ವಿಚಾರ ವೇದಿಕೆ
ಗ.ನಾ.ಭಟ್ಟ
ನಮ್ಮ ದೇಶಕ್ಕೆ ಬಾಹ್ಯಶತ್ರುಗಳಿಗಿಂತ ಒಳಶತ್ರುಗಳ ಅಪಾಯವೇ ಹೆಚ್ಚು. ಅದರಲ್ಲೂ ವಿಪಕ್ಷದವರು ಎಂಬ ಹಣೆಪಟ್ಟಿ ಅಂಟಿಸಿಕೊಂಡ ರಾಜಕಾರಣಿ ಗಳಂತೂ ಮಹಾ ಅಪಾಯಕಾರಿಗಳೇ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಕ್ಯಾತೆ ತೆಗೆಯುವ ಇವರ ಬಳಿ, ಆಡಳಿತ ಪಕ್ಷ ಏನು ಮಾಡಿದರೂ ಒಂದು
ಅಪಸ್ವರ ಸದಾ ಸಿದ್ಧವಾಗಿರುತ್ತದೆ. ದೇಶದ ಸಮಗ್ರ ಅಭಿವೃದ್ಧಿ, ಜನಪರ ಕೆಲಸ, ಪರಂಪರೆ, ಸನಾತನ ಅರಿವು ಇವ್ಯಾವುದೂ ಅವರಿಗಿಷ್ಟವಾಗದೆ, ‘ಏತಿ’ ಎಂದರೆ ‘ಪ್ರೇತಿ’ ಎನ್ನುತ್ತಾರೆ. ಲಂಗುಲಗಾಮಿಲ್ಲದ ನಾಲಿಗೆ, ಬೌದ್ಧಿಕ ದಾರಿದ್ರ್ಯ, ಅಧ್ಯಯನಶೂನ್ಯತೆ ಇವೇ ಮೊದಲಾದ ನಕಾರಾತ್ಮಕ ಗುಣಗಳೇ ಇವರ ಬಂಡವಾಳ.
ಬಾಲಸುಟ್ಟ ಬೆಕ್ಕಿನಂತೆ ಅಲ್ಲಿಲ್ಲಿ ಜಿಗಿಯುವ ಇವರು ಎಲ್ಲೂ ಸರಿಯಾದ ನೆಲೆಯಿಲ್ಲದೆ ಅವರಿವರ ಮನೆಯ ಬಾಗಿಲು ತಟ್ಟುತ್ತಿರುತ್ತಾರೆ. ತಮ್ಮಿಂದಾದ ತಪ್ಪನ್ನು ‘ಅದು ತಪ್ಪಲ್ಲ’ ಎಂದು ಸಾಧಿಸುವುದಕ್ಕೆ ಹಲವು ಉಪಾಯಗಳ ಮೊರೆಹೋಗುತ್ತಾರೆ. ಮೇ ೨೮ರಂದು ದೆಹಲಿಯಲ್ಲಿ ನೂತನ ಸಂಸತ್ ಭವನದ ಉದ್ಘಾಟನೆಯ ವೇಳೆ ೧೯ ವಿರೋಧ ಪಕ್ಷದವರು ನಡೆದುಕೊಂಡ ರೀತಿ ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಅದೆಂಥಾ ದ್ವೇಷ, ಅದೆಂಥಾ ಬಾಲಿಶ ಹೇಳಿಕೆಗಳು! ಸಂಸತ್ ಭವನವನ್ನು ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿಯವರೇ ಉದ್ಘಾಟಿಸ ಬೇಕಿತ್ತೇ ವಿನಾ ಪ್ರಧಾನಿ ಮೋದಿಯವರಲ್ಲ ಎಂದೆಲ್ಲಾ ಹೇಳಿಕೊಂಡು ಇವರು ಪ್ರಚಾರ ಗಿಟ್ಟಿಸಿದರು. ಈ ಮಾತಿಗೆ ಏನಾದರೂ ಅರ್ಥವಿದೆಯೇ? ಇತರರ ಸುಖ ಕೆಡಿಸುವ, ಆನಂದಕ್ಕೆ ತಣ್ಣೀರೆರಚುವ ಇಂಥ ಪ್ರವೃತ್ತಿಗೆ ‘ಕಿಲ್ ಜಾಯ್’ ಎಂದು ಕರೆಯುತ್ತಾರೆ.
‘ವಿಪಕ್ಷದವರು’ ಎಂದರೆ ಚುನಾವಣೆಯಲ್ಲಿ ಗೆದ್ದೂ ಬಹುಮತವಿಲ್ಲದೆ ಸರಕಾರ ರಚಿಸಲಾಗದವರು ಎಂದರ್ಥವೇ ವಿನಾ ಬೇರೇನೂ ಅಲ್ಲ. ತಮಾಷೆಯ ಸಂಗತಿಯೆಂದರೆ, ಬೇರೆಬೇರೆ ರಾಜ್ಯದಲ್ಲಿರುವ ಬಿಜೆಪಿಯೇತರ ಎಲ್ಲ ಪಕ್ಷಗಳೂ ವಿಪಕ್ಷಗಳಾಗಿಬಿಟ್ಟಿವೆ. ಎಂಥಾ ವಿಪರ್ಯಾಸವಿದು! ಮುಂಬರುವ ಚುನಾವಣೆಯಲ್ಲಿ ಮೋದಿಯವರನ್ನು ಹಣಿಯಬೇಕು ಎಂಬ ಏಕೈಕ ಉದ್ದೇಶ ಬಿಟ್ಟರೆ ಇವರಿಗೆ ಬೇರಾವ ಘನ ಉದ್ದೇಶವಿಲ್ಲ. ಮೋದಿಯವರ ಜನಪರ ದೃಷ್ಟಿಕೋನ, ಪ್ರತಿಯೊಬ್ಬ ಭಾರತೀಯನಲ್ಲೂ ಅವರು ಮೂಡಿಸಿದ ರಾಷ್ಟ್ರಪ್ರಜ್ಞೆ, ದೇಶ-ವಿದೇಶಗಳಲ್ಲಿ ಅವರಿಗೆ ದಕ್ಕುತ್ತಿರುವ ಅಭೂತಪೂರ್ವ ಮನ್ನಣೆ ಇವ್ಯಾವುದನ್ನೂ ಇವರಿಗೆ ಸಹಿಸಲಾಗುತ್ತಿಲ್ಲ.
ಇದಕ್ಕಾಗಿಯೇ ಇಂಥವರನ್ನು ‘ಚಿಲ್ಲರೆ ಬುದ್ಧಿಯವರು’ ಎನ್ನುವುದು. ಚಿಲ್ಲರೆಗಳನ್ನು ಎಷ್ಟು ಸಲ ಸೇರಿಸಿ ‘ಬಂದಾ’ ಮಾಡಿದರೂ ಅವು ಒಂದರೊ ಡನೊಂದು ಹೊಂದಿಕೊಳ್ಳದೆ ಪ್ರತ್ಯೇಕವಾಗಿಯೇ ಇದ್ದು ‘ಝಣ ಝಣ’ ಸದ್ದು ಮಾಡುತ್ತಲೇ ಇರುತ್ತವೆ. ಇವರು ಒಗ್ಗೂಡುವುದು ಯಾಕೆಂದರೆ- ಎಲ್ಲರೂ ಪ್ರಧಾನಮಂತ್ರಿಯಾಗುವುದಕ್ಕೆ. ‘ಒಂದು ವೃತ್ತಕ್ಕೆ ಒಂದೇ ಕೇಂದ್ರಬಿಂದುವಿರುತ್ತದೆ’ ಎಂಬ ಸಾಮಾನ್ಯಜ್ಞಾನದಂತೆ ಒಂದು ದೇಶಕ್ಕೆ ಒಬ್ಬನೇ ಪ್ರಧಾನ ಮಂತ್ರಿ, ಎಲ್ಲರೂ ಆಗಲು ಸಾಧ್ಯವಿಲ್ಲ ಎಂಬ ಕನಿಷ್ಠ ತಿಳಿವಳಿಕೆಯೂ ಇವರಿಗಿಲ್ಲ. ಎಂಥ ದುರಂತವಿದು!
ಆ ವಿಚಾರ ಬಿಡೋಣ. ಇವರೆಲ್ಲ ‘ರಾಜದಂಡ’ದ ಬಗ್ಗೆ ಆಡಿದ ಮಾತು ಅದೆಷ್ಟು ಬಾಲಿಶವಾದುದು ಅಲ್ಲವೇ? ಕಾಂಗ್ರೆಸ್ ಪಕ್ಷದ ಜೈರಾಮ್ ರಮೇಶ್ ಅವರು, ‘ಈ ರಾಜದಂಡವು ನೆಹರು ಅವರ ಖಾಸಗಿ ಆಸ್ತಿ. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಲಾರ್ಡ್ ಮೌಂಟ್ ಬ್ಯಾಟನ್ ಅವರು ಅಧಿಕಾರ ಹಸ್ತಾಂತರ ಮಾಡುವಾಗ ನೆಹರು ಅವರಿಗೆ ಕೊಟ್ಟ ಕೊಡುಗೆಯದು. ಅದೊಂದು ವಾಕಿಂಗ್ ಸ್ಟಿಕ್’ ಎಂದರು. ಇಂಥ ಅಸಂಬದ್ಧ ಹೇಳಿಕೆಗಳನ್ನು ವಿಮರ್ಶಿಸುವುದಕ್ಕಿಂತ ‘ರಾಜದಂಡ’ ಎಂದರೇನು ಎಂಬುದನ್ನು ವಿಶ್ಲೇಷಿಸುವುದು ಒಳಿತು.
ನರೇಂದ್ರ ಮೋದಿ, ಅಮಿತ್ ಶಾ ಅವರಂಥ ಕೆಲವರನ್ನು ಬಿಟ್ಟರೆ ಬಹುತೇಕ ನಾಯಕರಿಗೆ ಭಾರತೀಯ ಸಂಸ್ಕೃತಿಯ ತಿರುಳು, ಸನಾತನ ಪರಂಪರೆ, ಇತಿಹಾಸ, ವೇದ, ಉಪನಿಷತ್ತು ಇತ್ಯಾದಿಗಳ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಮುಸ್ಲಿಮರ ಓಲೈಕೆಯಲ್ಲೇ ‘ಬ್ರೇನ್‌ವಾಷ್’ ಆಗಿಹೋದ ಕಾಂಗ್ರೆಸ್‌ನವರಿಗೆ ಹಿಂದೂ ಸಂಸ್ಕೃತಿಯನ್ನು ಕಂಡರೇ ಆಗುವುದಿಲ್ಲ. ಇಂಥವರು ಸುಮಾರು ೫೫ ವರ್ಷ ಕಾಲ ನಮ್ಮ ದೇಶವನ್ನು ಆಳಿದರು ಅನ್ನುವುದೇ ನಾಚಿಕೆಗೇಡಿನ ಸಂಗತಿ.
ರಾಜ್ಯಶಾಸ, ರಾಜ್ಯಮೀಮಾಂಸೆ, ವೇದ, ಉಪನಿಷತ್ತು, ಸ್ಮೃತಿ, ರಾಮಾಯಣ, ಮಹಾಭಾರತದಂಥ ಪ್ರಾಚೀನ ಸಾಹಿತ್ಯದ ಕಿಂಚಿತ್ತಾದರೂ ಪರಿಚಯ ವಿದ್ದವರಿಗೆ ‘ರಾಜದಂಡ’ ಅಂದರೆ ಏನು ಅಂತ ಗೊತ್ತಿರುತ್ತದೆ.
ರಾಜ್ಯಮೀಮಾಂಸಾಶಾಸಕ್ಕೆ ಸಂಬಂಧಪಟ್ಟಂತೆ ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಹೇರಳ ಗ್ರಂಥಗಳಿದ್ದವು. ಅವನ್ನು ‘ಅರ್ಥಶಾಸ’, ‘ರಾಜಧರ್ಮ’, ‘ರಾಜನೀತಿ’, ‘ದಂಡನೀತಿ’ ಎಂದೆಲ್ಲಾ ಕರೆಯುತ್ತಿದ್ದರು. ವೇದ, ಪುರಾಣೇತಿಹಾಸಗಳಲ್ಲಿ ರಾಜಧರ್ಮ ವಿಷಯಕವಾದ ವಚನಗಳು ಹೇರಳವಾಗಿವೆ. ಮಾತ್ರವಲ್ಲದೆ, ಬೃಹಸ್ಪತಿ, ಶುಕ್ರ, ಕೌಟಿಲ್ಯ ಮೊದಲಾದವರು ಪ್ರತ್ಯೇಕ ರಾಜನೀತಿ ಗ್ರಂಥಗಳನ್ನು ಬರೆದಿದ್ದಾರೆ. ದುಃಖಕರ ಸಂಗತಿಯೆಂದರೆ, ಇವು ಯಾವುವೂ ಅವಿಚ್ಛಿನ್ನವಾಗಿ ಲೋಕವ್ಯವಹಾರವನ್ನು ಅವಲಂಬಿಸಿಕೊಂಡು ಇಂದಿನ ರಾಜಕಾರಣಕ್ಕೆ ಅನ್ವಯವಾಗುವಂತೆ ಬೆಳೆದುಬಂದಿಲ್ಲ.
‘ಸಂಸತ್ತು ಜನರ ಧ್ವನಿಯಾಗಬೇಕು. ಆದರೆ ನೂತನ ಸಂಸತ್ ಭವನದ ಉದ್ಘಾಟನೆಯನ್ನು ಪ್ರಧಾನಿ ಮೋದಿ ಪಟ್ಟಾಭಿಷೇಕ ಎಂದು ಭಾವಿಸಿದ್ದಾರೆ’ ಎಂದು ಹೇಳಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಮಾತನ್ನೇ ಆಧಾರವಾಗಿಟ್ಟುಕೊಂಡು ವಿಶ್ಲೇಷಿಸುವುದಾದರೆ, ಖಂಡಿತವಾಗಿಯೂ ಪಟ್ಟಾಭಿಷೇಕ, ಕಿರೀಟ, ಆಭರಣ, ಪೀಠ, ಧ್ವಜ, ಸಿಂಹಾಸನ, ವಾದ್ಯ, ದಂಡ, ಹುಲಿಯ ಚರ್ಮ ಮೊದಲಾದವು ಒಂದಕ್ಕೊಂದು ಸಾಂಕೇತಿಕ ಅರ್ಥಗಳಾಗಿ, ಪರ್ಯಾಯವಾಚಿಗಳಾಗಿ ನಮ್ಮ ಅಜ್ಞಾನವನ್ನು ನೀಗಿಸುತ್ತವೆ.
ಕಾಂಗ್ರೆಸ್ ಚೇಲಾಗಳು ಹೇಳುವಂತೆ ‘ದಂಡ’ ಎಂದರೆ ಅದು ನೆಹರು ಅವರ ವಾಕಿಂಗ್ ಸ್ಟಿಕ್ಕೂ ಅಲ್ಲ, ಅದೊಂದು ಕಟ್ಟಿಗೆಯ ತುಂಡೂ ಅಲ್ಲ, ಲಾರ್ಡ್ ಮೌಂಟ್ ಬ್ಯಾಟನ್‌ನ ಉಡುಗೊರೆಯೂ ಅಲ್ಲ. ಅಂದು ನಮಗೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ, ಅಧಿಕಾರ ಹಸ್ತಾಂತರದ ಕುರುಹಾಗಿ ಅಂದಿನ ಹಿರಿಯ
ರಾಜಕಾರಣಿ, ಮುತ್ಸದ್ದಿ ಸಿ. ರಾಜಗೋಪಾಲಾಚಾರಿಯವರು ಚೋಳ ಅರಸರ ಮನೆತನದಲ್ಲಿ ಒಬ್ಬ ರಾಜನಿಂದ ಮತ್ತೊಬ್ಬ ರಾಜನಿಗೆ ಅಧಿಕಾರ ವರ್ಗಾವಣೆಯಾಗುವ ಸಂದರ್ಭವನ್ನು ಗಮನಿಸಿ, ರಾಜಪುರೋಹಿತರ ಆಶೀರ್ವಾದ ಹೊಂದಿದ, ಅತ್ಯಂತ ಪವಿತ್ರ ರಾಜದಂಡದ ಬಗ್ಗೆ ಸಂಶೋಧನೆ ಮಾಡಿ, ಅದೇ ಗ್ರಹಿಕೆಯಲ್ಲಿ ಲಾರ್ಡ್ ಮೌಂಟ್ ಬ್ಯಾಟನ್‌ನಿಂದ ಒಂದು ‘ದಂಡ’ವನ್ನು ಕೊಡಿಸಿದರು.
ಅದರ ಹಿನ್ನೆಲೆ ಗೊತ್ತಿಲ್ಲದ ಭಟ್ಟಂಗಿಗಳು ಅದನ್ನು ನೆಹರು ಅವರ ‘ವಾಕಿಂಗ್ ಸ್ಟಿಕ್’ ಅಂತ ತಿಳಿದುಕೊಂಡು ಅದನ್ನೇ ಜಪಿಸುತ್ತಿದ್ದಾರೆ. ರಾಜದಂಡಕ್ಕೆ ಅದರದ್ದೇ ಆದ ಸಾಂಕೇತಿಕ ಅರ್ಥವಿದೆ, ಪಾವಿತ್ರ್ಯವಿದೆ, ಭವ್ಯ ಪರಂಪರೆಯಿದೆ. ನಮ್ಮ ಆರ್ಷ ಸಾಹಿತ್ಯದಲ್ಲಿ ದಂಡ, ರಾಜದಂಡ, ಬ್ರಹ್ಮದಂಡದ ಬಗ್ಗೆ
ರೋಚಕ ವಿವರಣೆಗಳಿವೆ. ಕಿರೀಟ, ಸಿಂಹಾಸನ, ಆಭರಣ, ದಂಡ, ಹುಲಿಯ ಚರ್ಮ ಮೊದಲಾದವು ಧರ್ಮಸಂರಕ್ಷಣಶಕ್ತಿಯ ಸಂಕೇತಗಳಾಗಿವೆ. ವ್ಯಕ್ತಿಯೊಬ್ಬ ರಾಜಮನೆತನದಲ್ಲಿ ಹುಟ್ಟಿದ ಮಾತ್ರಕ್ಕೆ ಅವನಿಗೆ ರಾಜತ್ವವಾಗಲೀ ದೈವತ್ವವಾಗಲೀ ಪ್ರಾಪ್ತವಾಗುವುದಿಲ್ಲ.
ಅವನಿಗೆ ರಾಜ ಪಟ್ಟಾಭಿಷೇಕ ನಡೆದು, ಆತ ಸಿಂಹಾಸನದಲ್ಲಿ ಕೂತು, ಕಿರೀಟ ಧರಿಸಿ, ಕೈಯಲ್ಲಿ ರಾಜದಂಡವನ್ನು ಹಿಡಿದ ಮೇಲೆಯೇ ಅವು ಅವನಿಗೆ ಲಭಿಸುತ್ತವೆ. ಈ ಹಿನ್ನೆಲೆಯಲ್ಲಿಯೇ ‘ರಾಜನೇ ಪ್ರತ್ಯಕ್ಷ ದೈವ. ಮಹತ್ತರವಾದ ದೈವವು ರಾಜನ ರೂಪದಲ್ಲಿ ನೆಲೆಗೊಂಡಿರುತ್ತದೆ. ವಿಷ್ಣುವಿನ ಅಂಶವಿಲ್ಲ ದವನು ರಾಜನಾಗಲಾರ’ ಎಂಬ ಮಾತು ಬಂದದ್ದು. ಜನ್ಮದಲ್ಲಿ ಆತ ಇತರೆಲ್ಲ ಸಾಮಾನ್ಯರಂತೆ ಇದ್ದರೂ, ತಲೆಯ ಮೇಲೆ ರಾಜಕಿರೀಟ ಹೊತ್ತು
ಸಿಂಹಾಸನವನ್ನು ಏರಿದ ಮೇಲೆಯೇ, ಇತರ ಯಾರಿಗೂ ಇಲ್ಲದಂಥ ದೇವಸದೃಶವಾದ ಅಧಿಕಾರ ಅವನಿಗೆ ಪ್ರಾಪ್ತಿಯಾಗುತ್ತದೆ.
ರಾಜನು ಕೂಡ ಧರ್ಮಕ್ಕೆ ಅಧೀನನೇ ಹೊರತು ಅದಕ್ಕೂ ಮೇಲ್ಮಟ್ಟದವನಲ್ಲ. ಧರ್ಮಶಾಸಗಳಿಗೆ ಶಿರೋಮಣಿಸದೃಶನಾದ ಮನು ಹೇಳುವ ಈ ಮಾತು,
‘ದಂಡ’ದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುತ್ತದೆ: ‘ದಂಡ ಎಂದರೆ ರಾಜಶಕ್ತಿ. ಅದು ಎಲ್ಲ ಪ್ರಜೆಗಳನ್ನೂ ಆಳುತ್ತದೆ, ದಂಡವೇ ರಕ್ಷಿಸುತ್ತದೆ. ಇತರರು ನಿದ್ರಿಸಿದಾಗ ದಂಡವು ಎಚ್ಚೆತ್ತಿರುತ್ತದೆ. ದಂಡವೇ ಧರ್ಮ ಎಂದು ಜ್ಞಾನಿಗಳು ತಿಳಿದಿದ್ದಾರೆ. ದಿವ್ಯತೇಜಸ್ಸಿನಿಂದ ಕೂಡಿರುವ ಮತ್ತು ಅಸಂಸ್ಕೃತನಿಂದ
ಧರಿಸಲಾಗದ ದಂಡವು, ಧರ್ಮಮಾರ್ಗದಿಂದ ತಪ್ಪಿದ ರಾಜನನ್ನು ಕುಲಸಹಿತ ನಾಶಮಾಡುತ್ತದೆ. ರಾಜನು ಕಾಮಿಯೂ, ವಿಷಮನೂ, ಅಲ್ಪನೂ ಆದರೆ ತನ್ನ ದಂಡದಿಂದಲೇ ಧ್ವಂಸಮಾಡಲ್ಪಡುತ್ತಾನೆ’.
ಎಂಥ ಅಪೂರ್ವವಾದ, ಸಾಂಕೇತಿಕವಾದ ಅರ್ಥವಿದು. ಇದನ್ನು ಅರಿಯದವರು ಮನಬಂದಂತೆ ಮಾತಾಡುತ್ತಾರೆ, ಹೇಳಿಕೆ ನೀಡುತ್ತಾರೆ! ‘ಶ್ರೀರಾಮನ ಕೈಯಲ್ಲಿದ್ದ ಕೋದಂಡವು ಸಣ್ಣಪ್ಪಣ್ಣನ ಕೈಗೆ ಸಿಕ್ಕಾಗ ಅದು ಸೊಟ್ಟಕಟ್ಟಿಗೆಯಾಗಬಹುದು’ ಎಂದ ಡಿವಿಜಿಯವರ ಮಾತು ಇಲ್ಲಿ ಸ್ಮರಣೀಯ.
ಯಾವುದಕ್ಕೂ ಅಽಕಾರ ಯೋಗ್ಯತೆ ಬೇಕು ಅನ್ನುವುದು ಇದರ ತಾತ್ಪರ್ಯ. ಭಾರತದ ಪ್ರಜಾಪ್ರಭುತ್ವದ ದೇಗುಲವೆಂದೇ ಕರೆಯಲ್ಪಡುವ ಸಂಸತ್ ಭವನದಲ್ಲಿ ಮೇ ೨೮ರಂದು ಪ್ರಧಾನಿ ಮೋದಿಯವರು ಲೋಕಸಭೆಯ ಸ್ಪೀಕರ್ ಆಸನದ ಸಮೀಪದಲ್ಲಿ ‘ಸೆಂಗೋಲ್’ ಎಂಬ ಹೆಸರಿನ ಐತಿಹಾಸಿಕ
ಚಿನ್ನದ ರಾಜದಂಡವನ್ನು ಪ್ರತಿಷ್ಠಾಪಿಸಿದರು. ಇದು ಮೊದಲು ಅಲಹಾಬಾದ್‌ನ ಮ್ಯೂಸಿಯಂನಲ್ಲಿತ್ತು.
‘ಸೆಂಗೋಲ್’ ಎಂಬ ಹೆಸರು ತಮಿಳಿನ ‘ಸೆಮ್ಮಾಯಿ’ ಎಂಬ ಪದದಿಂದ ಬಂದಿದೆ. ‘ಸದಾಚಾರ’ ಎಂಬುದು ಇದರರ್ಥ. ಸೆಂಗೋಲ್‌ನ ತುದಿಯಲ್ಲಿರುವ ನಂದಿಯ ಚಿತ್ರವು ನ್ಯಾಯದ ಸಂಕೇತ. ಭಾರತೀಯ ಪರಂಪರೆಯಲ್ಲಿ, ಸನಾತನ ಸಂಸ್ಕೃತಿಯಲ್ಲಿ ಅಪಾರ ನಂಬಿಕೆಯುಳ್ಳ ಮೋದಿಯವರು, ನೂತನ ಸಂಸತ್ ಭವನದ ಉದ್ಘಾಟನೆಯೊಂದಿಗೆ ಈ ‘ರಾಜದಂಡ’ವನ್ನೂ ಪ್ರತಿಷ್ಠಾಪಿಸಿದರು. ಈ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಾಗ್ಯವಿಲ್ಲದ ಮತಿಹೀನ ರಾಜಕಾರಣಿಗಳು ತಾವೇ ನಿರ್ಮಿಸಿಕೊಂಡ ಚರಂಡಿಯಲ್ಲಿ ಈಜತೊಡಗಿದರು. ಆದರೆ ಚರಂಡಿಯಲ್ಲಿ ಕೇವಲ ಬಿದ್ದು ಹೊರಳಾಡಬಹುದೇ ಹೊರತು ಈಜಲಾಗದು ಎಂಬ ಕಹಿಸತ್ಯ ಗೊತ್ತೇ ಆಗದಿರುವುದು ಅವರ ಮತಿಭ್ರಷ್ಟತೆಗೆ ಸಾಕ್ಷಿ. ಆದರೆ ಬುದ್ಧಿವಂತರು ನದಿಯಲ್ಲಿ ಈಜುತ್ತಾರೆ, ನೌಕೆಯನ್ನೂ
ಸಾಗಿಸುತ್ತಾರೆ, ಸ್ನಾನವನ್ನೂ ಮಾಡಿ ಪವಿತ್ರಾತ್ಮರೂ ಆಗುತ್ತಾರೆ. ಅದನ್ನು ಮಾಡಿದವರು ಭಾರತದ ಘನತೆವೆತ್ತ ಪ್ರಧಾನಿ ನರೇಂದ್ರ ಮೋದಿಯವರು….