Wednesday, 18th September 2024

ಜಗ್ಗಲಿಲ್ಲ, ಕುಗ್ಗಲಿಲ್ಲ, ಮಾತಿನ ಓಘ ನಿಲ್ಲಲಿಲ್ಲ

ವಿಶ್ಲೇಷಣೆ

ಪ್ರಕಾಶ್ ಶೇಷರಾಘವಾಚಾರ್‌

ಹದಿನೆಂಟನೆಯ ಲೋಕಸಭೆಯ ಮೊದಲ ಅಧಿವೇಶನದಲ್ಲಿ ನಂಬಲು ಸಾಧ್ಯವಿಲ್ಲದ ದೃಶ್ಯವೊಂದಕ್ಕೆ ಸಾಕ್ಷಿಯಾಯಿತು. ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಉತ್ತರಿಸಲು ಪ್ರಧಾನಿ ಮೋದಿಯವರು ತಮ್ಮ ಭಾಷಣವನ್ನು ಆರಂಭಿಸಿದ ಕೂಡಲೇ ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟದ ಸದಸ್ಯರು ಸದನದ ಬಾವಿಗೆ ಬಂದು ಒಂದೇ ಸಮನೆ ಘೋಷಣೆ ಕೂಗಲು ಶುರು ಮಾಡುತ್ತಾರೆ.

ನೂತನವಾಗಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಅಲಂಕರಿಸಿದ್ದ ರಾಹುಲ್ ಗಾಂಽಯವರು ತಮ್ಮ ಸದಸ್ಯರನ್ನು ಬಾವಿಗೆ ಬರುವಂತೆ ಕರೆಯುವ ದೃಶ್ಯವು ಕ್ಯಾಮೆರಾ ಸೆರೆ ಹಿಡಿದಿರುತ್ತದೆ. ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆಯನ್ನು ಆರಂಭಿಸಿದ ರಾಹುಲ್ ರವರ ಭಾಷಣಕ್ಕೆ ಆಡಳಿತ ಪಕ್ಷದ ಸದಸ್ಯರು ಅಡ್ಡಿ ಮಾಡದೇ ಕೇಳಿದರು ಆದರೆ ಪ್ರಧಾನಿ ಮೋದಿಯವರು ಉತ್ತರ ಕೊಡಲು ಆರಂಭಿಸಿದಾಗ ವಿರೋಧಿ  ನಾಯಕರಲ್ಲಿ ಸೌಜನ್ಯವು ಕಾಣೆಯಾಗಿತ್ತು.

ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾರವರು ರಾಹುಲ್ ಗಾಂಧಿಯವರು ಭಾಷಣಕ್ಕೆ ಅಡ್ಡಿಪಡಿಸಲು ಉತ್ತೇಜಿಸುತ್ತಿದ್ದನ್ನು ತೀವ್ರವಾಗಿ ಖಂಡಿಸಿ ವಿರೋಧ ಪಕ್ಷದ ನಾಯಕರು ಸಭೆಯ ಗೌರವಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಟುವಾಗಿ ದಂಡಿಸುತ್ತಾರೆ. ಸ್ಪೀಕರ್ ಕಟು ನುಡಿಗಳು
ಸೌಜನ್ಯದ ಗಡಿ ದಾಟಿದ್ದ ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಪ್ರಧಾನಿಗಳು ಎರಡು ಗಂಟೆಗಳ ಕಾಲ ಉತ್ತರ ನೀಡಿದ ಪೂರ್ಣ ಅವಧಿಯೂ ಇಂಡಿ ಮೈತ್ರಿಕೂಟದ ಸದಸ್ಯರು ಮಣಿಪುರ ಮತ್ತು ನೀಟ್ ಕುರಿತು ಘೋಷಣೆ ಕೂಗುತ್ತಲೇ ಇದ್ದರು. ಮೋದಿಯವರು ಎಂತಹ ಗಟ್ಟಿ ವ್ಯಕ್ತಿಯೆಂದರೆ ಅವರ ಕೂಗಾಟಕ್ಕೆ ಜಗ್ಗದೆ ಬಗ್ಗದೆ ತಮ್ಮ ಭಾಷಣವನ್ನು ಮುಂದುವರೆಸುತ್ತಾರೆ. ಪ್ರಾಯಶ: ಬೇರೆ ಯಾರೆ ಆಗಿದ್ದರು ಅಂದು ನಡೆಸಿದ ಗದ್ದಲಕ್ಕೆ ಭಾಷಣವನ್ನು ಅರ್ಧಕ್ಕೆ ಭಾಷಣ ನಿಲ್ಲಿಸುತ್ತಿದ್ದರು.

ಈ ಗದ್ದಲದ ನಡುವೆಯೂ ರಾಹುಲ್ ಗಾಂಧಿಯವರಿಗೆ ಕೊಟ್ಟ ಮಾತಿನ ಏಟು ತೀವ್ರವಾಗಿಯೇ ಇತ್ತು. ಒಬ್ಬ ಬಾಲಕ ೯೮ ನಂಬರ್ ಪಡೆದು ಸಂತಸದಿಂದ ಕುಣಿದಾಡುತ್ತಿದ್ದಾನೆ ಆದರೆ ಅದು ೧೦೦ಕ್ಕೆ ೯೮ ಅಲ್ಲ ೫೪೩ ಕ್ಕೆ ೯೮ ನಂಬರ್ ಎಂದು ಮರೆತ ಬಾಲಕ ಬುದ್ಧಿಯವನು ಎಂದು ಚುನಾವಣೆಯಲ್ಲಿ ಗೆದ್ದಂತೆ ಬೀಗುತ್ತಿರುವ ರಾಹುಲ್ ಗಾಂಧಿಯ ವರ್ತನೆಯ ಬಗ್ಗೆ ಹಾಸ್ಯದ ಮೂಲಕವೇ ಚುರುಕು ಮುಟ್ಟಿಸುತ್ತಾರೆ. ೨೦೦೦ನೇ ಇಸವಿಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಾಜಪೇಯಿಯವರು ಸದನವನ್ನುದ್ದೇಶಿಸಿ ಮಾತನಾಡುವಾಗ ಸೋನಿಯಾ ಗಾಂಧಿ ತಮ್ಮ ಪಕ್ಷದ ಸದಸ್ಯರನ್ನು ಬಾವಿಗೆ ಬರುವಂತೆ ಸನ್ನೆ ಮಾಡಿ ಅವರ ಭಾಷಣಕ್ಕೆ ಅಡ್ಡಿಪಡಿಸುತ್ತಾರೆ.

ಇಪ್ಪತ್ತುನಾಲ್ಕು ವರ್ಷದ ತರುವಾಯ ಅವರ ಮಗ ಅದರ ಪುನರಾವರ್ತನೆ ಮಾಡುತ್ತಾರೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಎಕ್ಸ್ ಖಾತೆಯಲ್ಲಿ ಆದರೆ ನರೇಂದ್ರ ಮೋದಿ, ವಾಜಪೇಯಿ ಅಲ್ಲ ಮತ್ತು ರಾಹುಲ್ ಸೋನಿಯಾ ಅಲ್ಲ ಎಂದು ಕಾಲೆಳೆಯುತ್ತಾರೆ. ರಾಹುಲ್ ಗಾಂಧಿಯವರು ಇಪ್ಪತ್ತು ವರ್ಷ ಚುನಾಯಿತ ಪ್ರತಿನಿಧಿಯಾಗಿ ಮೊದಲ ಬಾರಿಗೆ ಅಧಿಕೃತ ವಿರೋಧ ಪಕ್ಷದ ನಾಯಕರಾಗಿ ಶಾಸನಬದ್ಧ ಜವಾಬ್ದಾರಿಯನ್ನು ಹೊತ್ತರು.
ಇವರು ಭಿನ್ನವಾಗಿ ನಡೆದುಕೊಂಡು ಮಾದರಿಯಾಗುತ್ತಾರೆ ಎಂದೇ ಬಹುತೇಕರ ಅನಿಸಿಕಯಾಗಿತ್ತು. ಆದರೆ ಮೊದಲನೆಯ ಅಧಿವೇಶನದಲ್ಲಿಯೇ ಅವರು ಪ್ರಧಾನಿಯವರು ವಂದನಾ ನಿರ್ಣಯಕ್ಕೆ ಉತ್ತರಿಸುವ ಸಮಯದಲ್ಲಿ ತಮ್ಮ ಪಕ್ಷದ ಸದಸ್ಯರನ್ನು ಕಲಾಪಕ್ಕೆ ಅಡ್ಡಿ ಪಡಿಸಲು ಸದನದ ಬಾವಿಯೊಳಗೆ ಕರೆದು ಸತತವಾಗಿ ಘೋಷಣೆ ಕೂಗಿಸಿ ತಮ್ಮಿಂದ ಭಿನ್ನವಾದ ನಡವಳಿಕೆ ನಿರೀಕ್ಷಿಸಬೇಡಿ ಎಂಬ ಸಂದೇಶವನ್ನು ರವಾನಿಸಿ ನಿರಾಸೆ ಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಾರ್ಲಿಮೆಂಟ್ ರಾಜಕೀಯ ಮೇಲಾಟಕ್ಕೆ ಸಿಲುಕಿ ನಲುಗಿ ಹೋಗುತ್ತಿದೆ. ಬೀದಿಯಲ್ಲಿ ಮಾಡಬೇಕಾದ ಹೋರಾಟಗಳು ಈಗ ಸಂಸ್ಸತ್ತು ಪ್ರವೇಶಿಸಿ ಸದನದ ಪಾವಿತ್ರ್ಯತೆಗೆ ಕುಂದು ತಂದಿದೆ. ಮಾತಿನ ಮನೆಯು ಮಾರಾಮಾರಿಗೆ ವೇದಿಕೆಯಾಗಿದೆ. ಈ ಪರಿಸ್ಥಿತಿಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಸಮಾನ ಹೊಣೆ ಹೊರಬೇಕು. ಲೋಕಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸುವ ಪರಂಪರೆ ಮೊದಲನೆ ಬಾರಿ ಆರಂಭವಾಗಿದ್ದು ೧೯೬೩ ರಲ್ಲಿ ಅಂದಿನ ರಾಷ್ಟ್ರಪತಿ ಸರ್ವಪಲ್ಲಿ ರಾಧಕೃಷ್ಣನ್ ರವರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡುವಾಗ ಅವರ ಭಾಷಣಕ್ಕೆ ಕೆಲವು ಸಂಸದರು ಅಡ್ಡಿ ಪಡಿಸುತ್ತಾರೆ. ಅಲ್ಲಿಂದ ಬೆಳೆದು ಬಂದದ್ದು ಈಗ ನಿಯಂತ್ರಣವಿಲ್ಲದೆ ಅತಿರೇಕದ ಹಂತ ತಲುಪಿದೆ.

ರಾಮ್ ಜೇಠ್ಮಲಾನಿ ಸ್ಮಾರಕ ಉಪನ್ಯಾಸ ಮಾಲೆಯಲ್ಲಿ ಮಾತನಾಡುತ್ತಾ ವೆಂಕಯ್ಯ ನಾಯ್ಡುರವರು ಸಂಸತ್ತಿನಲ್ಲಿ ಅಡಚಣೆಗಳ ಕುರಿತು ೧೯೭೮ ರಿಂದ ೯೬ ರವರೆಗೆ ರಾಜ್ಯಸಭೆಯ ಉತ್ಪಾದಕತೆ ಮೊದಲ ೧೯ ವರ್ಷಗಳಲ್ಲಿ, ಶೇ.೧೦೦ ಕ್ಕಿಂತ ಹೆಚ್ಚಿತ್ತು ತದನಂತರ ಕುಸಿಯಲು ಪ್ರಾರಂಭಿಸಿತು. ಕಳೆದ ೧೨ ವರ್ಷಗಳಲ್ಲಿ ಒಮ್ಮೆಯೂ ಶೇ.೧೦೦ರಷ್ಟು ಕಲಾಪ ನಡೆದಿಲ್ಲ ಎಂದು ನೋವಿನಿಂದ ತಿಳಿಸುತ್ತಾರೆ. Pಖ ಲೆಜಿಸ್ಲೇಟಿವ್ ರಿಸರ್ಚ್ ಪ್ರಕಾರ ೧೯೫೦ ರ
ಅವಧಿಯಲ್ಲಿ ೧೨೭ ದಿನಗಳ ಕುಳಿತುಕೊಂಡಿತ್ತು ಆದರೆ ೨೦೧೨ ರಲ್ಲಿ ಲೋಕಸಭೆಯು ಕೇವಲ ೭೪ ಬಾರಿ ಸಭೆ ಸೇರಿತು.

ಮೇಲ್ಮನೆಯ ಕಥೆಯೂ ಹೆಚ್ಚು ಭಿನ್ನವಾಗಿಲ್ಲ, ಮೇಲ್ಮನೆಯು ಸರಾಸರಿ ೯೩ ದಿನ ಕೂತಿತ್ತು. ೨೦೧೦ರ ಚಳಿಗಾಲದ ಸಂಸತ್ತಿನ ಅಧಿವೇಶನ ಎಲ್ಲಕ್ಕಿಂತ ಕೆಟ್ಟದ್ದಾಗಿತ್ತು. ಈ ಅಧಿವೇಶನದಲ್ಲಿ, ಮೇಲ್ಮನೆಯು ಕೇವಲ ಎರಡು ಗಂಟೆ ೪೪ ನಿಮಿಷಗಳು ಸೇರಿತ್ತು. ಕೆಳಮನೆಯು ಏಳೂವರೆ ಗಂಟೆಗಳ ಕಾಲ ಮಾತ್ರ
ಸೇರಿತ್ತು. ೨೦೧೪ ರ ನಂತರ ಪಾರ್ಲಿಮೆಂಟಿನ ಉತ್ಪಾದಕತೆಯ ೨೦೧೫, ೧೬, ಮತ್ತು ೧೭ರಲ್ಲಿ ಶೇ.೯೦ರಷ್ಟು ಸುಧಾರಿಸಿರುತ್ತದೆ. ಆದರೆ ೨೦೨೩ ರ ಅಧಿವೇಶನದಲ್ಲಿ, ಲೋಕಸಭೆಯು ಅದರ ನಿಗದಿತ ಸಮಯದ ಶೇ.೩೩ (೪೬ ಗಂಟೆಗಳು) ಮತ್ತು ರಾಜ್ಯಸಭೆಯು ಶೇ.೨೪ (೩೨ ಗಂಟೆಗಳು) ಮಾತ್ರ ಕಾರ್ಯನಿರ್ವಹಿಸಿತು. ೧೯೯೩ರಲ್ಲಿ ಸಂಸದೀಯ ವ್ಯವಸ್ಥೆಯಲ್ಲಿ ಬದಲಾವಣೆ ತಂದು ೧೭ ಇಲಾಖೆಗಳ ಸ್ಥಾಯಿ ಸಮಿತಿಯನ್ನು ರಚಿಸಲಾಯಿತು. ಅನೇಕ ಕಾಯಿದೆಗಳ ವಿಸ್ತೃತ ಚರ್ಚೆಗೆ ಮತ್ತು ಮುಂಗಡ ಪತ್ರದ ಸವಿಸ್ತಾರ ಚರ್ಚೆಗೆ ಸ್ಥಾಯಿ ಸಮಿತಿಗೆ ಕಳುಹಿಸಿ ಕೊಡಲಾಗುತ್ತದೆ.

ಸಮಿತಿಯಲ್ಲಿ ಮಸೂದೆಗಳನ್ನು ಪರಾಮರ್ಶಿಸಿದ ತರುವಾಯ ಮತ್ತೆ ಸಂಸತ್ತಿಗೆ ವಾಪಸ್ ತಂದು ಅದಕ್ಕೆ ಅನುಮೋದನೆ ಪಡೆಯಲಾಗುತ್ತದೆ. ಸ್ಥಾಯಿ ಸಮಿತಿಗಳು ಅಸ್ಥಿತ್ವಕ್ಕೆ ಬಂದ ನಂತರ ಸಂಸತ್ತಿನ ಕಲಾಪ ನಡೆಯುವ ದಿನಗಳು ಕಡಿಮೆಯಾಗಿದೆ ಎಂದರೆ ತಪ್ಪಲ್ಲ. ಯುಪಿಎ ಎರಡನೆಯ ಅವಧಿಯು ಹಲವಾರು ಬೃಹತ್ ಹಗರಣಗಳಿಗೆ ಕುಖ್ಯಾತಿಗಳಿಸಿತ್ತು. ಪ್ರತಿಯೊಂದು ಹಗರಣವು ಬಯಲಾದಾಗಲೂ ಸಂಸತ್ ಕಲಾಪ ಬಲಿಯಾಗುತ್ತಿತ್ತು. ೨ಜಿ ಹಗರಣವನ್ನು ಜೆಪಿಸಿ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿ ೨೦೧೦ರಲ್ಲಿ ಎರಡೂ ಸದನಗಳಲ್ಲಿ ಕಲಾಪವೇ ನಡೆಯದೆ ಸದನ ಮುಂದೂಡಲಾಗು ತ್ತದೆ.

ಅರುಣ್ ಜೇಟ್ಲಿಯವರನ್ನು ಪತ್ರಕರ್ತರು ಸದನ ನಡೆಯದಂತೆ ಅಡ್ಡಿ ಮಾಡುತ್ತಿರುವ ಕುರಿತು ಕೇಳಿದಾಗ ಕಲಾಪಕ್ಕೆ ಅಡ್ಡಿ ಮಾಡುವುದು ಪ್ರಜಾಪ್ರಭುತ್ವ ವಿರೋಽಯಲ್ಲ ಎಂದು ಉತ್ತರಿಸುತ್ತಾರೆ. ಈಗ ಈ ಹೇಳಿಕೆಯು ಬಿಜೆಪಿಗೆ ತಿರುಗುಬಾಣವಾಗಿದೆ. ೨೦೧೦ ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು
ರಾಜ್ಯಸಭೆಯಲ್ಲಿ ಮಂಡಿಸಿದಾಗ ಯುಪಿಎ ಸರಕಾರದ ಮಿತ್ರಪಕ್ಷಗಳಾದ ಸಮಾಜವಾದಿ ಪಾರ್ಟಿ ಮತ್ತು ರಾಷ್ಟ್ರೀಯ ಜನತಾದಳ ಸದಸ್ಯರು ಮಂತ್ರಿಯ ಕೈಯಿಂದಲೇ ಮಸೂ ದೆಯ ಪ್ರತಿಯನ್ನು ಕಿತ್ತುಕೊಂಡು ಸಭಾಧ್ಯಕ್ಷರ ಪೀಠಕ್ಕೆ ಹೋಗಿ ಕಾಗದ ಪತ್ರಗಳನ್ನು ಬಿಸಾಡಿ ಸದನದೊಳಗೆ ಅನಾಗರಿಕರಂತೆ ವರ್ತಿಸುತ್ತಾರೆ. ಚರ್ಚೆ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಬೇಕಾದವರು ತಮ್ಮ ನಿಲುವನ್ನು ಗೂಂಡಾಗಿರಿಯ ಮೂಲಕ ಸದನವು ನಡೆಯದಂತೆ
ನಡೆದುಕೊಳ್ಳುತ್ತಾರೆ.

೨೦೧೩ರಲ್ಲಿ ಆಂಧ್ರಪ್ರದೇಶ ವಿಭಜನೆಯಾದಾಗ ಸಂಯುಕ್ತ ಆಂಧ್ರಕ್ಕೆ ಒತ್ತಾಯಿಸಿ ಸದನದೊಳಗೆ ಹೊಡೆದಾಟವೇ ನಡೆಯುತ್ತದೆ. ಕಾಂಗ್ರೆಸ್ ಸದಸ್ಯ ಎಲ್
ರಾಜಗೋಪಾಲ್ ಪೆಪ್ಪರ್ ಸ್ಪ್ರೇ ಸದನಗೊಳಗೆ ಸಿಡಿಸಿದ್ದರ ಫಲ ಹಲವಾರು ಸದಸ್ಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಂಸ್ಸತ್ತು ಅಧಿವೇಶನಕ್ಕೆ ಅಡ್ಡಿ ಮಾಡಲಾಗುತ್ತದೆ. ಜಂಟಿ ಸಂಸದೀಯ ಸಮಿತಿಯು ರಫೆಲ್ ಖರೀದಿಯ ಬಗ್ಗೆ ತನಿಖೆ ಮಾಡಬೇಕು ಎಂದು ಕಲಾಪಕ್ಕೆ ಅಡ್ಡಿ ಪಡಿಸುತ್ತಾರೆ. ರಫೆಲ್ ಖರೀದಿಗೆ ಸರ್ವೋಚ್ಛ ನ್ಯಾಯಾಲಯ ಕ್ಲೀನ್ ಚಿಟ್ ನೀಡುತ್ತದೆ. ವಿರೋಧ ಪಕ್ಷಗಳು ಅನಗತ್ಯವಾಗಿ ಸದನದಲ್ಲಿ ಗದ್ದಲವೆಬ್ಬಿಸಿ ಸಮಯ ಹಾಳು ಮಾಡಿದ್ದರು.

೨೦೨೩ ರಲ್ಲಿ ಹೊಸ ಸಂಸತ್ ಸದನದಲ್ಲಿ ಉಂಟಾದ ಸುರಕ್ಷತೆ ಲೋಪದ ಬಗ್ಗೆ ವಿರೋಧ ಪಕ್ಷಗಳು ಗೃಹ ಸಚಿವರ ಹೇಳಿಕೆಯನ್ನು ಒತ್ತಾಯಿಸಿ ಸದನ ದೊಳಗೆ ಧರಣಿ ನಡೆಸುತ್ತಾರೆ. ಗೃಹ ಸಚಿವರು ಸದನದ ಸುರಕ್ಷತೆಯ ಹೊಣೆ ಸ್ಪೀಕರ್ ರವರದ್ದು ಎಂದು ಹೇಳಿಕೆ ನೀಡಲು ನಿರಾಕರಿಸುತ್ತಾರೆ. ಅಂತಿಮ ವಾಗಿ ನೂರಕ್ಕೂ ಹೆಚ್ಚು ಸದಸ್ಯರನ್ನು ಸದನದಿಂದ ಅಮಾನತು ಮಾಡಲಾಗುವುದು. ಈ ಪ್ರಕರಣದಲ್ಲಿ ಆಡಳಿತ ಪಕ್ಷವು ಸುಗುಮವಾಗಿ ಸದನ ನಡೆಸುವ ದೃಷ್ಟಿಯಿಂದ ಉದಾರವಾಗಿ ನಡೆದುಕೊಳ್ಳಬೇಕಾಗಿತ್ತು. ಸದನದಲ್ಲಿ ಚರ್ಚೆ ಮುಖ್ಯವಾಗಬೇಕೆ ವಿನಃ ಪ್ರತಿಷ್ಠೆಯಲ್ಲ ಎಂಬುದು ಗದ್ದಲದ
ಮಧ್ಯೆ ಮರತೇ ಹೋಗಿತ್ತು.

ಸಂಸದರು ಸದನವು ಜನರ ಸಮಸ್ಯೆಗಳ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಇರುವುದು ಎಂಬ ಸಂಗತಿ ಮರೆತಿದ್ದಾರೆ. ಸಂಸತ್ ಕಲಾಪ ನೇರ ಪ್ರಸಾರ ವಾಗುವ ಕಾರಣ ಎಲ್ಲರಿಗೂ ತಮ್ಮ ಮತದಾರರನ್ನು ಮೆಚ್ಚಿಸಲು ಸಂಸದೀಯ ಪರಂಪರೆಯನ್ನು ಗಾಳಿಗೆ ತೂರಿ ಸದನದ ಗೌರವಕ್ಕೆ ಧಕ್ಕೆ ಬರುವ ಹಾಗೆ ನಡೆದುಕೊಳ್ಳುವುದು ಹೆಮ್ಮೆಯ ಸಂಗತಿ ಎಂದು ಭಾವಿಸಿದ್ದಾರೆ. ಪ್ರತಿದಿನ ಪಾರ್ಲಿಮೆಂಟ್ ನಡೆಸಲು ಪ್ರತಿ ನಿಮಿಷಕ್ಕೆ ೨.೫ ಲಕ್ಷ ರು. ವೆಚ್ಚ ವಾಗುತ್ತದೆ. ಕಲಾಪ ನಡೆಯದೆ ಮುಂದೂಡಿ ದಾಗ ಕೋಟ್ಯಾಂತರ ರುಪಾಯಿ ತೆರಿಗೆದಾರರ ಹಣ ಪೋಲಾಗುತ್ತದೆ. ಸಂಸತ್ ಸದಸ್ಯರ ವರ್ತನೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಮೂಡುವಂತೆ ಇರಬೇಕು. ಹೆಚ್ಚು ಸಮಯವನ್ನು ವಿಷಯಾಧಾರಿತ ಚರ್ಚೆಯ ಮೂಲಕ ಪ್ರಜಾತಂತ್ರ ವ್ಯವಸ್ಥೆ ಯನ್ನು ಬಲಪಡಿಸುವಂತಾಗಬೇಕು.

ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಈ ನಿಟ್ಟಿನಲ್ಲಿ ಸಮನಾದ ಹೊಣೆಗಾರಿಕೆ ಇರುವುದು. ಸದನದ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಸುಗುಮ ಕಲಾಪಕ್ಕೆ ದಾರಿಯಾಗುವ ವರ್ತನೆಯನ್ನು ಸಂಸದರಿಂದ ಕಾಣಲು ೧೪೦ಕೋಟಿ ಭಾರತೀಯರು ಬಯಸುತ್ತಾರೆ ಎಂಬುದನ್ನು ಮರೆಯಬಾರದು.

(ಲೇಖಕರು: ಬಿಜೆಪಿ ವಕ್ತಾರರು) 

Leave a Reply

Your email address will not be published. Required fields are marked *