ವೀಕೆಂಡ್ ವಿತ್ ಮೋಹನ್
camohanbn@gmail.com
ಒ.ಬಿ.ಸಿ ಗಳ ಮೀಸಲಾತಿ ಹೋರಾಟದ ಇತಿಹಾಸ ಇಂದು ನೆನ್ನೆಯದಲ್ಲ, ಕಳೆದ ಕೆಲವು ತಿಂಗಳುಗಳಿಂದ ರಾಹುಲ್ ಗಾಂಧಿ ದೇಶದ ಮೂಲೆ ಮೂಲೆ ಗಳಲ್ಲಿ ತನ್ನ ಚುನಾವಣಾ ಭಾಷಣದಲ್ಲಿ ಒ.ಬಿ.ಸಿ ಮೀಸಲಾತಿಯ ಬಗ್ಗೆ ಮಾತನಾಡುತ್ತಿದ್ದರು. ತಮ್ಮ ಭಾಷಣದಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯ ವಾಗಿದೆ, ತಾವು ಅಧಿಕಾರಕ್ಕೆ ಬಂದರೆ ನ್ಯಾಯ ಒದಗಿಸುತ್ತೇವೆಂದು ಹೇಳುವಾಗ ಒ.ಬಿ.ಸಿ ಗಳಿಗೆ ಅನ್ಯಾಯ ಮಾಡಿದ್ದು ತಮ್ಮ ಪೂರ್ವಜರೆಂಬುದನ್ನು ರಾಹುಲ್ ಗಾಂಧಿ ಮರೆತಂತಿದೆ.
ಹಿಂದುಳಿದ ವರ್ಗಕ್ಕೆ ಮೀಸಲಾತಿ ಸಿಗಬೇಕೆಂಬ ಕೂಗು ನೆಹರು ಕಾಲದಿಂದಲೂ ಕೇಳಿ ಬರುತ್ತಿದೆ. ನೆಹರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ೧೯೫೩ ರಲ್ಲಿ ಸಂವಿಧಾನದ ೩೪೦ ನೇ ವಿಧಿಯನ್ವಯ ಕಾಕಾ ಕಾಲೇಕರ್ ನೇತೃತ್ವದಲ್ಲಿ ಮೊದಲ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು
ರಚಿಸಲಾಗಿತ್ತು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜೊತೆಗೆ ಭಾರತದಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಇತರೆ ಜಾತಿಯ ಜನರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಾಗಿದ್ದಾರೆಯೇ ಎಂದು ಪರಿಗಣಿಸಲು ಅನುಸರಿಸಬೇಕಾದ ಮಾನದಂಡಗಳನ್ನು ನಿರ್ಧರಿಸಿ, ಅಂತಹ ಮಾನ ದಂಡಗಳನ್ನು ಬಳಸಿಕೊಂಡು ಅಂತಹ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸುವುದು ಆಯೋಗದ ಮುಖ್ಯ ಉದ್ದೇಶವಾಗಿತ್ತು.
ಕಾಕಾ ಕಾಲೇಕರ್ ಆಯೋಗವು ೩೦ ಮಾರ್ಚ್ ೧೯೫೫ ರಂದು ತನ್ನ ವರದಿಯನ್ನು ಸಲ್ಲಿಸಿತು. ತನ್ನ ವರದಿಯಲ್ಲಿ ಇಡೀ ದೇಶದಲ್ಲಿ ೨,೩೯೯ ಹಿಂದುಳಿದ ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಅದರಲ್ಲಿ ೮೩೭ ಸಮುದಾಯಗಳನ್ನು ಅತ್ಯಂತ ಹಿಂದುಳಿದ ಎಂದು ವರ್ಗೀಕರಿಸಲಾಗಿತ್ತು. ವರದಿ ನೀಡಿದ ನಂತರ ಹಿಂದುಳಿದ ವರ್ಗಗಳನ್ನು ಸರಿಯಾಗಿ ಗುರುತಿಸಿಲ್ಲವೆಂಬ ಕುಂಟು ನೆಪವೊಡ್ಡಿ ನೆಹರು ನೇತೃತ್ವದ ಸರಕಾರ ಕಾಕಾ ಕಾಲೇಕರ್ ನೀಡಿದ ವರದಿಯನ್ನು ತಿರಸ್ಕರಿಸಿತ್ತು. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ ನೆಹರು, ಹೆಸರಿಗೆ ಮಾತ್ರ ಆಯೋಗವನ್ನು ರಚಿಸಿ ಅವರು ನೀಡಿದ ವರದಿಯನ್ನು ತಿರಸ್ಕರಿಸುವ ಮೂಲಕ ಕಾಂಗ್ರೆಸ್ಸಿನ ಒ.ಬಿ.ಸಿ ಮೀಸಲಾತಿ ವಿರೋಽ ನಡೆಯನ್ನು ಪ್ರದರ್ಶಿಸಿದ್ದರು.
ಇದಾದ ನಂತರ ನೆಹರು ೧೯೬೪ ರ ವರೆಗೂ ಪ್ರಧಾನಮಂತ್ರಿಗಳಾಗಿದ್ದರು ಆದರೆ ಹಿಂದುಳಿದ ವರ್ಗಗಳ ಮೀಸಲಾತಿಯ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ನೆಹರು ನೇತೃತ್ವದ ಸರಕಾರದ ಯೋಜನೆಗಳಲ್ಲಿ ಒ.ಬಿ.ಸಿ ಗಳಿಗೆ ಮೀಸಲಾತಿ ನೀಡುವ ಪ್ರಸ್ತಾವನೆಗಳೇ ಇರಲಿಲ್ಲ. ಕಾಕಾ ಕಾಲೇಕರ್ ಆಯೋಗ
ನೀಡಿದ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಹಿಂದುಳಿದ ವರ್ಗಗಳಿಗೆ ನೀಡಬೇಕಿದ್ದ ಮೀಸಲಾತಿಗೆ ತಡೆಯೊಡ್ಡಿದ್ದರು.
ನೆಹರು ಕುಟುಂಬದಲ್ಲಿ ಅವರ ನಂತರ ಪ್ರಧಾನಮಂತ್ರಿ ಯಾದ ಇಂದಿರಾ ಗಾಂಧಿ ೧೯೬೬ ರಿಂದ ೧೯೭೭ ರ ವರೆಗೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರು, ತಮ್ಮ ಅಧಿಕಾರದ ಸ್ವಾರ್ಥಕ್ಕೆ ಸಂವಿಧಾನವನ್ನೇ ಬದಲಾಯಿಸಿದ ಇಂದಿರಾಗಾಂಧಿಯವರಿಗೆ ಹಿಂದುಳಿದ ವರ್ಗಗಳ ಮೀಸಲಾತಿ ಹೋರಾಟ ಕಾಣಲಿಲ್ಲ. ಇಂದಿರಾ ಗಾಂಧಿ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಒ.ಬಿ.ಸಿ ಗಳಿಗೆ ಮೀಸಲಾತಿ ನೀಡುವ ವಿಷಯ ಹಲವು ಬಾರಿ ಪ್ರಸ್ತಾವನೆಗೆ ಬಂದರೂ ಸಹ ಅದರ ಬಗ್ಗೆ ಅವರು ತಲೆ ಕೆಡಿಸಿಕೊಳ್ಳಲಿಲ್ಲ, ನೆಹರು ಹಿಂದುಳಿದ ವರ್ಗಗಳ ಮೀಸಲಾತಿ ವಿರೋಧಿಯಾಗಿದ್ದಂತೆ ಇಂದಿರಾಗಾಂಧಿ ಕೂಡ ಹಿಂದುಳಿದ ವರ್ಗಗಳ ಮೀಸಲಾತಿ ವಿರೋಧಿಯಾಗಿದ್ದರು.
ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ದೇಶದ ಚುಕ್ಕಾಣಿ ಹಿಡಿದ ನಂತರ ೧೯೪೭ ರಿಂದ ೧೯೭೭ ವರೆಗೂ ಒ.ಬಿ.ಸಿ ಮೀಸಲಾತಿಯನ್ನು ಬೆಂಬಲಿಸಿರಲಿಲ್ಲ, ಹಲವು ವರದಿಗಳು ಹಿಂದುಳಿದ ವರ್ಗಕ್ಕೂ ಮೀಸಲಾತಿಯ ಅಗತ್ಯವಿದೆಯೆಂದು ಹೇಳಿದ್ದರೂ ಸಹ ಒ.ಬಿ.ಸಿ ಮೀಸಲಾತಿಯನ್ನು ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿಯ ನಂತರ ಅಧಿಕಾರಕ್ಕೆ ಬಂದಂತಹ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಸರಕಾರ ೧ ಜನವರಿ ೧೯೭೯ ರಂದು, ಎರಡನೇ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಆಯೋಗವನ್ನು ಸ್ಥಾಪಿಸಿತು, ಇದನ್ನು ಜನಪ್ರಿಯವಾಗಿ ಮಂಡಲ್ ಆಯೋಗ ಎಂದು ಕರೆಯಲಾಗುತ್ತದೆ.
ಆಯೋಗವು ಭಾರತದ ಸಾಮಾಜಿಕ ಅಥವಾ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಕಾರ್ಯವನ್ನು ನಿರ್ವಹಿಸಿತು. ಮಂಡಲ್ ಆಯೋಗವು ೧೯೩೧ ರ ಜನಗಣತಿ ಆಧಾರದ ಮೇಲೆ, ವಿವಿಧ ಹಿಂದುಳಿದ ಸಮುದಾಯಗಳ ಹಿಂದುಳಿದಿರುವಿಕೆಯನ್ನು ಗುರುತಿಸಲು ಹನ್ನೊಂದು ಸೂಚಕಗಳನ್ನು ಬಳಸಿತ್ತು. ಆಯೋಗದ ವರದಿಯಲ್ಲಿ ೩,೭೪೩ ವಿವಿಧ ಜಾತಿಗಳು ಮತ್ತು ಸಮುದಾಯಗಳಿಗೆ ಸೇರಿದ ಜನರು ಹಿಂದುಳಿದ್ದಾರೆ ಮತ್ತು ಅವರು ಭಾರತೀಯ ಜನಸಂಖ್ಯೆಯ ಶೇಕಡಾ ೫೨% ಪ್ರತಿಶತವನ್ನು ಒಳಗೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಈ ಸಂಖ್ಯೆಯನ್ನು ಆಧರಿಸಿ, ಮಂಡಲ್ ಆಯೋಗವು ಒ.ಬಿ.ಸಿ ಗಳಿಗೆ ಶೇಕಡಾ ೫೨% ಪ್ರತಿಶತ ಮೀಸಲಾತಿಯನ್ನು ನೀಡಲು ಶಿಫಾರಸ್ಸು ಮಾಡಿತ್ತು.
ಆದರೆ ಸುಪ್ರೀಂ ಕೋರ್ಟ್‌ನ ೧೯೬೨ ರ ತೀರ್ಪಿನ ಮೂಲಕ ನಿಗದಿಪಡಿಸಲಾದ ಶೇಕಡಾ ೫೦% ಮೀಸಲಾತಿಯ ಮೇಲಿನ ಮಿತಿಗೆ ವಿರುದ್ಧವಾಗಿರುವು ದರಿಂದ, ಆಯೋಗವು ಶೇಕಡಾ ೨೭% ಮೀಸಲಾತಿಯನ್ನು ಹಿಂದುಳಿದ ವರ್ಗದ ಸಮುದಾಯಗಳಿಗೆ ನೀಡಲು ಕೊನೆಯದಾಗಿ ಶಿಫಾರಸ್ಸು ಮಾಡಿತ್ತು.
ಮಂಡಲ್ ಆಯೋಗವು ಡಿಸೆಂಬರ್ ೧೯೮೦ ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಅಷ್ಟು ಹೊತ್ತಿಗಾಗಲೇ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತು, ಮಂಡಲ್ ವರದಿಯನ್ನು ಇಂದಿರಾಗಾಂದಿ ಆಡಳಿತಕ್ಕೆ ಹಸ್ತಾಂತರಿಸಲಾಯಿತು. ಯಥಾ ಪ್ರಕಾರ ಇಂದಿರಾಗಾಂಧಿ ಹಿಂದುಳಿದ ವರ್ಗಗಳ ಮೀಸಲಾತಿ ವಿರೋಧಿಯಾಗಿದ್ದರಿಂದ ಮಂಡಲ್ ಆಯೋಗ ನೀಡಿದ ವರದಿ ಮೂಲೆ ಸೇರಿತು, ಒ.ಬಿ.ಸಿ ಸಮುದಾ ಯಗಳಿಗೆ ಮೀಸಲಾತಿ ಮತ್ತೊಮ್ಮೆ ಮರೀಚಿಕೆಯಾಯಿತು. ೧೯೮೦ ರಿಂದ ೧೯೮೪ ರ ಆಡಳಿತಾವಧಿಯಲ್ಲಿ ಇಂದಿರಾ ಗಾಂಧಿ ಸರಕಾರ ಮಂಡಲ್ ವರದಿಯ ಶಿಫಾರಸ್ಸಿನ ಬಗ್ಗೆ ಏನನ್ನೂ ಮಾಡಲಿಲ್ಲ, ನಂತರ ಅವರ ಉತ್ತರಾಧಿಕಾರಿಯಾಗಿ ಮಗ ರಾಜೀವ್ ಗಾಂಧಿ ಪ್ರಧಾನಮಂತ್ರಿಯಾದರು. ತನ್ನ ಅಜ್ಜ ಮತ್ತು ಅಮ್ಮನ ದಾರಿಯನ್ನೇ ಮುಂದುವರೆಸಿದ ರಾಜೀವ್ ಗಾಂಧಿಯವರು ೧೯೮೪ ರಿಂದ ೧೯೮೯ರ ವರೆಗೂ ಮಂಡಲ್ ವರದಿಯನ್ನು ಮುಟ್ಟಿರಲಿಲ್ಲ, ಮತ್ತೊಮ್ಮೆ ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ಸಿನಿಂದ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಯಿತು.
೧೯೮೯ ರಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಸೋತ ನಂತರ ವಿ.ಪಿ.ಸಿಂಗ್ ನೇತೃತ್ವದ ನ್ಯಾಷನಲ್ ಮೌಂಟ್ ಸರಕಾರ ಅಧಿಕಾರಕ್ಕೆ ಬಂದಿತು, ೭ ನೇ ಆಗ ೧೯೯೦ ರಂದು, ವಿ.ಪಿ.ಸಿಂಗ್ ನೇತೃತ್ವದ ನ್ಯಾಷನಲ್ ಮೌಂಟ್ ಸರಕಾರವು ಸಂಸತ್ತಿನಲ್ಲಿ ವರದಿಯನ್ನು ಮಂಡಿಸಿತು. ಕೇಂದ್ರ ಸರಕಾರ ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಒ.ಬಿ.ಸಿ.ಗಳಿಗೆ ಶೇಕಡಾ ೨೭% ರಷ್ಟು ಮೀಸಲಾತಿ ನೀಡುವುದಾಗಿ ಪ್ರಧಾನಿ ವಿ.ಪಿ.ಸಿಂಗ್ ಘೋಷಿಸಿದರು, ಇದರ ಪರಿಣಾಮ ಇತರ ಹಿಂದುಳಿದ ವರ್ಗಗಳು ಎಂಬ ಪದವು ಶಾಸನಬದ್ಧ ಮಾನ್ಯತೆಯನ್ನು ಪಡೆಯಿತು. ಸಂಸತ್ತಿನಲ್ಲಿ ಮಂಡಲ್ ಆಯೋಗದ ವರದಿಯ ಅನುಷ್ಠಾನದ ಮೇಲೆ ನಡೆದ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ರಾಜೀವ್ ಗಾಂಧಿ ೬ ನೇ ಸೆಪ್ಟೆಂಬರ್ ೧೯೯೦ ರಂದು ಹಿಂದುಳಿದ ವರ್ಗಗಳಿಗೆ ನೀಡಲಿರುವ ಮೀಸಲಾತಿಯನ್ನು ಬಲವಾಗಿ ವಿರೋಧಿಸಿದ್ದರು.
ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಿದ್ದರ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಯಿತು, ತಾತ್ಕಾಲಿಕವಾಗಿ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಆದರೆ ೧೬ ನೇ ನವೆಂಬರ್ ೧೯೯೨ ರಂದು ಸರಕಾರದ ಮೀಸಲಾತಿ ಸರಿಯಿದೆಯೆಂದು ತೀರ್ಪು ನೀಡುವ ಮೂಲಕ ಒ.ಬಿ.ಸಿಗಳಿಗೆ ಮಂಡಲ್ ಆಯೋಗದ ವರದಿಯ ನ್ವಯ ನೀಡಿದ ಮೀಸಲಾತಿಯನ್ನು ಎತ್ತಿ ಹಿಡಿಯಿತು. ಪ್ರಧಾನಿ ಮೋದಿಯವರು ೧೯೫೦ರಲ್ಲಿ ಜನಿಸಿದ ೪೦ ವರ್ಷಗಳ ನಂತರ ’ಒ.ಬಿ.ಸಿ’ ಎಂಬ ಪದಕ್ಕೆ ಅಧಿಕೃತ ಮನ್ನಣೆ ದೊರೆತಿರುವುದರಿಂದ ಪ್ರಧಾನಿ ಮೋದಿ ಅವರು ಒಬಿಸಿ ಯಾಗಿ ಹುಟ್ಟಿಲ್ಲ ಎಂಬ ರಾಹುಲ್ ಗಾಂಧಿ ಯವರ ಆರೋಪಕ್ಕೆ ಹುರುಳಿಲ್ಲದಂತಾಗಿದೆ.
ರಾಹುಲ್ ಗಾಂಧಿ ಕೋಲಾರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡುವಾಗ ಮೋದಿ ಎಂಬ ಹೆಸರಿನವರೆಲ್ಲರೂ ಕಳ್ಳರೆಂದು ಹೇಳುವ ಮೂಲಕ ಹಿಂದುಳಿದ ವರ್ಗಕ್ಕೆ ಸೇರಿದ ಸಮುದಾಯಕ್ಕೆ ಅವಮಾನ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ನಿಷಿದ್ಧ, ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮುಸಲ್ಮಾನರಿಗೆ ಧರ್ಮದ ಆಧಾರದ ಮೇಲೆ ಶೇಕಡಾ ೪ % ಮೀಸಲಾತಿಯನ್ನು ನೀಡುವ ಪ್ರಸ್ತಾವನೆ ಇತ್ತು, ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ದೇವೇಗೌಡರು ಕಾಂಗ್ರೆಸ್ ಪಕ್ಷ ನೀಡಿದ್ದ ಪ್ರಸ್ತಾವನೆಯನ್ನು ಅಂಗೀಕರಿಸಿದ್ದರು.
ನಂತರ ೨೦೦೪ ರಲ್ಲಿ ಅಖಂಡ ಆಂಧ್ರ ಪ್ರದೇಶದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಸಲುವಾಗಿ ರಾಜಶೇಖರ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರಕಾರ ಮುಸಲ್ಮಾನರಿಗೆ ಮೀಸಲಾತಿ ನೀಡಿತ್ತು. ನಂತರ ನ್ಯಾಯಾಲಯದಲ್ಲಿ ವಿವಿಧ ಹಂತಗಳಲ್ಲಿ ನಡೆದ ವಾದಗಳಲ್ಲಿ ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲವೆಂಬುದು ತಿಳಿಯಿತು. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯನ್ನು ವಿರೋಧಿಸುತ್ತ ಬಂದಿತ್ತು, ಆದರೆ ಧರ್ಮದ ಆಧಾರದ ಮೇಲೆ ಮುಸಲ್ಮಾನರಿಗೆ ನೀಡುವ ಮೀಸಲಾತಿಯನ್ನು ಮಾತ್ರ ಬೆಂಬಲಿಸುತ್ತಾ ಬಂದಿದೆ.
ಸಂವಿಧಾನ ವಿರೋಧಿ ಧರ್ಮಾಧಾರಿತ ಮೀಸಲಾತಿಯನ್ನು ವಿರೋಧಿಸದೆ, ಸಂವಿಧಾನದ ನಿಯಮಗಳಿಗನುಸಾರವಾಗಿ ಒ.ಬಿ.ಸಿ.ಗಳಿಗೆ ನೀಡಿದ ಮೀಸಲಾತಿಯನ್ನು ವಿರೋಧಿಸುವುದು ಕಾಂಗ್ರೆಸ್ಸಿನ ಸಂಸ್ಕೃತಿ. ತಮಗೆ ಮತ ನೀಡುವ ಮುಸಲ್ಮಾನರನ್ನು ಚುನಾವಣೆಗೂ ಮುನ್ನಾ ಓಲೈಸಿ, ಚುನಾವಣೆ ಮುಗಿದ ನಂತರ ತಮಗೆ ಮತ ನೀಡಿದವರಿಗೆ ಋಣ ಸಂದಾಯ ಮಾಡುವುದು ಕಾಂಗ್ರೆಸ್ಸಿನ ದಶಕಗಳ ರಾಜಕೀಯ. ೨೦೨೨ ರಲ್ಲಿ ಅಸಂವಿಧಾನಿಕವಾಗಿ ಮುಸಲ್ಮಾನರಿಗೆ ನೀಡಿದ್ದ ೪ % ಮೀಸಲಾತಿಯನ್ನು ರದ್ದುಗೊಳಿಸಿ, ಲಿಂಗಾಯಿತರು ಮತ್ತು ಒಕ್ಕಲಿಗರಿಗೆ ನೀಡಿ ಅವರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿತ್ತು.
ಆದರೆ ಇತ್ತೀಚಿಗೆ, ಕರ್ನಾಟಕದ ಕಾಂಗ್ರೆಸ್ ಸರಕಾರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಿದ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಂ ಧರ್ಮವನ್ನು ಸೇರಿಸಿ ಮತ್ತೊಮ್ಮೆ ೨೦೨೩ ರಲ್ಲಿ ತಮಗೆ ಮತ ಹಾಕಿದವರ ಋಣ ಸಂದಾಯದ ರಾಜಕಾರಣ ಮಾಡಿದೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಲ್ಲಿ ಜಾತಿಗಳಿಲ್ಲ, ನಾವೆಲ್ಲರೂ ಒಂದೇ ಎಂದು ಹೇಳುವವರು, ಮೀಸಲಾತಿ ವಿಷಯದಲ್ಲಿ ಮಾತ್ರ ಜಾತಿ ಕಾರ್ಡ್ ಬಳಸಿ ಮುಂದಿನ ಸಾಲಿನಲ್ಲಿ ಬಂದು
ನಿಲ್ಲುತ್ತಾರೆ.
ಕಾಂಗ್ರೆಸ್ ಸರಕಾರ ಕೇಂದ್ರ ಹಿಂದುಳಿದ ಆಯೋಗಕ್ಕೆ ಸಲ್ಲಿಸಿರುವ ಮುಸ್ಲಿಮರ ಪಟ್ಟಿಯಲ್ಲಿ ಮುಸಲ್ಮಾನರಲ್ಲಿ ಶ್ರೀಮಂತರೆನಿಸಿದ ಪಠಾಣ್ ಮತ್ತು ಶೇಕ್
ಸಮುದಾಯವೂ ಸೇರಿದೆ, ಮುಸ್ಲಿಂ ಸಮುದಾಯದಲ್ಲಿ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿರುವ ಸಮುದಾಯದವರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿರು ವುದು ಋಣ ಸಂದಾಯ ರಾಜಕಾರಣದ ಪರಾಕಾಷ್ಠೆ. ಎಲ್ಲಾ ಜಾತಿಯನ್ನೂ ಒಳಗೊಂಡು, ಮೀಸಲಾತಿ ಸಿಗದಿರುವ, ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ ೧೦% ಮೀಸಲಾತಿಯನ್ನು ಆದಾಯದ ಆಧಾರದ ಮೇಲೆ ನೀಡಿದಾಗಲೂ ಕಾಂಗ್ರೆಸ್ ಪಕ್ಷ ವಿರೋಧಿಸಿತ್ತು.
ನ್ಯಾಯಾಲಯದಲ್ಲಿ ಅದರ ವಿರುದ್ಧ ಆಕ್ಷೇಪಣೆ ಸಲ್ಲಿಸಿತ್ತು, ಆದರೆ ನ್ಯಾಯಾಲಯ ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿಯನ್ನು ಎತ್ತಿ ಹಿಡಿದಿತ್ತು. ಓಲೈಕೆ ಮತ್ತು ಋಣ ಸಂದಾಯದ ರಾಜಕಾರಣಕ್ಕೆ ಹೆಸರುವಾಸಿಯಾದ ಕಾಂಗ್ರೆಸ್ ಪಕ್ಷ, ಮುಸಲ್ಮಾನರನ್ನು ಓಲೈಸಲು ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದ ನಾಯಕರ ವಿರುದ್ದವೂ ನಿಂತಿದ್ದ ಹಲವು ಉದಾಹರಣೆಗಳಿವೆ. ರಾಹುಲ್ ಗಾಂಧಿಯ ಮುತ್ತಜ್ಜನ ಕಾಲದಿಂದಲೂ ಒ.ಬಿ.ಸಿ ಮೀಸಲಾತಿಯನ್ನು ವಿರೋಧಿಸಿ, ತಡೆ ಹಿಡಿದದ್ದು ಕಾಂಗ್ರೆಸ್ಸಿನ ಸುದೀರ್ಘ ಇತಿಹಾಸ.