ತಿಳಿರು ತೋರಣ
srivathsajoshi@yahoo.com
ನೀವೊಬ್ಬ ‘ನ್ಯೂಸ್ ಜಂಕೀ’ ಅಂತಾದರೆ ಈಗಿಂದೀಗಲೇ ಇದನ್ನು ಗಂಭೀರವಾಗಿ ಪರಿಗಣಿಸಿ ನಿಮ್ಮ ದೈನಂದಿನ ಸುದ್ದಿ ಸೇವನೆಯನ್ನು- ಅದು ಟಿವಿ ಇರಲಿ, ಪತ್ರಿಕೆ ಗಳಿರಲಿ, ಸೋಷಿಯಲ್ ಮೀಡಿಯಾ ಇರಲಿ- ಕಡಿಮೆ ಮಾಡುವುದು ಒಳ್ಳೆಯದು. ‘ಅಂಕಣಗಳಿಗಾಗಿ ಮಾತ್ರ ನಾನು ವಿಶ್ವವಾಣಿ ಪತ್ರಿಕೆ ಓದುತ್ತೇನೆ’ ಎನ್ನುವವರು ನೀವಾದರೆ ಸುದ್ದಿಸೇವನೆಯ ಮಾರಕ ಪರಿಣಾಮ ಅರಿತಿದ್ದೀರಿ ಎಂದರ್ಥ.
ಅತಿಯಾದರೆ ಅಮೃತವೂ ವಿಷ ಎಂಬ ಗಾದೆಮಾತು ಆಗಾಗ ನಮ್ಮ ಅನುಭವಕ್ಕೆ ಬರುತ್ತಿರುತ್ತದೆ. ಪ್ರಸ್ತುತ ಅತಿ ಆಗಿರುವುದು ಸುದ್ದಿ ಉತ್ಪಾದನೆ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಸುದ್ದಿ ಸೇವನೆ. ಒಂದೆರಡು ದಶಕಗಳ ಹಿಂದೆ ‘ಅತಿಯಾದ ಆಹಾರ ಸೇವನೆ ದುಷ್ಪರಿಣಾಮ ಕಾರಿ’ ಎಂಬ ಅರಿವು ಜನರಿಗೆ ಆಗತೊಡಗಿತು; ಸ್ಥೂಲಕಾಯ, ಡಯಾ ಬಿಟಿಸ್, ರಕ್ತದೊತ್ತಡ ಮುಂತಾದ ವ್ಯಾಧಿಗಳ ಬಗ್ಗೆ ಅಷ್ಟಿಷ್ಟಾದರೂ ಎಚ್ಚರಿಕೆ ಜನರಲ್ಲಿ ಹುಟ್ಟಿತು. ಆದರೆ ಈಗಿನ ‘ಅತಿಯಾದ ಸುದ್ದಿಸೇವನೆ’ಯ ಅಪಾಯ ಜನತೆಗಿನ್ನೂ ಅರ್ಥವಾಗತೊಡಗಿಲ್ಲ.
ದೇಹಕ್ಕೆ ಹೇಗೆ ಸಕ್ಕರೆ ಸೇವನೆ ಮಾರಕವೋ ಮಿದುಳಿಗೆ ಸುದ್ದಿಸೇವನೆ ಅಷ್ಟೇ ಮಾರಕ. ಇಲ್ಲಿ ಹೋಲಿಕೆಗಳು ಇನ್ನೂ ಇವೆ: ದಿನವಿಡೀ ಚಿಕ್ಕ ಚಿಕ್ಕ ಡೋಸ್‌ಗಳಲ್ಲಿ ನಾವು ಸುದ್ದಿಸೇವನೆ ಮಾಡುವುದರಿಂದ ಎಷ್ಟು ಒಳಹೊಕ್ಕಿತು ಎಂಬ ಪರಿವೆ ಇರುವುದಿಲ್ಲ. ಮಾಧ್ಯಮಗಳು ನಮ್ಮ ತಲೆಬುರುಡೆಯೊಳಗೆ ಸುದ್ದಿಗಳನ್ನು ನಿರಂತರವಾಗಿ ತುಂಬುತ್ತಲೇ ಇರುತ್ತವೆ. ಅದರಲ್ಲಿ 99 ಪ್ರತಿಶತ ಸುದ್ದಿಗಳು ನಮ್ಮ ಜೀವನಕ್ಕೆ ಅನ್ವಯವಾಗುವುದಿಲ್ಲ, ಆವಶ್ಯಕ ಮೊದಲೇ ಅಲ್ಲ. ನಾವು ಅವುಗಳ ಬಗ್ಗೆ ಆಲೋಚಿಸುವುದೂ ಇಲ್ಲ. ಹಾಗಾಗಿಯೇ ನಮಗೆ ತೃಪ್ತಿಯ ಅನುಭವವಾಗುವುದಿಲ್ಲ.
ಒಂದು ಒಳ್ಳೆಯ ಪುಸ್ತಕವನ್ನೋ, ಮ್ಯಾಗಜಿನ್‌ನಲ್ಲಿ ಒಂದು ಸುದೀರ್ಘ ಲೇಖನವನ್ನೋ ಓದುವುದಕ್ಕೆ ಬೇಕಾಗುವ ಯೋಚನಾ ಸಾಮರ್ಥ್ಯವು ಸುದ್ದಿಸೇವನೆಗೆ ಬೇಕಾಗುವುದಿಲ್ಲ. ಬಣ್ಣಬಣ್ಣದ ಆಕರ್ಷಕ ಸಕ್ಕರೆ ಕ್ಯಾಂಡಿ ಮೆದ್ದಂತೆ ದಿನವಿಡೀ ಸುದ್ದಿಭಕ್ಷಣ ಮಾಡಬಹುದು. ತತ್ಪರಿಣಾಮವಾಗಿ, ಜಂಕ್ ಫುಡ್ ಸಂಸ್ಕೃತಿ ಹೇಗೆ ನಮ್ಮ ಶರೀರವನ್ನು ಲಗಾಡಿಯೆಬ್ಬಿಸಿದೆಯೋ ಹಾಗೆ ಸುದ್ದಿಸೇವನೆ ನಮ್ಮನ್ನು ಬೌದ್ಧಿಕ ವಾಗಿ ದಿವಾಳಿಯಾಗಿಸುವ ದಿನಗಳು ದೂರವಿಲ್ಲ.
ಈ ಗಂಭೀರ ಪರಿಸ್ಥಿತಿಯನ್ನು ವಿವರಿಸುವ ಮುನ್ನ ಒಂದೆರಡು ಪೂರಕ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸೋಣ. ಶಿಕ್ಷಣತಜ್ಞ ಮತ್ತು ನಿಜಾರ್ಥದಲ್ಲಿ ಚಿಂತಕ ಡಾ.ಚಂದ್ರಶೇಖರ ದಾಮ್ಲೆ ಯವರು ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಬರೆದಿದ್ದ ಪೋಸ್ಟ್: ‘ಭಾರತದಾದ್ಯಂತ ನಡೆಯುತ್ತಿರುವ ಅಸಹನೆಯ ಪ್ರತಿಭಟನೆಗಳು ಮತ್ತು ಮಿಥ್ಯಾಭಿಪ್ರಾಯಗಳ ವಿಜೃಂಭಣೆಯನ್ನು ಕಾಣುವಾಗ ಇವೆಲ್ಲದಕ್ಕೆ ನೆಲೆಯೊದ ಗಿಸುವ ಟಿವಿ ಚರ್ಚೆಗಳಿಗೆ ನಿಷೇಧ ಹಾಕಿ ದುರಭಿಪ್ರಾಯಗಳಿಗೆ ಇಂಬು ಸಿಗದಂತೆ ಮಾಡಬೇಕಾದ ತುರ್ತು ಅಗತ್ಯವಿದೆ.
ವಾಹಿನಿಗಳು ಕೂಡಾ ಅಸಹನೆಯ ಭಾಷಣಗಳನ್ನು ಮತ್ತೆಮತ್ತೆ ತೋರಿಸುತ್ತ ಶಾಂತಿ ಸ್ಥಾಪನೆಯ ವಿರುದ್ಧ ದಿಕ್ಕಿನಲ್ಲಿ ಸಾಗುವ ಪ್ರವೃತ್ತಿ ತುಂಬಾ ಕೆಟ್ಟದ್ದೆನ್ನಿಸುತ್ತದೆ. ಟಿವಿ ಚರ್ಚೆಗಳಲ್ಲಿ ಯಾರೂ ತಮ್ಮ ಪಟ್ಟನ್ನು ಬಿಟ್ಟುಕೊಡಲು ಸಿದ್ಧರಿಲ್ಲವಾದ್ದರಿಂದ ಸತ್ಯವನ್ನು ಮರೆಮಾಚುವ ಜಾಣ್ಮೆಯ ಸ್ಪರ್ಧೆ ನಡೆಯುತ್ತಿರುವಂತೆ ಕಾಣುತ್ತದೆ. ದೇಶದಲ್ಲೀಗ ಶಾಂತಿಯ ಅಗತ್ಯ ತುಂಬಾ ಇದೆ. ದೃಶ್ಯಮಾಧ್ಯಮಗಳು ಆತ್ಮಾವ ಲೋಕನ ಮಾಡಿ ಸ್ವಯಂ ಸಂಯಮದಿಂದ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.
ಮತ್ತೊಂದು ಉಪಾಯವೆಂದರೆ ಜನರೇ ವಾರ್ತಾವಾಹಿನಿಗಳನ್ನು ತಿರಸ್ಕರಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಿತ್ತರಿಸುವ ವಾಹಿನಿ ಗಳಿಗೆ ತೆರೆದುಕೊಳ್ಳುವುದು.’ ಇನ್ನೊಂದು ಫೇಸ್‌ಬುಕ್ ಪೋಸ್ಟಿನಲ್ಲಿ, ಮಾಧ್ಯಮಗಳ ಒಳ-ಹೊರ ಅಷ್ಟಿಷ್ಟು ಬಲ್ಲ ಸ್ನೇಹಿತ ನವೀನ್ ಸಾಗರ್ ಬರೆಯುತ್ತಾರೆ: ‘ಮೀಡಿಯಾ ಎಷ್ಟು ಸುದ್ದಿದಾರಿದ್ರ್ಯಕ್ಕೆ ತುತ್ತಾಗಿದೆ ಅಂದ್ರೆ, ಬೆಳಗ್ಗೆ ಯಾವುದೋ ಸಿನಿಮಾ ಸಂದರ್ಭ ಸಂದರ್ಶನದಲ್ಲಿ ನಟಿಯೊಬ್ಬಳಿಗೆ ರಾಜಕೀಯದ್ದೋ ದೇಶದ ಸಮಸ್ಯೇದೋ ಸಿದ್ಧಾಂತದ್ದೋ ಪ್ರಶ್ನೆ ಕೇಳಿ ಬಿಡೋದು.
ಆಕೆ ಬಾಯಿಗೆ ಬಂದಿದ್ದು ಒದರಿಬಿಡೋದು. ಮಾಧ್ಯಮದವ್ರು ಸಿನಿಮಾ ಸುದ್ದಿ ಬದಿಗಿಟ್ಟು ಇದನ್ನೇ ಹೈಲೈಟ್ ಮಾಡಿ, ಹೀಗಂತ ಹೇಳಿದ ನಟಿ! ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡೋದು. ಅದಕ್ಕೆ ಇಡೀ ಸೋಷಿಯಲ್ ಮೀಡಿಯಾ ರೊಚ್ಚಿಗೇಳೋದು. ರೊಚ್ಚಿಗೆದ್ದ ಸೋಷಿಯಲ್ ಮೀಡಿಯಾ! ಅಂತ ಮಾಧ್ಯಮದವ್ರು ಮತ್ತೆ ಅದೇ ಸೋಷಿಯಲ್ ಮೀಡಿಯಾ ಹಾಗೂ ತಮ್ಮ ವಾಹಿನಿಗಳಲ್ಲಿ ಸುದ್ದಿ ಮಾಡೋದು.
ಇಷ್ಟೆಲ್ಲ ಆದಮೇಲೆ ಇದನ್ನ ಪ್ಯಾನೆಲ್ ಡಿಸ್ಕಷನ್‌ಗೆ ತರದೇಹೋದ್ರೆ ಹೇಗೆ? ಪ್ಯಾನೆಲ್ ಡಿಸ್ಕಷನ್‌ನಲ್ಲಿ ತಾರಕ ಕಿರುಚಾಟ. ಅದಕ್ಕೆ ಕರೆ ಸೋದೂ ಇಂಥ ಕಂಟೆಂಟನ್ನೇ ಕೊಡೋ ಅವಿವೇಕಿಗಳನ್ನ. ಅವರ ಹೇಳಿಕೆಯ ಬೈಟ್ ತಗೊಂಡು ಮತ್ತೆ ಸೋಷಿಯಲ್ ಮೀಡಿಯಾಗೆ ತಳ್ಳೋದು. ಅದನ್ನು ನೋಡಿ ಸೋಷಿಯಲ್ ಮೀಡಿಯಾ ಮತ್ತೆ ರೊಚ್ಚಿಗೇಳೋದು. ಮೂರುದಿನದ ಸಮೃದ್ಧ ಭೋಜನ. ಚಳಿ ಕಾಯಿಸಲು ಬೆಂಕಿ. ಎಂಟರ್ಟೇನ್ಮೆಂಟ್!’ ಎರಡೂ ಪ್ರಬುದ್ಧ ಅಭಿಪ್ರಾಯಗಳು.
ಅಕ್ಷರಶಃ ನಿಜ ಮತ್ತು ಚಿಂತನಾರ್ಹ. ಅಂದಮಾತ್ರಕ್ಕೇ ಪ್ರಪಂಚವೇ ಗಬ್ಬೆದ್ದುಹೋಗಿದೆ ಅಂತೇನಲ್ಲ. ಡಾ. ದಾಮ್ಲೆಯವರು ಹೇಳಿದಂತೆ ಆಯ್ಕೆ ನಮ್ಮ ಕೈಯಲ್ಲಿದೆ. ಸುದ್ದಿವಾಹಿನಿಗಳನ್ನು ತಿರಸ್ಕರಿಸಿ ಸಾಂಸ್ಕೃತಿಕ, ಬೌದ್ಧಿಕ ಕಾರ್ಯಕ್ರಮಗಳನ್ನು ಬಿತ್ತರಿಸುವ ವಾಹಿನಿಗಳಿಗೆ ತೆರೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕಳೆದ ವಾರವಷ್ಟೇ ನಾನೋದಿದ ಇನ್ನೊಂದು ಸಕಾರಾತ್ಮಕ ಸಮಾಚಾರವನ್ನೂ ಇಲ್ಲಿ ಸೇರಿಸಿ ಕೊಳ್ಳುತ್ತೇನೆ.
ಅದೇನೆಂದರೆ, ‘ರಾಯಿಟರ್ಸ್ ವಾರ್ತಾಸಂಸ್ಥೆಯು ಇತ್ತೀಚಿಗೆ 46 ದೇಶಗಳಲ್ಲಿ ನಡೆಸಿರುವ ಅಧ್ಯಯನ ಮತ್ತು ಸಮೀಕ್ಷೆಯೊಂದರ ವರದಿ ಪ್ರಕಾರ ಅತ್ಯಂತ ಹೆಚ್ಚು ವಿಶ್ವಾಸಾರ್ಹ ಮಾಧ್ಯಮಗಳಾಗಿ (ವಿದ್ಯುನ್ಮಾನ ವಿಭಾಗದಲ್ಲಿ) ನಮ್ಮೆಲ್ಲರ ನೆಚ್ಚಿನ ಆಕಾಶವಾಣಿ ಮತ್ತು ದೂರ ದರ್ಶನ ಸುದ್ದಿಮಾಧ್ಯಮಗಳು ಕ್ರಮವಾಗಿ ಶೇ.72 ಮತ್ತು 71 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿವೆ. ಯಾವುದೇ ವೈಭವೀಕರಣವಿಲ್ಲದೆ ನಿಖರ, ನೈಜ, ವಾಸ್ತವ ಮತ್ತು ವಸ್ತುನಿಷ್ಠ ಸುದ್ದಿಗಳನ್ನು ನೀಡುವುದರ ಜೊತೆಗೆ ಉತ್ತಮ ಮಾಹಿತಿ, ಶುದ್ಧ ಮನೋ ರಂಜನೆಯನ್ನೂ ನೀಡಲಾಗುತ್ತಿದೆ.
ಅತ್ಯಂತ ವಿಶ್ವಾಸಾರ್ಹತೆಯನ್ನು ಅನೇಕ ವರ್ಷಗಳಿಂದ ಉಳಿಸಿಕೊಂಡು ಮಾಧ್ಯಮ ಕ್ಷೇತ್ರದ ಘನತೆ ಮತ್ತು ಗೌರವ ಹೆಚ್ಚಳದಲ್ಲಿ ಈ ಎರಡೂ ಮಹತ್ವದ ಮಾಧ್ಯಮಗಳ ಪಾತ್ರ ಅತ್ಯಂತ ಹಿರಿದಾಗಿದೆ. ಸಮಾಜಕ್ಕೆ ಆರೋಗ್ಯಕರ ಸುದ್ದಿ, ಮಾಹಿತಿಗಳನ್ನು ನೀಡುವ ಮೂಲಕ ಆಕಾಶವಾಣಿ ಮತ್ತು ದೂರ ದರ್ಶನ ಎರಡೂ ಮಾಧ್ಯಮಗಳು ಇಂದು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ನಿಂತಿರುವುದು ನಮಗೆಲ್ಲ ರಿಗೂ ಸಂತಸದ ವಿಚಾರ.
ಸುಶಿಕ್ಷಿತ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಈ ಮಾಧ್ಯಮಗಳ ಏಳ್ಗೆಗೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು!’ – ಇದನ್ನು ಬರೆದವರು ಆಕಾಶವಾಣಿ ಹಾಗೂ ದೂರದರ್ಶನಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾವರದಿಗಾರ ರಾಗಿರುವ ಎನ್.ಚಂದ್ರಶೇಖರ್. ಇದೂ ಅಕ್ಷರಶಃ ಸತ್ಯವೇ. ಆಕಾಶವಾಣಿ ಮತ್ತು ದೂರದರ್ಶನ ಬಿತ್ತರಿಸುವ ಸುದ್ದಿಗಳಲ್ಲಿ ಏರುದನಿಯ ಕಿರುಚಾಟವಿಲ್ಲ. ಗಾಸಿಪ್‌ಗಳ ಗಬ್ಬುನಾತವಿಲ್ಲ. ಊಹಾಪೋಹಗಳ ಉಪಟಳವಿಲ್ಲ.
ತಲೆಬುಡವಿಲ್ಲದ ವಾದವಿವಾದಗಳ ಕೆಸರೆರಚಾಟವಿಲ್ಲ. ವೀಕ್ಷಕರ/ ಶ್ರೋತೃಗಳ ಎದೆಬಡಿತ ಹೆಚ್ಚಿಸುವ ಗಿಮಿಕ್‌ಗಳು ಇಲ್ಲವೇಇಲ್ಲ. ಈಗ, ಸುದ್ದಿಸೇವನೆಯ ಅಪಾಯಗಳ ಇನ್ನಷ್ಟು ಆಯಾಮಗಳನ್ನು ನೋಡೋಣ. ಈಗಿನ ಮಾಧ್ಯಮಗಳು ಬಡಿಸುವ (ದಿನವಿಡೀ ಬಡಿದು ಕೊಳ್ಳುವ) ಸುದ್ದಿಗಳು ನಮ್ಮ ಚಿಂತನಶಕ್ತಿಯ ಹಾದಿ ತಪ್ಪಿಸುತ್ತವೆ. ಉದಾಹರಣೆಗೆ ಒಂದು ಕಾರು ಯಾವುದೋ ಸೇತುವೆಯ ಮೇಲೆ ಹೋಗುತ್ತಿದ್ದಾಗ ಸೇತುವೆ ಕುಸಿಯುತ್ತದೆ. ಕಾರು ನಜ್ಜುಗುಜ್ಜಾದರೂ ಚಾಲಕ ಮತ್ತು ಪ್ರಯಾಣಿಕರು ಹೇಗೋ ಪ್ರಾಣಾಪಾಯದಿಂದ ಪಾರಾಗುತ್ತಾರೆ. ಸುದ್ದಿವಾಹಿನಿ ಯಾವುದರತ್ತ ಗಮನ ಹರಿಸುತ್ತದೆ? ಅದು ಯಾವ ಮೊಡೆಲ್‌ನ ಕಾರು, ಎಷ್ಟು ಬೆಲೆಬಾಳುವಂಥದ್ದು, ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಹೊರಟಿದ್ದರು, ಅಪಘಾತದ ಕ್ಷಣದಲ್ಲಿ ಅವರ ಮನಸ್ಸಿನಲ್ಲಿ ಏನನ್ನಿಸಿತು… ಇತ್ಯಾದಿ.
ಇದರಲ್ಲಿ ಯಾವ ಅಂಶವೂ ವೀಕ್ಷಕರಿಗೆ ರೆಲವೆಂಟ್ ಅಲ್ಲ. ನಿಜವಾಗಿ ರೆಲವೆಂಟ್ ಯಾವುದು? ಆ ಸೇತುವೆಯ ಜೀರ್ಣಸ್ಥಿತಿ. ನಾಳೆ ಅದೇ ಅಥವಾ ಅಂಥದೇ ಸೇತುವೆಯ ಮೇಲೆ ಡ್ರೈವ್ ಮಾಡುವವರಿಗೆ ಮೃತ್ಯು ಅಡಗಿಕುಳಿತಿದೆ. ಆದರೆ ಸುದ್ದಿವಾಹಿನಿಗೆ ಅದೆಲ್ಲ ಬೇಕಿಲ್ಲ. ಹಾಳಾದ ಕಾರು, ಗಾಯಗೊಂಡ ಜನರು, ಸತ್ತಿದ್ದರೆ ಹತ್ತಿರದ ಬಂಧುಗಳ ಆಕ್ರಂದನವನ್ನು ಮತ್ತೆಮತ್ತೆ ತೋರಿಸಿಯಾರೇ ವಿನಾ ಸೇತುವೆ ಸುಸ್ಥಿತಿಯ ಪೂರ್ವಾಪರಗಳನ್ನು ಮುಟ್ಟಲಿಕ್ಕೂ ಹೋಗರು.
ಅಂದರೆ ಆ ಅಪಘಾತದ ಸುದ್ದಿ ಸೇವಿಸುವ ನಾವು ನಿಜವಾದ ಅಪಾಯದ ನಕ್ಷೆಯನ್ನು ಬೈಪಾಸ್ ಮಾಡಿ ನಮಗೆ ಸಂಬಂಧವಿಲ್ಲ ದ್ದೊಂದಿಷ್ಟನ್ನು ತುಂಬಿಸಿಕೊಳ್ಳುತ್ತೇವೆ. ಬೇಕಾದರೆ ಅನುಕಂಪದಿಂದ ತುಟಿಮರುಕ ತೋರಿಸುತ್ತೇವೆ. ಈಗೀಗ ಎಲ್ಲ ಸುದ್ದಿಗಳ ಹಣೆಬರಹ ಇಷ್ಟೇ. ಭಯೋತ್ಪಾದನೆ ಕೃತ್ಯಗಳಿಗೆ ಸಿಗುವ ಪ್ರಾಮುಖ್ಯ ಜನಸಾಮಾನ್ಯರನ್ನು ಕಾಡುವ ರೋಗರುಜಿನಗಳಿಗೆ ಸಿಗುವುದಿಲ್ಲ. ಶೇರು ಮಾರುಕಟ್ಟೆ ಕುಸಿತಕ್ಕೆ ಸಿಗುವ ಪ್ರಾಮುಖ್ಯ ಜನರ ಬೇಜವಾಬ್ದಾರಿಗಳಿಂದಾಗುವ ಅರ್ಥಿಕ ನಷ್ಟಗಳಿಗೆ ಇಲ್ಲ. ಕ್ರಿಕೆಟಿಗರ ಚಿತ್ರತಾರೆಯರ ಗ್ಲಾಮರ್ ಸುದ್ದಿಗೆ ಸಿಗುವ ಪ್ರಾಮುಖ್ಯ ಆಸ್ಪತ್ರೆ ಸಿಬ್ಬಂದಿಯ ಸುದ್ದಿಗೆ ಸಿಗುವುದಿಲ್ಲ.
ನಾವು ಸೇವಿಸುವ ಸುದ್ದಿಗಳು ನಮಗೆಷ್ಟು ಅಪ್ರಸ್ತುತವಾಗಿರುತ್ತವೆ ಎಂಬುದಕ್ಕೆ ನಿಮ್ಮನ್ನೇ ಒಮ್ಮೆ ಕೇಳಿಕೊಳ್ಳಿ: ಕಳೆದೊಂದು ವರ್ಷದಲ್ಲಿ ನೀವು ಸೇವಿಸಿರಬಹುದಾದ ಸುಮಾರು 10000 ಸುದ್ದಿಗಳಲ್ಲಿ, ನಿಮ್ಮ ಬದುಕಿಗೆ, ವೃತ್ತಿಗೆ, ಅಥವಾ ಉದ್ಯಮಕ್ಕೆ ನೇರಾನೇರ ಸಂಬಂಧ ವಿದ್ದು ಗಣನೀಯ ಪರಿಣಾಮ ಬೀರಿರಬಹುದಾದ ಕನಿಷ್ಠ ಒಂದೆರಡನ್ನಾದರೂ ನೆನಪಿಸಿಕೊಂಡು ಹೇಳಬಲ್ಲಿರಾ? ಅದಕ್ಕೇ ಹೇಳಿದ್ದು 99 ಪ್ರತಿಶತ ಸುದ್ದಿಗಳು ನಮ್ಮ ಜೀವನಕ್ಕೆ ಅನ್ವಯವಾಗುವುದೇ ಇಲ್ಲ! ಆದರೆ ಅನ್ವಯವಾಗುವಂಥದ್ದು ಯಾವುದು ಎಂದು ಗುರುತಿಸುವುದೂ ಕಷ್ಟವೇ.
ಯಾವುದು ಹೊಸತು ಎಂದು ನಾವು ಸುಲಭವಾಗಿ ಗುರುತಿಸಬಲ್ಲೆವು. ಹೊಸದೇನು (ವ್ಹಾಟ್ ನ್ಯೂ? ವ್ಹಾಟ್ ನ್ಯೂಸ್) ಎಂದು ನಮಗೆ ಸದಾ ಕುತೂಹಲ. ತಿಳಿದುಕೊಂಡಿರದಿದ್ದರೆ ನಾವೆಲ್ಲಿ ಹಿಂದುಳಿದುಬಿಡುತ್ತೇವೆ ಎಂಬ ಅಂಜಿಕೆ, ಕೀಳರಿಮೆ. ಅದಕ್ಕೆ ತಕ್ಕಂತೆ, ಸುದ್ದಿವಾಹಿನಿ ಗಳು ತಮ್ಮ ವೀಕ್ಷಕರಿಗೆ ಈ ಸ್ಪರ್ಧಾತ್ಮಕ ಜಗತ್ತಿ ನಲ್ಲಿ ಮುನ್ನುಗ್ಗಲಿಕ್ಕೆ ನೆರವಾಗುತ್ತಿದ್ದೇವೆಂದು ಭ್ರಮೆ ಹುಟ್ಟಿಸುತ್ತವೆ. ವೀಕ್ಷಕರು ಸುಲಭ ವಾಗಿ ಬಕ್ರಾಗಳಾಗುತ್ತಾರೆ. ಸುದ್ದಿವಾಹಿನಿಯನ್ನು ನೋಡದಿದ್ದರೆ ಚಡಪಡಿಕೆ ಆಗುವಷ್ಟು ಚಟ ಬೆಳೆಯುತ್ತದೆ.
ನಿಜವಾಗಿಯಾದರೆ ಅತಿಯಾದ ಸುದ್ದಿಸೇವನೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನುಗ್ಗಲಿಕ್ಕೆ ಅಲ್ಲ ಹಿನ್ನಡೆಗೆ ಕಾರಣ. ಸುದ್ದಿಗಳನ್ನು ಕಡಿಮೆ ಸೇವಿಸಿದಷ್ಟೂ ಬದುಕು ಸುಂದರ ಸುರಳೀತ. ಈಗಿನ ಕಾಲದಲ್ಲಿ ಉತ್ಪಾದನೆಯಾಗುವ ಸುದ್ದಿಗಳಿಗೆ ವಿವರಣಾತ್ಮಕ ಆಯಾಮ ಇರುವುದಿಲ್ಲ. ಸತ್ತ್ವ ಇದ್ದರೆ ತಾನೆ ವಿಶ್ಲೇಷಣೆಯ ಸಾಮರ್ಥ್ಯ? ಸುದ್ದಿಗಳೆಲ್ಲ ನೀರ ಮೇಲಣ ಗುಳ್ಳೆಗಳಂತೆ. ಗಮನ ಸೆಳೆಯುತ್ತವೆ, ಒಳಗೆ ಟೊಳ್ಳು. ಸುದ್ದಿಯ ರೂಪದಲ್ಲಿ ಮಾಹಿತಿಯ ಪೊಟ್ಟಣಗಳನ್ನು ಕಲೆಹಾಕುತ್ತ ಹೋದರೆ, ನಮ್ಮ ತಲೆಯೊಳಗೆ ಕಸದ ತೊಟ್ಟಿ ಆಗುತ್ತದೆಯೇ ಹೊರತು ಪ್ರಪಂಚವನ್ನು ಅರಿಯುವುದಕ್ಕೆ/ಎದುರಿಸುವುದಕ್ಕೆ ಅದರಿಂದೇನೂ ಪ್ರಯೋಜನವಿಲ್ಲ.
ನಿಜವಾದ ಪ್ರಸ್ತುತತೆಯುಳ್ಳ, ಬದುಕನ್ನು ಒಳ್ಳೆಯದರತ್ತ ಒಯ್ಯಬಲ್ಲ ವಿಷಯಗಳು ಸುದ್ದಿಯಾಗುವುದೇ ಇಲ್ಲ. ಮಾಹಿತಿ ಸಂಗ್ರಹ ವನ್ನಷ್ಟೇ ಮಾಡಿಕೊಳ್ಳುತ್ತಿದ್ದರೆ ಅದು ಹಿಮಬಂಡೆಯ ತುದಿ ಮಾತ್ರ. ಕೆಳಗಿರುವ ಹಿಮಬಂಡೆಯ ಅರಿವಾಗುವುದಿಲ್ಲ. ಅಂದರೆ ಯಾವುದೇ ವಿಷಯದ ಸಮಗ್ರ ಚಿತ್ರಣ ಇಲ್ಲ. ಮಾಹಿತಿಯ ವಿಪುಲತೆಯೇ ಜೀವನದ ಸಮೃದ್ಧಿ ಅಂತಿದ್ದರೆ ಸುದ್ದಿಗಾರರೆಲ್ಲ ಶ್ರೀಮಂತರಾಗಬೇಕಿತ್ತಲ್ಲ? ಶರೀರಕ್ಕೆ, ಮುಖ್ಯವಾಗಿ ಮೆದುಳಿಗೆ ಮತ್ತು ನರಮಂಡಲಕ್ಕೆ ಆಗುವ ಅಪಾಯಗಳು ಇನ್ನೂ ಗಂಭೀರ.
ಸುದ್ದಿಗಳು ನಮ್ಮ ಮಿದುಳಿನಲ್ಲಿ ವ್ಯಕ್ತಿತ್ವಕ್ಕೆ, ವರ್ತನೆಗೆ, ಭಾವುಕತೆಗೆ ಸಂಬಂಧಪಟ್ಟ ಕೋಶಗಳನ್ನು ಉದ್ದೀಪಿಸುತ್ತವೆ. ಬೀಭತ್ಸ ದೃಶ್ಯ ಗಳಿರುವ ಸುದ್ದಿಗಳು ಎಡ್ರಿನಲ್ ಗ್ರಂಥಿಗಳಿಂದ ಕಾರ್ಟಿಸೊಲ್ ಹಾರ್ಮೊನ್ ಬಿಡುಗಡೆ ಮಾಡುತ್ತವೆ. ಇದು ದೇಹದಲ್ಲಿ ರೋಗನಿರೋಧಕ
ಶಕ್ತಿಯನ್ನೂ ಸಹಜ ಬೆಳವಣಿಗೆಯ ಹಾರ್ಮೊನ್ ಉತ್ಪಾದನೆ ಯನ್ನೂ ತಗ್ಗಿಸುತ್ತದೆ. ಮನಸ್ಸಲ್ಲೂ ದೇಹದಲ್ಲೂ ಒತ್ತಡ ಹೆಚ್ಚುತ್ತದೆ. ಪಚನ ಶಕ್ತಿ ಕಡಿಮೆಯಾಗುತ್ತದೆ. ಸ್ನಾಯು ಮತ್ತು ಮೂಳೆಗಳ ಆರೋಗ್ಯಕ್ಕೂ ಧಕ್ಕೆ. ಇತರ ಅಡ್ಡಪರಿಣಾಮಗಳೆಂದರೆ ಭಯ, ಉದ್ವಿಗ್ನತೆ, ದೃಷ್ಟಿಮಾಂದ್ಯ, ಶ್ವಾಸಕೋಶಗಳಿಗೆ ತೊಂದರೆ. ಪ್ರತಿಯೊಬ್ಬರಿಗೂ ಇವೆಲ್ಲವೂ ಬಂದೇಬರುತ್ತವೆ ಎಂದು ಹೆದರಿಸುತ್ತಿರುವುದಲ್ಲ.
ಸುದ್ದಿಸೇವನೆ ನಿರಂತರವಾದಂತೆಲ್ಲ ಒಂದೊಂದೇ ಹೆಜ್ಜೆಯಂತೆ ಈ ಮಾರಿಗಳತ್ತ ನಡೆಯುತ್ತೇವೆ ಅಷ್ಟೇ. ಇನ್ನೊಂದು ದುಷ್ಪರಿಣಾಮ ವೆಂದರೆ ವಿವೇಚನಾಶಕ್ತಿ ಹೀನವಾಗುವುದು. ಹೊಸಹೊಸ ಸುದ್ದಿಗಳನ್ನು ತುಂಬಿಸಿಕೊಂಡಂತೆಲ್ಲ ನಮ್ಮ ಮಿದುಳು ನಮ್ಮ ಹಳೆಯ ನಂಬಿಕೆಗಳಿಗೆ, ಸ್ಥಾಪಿತ ಸಿದ್ಧಾಂತಗಳಿಗೆ ಚ್ಯುತಿಯಾಗಿಲ್ಲ ತಾನೆ ಎಂದು ಪರಾಮರ್ಶಿಸುತ್ತದೆ. ಅದಕ್ಕೆ ತಕ್ಕಂತೆ ಪ್ರತಿ ಸುದ್ದಿಗೆ ನಮ್ಮದೇ ಆದ ಭಾಷ್ಯ ಕೊಟ್ಟು ಒಂದೋ ಅತಿವಿಶ್ವಾಸದಿಂದ ದುಸ್ಸಾಹಸಕ್ಕೆ ಇಳಿಯುತ್ತೇವೆ, ಇಲ್ಲವೇ ಒಳ್ಳೆಯ ಅವಕಾಶಗಳನ್ನು ಬೇಕಂತಲೇ ಕಳೆದುಕೊಳ್ಳುತ್ತೇವೆ.
ಸುದ್ದಿಸೇವನೆ ನಮ್ಮ ಆಲೋಚನಾಶಕ್ತಿಯನ್ನೇ ಉಡುಗಿಸುತ್ತದೆ ಎಂಬುದೂ ಯೋಚಿಸಬೇಕಾದ ವಿಚಾರವೇ. ಆಲೋಚಿಸುವುದಕ್ಕೆ
ಏಕಾಗ್ರತೆ ಬೇಕು. ಏಕಾಗ್ರತೆಗೆ ಅಡೆತಡೆಗಳಿಲ್ಲದ ಸಮಯ ಬೇಕು. ‘ಮುಖ್ಯಮಂತ್ರಿಯ ಅಽಕೃತ ನಿವಾಸದಲ್ಲಿ ಗಡಿಯಾರಕ್ಕೆ ಬ್ಯಾಟರಿ ಬದಲಿಸಲಾಯಿತು…’ ಎನ್ನುವುದನ್ನೂ, ‘ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಕೈಕೈ ಹಿಡಿದುಕೊಂಡು ವಿಮಾನನಿಲ್ದಾಣ ದಿಂದ ಹೊರಬಂದರು…’ ಎನ್ನುವುದನ್ನೂ ಬ್ರೇಕಿಂಗ್ ನ್ಯೂಸ್ ಎಂಬಂತೆ ಬಿತ್ತರಿಸುವ ಸುದ್ದಿವಾಹಿನಿಗಳು ನಿಮ್ಮ ಏಕಾಗ್ರತೆ ಭಂಗಪಡಿಸುವ ರಂಭೆ-ಮೇನಕೆಗಳಿದ್ದಂತೆ. ಅಲ್ಲ, ನಿಜವಾಗಿಯೂ ಕ್ರೂರ ವೈರಸ್ ಇದ್ದಂತೆ.
ತನ್ನ ಉದ್ದೇಶಕ್ಕಾಗಿಯೇ ತನ್ನ ಇರುವನ್ನು ಸಾರುತ್ತ ನಿಮ್ಮ ಗಮನವನ್ನು ಕದಿಯುವಂಥದು. ಪದೇ ಪದೇ ಏಕಾಗ್ರತೆ ಭಂಗವಾಗುತ್ತ ಕ್ರಮೇಣ ನಮ್ಮ ಆಲೋಚನಾಸಾಮ ರ್ಥ್ಯದ ಆಳ-ಅಗಲ ಕಡಿಮೆಯಾಗುತ್ತದೆ. ಇನ್ನೂ ಘೋರವೆಂದರೆ ನಮ್ಮ ಜ್ಞಾಪಕಶಕ್ತಿ ಕಡಿಮೆ ಯಾಗುವುದು. ಅಲ್ಪಕಾಲದ ಸ್ಮೃತಿ ಮತ್ತು ದೀರ್ಘಕಾಲದ ಸ್ಮೃತಿ ಅಂತ ನಮ್ಮ ಮಿದುಳಿನಲ್ಲಿ ಎರಡು ಕವಾಟಗಳಿರುತ್ತವೆ. ಅವುಗಳ ನಡುವೆ ಒಂದು ಚಿಕ್ಕ ದ್ವಾರ. ನೆನಪಲ್ಲಿ ರಬೇಕಾದ್ದೆಲ್ಲವೂ ಆ ದ್ವಾರದಿಂದಲೇ ಹಾದುಹೋಗಬೇಕು.
ಏಕಾಗ್ರತೆಗೆ ಭಂಗ ಬಂದಾಗೆಲ್ಲ ಆ ಬಾಗಿಲು ಮುಚ್ಚಿದಂತಾದರೆ ದೀರ್ಘ ಸ್ಮೃತಿ ಕವಾಟಕ್ಕೆ ಮಾಹಿತಿ ಹೋಗುವುದಾದರೂ ಹೇಗೆ?
ಸುದ್ದಿಸೇವನೆಯನ್ನು ಮಾದಕವಸ್ತುಗಳ ಸೇವನೆಗೆ ಹೋಲಿಸುವುದು ಅದು ಬೆಳೆಸುವ ಎಡಿಕ್ಷನ್‌ನಿಂದಾಗಿ. ಕ್ಷಣಕ್ಷಣದ ಸುದ್ದಿಗಳಿಗಾಗಿ… ಎಂದು ಆಕರ್ಷಿಸುವ ಸುದ್ದಿವಾಹಿನಿಗಳಿಗೆ ಗೊತ್ತಿದೆ- ಮುಂದೇನಾಯ್ತು, ಆಮೇಲಿನ ಬೆಳವಣಿಗೆ ಏನು ಅಂತ ತಿಳಿದುಕೊಳ್ಳಲು ನೀವು ಕಾತರರಾಗಿರುತ್ತೀರಿ ಎಂದು. ಆ ‘ಹಸಿವು’ ಸುಲಭದಲ್ಲಿ ತಣಿಯುವುದಿಲ್ಲ. ಆದರೆ ನರಮಂಡಲ ಘಾಸಿಗೊಳ್ಳುತ್ತದೆ. ತ್ವರಿತಗತಿಯ ಮಂಥನ ಮತ್ತು ಮಲ್ಟಿಟಾಸ್ಕಿಂಗ್ ಮಾಡುವ ನರಗಳಿಗೆ ಸಿಕ್ಕಾಪಟ್ಟೆ ಕೆಲಸ.
ಗಾಢವಾದ ಓದು ಅಥವಾ ಮತ್ತಿತರ ತಾದಾತ್ಮ್ಯದ ಕೆಲಸಗಳನ್ನು ಮಾಡುವ ನರಗಳಿಗೆ ಚಟುವಟಿಕೆಯೇ ಇಲ್ಲ. ಅವು ಸೋಮಾರಿ ಯಾಗುತ್ತವೆ. ಒಂದು ಪುಸ್ತಕ ಕೈಗೆತ್ತಿಕೊಂಡರೆ ನಾಲ್ಕಾರು ಪುಟ ಓದುವುದರೊಳಗೆ ಒಮ್ಮೆ ವಾಟ್ಸಪ್/ಫೇಸ್‌ಬುಕ್ ನೋಡುವಾ ಅಂತನಿಸುವುದು ಅದೇ ಕಾರಣಕ್ಕೆ. ವಯಸ್ಸಿನಿಂದಲ್ಲ, ಅತಿಯಾದ ಸುದ್ದಿಸೇವನೆಯಿಂದ. ಕಾಲಹರಣವನ್ನಂತೂ ನಾವು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಅಷ್ಟಾಗಿ, ಆ ಸುದ್ದಿಗಳು ತಿಳಿಸುವ ವಿಷಯಗಳನ್ನು/ವ್ಯಕ್ತಿತ್ವಗಳನ್ನು ನಾವೇನಾದರೂ ಬದಲಿಸಬಲ್ಲೆವೇ? ಏನೂ ಇಲ್ಲ. ನಿರಂತರ ಸುದ್ದಿಸೇವನೆ ಮಾಡುತ್ತಿರುತ್ತೇವೆಯೇ ಹೊರತು ಉಳಿದಂತೆ ನಮ್ಮದು ನಿಷ್ಕ್ರಿಯತೆಯೇ.
ಕ್ರಮೇಣ ಅದು ನೇತ್ಯಾತ್ಮಕ, ಸಂವೇದನಾರಹಿತ, ಸಣ್ಣಸಣ್ಣ ಸಡಗರಗಳನ್ನು ಅರಿಯಲಾರದ ಮತ್ತು ಸವಿಯಲಾರದ ಮನಃಸ್ಥಿತಿಗೆ ಹೊರಳುತ್ತದೆ. ವಿಜ್ಞಾನಿಗಳು ಇದನ್ನೇ ‘ಸುಶಿಕ್ಷಿತ ಅಸಹಾಯಕತೆ’ ಎನ್ನುತ್ತಾರೆ. ಇಷ್ಟೆಲ್ಲ ಆದಮೇಲೆ ನಮ್ಮಲ್ಲಿರಬಹುದಾದ ಅಲ್ಪಸ್ವಲ್ಪ
ಸೃಜನಶೀಲತೆಯೂ ಸತ್ತೇಹೋಗುತ್ತದೆ. ಯಾವುದೇ ಕ್ಷೇತ್ರದ ಸಾಧಕರನ್ನು ಬೇಕಿದ್ದರೆ ಗಮನಿಸಿ- ಅವರೆಲ್ಲ ಎಳೆಪ್ರಾಯದಲ್ಲೇ ಅತ್ಯಂತ ಕ್ರಿಯೇಟಿವ್ ಆಗಿರುತ್ತಾರೆ. ಅವರ ಮಿದುಳಿನಲ್ಲಿ ಯಾವುದೇ ಕಸ ಇಲ್ಲದೆ ಹೊಸದರ ಅನ್ವೇಷಣೆಯ ತುಡಿತ ಇರುತ್ತದೆ.
ಚಿತ್ರಕಲಾವಿದರು, ಸಂಗೀತಗಾರರು, ಗಣಿತಜ್ಞರು, ವಿಜ್ಞಾನಿಗಳು, ಕ್ರೀಡಾಳುಗಳು… ಇವರೆಲ್ಲ ಪ್ರಪಂಚದ ಸಿಲ್ಲಿ ಸ್ಟುಪಿಡ್ ಆಗುಹೋಗು ಗಳಲ್ಲಿ ಆಸಕ್ತಿ ತೋರದೆ ತಮ್ಮತಮ್ಮ ಕ್ಷೇತ್ರದಲ್ಲಿ ಉತ್ತುಂಗಕ್ಕೇ ಞರುತ್ತ ಹೋಗುತ್ತಾರೆ. ಸುದ್ದಿಸೇವನೆಯ ಮಾದಕ ವ್ಯಸನ ಅಂಟಿಸಿ ಕೊಂಡವರು ಮಾತ್ರ ಜಡತ್ವ ತುಂಬಿಕೊಳ್ಳುತ್ತಾರೆ. ಇದೇನೂ ಕರ್ನಾಟಕದಲ್ಲಿ ಭಾರತದಲ್ಲಿ ಅಂತಲ್ಲ ವಿಶ್ವವ್ಯಾಪಿ ಪಿಡುಗು ಆಗುತ್ತಿದೆ. ನೀವೊಬ್ಬ ‘ನ್ಯೂಸ್ ಜಂಕೀ’ ಅಂತಾದರೆ ಈಗಿಂದೀಗಲೇ ಇದನ್ನು ಗಂಭೀರವಾಗಿ ಪರಿಗಣಿಸಿ ನಿಮ್ಮ ದೈನಂದಿನ ಸುದ್ದಿಸೇವನೆಯನ್ನು- ಅದು ಟಿವಿ ಇರಲಿ, ಪತ್ರಿಕೆಗಳಿರಲಿ, ಸೋಷಿಯಲ್ ಮೀಡಿಯಾ ಇರಲಿ- ಕಡಿಮೆ ಮಾಡುವುದು ಒಳ್ಳೆಯದು. ‘ಅಂಕಣಗಳಿಗಾಗಿ ಮಾತ್ರ ನಾನು ವಿಶ್ವವಾಣಿ ಪತ್ರಿಕೆ ಓದುತ್ತೇನೆ’ ಎನ್ನುವವರ ಪೈಕಿ ನೀವಿದ್ದೀರಾದರೆ ನೀವು ಸುದ್ದಿಸೇವನೆಯ ಮಾರಕ ಪರಿಣಾಮಗಳನ್ನು ಅರಿತು ಈಗಾಗಲೇ ಒಂದಿಷ್ಟು ಸೂಕ್ತ ಕ್ರಮ ಕೈಗೊಂಡಿದ್ದೀರಿ ಎಂದರ್ಥ. ನಿಮಗೆ ಅಭಿನಂದನೆಗಳು ಮತ್ತು ಇದೇ ಆರೋಗ್ಯಕ್ರಮವನ್ನು ಮುಂದು ವರಿಸುವುದಕ್ಕೆ ಶುಭಹಾರೈಕೆಗಳು!