Wednesday, 11th December 2024

ಸುದ್ದಿ ಚಂಚಲೆಯೂ ಹೌದು, ಪಕ್ಷಪಾತಿಯೂ ಹೌದು

ಇದೇ ಅಂತರಂಗ ಸುದ್ದಿ

vbhat@me.com

ಸುದ್ದಿ ಸದಾ ಚಂಚಲೆ. ಅದು ಬದಲಾಗುತ್ತಲೇ ಇರುತ್ತದೆ. ಪ್ರಕೃತಿ ವಿಕೋಪ ಸಂಭವಿಸಿದಾಗ, ಸಾವಿನ ಸಂಖ್ಯೆ ಹತ್ತು ಎಂದು ಬ್ರೇಕಿಂಗ್ ನ್ಯೂಸ್ ನಲ್ಲಿ ಬಿತ್ತರವಾದರೆ, ಹತ್ತು ನಿಮಿಷಗಳ ನಂತರ ಸಾವಿನ ಸಂಖ್ಯೆ ಇಪ್ಪತ್ತೈದು ಆಗಿರುತ್ತದೆ. ಸುದ್ದಿ ಯಾವತ್ತೂ ಸ್ಥಿರವಲ್ಲ. ಅದು ಚಲನಶೀಲ. ಅಂದರೆ ಕ್ಷಣ ಕ್ಷಣಕ್ಕೂ ಡವಲಪ್ ಆಗುತ್ತಲೇ ಇರುತ್ತದೆ.

‘ಐವರು ಸಚಿವರ ರಾಜೀನಾಮೆ‘ಎಂಬ ಸುದ್ದಿ ಬಿತ್ತರವಾದ ಎರಡು ಗಂಟೆಗಳಲ್ಲಿ ಸರಕಾರ ಪತನ ಎಂಬ ಸುದ್ದಿ ಬರುತ್ತದೆ. ಒಂದು ಸುದ್ದಿ, ಸುದ್ದಿಯಾಗಿ ಸತ್ತು ಹೋಗುವುದಿಲ್ಲ. ಅದು ಹತ್ತಾರು ಬೇರೆ ಬೇರೆ ವಿದ್ಯಮಾನಗಳಿಗೆ ಕಾರಣವಾಗುತ್ತದೆ. ಸತ್ತರೂ ಮತ್ತಷ್ಟು ಸುದ್ದಿಯ ಹುಟ್ಟಿಗೆ ನೆರವಾಗುತ್ತದೆ. ಸುದ್ದಿಗೆ ಈಗಿದ್ದ ಬುದ್ಧಿ, ಹತ್ತು ನಿಮಿಷಗಳ ನಂತರ ಇರುವುದಿಲ್ಲ ಅಥವಾ ಬದಲಾಗಿರುತ್ತದೆ. ಇನ್ನು ಸುದ್ದಿ ಪಕ್ಷಪಾತಿಯೂ ಹೌದು. ಅದು ಸುದ್ದಿಗಾರನ ಮರ್ಜಿಗೆ ತಕ್ಕಂತೆ ಕುಣಿಯುತ್ತದೆ.

ಎಲ್ಲ ಸುದ್ದಿಯೂ ಒಂದೇ ರೀತಿಯಾಗಿ ವರದಿಯಾಗುವು ದಿಲ್ಲ. ಅದು ಒಂದೊಂದು ಪತ್ರಿಕೆ ಯಲ್ಲಿ ಒಂದೊಂದು ರೀತಿಯಾಗಿರುತ್ತದೆ. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಭಾರಿ ಜನ ಸ್ತೋಮ ಸೇರಿತ್ತು ಎಂದು ಒಂದು ಪತ್ರಿಕೆಯಲ್ಲಿ ವರದಿ ಮಾಡಿದರೆ, ಕುರ್ಚಿಗಳೆಲ್ಲ ಖಾಲಿ ಯಾಗಿದ್ದವು ಎಂದು ಇನ್ನೊಂದು ಪತ್ರಿಕೆ ವರದಿ ಮಾಡುತ್ತದೆ. ಆ ವರದಿಯಿಂದಲೇ ಆ ಪತ್ರಿಕೆಯ ವರದಿಗಾರನ ಮತ್ತು ಪತ್ರಿಕೆಯ ಧೋರಣೆ ಯನ್ನು ಅಳೆದುಬಿಡಬಹುದು.

ಒಮ್ಮೆ ತಂದೆ ತನ್ನ ಮಗನ ಜತೆಗೆ ಮೈಸೂರು ಮೃಗಾಲಯಕ್ಕೆ ಹೋಗಿದ್ದ. ನೋಡನೋಡು ತ್ತಿದ್ದಂತೆ, ಮಗ ಸಿಂಹದ ಪಂಜರದ ಹತ್ತಿರ ಹೋದ. ಸಿಂಹ ಇನ್ನೇನು ಮಗುವನ್ನು ಎಳೆದು ಬಿಡಬಹುದು ಎಂದು ಅಲ್ಲಿದ್ದವರು ಅಂದುಕೊಳ್ಳುತ್ತಿರುವಾಗಲೇ, ಮಗುವಿನ ಪಕ್ಕದಲ್ಲಿದ್ದ ಯುವಕನೊಬ್ಬ, ತಕ್ಷಣ ಮಗುವನ್ನು ಹಿಡಿದೆಳೆದು ರಕ್ಷಿಸಿದ. ಒಂದು ಕ್ಷಣ ವಿಳಂಬವಾಗಿದ್ದರೂ ಮಗು ಸಿಂಹದ ಪಾಲಾಗುತ್ತಿತ್ತು. ಈ ವಿಷಯ ಅಲ್ಲಿಯೇ ಹತ್ತಿರದಲ್ಲಿದ್ದ ಇಬ್ಬರು ಪತ್ರಕರ್ತರಿಗೆ ಗೊತ್ತಾಯಿತು. ಅವರು ಇದನ್ನೇ ದೊಡ್ಡ ಸುದ್ದಿಯಾಗಿ ಮಾಡಲು ನಿರ್ಧರಿಸಿದರು.

ಮಗುವನ್ನು ರಕ್ಷಿಸಿದ ಆ ಯುವಕನಿಗೆ, ‘ನೀನು ಯಾವ ಪಾರ್ಟಿಯವನು?’ ಎಂದು ಕೇಳಿದರು. ಅದಕ್ಕೆ ಆತ, ‘ನಾನು ಆಮ್ ಆದ್ಮಿ ಪಾರ್ಟಿಯವ’ ಎಂದು ಹೇಳಿದ. ಮರುದಿನ ಒಂದು ಪತ್ರಿಕೆಯಲ್ಲಿ, ‘ಸಿಂಹದ ಬಾಯಿಯಿಂದ ಮಗುವನ್ನು ರಕ್ಷಿಸಿದ ಆಮ್ ಆದ್ಮಿ ಪಕ್ಷ ಕಾರ್ಯಕರ್ತ’ ಎಂಬ ಹೆಡ್‌ ಲೈನ್ ಪ್ರಕಟವಾದರೆ, ಇನ್ನೊಂದು ಪತ್ರಿಕೆಯಲ್ಲಿ, ‘ಸಿಂಹವನ್ನು ಉಪವಾಸ ಕೆಡವಿದ ಆಮ್ ಆದ್ಮಿ ಕಾರ್ಯಕರ್ತ’ ಎಂಬ ಹೆಡ್ ಲೈನ್ ಪ್ರಕಟವಾಗಿತ್ತು. ಈ ಸುದ್ದಿಯನ್ನು ಬರೆದ ವರದಿಗಾರರ ರಾಜಕೀಯ ಒಲವು-ನಿಲುವು ಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ.

ಸೂಫಿ ಸಂತನ ಪರಿಹಾರ

ಇದನ್ನು ನಾನು ಓಶೋ ಪುಸ್ತಕವೊಂದರಲ್ಲಿ ಓದಿದ ನೆನಪು. ಶೇಕ್ ಫರೀದ್ ಎಂಬ ಸೂಫಿ ಸಂತನಿದ್ದ. ಆತ ತೀರಾ ವಿಕ್ಷಿಪ್ತ ಸ್ವಭಾವದವನು. ಆತನ ಹಾವ-ಭಾವ ವಿಚಿತ್ರವಾಗಿತ್ತು. ಆದರೆ ಜನ ಅವನ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಗಿ ಬೀಳುತ್ತಿದ್ದರು. ಆತನ ಬಳಿ ಎಲ್ಲರ ಸಮಸ್ಯೆಗಳಿಗೂ ಉತ್ತರಗಳಿದ್ದವು. ಒಂದು ದಿನ ಫರೀದ್ ಬಳಿ, ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ಬಂದು, ‘ನನ್ನ ಯೋಚನೆ, ಪೂರ್ವಗ್ರಹ, ಒತ್ತಡ, ದ್ವಂದ್ವ, ಬಂಧನ, ಸರಪಣಿಗಳಿಂದ ಬಿಡಿಸಿಕೊಳ್ಳುವುದು ಹೇಗೆ? ದಯವಿಟ್ಟು ತಿಳಿಸಿಕೊಡಿ’ ಎಂದು ಬೇಡಿಕೊಂಡ.

ಫರೀದ್ ಎಲ್ಲರಿಗೂ ಒಂದೇ ರೀತಿಯಲ್ಲಿ ಉತ್ತರ ಹೇಳುತ್ತಿರಲಿಲ್ಲ. ಪ್ರತಿ ಪ್ರಶ್ನೆ ಅಥವಾ ಸಮಸ್ಯೆಗೆ ತನ್ನದೇ ಆದ ರೀತಿಯಲ್ಲಿ ಪರಿಹಾರ ಸೂಚಿಸುತ್ತಿದ್ದ. ಆ ಪ್ರಶ್ನೆ ಕೇಳಿದ ಮಧ್ಯವಯಸ್ಸಿನ ವ್ಯಕ್ತಿಯನ್ನು ಕೈ ಹಿಡಿದು ಹತ್ತಿರದ ಕಂಬದ ಸನಿಹ ಕರೆದುಕೊಂಡು ಹೋದ. ಸೂಫಿ ಸಂತ ಆ ಕಂಬವನ್ನೇರಿದ. ಅದಕ್ಕೆ ತನ್ನ ಎರಡೂ ಕೈಗಳಿದ ಗುದ್ದಿದ. ಎರಡೂ ಕಾಲುಗಳಿಂದ ತುಳಿಯಲಾ ರಂಭಿಸಿದ. ಅಷ್ಟೂ ಸಾಲದೆಂಬಂತೆ, ‘ಹೇ ಕಂಬವೇ, ನನ್ನ ತಂಟೆಗೆ ಬರಬೇಡ’ ಎಂದು ಕಿರುಚಿದ. ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಲು ಆಗ ಜನ ಸೇರಲಾರಂಭಿಸಿದರು.

‘ನನ್ನನ್ನು ಈ ಕಂಬದಿಂದ ರಕ್ಷಿಸಿ’ ಎಂದು ಜೋರಾಗಿ ಕೂಗಲಾರಂಭಿಸಿದ.ಮಧ್ಯವಯಸ್ಸಿನ ವ್ಯಕ್ತಿಗೆ ಆಶ್ಚರ್ಯ. ‘ಈ ಸೂಫಿ ಸಂತನಿಗೆ ಏನಾಗಿದೆ? ಆತನಿಗೆ ಆ ಕಂಬವೇನು ಮಾಡಿದೆ? ತನ್ನನ್ನು ಈ ಕಂಬದಿಂದ ರಕ್ಷಿಸಿ ಎಂದು ಹೇಳುತ್ತಿದ್ದಾನಲ್ಲ, ಹುಚ್ಚನ ಥರ ವರ್ತಿಸುತ್ತಿದ್ದಾ ಲ್ಲ’ ಎಂದು ಅನಿಸಿತು. ‘ನಿನಗೇನಾಗಿದೆ? ಹುಚ್ಚನ ಹಾಗೆ ವರ್ತಿಸುತ್ತಿದ್ದೀಯಲ್ಲ? ಆ ಕಂಬಕ್ಕೇಕೆ ಹೊಡೆಯು ತ್ತಿದ್ದೀಯಾ? ನೀನೇ ಆ ಕಂಬವನ್ನು ಹಿಡಿದುಕೊಂಡಿರುವುದು, ಆ ಕಂಬವೇನು ನಿನ್ನನ್ನು ಹಿಡಿದುಕೊಂಡಿಲ್ಲವಲ್ಲ? ನೀನು ಅದನ್ನು ಬಿಡುತ್ತಿಲ್ಲವೇಕೆ?’ ಎಂದು ಮಧ್ಯವಯಸ್ಸಿನ ವ್ಯಕ್ತಿ ಸೂಫಿ ಸಂತನನ್ನು ಕೇಳಿದ.

ಅಲ್ಲಿ ಸೇರಿದ್ದ ಜನಜಂಗುಳಿಯಲ್ಲಿದ್ದ ಒಬ್ಬ ವ್ಯಕ್ತಿ ಮುಂದೆ ಬಂದು, ‘ಫರೀದ್ ಒಬ್ಬ ಮಹಾನ್ ಸೂಫಿ ಸಂತ ಎಂದು ನಾನೂ ಕೇಳಿದ್ದೇನೆ. ಆದರೆ ಆತ ಹುಚ್ಚನ ಥರ ವರ್ತಿಸುತ್ತಿದ್ದಾನೆ. ಮಹಾನ್ ಬುದ್ಧಿವಂತರು ಎಂದು ಕರೆಯಿಸಿಕೊಂಡವರು ಒಮ್ಮೊಮ್ಮೆ ಹುಚ್ಚರ ರೀತಿ ವರ್ತಿಸುತ್ತಾರೆ ಎಂಬ ಮಾತು ಸುಳ್ಳಲ್ಲ’ ಎಂದ. ಅದಕ್ಕೆ ಸೂಫಿ ಸಂತನಿಗೆ ಪ್ರಶ್ನೆ ಕೇಳಿದ ಮಧ್ಯವಯಸ್ಸಿನ ವ್ಯಕ್ತಿಯೂ ದನಿಗೂಡಿಸಿದ. ಆಗ ಫರೀದ್ ಅವನನ್ನು ದಿಟ್ಟಿಸುತ್ತ,‘ನಿನಗೆ ನಾನು ಹೀಗೇಕೆ ವರ್ತಿಸಿದೆ ಎಂಬುದು ಅರ್ಥವಾದರೆ, ನಿನ್ನ ಪ್ರಶ್ನೆಗೆ ಉತ್ತರ ಸಿಗುತ್ತದೆ. ಈ ಕಂಬಗಳು ನನ್ನನ್ನು ಹಿಡಿದುಕೊಂಡಿಲ್ಲ ಅಂದ್ರೆ  ನಿನ್ನ ಸಮಸ್ಯೆಗಳೂ ನಿನ್ನನ್ನು ಹಿಡಿದು ಕೊಂಡಿಲ್ಲ. ಆದರೆ ನೀನು ಅವುಗಳನ್ನು ಹಿಡಿದುಕೊಂಡಿದ್ದೀಯ. ನೋಡು, ಈಗ ನಾನು ಈ ಕಂಬವನ್ನು ಬಿಡುತ್ತಿದ್ದೇನೆ. ನೀನೂ ನಿನ್ನ ಸಮಸ್ಯೆಗಳನ್ನು ಇದೇ ರೀತಿ ಬಿಟ್ಟುಬಿಡು’ ಎಂದ.

ಮಧ್ಯವಯಸ್ಕ ವ್ಯಕ್ತಿಗೆ ಒಂದು ಕ್ಷಣ ವಿದ್ಯುತ್ ಸಂಚಾರವಾದಂತಾಯಿತು. ‘ಹೌದಲ್ಲ, ನಾನು ಅವೆಷ್ಟೋ ದಿನಗಳಿಂದ ಅನುಭವಿ ಸುತ್ತಿದ್ದ ಸಮಸ್ಯೆಗೆ ಫರೀದ್ ಅರೆಕ್ಷಣದಲ್ಲಿ ಪರಿಹಾರ ಸೂಚಿಸಿಬಿಟ್ಟನಲ್ಲ’ ಎಂದು ಸಂತಸವಾಯಿತು. ತಕ್ಷಣ ಸೂಫಿ ಸಂತನ ಪಾದಕ್ಕೆರಗಿದ.

ಇಸಿ: ಎರಡು ಪ್ರಸಂಗಗಳು
ಮೊನ್ನೆ ಯೋಗಿ ದುರ್ಲಭಜೀ ಫೋನ್ ಮಾಡಿ ಇಸ್ತ್ರಿಗೆ ಸಂಬಂಧಿಸಿದ ಎರಡು ಪ್ರಸಂಗಗಳನ್ನು ಹೇಳಿದರು. ಯೋಗಿ ಅವರ ಡಾಕ್ಟರ್ ಸ್ನೇಹಿತರ ಆಸ್ಪತ್ರೆಗೆ ಎರಡೂ ಕೆನ್ನೆ ಸುಟ್ಟುಕೊಂಡ ವ್ಯಕ್ತಿಯೊಬ್ಬ ಬಂದನಂತೆ. ಅವನನ್ನು ನೋಡಿ ಡಾಕ್ಟರ್, ’ಏನಿದು? ಏನಾಯಿತು?’ ಎಂದು ಕೇಳಿದರಂತೆ. ಅದಕ್ಕೆ ಆತ, ‘ನಾನು ಮನೆಯಲ್ಲಿ ಇಸಿ ಮಾಡುತ್ತಿದ್ದೆ.

ತಕ್ಷಣ ಫೋನ್ ಕರೆ ಬಂತು. ನಾನು ಮೊಬೈಲನ್ನು ಕಿವಿಗಿಟ್ಟುಕೊಳ್ಳುವ ಬದಲು ಇಸ್ತ್ರಿಪೆಟ್ಟಿಗೆಯನ್ನು ಕಿವಿಗಿಟ್ಟುಕೊಂಡೆ’ ಎಂದ. ‘ಅದ್ಸರಿ, ಇನ್ನೊಂದು ಕೆನ್ನೆಗೆ ಏನಾಯ್ತು? ಅದು ಹೇಗೆ ಸುತ್ತು ಹೋಯ್ತು?’ ಎಂದು ಕೇಳಿದರು ಡಾಕ್ಟರ್. ಅದಕ್ಕೆ ಆತ, ‘ಒಂದು ವಿಷಯ ಮರೆತಿz ಎಂದು ಹೇಳಲು ಮೊದಲು ಫೋನ್ ಮಾಡಿದವ ಎರಡನೇ ಸಲ ಕರೆ ಮಾಡಿದ. ಆಗ ಇನ್ನೊಂದು ಕೆನ್ನೆಯೂ ಸುಟ್ಟುಹೋಯಿತು’ ಎಂದ. ಎರಡನೇ ಪ್ರಸಂಗವನ್ನು ತಾವು ಓಶೋ ಪ್ರವಚನದಲ್ಲಿ ಕೇಳಿದ್ದಾಗಿ ಯೋಗಿ ತಿಳಿಸಿದರು.

ಅರವತ್ತೈದು ವರ್ಷ ಮಿಕ್ಕಿದ ವೃದ್ಧೆಯರ ಹಾಸ್ಟೆಲ್‌ನಲ್ಲಿ ಒಂದು ದಿನ ಮುಕ್ಕಾಲಮ್ಮನಿಗೆ ಬಹಳ ಬೋರಾಯಿತು. ಈ ದಿನ ಏನಾದರೂ ಮಾಡಬೇಕು, ಆ ಮೂಲಕ ಹಾಸ್ಟೆಲ್‌ನಲ್ಲಿರುವ ಎಲ್ಲರಿಗೂ ಸಣ್ಣ ಮನರಂಜನೆ ನೀಡಬೇಕು ಎಂದು ಅನಿಸಿತು. ಹಾಗೆ ಅನಿಸಿದ್ದೇ ತಡ, ಆಕೆ ಹಾಸ್ಟೆಲಿನ ಕಾರಿಡಾರ್‌ನಲ್ಲಿ ಬೆತ್ತಲೆಯಾಗಿ ನಡೆದು ಹೋದಳು. ಅದನ್ನು ತನ್ನ ರೂಮಿನಿಂದಲೇ ಸ್ವೆಟರ್ ಹೊಲಿಯುತ್ತಿದ್ದ ಜಾನಕಮ್ಮ ನೋಡಿದಳು. ಅವಳ ಪಕ್ಕದಲ್ಲಿ ಇದ್ದ ಸರ್ವೇಶ್ವರಿಯಮ್ಮನಿಗೆ, ‘ನಮ್ಮ ಕೋಣೆಯ ಮುಂದೆ ಹಾದು ಹೋಗಿದ್ದು ಮುಕ್ಕಾಲಮ್ಮ ಅಲ್ಲವಾ?’ ಎಂದು ಕೇಳಿದಳು.

ಅದಕ್ಕೆ ಸರ್ವೇಶ್ವರಿಯಮ್ಮ, ‘ಹೌದೌದು.. ಅವಳು ಮುಕ್ಕಾಲಮ್ಮ’ ಎಂದಳು. ‘ಹೌದಾ? ಅವಳು ಏನನ್ನು ಧರಿಸಿದ್ದಳು ಅನ್ನೋದು ಗೊತ್ತಾಗಲಿಲ್ಲ’ ಎಂದಳು ಜಾನಕಮ್ಮ. ಅದಕ್ಕೆ ಸರ್ವೇಶ್ವರಿಯಮ್ಮ ಹೇಳಿದಳು – ‘ಅದೇನೇ ಇರಲಿ, ಅವಳು ಧರಿಸಿದ ಡ್ರೆಸ್‌ಗೆ ಇಸ್ತ್ರಿ ಬೇಕಾಗಿತ್ತು’

ಮೊಬೈಲ್ ಇಲ್ಲದ ದಿನ

ಮೊನ್ನೆ ಪತ್ರಿಕೆಯೊಂದರ ‘ಓದುಗರ ಪತ್ರ’ ವಿಭಾಗದಲ್ಲಿ ಒಬ್ಬರು ಬರೆದಿದ್ದರು. ಬಹುತೇಕ ಐಟಿ ಪ್ರೇಮಿಗಳಿಗೆ ತಾವು ಹುಟ್ಟುವಾಗ ಮೊಬೈಲ್ಇ ಯರ್ ಫೋನ್ ಸಹಿತ ಹುಟ್ಟಿಬಂದಿದ್ದೇವೆನೋ ಎಂಬ ಭ್ರಮೆ ಇದ್ದಂತಿದೆ.

ಹಲವು ಮಂದಿ ಅದರಿಂದ ದೂರ ಉಳಿಯುವುದಕ್ಕೆ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ಎಲ್ಲ ಸಂಗತಿಗಳಿಂದ ದೂರವಿದ್ದಾಗ ಮಾತ್ರ ನಮ್ಮ ಪಂಚೇಂದ್ರಿಯಗಳು ಸರಿಯಾಗಿ ಕೆಲಸ ಮಾಡುತ್ತವೆ. ನಮ್ಮ ಕಣ್ಣು ಮತ್ತು ಕಿವಿಗಳ ಮೂಲಕ ಮಿದುಳಿಗೆ ನಿರಂತರ ಮಾಹಿತಿ ರವಾನೆ ಆಗುತ್ತಲೇ ಇರುತ್ತದೆ. ಡಿಜಿಟಲ್ ಡಿಟಾಕ್ಸಿಫಿಕೇಶನ್‌ನತ್ತ ಇಂದು ಅನೇಕ ಜನರು ಹೋಗುತ್ತಿದ್ದಾರೆ. ನನಗೂ ಇದು ವಾಸ್ತವ ಎಂದೆನಿಸಿತು.

ಹಿಂದೆಲ್ಲ ವಾರದಲ್ಲಿ ಒಂದು ದಿನ ಉಪವಾಸ ಮಾಡುವುದು ವಾಡಿಕೆಯಾಗಿತ್ತು. ಈಗಲೂ ಅದೇ ರೀತಿಯಲ್ಲಿ ವಾರದ ಒಂದು ದಿನ ‘ನೋ ಮೊಬೈಲ್ ಡೇ’ ಎಂದು ಆಚರಿಸುವ ಪದ್ಧತಿ ಆರಂಭವಾಗಿದೆ. ಕಿವಿ, ಕಣ್ಣು, ಬಾಯಿಗಳಿಗೆ ಡಿಜಿಟಲ್  ಉಪವಾಸ ಕೊಡುವ ಕೆಲಸ ಇದಾಗಿದೆ. ಆ ಒಂದು ದಿನ ಮೊಬೈಲ್ ಸ್ವಿಚ್ ಆ- ಮಾಡಿ ಇಡುವುದು. ನೀವು ಹಾಗೆ ಮಾಡುತ್ತೀರಿ ಎಂದು ನಿಮ್ಮ ಸಹೋ ದ್ಯೋಗಿಗಳಿಗೆ ಬಂಧು-ಮಿತ್ರರಿಗೆ ಗೊತ್ತಾದರೆ ಅವರೂ ನಿಮಗೆ ಫೋನ್ ಮಾಡುವ ಗೋಜಿಗೆ ಹೋಗುವುದಿಲ್ಲ. ಇದರಿಂದ ಅವರೂ ಪ್ರಭಾವಿತರಾಗುತ್ತಾರೆ. ಒಂದು ದಿನ ನೀವು ಮೊಬೈಲ್ ಮುಟ್ಟದಿದ್ದರೆ, ಅದರಿಂದ ಸಿಗುವ ಸಮಾಧಾನ, ನೆಮ್ಮದಿ ಅಷ್ಟಿಷ್ಟಲ್ಲ.

ಅದರಿಂದ ಆಕಾಶ ಬೀಳುವುದಿಲ್ಲ. ಜಗತ್ತು ಮುಳುಗಿ ಹೋಗುವುದಿಲ್ಲ. ತೀರಾ ತುರ್ತುಸ್ಥಿತಿಯಲ್ಲಿ ಅವರು ನಿಮ್ಮನು ಹೇಗಾದರೂ ಸಂಪರ್ಕಿಸುತ್ತಾರೆ, ಬಿಡಿ. ಈ ದಿನಗಳಲ್ಲಿ ವಾಕಿಂಗ್ ನಿಯಮಿತವಾಗಿ ಮಾಡುವುದನ್ನು ಬಹುತೇಕರು ರೂಢಿಸಿಕೊಂಡಿzರೆ. ಹೊಸ ಪೀಳಿಗೆಗೆ ಧನ್ಯವಾದ ಹೇಳಲೇಬೇಕು. ಇಂದಿನ ಪೀಳಿಗೆಯವರು ಆರೋಗ್ಯದ ಕಾಳಜಿ ವಿಚಾರದಲ್ಲಿ ನಮ್ಮೆಲ್ಲರಿಗಿಂತ ಮುಂದಿzರೆ. ಜವಾಬ್ದಾರಿ ತೆಗೆದುಕೊಳ್ಳುವುದೆಂದರೆ ಕಠಿಣ ಪರಿಸ್ಥಿತಿಗಳಲ್ಲಿ ಎದುರಾಗುವ ದೋಷಗಳನ್ನು ಸ್ವೀಕರಿಸುವುದೆಂದಲ್ಲ. ಎಂಥ ವಿಷಮ ಪರಿಸ್ಥಿತಿಯನ್ನೂ ನಿಭಾಯಿಸುವ ಕಲೆಯನ್ನು ರೂಢಿಸಿಕೊಳ್ಳುವುದು.

ಏನು ಬೇಕು? ಮೊನ್ನೆ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮುಂಗಡಪತ್ರ (ಬಜೆಟ್)ವನ್ನು ಮಂಡಿಸಿದ ರಷ್ಟೇ. ಈ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲಿ ತರೇಹವಾರಿ ಪ್ರತಿಕ್ರಿಯೆಗಳು ವ್ಯಕ್ತ ವಾದವು. ಈ ಸಲದ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ವರಮಾನ ತೆರಿಗೆಗೆ ಸಂಬಂಧಿಸಿದಂತೆ ನೌಕರ ವರ್ಗದವರಿಗೆ ಸಾಕಷ್ಟು ರಿಲೀಫ್ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ಟಿವಿ ಸಂದರ್ಶನ ನೀಡುತ್ತ, ’’I gave you income tax reliefs. Now what do you want?’ ಎಂದು ಕೇಳಿದರು. ಅದನ್ನು ವೀಕ್ಷಿಸುತ್ತಿದ್ದ ಒಬ್ಬರು ಥಟ್ಟನೆ ಪ್ರತಿಕ್ರಿಯಿಸಿದ್ದು – ‘ನಮಗೆ ಈಗ ಬೇಕಿರುವುದು ಇನ್ಕಮ’

ಯಾರು ಕ್ಲಯಂಟ್ ?
ನನ್ನ ವಕೀಲ ಸ್ನೇಹಿತರೊಬ್ಬರಿದ್ದಾರೆ. ಅವರು ಪ್ರತಿದಿನ ಬೆಳಗ್ಗೆ ತಮ್ಮ ಪತ್ನಿಯೊಂದಿಗೆ ವಾಕಿಂಗ್ ಹೋಗುತ್ತಾರೆ. ಹೋಗುವಾಗ ಇಬ್ಬರೂ ಒಟ್ಟಿಗೆ ಹೋಗುತ್ತಾರೆ, ಆದರೆ ವಾಪಸ್ ಬರುವಾಗ, ಇಬ್ಬರೂ ಬೇರೆ ಬೇರೆ. ಅವರ ನೆಮ್ಮದಿ ಹಾಳು ಮಾಡುವ ಏನೋ ಪ್ರಸಂಗ ನಡೆದಿರುತ್ತದೆ. ಏನೇ ಆದರೂ ಇಂದು ಹೆಂಡತಿ ಜತೆ ಖುಷಿಖುಷಿಯಾಗಿ ವಾಕಿಂಗ್ ಹೋಗಿ ಬರಬೇಕು ಅಂದು ಕೊಳ್ಳುತ್ತಾರೆ. ಆದರೆ ಏನೋ ಕಿರಿಕ್ ಆಗಿರುತ್ತದೆ.

ಮೊನ್ನೆ ಅವರು ಪತ್ನಿಯೊಂದಿಗೆ ಬೀದಿಯಲ್ಲಿ ವಾಕ್ ಮಾಡುತ್ತಿದ್ದರು. ಎದುರಿಗೆ ಸುಂದರ ಮಹಿಳೆಯೊಬ್ಬಳು ಬಂದಳು. ಅವಳನ್ನು ದಿಟ್ಟಿಸದೇ ಇರಲು ಸಾಧ್ಯವೇ ಇಲ್ಲ, ಅಂಥಾ ಸೌಂದರ್ಯ. ಆಕೆ ವಕೀಲರನ್ನು ವಾರೆಗಣ್ಣಿನಿಂದ ಕಿರುನೋಟ ಬೀರಿ
ಮುಗುಳ್ನಕ್ಕಳು. ವಕೀಲರ ಪತ್ನಿ ಮಹಾಚಾಲಾಕಿ. ಅದನ್ನು ಗಮನಿಸಿದಳು.

ಅಷ್ಟೇ ಸಾಕಾಯಿತು. ‘ಯಾರ್ರ‍ೀ ಅವಳು? ನಿಮಗೂ ಆಕೆಗೂ ಏನು ಸಂಬಂಧ? ನಿಮ್ಮನ್ನು ನೋಡಿ ಆಕೆ ನಕ್ಕಿದ್ದೇಕೆ? ನಿಮ್ಮಿಬ್ಬ ರಿಗೂ ಪರಿಚಯ ಇರಲೇಬೇಕು. ಇಲ್ಲದಿದ್ದರೆ ಆಕೆ ನಿಮ್ಮನ್ನು ನೋಡಿ ಏಕೆ ಕಣ್ಣು ಮಿಟುಕಿಸುತ್ತಿದ್ದಳು? ಇಂದು ಏನಾದರೂ ಒಂದು ಇತ್ಯರ್ಥ ಆಗಲೇಬೇಕು. ಎಷ್ಟು ದಿನಗಳಿಂದ ಈ ಕಣ್ಣುಮುಚ್ಚಾಲೆ ನಡೆಯುತ್ತಿದೆ? ಹೇಳಿ’ ಎಂದು ಪತ್ನಿ ಅಲ್ಲಿಯೇ ರಂಪ ಶುರು ಮಾಡಿದಳು. ಅದಕ್ಕೆ ವಕೀಲರು ಏನಾದರೂ ಹೇಳಲೇಬೇಕಿತ್ತು. ‘ಆಕೆ ನನ್ನ ಕ್ಲಯಂಟ್’ ಎಂದುಬಿಟ್ಟರು. ಇದರಿಂದ ಮತ್ತಷ್ಟು ವ್ಯಗ್ರಳಾದ ಪತ್ನಿ ಕೇಳಿದಳು – ‘ಆಕೆ ನಿಮ್ಮ ಕ್ಲಯಂಟ್ ಆದ್ರೆ ಪರವಾಗಿಲ್ಲ. ನೀವು ಆಕೆ ಕ್ಲಯಂಟ್ ಆದ್ರೆ ನಾನು ನಿಮ್ಮನ್ನು ಸಾಯಿಸಿಬಿಡ್ತೀನಿ!’

Read E-Paper click here