ಗುರುವಂದನೆ
ಡಾ.ದೊರೇಶ ಬಿಳಿಕೆರೆ
ಆದಿಚುಂಚನಗಿರಿ ಎಂದಾಕ್ಷಣ ನಾಡಿನ ಭಕ್ತರ ಹೃದಯಗಳು ಪುಳಕಗೊಳ್ಳುತ್ತವೆ. ಇದು ಈ ಹೆಸರಿಗಿರುವ ಶಕ್ತಿ. ಜನರ ನಂಬಿಕೆಯ ಸಾಧಾರಣ ಶ್ರದ್ಧಾಪೀಠವಾಗಿದ್ದ ಕಾಲಭೈರವನ ಈ ತಪೋಭೂಮಿ, ರಾಜ್ಯ-ರಾಷ್ಟ್ರ ಮಾತ್ರವಲ್ಲದೆ ವಿಶ್ವಾದ್ಯಂತ ಚಿರಪರಿಚಿತವಾಗಿ
ಮಹಾಸಂಸ್ಥಾನ ಮಠವಾಗಿ ವಿಸ್ತರಿಸಿದ ಪರಿಯೇ ವಿಸ್ಮಯಕಾರಿ.
ಜನರ ನಂಬಿಕೆಗೆ ಅಮೂಲ್ಯಶಕ್ತಿಯಿದೆ ಎಂಬುದು ಇಲ್ಲಿಗೊಮ್ಮೆ ಭೇಟಿ ನೀಡಿದರೆ ತಿಳಿಯುತ್ತದೆ. ಇದು ಒಂದು ಮಾತಾದರೆ, ಮತ್ತೊಂದು ಸ್ವಾಮೀಜಿಗಳ ಪರಂಪರೆಯದ್ದು. ಮೂಲತಃ ಗುರುಪರಂಪರೆಯ ಹಾದಿಯಲ್ಲಿ ನಡೆದುಬಂದ ಈ ಮಠದ ಪೀಠಾ ಧ್ಯಕ್ಷರು ಗಳ ಕಟ್ಟುವ ಕಾರ್ಯ ಅಮೋಘವಾದುದು. ಮಠವೊಂದನ್ನು ಧಾರ್ಮಿಕ, ಸಾಮಾಜಿಕ, ಬೌದ್ಧಿಕ ಹಾಗೂ ಸಾಮಾಜಿಕ ನೆಲೆಯಾಗಿ ರೂಪಿಸುವ, ರೂಪಿಸಿದ್ದನ್ನು ಮುನ್ನಡೆಸುವ ಕರ್ತೃತ್ವಶಕ್ತಿ ಇಲ್ಲಿನ ಗುರುಪರಂಪರೆಯದ್ದು.
ಭಾರತದ ಪುಣ್ಯಕ್ಷೇತ್ರಗಳಲ್ಲಿ ಒಂದೆನಿಸಿ, ಪ್ರಾಚೀನ ಪುರಾಣೇತಿಹಾಸ ಹೊಂದಿರುವ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಒಕ್ಕಲಿಗರ ದೈವರೂಪವಾಗಿದ್ದ, ಭೈರವೈಕ್ಯ ಬಾಲಗಂಗಾ ಧರನಾಥ ಸ್ವಾಮಿಯವರ ನಂತರ ಯಾರು? ಎಂಬ ಪ್ರಶ್ನೆ ಲಕ್ಷಾಂತರ ಭಕ್ತರನ್ನು ಕಾಡಿದ್ದು ಸುಳ್ಳಲ್ಲ. ಆಗ ಉತ್ತರವಾಗಿ ಗೋಚರಿಸಿದವರೇ ಶ್ರೀ ಡಾ. ನಿರ್ಮಲಾನಂದ ನಾಥರು. ಇಂದು, ಶ್ರೀಮಠದ ೭೨ನೇ ಪೀಠಾ ಧ್ಯಕ್ಷರಾದ ಪೂಜ್ಯ ಮಹಾಸ್ವಾಮೀಜಿಯವರ ವರ್ಧಂತಿ.
ಜಗದ್ಗುರುವಾಗಿ ಗದ್ದುಗೆ ಏರಿದ ಕ್ಷಣದಿಂದ ಶ್ರೀಕ್ಷೇತ್ರದ ಏಳಿಗೆಗೆ ಕಟಿಬದ್ಧರಾಗಿ ತಮ್ಮಿಡೀ ಬದುಕನ್ನು ಅದರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಶ್ರೀ ನಿರ್ಮಲಾನಂದನಾಥರು ಓರ್ವ ಸಂತವಿಜ್ಞಾನಿ ಅಥವಾ ವಿಜ್ಞಾನಿಸಂತ. ಬದುಕಿನ ಧರ್ಮದ ಏಳ್ಗೆಗೆ ಅಹರ್ನಿಶಿ ಶ್ರಮಿಸುತ್ತಾ, ನಾಡಿನ ಎಲ್ಲ ಸಮುದಾಯದ ಬಡವರ ಮತ್ತು ಅಸಹಾಯಕರ ಬದುಕಿಗೆ ಆಶಾಕಿರಣವಾಗಿ ತಮ್ಮ ಬಾಳನ್ನು ಚಂದನದಂತೆ ತೇಯುತ್ತಿರುವ ಮಹಾಮಹಿಮರು. ಈ ಹೊತ್ತಿನ ಮಠ ಪರಂಪರೆಯಲ್ಲಿ ದೇಶಾದ್ಯಂತ ಮುಂಚೂಣಿ ಯಲ್ಲಿರುವ ಹೆಸರು ಇವರದ್ದು.
ಇವರ ಗುರುಕಾರುಣ್ಯ, ಜ್ಞಾನಸಂಪತ್ತು, ಭಕ್ತರೆಡೆಗಿನ ಕಾಳಜಿ, ಪ್ರೀತಿಭಾವ ಎಲ್ಲೆಡೆಯೂ ಆದರಣೀಯ. ಗುಬ್ಬಿ ತಾಲೂಕಿನ ಚೀರನಹಳ್ಳಿ ಎಂಬ ಕುಗ್ರಾಮದ ಬಡ ರೈತಕುಟುಂಬದಲ್ಲಿ ಜನಿಸಿದ ಶಿಶುವೊಂದು ಈ ನಾಡಿನ ಅಧ್ಯಾತ್ಮಿಕ ಪರಂಪರೆಯ ಮೇರುಮಠದ ಪೀಠಾಧಿಪತಿಯಾಗಿ ಮತ್ತು ಒಕ್ಕಲಿಗ ಸಮುದಾಯದ ವಿಶ್ವಪ್ರತಿನಿಧಿಯಾಗಿ ಸಮರ್ಥವಾಗಿ ನಿಲ್ಲಬಲ್ಲ ಜ್ಞಾನ ಮೂರ್ತಿಯಾಗಿ ರೂಪುಗೊಂಡ ಪರಿಯಂತೂ ಈ ನೆಲದ ಮತ್ತು ಸಮುದಾಯದ ಹೆಮ್ಮೆ.
ಚುಂಚನಗಿರಿ ಕ್ಷೇತ್ರಕ್ಕೆ ನಡೆದುಕೊಳ್ಳುವ ಒಕ್ಕಲಿಗ ಸಮುದಾಯದ ಭಕ್ತರು ಮಾತ್ರವಲ್ಲದೆ, ವಿಶ್ವದ ಅನೇಕ ರಾಷ್ಟ್ರಗಳ ಚಿಂತಕರು ಗೌರವಿಸುವ ವ್ಯಕ್ತಿತ್ವ ಚುಂಚಶ್ರೀಯವರದ್ದು. ವೇದ, ಆಗಮ, ಸಾಹಿತ್ಯ, ವಿಜ್ಞಾನ, ಸಾಮಾಜಿಕ ದೀಪ್ತತೆಯ ಅಪರೂಪದ
ಜ್ಞಾನ ಭಂಡಾರವಾದ ಈ ಪೂಜ್ಯರದ್ದು ಬಹುಮುಖಿ ವ್ಯಕ್ತಿತ್ವ ಪೂಜ್ಯರ ಪೂರ್ವಾಶ್ರಮದ ಹೆಸರು ನಾಗರಾಜು. ಇವರು ನರಸಪ್ಪ ಮತ್ತು ನಂಜಮ್ಮನವರ ಮಗನಾಗಿ ೧೯೬೯ರ ಜುಲೈ ೨೦ರಂದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೀರನಹಳ್ಳಿಯಲ್ಲಿ ಜನಿಸಿದರು.
ಚಿಕ್ಕ ವಯಸ್ಸಿನಲ್ಲಿ ಎಲ್ಲಾ ಮಕ್ಕಳಂತೆಯೇ ಆಡಿ, ನಲಿದು ಓದುತ್ತಾ ಬಂದ ಇವರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ, ನೆಟ್ಟೇಕೆರೆಯ ಸರಕಾರಿ ಮಾಧ್ಯಮಿಕ ಶಾಲೆ, ಮಾವಿನಹಳ್ಳಿಯ ಪ್ರಗತಿಪರ ಗಣಪತಿ ಪ್ರೌಢಶಾಲೆಯಲ್ಲಿ ಓದಿ ತುಮಕೂರಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದರು. ನಂತರ ಮೈಸೂರಿನ ಎನ್ಐಇ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿ, ತರುವಾಯ ಚೆನ್ನೈನ ಎನ್ಐಟಿಯಲ್ಲಿ ಚಿನ್ನದ ಪದಕದೊಂದಿಗೆ ಎಂ.ಟೆಕ್ ಪದವಿ ಪಡೆದರು. ಸೌಮ್ಯಸ್ವಭಾವ, ಸಾತ್ವಿಕ ಚಿಂತನೆ, ಸೃಜನಶೀಲ ವ್ಯಕ್ತಿತ್ವ, ಜ್ಞಾನ-ವಿಜ್ಞಾನ-ತಂತ್ರಜ್ಞಾನದಲ್ಲಿ ಅಪಾರಜ್ಞಾನ ಹೊಂದಿದವ ರಾಗಿದ್ದ ಇವರನ್ನು ಅನೇಕ ಉದ್ಯೋಗಾವಕಾಶಗಳು ಅರಸಿ ಬಂದಿದ್ದವು.
ಆದರೆ ಇವರ ಜ್ಞಾನ ಅಧ್ಯಾತ್ಮಮಾರ್ಗವಾಗಿ ಬೆಳೆದಿದ್ದ ಕಾರಣ ಅವನ್ನು ನಿರಾಕರಿಸಿದರು. ಶ್ರೀ ಆದಿಚುಂಚನಗಿರಿ ಮಠದ ಸಂಪರ್ಕ ಹಾಗೂ ಮಹಾಗುರೂಜಿಯವರ ಮಾರ್ಗದರ್ಶನದಲ್ಲಿ ಮಹಾನ್ ಜ್ಞಾನಿಯಾಗಿ ಬೆಳೆದರು. ನಂತರದ ದಿನಗಳಲ್ಲಿ ಇವರ ಶ್ರದ್ಧೆ, ಭಕ್ತಿ ಮತ್ತು ಆಸಕ್ತಿಯನ್ನು ನೋಡಿ ಮಹಾಗುರುಗಳು ಬ್ರಹ್ಮಚಾರಿದೀಕ್ಷೆ ನೀಡಿ ‘ನಿರ್ಮಲಾನಂದನಾಥ’ ಎಂದು ನಾಮಕರಣ ಮಾಡಿದರು. ಮುಂದೆ ಇವರಿಗೆ ರಾಮನಗರದ ಅರ್ಚಕರಹಳ್ಳಿಯಲ್ಲಿರುವ ಅಂಧರ ಶಾಲೆಯಲ್ಲಿ ಸೇವೆ ಸಲ್ಲಿಸುವ
ಅವಕಾಶ ಸಿಕ್ಕಿತು.
ಹಲವು ವರ್ಷ ಕಳೆದ ನಂತರ ಇವರಿಗೆ ಸನ್ಯಾಸದೀಕ್ಷೆ ನೀಡಿ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಶಾಖಾಮಠಗಳನ್ನು ನೋಡಿಕೊಳ್ಳಲು ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಅಲ್ಲಿ ಅನೇಕ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ, ಸಾಮಾಜಿಕ ಸಂಘಟನೆಯಲ್ಲಿ ಇವರ ಕರ್ತೃತ್ವಶಕ್ತಿ ಪ್ರಕಟವಾಯಿತು. ಮಹಾಸ್ವಾಮೀಜಿಯವರು ದೂರದೃಷ್ಟಿಯಿಂದ ಮೊದಲೇ ನಿರ್ಧರಿಸಿ ಶ್ರೀ ಆದಿಚುಂಚನಗಿರಿ ಶ್ರದ್ಧಾಪೀಠದ ಉತ್ತರಾಧಿಕಾರಿ ಎಂದು ಶ್ರೀ ನಿರ್ಮಲಾನಂದನಾಥರ ಹೆಸರನ್ನು ನಮೂದಿಸಿ ಉಯಿಲು ಬರೆದಿಟ್ಟಿದ್ದರು.
ಅದರಂತೆ ೨೦೧೩ರ ಜನವರಿ ೧೪ರಂದು ಶ್ರೀಗಳು ಆದಿಚುಂಚನಗಿರಿಯನಾಥ ಪರಂಪರೆಯ ೭೨ನೇ ಪೀಠಾಧ್ಯಕ್ಷರಾಗಿ
ಸಿದ್ಧ ಸಿಂಹಾಸನಾರೂಢರಾದರು. ಇವರ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರವಿಂದು ದಿವ್ಯವಾಗಿ ಬೆಳಗುತ್ತಿದೆ. ಎಂಜಿನಿಯರಿಂಗ್
ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಬಹುದಾಗಿದ್ದ ವ್ಯಕ್ತಿತ್ವವೊಂದು ಹೀಗೆ ಶ್ರೀಮಠದ ಗುರುಪರಂಪರೆಗೆ ಬಂದು ಚೇತನರೂಪಿಯಾಗಿ
ನಾಡಿನ ಕೋಟ್ಯಂತರ ಜನರನ್ನು ಉದ್ಧರಿಸಿ, ಅವರ ಸುಂದರ ಬದುಕಿಗೆ ಬೇಕಾದ ತಿಳಿವಳಿಕೆ ನೀಡುತ್ತಾ, ಅವರ ಮನದಲ್ಲಿನ ಕೆಡುಕುಗಳನ್ನು ದೂರಮಾಡಿ, ಧರ್ಮ ಮತ್ತು ಜ್ಞಾನದ ನೆಲೆಯಲ್ಲಿ ಬದುಕಿನ ಮತ್ತೊಂದು ವಿನ್ಯಾಸವನ್ನು ವಿಸ್ತರಿಸುತ್ತಿರುವುದು ಮನುಕುಲದ ಅದೃಷ್ಟವೇ ಸರಿ.
ಪೂಜ್ಯರು ಸಾಂಪ್ರದಾಯಿಕ, ಧಾರ್ಮಿಕ, ಸಾಹಿತ್ಯಕ ಮತ್ತು ವೈಜ್ಞಾನಿಕ ಚಿಂತನೆಯನ್ನು ಮಿಳಿತಗೊಳಿಸಿ ಚಿಂತನೆ ನಡೆಸುವ ಕ್ರಮವೇ ಚೇತೋಹಾರಿಯಾದುದು. ಜಗತ್ತಿನ ಅಗ್ರಗಣ್ಯ ಭಾಷೆಗಳ ಪ್ರಮುಖ ಸಾಹಿತ್ಯವನ್ನು ಅಧ್ಯಯನ ಮಾಡಿರುವ ಪೂಜ್ಯರು, ಕನ್ನಡದ ಸಾಹಿತ್ಯಾಧ್ಯಯನ ಮತ್ತು ಸಂಸ್ಕೃತಿಯ ರೂಪಗಳನ್ನು ಆಧುನಿಕ ನೆಲೆಯಲ್ಲಿ ವಿಸ್ತರಿಸುವ ಪರಿಸೊಗಸಾದುದು, ವೈಚಾರಿಕವಾದುದು. ಶ್ರೀಮಠದ ವತಿಯಿಂದ ಪ್ರತಿವರ್ಷವೂ ವಿಚಾರ ಸಂಕಿರಣಗಳು, ಸಂಸ್ಕೃತಿ ಕಾರ್ಯಾಗಾರ ಗಳು, ಸಮ್ಮೇಳನಗಳನ್ನು ಆಯೋಜಿಸಿ ನಾಡಿನ ಚಿಂತಕರನೇಕರ ಜತೆ ಚರ್ಚಿಸಿದ ಹಿರಿಮೆ ಶ್ರೀಗಳದ್ದು. ಮನದೊಳಗಿನ ಅವಿವೇಕಗಳನ್ನು ಕಳೆದು ಬದುಕಿನ ಹೊಸದಾರಿಗಳ ಬಗೆಗೆ ಮೆರುಗು ನೀಡುವಲ್ಲಿ ಇವರು ಜಗದ್ಗುರುಗಳಿಗೂ ಮಾದರಿಯಾಗಿದ್ದಾರೆಂದರೆ ಅತಿಶಯೋಕ್ತಿಯಾಗಲಾರದು.
ಪೀಠಾಧ್ಯಕ್ಷರಾದ ನಂತರದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿ ‘ನಾಥ ಪರಂಪರೆ: ಸಾಂಸ್ಕೃತಿಕ ಅಧ್ಯಯನ’ (ಛಿಜ.ಘೆಟ: ಖ.೨೩೯, ಈZಠಿಛಿ: ೦೩೦೧೨೦೧೨) ಎಂಬ ವಿಷಯದ ಬಗ್ಗೆ ಅಧ್ಯಯನ ಕೈಗೊಂಡು, ಪ್ರೊ. ಪಿ.ಬಿ. ಶಾಂತಪ್ಪನವರ ಮಾರ್ಗದರ್ಶನದಲ್ಲಿ ಪಿಎಚ್ಡಿ ಪದವಿ ಪಡೆದ ಶ್ರೀಗಳ ಓದಿನ ಹರಹು ಬಹುಮುಖಿಯಾದುದು. ನಿರಂತರ ಅಧ್ಯಯನಶೀಲರಾದ ಶ್ರೀಗಳ ಚಿಂತನೆಗಳು, ಈ ಹೊತ್ತಿನ ಸಮಾಜಕ್ಕೆ ಚಿಕಿತ್ಸಕ ನೋಟವನ್ನು ಒದಗಿಸುತ್ತವೆ.
ಅತ್ಯಂತ ಸರಳವಾಗಿ, ಪಕ್ಕದ ಮನೆಯವರೆಂಬ ಭಾವ ಬರುವಂತೆ, ಪ್ರೀತಿಯಿಂದ ನಿಷ್ಕಲ್ಮಶವಾಗಿ ಚರ್ಚಿಸುವ ಇವರ ಪರಿಯೇ ಆಕರ್ಷಕ. ಚಿಂತನಾಸಭೆ, ವಿಚಾರ ಸಂಕಿರಣ, ಕಾರ್ಯಾಗಾರಗಳಲ್ಲಿ ಆಸಕ್ತ ವಿದ್ಯಾರ್ಥಿಯಂತೆ ಕೈಯಲ್ಲಿ ನೋಟ್ಪ್ಯಾಡ್ ಮತ್ತು ಪೆನ್ನುಹಿಡಿದು, ಸಂಪರ್ಕಕ್ಕೆ ಬಂದ ಸಂಪನ್ಮೂಲ ವ್ಯಕ್ತಿಗಳ ಮಾತುಗಳನ್ನು ತಲ್ಲೀನರಾಗಿ ಕೇಳುತ್ತಾ ಟಿಪ್ಪಣಿ ಮಾಡಿಕೊಳ್ಳುವ
ಪೂಜ್ಯರ ಕಲಿಕಾ ಸೌಜನ್ಯಕ್ಕಿಂತ ದೊಡ್ಡ ಮಾದರಿ ಬೇಕಾಗಿಲ್ಲ. ಸಾವಿರಾರು ವಿದ್ಯಾರ್ಥಿಗಳ ಜತೆಜತೆಯಲ್ಲೇ ಪ್ರಾರ್ಥನೆ ಮುಗಿಸಿ, ಅವರಿಗೆ ಉಪಾಹಾರ ಬಡಿಸಿ, ಅವರ ಜತೆಯಲ್ಲೇ ಸರಳವಾಗಿ ಬೆರೆತು ನಗುನಗುತ್ತಾ ಉಪಾಹಾರ ಸೇವಿಸುವ ಅವರ ನಡೆ, ನಮ್ಮೊಳಗಿನ ಅಹಂಕಾರವನ್ನು ಅಳಿಸಿಹಾಕುತ್ತದೆ.
ಸಂಪರ್ಕಕ್ಕೆ ಬಂದ ನಂತರ ಆಗಾಗ್ಗೆ ದರ್ಶನ ಪಡೆದು ಚರ್ಚಿಸಬೇಕೆಂಬ ಭಾವ ಬರುವಷ್ಟು ಓದುಗಳಿದ್ದರೂ, ಎಲ್ಲಿಯೂ ಎಲ್ಲೆಮೀರಿ ಚರ್ಚಿಸದ ಇವರ ನಿರ್ಮಲಜ್ಞಾನ ಇವತ್ತಿನ ಅನೇಕರಿಗೆ ಅಗತ್ಯವಿದೆ. ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿ, ‘ನಾಥ ಪರಂಪರೆ’ಯ ಸತ್ಕಾರ್ಯ ಮತ್ತು ಸತ್ಕರ್ಮಗಳನ್ನು ಹೊದ್ದಿರುವ ಧರ್ಮಪೀಠವಾದ ಆದಿಚುಂಚನಗಿರಿಯು ಭೈರವನ ಆರಾಧನಾ ಶಕ್ತಿಕೇಂದ್ರ. ಬೆಟ್ಟದ ಮೇಲ್ಭಾಗದಲ್ಲಿ ಕ್ಷೇತ್ರಾಧಿದೇವತೆ ಶ್ರೀ ಗಂಗಾಧರೇಶ್ವರ, ಶ್ರೀ ಗವಿಸಿದ್ದೇಶ್ವರ, ಶ್ರೀ ಚಂದ್ರಮೌಳೀಶ್ವರ, ಶ್ರೀ ಮಲ್ಲೇಶ್ವರ, ಶ್ರೀ ಸೋಮೇಶ್ವರ ಸ್ವಾಮಿಯ ಸಾನ್ನಿಧ್ಯಗಳಿವೆ.
ಬಂಡೆ-ಹೆಬ್ಬಂಡೆಗಳಿಂದ ವರ್ತುಲಾಕಾರವಾಗಿ, ಚಾವಣಿ ರೂಪದಲ್ಲಿ ಚಾಚಿಕೊಂಡು ಒಪ್ಪಾರಿನ ತುದಿಗಳಂತೆ ಬೆಟ್ಟ ಕಂಡುಬರುತ್ತದೆ. ೧೦೫ ಅಡಿ ಎತ್ತರವಿರುವ ಗಳಿಗಲ್ಲು ಪಕ್ಷಿಯ ಕೊಕ್ಕಿನಾಕಾರದಲ್ಲಿದೆ. ಆದ್ದರಿಂದ ‘ಚುಂಚ’ ಶಬ್ದಾರ್ಥಕ್ಕೆ
ಅನುಗುಣವಾಗಿ ‘ಚುಂಚನಗಿರಿ’ ಎಂದು ಪ್ರಖ್ಯಾತಿ ಹೊಂದಿದೆ ಎಂಬುದು ಇತಿಹಾಸಕಾರರ ಅಭಿಪ್ರಾಯ. ಆದಿರುದ್ರನಿಂದ
ಸ್ಥಾಪಿತವಾದ ಕಾರಣ ‘ಆದಿಚುಂಚನಗಿರಿ’ ಎಂಬ ಹೆಸರು ಗುರುತಿಸಲ್ಪಟ್ಟಿತು. ಇದು ಪುರಾಣ, ಪ್ರಾಚೀನ ಇತಿಹಾಸ, ನಾಥ ಪರಂಪರೆ ಹಾಗೂ ಬಹುಸಂಸ್ಕೃತಿಯನ್ನು ಒಳಗೊಂಡಿದೆ. ಶ್ರೀಮಠದ ಚರಿತ್ರೆ ಹಾಗೂ ಅದರ ವ್ಯಾಪ್ತಿಯನ್ನು ಪ್ರಾಚೀನ, ಮಧ್ಯಕಾಲೀನ, ಪುನರುಜ್ಜೀವನ ಅಥವಾ ಆಧುನಿಕ ಕಾಲವಾಗಿ ವರ್ಗೀಕರಿಸಿ ತುಲನಾತ್ಮಕವಾಗಿ ವಿಶ್ಲೇಷಿಸಬಹುದು. ಆಗ
ಮಾತ್ರವೇ ಶ್ರೀಮಠದ ಪರಂಪರೆ ಮತ್ತು ಅದರ ಮಹತ್ವ, ಜತೆಗೆ ಶ್ರೀಗಳ ಸಾಧನೆಯನ್ನು ಕಾಣಬಹುದಾಗಿದೆ.
ವಿದ್ಯೆ-ಅರಣ್ಯ-ಜ್ಞಾನ-ಜಲಸಂಪತ್ತುಗಳ ಅಭಿವೃದ್ಧಿಯ ಪತಾಕೆಯನ್ನು ಜಗತ್ತಿನೆಲ್ಲೆಡೆಯ ಭಕ್ತರ ಮನದಲ್ಲಿ ಹಾರಾಡುವಂತೆ ಮಾಡುತ್ತಾ, ವಿಜ್ಞಾನಿ-ಸಂತ-ಸಾಹಿತಿ-ಚಿಂತಕರಾಗಿ ಹಾಗೂ ಮುಖ್ಯವಾಗಿ ಶ್ರದ್ಧಾಪೀಠದ ಮಹಾಗುರುಗಳಾಗಿ ಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥರು ಸನ್ಯಾಸಲೋಕವನ್ನು ತಮ್ಮ ಜ್ಞಾನದೀವಿಗೆಯಿಂದ ಬೆಳಗುತ್ತಿದ್ದಾರೆ. ನಮ್ಮ ಹೆಮ್ಮೆಯ ಗುರುಪ್ರಭೆ, ಜ್ಞಾನದೀವಿಗೆ, ಅಧ್ಯಾತ್ಮಿಕತೆಯ ಶುದ್ಧಮನಸ್ಸು ಎಲ್ಲೆಡೆ ನಿರಂತರವಾಗಿ ಪ್ರವಹಿಸಲಿ ಎಂಬುದೇ ಭಕ್ತಹೃದಯಗಳ ಆಶಯ.