ್ಷಿಣ ಆಫ್ರಿಕಾದಲ್ಲಿ ಹೊಸ ರೀತಿಯ ಈ ತಳಿ ಮೊದಲೇ ಕಂಡುಬಂದಿತ್ತು ಎಂದು ಆ ದೇಶ ವ ರದಿಮಾಡಿತ್ತು. ಇದು ಇಂಗ್ಲೆಂಡಿನ ರೂಪಾಂತರ ತಳಿಗಿಂತ ಹೆಚ್ಚು ಬೇಗ ಹರಡುತ್ತದೆ ಎನ್ನಲಾಗಿದೆ. ಈ ತಳಿಯನ್ನು 501 ವಿ 2 ಎಂದು ಹೆಸರಿಸಲಾಗಿದೆ. ಇದರ ಅಪಾಯಕಾರಿ ಅಂಶ ಎಂದರೆ ಯಾವ ಕಾಯಿಲೆಯೂ ಇಲ್ಲದ ಚಿಕ್ಕ ವಯಸ್ಸಿನವರಲ್ಲಿ (16 – 19 ವಯಸ್ಸಿನವರಲ್ಲಿ ) ಇದು
ಕಂಡುಬರುತ್ತಿದೆ. ಆರಂಭದಲ್ಲಿ ಅದು ಅಲ್ಲಿನ ಕರಾವಳಿ ಪ್ರದೇಶದಲ್ಲಿ ಮಾತ್ರ ಇತ್ತು. ಈಗ ಅದು ಎಲ್ಲಾ ಕಡೆ ಹರಡಿಕೊಂಡಿದೆ. ಈ ತಳಿಯ ವೈರಸ್ ವ್ಯಕ್ತಿಯ ದೇಹದ ಜೀವಕೋಶವನ್ನು ಸುಲಭವಾಗಿ ಪ್ರವೇಶಿಸಿ  ಅಲ್ಲಿ ಅಂಟಿಕೊಂಡು ಬಿಡುತ್ತದೆ.

ಹಾಗಾಗಿ ಇದು ಉಳಿದ ತಳಿಗಳಿಗಿಂತ ಬೇಗ ಹರಡುತ್ತದೆ ಎನ್ನಲಾಗಿದೆ. ಹೀಗೆ ಇಂಗ್ಲೆಂಡ್, ದಕ್ಷಿಣ ಆಫ್ರಿಕಾದವುಗಳಲ್ಲದೆ ತೀರಾ
ಇತ್ತೀಚೆಗೆ ಇನ್ನೊಂದು ರೂಪಾಂತರದ ತಳಿ ನೈಜೀರಿಯಾ (ಆಫ್ರಿಕಾ ಖಂಡ)ದಿಂದ ವರದಿಯಾಗಿದೆ. ಇದು ದಕ್ಷಿಣ ಆಫ್ರಿಕಾದ ತಳಿಯಂತೆ 501 ರೂಪಾಂತರ ಎಂದು ಗುರುತಿಸಲಾಗಿದೆ. ಒಟ್ಟಿನಲ್ಲಿ ಈ ಕರೋನಾ ವೈರಸ್ ಇನ್ನು ಮುಂದೆ ಬೇಗ ಬೇಗ
ರೂಪಾಂತರ ಹೊಂದಿ ವಿಜ್ಞಾನಿಗಳಿಗೆ ಮತ್ತು ಜನಸಾಮಾನ್ಯರಿಗೆ ಚಿಂತೆ ಹೆಚ್ಚಿಸುವುದೇ ಎಂದು ಕಾದು ನೋಡಬೇಕು.