Wednesday, 11th December 2024

ಹೆಪಟೈಟಿಸ್ ಸಿ ಸಂಶೋಧಕರಿಗೆ ನೊಬೆಲ್

ವೈದ್ಯ ವೈವಿಧ್ಯ

ಡಾ.ಹೆಚ್.ಹೆಸ್.ಮೋಹನ್

ಈ ವರ್ಷದ ವೈದ್ಯಕೀಯ ಶಾಸ್ತ್ರದ ನೊಬೆಲ್ ಪಾರಿತೋಷಕವು ಮೂರು ವಿಜ್ಞಾನಿಗಳಿಗೆ ಸಂದಿದೆ. ಅವರುಗಳು ಲಿವರ್ ಅಥವಾ ಯಕೃತ್ತಿಗೆ ಸೋಂಕು ತಂದು ಅದನ್ನು ಹಾಳುಗೆಡವುವ ಹೆಪಟೈಟಿಸ್ ಸಿ ವೈರಸ್‌ನ್ನು ಸಂಶೋಧನೆ ಮಾಡಿದ್ದಕ್ಕೆ ಈ ಪ್ರಶಸ್ತಿ ನೀಡಲಾಗಿದೆ.

ಅವರುಗಳೆಂದರೆ ಹಾರ್ವೆ ಜೆ ಆಲ್ಟರ್, ಮೈಕೆಲ್ ಹೂಟನ್ ಮತ್ತು ಚಾಲ್ಸ ಎಂ ರೈಸ್. ಇವರುಗಳ ಈ ಸಂಶೋಧನೆಗಿಂತ ಮೊದಲು ಹೆಪಟೈಟಿಸ್ ಎ ಮತ್ತು ಹೆಪಟೈಟಿಸ್ ಬಿ – ಈ ಎರಡು ವೈರಸ್‌ಗಳ ಸಂಶೋಧನೆಗಳಾಗಿ ಅವುಗಳು ಉಂಟುಮಾಡುವ ಹೆಪಟೈಟಿಸ್ ಸೋಂಕಿನ ಬಗ್ಗೆ ತಿಳಿದಿತ್ತು. ಆದರೂ ಹಲವಾರು ರೀತಿಯ ರಕ್ತದಿಂದ ಹರಡುವ ಹೆಪಟೈಟಿಸ್ ಬಗ್ಗೆ ವಿಜ್ಞಾನಿಗಳಲ್ಲಿ ಸೂಕ್ತವಾದ ಉತ್ತರ ಇರಲಿಲ್ಲ.

ಇವರುಗಳ ಸಂಶೋಧನೆಯ ಫಲವಾಗಿ ಈ ಹೆಪಟೈಟಿಸ್ ಸಿ ವೈರಸ್ ಬಗ್ಗೆ ಗೊತ್ತಾಯಿತು. ಹಾಗಾಗಿ ವಿವರಿಸಲು ಸಾಧ್ಯವಿಲ್ಲದ ಎಷ್ಟೋ ಲಿವರ್‌ನ ದೀರ್ಘಕಾಲೀನ ಸೋಂಕಿನ ಬಗ್ಗೆ ಸರಿಯಾದ ಅರಿವು ಮೂಡಿತು. ಅದರ ನಂತರ ಅವುಗಳಿಗೆ ಬೇಕಾದ ಸೂಕ್ತ
ಪರೀಕ್ಷೆ ಮತ್ತು ಹೊಸ ಔಷಧಗಳನ್ನು ಕಂಡು ಹಿಡಿಯಲಾಯಿತು. ಇವೆಲ್ಲವುಗಳ ಫಲವಾಗಿ ಕೋಟ್ಯಂತರ ಜೀವ ಉಳಿಯಿತು ಎಂಬುದು ವಸ್ತುಸ್ಥಿತಿ.

ಹೆಪಟೈಟಿಸ್ – ಜಾಗತಿಕ ಬೆದರಿಕೆ : ಲಿವರ್ ಅಥವಾ ಯಕೃತ್ತಿನ ಸೋಂಕಿಗೆ ಹೆಚ್ಚಿನ ಸಂದರ್ಭಗಳಲ್ಲಿ ವೈರಸ್ ಸೋಂಕೇ ಕಾರಣ. ಆದರೂ ವಿಪರೀತ ಮದ್ಯಪಾನದಿಂದ ಬರುವ ತೊಂದರೆ, ವಾತಾವರಣದ ವಿಷವಸ್ತುಗಳು ಮತ್ತು ಆಟೋ ಇಮ್ಯೂನ್ ಕಾಯಿಲೆಗಳು – ಸಹಿತ ಲಿವರ್‌ಗೆ ಸೋಂಕು ತರಬಲ್ಲದು. ೧೯೪೦ರ ದಶಕದ ಹೊತ್ತಿಗೆ ಮುಖ್ಯವಾಗಿ ಎರಡು ರೀತಿಯ ಲಿವರ್
ಸೋಂಕುಗಳಿವೆ ಎಂಬುದು ಗೊತ್ತಾಯಿತು. ಮೊದಲನೆಯದು ಜನಸಾಮಾನ್ಯರ ಭಾಷೆಯಲ್ಲಿ ಜಾಂಡಿಸ್ ಕಾಯಿಲೆ. ಕಲುಷಿತ ನೀರು ಮತ್ತು ಆಹಾರದಿಂದ ಬರುವಂತಹದ್ದು. ವೈದ್ಯಕೀಯವಾಗಿ ಇದನ್ನು ನಾವು ಹೆಪಟೈಟಿಸ್ ಎ ಎನ್ನುತ್ತೇವೆ. ಇದು ರೋಗಿಯ ಮೇಲೆ ದೀರ್ಘಕಾಲದ ಪರಿಣಾಮ ಬೀರುವುದಿಲ್ಲ.

ಎರಡನೆಯ ರೀತಿಯದು ರಕ್ತ ಮತ್ತು ಇತರ ದೈಹಿಕ ದ್ರವಗಳ ಮೂಲಕ ಹರಡುತ್ತದೆ. ಇದು ತುಂಬಾ ಗಂಭೀರವಾದುದು. ಏಕೆಂದರೆ ಇದು ದೀರ್ಘಕಾಲ ಲಿವರ್ ಸೋಂಕು ಉಂಟು ಮಾಡಿ ಲಿವರ್‌ಗೆ ಸಿರೋಸಿಸ್ ಅಥವಾ ಲಿವರ್ ಕ್ಯಾನ್ಸರ್ ತರಬಲ್ಲದು. ಇದು ನಿಧಾನವಾಗಿ ಗೊತ್ತಾಗುವ ಕಾಯಿಲೆ, ಆರೋಗ್ಯವಂತ ಮನುಷ್ಯರಲ್ಲಿ ಏನೂ ಲಕ್ಷಣಗಳಿಲ್ಲದೆ ಹಲವು ವರ್ಷಗಳ ಕಾಲ ಇರಬಲ್ಲದು. ನಂತರ ಗಂಭೀರ ತೊಡಕುಗಳನ್ನು ಉಂಟು ಮಾಡಬಲ್ಲದು. ರಕ್ತದಿಂದ ಹರಡುವ ಈ ಹೆಪಟೈಟಿಸ್ ಬಿ ಹಲವು ರೀತಿಯ ತೊಂದರೆ ಉಂಟುಮಾಡಿ ಜಗತ್ತಿನಾದ್ಯಂತ ಪ್ರತಿ ವರ್ಷ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರ ಸಾವಿಗೆ ಕಾರಣ ವಾಗುತ್ತದೆ. ಹಾಗಾಗಿ ಜಗತ್ತಿನ ಇತರ ಗಂಭೀರ ಆರೋಗ್ಯ ಸಮಸ್ಯೆಗಳಾದ ಎಚ್‌ಐವಿ – ಏಡ್ಸ್ ಮತ್ತು ಕ್ಷಯರೋಗ ಇವುಗಳ ಜತೆಗೆ ಇದೂ ತುಂಬಾ ಗಂಭೀರ ಕಾಯಿಲೆ ಎಂದು ಪರಿಗಣಿಸಲಾಗಿದೆ.

ಸೋಂಕಿನ ಅಪರಿಚಿತ ಜೀವಿ : ಯಾವುದೇ ಸೋಂಕಿನ ಕಾಯಿಲೆಗೆ ಚಿಕಿತ್ಸೆ ಮಾಡುವ ಮೊದಲು ಅದನ್ನು ಉಂಟುಮಾಡುವ
ಜೀವಿಯ ಬಗ್ಗೆ ಸರಿಯಾದ ತಿಳಿವಳಿಕೆ ಇರಬೇಕು. ೧೯೬೦ರ ದಶಕದಲ್ಲಿ ಬಾರುಷ್ ಬ್ಲುಂಬರ್ಗ್ ಎಂಬ ವೈದ್ಯ ವಿಜ್ಞಾನಿ ರಕ್ತದಿಂದ ಹರಡುವ ಈ ಲಿವರ್‌ನ ವೈರಸ್ ಸೋಂಕು ಹೆಪಟೈಟಿಸ್ ಬಿ ವೈರಸ್‌ನಿಂದ ಉಂಟಾಗುತ್ತದೆ ಎಂಬುದನ್ನು ಕಂಡು ಹಿಡಿದ. ಅದರ
ನಂತರ ಅದನ್ನು ಕಂಡು ಹಿಡಿಯಲು ಅಗತ್ಯವಾಗಿ ಬೇಕಾದ ರಕ್ತ ಪರೀಕ್ಷೆ ಮತ್ತು ಲಸಿಕೆ ಕಂಡು ಹಿಡಿಯಲ್ಪಟ್ಟವು. ಆತನ ಈ ಸಂಶೋಧನೆಗೆ ೧೯೭೬ರಲ್ಲಿ ಬ್ಲೂಂಬರ್ಗ್‌ಗೆ ವೈದ್ಯಕೀಯ ನೊಬೆಲ್ ಪಾರಿತೋಷಕ ದೊರಕಿತು.

ಆ ಸಂದರ್ಭದಲ್ಲಿ ಹಾರ್ವೆ ಜೆ ಆಲ್ಟರ್ ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆ- ಹೆಲ್ತನಲ್ಲಿ ಬೇರೆಯವರಿಂದ ರಕ್ತ ದಾನವಾಗಿ ಸ್ವೀಕರಿಸಿದವರಲ್ಲಿ ಉಂಟಾಗುವ ಹೆಪಟೈಟಿಸ್ ಬಗ್ಗೆ ಅಧ್ಯಯನ ಮಾಡುತ್ತಿದ್ದನು. ಆಗಷ್ಟೇ ಕಂಡು ಹಿಡಿಯಲ್ಪಟ್ಟಿದ್ದ ಹೆಪಟೈ ಟಿಸ್ ಬಿ ವೈರಸ್‌ನ ಸಂಶೋಧನೆಯಿಂದ ಈ ರೀತಿಯ ಹೆಪಟೈಟಿಸ್‌ನ ಸಂಖ್ಯೆ ಕಡಿಮೆಯಾಗಿದ್ದರೂ ಇನ್ನೂ ಹಲವಾರು ಸಂಖ್ಯೆಯ ಹೆಪಟೈಟಿಸ್ ಸೋಂಕುಗಳು ಉಂಟಾಗುತ್ತಲೇ ಇದ್ದವು. ಆಗ ಹೆಪಟೈಟಿಸ್ ಎ ಕಂಡು ಹಿಡಿಯುವ ನಿರ್ದಿಷ್ಟ ಪರೀಕ್ಷೆಗಳು ರೂಪಿತ ಗೊಂಡಿದ್ದವು. ಅವುಗಳನ್ನು ಮಾಡಲಾಗಿ ಆ ಉಳಿದ ರೋಗಿಗಳು ಹೆಪಟೈಟಿಸ್ ಎ ಅಲ್ಲ ಎಂದು ಗೊತ್ತಾಯಿತು. ಬಹಳಷ್ಟು ಜನ ರಕ್ತವನ್ನು ದಾನವಾಗಿ ಸ್ವೀಕರಿಸಿದವರಲ್ಲಿ ದೀರ್ಘಕಾಲೀನ ಲಿವರ್ ಸೋಂಕು ಕಾಣಿಸಿಕೊಳ್ಳುತ್ತಿದ್ದು ಅದರ ನಿಜವಾದ ಕಾರಣ ವಿವರಿಸಲು ಸಾಧ್ಯವಾಗುತ್ತಿರಲಿಲ್ಲ. ಆಲ್ಟರ್ ಮತ್ತು ಆತನ ಸಹೋದ್ಯೋಗಿಗಳು ಹೀಗೆ ಹೆಪಟೈಟಿಸ್‌ಗೆ ಒಳಗಾದ ರೋಗಿಗಳ ರಕ್ತದಿಂದ ಚಿಂಪಾಂಜಿಗಳಿಗೆ ರೋಗ ಹರಡಬಲ್ಲದು ಎಂಬುದನ್ನು ಕಂಡುಕೊಂಡರು.

ನಂತರ ಕೈಗೊಳ್ಳಲಾದ ಹಲವಾರು ಅಧ್ಯಯನಗಳಿಂದ ಇದೂ ಒಂದು ವೈರಸ್ ಎಂದು ಗೊತ್ತಾಯಿತು. ಆಲ್ಟರ್ ಮತ್ತು ಆತನ ಸಹೋದ್ಯೋಗಿಗಳು ಒಂದು ಶಿಸ್ತುಬದ್ಧ ಸಂಶೋಧನೆ ಕೈಗೊಂಡು ಇದು ಹೆಪಟೈಟಿಸ್ ಎ ಮತ್ತು ಬಿ ಅಲ್ಲದ ಬೇರೆಯ ವೈರಸ್
ಎಂದು ದೃಢಪಡಿಸಿದರು.

ವೈರಸ್ ಗುರುತಿಸುವಿಕೆ: ಈ ಮೂರನೆಯ ವೈರಸನ್ನು ಗುರುತಿಸುವುದು ಈ ಹಂತದಲ್ಲಿ ತುಂಬಾ ಮುಖ್ಯವಾದ ಕೆಲಸವಾಯಿತು.
ವೈರಸ್ ಗುರುತಿಸುವ ಎ ರೀತಿಯ ಪ್ರಯೋಗಗಳನ್ನು ಕೈಗೊಂಡರೂ ಸುಮಾರು ಒಂದು ದಶಕಗಳ (೧೦ ವರ್ಷ) ಕಾಲ ಈ ವೈರಸ್ ‌ನ್ನು ಗುರುತಿಸುವುದು ಕಷ್ಟವಾಯಿತು. ಈ ಹಂತದಲ್ಲಿ ಷಿರಾನ್ ಎಂಬ ಔಷಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೈಕೆಲ್ ಹಾಟನ್ ಈ ವೈರಸ್‌ನ ಜೆನೆಟಿಕ್ ಸೀಕ್ವೆನ್ಸ್ ಮಾಡುವ ಕ್ರಿಯೆಯನ್ನು ಕೈಗೊಂಡರು. ಹಾಟೆನ್ ಮತ್ತು ಅವರ ಸಹೋ ದ್ಯೋಗಿಗಳು ಸೋಂಕಿತ ಚಿಂಪಾಂಜಿಯ ರಕ್ತದಿಂದ ತೆಗೆದ ನ್ಯೂಕ್ಲಿಕ್ ಆಮ್ಲಗಳಿಂದ ಡಿ.ಎನ್.ಎ ತುಣುಕುಗಳನ್ನು ಪುನರಚಿಸಿ ದರು. ಈ ಡಿಎನ್‌ಎ ತುಣುಕುಗಳನ್ನು ವಿವರವಾಗಿ ವಿಶ್ಲೇಷಿಸಲಾಗಿ ಹೆಚ್ಚಿನವು ಚಿಂಪಾಂಜಿಯ ತುಣುಕುಗಳಾದರೂ ಕೆಲವಾ ದರೂ ವೈರಸ್ ಮೂಲದಿಂದ ಬಂದಿರಬೇಕು ಎಂದು ಊಹಿಸಿದರು.

ಹೀಗೆ ಈ ಡಿಎನ್‌ಎಗಳನ್ನು ಉಪಯೋಗಿಸಿ ಹಲವು ರೀತಿಯ ಪ್ರಯೋಗ ನಡೆಸಿ ಇದು ಆರ್‌ಎನ್‌ಎ ಗುಂಪಿನ ವೈರಸ್ ಎಂದು ಗೊತ್ತುಪಡಿಸಿಕೊಂಡರು. ನಂತರದ ಅಧ್ಯಯನದಿಂದ ಇದು ಫ್ಲಾವಿವೈರಸ್ ಗುಂಪಿಗೆ ಸೇರಿದ ಹೆಪಟೈಟಿಸ್ ಸಿ ವೈರಸ್ ಎಂದು
ಗುರುತಿಸಿದರು. ಇದಕ್ಕೆ ಬೇಕಾದ ಪುರಾವೆ ಸೋಂಕಿನ ರೋಗಿಗಳಲ್ಲಿ ಆಂಟಿಬಾಡಿಗಳ ರೂಪದಲ್ಲಿ ದೊರೆಯಿತು.

ಹೆಪಟೈಟಿಸ್ ಸಿ ವೈರಸ್ ಕಂಡು ಹಿಡಿದದ್ದು ತುಂಬಾ ಮುಖ್ಯ ಸಂಶೋಧನೆ ಮತ್ತು ಪ್ರಮುಖವಾದ ಹಂತ. ಹಾಗಾದರೆ ಈ ವೈರಸ್ ಮಾತ್ರವೇ ಈ ಕಾಯಿಲೆ ಉಂಟು ಮಾಡುವುದೇ? ಈ ಹಂತದಲ್ಲಿ ವೈದ್ಯ ವಿಜ್ಞಾನಿಗಳನ್ನು ಕಾಡಿದ್ದು ಈ ಪ್ರಶ್ನೆ. ಇದಕ್ಕೆ ಉತ್ತರ ಹುಡುಕಲು ಕ್ಲೋನ್ ಮಾಡಿ ಈ ವೈರಸ್‌ನ ವೃದ್ಧಿಯಾಗಿ ಕಾಯಿಲೆ ಉಂಟು ಮಾಡುವುದೇ ಎಂಬುದನ್ನು ವಿವರಿಸಲು ಯತ್ನಿಸಿ ದರು. ಈ ಹಂತದಲ್ಲಿ ಮೂರನೆಯ ವಿಜ್ಞಾನಿ ಚಾಲ್ಸ ಎಂ ರೈಸ್ ಅವರು ಸಂಶೋಧನೆಗೆ ಧುಮುಕಿದರು. ಅಮೆರಿಕದ ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮಾಡುತ್ತಿದ್ದ ಇವರು ಆರ್‌ಎನ್‌ಎ ವೈರಸ್ ಬಗ್ಗೆ ಸಂಶೋಧನೆ
ಗೈಯ್ಯುತ್ತಿದ್ದ ಇತರ ವಿಜ್ಞಾನಿಗಳ ಜತೆಗೆ ಸೇರಿಕೊಂಡರು. ಅವರುಗಳು ಹೆಪಟೈಟಿಸ್ ವೈರಸ್‌ನ ಒಂದು ತುದಿಯಲ್ಲಿ ವೈರಸ್ ವೃದ್ಧಿಸಬಹುದು ಎಂದು ಕಂಡುಕೊಂಡರು. ಹಾಗಲ್ಲದೆ ರೈಸ್ ಅವರು ಈ ವೈರಸ್‌ನಲ್ಲಿನ ಹಲವು ಜೆನೆಟಿಕ್ ರೂಪಾಂತರಗಳನ್ನು
ಗುರುತಿಸಿದರು. ಈ ರೀತಿಯ ರೂಪಾಂತರವು ವೈರಸ್ ವೃದ್ಧಿಸುವುದನ್ನು ಕುಂಠಿತಗೊಳಿಸಬಹುದು ಎಂಬ ಥಿಯರಿಯನ್ನು ಮಂಡಿಸಿದರು.

ಇವರು ಜೆನೆಟಿಕ್ ಎಂಜಿನಿಯರಿಂಗ್ ತಾಂತ್ರಿಕತೆಯ ಮೂಲಕ ಹೆಪಟೈಟಿಸ್ ಸಿ ವೈರಸ್‌ನ ಮತ್ತೊಂದು ಆರ್‌ಎನ್‌ಎ  ರೂಪಾಂತರ ವನ್ನು ಹುಟ್ಟು ಹಾಕಿದರು. ಈ ಆರ್‌ಎನ್‌ಎ ಅನ್ನು ಚಿಂಪಾಂಜಿಗಳ ಲಿವರ್‌ಗೆ ಇಂಜೆಕ್ಟ್ ಮಾಡಿದಾಗ ಅವುಗಳ ರಕ್ತದಲ್ಲಿ ವೈರಸ್ ಕಂಡು ಬಂದಿತು. ಹಾಗೆಯೇ ಮನುಷ್ಯರಲ್ಲಿ ಕಂಡುಬರುವ ಕಾಯಿಲೆಯ ಎ ಲಕ್ಷಣಗಳೂ ಇದರಲ್ಲಿ ಕಂಡು ಬಂದವು. ಈ ಎ
ಪ್ರಯೋಗಗಳಿಂದ ರೈಸ್ ಅವರು ಹೆಪಟೈಟಿಸ್ ಸಿ ವೈರಸ್ ಮಾತ್ರವೇ ರಕ್ತ ದಾನದ ಮೂಲಕ ಬರುವ ಹೆಪಟೈಟಿಸ್‌ಗೆ ಕಾರಣ ಎಂದು ದೃಢೀಕರಿಸಿದರು.

ನೊಬೆಲ್‌ಗೆ ಕಾರಣವಾದ ಸಂಶೋಧನೆ ಮಹತ್ವ: ವೈರಸ್ ಕಾಯಿಲೆಗಳ ವಿರುದ್ಧದ ಮನುಷ್ಯನ ಹೋರಾಟದಲ್ಲಿ ಹೆಪಟೈಟಿಸ್ ಸಿ ವೈರಸ್ ಕಂಡು ಹಿಡಿಯುವಿಕೆ ತುಂಬಾ ಗುರುತರವಾದ ಸಾಧನೆ ಎನ್ನಲಾಗಿದೆ. ಅವರುಗಳ ಈ ಅವಿರತ ಶ್ರಮ ಮತ್ತು ಸಂಶೋಧ ನೆಯ ಫಲವಾಗಿ ತುಂಬಾ ಸೂಕ್ಷ್ಮವಾದ ರಕ್ತ ಪರೀಕ್ಷೆಗಳು ಈಗ ಲಭ್ಯವಿವೆ. ಇವು ರಕ್ತದಾನದಿಂದ ಬರಬಹುದಾದ ಹೆಪಟೈಟಿಸ್ ಸೋಂಕನ್ನು ಜಗತ್ತಿನಾದ್ಯಂತ ಹೆಚ್ಚು ಕಡಿಮೆ ಇಲ್ಲದಂತೆ ಮಾಡಿದೆ.

ಹಾಗಾಗಿ ಈ ಕಾರಣದ ಆರೋಗ್ಯ ಸಮಸ್ಯೆಗೆ ಪರಿಹಾರ ದೊರಕಿ, ಇದರಿಂದ ಬರುವ ಆರೋಗ್ಯ ಸಮಸ್ಯೆಗಳು ವಸ್ತುಶಃ ಇಲ್ಲವಾಗಿವೆ.
ಹಾಗೆಯೇ ಹೆಪಟೈಟಿಸ್ ಸಿ ವೈರಸ್‌ಗೆ ಅಗತ್ಯವಿರುವ ವೈರಸ್ ವಿರುದ್ಧದ ಔಷಧದ ಸಂಶೋಧನೆಯನ್ನೂ ಮಾಡಲಾಗಿದೆ. ಹಾಗಾಗಿ
ಜಗತ್ತಿನಾದ್ಯಂತ ಮೊಟ್ಟ ಮೊದಲಬಾರಿಗೆ ಈ ಹೆಪಟೈಟಿಸ್ ಸಿ ಫಲಪ್ರದ ಗುರುತಿಸುವಿಕೆ ಮತ್ತು ಅದಕ್ಕೆ ಚಿಕಿತ್ಸೆ ಈ ಮೂವರ ಸಂಶೋಧನೆಯಿಂದ ಸಾಧ್ಯವಾಗಿದೆ.

ಮೊದಲೇ ತಿಳಿಸಿದಂತೆ ಜಗತ್ತಿನಾದ್ಯಂತ ಮಿಲಿಯಾಂತರ ಜನರ ದೀರ್ಘಕಾಲದ ಲಿವರ್ ಸೋಂಕಿಗೆ ಈ ಹೆಪಟೈಟಿಸ್ ಸಿ ಕಾರಣ ವಾಗಿದೆ. ನಿಧಾನವಾಗಿ ಹರಡುವ ಈ ಸೋಂಕು ಯಾವ ಹೆಚ್ಚಿನ ರೋಗ ಲಕ್ಷಣಗಳೂ ಇಲ್ಲದೆ ಲಿವರ್‌ನ ಕೆಲಸವನ್ನು ಹಾಳು ಗೆಡವಬಲ್ಲದು. ಬಹಳ ದೀರ್ಘಕಾಲ ಸಣ್ಣ ಪ್ರಮಾಣದಲ್ಲಿ ಸೋಂಕು ಉಂಟುಮಾಡುತ್ತಾ ಇರಬಹುದಾದ ಈ ವೈರಸ್ ನಂತರ ಲಿವರನ್ನು ಗಂಭೀರವಾಗಿ ಹಾಳುಗೆಡವುದಲ್ಲದೇ ಕೆಲವರಲ್ಲಿ ಕ್ಯಾನ್ಸರ್ ಕಾಯಿಲೆಗೂ ಕಾರಣವಾಗಬಹುದು.

ಬಹಳ ದೀರ್ಘಕಾಲ ಇರುವ ಈ ತರಹದ ಲಿವರ್ ಸೋಂಕು ಇರುವವರಲ್ಲಿ ಕೊಟ್ಟ ಕೊನೆಗೆ ಲಿವರ್ ಟ್ರಾನ್ಸ್ ಪ್ಲಾಂಟ್ ಅಥವಾ ಲಿವರ್ ಕಸಿಯಂಥ ಸಂಕೀರ್ಣ ಶಸಚಿಕಿತ್ಸೆ ಅಗತ್ಯ ಬೀಳುತ್ತದೆ. ಅಲ್ಲದೆ ಜಗತ್ತಿನ ಎಲ್ಲ ಕಡೆ ರಕ್ತ ವರ್ಗಾವಣೆಯ ಸಂದರ್ಭದಲ್ಲಿ
ಈ ವೈರಸ್ ಬಗ್ಗೆಯೇ ನಿರ್ದಿಷ್ಟ ಕೈಗೊಳ್ಳುತ್ತಿರುವುದರಿಂದ ರಕ್ತ ದಾನಿಗಳಲ್ಲಿ ಮೊದಲು ಕಂಡು ಬರುತ್ತಿದ್ದ ಹೆಪಟೈಟಿಸ್ ಸಿ ಹೆಚ್ಚೂ ಕಡಿಮೆ ಇಲ್ಲದಂತಾಗಿದೆ. ಇದರಿಂದ ಎಷ್ಟೋ ಕೋಟ್ಯಂತರ ಜೀವಗಳು ಉಳಿದಿವೆ ಎಂಬುದು ವಸ್ತುಸ್ಥಿತಿ. ಒಂದು ಕಾಲ ದಲ್ಲಿ ಹೆಪಟೈಟಿಸ್ ಸಿ ಗೆ ನಿರ್ದಿಷ್ಟ ಚಿಕಿತ್ಸೆಯೇ ಇರಲಿಲ್ಲ. ಈಗ ತುಂಬಾ ಪರಿಣಾಮಕಾರಿ ಔಷಧಗಳು ಲಭ್ಯವಿರುವುದರಿಂದ ಸೋಂಕು ಬಂದರೂ ಕೆಲವೇ ವಾರಗಳಲ್ಲಿ ಗುಣಪಡಿಸುವ ಔಷಧಗಳು ಲಭ್ಯವಿವೆ.

ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳ ಪರಿಚಯ:

ಹಾರ್ವೆ ಜೆ ಆಲ್ಟರ್: ಇವರು ೧೯೩೫ರಲ್ಲಿ ನ್ಯೂಯಾರ್ಕ್‌ನಲ್ಲಿ ಜನಿಸಿದರು. ಇವರು ರೋಸ್ಟರ್ ವಿಶ್ವವಿದ್ಯಾನಿಲಯದ ವೈದ್ಯ ಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಗಳಿಸಿದರು. ನಂತರ ಇಂಟರ್ನಲ್ ಮೆಡಿಸಿನ್‌ನಲ್ಲಿ ಸ್ಟ್ರಾಂಗ್ ಮೆಮೋರಿಯಲ್ ಆಸ್ಪತ್ರೆ ಮತ್ತು ಸಿಯಾಟಲ್‌ನ ವಿಶ್ವವಿದ್ಯಾನಿಲಯದ ಆಸ್ಪತ್ರೆಯಲ್ಲಿ ತರಬೇತಿ ಪಡೆದುಕೊಂಡರು. ೧೯೬೧ರಲ್ಲಿ ಅಮೆರಿಕದ ಪ್ರತಿಷ್ಠಿತ
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್‌ ಹೆಲ್ತನ್ನು ಸೇರಿದರು. ನಂತರ ಕೆಲವು ವರ್ಷ ಜಾರ್ಜ್ ಟೌನ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಿ ಪುನಃ ೧೯೬೯ರಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ ಸೇರಿ ಟ್ರಾನ್ಸ್-ಷನ್ ಮೆಡಿಸಿನ್‌ನಲ್ಲಿ ಹಿರಿಯ ಸಂಶೋಧಕರಾಗಿ ಸೇರ್ಪಡೆಗೊಂಡರು.

ಮೈಕೆಲ್ ಹಾಟನ್: ಇವರು ಇಂಗ್ಲೆಂಡ್‌ನಲ್ಲಿ ಜನಿಸಿದರು. ಲಂಡನ್‌ನ ಪ್ರತಿಷ್ಠಿತ ಕಿಂಗ್ಸ್ ಕಾಲೇಜ್ ನಿಂದ ೧೯೭೭ರಲ್ಲಿ ಪಿಎಚ್.ಡಿ ದೊರಕಿಸಿಕೊಂಡರು. ಆರಂಭದಲ್ಲಿ ಜಿ.ಡಿ. ಸರ್ಲೆ ಮತ್ತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಅಮೆರಿಕದ ಕ್ಯಾಲಿಫೋರ್ನಿಯಾದ ಷಿರಾನ್ ಕಾರ್ಪೊರೇಷನ್ನನ್ನು ೧೯೮೨ರಲ್ಲಿ ಸೇರಿದರು. ನಂತರ ೨೦೧೦ರಲ್ಲಿ ಆಲ್ಬರ್ಟಾ ವಿಶ್ವವಿದ್ಯಾ ನಿಲಯವನ್ನು ಸೇರಿದರು. ಪ್ರಸ್ತುತ ಅವರು ಅಲ್ಲಿನ ವೈರಾಲಜಿಯ ಕೆನಡಾ ಎಕ್ಸಲೆನ್ಸ್ ರೀಸರ್ಚ್ ಚೇರ್‌ನಲ್ಲಿ ಹಾಗೂ ಆಲ್ಬರ್ಟಾ ವಿಶ್ವವಿದ್ಯಾನಿಲಯದಲ್ಲಿ ವೈರಾಲಜಿ ಪ್ರೊಫೆಸರ್ ಆಗಿದ್ದಾರೆ.

ಚಾಲ್ಸ ಎಂ ರೈಸ್: ಇವರು ೧೯೫೨ರಲ್ಲಿ ಅಮೆರಿಕದ ಸಾಕ್ರಮೆಂಟೋದಲ್ಲಿ ಜನಿಸಿದರು. ೧೯೮೧ರಲ್ಲಿ ಕ್ಯಾಲಿಫೋರ್ನಿಯಾ ಇನ್ ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯಿಂದ ಪಿಎಚ್.ಡಿ ದೊರಕಿಸಿಕೊಂಡರು. ೧೯೮೧-೮೫ರ ನಡುವೆ ಪೋಸ್ಟ್ ಡಾಕ್ಟರಲ್ ಫೆಲೋ
ಎಂದು ತರಬೇತಿ ಪಡೆದುಕೊಂಡರು. ನಂತರ ಅವರು ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಕಾಲೇಜಿನಲ್ಲಿ ತಮ್ಮದೇ ಆದ ಸಂಶೋಧನಾ ತಂಡ ರಚಿಸಿಕೊಂಡರು.

೧೯೯೫ರಲ್ಲಿ ಪೂರ್ಣ ಪ್ರಮಾಣದ ಪೊ-ಸರ್ ಆಗಿ ಭಡ್ತಿ ಪಡೆದರು. ೨೦೦೧ರಿಂದ ನ್ಯೂಯಾರ್ಕ್‌ನ ರಾಕ್ ಫೆಲರ್ ವಿಶ್ವವಿದ್ಯಾ ನಿಲಯದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತದ್ದಾರೆ. ೨೦೦೧-೨೦೦೮ರ ನಡುವೆ ರಾಕ್ ಫೆಲರ್ ವಿಶ್ವವಿದ್ಯಾನಿಲಯದ
ವೈಜ್ಞಾನಿಕ ಮತ್ತು ಎಕ್ಸಿಕ್ಯುಟಿವ್ ನಿರ್ದೇಶಕರಾಗಿದ್ದಾರೆ.