Wednesday, 11th December 2024

ದುಡಿಮೆ ಬೇಕಿಲ್ಲ…ದುಡ್ಡು ಮಾತ್ರ ಬೇಕು !

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ನಮ್ಮ ದೇಶದಲ್ಲಿ ನಿರುದ್ಯೋಗವಿಲ್ಲ, ಮೈಗಳ್ಳತನ ಮೈಮನಗಳಲ್ಲಿ ಮನೆ ಮಾಡಿಕುಳಿತಿದೆ. ನಮ್ಮ ಮೈಗಳ್ಳತನವೇ ನಮ್ಮನ್ನು ನಿರುದ್ಯೋಗಿಗಳನ್ನಾಗಿ
ಮಾಡುತ್ತಿದೆ ಎಂಬುದು ನನ್ನ ಸುತ್ತಲಿನವರನ್ನು ನೋಡಿ ನಾನು ಕಂಡುಕೊಂಡ ಸತ್ಯ. ನಮ್ಮ ಸುತ್ತಲಿನವರಲ್ಲಿ ಟೇಲರ್, ಮೆಕ್ಯಾನಿಕ್, ಬಾರ್ಬರ್, ಪೇಂಟರ್, ಕಾರ್ಪೇಂಟರ್, ಕುಕ್, ಹೋಗಲಿ ಚಿಂದಿ ಆರಿಸುವವರು ಕೂಡಾ ಇಂದು ಬಿಜಿ.. ಬಿಜಿ.. ಬಿಜಿ.

ಒಂದು ಚೂರು ಹರಿದ ಬಟ್ಟೆಯನ್ನು ಹೊಲಿಸಲು ನೀವು ಟೇಲರ್ ಬಳಿ ಹೋಗಿ, ನಿಮ್ಮ ಚಪ್ಪಲಿ ಹರಿಯುವಂತೆ ಇಂದು ಬನ್ನಿ, ಸಂಜೆ ಬನ್ನಿ, ನಾಳೆ ಬನ್ನಿ ಎಂದು ನಿಮ್ಮನ್ನು ತಿರುಗಿಸಿ ಕೊನೆಗೂ ಬಟ್ಟೆ ಕೊಟ್ಟಾಗ ನಿಮ್ಮ ಚಪ್ಪಲಿ ನೋಡಿಕೊಳ್ಳಿ. ಇನ್ನು ಕಾರ್ಪೇಂಟರ್‌ಗಳಂತೂ ಮೈಗಾಡ್! ಭಗವಾನ್ ವಿಶ್ವಕರ್ಮರಂತೇ ಮಾಡುತ್ತಾರೆ. ಮನೆ ಬಾಗಿಲು ಮಾಡಲು ಕೊಟ್ಟು ಬಂದರೆ, ನೀವು ಗೃಹಪ್ರವೇಶ ಮಾಡಿದ ಮೂರು ತಿಂಗಳಿಗೆ ಬಾಗಿಲು ಕೊಡುತ್ತಾರೆ. ಇನ್ನು ರೇಡಿಯೋ, ವಾಚ್, ಮೊಬೈಲ್‌ಗಳ ರಿಪೇರಿಯಂತೂ ಕನಸ್ಸಲ್ಲೂ ನೀವು ಊಹಿಸಲಾರಿರಿ.

ತಿರುಗಿಸಿ, ತಿರುಗಿಸಿ ನೋಡಿ ನಿಮ್ಮ ದೇಹದ ಕೀಲುಗಳ ರಿಪೇರಿಗೆ ಹೋಗಬೇಕು. ಕಡೆಗೂ ಇದು ರಿಪೇರಿ ಆಗಲ್ಲ ಸಾರ್, ಹೊಸದು ತಗೊಳ್ಳೊದೇ ಬೆಸ್ಟ್ ಎಂದು, ನಿಮ್ಮ ಮುಂಡಾ ಮೋಚಿ ಬಿಡುತ್ತಾರೆ. ಅಸಲಿಗೆ ಅವನು ನೀವು ರಿಪೇರಿಗೆ ಕೊಟ್ಟ ವಸ್ತುವನ್ನು ಬಿಚ್ಚಿ ನೋಡಿಯೇ ಇರುವುದಿಲ್ಲ ಗೊತ್ತೆ ನಿಮಗೆ? ಯಾಕಯ್ಯಾ ಹೀಗೆ? ಎಂದರೆ ಱಅಯ್ಯೋ ಯಾರು ಬಿಚ್ಚಿ ನೋಡಿ ರಿಪೇರಿ ಮಾಡ್ತಾ ಕೂರ್ತಾರೆ ಸಾರ್, ಹೊಸದು ತಗೊಂಡಾ, ಇದನ್ನ ಬಿಸಾಕಿದಾ ಎಂದು ನಗುತ್ತಾರೆ.

ಹೀಗಾಗುವುದರಿಂದ ಇವರು ಹೊಸದೇನನ್ನೂ ಕಲಿಯುವುದಿಲ್ಲ. ಸ್ವಂತ ಸೃಷ್ಟಿ ಮಾಡುವುದಿಲ್ಲ. ಸಂಶೋಧನೆ, ಆವಿಷ್ಕಾರ ಎಂಬುದು ಕನಸಿನ ಮಾತೇ, ಇವರ ಮೈಗಳ್ಳತನ ನೋಡಿಯೇ ಚೀನಾ ಇಪ್ಪತ್ನಾಲ್ಕು ಗಂಟೆಗಳ ಒಳಗೆ ಕೆಟ್ಟು ಮೂಲೆ ಸೇರುವ, ಮತ್ತೆ ಹೊಸದನ್ನು ಕೊಂಡುಕೊಳ್ಳುವ ವಸ್ತುಗಳನ್ನು ಮೈಗಳ್ಳರ ಈ ಭಾರತಕ್ಕೆ ಪೂರೈಸಿ ದುಡ್ಡುಮಾಡಿಕೊಂಡಿತು. ಕೆಲವು ಶೋ ರೂಂಗಳಲ್ಲಿ ಇಲ್ಲಿ ರಿಪೇರಿಯನ್ನು ಮಾಡಲಾಗುತ್ತದೆ ಎಂದು ಒಂದು ಕೌಂಟರ್ ಮಾಡಿ, ಅಲ್ಲಿ ಒಬ್ಬ ಮುದುಕನನ್ನು ಕೂಡಿಸಿರುತ್ತಾರೆ. ಆತನ ಕೆಲಸ, ರಿಪೇರಿಗೆ ಬಂದವರನ್ನು ಮೂರು, ನಾಲ್ಕು ಸಾರಿ ಓಡಾಡಿಸಿ ಇದು ಮೇಲಿಂದ ಬಿದ್ದಿತ್ತಾ? ನೀರೊಳಗೇನಾದರೂ
ಬಿದ್ದಿತ್ತಾ? ಮಕ್ಕಳ ಕೈಗೆ ಕೊಟ್ಟಿದ್ದೀರಾ? ಎಲ್ಲಿ ತಗೊಂಡಿದ್ದು? ಒಳಗಿನ ಪಾರ್ಟ್ಸ್ ಎಲ್ಲ ಡೂಬ್ಲಿಕೇಟ್, ನೀವು ಹೊಸದು ತೊಗೊಳ್ಳೊದೇ ಬೆಸ್ಟ್‌ೞ ಎಂದು ಹೇಳಿ ಜಾಗ ಕೊಟ್ಟು ಕೂರಿಸಿದ ಶೋ ರೂಂಗೆ ಗಿರಾಕಿಯನ್ನು ಕೊಡಿಸುವುದು, ಆಮೇಲೆ ಆತ ಹಳೆಯದನ್ನು ನೀವೆ ಇಟ್ಟುಕೊಳ್ಳಿ ಎಂದರೆ ಅದರ ಪಾರ್ಟ್ಸ್‌ಗಳಿಂದಲೇ ಇನ್ನೊಂದನ್ನು ಹಳೆ ಮುದುಕಿಯನ್ನು ಬ್ಯೂಟಿ ಪಾರ್ಲರ್‌ನಲ್ಲಿ ಸಿಂಗರಿಸುವಂತೆ ಸಿಂಗರಿಸಿ ಕನ್ಯೆಯನ್ನು ಮಾಡಿ ಮತ್ತೊಬ್ಬನ ಕೊರಳಿಗೆ ಕಟ್ಟುವುದು ಆತನ ಕೆಲಸ.

ಹೀಗಾಗಿಯೇ ಸ್ವಾವಲಂಬಿಯಾಗಿದ್ದ, ಜಗತ್ತಿಗೆ ಗುರುವಾಗಿದ್ದ, ಭಾರತ ಇಂದು ಕಂಡ ಕಂಡ ದುರುಳ, ದುಷ್ಟರನ್ನು ತುಂಬಿಕೊಂಡ ತಿಪ್ಪೆಗುಂಡಿಯಂತಾಗಿದೆ.
ಕೆಲಸವಿಲ್ಲ, ಎಲ್ಲಾ ಬಂದ್, ದುಡಿಮೆ ಇಲ್ಲ ಅನ್ನೊ ಎಲ್ಲರೂ ಕೆಲಸಕೊಟ್ಟರೂ ಮಾಡದ ಸ್ಥಿತಿ ತಲುಪಿದ್ದಾರೆ. ಮೈ ತುಂಬಾ ಕೆಲಸವಿಟ್ಟುಕೊಂಡು ಮೊಬೈಲ್ ವಾಟ್ಸಪ್ ನೋಡುತ್ತಾ ಕಾಲ ಕಳೆಯುವ ಟೇಲರ್, ಪೇಂಟರ್‌ಗಳನ್ನು ನೋಡುತ್ತಿದ್ದೇನೆ. ಇನ್ನು ಟೂ ವ್ಹೀಲರ್, ಫೋರ್ ವ್ಹೀಲರ್ ಗಾಡಿಗಳನ್ನು ಶೂ ರೂಂ ಗಳಿಗೆ ಬಿಟ್ಟು ಬಂದರೆ ಅವು ಎಂಟೆಂಟು ದಿನ ಬಿಸಿಲಿನಲ್ಲಿಯೇ ಕರಗಿ ಮಾಯವಾದರೂ ಆಶ್ಚರ್ಯವಿಲ್ಲ.

ಇನ್ನು ಕೆಲವು ಮಾರವಾಡಿಗಳ ಸ್ಟೇಷನರಿ ಅಂಗಡಿಗಳನ್ನು ನೋಡಿದ್ದೇನೆ, ಅಲ್ಲೂ ಇಬ್ಬರು, ಮೂವರು ಹುಡುಗರು ಕೆಲಸಕ್ಕಿರುತ್ತಾರೆ. ಆ ಮೂರೂ ಮಂದಿಯ ಮುಂದೆ ಹೋಗಿ ಅವರ ಮುಂದೆ ನಿಂತುಕೊಂಡರೆ ಅವರು ಅರ್ಧತಾಸಿನ ಮೇಲೆ ತಮ್ಮ ಮೊಬೈಲ್‌ನಿಂದ ಕತ್ತನು ಎತ್ತಿ ನಿಮ್ಮನ್ನು ನೋಡಿ ಹುಬ್ಬು ಹಾರಿಸಿ ಏನು? ಯಾಕೆ ಬಂದಿರಿ ಅಂಗಡಿ ಒಳಗೆ? ಎಂಬಂತೆ ನೋಡುತ್ತಾರಾಗಲಿ, ಒಬ್ಬ ಗಿರಾಕಿ ಬಂದ, ಅವನಿಗೆ ಬೇಕಾದ್ದನ್ನು ಕೊಡೋಣ ಎಂಬ ಉಮೇದು, ಅವಶ್ಯಕತೆ ಅವರಿಗೆ ಕಂಡುಬರುವುದೇ ಇಲ್ಲ, ಅಷ್ಟಾಗಿಯೂ ನೀವು ನಿಮಗೆ ಬೇಕಾದ ವಸ್ತುವನ್ನು ಕೇಳಿದರೆ, ನೋಡದೇ, ಹುಡುಕದೇ ಅದು ಇಲ್ಲ ಎಂದೇ ಹೇಳಿ ತಕ್ಷಣ ನಿಮ್ಮನ್ನು
ಸಾಗ ಹಾಕುತ್ತಾರೆ, ಯಥಾಪ್ರಕಾರ ಮೊಬೈಲ್‌ನಲ್ಲಿ ಬಿಜಿ ಯಾಗುತ್ತಾರೆ.

ಅಂಗಡಿ ತುಂಬಾ ಮಾಲುಗಳಿದ್ದರೂ ನಾವು ಕೇಳಿದ ವಸ್ತು ಮಾತ್ರ ನಮಗೆ ಸಿಗುವುದಿಲ್ಲ. ನಮ್ಮೂರಿನ ಒಂದು ಸ್ಟೇಷನರಿ ಅಂಗಡಿಯಲ್ಲಿ ಒಬ್ಬ ಮಾರವಾಡಿ ದಶಕಗಳಿಂದ ಕೂತಲ್ಲೇ ಕೂತು, ಮುದುಕನಾಗಿ ಹೋಗಿದ್ದಾನೆ. ಅವನ ಅಂಗಡಿಯಲ್ಲಿ ಒಂದು ಸಾಮಾನು ಇದ್ದಲ್ಲಿಂದ ಇವತ್ತಿನವರೆಗೂ ಕದಲಿಲ್ಲ, ಆದರೂ ಕಂತೆ ಕಂತೆ ನೋಟು ಎಣಿಸುತ್ತಿರುತ್ತಾನೆ, ಬ್ಯಾಂಕಿನಲ್ಲಿ ಅದನ್ನು ತುಂಬಲು ಕ್ಯೂ ನಿಂತಿರುತ್ತಾನೆ. ಈ ಅಂಗಡಿಯಲ್ಲಿ ಏನು ಕೇಳಿದರೂ ಸಿಗುವುದಿಲ್ಲ ಎಂದು ಜನ ಅವನ ಅಂಗಡಿಗೆ ಹೋಗುವುದನ್ನು ಬಿಟ್ಟರೂ ಅವನು ಚಿಂತಿಸಿಲ್ಲ, ಕೊರಗಿಲ್ಲ, ಅಂಗಡಿಯನ್ನೂ ಬಂದು ಮಾಡಿಲ್ಲ. ಇವು ಬಹುಶಃ ಈ ದೇಶದ ಅದ್ಭುತಗಳೇ ಸರಿ.

ಹೀಗಾಗಿಯೇ ಮಾಲ್‌ಗಳು ಬಂದವು. ಇಂಥ ಮಾಲುಗಳು ಬಂದರೂ ಆ ಶೇಟ್‌ಜೀಗಳು ಅಂಗಡಿಗಳನ್ನು ಮುಚ್ಚಿಲ್ಲ. ಬಹುಶಃ ಮನೇಲಿ ಉಂಡು ಬಂದು ರಸ್ತೆಯಲ್ಲಿ
ಕೂರಲು, ತೂಕಡಿಸಲು ಅಂಗಡಿ ತೆರೆದಿದ್ದಾರೇನೋ ಎನಿಸುತ್ತಿದೆ. ಏನು ಈಗ ನಿತ್ಯೋತ್ಸವ, ನಿತ್ಯ ವೈಭವದ ಬಿಜಿನೆಸ್ ಎಂದರೆ ಹೋಟೆಲ್, ದರ್ಶಿನಿ, ಲಂಚ್ ಹೋಮ್ ಎಂಬ ತಿಂಡಿತಿನಿಸು, ಪಾನೀಯಗಳ ಅಂಗಡಿಗಳದೇ ದರ್ಬಾರು. ಅದು ಬಿಟ್ಟರೆ ಬಾರ್‌ಗಳು, ಇವಂತೂ ಹಣದ ಅಧಿದೇವತೆ ಲಕ್ಷ್ಮೀಯನ್ನು ಹೆಡೆಮುರಿಗೆ ಕಟ್ಟಿ ಇವುಗಳಲ್ಲಿ ಕೂಡಿ ಹಾಕಿಕೊಂಡಿದ್ದಾರೆನ್ನಬಹುದು. ಇಲ್ಲಿನ ಗಿರಾಕಿಗಳು ಸಪ್ಲೈ ಮಾಡುವವರಿಂದ ಬೈಯ್ಯಿಸಿ, ಹೊಡೆಸಿ, ಒದೆಯಿಸಿಕೊಂಡಾದರೂ ತಿಂದು ಕುಡಿದು ಬರುತ್ತಾರೆ.

ಇದು ಬಿಟ್ಟರೆ ಮೆಡಿಕಲ್ ಶಾಪ್, ಔಷಧಿ ಅಂಗಡಿಗಳು ಇಲ್ಲೂ ಫುಲ್ ಕ್ಯೂ. ಸಿಕ್ಕಸಿಕ್ಕದ್ದು ತಿಂದು, ಕಂಡಕಂಡದ್ದು ಕುಡಿದರೆ ಮೆಡಿಕಲ್ ಶಾಪ್ ಮುಂದೆ ಕ್ಯೂ ಖಂಡಿತ ತಾನೆ? ಅಬ್ಬಬ್ಬಾ, ಒಂದು ಕಾಲದ ಯೋಗಿ, ಋಷಿ ಮುನಿಗಳ ಬೀಡಾದ, ದೇವತೆಗಳನ್ನೇ ಸಾಕ್ಷಾತ್ಕರಿಸಿಕೊಳ್ಳುತ್ತಿದ್ದ ಎಲ್ಲೆಲ್ಲೂ ಹೋಮದ ಹೊಗೆ, ಮಂತ್ರ, ಸ್ತೋತ್ರಗಳ ಕಲರವ ಕೇಳುತ್ತಿದ್ದ ಈ ಭಾರತದ ಪುಣ್ಯಭೂಮಿಯಲ್ಲಿಂದು ಫ್ಯಾಕ್ಟರಿಗಳ ಹೊಗೆ, ಹೊಡಿ, ಬಡಿ ಕಡಿ ಎಂಬ ಭಯದ ನಡುವೆ ಜೀವಿಸಬೇಕಿದೆ.
ಎದುರಿಗೆ ನಿಂತವನು ನನ್ನಂತೆಯೇ ಮನುಷ್ಯ ಎಂಬುದು ಹೋಗಿ, ನನ್ನಲ್ಲಿರುವ ಪ್ರಾಣ, ಹಣ, ವಾಹನ ಎಲ್ಲಿ ಕಿತ್ತುಕೊಳ್ಳುತ್ತಾನೋ ಎನಿಸಿಬಿಟ್ಟಿದೆ.

ಯಾರನ್ನು ನೋಡಿದರೂ ಅವಸರ, ಅತಿವೇಗ, ತನ್ನ ಕೆಲಸ ಮುಗಿದರೆ ಸಾಕು, ತನಗೆ ಸಿಕ್ಕರೆ ಸಾಕು ಎಂಬ ರಣಹದ್ದುಗಳ ಮನೋಭಾವ, ಭಾಗವತವನ್ನು ಓದುವಾಗ ಅದರ ಅಧ್ಯಾಯದ ಒಂದನೇ ಭಾಗದಲ್ಲಿಯೇ ನಾರದರ ಒಂದು ಪ್ರಸಂಗ ಬರುತ್ತದೆ. ಈ ಪ್ರಸಂಗ ನಡೆದೇ ಸಾವಿರಾರು ವರ್ಷಗಳಾದರೂ ಅದು ಇಂದಿಗೂ ಪ್ರಸ್ತುತವಾಗಿದೆ. ಅದೇನೆಂದರೆ ಆಗಲೇ ಕಲಿಯುಗ ಶುರುವಾಗಿ ನೂರಾರು ವರ್ಷಗಳಾಗಿತ್ತು. ಅತ್ಯಂತ ಸುಂದರಿಯಾದ ಹೆಣ್ಣು ಮಗಳೊಬ್ಬಳು ಪ್ರಜ್ಞೆ ತಪ್ಪಿದ ಇಬ್ಬರು ವೃದ್ಧರ ಮಧ್ಯೆ ಕುಳಿತು ದೀರ್ಘವಾಗಿ ಉಸಿರುಬಿಡುತ್ತಿದ್ದ ಅವರನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತಿದ್ದಳು. ಅವಳ ಸುತ್ತಲೂ ಅನೇಕ ಸ್ತ್ರೀಯರು ಆಕೆಗೆ ಗಾಳಿ ಬೀಸುತ್ತಾ ಸಮಾಧಾನಪಡಿಸುತ್ತಿದ್ದರು. ಇದನ್ನು ಕಂಡ ನಾರದರು ಆ ಸ್ಥಳವನ್ನು ಸಮೀಪಿಸಿದ ಕೂಡಲೇ ಆಕೆ ಎದ್ದು ನಿಂತು ನಾರದರಿಗೆ ನಮಸ್ಕರಿಸಿ, ’ನಿಮ್ಮ ದರ್ಶನವು ಲೋಕದ ಪಾಪಗಳನ್ನು ನಿಶ್ಚಯವಾಗಿ ನಾಶ ಮಾಡುತ್ತದೆ’ ಎಂದಳು.

ನಾರದರು ಱತಾಯಿ ನೀನಾರು? ಈ ವೃದ್ಧರು ಯಾರು ಎಂದಾಗ ಆಕೆ ನಾನು ಭಕ್ತಿ ಎಂಬ ಹೆಸರಿನ ಹೆಣ್ಣುಮಗಳು. ಈ ಇಬ್ಬರು ವೃದ್ಧರು ನನ್ನ ಮಕ್ಕಳ ಜ್ಞಾನ ಮತ್ತು ವೈರಾಗ್ಯ ಅಂತ ಹೆಸರು, ಈ ನನ್ನ ಮಕ್ಕಳು ಕಾಲಗತಿಯ ಪ್ರಭಾವದಿಂದ ಜರ್ಜರಿತರಾಗಿದ್ದಾರೆ. ನನಗೆ ಗಾಳಿ ಬೀಸುತ್ತಾ, ನೀರು ಕುಡಿಸುತ್ತಾ ಇರುವ ಈ ಸೀಯರು ಬೇರಾರೂ ಅಲ್ಲ, ಸಾಕ್ಷಾತ್ ಗಂಗೆಯೇ ಮೊದಲಾದ ಪುಣ್ಯ ನದಿಗಳು, ಸಾಕ್ಷಾತ್ ಈ ದೇವಿಯರೇ ನನ್ನ ಸೇವೆ ಮಾಡುತ್ತಿದ್ದರೂ ನನಗೆ ಮನಃಶಾಂತಿ ಯಿಲ್ಲವಾಗಿದೆ. ಕಾರಣ ಗೊತ್ತೆ? ಭಕ್ತಿ ಎಂಬ ನಾನು ದ್ರಾವಿಡ ದೇಶದಲ್ಲಿ ಜನಿಸಿದೆ. ಕರ್ನಾಟಕದಲ್ಲಿ ಬೆಳೆದೆ.

ಮಹಾರಾಷ್ಟ್ರದ ಕೆಲವು ಕಡೆಗಳಲ್ಲಿ ಪುಷ್ಪಿ ಹೊಂದಿದೆ. ಕೊನೆಗೆ ಗುಜಾರಾತಿನಲ್ಲಿ ವೃದ್ಧಾಪ್ಯ ಹೊಂದಿದೆ. ಅಲ್ಲಿ ಭಯಂಕರ ಕಲಿಯುಗದಿಂದಾಗಿ ಜನರು ನಾಸ್ತಿಕರಾಗಿ ನನ್ನ ಅಂಗಾಂಗಳನ್ನು ಕತ್ತಿರಿಸಿ ಹಾಕಿದರು ಎಂದು ಅಳುತ್ತಾ ನಾನು ಈ ಕೃಷ್ಣನ ವೃಂದಾವನಕ್ಕೆ ಬಂದ ಮೇಲೆ ಯೌವ್ವನ ಭರಿತಳಾದೆ. ಆದರೆ ಈ ನನ್ನ ಮಕ್ಕಳಾದ ಜ್ಞಾನ, ವೈರಾಗ್ಯಗಳು ಪೂರ್ತಿ ಹಾಸಿಗೆ ಹಿಡಿದರು ಎಂದು ಹೇಳುತ್ತಾಳೆ. ಈ ಕಥೆಯ ಸಾರಾಂಶ ನಿಮಗೆ ಅರ್ಥವಾಗಿರಬಹುದು. ನಮ್ಮಲ್ಲಿ ಹೀಗಿರುವು ದೆಲ್ಲ ಮೂಢ ಭಕ್ತಿ. ಕೈಮುಗಿದರೆ ಸಾಕು, ಕಾಯಿ ಒಡೆಸಿದರೆ ಸಾಕು, ದೇವರ ಹೆಸರಿಗೆ ನೈವೇದ್ಯ ಮಾಡಿ ನಾವು ತಿಂದರೆ ಸಾಕು ಎಂಬ ಮನೋಭಾವವೇ ಜನರಲ್ಲಿ
ಹೆಚ್ಚಿ ಯಾರಲ್ಲಿಯೂ ಕಿಂಚಿತ್ತು ಸಮಾಜದ ಬಗ್ಗೆ, ಧರ್ಮದ ಬಗ್ಗೆ ಜ್ಞಾನವೇ ಇಲ್ಲ. ಇಂದು ವೈರಾಗ್ಯವಂತೂ ಹೇಳಲೇಬೇಡಿ.

ಎಂಭತ್ತು – ತೊಂಭತ್ತರ ವೃದ್ಧರೂ ಕೂಡ ಮಂತ್ರಿಯಾಗುತ್ತೀಯಾ ಎಂದರೆ ಎದ್ದು ನಿಲ್ಲುತ್ತಾರೆ. ಮದುವೆಯಾಗುತ್ತಿಯಾ ಎಂದರೆ ಕುಣಿಯುತ್ತಾರೆ. ಪರೋಪಕಾರ ಬುದ್ಧಿಯಂತೂ ಇಲ್ಲವೇ ಇಲ್ಲ. ಮಾನವೀಯತೆ ಸತ್ತೇ ಹೋಗಿದೆ. ಹಣ ಮಾಡುವುದೇ ಬಹುದೊಡ್ಡ ಕಾರ್ಯವಾಗಿದೆ. ಹಣದಿಂದಲೇ ನಾವು ದೇವರನ್ನುಕೊಳ್ಳ ಬಲ್ಲೆವು. ಸತ್ಯದ ಬಾಯಿ ಮುಚ್ಚಿಸಬಲ್ಲೆವು ಎಂದು ಭಾವಿಸಿಬಿಟ್ಟಿದ್ದಾರೆ. ಇದರ ಪರಿಣಾಮವಾಗಿಯೇ ಕರೋನಾದಂಥ ಈ ಮಹಾಮಾರಿ ಎರಡು ವರ್ಷಗಳಿಂದ ನಮ್ಮನ್ನು ಪೀಡಿಸುತ್ತಿದೆ. ಇದು ಮಾನವ ಕುಲದ ವಿನಾಶದ ಸೂಚನೆ ಎಂಬ ಜ್ಞಾನವೂ ಇಲ್ಲದ ಕೆಲವರು ಬಂದ ಈ ರೋಗವನ್ನೂ ಕೂಡ ಕ್ಯಾಶ್ ಮಾಡಿಕೊಳ್ಳಲು ಹೋರಾಡುತ್ತಿರುವುದಂತೂ ಇನ್ನೂ ಶೋಚನೀಯವಾದುದು.

ಪುರಾಣ, ಪುಣ್ಯಕಥೆಗಳು, ಗತ ಇತಿಹಾಸಗಳು ಇವರಿಗೆ ಬುದ್ಧಿ ಕಲಿಸಲಿಲ್ಲವೆಂದರೆ ಇವರನ್ನು ಯಾರೂ ಎತ್ತಿ ಹಿಡಿಯಲು ಸಾಧ್ಯವಿಲ್ಲ. ಆದರೆ ಒಂದು ಮಾತ್ರ ನೆನಪಿಡಿ, ಧರ್ಮ, ಮಾನವೀಯತೆಗಳ ಮುಂದೆ ಈ ಜಗತ್ತಿನಲ್ಲಿ ಬೇರಾವ ಬದುಕುವ ಸಾಧನಗಳೂ ಇಲ್ಲ. ಧರ್ಮದ ದುಡಿಮೆ ಬೇಕಿಲ್ಲ, ದುಡ್ಡು ಮಾತ್ರ ಹೇಗೆ ಬಂದರೂ ಸರಿ ಎಂಬ ಈ ಮನೋಭಾವ ಮನುಷ್ಯರಲ್ಲಿ ಹೋಗುವವರೆಗೂ ಈ ದೇಶಕ್ಕಲ್ಲ, ಇಡೀ ಜಗತ್ತಿಗೆ ಕಷ್ಟ ತಪ್ಪಿದ್ದಲ್ಲ.