Saturday, 14th December 2024

ವೃದ್ಧ ನಾಯಕರ ಕೈಯಲ್ಲಿದೆ ಅಣ್ವಸ್ತ್ರದ ರಿಮೋಟ್ !

ಶಿಶಿರಕಾಲ

shishirh@gmail.com

ಈಗೊಂದೆರಡು ತಿಂಗಳ ಹಿಂದೆ ಲಂಡನ್ನಿನ ‘ಇಕಾನಮಿಸ್ಟ್’ ಪತ್ರಿಕೆ ಒಂದು ಮಜಕೂರಿನ ಮುಖಪುಟವನ್ನು ಪ್ರಕಟಿಸಿತ್ತು. ಅದರ ಹೆಡಿಂಗ್ ಹೀಗಿತ್ತು: Made in ‘42, road worthy in ‘24. ಮುಖಪುಟದಲ್ಲೊಂದು ೧೯೪೨ರ ಇಸವಿಯ ಹಳೆಯ, ತುಕ್ಕು ಹಿಡಿದ ಲಟ್ಟು ಕಾರು. ಅದರ ಪಕ್ಕದಲ್ಲಿ ಸೂಟು-ಬೂಟು ಧರಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್. ೧೯೪೨ ಜೋ ಬೈಡನ್ ಹುಟ್ಟಿದ ವರ್ಷ. ಅಷ್ಟು ಹಳೆಯ, ೪೨ರ ಮಾಡೆಲ್ ಕಾರು (ಜೋ ಬೈಡನ್) ೨೦೨೪ರ ಕಾಲಮಾನದ ರಸ್ತೆಯಲ್ಲಿ ಸರಿಯಾಗಿ ಓಡುತ್ತದಾ? ಎಂಬ ವ್ಯಂಗ್ಯವಿದ್ದ ಮುಖಪುಟ.

ಅಮೆರಿಕದ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಚರ್ಚೆಯಾಗುತ್ತಿರುವ ವಿಷಯ ಜೋ ಬೈಡನ್ ವಯಸ್ಸಿನದು. ಬೈಡನ್‌ಗೆ ಈಗ ಭರ್ತಿ ೮೧ರ ಹರೆಯ. ಸಹಸ್ರ ಚಂದ್ರದರ್ಶನವಾಗಿದೆ! ಅವರು ಒಂದು ವೇಳೆ ಇನ್ನೇನು ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪುನರಾಯ್ಕೆ ಯಾದರೆ ಅವಧಿ ಮುಗಿಸುವಾಗ ೮೬. ನಮ್ಮಲ್ಲಿ ಸಹಸ್ರ ಚಂದ್ರದರ್ಶನದ ನಂತರ ಉಳಿಯುವುದು ಒಂದೇ ಕಾರ್ಯ. ಇಷ್ಟು ವಯಸ್ಸಾಗಿರುವ ಬೈಡನ್ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಗಾದಿಯ ಆಕಾಂಕ್ಷಿ. ಹಾಗಂತ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್‌ಗೇನೂ ಕಮ್ಮಿ ವಯಸ್ಸಾಗಿಲ್ಲ. ಅವರು ೧೯೪೬ರ ಮಾಡೆಲ್.

ನೋಡಲಿಕ್ಕೆ ಬೈಡನ್‌ಗಿಂತ ಬಹಳ ಗಟ್ಟಿ ಎಂದು ಕಂಡರೂ ಟ್ರಂಪ್‌ಗೆ ಬೈಡನ್‌ಗಿಂತ ನಾಲ್ಕೇ ವರ್ಷ ಕಡಿಮೆ, ೭೭. ಟ್ರಂಪ್ ಅಧ್ಯಕ್ಷರಾದರೆ ಅವರು ಅವಽ ಮುಗಿಸುವಾಗ ಈಗಿನ ಬೈಡನ್‌ರಷ್ಟೇ ವಯಸ್ಸಾಗಿರುತ್ತದೆ. ಅಂದ ಹಾಗೆ ಮನಮೋಹನ್ ಸಿಂಗ್ ಅವಧಿ ಮುಗಿಸುವಾಗ ಅವರಿಗೆ ೮೨ ಆಗಿತ್ತು. ಕನ್ನಡ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದವರೊಬ್ಬರ ಹುಲಿ ಉಗುರಿನ ಪ್ರಕರಣ ನೆನಪಿರಬಹುದು. ಅದರ ಪರಿಣಾಮ ನಟ ಜಗ್ಗೇಶ್ ಮೊದಲಾದವರ ಮೇಲಾಗಿ, ಅವರೆಲ್ಲ ತಾವು ಧರಿಸಿರುವುದು ನಿಜವಾದ ಹುಲಿ ಉಗುರಲ್ಲ ಎಂದು ಹೇಳಿಕೊಳ್ಳಬೇಕಾಯಿತಲ್ಲ!

ನನಗಂತೂ ಶ್ರೀಮಂತರು ಪ್ಲಾಸ್ಟಿಕ್ ಹುಲಿಯುಗುರು ಧರಿಸುತ್ತಾರೆ ಎಂದು ತಿಳಿದದ್ದೇ ಆಗ! ಬಿಡಿ. ಈ ಪ್ರಕರಣ ಇಂದಿನ ನಮ್ಮ ಸಮಾಜದ ಸಂಕೀರ್ಣತೆ ಯನ್ನು ಸ್ಪಷ್ಟಪಡಿಸುತ್ತದೆ. ಇಂದು ಎಲ್ಲಿಯೋ ಏನೋ ಒಂದು ವಿಚಾರ ಇನ್ನೆಲ್ಲಿಯೋ ಯಾರಿಗೋ ಹೋಗಿ ಬಾಧಿಸುತ್ತದೆ. ಅದೇ ರೀತಿ, ವಯಸ್ಸಾದ ನಾಯಕ ಮರು ಆಯ್ಕೆ ಬಯಸುತ್ತಿರುವು ದರೆಡೆಗಿನ ಟೀಕೆ ಕೇವಲ ಅಮೆರಿಕದಲ್ಲಷ್ಟೇ ಉಳಿದಿಲ್ಲ. ಅತ್ತ ರಷ್ಯಾದ ಪುಟಿನ್‌ಗೆ ವಯೋಸಹಜ ದೈಹಿಕ ತೊಂದರೆಗಳಿವೆ, ಅವರ ಕೈ ನಡುಗುತ್ತದೆ, ಅದನ್ನು ಅಡಗಿಸಲಿಕ್ಕೆಂದೇ ಮಾತನಾಡುವಾಗ ಅವರು ಎರಡೂ ಕೈಕಟ್ಟಿ, ಬಿಗಿ ಹಿಡಿದು ಮಾತನಾಡುತ್ತಾರೆ ಎಂಬಿತ್ಯಾದಿ ಸುದ್ದಿಗಳಾದವು. ಅದೇ ರೀತಿ ಅನ್ಯದೇಶಗಳ ವೃದ್ಧ ಅಧ್ಯಕ್ಷರ ದೈಹಿಕ ಸಾಮರ್ಥ್ಯವನ್ನು ಒರೆಹಚ್ಚಿ ನೋಡಲಾಯಿತು.

ತಮಗೆ ವಯಸ್ಸಾಗಿಲ್ಲ, ಅಧಿಕಾರ ಹಿಡಿಯಲು ತಾವಿನ್ನೂ ದೈಹಿಕವಾಗಿ ಸಮರ್ಥರು ಎನ್ನುವ ಸಂದೇಶವನ್ನು ಬಹುತೇಕ ದೇಶಗಳ, ಎಪ್ಪತ್ತು ದಾಟಿದ ನಾಯಕರು ಆಗೀಗ ದೃಢೀಕರಿಸಲಿಕ್ಕೆ ಮುಂದಾಗುವುದು ಸಾಮಾನ್ಯ. ರಷ್ಯಾ ಅಧ್ಯಕ್ಷ ಪುಟಿನ್ ಮೊನ್ನೆ ಯುದ್ಧವಿಮಾನದಲ್ಲಿ ಸಹ-ಪೈಲಟ್ ಆಗಿ ನಾಲ್ಕು
ಸುತ್ತು ಹಾರಾಡಿ ಬಂದರೆ ಮೋದಿಯವರು ಸಮುದ್ರದಾಳಕ್ಕೆ ಸ್ಕೂಬಾ ಡೈವಿಂಗ್ ಮಾಡಿದರು. ಇವೆಲ್ಲವನ್ನು ಮಾಡಲಿಕ್ಕೆ ದೈಹಿಕ ಸಾಮರ್ಥ್ಯ ತಕ್ಕಮಟ್ಟಿಗಿದ್ದರಷ್ಟೇ ಸಾಧ್ಯ. ಅದಿಲ್ಲವಾ ದಲ್ಲಿ ಇಂಥ ಸರ್ಕಸ್ಸುಗಳು ಪ್ರಾಣಘಾತುಕವಾಗಬಲ್ಲವು. ಒಟ್ಟಾರೆ ಈ ರೀತಿಯ ದೈಹಿಕ ಸಾಮರ್ಥ್ಯದ ಪ್ರದರ್ಶನ
ಸಾಮಾನ್ಯ ಎನ್ನುವುದಕ್ಕಿಂತ ಅದೆಷ್ಟೋ ಬಾರಿ ನಾಯಕನಿಗೆ ಅನಿವಾರ್ಯವಾಗಿರುತ್ತದೆ. ಅದರಲ್ಲಿಯೂ ದೇಶದ ಮತ ದಾರರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದಲ್ಲಿ ಅದು ಬಹು ಮುಖ್ಯವಾಗಿರುತ್ತದೆ.

ಮಾನಸಿಕ ಸೌಖ್ಯ, ಸಾಮರ್ಥ್ಯ ಕುಂಠಿತವಾದಲ್ಲಿ ತಕ್ಕ ಮಟ್ಟಿಗೆ ಅದನ್ನು ಸಾರ್ವಜನಿಕರ ಕಣ್ಣಿನಿಂದ ಮರೆಮಾಚಬಹುದು. ನೆನಪು ಹಾರುತ್ತದೆಯೆಂದರೆ ಭಾಷಣಗಳನ್ನು ಮಾಡುವಾಗ ಟೆಲಿಪ್ರಾಂಪ್ಟರ್ ಬಳಸಿದರಾಯಿತು. ನಂತರ ಪತ್ರಕರ್ತರನ್ನು ಎದುರಿಸದಿದ್ದರಾಯಿತು. ಜಾಸ್ತಿ ಭಾಷಣಗಳನ್ನು ಮಾಡದಿದ್ದರಾಯಿತು ಇತ್ಯಾದಿ. ಮನಮೋಹನ್ ಸಿಂಗ್ ಆದರಾಯಿತು. ಪುಟಿನ್‌ರಂಥ ಸರ್ವಾಧಿಕಾರಿಗಳಿಗೆ ಆ ಕಷ್ಟವೂ ಇಲ್ಲ. ಆದರೆ ವಯೋಸಹಜ ದೈಹಿಕ ಬದಲಾವಣೆಯನ್ನು ಜಾಸ್ತಿ ಮರೆಮಾಚಲಿಕ್ಕಾಗುವುದಿಲ್ಲ. ನಡೆಯುವ ರೀತಿಯಲ್ಲಿ, ಚಟುವಟಿಕೆಯಲ್ಲಿ, ಕಣ್ಣುಗಳಲ್ಲಿ, ಮಾತಿನ ಧ್ವನಿಯಲ್ಲಿ, ಹಾವಭಾವದಲ್ಲಿ, ಚರ್ಮದ ಸುಕ್ಕುಗಳಲ್ಲಿ ವಯಸ್ಸು ಪ್ರಕಟವಾಗಿಬಿಡುತ್ತದೆ. ಟಿವಿಯಲ್ಲಿ ಜನರಿಗೆ ಸ್ಪಷ್ಟವಾಗಿ ಕಾಣಿಸಿಬಿಡುತ್ತದೆ. ಅದು ನೇರವಾಗಿ ಈ ವ್ಯಕ್ತಿ ಅಸಮರ್ಥ ಎನ್ನುವ ಭಾವನೆಯನ್ನು ಮತದಾರರಲ್ಲಿ ಹುಟ್ಟುಹಾಕಿಬಿಡುತ್ತದೆ.

ಆಗ ಆ ನಾಯಕ ಮಾಡುವ ಚಿಕ್ಕಪುಟ್ಟ ತಪ್ಪುಗಳೂ ಅಸಮರ್ಥತೆಯನ್ನೇ ಬಿಂಬಿಸುತ್ತವೆ. ಈ ರೀತಿ ನಾಯಕನಿಗೆ ವಯಸ್ಸಾಗಿದೆ ಎಂದು ಜನರಿಗೆ ಅನ್ನಿಸಬಾರದೆಂದು ಸೈಕಲ್ ಹೊಡೆಯುವುದು, ಫುಟ್‌ಬಾಲ್, ಟೆನಿಸ್ ಆಡುವುದು, ಕುದುರೆ ಓಡಿಸುವುದು, ಕರಾಟೆ ಅಭ್ಯಾಸ ಮಾಡುವುದು ಇತ್ಯಾದಿಗಳ ಮೂಲಕ ನಾನಾ ರೀತಿಯ ‘ಪಿಆರ್’ ಕಸರತ್ತು ಗಳು ಚಾಲ್ತಿಯಲ್ಲಿರುತ್ತವೆ.

ಅಷ್ಟಕ್ಕೂ ಪ್ರಧಾನಿ, ಅಧ್ಯಕ್ಷ ಇವರಿಗೆಲ್ಲ ೭೫-೮೦ ವಯಸ್ಸಾದರೆ ಏನು ಸಮಸ್ಯೆ? ಅವರ ತಲೆ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಸಾಕಲ್ಲವೇ? ಯಾವುದೇ ಸರಕಾರಿ ವ್ಯವಸ್ಥೆಯಿರಲಿ, ಅಲ್ಲಿ ಒಬ್ಬನೇ ವ್ಯಕ್ತಿಯ ಮೇಲೆ ದೇಶ ನಿಂತಿರುವುದಿಲ್ಲವಲ್ಲ. ಅಧ್ಯಕ್ಷ, ಪ್ರಧಾನಿ ದೈಹಿಕವಾಗಿ ಏನೋ ಒಂದು ಚಿಕ್ಕಪುಟ್ಟ
ತೊಂದರೆಗೀಡಾದಲ್ಲಿ, ಶಸಚಿಕಿತ್ಸೆಗೆ ಒಳಗಾಗಬೇಕಾದಲ್ಲಿ ಹೆಚ್ಚಿನ ಓಡಾಟವನ್ನು, ಕೆಲಸವನ್ನು ಉಪಪ್ರಧಾನಿ, ಉಪಾಧ್ಯಕ್ಷರುಗಳು ನಡೆಸಿಕೊಂಡು ಹೋಗುವುದಿದೆ. ಹೀಗಿರುವಾಗ, ಸರಕಾರಿ ವ್ಯವಸ್ಥೆ ಅತ್ಯುತ್ತಮವಾಗಿರುವಾಗ, ಸರ್ವೋಚ್ಚ ನಾಯಕನಿಗೆ ವಯಸ್ಸಾದರೆ ಏನು ಸಮಸ್ಯೆ? ಅಬ್ಬಬ್ಬಾ ಎಂದರೆ
ಏನಾಗಬಹುದು? ಕೆಲವೊಂದು ವಿಚಾರಗಳು ಪದೇ ಪದೆ ಕಿವಿಗೆ ಬಿದ್ದು ಮಹತ್ವವನ್ನು ಕಳೆದುಕೊಂಡುಬಿಡುತ್ತವೆ.

ಅಂಥದೇ ವಿಚಾರ ಅಣ್ವಸ್ತ್ರಕ್ಕೆ ಸಂಬಂಧಿಸಿದ್ದು. ಕಳೆದ ಮೂವತ್ತು ವರ್ಷದಿಂದೀಚೆಗೆ ಆಗೀಗ ಸುದ್ದಿಯಲ್ಲಿ ಬಂದು ಮರೆಯಾಗುವ ಈ ವಿಷಯ ಇಂದು ಸದ್ದಿಲ್ಲದೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಪರಮಾಣು ಶಕ್ತಿ ಪಡೆದ ದೇಶಗಳು ಅಣ್ವಸ ಪ್ರಯೋಗ ಮಾಡಿ, ಜಗತ್ತಿಗೆ ತಮ್ಮ ತಾಕತ್ತನ್ನು ಪ್ರದರ್ಶಿಸಿ ಅಷ್ಟಕ್ಕೇ ಸುಮ್ಮನಾಗಿಲ್ಲ. ಬದಲಿಗೆ ಅಣ್ವಸಗಳನ್ನು ಯಥೇಚ್ಛ ತಯಾರಿಸಿಟ್ಟುಕೊಂಡಿವೆ. ಅಮೆರಿಕ, ರಷ್ಯಾ ಮತ್ತು ಚೀನಾ ಮುಂಚೂಣಿಯಲ್ಲಿ ಈ ಕೆಲಸ
ಮಾಡಿದ್ದರೆ ಭಾರತವೇನೂ ಹಿಂದೆ ಉಳಿದಿಲ್ಲ. ನೀವು ಇವೆಲ್ಲವನ್ನೂ ಅಂದಾಜಿಸಲಿಕ್ಕೆ ಕೆಲವು ವಿವರಗಳನ್ನು ಕೊಡುತ್ತೇನೆ. ಜಗತ್ತಿನಲ್ಲಿ ೧೯೫ ದೇಶಗಳಿವೆ. ಅವುಗಳಲ್ಲಿ ೯ ದೇಶಗಳು ಅಣ್ವಸ ಹೊಂದಿವೆ. ರಷ್ಯಾ, ಅಮೆರಿಕ, ಚೀನಾ, ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಪಾಕಿಸ್ತಾನ, ಭಾರತ, ಇಸ್ರೇಲ್ ಮತ್ತು ಉತ್ತರ ಕೊರಿಯಾ. ರಷ್ಯಾ ಅತ್ಯಂತ ಹೆಚ್ಚಿನ ಅಣ್ವಸ್ತ್ರ ಹೊಂದಿರುವ ದೇಶ. ಅದರ ಬಳಿ ೫,೮೮೯ ನ್ಯೂಕ್ಲಿಯರ್ ವಾರ್‌ಹೆಡ್‌ಗಳಿವೆ. ಏನಿದು ನ್ಯೂಕ್ಲಿಯರ್ ವಾರ್‌ಹೆಡ್? ಒಂದು ವಾರ್‌ಹೆಡ್ ಎಂದರೆ ಬೆಂಗಳೂರಿನಷ್ಟು ಜಾಗವನ್ನು ನೆಲಸಮ ಮಾಡಲಿಕ್ಕಾಗುವಷ್ಟು, ೬೦ ಲಕ್ಷ ಮಂದಿಯನ್ನು ಕೊಲ್ಲಬಹು ದಾದಷ್ಟು ಪ್ರಮಾಣದ ಅಣ್ವಸ ಎಂದು ಅಂದಾಜು.

ಇನ್ನು ಅಮೆರಿಕದ ಬಳಿ ೫,೨೨೪ ವಾರ್‌ಹೆಡ್ ಗಳಿವೆ. ಅಷ್ಟೇ ಅಲ್ಲ, ಅಮೆರಿಕ ದೇಶ ಇಟಲಿ, ತುರ್ಕಿಯೆ, ಬೆಲ್ಜಿಯಂ, ಜರ್ಮನಿ, ನೆದರ್ಲ್ಯಾಂಡ್‌ಗಳಲ್ಲಿ ಕೂಡ ತನ್ನ ಅಣ್ವಸವನ್ನು (ಸುಮಾರು ೯೫ ವಾರ್‌ಹೆಡ್) ಸ್ಥಾಪಿಸಿಟ್ಟಿದೆ. ರಷ್ಯಾ ಬೆಲಾರಸ್‌ನಲ್ಲಿ ತನ್ನ ಸ್ವಲ್ಪ ಅಣ್ವಸವನ್ನಿರಿಸಿಕೊಂಡಿದೆ. ಅಮೆರಿಕ ಮತ್ತು ರಷ್ಯಾ ಈ ಎರಡೂ ದೇಶಗಳ ಬಳಿ ಇರುವ ಅಣ್ವಸ್ತ್ರದ ಪ್ರಮಾಣ ಜಗತ್ತಿನ ಶೇ.೯೦ರಷ್ಟು. ಒಟ್ಟಾರೆ ಜಗತ್ತಿನಲ್ಲಿ ಲೆಕ್ಕಕ್ಕೆ ಸಿಗುವ ನ್ಯೂಕ್ಲಿಯರ್ ವಾರ್‌ ಹೆಡ್‌ಗಳ ಸಂಖ್ಯೆ ೧೨,೭೦೦. ಇದು ಶೀತಲ ಯುದ್ಧದ ಸಮಯದಲ್ಲಿ ೭೦ ಸಾವಿರವಿತ್ತಂತೆ. ಅದನ್ನೆಲ್ಲ ಬಹುತೇಕ ದೇಶಗಳು ನಾಶಪಡಿಸಿವೆ ಎನ್ನುವುದು ಬಹಿರಂಗ ಸುದ್ದಿ.

ಅದರಲ್ಲಿ ಎಷ್ಟು ಸತ್ಯವೋ, ಎಷ್ಟು ಸುಳ್ಳು ಲೆಕ್ಕವೋ. ಒಂದಂತೂ ನಿಜ- ಅಸಲಿ ಲೆಕ್ಕಕ್ಕೆ ಸಿಗುವುದಕ್ಕಿಂತ ಹಲವು ಪಟ್ಟು ಹೆಚ್ಚು ಅಣ್ವಸ್ತ್ರ ಈಗ ದೇಶಗಳ
ಬಳಿಯಿವೆ. ಲೆಕ್ಕಕ್ಕೆ ಸಿಕ್ಕವುಗಳೇ ಜಗತ್ತನ್ನು, ಮನುಷ್ಯ ಕುಲವನ್ನು ಹತ್ತಾರು ಬಾರಿ ನಾಶಪಡಿಸಲಿಕ್ಕೆ ಸಾಕಾಗುವಷ್ಟು. ಇದು ಸದರಿ ಅಣ್ವಸ್ತ್ರಗಳ ಪ್ರಮಾಣ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಉಕ್ರೇನ್ ಅನ್ನು ಅಮೆರಿಕ ಮತ್ತು ನ್ಯಾಟೋ ದೇಶಗಳು ಬೆಂಬಲಿಸುತ್ತವೆ. ಚೀನಾ, ರಷ್ಯಾದ ಜತೆ ಸೇರಿ ಅಮೆರಿಕವನ್ನು ದ್ವೇಷಿಸುತ್ತದೆ. ಇಸ್ರೇಲ್ ಯುದ್ಧ ಇನ್ನೊಂದು ಕಡೆ. ಹಮಾಸ್ ಉಗ್ರರನ್ನು ಬೆಂಬಲಿಸುವ ಇರಾನ್ ಬಳಿ ಅಣ್ವಸ್ತ್ರವಿದೆ ಎನ್ನುವುದು ಅಮೆರಿಕನ್ನರ ನಂಬಿಕೆ.

ಇನ್ನು ಪಾಕಿಸ್ತಾನ ಮತ್ತು ಉತ್ತರ ಕೊರಿಯಾ ಬಗೆಗಿನ ವಿವರ ಬೇಡವೆನಿಸುತ್ತದೆ. ಒಟ್ಟಾರೆ ಈ ಎರಡು ಯುದ್ಧಗಳಿಂದಾಗಿ, ಪ್ರಸ್ತುತ ರಾಜಕೀಯದಿಂದಾಗಿ
ಅಣ್ವಸ ಬಳಕೆಯಾಗಿಬಿಡುವ ಸಾಧ್ಯತೆ ಈಗ ಹಿಂದೆಲ್ಲದಕ್ಕಿಂತ ಜಾಸ್ತಿ. ೨೦೨೨ರಲ್ಲಿ ರಷ್ಯಾ,ಉಕ್ರೇನಿನ ಮೇಲೆ ಅಣ್ವಸ ಪ್ರಯೋಗಿಸಬಹುದು ಎಂಬ ಇಂಟೆಲಿಜೆನ್ಸ್ ವರದಿ ಬಂದಿತ್ತು. ಆ ಸುದ್ದಿ ಬಂದದ್ದೇ ಉಕ್ರೇನಿನ ಮುನ್ನೂರು ಆಸ್ಪತ್ರೆಗಳು ಮತ್ತು ಇಡೀ ವ್ಯವಸ್ಥೆ ಇಂಥ ಪರಿಸ್ಥಿತಿಯೊಂದನ್ನು ಎದುರಿಸಲಿಕ್ಕೆ ಸನ್ನದ್ಧವಾಗಿದ್ದವು. ಸುಮಾರು ಸಾವಿರ ಅಣುವಿಕಿರಣಗಳಿಂದ ರಕ್ಷಿಸುವ ಬಟ್ಟೆ, ಮಾನಿಟರ್ ಇತ್ಯಾದಿಯನ್ನು ಅಮೆರಿಕ ಕಳುಹಿಸಿ
ಕೊಟ್ಟಿತ್ತು. ಒಟ್ಟಾರೆ ಇಂದಿನ ನಾಜೂಕಿನ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಅಣ್ವಸ ಬಳಕೆಯಾಗುವುದು ಈ ಎಲ್ಲ ಕಾರಣಗಳಿಂದ ಅಸಾಧ್ಯವೆನ್ನ ಲಿಕ್ಕಾಗುವುದಿಲ್ಲ.

ಒಂದು ವೇಳೆ, ಅಮೆರಿಕದ ಮೇಲೆ ರಷ್ಯಾ ಅಥವಾ ಯಾವುದೊ ಒಂದು ದೇಶ ಖಂಡಾಂತರ ಅಣ್ವಸ ಕ್ಷಿಪಣಿ ಹಾರಿಸಿತು, ಪ್ರಯೋಗಿಸಿತು ಎಂದು ಇಟ್ಟುಕೊಳ್ಳಿ. ಆಗ ಏನೇನಾಗುತ್ತದೆ? ಅಮೆರಿಕದತ್ತ ರಷ್ಯಾ ಕ್ಷಿಪಣಿಯನ್ನು ಪ್ರಯೋಗಿಸಿತು ಎಂದಾದಾಗ ಅದಕ್ಕೆ ಪ್ರತ್ಯುತ್ತರವಾಗಿ ಅಣ್ವಸ್ತ್ರ  ಪ್ರಯೋಗಿಸ ಲಿಕ್ಕೆ ಅಮೆರಿಕದ ಅಧ್ಯಕ್ಷರ ಬಳಿ ಹದಿನೈದು ನಿಮಿಷ ಕಾಲಾವಕಾಶವಿರುತ್ತದೆ. ಅಂಥ ಸಮಯದಲ್ಲಿ ಅಮೆರಿಕವು ಪ್ರತಿಯಾಗಿ ಅಣ್ವಸ್ತ್ರವನ್ನು ಪ್ರಯೋಗಿಸಬೇಕೇ ಬೇಡವೇ ಎಂದು ನಿರ್ಧರಿಸುವುದು ಒಬ್ಬನೇ ವ್ಯಕ್ತಿ, ಅದು ಅಮೆರಿಕದ ಅಧ್ಯಕ್ಷ. ಅವರಿಗೆ ಆ ಕ್ಷಣದಲ್ಲಿ ಯಾವುದೇ ಇನ್ನೊಬ್ಬರ ಅನುಮತಿಯ ಅವಶ್ಯಕತೆಯಿರುವುದಿಲ್ಲ. ಅವರು ನಿರ್ಧರಿಸಿದ್ದೇ ಆ ಕ್ಷಣದಲ್ಲಿ ಅಂತಿಮ.

ಅಮೆರಿಕದ ಸಮಸ್ತ ಆರೇಳು ಸಾವಿರ ಅಣ್ವಸ್ತ್ರ ವಾರ್‌ಹೆಡ್ ಗಳ ಕಮಾಂಡ್ ಸೆಂಟರ್ ಇರುವುದು ನೆಬ್ರಾಸ್ಕಾ ರಾಜ್ಯದ ಒಮಾಹಾ ಹತ್ತಿರ. ಸುಮಾರು ನಲವತ್ತೈದು ಅಡಿ ಆಳದಲ್ಲಿ, ಅಲ್ಲಿನ ಕಮಾಂಡ್ ಸೆಂಟರ್‌ನಿಂದ ಕ್ಷಣಮಾತ್ರದಲ್ಲಿ ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಅದು ಅಣ್ವಸ್ತ್ರ ದಾಳಿ
ಮಾಡಬಹುದು. ಅಷ್ಟೇ ಅಲ್ಲ, ಅಮೆರಿಕ ಇಂದು ಅಂತರಿಕ್ಷ ದಲ್ಲಿ ಕೂಡ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಅಮೆರಿಕದ ಮೇಲೆ ಖಂಡಾಂತರ ಕ್ಷಿಪಣಿ ದಾಳಿಯಾದ ತಕ್ಷಣ ಅಮೆರಿಕದ ಸ್ಯಾಟಲೈಟ್‌ಗಳು ಅದನ್ನು ಗ್ರಹಿಸಬಲ್ಲವು. ಅದು ಜಗತ್ತಿನ ಯಾವುದೇ ಮೂಲೆಯಿಂದಲೇ ಇರಲಿ, ಸುಮಾರು
ಅರವತ್ತು ಸೆಕೆಂಡುಗಳಲ್ಲಿ, ಇಂಥ ಜಾಗದಿಂದ ಇಂಥ ಕ್ಷಿಪಣಿ ಹೊರಟಿದೆ ಎಂಬ ಮೊದಲ ಸೂಚನೆ ಅಮೆರಿಕದ ಸೈನ್ಯಕ್ಕೆ ತಿಳಿಯುತ್ತದೆ. ಇದಾದ ಮೂರು ನಿಮಿಷದಲ್ಲಿ ಅದು ಅಮೆರಿಕದ ಮೇಲಿನ ದಾಳಿಯೇ ಹೌದು ಮತ್ತು ಅದು ಅಣ್ವಸ ದಾಳಿ ಎಂಬುದು ದೃಢೀಕರಣವಾಗುತ್ತದೆ.

ಅದಾದ ಒಂದು ನಿಮಿಷಕ್ಕೆ ಅಮೆರಿಕದ ರೆಡಾರ್‌ಗಳು ಆ ಕ್ಷಿಪಣಿಯನ್ನು ಅನ್ನು ಟ್ರ್ಯಾಕ್ ಮಾಡಲು ಶುರುಮಾಡುತ್ತವೆ. ಕ್ಷಿಪಣಿ ಹೊರಟ ಐದು ನಿಮಿಷದೊಳಗೆ ಅಮೆರಿಕದ ಘೆuಅಈ (ವಾಯು ರಕ್ಷಣಾ ವಿಭಾಗ) ತನಗಿರುವ ಮಾಹಿತಿಯ ಮೇಲೆ ಇದು ನಿಜವಾದ ದಾಳಿಯೇ ಎಂದು ಪರಿಶೀಲಿಸುತ್ತದೆ. ಆ ಕ್ಷಣಕ್ಕೆ ಘೆuಅಈ ಅಮೆರಿಕದ ಅಧ್ಯಕ್ಷರನ್ನು ನೇರ ಸಂಪರ್ಕಿಸುತ್ತದೆ. ಇದಕ್ಕೆ ತಗಲುವ ಸಮಯ ಇಪ್ಪತ್ತು ಸೆಕೆಂಡುಗಳು- ಅಧ್ಯಕ್ಷರು ಜಗತ್ತಿನ ಯಾವುದೇ ಮೂಲೆಯಲ್ಲಿ, ಏನೇ ಮಾಡುತ್ತಿರಲಿ. ಇಷ್ಟೆಲ್ಲಾ ಆಗುವಾಗ ಸುಮಾರು ಎಂಟು ನಿಮಿಷ ಕಳೆದಿರುತ್ತದೆ. ಉಳಿದಿರುವುದು ಏಳೇ ನಿಮಿಷ.
ನೀವು ಅಮೆರಿಕದ ಅಧ್ಯಕ್ಷರನ್ನು ನೋಡಿದಾಗಲೆಲ್ಲ ಅವರ ಜತೆಯಲ್ಲಿರುವವರು ಕಪ್ಪು ಬಣ್ಣದ ಒಂದು ಬ್ರೀಫ್ ಕೇಸ್ ಒಯ್ಯುತ್ತಿರುವುದು ಕಾಣಿಸುತ್ತದೆ. ಇದನ್ನು ‘ನ್ಯೂಕ್ಲಿಯರ್ ಫುಟ್ಬಾಲ್’ ಎಂದು ಕರೆಯಲಾಗುತ್ತದೆ.

ಇದರಲ್ಲಿ ಅಮೆರಿಕದ ನ್ಯೂಕ್ಲಿಯರ್ ಅಸದ ಉಡಾವಣೆಯ ಕೋಡ್‌ಗಳಿವೆ ಎಂಬುದು ಮಾಹಿತಿ. ಹೀಗೆ ಉಳಿದ ಆರೇಳು ನಿಮಿಷದಲ್ಲಿ ಈ ನ್ಯೂಕ್ಲಿಯರ್ ಕೋಡ್ ಬಳಸಿ, ಒಮಾಹಾದಲ್ಲಿರುವ ಅಣ್ವಸ್ತ್ರ ಕಮಾಂಡ್ ಸೆಂಟರಿಗೆ ಅಧ್ಯಕ್ಷರು ಪ್ರತಿದಾಳಿಗೆ ಸೂಚನೆ ಕೊಡಬೇಕು. ಒಮಾಹಾದಲ್ಲಿ ಇಪ್ಪತ್ನಾಲ್ಕು ಗಂಟೆಯೂ ಈ ಕರೆ ಬರಬಹುದೆಂದು ಯೋಧರು ಸನ್ನದ್ಧರಾಗಿರುತ್ತಾರೆ. ಒಂದು ವೇಳೆ ಅಧ್ಯಕ್ಷರಿಂದ ಇಂಥ ಆರ್ಡರ್ ಬಂದಲ್ಲಿ ಇದು ಅಧ್ಯಕ್ಷರೇ ಹೌದೇ ಎಂದು ದೃಢೀಕರಿಸಿ, ಮರುಕ್ಷಣ ಅಣ್ವಸ ಪ್ರಯೋಗ ವಾಗಿಬಿಡುತ್ತದೆ. ನಿಜವಾಗಿಯೂ ಇದು ಹೇಳಿದಷ್ಟೇ ವೇಗದಲ್ಲಿ ನಡೆಯಬಹುದಾದ, ನಡೆಯಬೇಕಾದ ಕೆಲಸ. ನಾಯಕನಾದವನು ಎಷ್ಟೇ ಸಮರ್ಥ ಮನುಷ್ಯನಾಗಿದ್ದರೂ ಇಂಥ ದೊಂದು ನಿರ್ಧಾರ ತೆಗೆದುಕೊಳ್ಳುವುದು ಕಷ್ಟ.

ಹೀಗಿರುವಾಗ ವಯಸ್ಸು ೭೫-೮೦ ದಾಟಿದವರು ಹೇಗೆ ನಿಭಾಯಿಸಿಯಾರು? ಇದು ಪ್ರಶ್ನೆ. ಅಮೆರಿಕದ ಅಧ್ಯಕ್ಷರು ಯಾವುದೇ ದೇಶದ ಮೇಲೆ ಭೂ ದಾಳಿ ಯನ್ನು ಮಾಡಬೇಕೆಂದರೆ ಇಲ್ಲಿನ ಸಂಸತ್ತಿನ ಅನುಮತಿ ಪಡೆಯಬೇಕು. ವಾಯುದಾಳಿಗೆ ಹತ್ತಾರು ಜನರು ಒಪ್ಪ ಬೇಕು. ಇನ್ನೊಂದು ನೆಲದ ಮೇಲೆ ಡ್ರೋನ್ ದಾಳಿ ಮಾಡ ಬೇಕೆಂದರೆ ಮಿಲಿಟರಿ ಜನರಲ್, ಕರ್ನಲ್ ಇತ್ಯಾದಿಗಳ ಸಮ್ಮತಿ ಬೇಕು. ಲಾಡೆನ್ ಅನ್ನು ಕೊಲ್ಲುವಾಗ ಒಬಾಮಾ ಸುಮಾರು ಇಪ್ಪತ್ತು ಜನರಿಂದ ಅಭಿಪ್ರಾಯ ಪಡೆದಿದ್ದರಂತೆ. ಆದರೆ ಜಗತ್ತನ್ನೇ ಕ್ಷಣಮಾತ್ರದಲ್ಲಿ ಬೂದಿ ಮಾಡುವ ಅಣ್ವಸ್ತ್ರದ ವಿಷಯದಲ್ಲಿ ಹಾಗಲ್ಲ. ಅದನ್ನು ಅಮೆರಿಕದ ಅಧ್ಯಕ್ಷರು ಒಬ್ಬರೇ ನಿರ್ಧರಿಸಬಹುದು. ಅಣ್ವಸ ಪ್ರಯೋಗಕ್ಕೆ ಸಂಬಂಧಿಸಿದ ಅಧ್ಯಕ್ಷರ ಈ ಫರ್ಮಾನನ್ನು ಯಾರೂ ಪ್ರಶ್ನಿಸುವಂತೆ, ಆ
ಕ್ಷಣ ಅಲಕ್ಷಿಸುವಂತೆ ಇಲ್ಲ. ಆ ಗಳಿಗೆಯಲ್ಲಿ ಅಧ್ಯಕ್ಷರ ಮಾತೇ ಸರ್ವಸ್ವ. ಅದನ್ನು ಮರುಪ್ರಶ್ನಿಸದೆ ಪಾಲಿಸಬೇಕು, ಅಣ್ವಸ್ತ್ರ ಪ್ರಯೋಗಿಸಬೇಕು. ತಪ್ಪಿದಲ್ಲಿ ಅದು ಪರಮ ರಾಜದ್ರೋಹದ ಅಪರಾಧ.

ಇದು ಕೇವಲ ಅಮೆರಿಕದ ಅಧ್ಯಕ್ಷರ ಕಥೆಯಷ್ಟೇ ಅಲ್ಲ. ಚೀನಾದ ಷಿ ಜಿನ್‌ಪಿಂಗ್, ರಷ್ಯಾದ ಪುಟಿನ್, ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್, ಪಾಕಿಸ್ತಾನದ ಮಿಲಿಟರಿ ಜನರಲ್, ಇಸ್ರೇಲಿನ ಬಿಬಿ ನೆತನ್ಯಾಹು ಹೀಗೆ ಎಲ್ಲ ಕಡೆಯೂ ಅಣ್ವಸ್ತ್ರ ಪ್ರಯೋಗವನ್ನು ನಿರ್ಧರಿಸುವುದು ಮಾತ್ರ ಒಬ್ಬ ವ್ಯಕ್ತಿ.
ಆ ವ್ಯಕ್ತಿಯ ಮಾತು, ನಿರ್ಧಾರ ಅಂತಿಮ. ಅಣ್ವಸ್ತ್ರದ ವಿಷಯದಲ್ಲಿ ಜಗತ್ತಿನ, ಇಡೀ ಮನುಕುಲದ, ಜೀವಜಗತ್ತಿನ ಭವಿಷ್ಯ ಇರುವುದು ಈ ಕೆಲವೇ ಕೆಲವು ಜನರಲ್ಲಿ. ಬೆರಳೆಣಿಕೆಯಲ್ಲಿ ೯ ಮನುಷ್ಯರು. ಇಷ್ಟೊಂದು ದೊಡ್ಡ ನಿರ್ಧಾರವನ್ನು ಒಂದು ದೇಶ ಒಬ್ಬನೇ ವ್ಯಕ್ತಿಗೆ ನೀಡುವುದು ಸಹಜ ಕಾರಣಕ್ಕೆ
ಆತಂಕದ ವಿಷಯ. ಆ ಕಾರಣಕ್ಕೆ ಅಮೆರಿಕ ಮೊದಲಾದ ಅಣ್ವಸ ದೇಶಗಳಲ್ಲಿನ ಸರ್ವೋಚ್ಚ ನಾಯಕನಾಗುವವನ ವಯಸ್ಸು, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಮುಖ್ಯ ವಾಗುತ್ತವೆ.