Sunday, 10th November 2024

ಶಾಸ್ತ್ರೀಜಿ ಸಾವು ; ಬಗೆಹರಿಯದ ಒಗಟುಗಳು..!

ತನ್ನಿಮಿತ್ತ

ಎಲ್‌.ಭಾನುಪ್ರಕಾಶ್

1966 ಜನವರಿ 11ರಂದು ಭಾರತದ ಪ್ರಧಾನಿಯಾಗಿದ್ದ ಶಾಸ್ತ್ರೀಜಿಯವರು ರಷ್ಯಾದ ತಾಷ್ಕೆಂಟ್‌ನಲ್ಲಿ ಅನುಮಾನಾಸ್ಪದ ರೀತಿ ಯಲ್ಲಿ ಮೃತಪಟ್ಟರು. ಪಾರ್ಥಿವ ಶರೀರ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣ ಅವರ ತಾಯಿ ತಮ್ಮ ಮಗನ ಮೃತದೇಹ ವನ್ನು ನೋಡುತ್ತಿದ್ದಂತೆ ಚೀರಿದ ಮಾತು, ನನ್ನ ಮಗನಿಗೆ ವಿಷ ಪ್ರಾಷಣವಾಗಿದೆ..!

ಈ ವಿಷಯ ಬಹಳ ಚರ್ಚಿತವಾಗಿ ಸಂಸತ್ತಿನಲ್ಲಿ ಪ್ರತಿಧ್ವನಿಸಿತು. ವಿರೋಧ ಪಕ್ಷದ ನಾಯಕರ ಪ್ರಶ್ನೆಗಳಿಗೆ ಸರಕಾರ ಉತ್ತರಿಸ ಲಾಗದೆ ಮುಜುಗರದ ಮೌನಕ್ಕೆ ಶರಣಾಯಿತು. ಸಂಸತ್ ಭವನದಲ್ಲಿ ವಿರೋಧ ಪಕ್ಷದ ಪರವಾಗಿ ಅಟಲ್ ಬಿಹಾರಿ ವಾಜಪೇಯಿ ಯವರು ಶಾಸೀಗಳ ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸಿದರು. ಜತೆಗೆ ಆಡಳಿತ ಪಕ್ಷಕ್ಕೆ ಪ್ರಶ್ನೆಗಳ ಸುರಿಮಳೆಯನ್ನು ಸುರಿಸಿದರು. ಪ್ರಧಾನಿ ತಂಗಿದ್ದ ಕೊಠಡಿಯಲ್ಲಿ ದೂರವಾಣಿ ಅಥವಾ ಬಝರ್ ಏಕೆ ಇರಲಿಲ್ಲ? ಎಂದು ಅಟಲ್ ಜಿ ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿ ಸರಕಾರದ ಸಚಿವ ಸ್ವರಣ್ ಸಿಂಗ್ ಕೊಠಡಿಯಲ್ಲಿ 3 ಫೋನ್ ಗಳಿದ್ದವು. ಪ್ರತಿ ಬಾರಿ ದೂರವಾಣಿಯ ಮೂಲಕ ಸಹಾಯಕರನ್ನು ಕರೆಯುತ್ತಿದ್ದ ಶಾಸೀಜಿ ಅವತ್ತು ಮಾತ್ರ ಆ ಸೌಲಭ್ಯವನ್ನು ಉಪಯೋಗಿಸಲಿಲ್ಲ.

ಅದಕ್ಕೆ ಕಾರಣ ಗೊತ್ತಿಲ್ಲ..! ಆದರೆ ನಂತರ ಬಹಿರಂಗವಾದ ವಿಷಯ, ರೂಮಿನಲ್ಲಿ ಇಂಟರ್ ಕಾಮ್ ಅಥವಾ ಬಝರ್ ಇರಲಿಲ್ಲ. ಸರಕಾರದ ಪ್ರತಿನಿಧಿ ಸಂಸತ್ತಿನಲ್ಲಿ ಸುಳ್ಳು ಉತ್ತರ ನೀಡಿದ್ದರು. ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ಪುತ್ರ ದಾಹ್ಯಾ ಭಾಯ್ ಪಟೇಲ, ಹೃದಯ ಸಂಬಂಧಿ ಕಾಯಿಲೆ ಇದ್ದ ಪ್ರಧಾನಿಗಳ ಕೊಠಡಿಯಲ್ಲಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಏತಕ್ಕೆ ಇರಲಿಲ್ಲವೆಂದು ಪ್ರಶ್ನಿಸಿದ್ದರು? ಈ ರೀತಿಯ ಹತ್ತು ಹಲವು ಪ್ರಶ್ನೆಗಳಿಗೆ ಸರಕಾರ ಹಾರಿಕೆಯ ಉತ್ತರ ನೀಡಿ ಮೌನಕ್ಕೆ ಜಾರಿತು.

ಈ ಅಸಮರ್ಪಕ ಉತ್ತರಗಳು ಶಾಸ್ತ್ರೀಜಿ ಸಾವು ನಿಗೂಢ ಮತ್ತು ಕಾಣದ ಕೈಗಳ ಕೆಲಸವಿರಬೇಕೆಂಬ ಅನುಮಾನಕ್ಕೆ ನಾಂದಿ
ಯಾಯಿತು. ಶಾಸ್ತ್ರೀಯವರ ಬಾಲ್ಯ ಸ್ನೇಹಿತ ಟಿ.ಎನ್. ಸಿಂಗ್ ಮತ್ತು ರಾಜ್ ನಾರಾಯಣ್ ಈ ವಿಷಯದ ಸುದೀರ್ಘ ಚರ್ಚೆಗೆ ಒತ್ತಾಯ ಮಾಡಿದ್ದರು. ವಿಪರ್ಯಾಸವೆಂದರೆ ದೇಶದ ಪ್ರಧಾನಿ, ತಮ್ಮದೇ ಪಕ್ಷದ ನಾಯಕನ ನಿಗೂಢ ಸಾವಿನ ಚರ್ಚೆಗೆ ಕಾಂಗ್ರೆಸ್ ನಾಯಕರು ನಿಗದಿ ಮಾಡಿದ ಸಮಯ ಕೇವಲ ಅರ್ಧ ಗಂಟೆ.!

ಅನುಮಾನದ ಸುಳಿಗಳಲ್ಲಿ: ಶಾಸ್ತ್ರೀಜಿಯವರ ನಿಧನವಾದ 4  ವರ್ಷಗಳ ಬಳಿಕ ಅವರ ಪತ್ನಿ ಲಲಿತಾ ಶಾಸ್ತ್ರೀಯವರು ಧರ್ಮ ಯುಗ ಪತ್ರಿಕೆಗೆ ಒಂದು ಸಂದರ್ಶನವನ್ನು ನೀಡಿದ್ದರು. ಅದರಲ್ಲಿ ಅವರು ತಿಳಿಸಿದ ಮಾಹಿತಿಗಳು ಸ್ಫೋಟಕವಾಗಿವೆ. ಶಾಸ್ತ್ರೀಜಿ ಯವರ ಮೃತದೇಹವನ್ನು ನೋಡುತ್ತಿದ್ದಂತೆ ಎಲ್ಲವೂ ಸರಿಯಿಲ್ಲವೆಂದನ್ನಿಸಿತ್ತು. ಕಾರಣ ಇಡೀ ದೇಹ ನೀಲಿ ಬಣ್ಣಕ್ಕೆ ತಿರುಗಿತು. ಕುತ್ತಿಗೆಯ ಭಾಗದಲ್ಲಿ ಒಂದು ರಂಧ್ರವನ್ನು ಮಾಡಲಾಗಿತ್ತು. ಅದರಿಂದ ರಕ್ತ ಜಿನುಗಿತ್ತಿತ್ತು.

ನನ್ನ ಮಗ ಹರಿಕೃಷ್ಣ ಶರೀರವನ್ನು ಮರಣೋತ್ತರ ಪರೀಕ್ಷೆ ಮಾಡಿಸುವಂತೆ ಕೇಳಿದ, ಆದರೆ ಕಾಂಗ್ರೆಸ್ ಹಿರಿಯ ನಾಯಕರು ಅದು ಅಸಾಧ್ಯ ವೆಂದು ಹೇಳಿಬಿಟ್ಟರು. ಜತೆಗೆ ಕಾಂಗ್ರೆಸ್ ನಾಯಕ ಜಗದೀಶ್ ಕೊಡೇಸಿಯಾ ಶರೀರದ ಹೊಟ್ಟೆಯ ಭಾಗದಲ್ಲಿ ಕತ್ತರಿಸಿದ ಗುರುತನ್ನು ಗಮನಿಸಿದ್ದಾಗಿ ಹೇಳಿದ್ದರು. ಈ ಅಂಶಗಳು ದೇಶದ ಪ್ರಜ್ಞಾವಂತ ಪ್ರಜೆಗಳಲ್ಲಿ ಮೂಡಿಸುವ ಪ್ರಶ್ನೆಗಳು – ಶಾಸ್ತ್ರೀಜಿ ಯವರ ಮರಣೋತ್ತರ ಪರೀಕ್ಷೆಯನ್ನು ಭಾರತ ಸರಕಾರ ಏಕೆ ಮಾಡಲಿಲ್ಲ? ಹೊಟ್ಟೆಯ ಭಾಗದಲ್ಲಿ ಕತ್ತರಿಸಿದ್ದು ನಿಜವೇ? ನಿಜವಾಗಿದ್ದರೆ ರಷ್ಯಾ ಸರಕಾರ ಮರಣೋತ್ತರ ಪರೀಕ್ಷೆ ಮಾಡಿತ್ತೆ? ಭಾರತದ ಅಧಿಕಾರಿಗಳು ಈ ವಿಷಯವನ್ನು ಮರೆಮಾಚಿದ್ದರೇ?
ಶಾಸ್ತ್ರೀಜಿ ತಾಷ್ಕೆಂಟ್‌ಗೆ ತೆರಳುವ ಮುನ್ನ ಭದ್ರತೆಯ ಸಂಪೂರ್ಣ ಪರಿಶೀಲನೆ ಮಾಡಿದ್ದು ಕೇಂದ್ರ ಗುಪ್ತಚರ ವಿಭಾಗದ ಪ್ರಾಮಾಣಿಕ ಅಧಿಕಾರಿ ಜೆ. ಸಿ. ದತ್ತ.

ಪ್ರಧಾನಿಗೆ ಪ್ರತ್ಯೇಕ ವಿಲ್ಲಾದಲ್ಲಿ ತಂಗುವ ವ್ಯವಸ್ಥೆ ಮಾಡಬಾರದು. ಅಲ್ಲಿ ಸುರಕ್ಷತೆ ಸರಿಯಿಲ್ಲವೆಂದು ಸರಕಾರಕ್ಕೆ ಟೆಲಿಗ್ರಾಂ ನೀಡಿದ್ದರು. ಜತೆಗೆ ಪ್ರಧಾನಿ ಉಳಿಸುವ ವಿಲ್ಲಾದಲ್ಲಿ, ಹೊರಗಿನ ಅಪರಿಚಿತ ವ್ಯಕ್ತಿಯೊಬ್ಬ ತಂಗಿದ್ದಾನೆ. ಆತ ಪೂರ್ಣವಾದ
ತಪಾಸಣೆಗೆ ಒಳಗಾಗಿಲ್ಲ ಎಂದು ಎಚ್ಚರಿಸಿದ್ದರು. ಆದರೆ ರಷ್ಯಾ ಭಾರತೀಯ ರಾಯಭಾರಿ ಟಿ.ಎನ್. ಕೌಲ್ ಮಾತಿನ ಮೇರೆಗೆ
ಗುಪ್ತದಳ ನೀಡಿದ ಸಲಹೆಯನ್ನು ಸರಕಾರ ಒಪ್ಪಲಿಲ್ಲ. ಈ ಟಿ.ಎನ್. ಕೌಲ್ ನೆಹರು ಕುಟುಂಬದ ನಿಕಟವರ್ತಿ. ವಿದಲ್ಲಿದ ಅಪರಿಚಿತ ವ್ಯಕ್ತಿ ಯಾರು? ಆತ ಬ್ರೋಕರ್ ಧರ್ಮತೇಜನೇ? ಈ ಧರ್ಮತೇಜ ಇಂದಿರಾ ಗಾಂಧಿಯವರ ನಂಬುಗೆಯ ಭಂಟ. ರಾಜೀವ್ ಗಾಂಧಿ ಮತ್ತು ಸಂಜಯ ಗಾಂಧಿಗೆ ಪ್ರೀತಿಯ ತೇಜ್ ಅಂಕಲ.

ಧರ್ಮತೇಜ ನೆಹರು ಪ್ರಧಾನಿಯಾಗಿದ್ದಾಗ ಸರಕಾರದ ಮಟ್ಟದಲ್ಲಿ ಯಾವ ಕೆಲಸವನ್ನಾದರೂ ಸುಲಭವಾಗಿ ಮಾಡಿಸಿಕೊಳ್ಳುವ ತಾಕತ್ತನ್ನು ಹೊಂದಿದ. ಆದರೆ ಶಾಸೀಜಿ ಅವನ ಆಮಿಷಗಳಿಗೆ ಬಗ್ಗದೆ, ಆತನ ಆಟಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದರು. ಆತನ ಮೇಲೆ ಹಣಕಾಸಿನ ಅವ್ಯವಹಾರದ ಆರೋಪಗಳು ಕೇಳಿ ಬಂದಿತು. ಈ ಸಂಬಂಧ ಜೈಲು ಶಿಕ್ಷೆಯನ್ನು ಅನುಭವಿಸಿದ. ನಂತರ ಮತ್ತೆ ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ ಪ್ರಧಾನಿಯಾದಾಗ ಅವರಿಗೆಲ್ಲ ಪರಮಾಪ್ತನಾಗಿದ್ದ. ಈ ಧರ್ಮತೇಜ ಶಾಸೀಜಿ ಸಾಯುವ ಕೆಲದಿನಗಳ ಮೊದಲು ಮಾಸ್ಕೊಗೆ ತೆರಳಿದ್ದ. ಅಲ್ಲಿ ಟಿ.ಎನ್. ಕೌಲ್‌ನನ್ನು ಭೇಟಿ ಮಾಡಿದ್ದ.

ಶಾಸ್ತ್ರೀಜಿ ಸಾಯುವ ರಾತ್ರಿ ಊಟವನ್ನು ತಯಾರು ಮಾಡಿದ್ದು ಕೌಲ್‌ನ ಅಡುಗೆ ಭಟ್ಟ ಮೊಹಮದ್ ಜಾನ್. ಹಾಲನ್ನು ಬಿಸಿ
ಮಾಡಿ ರಾಮನಾಥನ ಕೈಗೆ ಕೊಟ್ಟಿದ್ದು ರಷ್ಯಾ ನಿಯೋಜಿಸಿದ್ದ ಅಡುಗೆ ಭಟ್ಟ ಅಹಮದ್ ಸತ್ತೋನ್. ರಷ್ಯಾದ ಕೆಜಿಬಿ ಪ್ರಧಾನಿ ನಿಧನರಾದ ಕೆಲವೇ ಗಂಟೆಗೆಗಳಲ್ಲಿ ಎಲ್ಲಾ ಬಾಣಸಿಗರನ್ನು ಬಂಧಿಸುತ್ತದೆ. ಆದರೆ ಟಿ.ಎನ್. ಕೌಲ್ ಈ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿಯನ್ನೇ ತೋರುವುದಿಲ್ಲ. ಕಡೆಗೆ ರಷ್ಯಾ ಎಲ್ಲರನ್ನು ಬಿಡುಗಡೆ ಮಾಡಿ ಬಿಡುತ್ತದೆ.

ಇಲ್ಲಿ ಮತ್ತೊಂದು ಬೆಳವಣಿಗೆಯನ್ನು ಗಮನಿಸಬೇಕು – ಶಾಸ್ತ್ರೀಜಿ ಮೃತರಾದ ಮುಂದಿನ ದಿನಗಳಲ್ಲಿ ದೆಹಲಿಯ ಸ್ಟೇಟ್ಸ್ ಮನ್ ಪತ್ರಿಕೆಯ ಸಂಪಾದಕರಾಗಿದ್ದ ಕುಲದೀಪ್ ನಯ್ಯರ್‌ಗೆ ಕರೆ ಮಾಡಿ ಶಾಸ್ತ್ರೀಯವರು ಹೃದಯಾಘಾತದಿಂದ ಮೃತಪಟ್ಟರು ಎಂದು ಒಂದು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದು ಇದೇ ಟಿ.ಎನ್.ಕೌಲ. ಈ ವಿಷಯದ ಬಗ್ಗೆ ಕುಲದೀಪ್ ನಯ್ಯರ್ ತಮ್ಮ ಪುಸ್ತಕ ಸ್ಕೂಪ್‌ನಲ್ಲಿ ವಿಸ್ತಾರವಾಗಿ ಬರೆದಿದ್ದಾರೆ. ಈಗ ಮತ್ತೆ ಮೂಡುವ ಪ್ರಶ್ನೆಗಳು – ಕೌಲ್ ಮತ್ತು ಧರ್ಮತೇಜ ಭೇಟಿಯ ಉದ್ದೇಶವೇನು? ಈ ಇಬ್ಬರು ಶಾಸೀಜಿ ಸಾವಿಗೆ ಸಂಚು ರೂಪಿಸಿದ್ದರೆ? 1977ರಲ್ಲಿ ಶಾಸ್ತ್ರೀಜಿಯ ವೈಯಕ್ತಿಕ ವೈದ್ಯರಾದ ಡಾ.ಛುಗ್ ಮತ್ತು ಸೇವಕ ರಾಮನಾಥ ಇಬ್ಬರಿಗೂ ಸಂಸತ್ತಿನಲ್ಲಿ ಶಾಸ್ತ್ರೀಜಿಯವರ ಮರಣದ ದಿನಗಳಲ್ಲಿ ನಡೆದ ಘಟನೆಗಳಿಗೆ ಸಾಕ್ಷಿಯಾಗುವಂತೆ ತಿಳಿಸ
ಲಾಯಿತು.

ಸಂಸತ್ ಅಧೀವೇಶನದಲ್ಲಿ ಪಾಲ್ಗೊಳ್ಳಲು ಆರ್.ಎನ್.ಛುಗ್ ದೆಹಲಿಗೆ ಹೋಗುತ್ತಿದ್ದಾಗ ರಾಜಘಾಟ್ ಬಳಿ ಟ್ರಕ್ ಇವರ ವಾಹನಕ್ಕೆ
ಡಿಕ್ಕಿ ಹೊಡೆಯಿತು. ಛುಗ್ ಮತ್ತು ಅವರ ಪತ್ನಿ ಇಬ್ಬರು ಮೃತಪಟ್ಟರು.ರಾಮನಾಥ ದೆಹಲಿಗೆ ಬಂದು, ಶಾಸ್ತ್ರೀಜಿಯವರ ಪತ್ನಿ ಯನ್ನು ಭೇಟಿ ಮಾಡಿದ. ನಾನು ಬಹಳ ದಿನಗಳಿಂದ ದೊಡ್ದ ಹೊಣೆಯನ್ನು ಹೊರುತ್ತಿದ್ದೇನೆ, ಇಂದು ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ.

ಸಂಸತ್ ಭವನಕ್ಕೆ ಬರುವ ಮಾರ್ಗ ಮಧ್ಯೆಯೇ ಬಸ್ಸು ಬಂದು ಗುದ್ದಿತ್ತು. ಆತ ಪ್ರಾಣಪಾಯದಿಂದ ಪಾರಾದ. ಆದರೆ ಎರಡೂ ಕಾಲುಗಳನ್ನು ಕಳೆದುಕೊಂಡ. ಮತ್ತೆ ಸಾಯುವವರೆಗೂ ಶಾಸ್ತ್ರೀಜಿ ವಿಷಯದ ಬಗ್ಗೆ ಎಲ್ಲೂ ಮಾತನಾಡಲಿಲ್ಲ. ಇದು ಕಾಕತಾ ಳೀಯವೋ ಅಥವಾ ಸಂಚೋ? ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಯಿತು. ಸರಕಾರ ಒತ್ತಡಕ್ಕೆ ಮಣಿದು ಎರಡು ಸಮಿತಿಯನ್ನು ರಚಿಸಿತ್ತು. ಆ ಸಮಿತಿಗಳು ಇಂದಿರಾ ಗಾಂಧಿ ಸರಕಾರಕ್ಕೆ ಪ್ರತ್ಯೇಕ ವರದಿಯನ್ನು ಸಲ್ಲಿಸಿದ್ದವು. ಎರಡೂ ವರದಿಗಳು ಕಾಣೆಯಾದವು.! ಸಂಸತ್ತಿನ ಪೊಲೀಸ್ ಠಾಣೆಯ ವರದಿಗಳು ಸಹ ಕಣ್ಣ ಮರೆಯಾದವು.

ಶಾಸ್ತ್ರೀಜಿ ಸಾವಿಗೆ ಸಿಐಎ ಕಾರಣವೇ?: ಶಾಸೀಜಿ ಅಣು ವಿಜ್ಞಾನಿ ಹೋಮಿ ಜಹಾಂಗೀರ್ ಬಾಬಾರಿಗೆ ಅಣು ಬಾಂಬ್ ತಯಾರಿಸಿ
ಪರೀಕ್ಷಿಸಲು ಅನುಮತಿ ನೀಡಿದ್ದರು. ಶಾಸ್ತ್ರೀಯವರ ದೂರದೃಷ್ಟಿ ಭಾರತವನ್ನು ಅಣ್ವಸ್ತ್ರ ರಾಷ್ಟ್ರವನ್ನಾಗಿಸಿ, ನೆರೆಯ ಮಾನವ ತೆಯ ಬದ್ಧ ವೈರಿ ರಾಷ್ಟ್ರಗಳನ್ನು ನಿಯಂತ್ರಿಸುವುದಾಗಿತ್ತು. ಈ ವಿಷಯ ಸೋರಿಕೆಯಾಗಿ ಅಮೆರಿಕಾದ ಗುಪ್ತದಳ ಸಿಐಎ (Central
Intelligence Agency) ಅಂಗ ಸಂಸ್ಥೆ ಇಟಡಿ ಕಿವಿಗೆ ಬಿದ್ದಿತ್ತು.

1966ರ ಜನವರಿ 24ರಂದು, ಹೋಮಿ ಬಾಬಾ ಪ್ರಯಾಣಿಸುತ್ತಿದ್ದ ವಿಮಾನ ಅನುಮಾನಸ್ಪದವಾಗಿ ಅಪಘಾತಕ್ಕೀಡಾಯಿತು. ಎಲ್ಲಾ ಪ್ರಯಾಣಿಕರು ಮೃತರಾದರು. ಈ ಘಟನೆ ನಡೆದು ಬಹಳ ವರ್ಷಗಳ ನಂತರ ಅಮೆರಿಕಾ ಪತ್ರಕರ್ತ ಗ್ರೆಗೊರಿ ಡೌಗ್ಲಾಸ್, ಸಿಐಎನ ಮಾಜಿ ಏಜೆಂಟ್ ಕ್ರಾಲಿ ಜತೆ ನಡೆಸಿದ ಮಾತುಕತೆಯನ್ನು conversation with the crowನಲ್ಲಿ ಬಿಚ್ಚಿಟ್ಟಿರು.

ಕ್ರಾಲಿ ಹೇಳಿದ್ದು ಹೋಮಿ ಬಾಬಾ ಸಾವಿನ ಹಿಂದೆ ಸಿಐಎ ಪಾತ್ರವಿತ್ತು. ಅಣು ಬಾಂಬ್ ತಯಾರಿಸುವುದರಿಂದ ಏಷ್ಯಾ ಖಂಡದಲ್ಲಿ ಭಾರತ ಮೇಲುಗೈ ಸಾಧಿಸುತ್ತದೆ ಎಂದು ಹೆದರಿತ್ತಾ ಅಮೆರಿಕಾ? ಶಾಸೀಜಿಯವರ ಗೆಲುವನ್ನು ತಡೆಯಲು ತಾಷ್ಕೆಂಟ್‌ನಲ್ಲಿ ವಿಷ ಉಣ್ಣಿಸಿತ್ತೇ ಅಮೆರಿಕಾ? ಶಾಸ್ತ್ರೀಜಿ ಸಾವಿನ ಬಳಿಕ ಅತಿ ಹೆಚ್ಚು ಪ್ರಯೋಜನ ಅಥವಾ ಲಾಭ ಪಡೆದಿದ್ದು ಯಾರು? ಸಾಮಾನ್ಯವಾಗಿ ಅನುಮಾನಗಳು ಆಗಾಗ್ಗೆ ಇಂದಿರಾ ಗಾಂಧೀ ಕಡೆಗೂ ಬೊಟ್ಟು ಮಾಡುತ್ತದೆ. ನೆಹರು ಸಾವಿನ ಸಮಯದ ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿದ್ದ ಇಂದಿರಾಗೆ ನಿರಾಸೆ ಕಾದಿತ್ತು. ಶಾಸ್ತ್ರೀಜಿ ನೆಹರು ಮಗಳು ಎಂಬ ಕಾರಣಕ್ಕೆ ತಮ್ಮ ಕ್ಯಾಬಿನೆಟ್ ನಲ್ಲಿ ಸೇರಿಸಿಕೊಂಡರು.

ವಿದೇಶಾಂಗ ಖಾತೆಯ ಮೇಲೆ ಆಸೆಯಿಟ್ಟದ್ದ  ಇಂದಿರಾಗೆ ಸಿಕ್ಕಿದ್ದು ಮಾಹಿತಿ ಮತ್ತು ತಂತ್ರಜ್ಞಾನ ಖಾತೆ. ಇದನ್ನು ಬಿಟ್ಟು ಬೇರೆ ಯಾವ ಖಾತೆಯನ್ನು ನೀಡಲು ಸಾಧ್ಯವಿಲ್ಲವೆಂದು ನೇರವಾಗಿ ಶಾಸ್ತ್ರೀಜಿ ಹೇಳಿದ್ದರು. ಈ ಬಗ್ಗೆ ಇಂದಿರಾ ಗಾಂಧಿ ತಮ್ಮ ಅಸಮಾ ಧಾನವನ್ನು ಕೆಲವು ಕಾಂಗ್ರೆಸ್ ನಾಯಕರ ಬಳಿ ಹೊರಹಾಕಿದ್ದರು. ಇಂದಿರಾ ಗಾಂಧಿ ಪ್ರಧಾನಿಯಾದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ರಷ್ಯಾದ ಕೆಜೆಬಿಯಿಂದ ಲೆಕ್ಕವಿಲ್ಲದಟ್ಟು ಹಣ ರವಾನೆಯಾಗುತ್ತಿತ್ತು. ಈ ಬಗ್ಗೆ ಹಿರಿಯ ನಾಯಕ ನಿಜಲಿಂಗಪ್ಪನವರು ತಮ್ಮ ಡೈರಿಯಲ್ಲಿ ನಮೂದಿಸಿದ್ಧಾರೆ.

ಶಾಸ್ತ್ರೀಜಿ ಸಾವಿನ ಬಗ್ಗೆ ದಾಹ್ಯಾ ಭಾಯ್ ಪಟೇಲರಿಂದ ಹಿಡಿದು ಅನುಜ್ ಧರ್ವರಗೆ ಹಲವಾರು ಜನ ಸಾವಿರಾರು ಪುಟಗಳು ಬರೆದಿದ್ದಾರೆ. ಎಲ್ಲರೂ ಸಾವಿನಲ್ಲಿರುವ ಅನುಮಾನದ ಒಳಸುಳಿಗಳನ್ನು ಬೆತ್ತಲೆ ಮಾಡಿದ್ದಾರೆ. ಇತ್ತೀಚೆಗೆ ಕನ್ನಡದಲ್ಲೂ ತಾಷ್ಕೆಂಟ್ ಡೈರಿ ಎಂಬ ಪುಸ್ತಕ ಬಿಡುಗಡೆಯಾಗಿದೆ, ಲೇಖಕ ಎಸ.ಉಮೇಶ್ ಪಟ್ಟಿಮಾಡಿರುವ ಅನುಮಾನಗಳು  ಓದುಗನನ್ನು ಚಿಂತನೆಯ ಚರ್ಚೆಗೆ ಎಳೆದು ನಿಲ್ಲಿಸುತ್ತದೆ. ಈ ಸಾವು ಭಾರತದ ರಾಜಕೀಯ ಇತಿಹಾಸದ ಸಾರ್ವಜನಿಕರನ್ನು ಗೊಂದಲಕ್ಕೆ ಇಡು ಮಾಡಿದ ಬಗೆಹರಿಯದ ಪ್ರಕರಣ. ಈ ಎಲ್ಲಾ ಅನುಮಾನಗಳಲ್ಲಿ ಯಾವುದು ಸತ್ಯ? ಯಾವುದು ಮಿಥ್ಯ? ಎಂಬುದು ಇತಿಹಾಸದ ಕಾಲಗರ್ಭದಲ್ಲಿ ಬಂಧಿಯಾಗಿದೆ.

ಶಾಸ್ತ್ರೀಜಿ ಸತ್ತು 54 ವರ್ಷಗಳು ಕಳೆದಿದೆ. 5 ದಶಕಗಳಲ್ಲಿ 13 ಪ್ರಧಾನ ಮಂತ್ರಿಗಳನ್ನು ಈ ದೇಶ ಕಂಡಿದೆ. ಆಳಿದ ಯಾವ ಸರಕಾರ ಗಳು ಅವರ ಸಾವಿನ ನಿಗೂಢತೆಯನ್ನು ಭೇದಿಸುವ ಮತ್ತು ಜನ ಸಾಮಾನ್ಯರ ಅನುಮಾನಗಳನ್ನು ವಸ್ತುನಿಷ್ಠ ದಾಖಲೆಗಳಿಂದ ಪರಿಹರಿಸಲು ಮುಂದೆ ಬರಲಿಲ್ಲ. 1977ರಲ್ಲಿ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ರಾಜ್ ನಾರಾಯಣ ಸಮಿತಿ ಸತ್ಯಶೋಧನಾ ವರದಿ ಯನ್ನು ನೀಡಿತ್ತು. ಆದರೆ ಮತ್ತೆ ಕಾಣದ ಕೈಗಳ ಕೈವಾಡದಿಂದ ವರದಿ ಭೂಗತವಾಯಿತು.

ಭಾರತದ ಇಬ್ಬರು ನಾಯಕರು ನೇತಾಜಿ ಮತ್ತು ಶಾಸ್ತ್ರೀಜಿ ಸಾವು ಹಲವು ಅನುಮಾನಗಳ ಅಗರವಾಗಿದೆ. ಇಂದಿನ ಸರಕಾರಗಳು ತಮ್ಮ ಬಳಿಯಿರುವ ಮಾಹಿತಿಯನ್ನು ಸಮಾಜದ ಜತೆಗೆ ಮುಕ್ತವಾಗಿ ಹಂಚಿಕೊಳ್ಳಬೇಕು. ಭಾರತೀಯರ ಮನಸ್ಸಿನಲ್ಲಿ ಹುದುಗಿರುವ ಅನುಮಾನಗಳಿಗೆ ಉತ್ತರ ನೀಡುವ ಧೈರ್ಯ ಮಾಡಬೇಕು. ದೇಶದಲ್ಲಿ ಎರಡೂ ಭಾರತವಿದೆ. ಒಂದು ಮೇಲ್ದರ್ಜೆಯ ಭಾರತ, ಮತ್ತೊಂದು ಕೆಳದರ್ಜೆಯ ಭಾರತ. ಮೇಲ್ದರ್ಜೆಯವರಿಗೆ ತೊಂದರೆಯಾದರೆ ಕಾರ್ಯಾಂಗ ವ್ಯವಸ್ಥೆ ಟೊಂಕು ಕಟ್ಟಿ ವ್ಯವಸ್ಥಿತವಾದ ಕಾರ್ಯತಂತ್ರ ರೂಪಿಸಿ ಭಂಡಾಟವಾಗದಂತೆ ನೋಡಿಕೊಂಡಿದ್ದನ್ನು ನಾವು ಕಂಡಿದ್ದೇವೆ. ಲಾಲ್ ಬಹದ್ದೂರ್ ಶಾಸೀ ಬೇರುಮಟ್ಟದಿಂದ, ಸ್ವಂತ ಬಲದ ಮೇಲೆ ಎದ್ದು ನಿಂತ ನಾಯಕ.

ಕೆಳದರ್ಜೆಯವರು ಪ್ರಧಾನಿಯಾಗಬಹುದೆಂದು ನಿರೂಪಿಸಿದ ಮಹಾಚೇತನ. ಆದರೆ ಅವರ ಸಮಾಧಿ ನಿರ್ಮಾಣ ಸಹ ಸುಲಭ ವಾಗಿ ಆಗಲಿಲ್ಲ. ಅದಕ್ಕೆ ಅವರ ಪತ್ನಿ ಹೋರಾಟ ಮಾಡಬೇಕಾಯಿತು. ಶಾಸ್ತ್ರೀಜಿ ಬೆಂಬಲಿಗರು ಅವರ ಸಮಾಧಿಯ ಮೇಲೆ ಜೈ ಜವಾನ್, ಜೈ ಕಿಸಾನ್ ಕೆತ್ತಲು ಸೂಚಿಸಿದಾಗ, ಪ್ರಧಾನಿ ಇಂದಿರಾ ಗಾಂಽ ಅದಕ್ಕೆ ಎಷ್ಟು ಆಕ್ಷೇಪಿಸಿದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಲಲಿತಾ ಶಾಸ್ತ್ರೀ ಸಮಾಧಿಯ ಬಳಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿ, ಮಾಧ್ಯಮಗಳ
ಗಮನ ಸೆಳೆದರು. ಸರಕಾರ ಪ್ರತಿಭಟನೆಯ ಭಯಕ್ಕೆ ಶರಣಾಯಿತು.

ಏನೇ ಕುತಂತ್ರ ಮಾಡಿದ್ದರೂ ಶಾಸ್ತ್ರೀಜಿ ಧೀರತ್ವ, ದಿಟ್ಟ ನಿರ್ಧಾರಗಳು ಭಾರತೀಯನ ಮನಸ್ಸಿನಲ್ಲಿ ಹಚ್ಚೆಯಾಗಿವೆ. ಶತಮಾನ ಗಳು ಉರುಳಿದರೂ ವಾಮನ ಮೂರ್ತಿಯಂತಿದ್ದ ಲಾಲ್ ಬಹದ್ದೂರ್ ಶಾಸೀ/ಶ್ರೀವಾಸ್ತವ ಭಾರತೀಯರ ಮನಗಳಲ್ಲಿ ಅಮರ ರಾಗಿರುತ್ತಾರೆ. ಜೈ ಜವಾನ್, ಜೈ ಕಿಸಾನ್.