Saturday, 14th December 2024

ಮರುಭೂಮಿಯ ಬಾತುಕೋಳಿ ಈಜುವುದಾದರೆ ಅದು ನೈಲ್‌ನಲ್ಲಿ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಅಮೆಜಾನ್ ಮತ್ತು ನೈಲ್ ನಡುವೆ ಸಣ್ಣ ಜಗಳ, ಪೈಪೋಟಿ, ವಿವಾದ, ಚರ್ಚೆ ಹುಟ್ಟಿಕೊಳ್ಳದೇ ಹೋಗುವುದಿಲ್ಲ. ಆ ಎರಡೂ ನದಿಗಳ ಬೆಬಲಿಗರ ನಡುವೆ ಒಂದಷ್ಟು ಬಿಸಿಬಿಸಿ ಮಾತು ಆಗದೇ ಹೋಗುವುದಿಲ್ಲ. ಅದೇನೇ ಇರಲಿ, ನೈಲ್ ನದಿ ಹರಿಯುವ ಪ್ರದೇಶಗಳನ್ನು ಅವಲೋಕಿಸಿದಾಗ, ಅದು ಅಮೆಜಾನ್‌ಗಿಂತ ಹೆಚ್ಚು ಪ್ರಯಾಸಪಟ್ಟಿರುವುದು ಗೊತ್ತಾಗುತ್ತದೆ.

ಅಂದು ನಾನು ಯಾಕೆ ಅಷ್ಟು ಉದ್ವೇಗಕ್ಕೊಳಗಾಗಿದ್ದೆ, ನನಗೆ ಗೊತ್ತಿರಲಿಲ್ಲ. ಏನೋ ಒಂಥರಾ ತವಕ, ನಿರೀಕ್ಷೆ, ಚಡಪಡಿಕೆ. ಯಾವಾಗ ಆ ಮಹಾನದಿಯನ್ನು ಕಣ್ತುಂಬಿಸಿಕೊಳ್ಳುವೆನೋ ಎಂಭ ಉತ್ಸಾಹದಲ್ಲಿದ್ದೆ. ನನಗೆ ಇಂಥದೇ ಅನುಭವ ಥಾಯ್ಲೆಂಡ್‌ನ ಆ ಮುಖಜ ಭೂಮಿಯ ಮೇಲೆ ನಿಂತಾಗಲೂ ಅನಿಸಿತ್ತು. ಅಂದು ನಾನು ಮೆಕಾಂಗ್ ನದಿತಟಾಕದಲ್ಲಿದ್ದೆ.

ದುಬೈಯಲ್ಲಿ ಅದೇ ಹೆಸರಿನ ರೆಸ್ಟೋರೆಂಟಿನಲ್ಲಿ ಕುಳಿತಾಗಲೂ ಮೆಕಾಂಗ್ ನದಿ ನನ್ನೊಳಗೆ ಹರಿಯಲಾರಂಭಿಸಿತ್ತು. ಮೆಕಾಂಗ್ ನದಿ ಜಗತ್ತಿನ ಅತಿ ಉದ್ದದ ನದಿಗಳಲ್ಲಿ ಹನ್ನೆರಡನೆಯದು. ಆ ನದಿ ಸುಮಾರು 4900 ಕಿಮೀ ದೂರ ಹರಿಯುತ್ತದೆ. ಅದನ್ನು ನೆನಪಿಸಿ ಕೊಂಡರೇ ಒಂಥರ ಪುಳಕ. ಅದರ ಅಗಾಧತೆ ಬಗ್ಗೆ ಮನದ ತುಂಬೆ ಕಲ್ಪನೆಗಳ ಜಲಧಾರೆ! ಟಿಬೆಟಿನ ಕಣಿವೆಗಳಲ್ಲಿ ಹುಟ್ಟಿ, ಚೀನಾ, ಮೈನ್ಮಾರ್, ಲಾವೋಸ್, ಥಾಯ್ಲೆಂಡ್, ಕಾಂಬೋಡಿಯಾ ಮತ್ತು ವಿಯೆಟ್ನಾಮ್ ದೇಶಗಳಲ್ಲಿ ಹರಿದು ನಂತರ ಸಮುದ್ರವನ್ನು ಸೇರುತ್ತದೆ. ಮೆಕಾಂಗ್ ನದಿ ಬಗ್ಗೆ ಅದು ಹರಿದು ಹೋಗುವ ದೇಶಗಳಲ್ಲಿ ತರೇಹವಾರಿ ನಂಬಿಕೆಗಳು, ಭಾವನೆಗಳಿವೆ. ಆ ನದಿ ನನ್ನಲ್ಲಿ ಹುಟ್ಟಿಸಿದ ವಿಸ್ಮಯದ ಅಲೆಗಳಲ್ಲಿ ಈಗಲೂ ತೇಲುತ್ತಿದ್ದೇನೆ.

ಮೆಕಾಂಗ್ ನದಿಯಲ್ಲಿ, ಅದೊಂದು ಜಲಪಾತ, ಅದೊಂದು ಸರೋವರ, ಅದೊಂದು ಸಮುದ್ರ ಎಂಬ ನಂಬಿಕೆಗಳೂ ಇವೆ. ಕಾರಣ ಇಷ್ಟೇ ಒಂದೆಡೆ ನದಿಯಾದ ಮೆಕಾಂಗ್, ಮತ್ತೊಂದೆಡೆ ಕಣಿವೆಯಲ್ಲಿ ಜಲಪಾತವಾಗಿ ಭೋರ್ಗರೆಯುತ್ತಾಳೆ. ಕೆಲವೆಡೆ ಮೆಕಾಂಗ್ ಸಮುದ್ರ ವಾಗುತ್ತದೆ. ಯಾಕೆಂದರೆ ಒಂದು ದಡದ ಬಳಿ ನಿಂತು ದೃಷ್ಟಿಹಾಯಿಸಿದರೆ, ಮತ್ತೊಂದು ದಡ ಕಾಣುವುದಿಲ್ಲ. ಮೆಕಾಂಗ್ ಕುರಿತು ಅವೆಷ್ಟು ಪುಸ್ತಕಗಳು, ಕವಿತೆಗಳು, ಕಥೆಗಳು ಹುಟ್ಟಿಕೊಂಡಿವೆಯೋ? ಅದರಲ್ಲೂ ನಾನು ಬ್ರಿಟನ್ನಿನ ಖ್ಯಾತ ಇತಿಹಾಸಕಾರ, ಪತ್ರಕರ್ತ ಜಾನ್ ಕೆಯಾಯ್ ಬರೆದ Mad About The Mekong ಪುಸ್ತಕ ಓದಿ, ನಾನು ಆ ನದಿ ಬಗ್ಗೆ ಮತ್ತಷ್ಟು ಕುತೂಹಲವನ್ನು ಬೆಳೆಸಿಕೊಂಡಿದ್ದೆ.

ಇಂದಿಗೂ ಆ ನದಿ ಅಸಂಖ್ಯ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಲೇ ಇದೆ. ಆಗಾಗ ಆ ನದಿ ಪಾತ್ರದಲ್ಲಿ ಪ್ರವಾಸ ಮಾಡಿದವರು ತಮಗೆ ದಕ್ಕಿದ್ದನ್ನು, ಸಾಕ್ಷಾತ್ಕರಿಸಿಕೊಂಡ ಸಂಗತಿಗಳನ್ನು ಅಕ್ಷರ ರೂಪಕ್ಕಿಳಿಸಿ ವಿಸ್ಮಯಗೊಳಿಸುತ್ತಲೇ ಇದ್ದಾರೆ. ಏಷ್ಯಾ ಖಂಡದಲ್ಲಿ ಮೆಕಾಂಗ್ ನದಿ ಸೃಷ್ಟಿಸಿದ ನಿಗೂಢ ಮಮಕಾರ ಅಂಥದ್ದು. ಎಂದೋ, ಯಾರೋ ಮಾಡಿದ ಸಂಶೋಧನೆಯ -ಲಗಳನ್ನು ಮತ್ಯಾರೋ
ಮುಂದುವರಿಸಿಕೊಂಡು ಇನ್ನೊಂದು ಕಾಣ್ಕೆಯನ್ನು ಕೊಡುವ ಕಾಯಕವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಈ ನದಿ ಮೂಡಿಸಿದ ಬೆರಗಿಗೆ ಸಾಕ್ಷಿ. ನ್ಯೂಜಿಲೆಂಡಿನ ಪ್ರಸಿದ್ಧ ಬರಹಗಾರ ಜಾಯ್ ಕೌಲೇ ಎಂಬಾತ ವಿಯೆಟ್ನಾಮ್ ದೇಶವನ್ನು ಮೆಕಾಂಗ್ ನದಿಯನ್ನೇ ಮುಖ್ಯಪಾತ್ರಧಾರಿಯನ್ನಾಗಿ ನೋಡಿದ್ದಾನೆ.

ಒಂದು ನದಿಯೇ ಒಂದು ದೇಶದ ನಾಯಕನಾಗಿ ಹೊರಹೊಮ್ಮಿರುವುದು ಮೆಕಾಂಗ್ ಮಹಾತ್ಮೆಗೆ ನಿದರ್ಶನ.

ಇದನ್ನೇ ಆತ Song of the Mekong River : Vietnam ಎಂಬ ಪುಸ್ತಕದಲ್ಲಿ ಅತ್ಯಂತ ರೋಚಕವಾಗಿ ಬಣ್ಣಿಸಿದ್ದಾ. ಇನ್ನು ಗಂಗಾ ನದಿಯ ಬಗ್ಗೆ ನಮ್ಮಲ್ಲಿರುವ ನಂಬಿಕೆಗಳು ಅಸಂಖ್ಯ. ಒಂದು ನದಿ ನಮ್ಮ ಚಿಂತನೆಯ, ಆಚರಣೆಯ, ಪರಂಪರೆಯ ಭಾಗವೇ ಆಗಿರುವುದು ಅಚ್ಚರಿಯೇ. ಒಂದು ನದಿ ನಮ್ಮ ನಂಬಿಕೆಯ ತಳಹದಿಯಲ್ಲಿ ನಿತ್ಯತೋಯಿಸುತ್ತಿರುವುದು ಸೋಜಿಗವೇ. ಒಂದು ನದಿಯನ್ನು ದೇವ ಸಮಾನವಾಗಿ ಕಾಣುವ ಸಂಸ್ಕಾರ ಮೂಡಿಸಿದ್ದೇ ಗಂಗಾ ನದಿ.

ಪುರಾಣ, ಚರಿತ್ರೆಗಳಲ್ಲಿ ಗಂಗೆಯೇ ಮಹಾನಾಯಕಿ. ನದಿಗಳಿಗೆಲ್ಲ ನಾವು ಅನ್ವರ್ಥವಾಗಿ ಗಂಗಾ ಎಂಬ ಭಾವನೆಯಿಂದ ನೋಡುವಂತೆ ಕಲಿಸಿದ್ದೂ ಆ ನದಿಯೇ. ಅದು ಉದ್ದ, ಅಗಲಗಳಲ್ಲಿ ಬೇರೆ ನದಿಗಳ ಜತೆಗೆ ಪೈಪೋಟಿಗೆ ಇಳಿಯದಿರಬಹುದು. ಆದರೆ ಪಾವಿತ್ರ್ಯದ ವಿಷಯ ಬಂದಾಗ, ಅದನ್ನು ಮೀರಿಸುವ ಮತ್ತೊಂದು ನದಿಯಿಲ್ಲ. ಇಂದಿಗೂ ಭಾರತದ ಎಷ್ಟೋ ಮನೆಗಳ ಪೂಜಾ ಕೋಣೆಯಲ್ಲಿ ಗಂಗೆಗೆ ಪವಿತ್ರ ಸ್ಥಾನ, ನಿತ್ಯ ಪೂಜೆ.

ನದಿಯಲ್ಲಿ ದೇವ ಸ್ವರೂಪವನ್ನು ನೋಡುವ ಸಂಸ್ಕೃತಿ ನಮ್ಮದು. ಹೀಗಾಗಿ ಒಂದು ನದಿ ನಮ್ಮಲ್ಲಿ ಮೂಡಿಸುವ ಭಾವಗಳು, ಚಿತ್ತಾರಗಳು, ಅಲೆಗಳು ಒಂದೆರಡಲ್ಲ. ಹೀಗಾಗಿ ನದಿ ಎಂದಾಕ್ಷಣ, ಅದು ಯಾವುದೇ ನದಿಯಾಗಿರಬಹುದು, ಅದು ಎಲ್ಲಾ ಹರಿಯುತ್ತಿದ್ದರೂ, ನಮ್ಮೊಳಗೂ ಪ್ರವಹಿಸುತ್ತಲೇ ಇರುತ್ತದೆ. ಅಂದು ನಾನು ಈಜಿಪ್ಟಿನ ಜೀವನದಿ ನೈಲ್ ತಟಾಕದಲ್ಲಿ ನಿಂತಾಗಲೂ ಇದೆ ಭಾವದಲ್ಲಿ ತೊಯ್ದಿದ್ದೆ. ಜೀವನ ದಮ್ಮೆ ಆ ನದಿ ನೀರಿನಿಂದ ನೆತ್ತಿಯನ್ನು ತೋಯಿಸಿಕೊಳ್ಳಬೇಕು ಎಂಬುದು ತಣ್ಣನೆಯ ಆಸೆಯಾಗಿತ್ತು. ಬಾಲ್ಯದಲ್ಲಿ ಭೂಗೋಳ ಪಾಠ ಕೇಳುವಾಗ, ನೈಲ್ ನದಿ ನನ್ನೊಳಗೆ ಪ್ರವಹಿಸಿದ ರೀತಿಯಿಂದಾಗಿ, ನಾನು ಆ ನದಿ ಬಗ್ಗೆ ಮನಸ್ಸಿನಲ್ಲಿ ನನ್ನದೇ ಕಲ್ಪನೆಗಳನ್ನು ಹರಿಯ ಬಿಟ್ಟಿದ್ದೆ. ಜಗತ್ತಿನ ಅತಿ ಉದ್ದದ ನದಿ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ ಎಂಬ ಒಂದೇ ಒಂದು ಕಾರಣವೇ ಸಾಕು, ಆ ನದಿಗಿಂತ ಉದ್ದವಾದ ಕಲ್ಪನೆಯನ್ನು ಹರಿಯಬಿಡಲು.

ಯಾವ ನದಿ ಅತಿ ಉದ್ದವಾದುದು ಎಂಬ ಬಗ್ಗೆ ಅಮೆಜಾನ್ ಮತ್ತು ನೈಲ್ ನಡುವೆ ಇರುವ ಪೈಪೋಟಿ ಇಂದು-ನಿನ್ನೆಯದಲ್ಲ ಮತ್ತು ಅದು ಸದ್ಯೋಭವಿಷ್ಯದಲ್ಲಿ  ಬಗೆಹರಿಯುವಂಥದ್ದೂ ಅಲ್ಲ. ಯಾವ ನದಿ ಉದ್ದ ಎಂಬುದನ್ನು, ಹೆಂಗಸರ ಜಡೆಯಂತೆ ಸುಲಭವಾಗಿ ಅಳೆಯ ಲಾಗುವುದಿಲ್ಲ. ಇಂದಿಗೂ ಜಗತ್ತಿನ ಉದ್ದದ ನದಿ ಎಂಬ ವಿಶೇಷಣಬಳಸುವಾಗ, ಅಮೆಜಾನ್ ಮತ್ತು ನೈಲ್ ನಡುವೆ ಸಣ್ಣ ಜಗಳ, ಪೈಪೋಟಿ, ವಿವಾದ, ಚರ್ಚೆ ಹುಟ್ಟಿಕೊಳ್ಳದೇ ಹೋಗುವುದಿಲ್ಲ. ಆ ಎರಡೂ ನದಿಗಳ ಬೆಂಬಲಿಗರ ನಡುವೆ ಒಂದಷ್ಟು ಬಿಸಿಬಿಸಿ ಮಾತು ಆಗದೇ ಹೋಗುವುದಿಲ್ಲ.

ಅದೇನೇ ಇರಲಿ, ನೈಲ್ ನದಿ ಹರಿಯುವ ಪ್ರದೇಶಗಳನ್ನು ಅವಲೋಕಿಸಿದಾಗ, ಅದು ಅಮೆಜಾನ್‌ಗಿಂತ ಹೆಚ್ಚು ಪ್ರಯಾಸಪಟ್ಟಿರುವುದು ಗೊತ್ತಾಗುತ್ತದೆ. ಆಫ್ರಿಕಾದ ಮರು ಭೂಮಿಯನ್ನು ಬಳಸಿಯೂ ನೈಲ್ ಹರಿದಿರುವುದು ಅದರಚೇತೋಹಾರಿ ಗುಣಗಳಂದು. ಅದು ಯಾವುದೇ ನದಿಯಿರಬಹುದು, ಅದಕ್ಕೆ ಗಡಿ, ಪ್ರದೇಶ, ದೇಶಗಳ ಅರಿವಿರುವುದಿಲ್ಲ. ಗಡಿ, ಬೇಲಿ ಎಂದು ಕಟ್ಟೆ ಕಟ್ಟಿದವರು ನಾವು. ತಗ್ಗು ಪ್ರದೇಶವನ್ನು ಬಳಸಿ, ಹರಿಯುವ ಪಾತ್ರವನ್ನೇ ಊರುಗೋಲಾಗಿಸಿಕೊಂಡು ಹರಿಯುವುದಷ್ಟೇ ಅದಕ್ಕೆ ಗೊತ್ತು. ಅದು ಬಿಟ್ಟು ಬೇರೇನೂ ಗೊತ್ತಿ ರಲು ಸಾಧ್ಯ? ಹೀಗಾಗಿ ಅದು ಹರಿಯುತ್ತಲೇ ಇರುತ್ತದೆ.

ಆದರೆ ಹರಿಯುವ ಮೈ ಎಡೆಯೂ ತಗ್ಗಾಗಿಯೇ ಇರಲು ಸಾಧ್ಯವಿಲ್ಲ. ಹೀಗಾಗಿ ಅದು ತಗ್ಗು ದಾರಿಗಳನ್ನುಬಳಸಿ, ಹೊರಳಿ, ನಂತರ ಎಲ್ಲಾ ಸಮುದ್ರ ಸೇರಲೇಬೇಕು. ಯಾವ ನದಿಗೂ ನಿರಂತರವಾಗಿ ಹರಿಯುತ್ತಲೇ ಇರುವುದು ಸಹ ಸಾಧ್ಯವಿಲ್ಲ. ನದಿಪಾತ್ರಗಳನ್ನು ಯಾರೋ ಸೃಷ್ಟಿಸಿದ್ದಲ್ಲ. ಹೀಗಾಗಿ ಒಂದು ನದಿ ಅತಿ ಉದ್ದದವರೆಗೆ ವ್ಯಾಪಿಸಿದೆಯೆಂದರೆ, ಅದರ ಬಗೆಗಿರುವ ನಮ್ಮ ಕಲ್ಪನೆಯೂ ಅಷ್ಟೇ ಉದ್ದವಾಗಿ ಹರಿಯುತ್ತಲೇ ಇರುತ್ತದೆ. ಅಂಥ ಅನೂಹ್ಯ ಚಿತ್ತಾರವನ್ನು ನೈಲ್ ನನ್ನೊಳಗೆ ಮೂಡಿಸಿದ್ದು ಸುಳ್ಳಲ್ಲ.

ನೈಲ್ ಮತ್ತು ಈಜಿಪ್ಟ್ ಒಂದೇ ನಾಣ್ಯದ ಎರಡು ಮುಖಗಳು. ಒಂದು ನೆನಪಾದರೆ ಮತ್ತೊಂದು ಕಣ್ಮುಂದೆ ಬರುತ್ತದೆ. ನಾಲ್ಕು ವರ್ಷಗಳ ಹಿಂದೆ, ನಾನು ರವಾಂಡ ಮತ್ತು ಉಗಾಂಡ ದೇಶಗಳಿಗೆ ಹೋದಾಗ, ನಮ್ಮ ದೇಶದಲ್ಲೂ ನೈಲ್ ನದಿಹರಿಯುತ್ತದೆ’ ಎಂದು ಹೇಳಿದಾಗ ಆಶ್ಚರ್ಯವಾಗಿತ್ತು. ನನ್ನ ಜತೆಗಿದ್ದ ಸ್ನೇಹಿತರೊಬ್ಬರು, ‘ನೈಲ್ ನಿಮ್ಮ ದೇಶದಲ್ಲಿರಲು ಹೇಗೆ ಸಾಧ್ಯ? ಆ ನದಿ ಇರುವುದು ಈಜಿಪ್ಟ್ ನಲ್ಲಿ ಅಲ್ಲವಾ?’ ಎಂದು ತನ್ನ ಅಮಾಯಕತೆಯನ್ನು ಪ್ರದರ್ಶಿಸಿದ್ದರು.

ಆದರೆ ಒಂದು ನದಿ ಹನ್ನೊಂದು ದೇಶಗಳ ಗರ್ಭದೊಳಗೆ ಹೊಕ್ಕಿ ಹೊರಬಿದ್ದಿರಬಹುದು ಎಂಬ ಸಂಗತಿಯನ್ನು ಊಹಿಸಿಕೊಳ್ಳಲೂ ಸಾಧ್ಯ ವಿಲ್ಲ. ‘ನದಿ ಮೂಲ ಮತ್ತು ಋಷಿ ಮೂಲವನ್ನು ಹುಡುಕಬಾರದು’ ಎಂಬ ಮಾತಿದೆ. ಆ ಮಾತು ಜಾರಿಗೆ ಬರಲು ಮುಖ್ಯ ಕಾರಣ ವೆಂದರೆ, ಅವೆರಡರ ಮೂಲವನ್ನು ಹುಡುಕುವುದು ಸಾಧ್ಯವಿಲ್ಲ ಮತ್ತು ವ್ಯರ್ಥ ಪ್ರಯತ್ನ. ಈ ಬಗ್ಗೆ ಎಷ್ಟೇ ಸಂಶೋಧನೆ ನಡೆಸಿದರೂ ಸತ್ಯ ಮಾತ್ರ ಗೊತ್ತಾಗುವುದಿಲ್ಲ. ನೈಲ್ ನದಿ ವಿಷಯದಲ್ಲಂತೂ ಇದು ನಿಜ. ಅದರ ಹುಟ್ಟಿನ ಬಗ್ಗೆ ಅನೇಕ ವಾದಗಳಿವೆ. ಆದರೆ ಎಲ್ಲರ ಪ್ರಶ್ನೆ ಗಳನ್ನು ತಣಿಸುವ ಸಮರ್ಥನೆ ಮಾತ್ರ ಪ್ರಾಪ್ತ ವಾಗಿಲ್ಲ. ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ತರ್ಕ ಮಾಡಿದ್ದಾರೆಯೇ ಹೊರತು, ಸತ್ಯದ ಅನಾವರಣ ಮಾಡಿಲ್ಲ. ನದಿ ಹುಟ್ಟುವುದನ್ನು ಯಾರೂ ನೋಡಲು ಸಾಧ್ಯವಿಲ್ಲ.

ಹೀಗಾಗಿ ಈ ವಿಷಯದಲ್ಲಿ ನಮಗೆ ನಂಬಿಕೆಗಳೇ ಆಧಾರ. ಹನ್ನೊಂದು ದೇಶಗಳಲ್ಲಿ ನೈಲ್ ಹರಿಯುತ್ತಾಳೆ ಎಂಬ ಒಂದು ಸಂಗತಿ ಸಾಕು, ಆ ನದಿಯ ಬಗ್ಗೆ ಕಲ್ಪನೆಗಳ ಕಂತೆಗಳನ್ನು ಕಟ್ಟಿಕೊಳ್ಳಲು. ತಾಂಜೇನಿಯಾ, ಉಗಾಂಡ, ರವಾಂಡ, ಬುರುಂಡಿ, ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಕೀನ್ಯಾ, ಇಥಿಯೋಪಿಯಾ, ಏರಿಟ್ರಿಯಾ, ದಕ್ಷಿಣ ಸೂಡಾನ್, ರಿಪಬ್ಲಿಕ್ ಆಫ್ ಸೂಡಾನ್ ಮತ್ತು ಈಜಿಪ್ಟ್ ಸದದೇಶಗಳಲ್ಲಿ ಈ ನದಿ ಹರಿಯುತ್ತಾಳೆ. ಇದನ್ನು ಕಲ್ಪಿಸಿಕೊಳ್ಳುವುದು ಸಹ ಕಷ್ಟವೇ. ಅಷ್ಟು ದೂರಕ್ಕೆ ನಮ್ಮ ಕಲ್ಪನೆಯನ್ನು ಹರಿಯಬಿಡುವುದು ಸಾಧ್ಯವಿಲ್ಲ. ಸಾಮಾನ್ಯವಾಗಿ ನದಿಗಳು ಉತ್ತರಾಭಿಮುಖವಾಗಿ ಹರಿಯುವುದು ಅಪರೂಪ.

ನೈಲ್ ಅಂಥ ಅಪರೂಪಗಳಂದು. ಪ್ರಾಚೀನ ಈಜಿಪ್ಟ್ ನಾಗರಿಕತೆಯ ಮೂಲವೇ ನೈಲ್ ನದಿ ಪಾತ್ರ. ನೈಲ್ ನದಿ ಇಲ್ಲದಿದ್ದರೆ ಈ ವಿಶ್ವ ಒಂದು ದೊಡ್ಡ ಮರುಭೂಮಿಯಾಗುತ್ತಿತ್ತು ಎಂದು ಅನೇಕ ಪುರಾತತ್ವಕಾರರು ಬಣ್ಣಿಸಿದ್ದಾರೆ. ನೈಲ್ ನದಿಯನ್ನು ಕಂಡ ಸಾಹಿತಿ ಮಾರ್ಕ್ ಟ್ವೈನ್ ತಮಾಷೆಯಿಂದ, If you should rear a duck in the heart of the Sahara, no doubt it would swim if you brought it to the Nile (ಸಹರಾ ಮರುಭೂಮಿಯ ಹೃದಯಭಾಗದಲ್ಲಿ ಬಾತುಕೋಳಿಯನ್ನು ಸಾಕಿದರೆ, ಯಾವ ಸಂದೇಹವೂ ಬೇಡ, ಅದನ್ನು ನೈಲ್ ನದಿಯಲ್ಲಿ ಬಿಟ್ಟರೆ ಅನಾಯಾಸವಾಗಿ ಈಜುತ್ತದೆ) ಎಂದು ಉದ್ಗರಿಸಿದ್ದನಂತೆ.

ಹಾಗೆಯೇ If you look at the Nile on a map of Egypt, you dont think it has moved very much, but the river is very violent and has moved over time ಎಂಬ ಮಾತಿದೆ. ಚೀನಾದ ಮಹಾಗೋಡೆಯಂತೆ, ನೈಲ್ ನದಿ ಕೂಡ ಚಂದ್ರನ ಮೇಲಿಂದ ಕಾಣುತ್ತದೆ ಎಂದು ನಮ್ಮ ಊಹೆಗೆ ಕಿಡಿ ಹೊತ್ತಿಸಿದವರಿದ್ದಾರೆ. ದಾರ್ಶನಿಕನೊಬ್ಬ ನೈಲ್ ನದಿ ಬಗ್ಗೆ ಹೇಳಿದ ಮಾತು ಸದಾ ಸ್ಮರಣೀಯ. ಒಂದು ನದಿ ಏನೆಲ್ಲ ಆಗಬಹುದು ಎಂಬುದನ್ನು ಆತ ಅತ್ಯಂತ ಮಾರ್ಮಿಕವಾಗಿ ಮತ್ತು ಚುಟುಕಾಗಿ ಒಂದು ಸಾಲಿನಲ್ಲಿ ಬಣ್ಣಿಸಿದ್ದಾನೆ – The Nile, forever new and old,among the living and the dead, its mighty, mystic stream has rolled.

ಜಗತ್ತಿನ ವಿಸ್ಮಯಗಳೆಲ್ಲ ನದಿಯಾಗಿ ಹರಿಯುವಂತಿದ್ದರೆ, ಅದು ಈಜಿಪ್ಟಿನ ನೈಲ್ ನದಿಯಂತೆ ಹರಿಯುತ್ತಿತ್ತು ಎಂಬುದು ಅತ್ಯಂತ ಸರಿ ಯಾದ ಹೋಲಿಕೆ ಎಂದು ನಾನು ಅದನ್ನು ಅಂದು ಸಾಕ್ಷಾತ್ ನೋಡುವ ತನಕ ಅನಿಸಿರಲಿಲ್ಲ. ಜಪಾನಿನ ಬುಲೆಟ್ ಟ್ರೇನನ್ನು ಬದುವಿನಲ್ಲಿ ಕುಳಿತು ನೋಡುವ ಕಪ್ಪೆಯ ಮನದಲ್ಲಿ ಏನೆಲ್ಲ ಯೋಚನೆಗಳು ಹರಿದುಹೋಗಬಹುದೋ, ಅಂಥದ ದೃಶ್ಯ ಮೆರವಣಿಗೆ ಅಂದು ಕೈರೊದಲ್ಲಿ ನೈಲ್ ನದಿಗೆ ಮುಖ ಮಾಡಿ ನಿಂತು ದಿಟ್ಟಿಸುವಾಗ ಹಾದು ಹೋದವು. ನನ್ನೊಳಗೆ ನೈಲ್ ನಿರಂತರ ಹರಿಯುತ್ತಲೇ ಇರುತ್ತಾಳೆ!