Friday, 13th December 2024

ಉತ್ತರ ಭಾರತಕ್ಕೆ ಕರ್ನಾಟಕದ ತೆರಿಗೆ ಪಾಲು !

ವೀಕೆಂಡ್ ವಿತ್ ಮೋಹನ್

camohanbn@gmail.com

ಬ್ರಿಟಿಷರನ್ನು ಭಾರತದಿಂದ ಓಡಿಸಲು ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ, ಅಖಂಡ ಭಾರತದ ಪ್ರತಿಯೊಂದು ಹಳ್ಳಿಯೂ ಭಾಗವಹಿಸಿತ್ತು. ಇಡೀ
ದೇಶವೇ ಒಟ್ಟಾಗಿ ನಿಂತು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಧುಮುಕಿತ್ತು. ಈ ವೇಳೆ ಜಿಲ್ಲೆ, ತಾಲೂಕು, ರಾಜಮನೆತನ ವೆಂಬ ಭೇದಭಾವವಿರಲಿಲ್ಲ. ಭಾರತ ಮಾತೆಯನ್ನು ಬ್ರಿಟಿಷರ ಬಿಗಿಮುಷ್ಟಿಯಿಂದ ಮುಕ್ತಿಗೊಳಿಸುವುದು ಪ್ರತಿಯೊಬ್ಬ ಭಾರತೀಯನ ಉದ್ದೇಶವಾಗಿತ್ತು. ಹೀಗೆ ಎಲ್ಲರ ಒಗ್ಗಟ್ಟಿನ
ಫಲವಾಗಿ ಭಾರತ ಸ್ವತಂತ್ರವಾಯಿತು.

ಸ್ವಾತಂತ್ರ್ಯಾನಂತರ, ಭಾರತದ ರಾಜಮನೆತನಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಲೀನಗೊಳಿಸುವ ಕಾರ್ಯಕ್ಕೆ ಚಾಲನೆ ದೊರೆತು, ಸರ್ದಾರ್ ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ ಭಾರತ ಒಕ್ಕೂಟ ವ್ಯವಸ್ಥೆ ರಚನೆಯಾಯಿತು. ಇದಕ್ಕೆ ಅನುಗುಣವಾಗಿ ಭಾರತದ ಸಂವಿಧಾನವೂ ರೂಪು
ಗೊಂಡಿತ್ತು. ಅದರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವರು, ರಾಜ್ಯ ಮತ್ತು ಕೇಂದ್ರದ ನಡುವಿನ ಸಮತೋಲನದ ಪರಿಚ್ಛೇದಗಳನ್ನು ಸೇರಿಸಿದ್ದರು. ಸಂವಿಧಾನದ ಕೆಲವೊಂದು ಪರಿಚ್ಛೇದಗಳಿಗೆ ಬಾಬಾಸಾಹೇಬರ ವಿರೋಧವಿದ್ದರೂ, ನೆಹರುರ ಸ್ವಾರ್ಥ ರಾಜಕೀಯಕ್ಕಾಗಿ ಅವುಗಳ ಸೇರ್ಪಡೆಯಾಗಿತ್ತು.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸಿನ ಹಂಚಿಕೆ ಪ್ರಮುಖ ವಿಷಯವಾಗಿರುತ್ತದೆ. ಒಂದು ದೇಶವನ್ನು ನಡೆಸುವು ದಕ್ಕೂ, ಒಂದು ಕುಟುಂಬ ವನ್ನು ನಡೆಸುವುದಕ್ಕೂ ಬಹಳಷ್ಟು ಸಾಮ್ಯತೆ ಇರುತ್ತದೆ. ಕುಟುಂಬವೊಂದರಲ್ಲಿ ದುಡಿಯುವ ಕೈಗಳು ಕಡಿಮೆ ಇರುವ ರೀತಿಯಲ್ಲಿ ದೇಶದಲ್ಲಿಯೂ ದುಡಿಯುವ ಕೈಗಳು ಕಡಿಮೆ ಇರುತ್ತವೆ. ಕುಟುಂಬದಲ್ಲಿರುವಂತೆ ವಯಸ್ಸಾಗಿ ದುಡಿಯಲಾಗದ ಹಿರಿಯರು ಭಾರತ ದಲ್ಲಿದ್ದಾರೆ, ಕೋಟ್ಯಂತರ ಶಾಲಾ ಮಕ್ಕಳು, ಮಾನಸಿಕ ಅಸ್ವಸ್ಥರು, ವಿಕಲಚೇತನರು, ನಿರುದ್ಯೋಗಿಗಳು, ವ್ಯವಹಾರದಲ್ಲಿ ಕೈಸುಟ್ಟುಕೊಂಡವರೂ
ಇದ್ದಾರೆ.

ಇವರೆಲ್ಲರನ್ನೂ ಒಂದೇ ಕುಟುಂಬದ ಮಕ್ಕಳಂತೆ ಒಟ್ಟಿಗೆ ಸರಿದೂಗಿಸಿಕೊಂಡು ಹೋಗುವ ಆರ್ಥಿಕ ನೀತಿಯನ್ನು ಸಂವಿಧಾನದಲ್ಲಿ ಅಳವಡಿಸುವಲ್ಲಿ ಬಾಬಾಸಾಹೇಬರ ಪಾತ್ರ ಪ್ರಮುಖವಾದದ್ದು. ಸಂವಿಧಾನದ ಕರಡು ರಚನಾ ಪ್ರಕ್ರಿಯೆಯ ಸಂದರ್ಭದಲ್ಲಿ, ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆ ಹಂಚಿಕೆ ಕುರಿತಾದ ಹಲವು ಚರ್ಚೆಯಲ್ಲಿ ಬಾಬಾಸಾಹೇಬರು ಪಾಲ್ಗೊಂಡಿದ್ದರು. ಸಂವಿಧಾನದ ೨೬೦ನೇ ಪರಿಚ್ಛೇದದಲ್ಲಿ ಹಣಕಾಸು ಆಯೋಗದ ಬಗ್ಗೆ ಉಲ್ಲೇಖಿಸಲಾಗಿದೆ ಮತ್ತು ಕೇಂದ್ರ-ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯ ಸೂತ್ರವನ್ನೂ ಹೇಳಲಾಗಿದೆ.

ಭಾರತದ ಮೊಟ್ಟ ಮೊದಲ ಹಣಕಾಸು ಆಯೋಗ ೧೯೫೧ರಲ್ಲಿ ಅಸ್ತಿತ್ವಕ್ಕೆ ಬಂತು. ಇದು ಪಾಲಿಸಬೇಕಾದಂಥ ನಿಯಮಾವಳಿಗಳನ್ನು ಸಂವಿಧಾನ
ದಲ್ಲಿ ಅಳವಡಿಸುವಲ್ಲಿ ಬಾಬಾಸಾಹೇಬರು ಪ್ರಮುಖ ಪಾತ್ರ ವಹಿಸಿದ್ದರು. ೧೯೫೧ರಿಂದ ಇಂದಿನವರೆಗೂ ಈ ಆಯೋಗದ ಶಿಫಾರಸಿನ ಮೇರೆಗೆ ಕೇಂದ್ರ ದಿಂದ ರಾಜ್ಯಗಳಿಗೆ ತೆರಿಗೆ ಹಣವು ಹಂಚಿಕೆ ಯಾಗುತ್ತಿದೆ. ಸಂವಿಧಾನದಡಿ ಸ್ಥಾಪಿತವಾಗಿರುವ ಸ್ವತಂತ್ರ ಸಂಸ್ಥೆಯಾದ ಈ ಆಯೋಗದಲ್ಲಿ ಕಾರ್ಯ ನಿರ್ವಹಿಸುವವರು ಉನ್ನತ ಮಟ್ಟದ ಅಧಿಕಾರಿಗಳು. ಸಂವಿಧಾನ ರಚನಾ ಪ್ರಕ್ರಿಯೆಯ ವೇಳೆ ಚರ್ಚಿಸಿದ ನಿಯಮಾವಳಿಗೆ ಅನುಸಾರವಾಗಿ ಕೆಲಸ ಮಾಡುತ್ತಾ ಬಂದಿರುವ ಆಯೋಗವು ರಾಜ್ಯಗಳ ಜನಸಂಖ್ಯೆ, ಭೌಗೋಳಿಕ ಅಭಿವೃದ್ಧಿಗಳಿಗನುಸಾರವಾಗಿ ತೆರಿಗೆ ಹಂಚಿಕೆ ಮಾಡುತ್ತಾ ಬಂದಿದೆ.

ಉದಾಹರಣೆಗೆ, ಕೇರಳದಲ್ಲಿ ಅರಣ್ಯ ಪ್ರದೇಶ ಹೆಚ್ಚಿರುವ ಕಾರಣ ಆಧುನಿಕ ಜಗತ್ತಿಗೆ ತಕ್ಕಂತೆ ಸ್ಥಳೀಯವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವು
ದಿಲ್ಲ, ಹಾಗಾಗಿ ಅಲ್ಲಿನ ತೆರಿಗೆ ಸಂಗ್ರಹಣೆ ಕಡಿಮೆಯಿರಬಹುದು. ಮುಂಬೈ ಭಾರತದ ಪ್ರಮುಖ ವಾಣಿಜ್ಯ ನಗರವಾಗಿರುವ ಕಾರಣ ಅಲ್ಲಿನ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಿರಬಹುದು. ಈಶಾನ್ಯ ರಾಜ್ಯಗಳಲ್ಲಿನ ಭೌಗೋಳಿಕ ಸಮಸ್ಯೆಗಳ ಕಾರಣಕ್ಕಾಗಿ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆಯಿರಬಹುದು. ಜನಸಂಖ್ಯೆ ಮತ್ತು ಭೌಗೋಳಿಕ ವ್ಯತ್ಯಾಸದ ಕಾರಣಕ್ಕಾಗಿ ಅತಿಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳ ಪಾಲನ್ನು ಇತರೆ ರಾಜ್ಯಗಳು ತೆಗೆದುಕೊಳ್ಳಬಹುದು.

ಕುಟುಂಬವೊಂದರಲ್ಲಿ ಹೆಚ್ಚಾಗಿ ದುಡಿಯುವ ಸದಸ್ಯನ ಸಹಾಯದಿಂದ, ಕಡಿಮೆ ಸಂಬಳದ ಮತ್ತೊಬ್ಬ ಸದಸ್ಯನನ್ನು ಸಾಕಬೇಕಾದಂಥ ಪರಿಸ್ಥಿತಿ ಎದುರಾಗುವ ಮಾದರಿಯಲ್ಲಿ ರಾಜ್ಯಗಳ ಆರ್ಥಿಕತೆಯನ್ನು ಕೇಂದ್ರವು ನೋಡಬೇಕಾಗುತ್ತದೆ. ಕೇಂದ್ರದಲ್ಲಿ ಅಧಿಕಾರ ನಡೆಸಿದ ಎಲ್ಲ ರಾಜಕೀಯ ಪಕ್ಷ
ಗಳೂ, ಹಣಕಾಸು ಆಯೋಗದ ಶಿಫಾರಸಿನ ಮೇಲೆ ರಾಜ್ಯ ಗಳಿಗೆ ಮೊದಲಿಂದಲೂ ತೆರಿಗೆ ಹಂಚಿಕೆ ಮಾಡುತ್ತ ಬಂದಿವೆ. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನರಸಿಂಹರಾವ್, ಮೊರಾರ್ಜಿ ದೇಸಾಯಿ, ದೇವೇಗೌಡ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್, ನರೇಂದ್ರ ಮೋದಿ ಎಲ್ಲರ ಅವಧಿಯಲ್ಲೂ ಇದೇ ಮಾದರಿಯ ಅನುಸರಣೆಯಾಗಿದೆ.

೧೪ ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರು, ತೆರಿಗೆ ಹಂಚಿಕೆ ವಿಷಯದಲ್ಲಿ ಕೇಂದ್ರವು ರಾಜ್ಯದೆಡೆಗೆ tARtmfy ಧೋರಣೆ ತೋರುತ್ತಿದೆ ಯೆನ್ನುತ್ತಾ, ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆಯ ಪ್ರಮಾಣ ಮತ್ತು ಕೇಂದ್ರದಿಂದ ಹಂಚಿಕೆಯಾಗುವ ತೆರಿಗೆ ಪ್ರಮಾಣವನ್ನು ಹೇಳುತ್ತಿರುತ್ತಾರೆ. ಆದರೆ ಒಂದು ರಾಷ್ಟ್ರೀಯ ಪಕ್ಷದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯರು, ತಮ್ಮದೇ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಾಗುತ್ತಿತ್ತೆಂಬ ಸತ್ಯವನ್ನು ಹೇಳುವುದಿಲ್ಲ.

ನೆಹರುರಿಂದ ಶುರುಮಾಡಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಮಯದಲ್ಲೂ ಇದೇ ಮಾದರಿಯಲ್ಲಿ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಾಗುತ್ತಿತ್ತು. ವಾಸ್ತವದಲ್ಲಿ ರಾಜ್ಯಗಳ ತೆರಿಗೆ ಹಂಚಿಕೆಯನ್ನು ಶೇ.೩೨ರಿಂದ ೪೧ಕ್ಕೆ ಏರಿಕೆ ಮಾಡಿ ಹೆಚ್ಚಿನ ಹಂಚಿಕೆಯಾಗುವಂತೆ ಮಾಡಿದ್ದು ನರೇಂದ್ರ ಮೋದಿ ನೇತೃತ್ವದ ಸರಕಾರ. ದಕ್ಷಿಣದ ರಾಜ್ಯಗಳು ದುಡಿಯುವ ಹಣವನ್ನು ಉತ್ತರದ ರಾಜ್ಯಗಳಿಗೆ ಹಂಚಲಾಗುತ್ತಿದೆ ಯೆಂದು ಬೊಬ್ಬೆ ಹೊಡೆಯುವವರು, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೫ ವರ್ಷ ಕಳೆದರೂ ಉತ್ತರದ ರಾಜ್ಯಗಳು ಯಾಕೆ ಅಭಿವೃದ್ಧಿಯಾಗಲಿಲ್ಲವೆಂದು, ಆ ರಾಜ್ಯಗಳನ್ನು ಅತಿಹೆಚ್ಚು ಆಳಿದ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳನ್ನು ಹಾಗೂ ಕೇಂದ್ರದಲ್ಲಿ ಅತಿಹೆಚ್ಚು ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಬೇಕು. ಉತ್ತರ ಪ್ರದೇಶ ಸುಮಾರು ೨೨ ಕೋಟಿ ಜನಸಂಖ್ಯೆಯಿರುವ ದೊಡ್ಡ ರಾಜ್ಯ. ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬರುವವರೆಗೂ ದಕ್ಷಿಣದವರಿಗೆ ಉತ್ತರ ಪ್ರದೇಶವೆಂದರೆ ನೆನಪಿಗೆ ಬರುತ್ತಿದ್ದುದು ಬಡತನ ಮತ್ತು ಅಪರಾಧ ಪ್ರಪಂಚ. ಬೆಂಗಳೂರಿನಲ್ಲಿ ಪಾನಿಪುರಿ ಮಾರುವ ಉತ್ತರ ಪ್ರದೇಶದ ಮಂದಿಯನ್ನು ‘ಗತಿಯಿಲ್ಲದೆ ಇಲ್ಲಿಗೆ ಬಂದವರು’ ಎಂದು ಅಣಕಿಸುವವರು, ಅದೇ ರಾಜ್ಯವನ್ನು ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷದವರು ದೆಹಲಿಯಲ್ಲಿ ಗದ್ದುಗೆ ಹಿಡಿಯ ಬೇಕಾದರೆ ಆ ರಾಜ್ಯವನ್ನು ಗೆಲ್ಲಲೇಬೇಕೆಂಬ ಬಹಿರಂಗ ಸತ್ಯವನ್ನು ಅರಿಯಬೇಕು.

ಭಾರತದ ಮೊದಲ ಪ್ರಧಾನಿ ನೆಹರು ಅವರು ಸುಮಾರು ೨ ದಶಕಗಳ ಕಾಲ ಪ್ರತಿನಿಧಿಸಿದ ಫುಲ್‌ಪುರ್ ಕ್ಷೇತ್ರ ಉತ್ತರ ಪ್ರದೇಶದಲ್ಲಿದೆ. ಅದೇ ರೀತಿಯಲ್ಲಿ, ರಾಯ್‌ಬರೇಲಿ (ಇಂದಿರಾ ಗಾಂಧಿ/ಸೋನಿಯಾ ಗಾಂಧಿ), ಅಮೇಥಿ (ರಾಜೀವ್ ಗಾಂಧಿ/ರಾಹುಲ್ ಗಾಂಧಿ) ಕ್ಷೇತ್ರಗಳೂ ಉತ್ತರ ಪ್ರದೇಶದಲ್ಲಿವೆ. ಭಾರತದ ಮೂವರು ಪ್ರಧಾನಿಗಳು ಕಾಂಗ್ರೆಸ್ ವತಿಯಿಂದ ಉತ್ತರ ಪ್ರದೇಶದಲ್ಲಿ ಚುನಾವಣೆ ಯಲ್ಲಿ ಗೆದ್ದವರೇ. ಕಾಂಗ್ರೆಸ್‌ನ ಮತ್ತೋರ್ವ ‘ಸೂಪರ್’ ಪ್ರಧಾನಿ ಸೋನಿಯಾ ಗಾಂಧಿ ಕೂಡ ಉತ್ತರ ಪ್ರದೇಶದಲ್ಲಿ ಗೆದ್ದವರೇ. ಹೀಗೆ ಉತ್ತರ ಪ್ರದೇಶವನ್ನು ತಮ್ಮ ಚುನಾವಣಾ ಅಖಾಡ ಮಾಡಿಕೊಂಡು ದೆಹಲಿ ಗದ್ದುಗೆ ಏರಿದ್ದ ಕಾಂಗ್ರೆಸ್ಸಿ ಗರು, ಆ ರಾಜ್ಯದ ಅಭಿವೃದ್ಧಿಯ ಬಗ್ಗೆ ಆಲೋಚಿಸಲೇ ಇಲ್ಲ.

ಪರಿಣಾಮ, ಕರ್ನಾಟಕದ ತೆರಿಗೆ ಹಣದ ಪಾಲು ಉತ್ತರ ಪ್ರದೇಶಕ್ಕೆ ಹೋಗುತ್ತಿದೆ. ಕಾಂಗ್ರೆಸ್ಸಿನ ನಂತರ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿಪಾರ್ಟಿಯೂ ರಾಜ್ಯದ ಅಭಿವೃದ್ಧಿ ಯೆಡೆಗೆ ಗಮನ ಹರಿಸಲೇ ಇಲ್ಲ. ಒಂದು ಕಾಲಕ್ಕೆ ಕೊಲೆ- ಸುಲಿಗೆಗಳ ರಾಜ್ಯವೆನಿಸಿಕೊಂಡಿದ್ದ ಬಿಹಾರದಲ್ಲಿಯೂ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಲಾಲು ಪ್ರಸಾದ್ ಯಾದವ್ ಮಾಡಿದ್ದಾದರೂ ಏನು? ಪರಿಣಾಮ, ದಕ್ಷಿಣ ಭಾರತದ ರಾಜ್ಯಗಳ ತೆರಿಗೆಯ ಪಾಲನ್ನು ಬಿಹಾರಕ್ಕೆ ನೀಡುತ್ತಾ ಬರಲಾಗಿದೆ.

ಪಶ್ಚಿಮ ಬಂಗಾಳವನ್ನು ಸುಮಾರು ೨೩ ವರ್ಷ ಆಳಿದ ಜ್ಯೋತಿ ಬಸು ನೇತೃತ್ವದ ಕಮ್ಯುನಿಸ್ಟ್ ಸರಕಾರದ ಅವಧಿಯಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿಲ್ಲ. ಕಮ್ಯುನಿಸ್ಟರ ಉಪಟಳದಿಂದಾಗಿ ಆ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹರಿದು ಬರಲಿಲ್ಲ. ಉದ್ಯಮಿಗಳು ಅಲ್ಲಿ ತಮ್ಮ ನೂತನ ಕಾರ್ಖಾನೆ ಸ್ಥಾಪಿಸಲು ಹೆದರುತ್ತಿದ್ದರು. ವಿದೇಶಿ ಬಂಡವಾಳ ವಂತೂ ಮರೀಚಿಕೆಯಾಗಿತ್ತು. ಕಮ್ಯುನಿಸ್ಟರ ಹಾದಿಯಲ್ಲೇ ರಾಜ್ಯ ವನ್ನು ಮುನ್ನಡೆಸಿ ಕೊಂಡು ಬಂದ ಕೀರ್ತಿ ಮಮತಾ ಬ್ಯಾನರ್ಜಿಯವರದ್ದು. ನ್ಯಾನೋ ಕಾರು ತಯಾರಿಕಾ ಘಟಕಕ್ಕೆ ಸಂಬಂಧಿಸಿ ಟಾಟಾ ಸಂಸ್ಥೆಗೆ ಮಂಜೂರಾಗಬೇಕಿದ್ದ ಭೂಮಿಯ ವಿಷಯದಲ್ಲಿ ನ್ಯಾಯಾಲಯವು ಕಳೆದ ವಾರವಷ್ಟೇ ಮಮತಾ ಸರಕಾರಕ್ಕೆ ಸುಮಾರು ೮೧೭ ಕೋಟಿ ರು. ದಂಡವನ್ನು ವಿಧಿಸಿದೆ.

ರಾಜ್ಯವನ್ನಾಳಿದ ಕಾಂಗ್ರೆಸ್, ಕಮ್ಯುನಿಸ್ಟ್, ಟಿಎಂಸಿ ಪಕ್ಷಗಳು ೭ ದಶಕಗಳ ಕಾಲ ಅಭಿವೃದ್ಧಿಯನ್ನೇ ಕಾಣದಂತೆ ಮಾಡಿದ್ದರ ಪರಿಣಾಮ ದಕ್ಷಿಣ ಭಾರತ
ರಾಜ್ಯಗಳ ತೆರಿಗೆ ಪಾಲು ಪಶ್ಚಿಮ ಬಂಗಾಳಕ್ಕೆ ತಲುಪವಂತಾಗಿದೆ. ತೆರಿಗೆ ಹಂಚಿಕೆ ವಿಷಯದಲ್ಲಿ ಉತ್ತರದ ರಾಜ್ಯಗಳೆಡೆಗೆ ಕೈತೋರಿಸುವ ಸಿದ್ದರಾಮಯ್ಯ ನವರು, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್‌ಗಡ, ಜಾರ್ಖಂಡ್ ರಾಜ್ಯಗಳನ್ನಾಳಿದ
ಪ್ರಾದೇಶಿಕ ಪಕ್ಷಗಳ ಜತೆಗೆ ಕೈಜೋಡಿಸುತ್ತಾರೆ. ಚೀನಾ ಮತ್ತು ಪಾಕಿಸ್ತಾನದ ಗಡಿಯ ಸಮೀಪದಲ್ಲಿ ಭಾರತೀಯ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಸ್ಥಾಪಿಸುವುದು ಅಪಾಯಕಾರಿಯಾಗಿದ್ದರಿಂದ ದಕ್ಷಿಣದ ರಾಜ್ಯಗಳಲ್ಲಿ ಅವಕ್ಕೆ ಅನುವು ಮಾಡಿಕೊಡಲಾಗಿತ್ತು. ಎಚ್ ಎಎಲ್, ಬಿಇಎಂಲ್, ಬಿಇಎಲ್ ಸಂಸ್ಥೆಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು.

ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು (ಇಸ್ರೋ) ಬೆಂಗಳೂರಿನಲ್ಲಿ ಸ್ಥಾಪಿಸಿ, ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಲಾಂಚ್‌ಪ್ಯಾಡ್ ನೆಲೆಗೊಳಿ
ಸಲಾಯಿತು. ರೈಲ್‌ಕೋಚ್ ಕಾರ್ಖಾನೆಗೆ ತಮಿಳುನಾಡು ನೆಲೆಯಾಯಿತು. ಸರಕಾರಿ ಸ್ವಾಮ್ಯದ ಪ್ರಮುಖ ಕೈಗಾರಿಕೆಗಳು ಶುರುವಿನಲ್ಲೇ ದಕ್ಷಿಣದ ರಾಜ್ಯಗಳಲ್ಲಿ ಕಾರ್ಯಾರಂಭ ಮಾಡಿದ ಪರಿಣಾಮ, ಈ ರಾಜ್ಯಗಳ ಆರ್ಥಿಕ ಬೆಳವಣಿಗೆಗೆ ಉತ್ತರ ರಾಜ್ಯಗಳಿಗಿಂತಲೂ ಕ್ಷಿಪ್ರವಾಗಿ ಚಾಲನೆ ಸಿಕ್ಕಿತ್ತು.
ಎಸ್.ಎಂ. ಕೃಷ್ಣ ಅಧಿಕಾರಾವಧಿಯಲ್ಲಿ ಬೆಂಗಳೂರಿನಲ್ಲಿ ಐಟಿ ಕ್ಷೇತ್ರದಲ್ಲಾದ ಕ್ರಾಂತಿಕಾರಿ ಬೆಳವಣಿಗೆಯಿಂದಾಗಿ ರಾಜ್ಯದ ಆರ್ಥಿಕ ವೇಗ ಮತ್ತಷ್ಟು ಹೆಚ್ಚಿತು. ಆದರೆ ಅವರು ರಾಜ್ಯದ ಇತರ ಜಿಲ್ಲೆಗಳಿಗೆ ಗಮನ ಹರಿಸದ ಕಾರಣ ಅವುಗಳ ಅಭಿವೃದ್ಧಿಯ ವೇಗ ಹೆಚ್ಚಲಿಲ್ಲ.

ಹೀಗಾಗಿ ೨೦೦೪ರ ಚುನಾ ವಣೆಯಲ್ಲಿ ಸೋಲಬೇಕಾಯಿತು. ಕರ್ನಾಟಕವನ್ನು ಅತಿ ಹೆಚ್ಚು ಅವಧಿಗೆ ಆಳಿದ ಕಾಂಗ್ರೆಸ್, ಉತ್ತರ ಕರ್ನಾಟಕದ ಜಿಲ್ಲೆ ಗಳ
ಅಭಿವೃದ್ಧಿಯೆಡೆಗೆ ಹೆಚ್ಚಿನ ಗಮನ ಹರಿಸಲಿಲ್ಲವೇಕೆ? ಕರ್ನಾಟಕದಲ್ಲಿ ಸಂಗ್ರಹವಾಗುವ ತೆರಿಗೆ ಹಣದಲ್ಲಿ ಬೆಂಗಳೂರಿನ ಪಾಲು ಶೇ.೭೦ರಷ್ಟಿದೆ. ಹೀಗೆ ಸಂಗ್ರಹವಾದ ಹಣದಿಂದಲೇ ರಾಜ್ಯದ ಇತರ ಜಿಲ್ಲೆಗಳ ಅಭಿವೃದ್ಧಿ ಯಾಗಬೇಕಿದೆ.

ಕಲ್ಯಾಣ ಕರ್ನಾಟಕವನ್ನು ಕಳೆದ ೪ ದಶಕಗಳಿಂದ ಪ್ರತಿನಿಧಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆಯವರು, ರಾಜ್ಯ ಮತ್ತು ಕೇಂದ್ರದಲ್ಲಿ ಮಂತ್ರಿಯಾಗಿದ್ದ ವರು. ಅವರು ತಮ್ಮ ಅವಧಿಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯೆಡೆಗೆ ಗಮನ ಹರಿಸಿದ್ದಿದ್ದರೆ, ಬೆಂಗಳೂರಿನ ಜನರ ತೆರಿಗೆ ಹಣದ ಪಾಲನ್ನು ಆ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ನೀಡುವುದು ಕಡಿಮೆ ಯಾಗಿರಬೇಕಿತ್ತು. ಬೀದರ್ ಮತ್ತು ಕಲಬುರ್ಗಿ ವಿಮಾನ ನಿಲ್ದಾಣ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಿ ದೇಶದ ಇತರ ನಗರಗಳೊಂದಿಗೆ ಸಂಪರ್ಕಿಸುವಂತಾಗಲು ನರೇಂದ್ರ ಮೋದಿ ಸರಕಾರವೇ ಬರಬೇಕಾಯಿತು.

ಸ್ವಾತಂತ್ರ್ಯಾನಂತರ ಸುಮಾರು ೭೦ ವರ್ಷ ದೇಶವನ್ನಾಳಿದ ಕಾಂಗ್ರೆಸ್, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತದ ರಾಜ್ಯಗಳನ್ನು ಸಮಾನವಾಗಿ ಅಭಿವೃದ್ಧಿಪಡಿಸಿದ್ದರೆ, ಕರ್ನಾಟಕದಲ್ಲಿ ಸಂಗ್ರಹವಾದ ತೆರಿಗೆಯ ಪಾಲು ಇತರೆ ರಾಜ್ಯಗಳಿಗೆ ಹಂಚಿಕೆಯಾಗುತ್ತಿರಲಿಲ್ಲ. ಸಿದ್ದರಾಮಯ್ಯ ನವರು ಒಂದು ಬೆರಳನ್ನು ಕೇಂದ್ರದ ಕಡೆಗೆ ತೋರಿಸಿ ಸುಳ್ಳು ಹೇಳುತ್ತಿರಬಹುದು; ಆದರೆ ಅವರ ಮೂರು ಬೆರಳುಗಳು ಕಾರಣವನ್ನು ಕಾಂಗ್ರೆಸ್ ಕಡೆಗೆ ತೋರಿಸುತ್ತಿವೆ.