Saturday, 9th December 2023

ಪತ್ರಿಕೆಯ ಮುದ್ರಣ, ಪ್ರಸಾರ, ಓದುಗರಿಗೆ ತಲುಪಿಸುವ ಸವಾಲು

ಮಾಧ್ಯಮ ಮಿತ್ರ

ಶಿವಸುಬ್ರಮಣ್ಯ ಕೆ.

‘ಇಂಟರ್‌ನೆಟ್ ಯುಗವು ಪತ್ರಿಕೆಗಳ ಭವಿಷ್ಯಕ್ಕೆ (ಮುದ್ರಣಕ್ಕೆ) ಮಾರಕ ವಾಗಿದೆಯೇ?’- ಮಾಧ್ಯಮ ರಂಗದಲ್ಲಿ ಈಗ ಕೇಳಿಬರುತ್ತಿರುವ ಪ್ರಶ್ನೆ ಇದು. ಇತ್ತೀಚೆಗೆ ಕಚೇರಿಯೊಂದರಲ್ಲಿ ಹಲವು ಕನ್ನಡ ಪತ್ರಿಕೆಗಳನ್ನು ಹಗ್ಗ ಹಾಕಿ ಜೋಡಿಸಿ ಇಟ್ಟಿದ್ದರು. ಒಂದೊಂದೇ ಪತ್ರಿಕೆಯನ್ನು ತಿರುವಿ ಹಾಕಿದೆ. ಅಂದರೆ ಈ ಪತ್ರಿಕೆಗಳು ನಿತ್ಯ ಮುದ್ರಣ ವಾಗುತ್ತವೆ. ಅವುಗಳನ್ನು ಆ ಕಚೇರಿಗೆ ಕಳುಹಿಸುತ್ತಾರೆ ಎಂಬುದು ತಿಳಿಯಿತು. ಮುದ್ರಣ ಸಂಖ್ಯೆ ಮತ್ತು ಪ್ರಸರಣ, ಓದುಗರ ಸಂಖ್ಯೆ ನಿಖರವಾಗಿ ಗೊತ್ತಿಲ್ಲ!

ವಾರ್ತಾ ಇಲಾಖೆ, ಮಾಧ್ಯಮ ಅಕಾಡೆಮಿ, ಜಿಲ್ಲಾಧಿಕಾರಿ ಕಚೇರಿ, ವಿಧಾನಸೌಧದಲ್ಲಿ ಇರುವ ಅಧಿಕಾರಿಗಳು ಮತ್ತು ಮಂತ್ರಿಗಳ ಕಚೇರಿಗೆ ಇಷ್ಟೊಂದು ಪತ್ರಿಕೆಗಳು ತಲುಪುವುದಂತೂ ಖಚಿತ. ಮುಖ್ಯಮಂತ್ರಿಗಳ ಮನೆ, ಕಚೇರಿಗೆ ಪ್ರತ್ಯೇಕವಾಗಿ ತುಂಬಾ ಪತ್ರಿಕೆಗಳು ತಲುಪಬಹುದು. ಒಂದೇ ಕಡೆ ರಾಶಿ ಪತ್ರಿಕೆಗಳನ್ನು ನೋಡಿದ ಮೇಲೆ ನನ್ನ ನೆನಪುಗಳನ್ನು ಹಂಚಿಕೊಳ್ಳಬೇಕು ಎಂದು ಅನಿಸಿತು.

ಹೈಸ್ಕೂಲಿನಲ್ಲಿ ಇದ್ದಾಗಲೇ ನನಗೆ ಪತ್ರಿಕೆ ಓದುವ ಹುಚ್ಚು. ಮನೆಗೆ ‘ಡೆಕ್ಕನ್ ಹೆರಾಲ್ಡ್’ ಬರುತ್ತಿತ್ತು. ಕ್ರೀಡಾಪುಟದಲ್ಲಿ ರಾಜನ್ ಬಾಲ ಅವರ ವರದಿ ಓದುತ್ತಿದ್ದೆ. ಬೇರೆ ವರದಿ, ಲೇಖನ ಓದುವಷ್ಟು ಇಂಗ್ಲಿಷ್ ಆಗ ಬರುತ್ತಿರಲಿಲ್ಲ! ಆದ್ದರಿಂದ ಚಿಕ್ಕಪ್ಪನ ಮನೆಗೆ ಸಂಜೆ ಹೋಗಿ ‘ಕನ್ನಡಪ್ರಭ’ ಓದುತ್ತಿದ್ದೆ. ಮೊಟ್ಟ ಮೊದಲು ಓದಿದ ಪತ್ರಿಕೆ ಅದು. ಮುಂದೆ ಅದೇ ಪತ್ರಿಕೆಗೆ ನಾನು ಸಂಪಾದಕನಾದೆ!

ಪತ್ರಕರ್ತ ವೃತ್ತಿಗೆ ಸೇರಿದ ನಂತರ ಬಸ್ ನಿಲ್ದಾಣಗಳಲ್ಲಿ ಹುಡುಗರು ಬಸ್ ಕಿಟಕಿ ಹತ್ತಿರ ಬಂದು ‘ಪೇಪರ್, ಪೇಪರ್…’ ಎಂದು ಮಾರಾಟ ಮಾಡುತ್ತಿದ್ದಾಗ ಪುಳಕವಾಗುತ್ತಿತ್ತು. ಏಕೆಂದರೆ ನನಗೆ ಅನ್ನ ಕೊಡುತ್ತಿದ್ದ ಪತ್ರಿಕೆ ಯನ್ನೂ ಮಾರಾಟ ಮಾಡುತ್ತಿದ್ದರು. ಆಗ ‘ಇಲಸ್ಟ್ರೇಟೆಡ್ ವೀಕ್ಲಿ’, ‘ಲಂಕೇಶ್ ಪತ್ರಿಕೆ’ ಖರೀದಿಸುವುದು ಖುಷಿ ಕೊಡುತ್ತಿತ್ತು. ಏಕೆಂದರೆ ಅವುಗಳ ಗಾತ್ರ ದೊಡ್ಡದಾಗಿತ್ತು!

ಅವನ್ನು ಹಿಡಿದುಕೊಂಡು ಬಸ್ ಒಳಗೇ ಓದಲು ಶುರು. ಸ್ಥಳೀಯ ಕ್ರೈಮ್ ಸುದ್ದಿಗಳ ಕುರಿತಾದ ಪತ್ರಿಕೆಗಳ ಹೆಡ್ಡಿಂಗ್‌ಗಳನ್ನೇ ಮಾರಾಟದ ಹುಡುಗರು ಏರುದನಿಯಲ್ಲಿ ಹೇಳುತ್ತಾ ಗಮನ ಸೆಳೆಯುತ್ತಿದ್ದರು. ಕಡಿಮೆ ಪ್ರಸಾರ ಸಂಖ್ಯೆ ಇರುವ ‘ಹೊಸದಿಗಂತ’ ಪತ್ರಿಕೆಯಲ್ಲಿ ನಾನು ಕೆಲಸ ಮಾಡಿದ್ದೇನೆ. ಆ ಪತ್ರಿಕೆಗೂ ಸಂಪಾದಕನಾದೆ. ಆದರೆ ಅನೇಕ ಪೇಪರ್ ಅಂಗಡಿಗಳಲ್ಲಿ ಆ ಪತ್ರಿಕೆಯೇ ಕಾಣುತ್ತಿರಲಿಲ್ಲ. ಆಗ ಬೇಸರವಾಗುತ್ತಿತ್ತು. ‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲೂ ನನಗೆ ಉದ್ಯೋಗವಿತ್ತು. ರಾತ್ರಿ ಪಾಳಿ ಮುಗಿಸಿ, ರಜೆ ಎಂದು ಊರಿಗೆ ಹೋಗಿ ಮುಂಜಾನೆ ಬಸ್ ಇಳಿದು ಪೇಪರ್ ಅಂಗಡಿಗೆ ಹೋದರೆ ಅಲ್ಲಿ ಆ ಪತ್ರಿಕೆಯೇ ಇರುತ್ತಿರಲಿಲ್ಲ!

‘ಪ್ರಜಾವಾಣಿ’ ಬೆಂಗಳೂರು ಪತ್ರಿಕೆ ಎಂದು ಈಗಲೂ ಸಾವಿರಾರು ಜನ ಭೇಟಿ ಕೊಡುವ ಕುಕ್ಕೆ ಸುಬ್ರಹ್ಮಣ್ಯದ ಅಂಗಡಿಗಳಲ್ಲಿ ಹೇಳ್ತಾರೆ. ಅಲ್ಲಿ ‘ಪ್ರಜಾವಾಣಿ’ ಒಂದು ಪ್ರತಿ ಸಿಕ್ಕರೆ, ಪಕ್ಕದಲ್ಲೇ ‘ಉದಯವಾಣಿ’ ಐವತ್ತು ಪ್ರತಿ ಲಭ್ಯವಿರುತ್ತದೆ. ‘ವಿಜಯವಾಣಿ’ ಮತ್ತು ‘ವಿಜಯ ಕರ್ನಾಟಕ’ದ ಜಾಹೀರಾತು ಮತ್ತು ಪ್ರಸರಣಜಾಲ ಉತ್ತಮವಿರುವುದರಿಂದ ‘ಉದಯವಾಣಿ’ಯಷ್ಟೇ ಪ್ರತಿ ಗಳು ಇರುತ್ತವೆ. ‘ಕನ್ನಡಪ್ರಭ’ ಸಂಪಾದಕ ಹುದ್ದೆ ತೊರೆದ ವಾರವೇ ನಾನು ಮೈಸೂರಿಗೆ ಹೋಗಿದ್ದೆ. ಅಂಗಡಿಯೊಂದರಲ್ಲಿ ಸ್ಥಳಿಯ ಪತ್ರಿಕೆ ಸೇರಿದಂತೆ ತಲಾ ನಾಲ್ಕು ಕನ್ನಡ, ಇಂಗ್ಲಿಷ್ ಪತ್ರಿಕೆ ಖರೀದಿಸಿದೆ. ಅಂಗಡಿಯ ಮಾಲೀಕರು ನನ್ನನ್ನೇ ನೋಡುತ್ತಾ ‘ಸರ್, ನೀವು ಶಿವಸುಬ್ರಹ್ಮಣ್ಯ ಅಲ್ವಾ?’ ಎಂದರು. ‘ಹೌದು ನಾನೇ. ಯಾಕೆ?’ ಎಂದೆ.

‘ನೋಡಿ ಸರ್, ವಾರಪತ್ರಿಕೆಯೊಂದರಲ್ಲಿ ನಿಮ್ಮ ಬಗ್ಗೆ ಬರೆದಿದ್ದಾರೆ’ ಎಂದರು. ಪರವಾಗಿಲ್ಲ, ‘ಕನ್ನಡಪ್ರಭ’ಕ್ಕಿಂತ ಕಡಿಮೆ ಪ್ರಸಾರ ಸಂಖ್ಯೆ ಹೊಂದಿದ ಆ ವಾರಪತ್ರಿಕೆಯಲ್ಲಿ ಪ್ರಕಟವಾದರೆ ಜನ ಗುರುತಿಸುತ್ತಾರೆ ಎಂದು ಥಟ್ಟನೆ ಅನಿಸಿತು. ಓದುಗರ ಅಭಿರುಚಿ ಬೇರೆ ಬೇರೆ ಇರುತ್ತದೆ. ಪತ್ರಕರ್ತ ಕಚೇರಿಯಲ್ಲಿ ಪತ್ರಿಕೆಗಾಗಿ ಹೆಚ್ಚು ಕೆಲಸ ಮಾಡಿದರೆ ಪತ್ರಿಕೆಗೆ ಅನುಕೂಲ. ಆಗ ಜನ ಪತ್ರಿಕೆಯನ್ನು ಗುರುತಿಸುತ್ತಾರೆ ಎಂಬುದು ನನ್ನ ಅನುಭವ. ಇದಕ್ಕಿಂತ ಭಿನ್ನವಾದ ಅನುಭವವೂ ಅಂದು ಪತ್ರಿಕೆಗಳನ್ನು ಖರೀದಿಸಿದ ಓದುಗನಾಗಿ ನನಗೆ ಆಯಿತು. ಈಗಂತೂ ರಾಜ್ಯಾ ದ್ಯಂತ ಅಂಗಡಿಗಳಲ್ಲಿ ಪೇಪರ್ ಸಂಖ್ಯೆ ಕಡಿಮೆ ಆಗಿರುವುದಂತೂ ನಿಜ.

ಈ ಹಿಂದೆ ಪ್ರವಾಸ ಹೋದ ಪಟ್ಟಣ, ನಗರಗಳಲ್ಲಿ ವಾಸ್ತವ್ಯ ಹೂಡಿದ ಹೋಟೆಲ್‌ಗಳಿಂದ ಬೆಳಗ್ಗೆ ಹೊರ ಬಂದು ನೋಡಿದರೆ ಪಕ್ಕದಲ್ಲೇ ಸಣ್ಣ ಅಂಗಡಿ
ಗಳಲ್ಲೂ ಪೇಪರ್ ಸಿಗುತ್ತಿತ್ತು. ಈಗ ದಿನಪತ್ರಿಕೆಗಾಗಿ ರಸ್ತೆ ರಸ್ತೆ ಅಲೆದಾಡಬೇಕು. ಬಹುತೇಕ ಕಡೆ ಹೋಟೆಲ್‌ನವರೇ ರೂಮಿಗೆ ಪತ್ರಿಕೆ ಹಾಕುವುದೆಂದರೆ ಜಾಹೀರಾತು ಮತ್ತು ಫ್ಯಾಶನ್ ಶೋ ಫೋಟೋಗಳೇ ತುಂಬಿರುವ ಆಂಗ್ಲ ಪತ್ರಿಕೆ ಮಾತ್ರ. ಏಕೆಂದರೆ ಆಂಗ್ಲ ಪತ್ರಿಕೆಯ ಮಾರಾಟ, ಪ್ರಚಾರದ ಶಕ್ತಿ ಪ್ರಬಲವಾಗಿರುತ್ತದೆ. ಕನ್ನಡದ ಪತ್ರಿಕೆ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಹಿಂದೆಯೇ.

ಹಳ್ಳಿ, ಪಟ್ಟಣ, ನಗರಗಳಲ್ಲಿ ಕನ್ನಡ ಪತ್ರಿಕೆ ಸಿಗದೇ ಇದ್ದರೂ ತಲೆ ಕೆಡಿಸಿಕೊಳ್ಳದವರೂ ಇದ್ದಾರೆ. ಆದರೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮ್ಮ ಪತ್ರಿಕೆ ಬೆಳಗ್ಗೆಯೇ ಸಿಗುತ್ತದೆ ಎಂದು ಬೀಗುವ ಕನ್ನಡ ಪತ್ರಿಕೆಗಳ ಮಾಲೀಕರು ಅಥವಾ ಮ್ಯಾನೇಜರುಗಳು ಇದ್ದಾರೆ! ಯುವಜನಾಂಗ ಪತ್ರಿಕೆಗಳನ್ನು ಓದುವುದರಲ್ಲಿ ಆಸಕ್ತಿ ತೋರುತ್ತಿಲ್ಲ. ಇದು ಆತಂಕಕಾರಿ ಬೆಳವಣಿಗೆ. ಅವರು ವೆಬ್‌ಸೈಟ್‌ಗಳಲ್ಲಿ ಎಷ್ಟು ಓದುತ್ತಾರೆ ಎಂಬುದೂ ಪ್ರಶ್ನಾರ್ಹ. ಇತ್ತೀಚೆಗೆ ನಮ್ಮ ಮನೆಗೆ ೮-೧೦ ಯುವ ಜನರು ಬಂದಿದ್ದರು. ಅವರನ್ನು ಪರೀಕ್ಷೆಗೆ ಒಳಪಡಿಲೆಂದೇ ೪ ಇಂಗ್ಲಿಷ್, ೫ ಕನ್ನಡ ಪತ್ರಿಕೆಗಳು, ತಲಾ ಒಂದೊಂದು ಆಂಗ್ಲ, ಕನ್ನಡ ಮ್ಯಾಗಜೀನ್‌ಗಳನ್ನು ಟೀಪಾಯ್ ಮೇಲೆ ಅಂದವಾಗಿ ಜೋಡಿಸಿ ಇಟ್ಟಿದ್ದೆ.

ನಮ್ಮ ಮನೆಯಲ್ಲಿದ್ದ ಒಂದು ಗಂಟೆಗೂ ಹೆಚ್ಚು ಅವಧಿಯಲ್ಲಿ ಒಬ್ಬರೂ ಒಂದು ಪೇಪರ್ ಆಗಲೀ, ಮ್ಯಾಗಜೀನ್ ಆಗಲೀ ನೋಡಲಿಲ್ಲ, ಮುಟ್ಟಲಿಲ್ಲ. ಅವರ ಏಕಾಗ್ರತೆ ಅವರ ಮೊಬೈಲ್‌ಗಳಲ್ಲೇ ಇತ್ತು. ನನ್ನ ಮಗಳು ಇಂಗ್ಲಿಷ್ ಮೀಡಿಯಂನಲ್ಲಿ ಓದಿದವಳು. ನಾನು ಮಾಡಿದ ಒಳ್ಳೆಯ ಕೆಲಸವೆಂದರೆ ಅವಳಿಗೆ ಕನ್ನಡ ಪತ್ರಿಕೆ ಓದುವ ಪ್ರೀತಿ ಕಲಿಸಿದ್ದು. ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಆಗಾಗ ಮನೆಯಲ್ಲಿ ಅವಳಿಂದಲೇ ಮುಜುಗರಕ್ಕೆ ಒಳಗಾಗಿದ್ದೆ.

ಅವಳು ಪತ್ರಿಕೆ ಓದುತ್ತಾ, ‘ಅಪ್ಪಾ.. ನೋಡಿಲ್ಲಿ, ನಿಮ್ಮ ಪತ್ರಿಕೆಯಲ್ಲೇ ಎಷ್ಟೊಂದು ತಪ್ಪುಗಳಿವೆ’ ಎಂದು ಪೆನ್ನಿನಲ್ಲಿ ಮಾರ್ಕ್ ಮಾಡಿ ತೋರಿಸುತ್ತಿದ್ದಳು. ಅನೇಕರು ಕೂಡಿ ತಯಾರಿಸುವ ವಸ್ತುಗಳಲ್ಲಿ ದೋಷಗಳಿದ್ದರೂ ಅದು ಒಂದೇ ದಿನಕ್ಕೆ ಎಂಬ ವಿನಾಯಿತಿ ಸಿಗುವುದು ಪತ್ರಿಕೆಗೆ ಮಾತ್ರ. ಬೇರೆ ವಸ್ತುಗಳಲ್ಲಿ ದೋಷ ಇದ್ದರೆ ಜನ ಸುಮ್ಮನೆ ಬಿಡ್ತಾರಾ? ಮುದ್ರಣ ಯಾವ ಮಟ್ಟದಲ್ಲೇ ಇರಲಿ, ವರದಿ-ಲೇಖನಗಳ ಗುಣಮಟ್ಟ ಯಾವುದೇ ಇರಲಿ ರಾಜ್ಯದಲ್ಲಿ ನೂರಾರು ಪತ್ರಿಕೆಗಳು ಪ್ರತಿದಿನ ಪ್ರಕಟವಾಗುತ್ತವೆ. ಪತ್ರಿಕೆ ಹೊರತರುವುದು ಒಂದು ಖಾಸಗಿ ಉದ್ಯಮ ಮತ್ತು ಸಾರ್ವಜನಿಕ ಸೇವೆ ಎಂಬುದು ಸಾಮಾನ್ಯವಾಗಿ ಇರುವ ಅಭಿಪ್ರಾಯ.

ಜನರ ವಿಶ್ವಾಸಕ್ಕೆ ಪಾತ್ರ ಆಗುವಂಥ ಸುದ್ದಿ ಕೊಡುವವರು ಎಷ್ಟು ಎಂಬುದು ಅವಲೋಕನಕ್ಕೆ ಸೂಕ್ತವಾದ ವಿಷಯ. ಪತ್ರಿಕೆ ಗಳು ಈಗ ರಾಜ್ಯ ರಾಜಕೀಯದ ಗತಿಯನ್ನು ನಿರ್ಧರಿಸುವ ಸಾಮರ್ಥ್ಯ ಹೊಂದಿವೆಯೋ ಎಂಬ ಬಗ್ಗೆ ಸಂಶಯವಿದೆ. ಏಕೆಂದರೆ ರಾಜಕೀಯ ವಿಷಯಗಳನ್ನು ಕಡಿಮೆ
ವಾಕ್ಯಗಳಲ್ಲಿ ದಿನವಿಡೀ ಹೇಳಿದ್ದನ್ನೇ ಹೇಳುವ ಮೂಲಕ ಗತಿನಿರ್ಣಯದ ಕೆಲಸವನ್ನು ಟಿವಿಗಳು ಮಾಡುತ್ತಿವೆ.

ಪತ್ರಿಕೆಗಳು ಈಗಲೂ ದಿನನಿತ್ಯದ ಬೆಳವಣಿಗೆಗಳನ್ನು ಜನರಿಗೆ ತಿಳಿಸುತ್ತಿವೆ. ಆದರೆ, ಜನರು ಮಾತ್ರ ಇದಕ್ಕಾಗಿ ಪತ್ರಿಕೆಗಳನ್ನೇ ಅವಲಂಬಿಸಿಲ್ಲ. ಮುಂಜಾನೆ ವಾಟ್ಸ್ಯಾಪ್ ತೆರೆದರೆ ಅದನ್ನು ಮುಚ್ಚುವುದು ರಾತ್ರಿಯೇ ಆಗಿರುವುದರಿಂದ ಮಾಹಿತಿಗಳು ಅಲ್ಲೇ ಬರುತ್ತವೆ. ಅವುಗಳು ಸವಕಲು ಆಗುತ್ತಿವೆ, ಪತ್ರಿಕೆಗಳಲ್ಲಿ ಸ್ಪಷ್ಟತೆ ಇರುತ್ತವೆ ಎಂಬುದನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಪತ್ರಿಕೆಗಳ ಮಾಲೀಕರು ಮತ್ತು ಪತ್ರಕರ್ತರು ಯಶಸ್ಸು ಪಡೆಯುವಲ್ಲಿ ಪ್ರಯಾಸ ಪಡುತ್ತಿದ್ದಾರೆ. ಆದ್ದರಿಂದಲೇ ಪತ್ರಿಕೆಗಳೂ ವೆಬ್‌ಸೈಟ್, ಫೇಸ್‌ಬುಕ್, ಟೆಲಿಗ್ರಾಮ್‌ಗಳನ್ನು ಅವಲಂಬಿಸಬೇಕಾಗಿದೆ.

ಪತ್ರಿಕೆಗಳು ಪ್ರಪಂಚದ ಕೈಗನ್ನಡಿ ಎಂದು ಕಾಲೇಜುಗಳಲ್ಲಿ ಉಪನ್ಯಾಸಕರು ಪಾಠ ಮಾಡುತ್ತಿದ್ದಂತೆಯೇ, ಪತ್ರಿಕೆಗಳು ಲೋಕಲ್ ಕನ್ನಡಿಗಳಾದವು. ‘ಹೈಪರ್ ಲೋಕಲ್’ ಎಂದೇ ಪ್ರತಿಪಾದನೆ ಮಾಡುವ ಅಜ್ಞಾನಿಗಳೇ ಪತ್ರಿಕೆಗಳಲ್ಲಿ ಹುಟ್ಟಿಕೊಂಡರು. ಬುದ್ಧಿವಂತ ಓದುಗರು ಮಾತ್ರ ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಾಹಿತಿಗಾಗಿ ಮೊಬೈಲ್ ಅಥವಾ ಆಂಗ್ಲಪತ್ರಿಕೆಗಳನ್ನು ಅವಲಂಬಿಸಿದರು. ಈಗೀಗ ಅಂತಾರಾಷ್ಟ್ರೀಯ ಮಾಹಿತಿಗಳು ಎಷ್ಟು
ಮುಖ್ಯವಾಗಿವೆಯೆಂದರೆ ಕನ್ನಡದ ಪ್ರಮುಖ ಪತ್ರಿಕೆ ಗಳಲ್ಲಿ ಇಸ್ರೇಲ್-ಪ್ಯಾಲೆಸ್ತೀನ್ ಬೆಳವಣಿಗೆಗಳು ಮುಖಪುಟದ ಲೀಡ್ ಸುದ್ದಿಗಳಾಗುತ್ತವೆ. ಪ್ರತ್ಯೇಕ ಪುಟವನ್ನೇ ಮೀಸಲು ಇಡುವ ಅನಿವಾರ್ಯತೆ ಬಂದಿದೆ. ಸಣ್ಣ ಪತ್ರಿಕೆಗಳಿಗೆ ಈ ಸವಾಲು ಇನ್ನೂ ಬಂದಿಲ್ಲ. ಆದ್ದರಿಂದಲೇ ಎರಡು-ನಾಲ್ಕು-ಆರು ಪುಟಗಳ ಸ್ಥಳಿಯ ಪತ್ರಿಕೆಗಳಾಗಿ ಮುದ್ರಣವಾಗಿ ಹೊರಬರುತ್ತಿವೆ. ಪತ್ರಿಕೆಗಳನ್ನು ಮುದ್ರಿಸುವುದು ಮತ್ತು ಅದರ ಪ್ರಸಾರವೇ ಬಹುದೊಡ್ಡ ಸವಾಲು.

ಸರಕಾರಿ ಕಚೇರಿಯಲ್ಲಿ ಇರುವವರು ಈ ಪತ್ರಿಕೆ ಗಳನ್ನು ಜಾಹೀರಾತು ಬಿಡುಗಡೆಗೆ ಸಾಕ್ಷಿ ಮತ್ತು ಆಧಾರವಾಗಿ ಮಾತ್ರ ಪರಿಗಣಿಸುತ್ತಿದ್ದಾರೆ. ಸರಕಾರಿ ಕಚೇರಿಯಲ್ಲಿ ಇರುವವರು ಈಗ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾದರೆ ಪತ್ರಿಕೆಗಳು ಅನಿವಾರ್ಯವಾಗಿ ಡಿಜಿಟಲ್ ಆಗಲು ಸುಲಭವಾಗ
ಬಹುದು. ಇಲ್ಲದಿದ್ದಲ್ಲಿ, ಸಣ್ಣ ಪತ್ರಿಕೆಗಳು ಸರಕಾರಿ ಜಾಹೀರಾತಿಗಾಗಿ ಮುದ್ರಣವಾಗುತ್ತಿವೆ ಎಂಬ ಮಾತು ಕೇಳುತ್ತಲೇ ಮುಂದೆ ಹೆಜ್ಜೆ ಹಾಕಬೇಕಾಗುತ್ತದೆ. ಎಷ್ಟು ದಿನ ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು?

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

error: Content is protected !!