Saturday, 7th September 2024

ಭಾವಸೆಲೆ ಬತ್ತಿದಾಗ ಬಿರುಕು; ಬುವಿಯಲ್ಲೂ ಬದುಕಲ್ಲೂ !

ಸುಪ್ತ ಸಾಗರ

rkbhadti@gmail.com

ರಾಮಾಯಾಣದ ಕಥೆ ಕೇಳಿರಬಹುದು. ಅಶ್ವಮೇಧ ಯಾಗದ ಪೂರ್ಣಾಹುತಿ ಮುಗಿಸಿದ ರಾಮನೆದುರು ಋಷಿ ವಾಲ್ಮೀಕಿ ಕುಶ- ಲವರನ್ನು ತಂದು ನಿಲ್ಲಿಸುತ್ತಾನೆ. ನೋಡುತ್ತ ನಿಂತರೆ ಕಣ್ಣು ಕೀಳಲಾಗದ ಸ್ನಿಗ್ಧ ಸೌಂದರ್ಯದ ಖನಿಗಳಾದ ಆ ಕುಮಾರರಿಬ್ಬರೂ ಏಕಕಂಠದಲ್ಲಿ ಸುಶ್ರಾವ್ಯವಾಗಿ ರಾಮಾಯಣದ ಗೀತಗಾಥೆಯನ್ನು ಹಾಡಲಾರಂಭಿಸುತ್ತಾರೆ.

ಸೀತಾ ಪರಿತ್ಯಾಗದ ಹಂತದವರೆಗೂ ಕಥೆ ಸಾಗುತ್ತಿರುವಾಗಲೇ ರಾಮ ಪರವಶನಾಗುತ್ತಾನೆ. ಆ ಕ್ಷಣದಲ್ಲಿ ಅಲ್ಲಿಗಾಗಮಿಸುವ ಸೀತಾ ಮಾತೆಗೆ ಇನ್ನು ಬದುಕು ಸಾಕೆನಿಸುತ್ತದಂತೆ (?) ‘ಅಯ್ಯೋ, ಮಾತೆ ಭೂದೇವಿ ನೀನಾದರೂ ಬಾಯ್ದೆರೆದು ನನ್ನನ್ನು ಸೆಳೆದುಕೊಳ್ಳಬಾರದೇ?’ ಎಮದು ಉದ್ಘರಿಸುತ್ತಾಳಂತೆ ಸೀತೆ. ಅಷ್ಟೆ,
ಮಗಳ ಆಕ್ರಂದನಪೂರಿತ ಆಹ್ವಾನವನ್ನು ಮನ್ನಿಸಿದ ಭೂ ತಾಯಿಯೊಡಲಲ್ಲಿ ಕ್ಷಣ ಮಾತ್ರದಲ್ಲಿ ಬೃಹತ್ ಬಿರುಕು ಮೂಡುತ್ತದಂತೆ. ರಾಮನಾದಿಯಾಗಿ ಯಾಗಶಾಲೆಯಲ್ಲಿದ್ದ ಸಭಾಸದರು ನೋಡನೋಡುತ್ತಿದ್ದಂತೆ ಭೂಮಿಯ ಬಿರುಕು ದೊಡ್ಡದಾಗುತ್ತ ಸಾಗಿ, ಸೀತೆ ಭೂತಾಯಿಯೊಡಲು ಸೇರಿ ಕೊಳ್ಳುತ್ತಾಳಂತೆ.

ಇದು ಕಥೆಯಿರಬಹುದು. ಆದರೆ, ಅಮೆರಿಕದಲ್ಲಿ ಥೇಟು ಹೀಗೆಯೇ ಎಲ್ಲೆಂದರಲ್ಲಿ ಭೂಮಿ ಮೈಲುಗಟ್ಟಲೆ ಬಾಯ್ದೆ ರೆದು ನಿಲ್ಲುತ್ತಿದೆ. ಆದರೆ, ಅಲ್ಲಿ ಯಾರೂ ಸೀತೆಯಂತೆ ಆಕ್ರಂದನವನ್ನು ಹೊಮ್ಮಿಸಿದ್ದಕ್ಕಲ್ಲ. ದೇಶದ ನೈಋತ್ಯ ಭಾಗಗಳ ನೆಲದಲ್ಲಿ ಬೃಹತ್ ಗಾತ್ರದ ಬಿರುಕು ಕಾಣಿಸಲು ಪ್ರಾರಂಭಿಸಿರುವುದರಿಂದ ಇಡೀ ಯುನೈಟೆಡ್ ಸ್ಟೇಟ್ಸ್ ತೀವ್ರ ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬ ವರದಿ ಇತ್ತೀಚೆಗೆ ಜಗತ್ತಿನಾದ್ಯಂತ ಸುದ್ದಿ ಮಾಡಿದೆ. ಅತಿಯಾದ ಅಂತರ್ಜಲ ಪಂಪಿಂಗ್ ಇದಕ್ಕೆ ಕಾರಣ ಎನ್ನುತ್ತಿವೆ ವರದಿಗಳು. ಫಿಶರ್ಸ್ ಎಂದು ಕರೆಯಲ್ಪಡುವ ಈ ದೈತ್ಯ ಬಿರುಕುಗಳು ಅರಿಜೋನಾ, ಉತಾಹ್ ಮತ್ತು ಕ್ಯಾಲಿಫೋರ್ನಿಯಾ ಸೇರಿದಂತೆ ಹಲವು ರಾಜ್ಯಗಳಿಗೆ ವಿಸ್ತರಿಸಿದೆ. ಮೈಲುಗಳವರೆಗೆ ನೆಲ ಬಾಯ್ದೆರೆದಿದೆ.

ಜೀವನದಲ್ಲಿ ಎಲ್ಲವೂ ಸರಿ ಇದ್ದರೆ ಅಲ್ಲಿ ಬಿರುಕಿಗೆ ಆಸ್ಪದವೇ ಇಲ್ಲ. ಆದರೆ ಸಣ್ಣದೊಂದು ಬಿರುಕು ಕಾಣಿಸಿ ಕೊಂಡರೂ ಮುಂದಿನದು ವಿನಾಶದ ಸೂಚನೆಯೇ. ಅದು
ಯಾವುದೇ ವಿಚಾರ ತೆಗೆದುಕೊಳ್ಳಿ, ಜೀವನ, ಸ್ನೇಹ, ಪ್ರೀತಿ, ದಾಂಪತ್ಯ, ಕುಟುಂಬ, ಗೋಡೆ, ಅಣೆಕಟ್ಟು…. ಹೀಗೆ ಯಾವುದರಲ್ಲೂ ಬಿರುಕು ಮೂಡದಂತೆ ನೋಡಿಕೊಳ್ಳುವುದು ಅತಿ ಮುಖ್ಯ. ಒಮ್ಮೆ ಬಿರುಕುಬಿಟ್ಟರೆ ಅದನ್ನು ಮುಚ್ಚುವುದು ತೀರಾ ಕಷ್ಟ. ಒಂದೊಮ್ಮೆ ಮುಚ್ಚಿದರೂ ಅದರ ಕಲೆ ಉಳಿದ ಹೋಗುತ್ತದೆ. ಅಥವಾ ಇನ್ನಾವುದೇ ಕ್ಷಣದಲ್ಲಿ ಅದು ಮತ್ತೆ ಕಾಣಿಸಿಕೊಂಡು ದೊಡ್ಡದಾಗುವ ಅಪಾಯ ಇದ್ದೇ ಇದೆ.

ಭೂಮಿಯ ವಿಚಾರದಲ್ಲೂ ಇದೇ ಆಗುವುದು. ಪರಿಸರ ನಾಶದ ಮುನ್ಸೂಚನೆಯಾಗಿಯೇ ಬಿರುಕು ಕಾಣಿಸಿಕೊಳ್ಳುವುದು. ಇದನ್ನು ಹೇಳು ಮಹಾನ್ ತತ್ವಜ್ಞಾ ನಿಯೋ, ವಿಜ್ಞಾನಿ ಗಳೋ ಬೇಕಿಲ್ಲ. ಯಾವುದೇ ಬಿರುಕಿಗೆ ಮುಖ್ಯ ಕಾರಣ ಆರ್ದ್ರತೆಯ, ಹೊಂದಾಣಿಕೆಯ ಕೊರತೆ. ಜೀವನದಲ್ಲಾದರೆ ಪರಸ್ಪರ ಗೌರವ, ಪ್ರಿತಿ-ನಂಬಿಕೆಗಳ ಆರ್ದ್ರತೆ ಆರಿ ಹೋಗಿ ಸಂಬಂಧ ಶುಷ್ಕವಾಗ ತೊಡಗಿರುತ್ತದೆ. ಪರಿಸರದ ವಿಚಾರದಲ್ಲಾದರೆ, ಜೀವರಾಶಿಗಳನ್ನು ಪೊರೆಯುತ್ತಿರುವ ಜೀವಜಲದ ಮೇಲಿನ ಗೌರವ ಕಡಿಮೆಯಾಗುತ್ತಿದ್ದಂತೆಯೇ ಅದು ಭೂಮಿಯಲ್ಲಿ ಬಿರುಕಿನ ರೂಪದಲ್ಲಿ ಪ್ರತಿಫಲಿಸುತ್ತದೆ.

ಅಮೆರಿಕದಲ್ಲಿ ಆದದ್ದೂ ಇದೆ. ಅಭಿವೃದ್ಧಿಯ ಓಘಕ್ಕೆ ಬಿದ್ದ ಜಗತ್ತಿನ ದಾಹ ತಣಿಸಲಾಗದ್ದು. ಹೀಗಾಗಿ ಕುಡಿಯುವ ನೀರಿಗಾಗಿ ನೆಲದೊಡಲಲ್ಲಿ ತಣ್ಣಗೆ ಮಲಗಿದ್ದ ಅರ್ಧದಷ್ಟು ನೀರನ್ನು ಪಂಪ್ ಮಾಡಿ ಹೊರತೆಗೆಯಲಾಗುತ್ತಿದೆ. ಜಾಗತಿಕ ನೀರಾವರಿಯ ಸುಮಾರು ಶೇ.೪೦ರಷ್ಟನ್ನು ಒದಗಿಸುವ ಅಂತರ್ಜಲವನ್ನು
ಮರುಪೂರಣಗೊಳಿಸುವುದಕ್ಕಿಂತ ವೇಗವಾಗಿ ಹೊರಸೆಳೆದು ಬಳಸಲಾಗುತ್ತಿದೆ. ಪರಿಣಾಮ ಭೂಮಿ ಬಾಯಿ ತೆರೆದುಕೊಳ್ಳುತ್ತಿದೆ ಎನ್ನುತ್ತದೆ ಬಿಸಿನೆಸ್ ಇನ್‌ಸೈಡೆರ್ ವರದಿ. ಅರಿಝೋನಾ ಭೂವೈeನಿಕ ಸಮೀಕ್ಷೆಯ ಸಂಶೋಧಕ ಜೋಸೆಫ್ ಕುಕ್ ಪ್ರಕಾರ, ಇವು ನಿರ್ಲಕ್ಷಿಸುವಂಥ ಬಿರುಕುಗಳಲ್ಲ.

ಬರಗಾಲಕ್ಕೀಡಾದ ನೆಲದಲ್ಲಿ ಮೂಡುವ ಭೂಮಿಯ ಮೇಲ್ಮೈನ ಬಿರುಕುಗಳಾಗಿದ್ದರೆ, ಮತ್ತೆ ಮಳೆ ನೀರು ಬಿದ್ದಾಗ ತಂತಾನೆ ಕೂಡಿಕೊಳ್ಳುತ್ತದೆ ಎನ್ನಬಹುದಿತ್ತು. ಆದರೆ ಇವು ಅಷ್ಟು ಸಣ್ಣ ಬಿರುಕುಗಳಲ್ಲ. ಭೂಗರ್ಭದಿಂದಲೇ ಬಾಯ್ದೆ ರೆದುಕೊಂಡು ಮೇಲೆ ಬಂದು ಅಗಾಧ ಕಂದಕಗಳು ಸೃಷ್ಟಿಯಾಗಿವೆ. ಇವು ಮುಂದೊಂದು ದಿನ ಇಡೀ ಭೂ ಭಾಗವೇ ಕುಸಿಯಲು ಕಾರಣವಾಗಬಹುದು. ಪರ್ವತಗಳ ನಡುವಿನ ಜಲಾನಯನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಬಿರುಕುಗಳು ಮನೆಗಳು, ರಸ್ತೆಗಳು, ಕಾಲುವೆಗಳು ಮತ್ತು ಅಣೆಕಟ್ಟುಗಳಲ್ಲಿ… ಹೀಗೆ ಎಲ್ಲೆಂದೆರಲ್ಲಿ ಬೆಳಗಾಗುವುದರೊಳಗೆ ಪ್ರತ್ಯಕ್ಷವಾಗುತ್ತಿವೆ.

ಈ ಬಗ್ಗೆ ಅರಿಝೋನಾ ಭೂವೈಜ್ಞಾನಿಕ ಸಮೀಕ್ಷೆ ಯಾವತ್ತೋ ಎಚ್ಚರಿಸಿತ್ತು. ೨೦೦೨ ರಿಂದಲೂ ಸಂಶೋಧಕರು ಇವುಗಳ ಮೇಲ್ವಿಚಾರಣೆ ಮಾಡುತ್ತಲೇ ಬಂದಿದ್ದರು. ಅವರ ಪ್ರಕಾರ ಪ್ರಕಾರ ೧೬೯ ಮೈಲು ಗಳಷ್ಟು ಬಿರುಕುಗಳಿವೆ. ಈಗಾಗಲೇ ಅಮೆರಿಕದಲ್ಲಿ ಶೇ.೯೦ ರಷ್ಟು ನೀರು ಪೂರೈಸುವ ಜಲಬುಗ್ಗೆಗಳು, ಮೂಲಗಳು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಲೇ ಬರುತ್ತಿವೆ. ಕಳೆದ ೪೦ ವರ್ಷಗಳಲ್ಲೇ ಅಂತರ್ಜಲ ಬಳಕೆ ಪ್ರಮಾಣ ದುಪ್ಪಟ್ಟಾಗಿ, ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿವೆ. ಹವಾಮಾನ ಬದಲಾವಣೆಯಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ.

ಇದರೊಂದಿಗೆ ಜಾಗತಿಕ ತಾಪಮಾನವೂ ಹೆಚ್ಚಾದಂತೆ ನದಿ ಗಳು ಬತ್ತುತ್ತಿವೆ. ಸಿಹಿನೀರಿಗಾಗಿ ರೈತರು ಅಂತರ್ಜಲ ವನ್ನು ಅವಲಂಬಿಸಿದ್ದಾರೆ. ನೈಋತ್ಯ ದಾದ್ಯಂತ ರೈತರಿಗೆ ಪ್ರಮುಖ ಸಿಹಿನೀರಿನ ಮೂಲವಾದ ಕೊಲೊರಾಡೋ ನದಿಯು ಎರಡೇ ದಶಕದಲ್ಲಿ ಸುಮಾರು ಶೇ.೨೦ರಷ್ಟು ಬತ್ತಿದೆ ಎನ್ನತ್ತವೆ
ಅಲ್ಲಿನ ವೈಜ್ಞಾನಿಕ ಸಮೀಕ್ಷೆಗಳು. ಇದನ್ನು ತಡೆ ಯುವ ನಿಟ್ಟಿನಲ್ಲಿ ಅಂತರ್ಜಲದ ಪಂಪಿಂಗ್ ನಿರ್ಬಂಧಿಸುವ ನಿಯಮಗಳು ಸ್ಥಳೀಯ ಸರಕಾರದಿಂದ ಜಾರಿಗೊಂಡಿಲ್ಲ.

ಅಮೆರಿಕದ ಕತೆ ಹಾಗಿರಲಿ, ಒಮ್ಮೆ ನಮ್ಮ ಉತ್ತರಾಖಂಡದ ಜೋಶಿಮಠವನ್ನು ನೆನಪಿಸಿಕೊಳ್ಳಿ. ಅಲ್ಲಿಯೂ ಪಕ್ಕಾ ಇದೇ ರೀತಿ ಭೂಮಿ ಬಾಯ್ದೆರೆಯುತ್ತಿದೆ ಅಲ್ಲವೇ? ಸದ್ಯಕ್ಕೆ ಇಷ್ಟು ಬೃಹತ್ ಗಾತ್ರದಲ್ಲಿ, ಇಷ್ಟೊಂದು ಮೈಲುಗಟ್ಟಲೆ ಉದ್ದದ ಬಿರುಕುಗಳು ನಮ್ಮಲ್ಲಿಲ್ಲದಿದ್ದರೂ, ಈಗ್ಗೆ ಕೆಲ ತಿಂಗಳುಗಳಿಂದ ಮೇಲಿಂದ ಮೇಲೆ ನಿರಂತರವಾಗಿ ಅಲ್ಲಿನ ರಸ್ತೆಗಳಲ್ಲಿ, ಮನೆ ಗಳು, ಕಟ್ಟಡಗಳು ಬಿರುಕುಬಿಡುತ್ತಲೇ ಇವೆ. ಅದೂ ಬಿಡಿ, ಮೊನ್ನೆಮೊನ್ನೆ ಸಿಕ್ಕಿಂನಲ್ಲಾಗಿದ್ದುದು ಏನು? ಅಲ್ಲಿನ ಸರೋವರ ಒಡೆದ್ದು ಇಂಥ ಬಿರುಕಿನ ಪರಿಣಾಮವೇ ಅಲ್ಲವೇ? ಮಾನವನ ಅತಿರೇಕದ ಚಟುವಟಿಕೆಗಳ ಕೊಡುಗೆಯೇ ಇದು ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಅಂತರ್ಜಲದ ಮೇಲಿನ ಶೋಷಣೆ ಮುಂದೊಂದು ದಿನ ನಮ್ಮನ್ನು ಎಂಥ ಹೀನಸ್ಥಿತಿಗೂ ಕೊಂಡೊಯ್ದು ನಿಲ್ಲಿಸಬಲ್ಲುದು.

ಇದು ಗೊತ್ತಾಗಬೇಕಿದ್ದರೆ, ಮೊದಲು ನಮ್ಮಲ್ಲಿನ ಅಂತರ್ಜಲದ, ಅದು ಅಡಗಿರುವ ಭೂಭಾಗದ ವೈವಿಧ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಅಂತರಗಂಗೆಯೂ ಒಂದು ರೀತಿಯಲ್ಲಿ ಹೃದಯದಲ್ಲಿ ಅಡಗಿ ಕುಳಿತ ಭಾವನೆಗಳಿದ್ದಂತೆ. ಕೆಲವೊಮ್ಮೆ ಇರುವಿಕೆಯೇ ಹೀಗಾಗಿಯೇ ಬಹಳ ಆಳಕ್ಕೆ ಇಲ್ಲಿ ನೀರು ಇಂಗಿ ಇಳಿಯುವುದಿಲ್ಲ. ಹಾಗೆಂದು ಶಿಲೆಗಳ ಮೇಲ್ಭಾಗದಲ್ಲಿ ಯಥೇಚ್ಛ ನೀರು ನಿಲ್ಲುತ್ತದೆ. ಕೆಲವೆಡೆ ಶಿಲೆಗಳು ಸವೆದು, ಬಿರುಕು ಬಿಡುತ್ತ ಬಂದಿದ್ದ ಕಡೆಯಲ್ಲಿ ಹೆಚ್ಚು ನೀರು ಸಂಗ್ರಹವಾಗು
ತ್ತದೆ. ಎಂಥದ್ದೇ ಗಟ್ಟಿ ಹೃದಯ ಎಂದರೂ ಬದುಕಿನಲ್ಲಿ ಹೊಡೆತಗಳು ಬೀಳುತ್ತಲೇ ಬಂದಾಗ ಮನುಷ್ಯ ಮೆತ್ತಗಾಗಿ ಬಿಡುವುದಿಲ್ಲವೇ? ಹಾಗೆಯೇ. ಈ ಪೈಕಿ ಬೆಸ್ಟಾಲ್‌ಶಿಲೆಯಲ್ಲಿ ಹೆಚ್ಚು ರಂಧ್ರಗಳಿವೆ.

ಈ ಶೀಲೆಯಿರುವ ಭಾಗದಲ್ಲಿ ಅಂತರ್ಜಲದ ಸಮೃದ್ಧಿ ಹೆಚ್ಚು. ಮತ್ತೊಂದು ತೀರಕ್ಕೆ ಭಾವನೆಗಳ ಜತೆ ಅಡಿ ಇಟ್ಟರೆ ಅಲ್ಲಿ ಎಲ್ಲವೂ ಮೆತ್ತನೆಯ ಅನುಭವ. ಅದು ರೇವೆ ಮಣ್ಣಿನ ಪ್ರದೇಶ, ಉತ್ಕಂಟೆಯ ಶರೆ ಕಟ್ಟಿದ ಸ್ಥಿತಿಯಿದ್ದಂತೆ. ಇಲ್ಲಿ ಗಟ್ಟಿ ಶಿಲೆಗಳ ಬದಲು ಆವರಿಸಿಕೊಂಡಿರುವುದು ಮೆಕ್ಕಲು ಮಣ್ಣು. ನದಿಗಳು ತೀರದಿಂದ ತಂದು ಸಂಗ್ರಹಿಸಿದ ಬಳುವಳಿಗಳಿವು. ಹಿಮಾಲಯ ಪರ್ವತದ ಅಡಿಯಿಂದ ಆರಂಭಗೊಂಡು ದಖ್ಖನ್‌ಪ್ರಸ್ಥಭೂಮಿಯವರೆಗೂ ಅಡ್ಡಡ್ಡ ಹಬ್ಬಿದ ಭಾಗದು.

ಸಿಂಧೂ, ಗಂಗಾ, ಬ್ರಹ್ಮಪುತ್ರದಂಥ ಮಹಾನ್ ನದಿಗಳ ಆಡಂಬೋಲವಾಗಿರುವ ಈ ಜಾಗದಲ್ಲಿ ಮೆತ್ತನೆಯ ಮಣ್ಣು ಬಿಟ್ಟು ಬೇರೇನಿರಲು ಸಾಧ್ಯ? ನದಿಯ ಮಗ್ಗುಲಿಗೆ ಬಿದ್ದಿರುವ ಇಲ್ಲಿ ಸಹಜವಾಗಿಯೇ ಅಂತರ್ಜಲ ಶ್ರೀಮಂತಿಕೆ ನಿರೀಕ್ಷಿತ. ಆರಂಭದ ಹಿಮಾಲಯ ತಪ್ಪಲಿನಲ್ಲಂತೂ ಮಿತಿಮೀರಿದ ಮಳೆಯ ಪರಿಣಾಮ ನೀರು ಇಂಗುವ ಪ್ರಮಾಣವೂ ಹೆಚ್ಚೇ. ಮೆತ್ತನೆಯ ಮಣ್ಣಿನಲ್ಲಿ ಸುಲಭವಾಗಿ ನೀರು ಇಳಿದು ಆಳಕ್ಕೆ ಪಯಣಿಸುವುದರಿಂದ ಭೂಮಿಯೊಡಲೂ ಗೊತ್ತಾಗುವುದಿಲ್ಲ. ಆದರೆ ಆಂತರ್ಯದಲ್ಲಿ ಅದು ತುಂಬಿ ತುಳುಕುತ್ತಿರುತ್ತದೆ. ಮತ್ತೆ ಕೆಲವೊಮ್ಮೆ ಮೇಲ್ನೋಟಕ್ಕೆ ತುಂಬ ಭಾವ ಜೀವಿಯಂತೆ ಕಾಣುವವರ ಹೃದಯ ಬರಡೋ
ಬರಡಾಗಿರುತ್ತದೆ. ಈ ಅಂತರ್ಜಲ ಎಂಬುದೂ ಪಕ್ಕಾ ಹಾಗೆಯೇ.

ಎಲ್ಲೋ ಇಂಗುತ್ತದೆ. ಇನ್ನೆಲ್ಲೋ ಬುಗ್ಗೆಯಾಗಿ ಚಿಮ್ಮುತ್ತಿರುತ್ತದೆ. ಹಾಗೆ ಇಂಗಿ ಚಿಮ್ಮುವ ನಡುವಿನ ವ್ಯಾಪಾರ ಮಾತ್ರ ಅತ್ಯಂತ ಕುತೂಹಲಕಾರಿ. ನೀವು ಗಮನಿಸಿರಬಹುದು, ಅತ್ಯಂತ ಕಲ್ಲು ಹೃದಯದ ವ್ಯಕ್ತಿಗಳು ಎಂದು ನಾವು ಕರೆಯುವ ವ್ಯಕ್ತಿಗಳನ್ನು. ನೋಡಲು ಅತ್ಯಂತ ಸೌಮ್ಯ ಸ್ವಭಾವದ, ಮೃದು ಮಧುರ ಮಾತಿನ, ನಯ ನಾಜೂಕಿನ ನಡತೆಯ ವ್ಯಕ್ತಿಗಳು ಸಂಕಷ್ಟದ ಸಂದರ್ಭದಲ್ಲಿ ಅತ್ಯಂತ ಕಠಿಣ ನಿರ್ಧಾರ ಕೈಗೊಳ್ಳಲೂ ಹಿಂಜರಿಯುವುದಿಲ್ಲ. ಇನ್ನು ಕೆಲವರದ್ದು ಹೆಂಗರುಳು. ನೋಡಲು ತುಂಬಾ ಗಡಸು, ಒರಟು ಸ್ವಭಾವ, ಮಾತೂ ಹಾಗೆಯೇ. ಆದರೆ, ಅವರ ಮನಸ್ಸು ಮಾತ್ರ ಐಸ್‌ಕ್ಯಾಂಡಿಯಂತೆ, ಪಕ್ಕನೆ ಕರಗಿ
ಹೋಗುತ್ತದೆ. ಈ ನೆಲದ ಅದರೊಳಗಿನ ಜಲದ ಗುಣವೂ ಅಂಥದ್ದೇ.

ನಮ್ಮ ಗಟ್ಟಿ ಶಿಲೆಗಳಿರುವ ಪ್ರದೇಶಗಳನ್ನು ಈ ಎರಡನೇ ಸಾಲಿಗೆ ಸೇರಿಸಬಹುದು. ನಾವೀಗ ವಾಸಿಸುತ್ತಿರುವ ಅಂದರೆ ಕರುನಾಡಿನ ಪ್ರದೇಶದ ಭೌತಿಕ ಗುಣ ಇಂಥದ್ದೇ. ಗಟ್ಟಿ ಶಿಲೆಯ ಗಡಿಯನ್ನು ಅಷ್ಟೊಂದು ಕರಾರುವಾಕ್ ಆಗಿ ಗುರುತಿಸಲಾಗದಿದ್ದರೂ ಉತ್ತರದಲ್ಲಿ ನರ್ಮದಾ ಮತ್ತು ತಾಪಿ ನದಿಗಳಿಂದ ಇಂಥ ಲಕ್ಷಣಗಳು ಆರಂಭವಾಗುತ್ತವೆ. ದಕ್ಷಿಣದಲ್ಲಿ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳುತ್ತದೆ. ಇದನ್ನೇ ನಾವು ದಖ್ಖನ್‌ಪ್ರಸ್ಥಭೂಮಿ ಎಂದು ಗುರುತಿಸುವುದು. ನಮ್ಮ
ಪಶ್ಚಿಮಘಟ್ಟ ಪ್ರದೇಶವೆಂದುಕೊಂಡರೂ ಸರಿಯೇ. ದೇಶದ ಸುಮಾರು ೨/೩ನೇ ಭಾಗವನ್ನು ಆಕ್ರಮಿಸಿಕೊಂಡಿರುವ ಈ ಪ್ರದೇಶದಲ್ಲಿ ಭೂಜಲವೆಂದರೆ ಅಳುಮುಂಜಿಯರಿದ್ದಂತೆ.

ಖಷಿಗೂ ಕಣ್ಣಿರ ಕೋಡಿ ಹರಿಯುತ್ತದೆ, ದುಃಖಕ್ಕಂತೂ ಭೋರಿಡುತ್ತಾರೆ. ಅಷ್ಟು ಸುಲಭ ಅವರಿಗೆ ಕಣ್ಣಿರೆಂದರೆ. ಹಾಗೆಯೇ ಈ ಭಾಗದಲ್ಲಿನ ಅಂತರ್ಜಲ. ಹಾಗೆ ನೋಡಿದರೆ ಇದು ಮೇಲ್ಜಲಕ್ಕಿಂತ ಹೆಚ್ಚೇನೂ ಭಿನ್ನವಾಗಿ ಕಾಣುವುದಿಲ್ಲ. ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಪರಿಧಿಯಲ್ಲಿ ಅಂತರ್ಜಲ ವೆಂದಾಕ್ಷಣವೇ ನೆನಪಿಗೆ ಬರುವುದು ಭೂಮಿಯ ಮೇಲ್ಭಾಗದಲ್ಲಿರುವ ಹೊಂಡ, ಕೆರೆ, ಸರೋವರ, ಹಳ್ಳ, ನದಿಗಳೇ.

ಮಳೆಯ ನೀರು ಹರಿದು ಸೇರುತ್ತದೆಯಲ್ಲ ಅಂಥ ತಾಣ ಗಳಲ್ಲಿನ ತುಸು ಅಡಿಯ ನೀರನ್ನೂ ಇಲ್ಲಿ ಅಂತರ್ಜಲದ ರೂಪದಲ್ಲಿಯೇ ಗುರುತಿಸಲಾಗುತ್ತದೆ. ಹೀಗಾಗಿ ಇಲ್ಲಿ ಅಂತರ್ಜಲವನ್ನು ತೆರೆದ ಬಾವಿ ಇಲ್ಲವೆ ಕೊಳವೆ ಬಾವಿಗಳ ಮೂಲಕ ಹೊರ ತೆಗೆದು ಬಳಸಲಾಗುತ್ತದೆ. ಅಂದ ಹಾಗೆ ಇಷ್ಟೊಂದು ಮೃದುವಾದ ಆಂತರ್ಯ ವನ್ನು ಹೊಂದಿರುವ ಭೂಮಿಯ ಹೊರಭಾಗ ಮಾತ್ರ ಗಟ್ಟಿ ಗಟ್ಟಿ.

ಹೆಂಗರುಳಿನ ಗಂಡಸಿನಂತೆ. ಇಲ್ಲಿನ ಶಿಲಾ ಪದರವೂ ಅಪರೂಪದ್ದೇ. ಗ್ರಾನೈಟ್, ಬೆಸ್ಟೆಲ್, ನಿಶ್, ಶಿಸ್ಟ್ ಮತ್ತು ಕ್ವಾರ್ಝಾಯ್ಟ್ ಶಿಲೆಗಳೆಂದು ಇವುಗಳನ್ನು ಗುರುತಿಸಲಾಗುತ್ತದೆ. ಜಲ ಸಂಗ್ರಹಕ್ಕೆ ಇವುಗಳ ಕಠಿಣತೆಯೂ ಮಾರಕ. ಭರ್ತಿಯಾಗಿಯೇ ಇರುತ್ತದೆ. ಒಂದೇ ಸಮಸ್ಯೆಯೆಂದರೆ ಬಹು ಎತ್ತರದಲ್ಲಿ ಈ ಭಾಗ ಇರುವುದರಿಂದ ಅಷ್ಟೇ ವೇಗವಾಗಿ ಇಲ್ಲಿನ ಅಂತರ್ಜಲ ಬಸಿದು ಕೆಳಭಾಗಕ್ಕೆ ಹೋಗಿಬಿಡುತ್ತದೆ.

ಇಲ್ಲಿಂದ ಕೆಳಭಾಗಕ್ಕೆ ಬರುತ್ತಿದ್ದಂತೆ ಶುಷ್ಕತೆ ಆವರಿಸಿಕೊಳ್ಳುತ್ತದೆ. ಜತೆಗೆ ಅಂತರ್ಜಲ ಲವಣಯುಕ್ತವೂ ಹೌದು. ಇದನ್ನು ಹೊರತುಪಡಿಸಿ ನದಿಯ ಮಗ್ಗುಲು, ಸಮುದ್ರ ತೀರದಲ್ಲಿ ಭೂಜಲ ಸಮೃದ್ಧಿ ಇದ್ದರೂ ಗುಣಸಾಮ್ಯತೆ ಇಲ್ಲ. ಇವೆರಡೂ ರೀತಿಯ ಭೂಜಲ ಪ್ರದೇಶವನ್ನು ಹೊರತು ಪಡಿಸಿ, ಇನ್ನೊಂದು ಬಗೆಯ ಭೂ ಪ್ರದೇಶ ನಮ್ಮಲ್ಲಿದೆ. ಸಂದರ್ಭಕ್ಕೆ ತಕ್ಕಂತೆ ಅತ್ತು ಹಗುರಾಗುವ ಮತ್ತೆ ಕ್ಷಣದಲ್ಲೇ ಏನೂ ಆಗಿಲ್ಲದಂತೆ ನಗುತ್ತಾ ಹೊರಟುಬಿಡುವ ಹಗುರ ಹೃದಯದ ಮಂದಿಯಿದ್ದಂತೆ. ಮರಳು ಕಲ್ಲಿನ ಪ್ರಾಬಲ್ಯ ವಿರುವ ಆಂಧ್ರಪ್ರದೇಶ, ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ತುಳುನಾಡು ಇದಕ್ಕೆ ಉತ್ತಮ
ಉದಾಹರಣೆ. ನೀರನ್ನು ಸುಲಭವಾಗಿ ಬಸಿಯಲು ಬಿಡುವ ಮರಳು ಕಲ್ಲುಗಳಿರುವುದೇ ಇದಕ್ಕೆ ಕಾರಣ.

ಸಂಗ್ರಹ ಸುದೀರ್ಘ ಅವಧಿಯವರೆಗೆ ಉಳಿಯದಿದ್ದರೂ ಬಳಕೆಯ ದೃಷ್ಟಿಂದ ಇಲ್ಲಿನ ಅಂತರ್ಜಲ ಅನುಕೂಲಕಾರಿ. ಭೂ ಪ್ರದೇಶವನ್ನು ಹೊರತುಪಡಿಸಿಯೂ ಹವಾಗುಣ, ಮಳೆಯ ಹಂಚಿಕೆ, ಗಾಳಿಯ ಒತ್ತಡ, ಮಣ್ಣಿನ ಗುಣ, ಅರಣ್ಯ ಪ್ರದೇಶ, ಬಳಕೆಯ ಪ್ರಮಾಣ ಈ ಎಲ್ಲ ಸಂಗತಿಗಳೂ ಅಂತರ್ಜಲದ ವಿಷಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಏನೇ ಇರಲಿ ಅಂತರ್ಜಲವೆನ್ನುವುದು ತಲೆತಲಾಂತರದಿಂದ, ಸಾವಿರಾರು ವರ್ಷಗಳಿಂದ ಸಂಗ್ರಹಿಸಿ, ಕಾಪಿಟ್ಟುಕೊಂಡು
ಬಂದ ನಿಽ. ಇಂಥ ಅತ್ಯಪೂರ್ವ ಸಂಪನ್ಮೂಲವೊಂದನ್ನು ಬರಿದುಗೊಳಿಸಿಕೊಳ್ಳುವುದೆಂದರೆ ಆಳದ ಗಾಯದಲ್ಲಿನ ಕೊನೆಯ ಊತದಂತೆಯೇ ಸರಿ!

ತರಚಿದ ಗಾಯಗಳಲ್ಲಿ ತಕ್ಷಣಕ್ಕೆ ಉರಿ ವಿಪರೀತವಿರುತ್ತದೆ. ಆದರೆ ಬೇಗನೆ ಗಾಯ ಮಾಯುತ್ತದೆ. ಆದರೆ ದೊಡ್ಡಗಾಯದಲ್ಲಿ ತಕ್ಷಣಕ್ಕೆ ರಕ್ತ ಚಿಮ್ಮುವುದೂ ಇಲ್ಲ. ನೋವೂ ಅನುಭವಕ್ಕೆ ಬರುವುದಿಲ್ಲ. ಆದರೆ ನಂತರದ ಕ್ಷಣಗಳಲ್ಲಿ ಎದುರಿಸುವ ಬಾಧೆ ಸಹಿಸಲ ಸಾಧ್ಯ!

ಜೋಶಿಮಠ, ಸಿಕ್ಕಿಂನಲ್ಲಾಗಿರುವುದು ತರಚುಗಾಯ. ಅಮೆರಿಕದಲ್ಲಿ ಕಾಣಿಸಿರುವ ಬಿರುಕು ದೊಡ್ಡ ಗಾಯ. ಹಾಗೆಂದು ನಮ್ಮ ತರಚು ಗಾಯವನ್ನು ಇನ್ನಷ್ಟು ಕೆರೆದು
ದೊಡ್ಡದಾಗಿಸಿಕೊಂಡು, ನಂಜಾಗಲು ಬಿಡಬಾರದಲ್ಲಾ? ಆ ಎಚ್ಚರಿಕೆ ನಮ್ಮಲ್ಲಿ ಮೊಳೆಯುವುದೊಳಿತು.

Leave a Reply

Your email address will not be published. Required fields are marked *

error: Content is protected !!