Wednesday, 11th December 2024

ಒಲವಿನ ಪೂಜೆಗೆ ಒಲವೇ ಮಂದಾರ…

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ಕಪ್ಪು-ಕೇಸರಿ-ನೀಲಿ-ಹಸಿರಿನ ಪೈಪೋಟಿಯ ನಡುವೆ ನಗುನಗುತ್ತಾ ಅರಳಿದೆ ಕೆಂಪು! ಒಲಿದ ಮನಗಳಿಗೆ ಕೆಂಪು ಕೆಂಗುಲಾಬಿಯಾದರೆ
ಉಳಿದವರ ಕಣ್ಣಿಗೆ ಕೆಂಪು ಕ್ರಾಂತಿಯ ಸಂಕೇತ! ಮೇಲು-ಕೀಳೆಂಬ ಭೇದ-ಭಾವವಿಲ್ಲದೆ ಎಲ್ಲರ ದೇಹದೊಳಗೆ ಹರಿಯುತ್ತಿರುವ ರಕ್ತದ ಬಣ್ಣವೂ ಕೆಂಪೇ! ನಾಚಿದಾಗ ರಂಗೇರುವ ಬಣ್ಣವೂ ಕೆಂಪೇ!

ಹೀಗಾಗಿ ಎಲ್ಲ ಪ್ರಿಯತಮರ ಕಣ್ಣಲ್ಲಿ ಅವರ ಪ್ರೇಯಸಿಯರು ಕೆಂಪು ಕೆಂಪು ಕೆಂಗು ಲಾಬಿಯೇ! ಗುಲಾಬಿಗೆ ಚೆಲುವಿನ ಜೊತೆಗೆ ರೊಮ್ಯಾಂಟಿಕ್ ಭಾವವಿದೆ. ಮಾತಾ ಡದೆಯೇ ಒಲವಿನ ಸಂದೇಶವನ್ನು ಹೃದಯಕ್ಕೆ ತಲುಪಿಸುವ ಶಕ್ತಿಯಿದೆ. ಅದರ ಮೃದು ವಾದ ದಳಗಳಲ್ಲಿ ಹಾಗೂ ದಟ್ಟ ರಕ್ತವರ್ಣದಲ್ಲಿ ಒಲವನ್ನು ಪ್ರತಿಫಲಿಸುವ ಕಾಂತಿಯಿದೆ.

ಎರಡು ಜೀವಗಳನ್ನು ಬೆಸೆಯುವ ಸೊಬಗಿದೆ. ನೋಡಿದ ಕೂಡಲೆ ಮನಸೂರೆ ಗೊಳ್ಳುವಂತೆ ಎಂತಹ ನೀರಸ ಮನಸುಗಳಲ್ಲೂ ಉಲ್ಲಾಸದ ಚಿಲುಮೆಯುಕ್ಕಿಸು ವಂತಹ ಚೈತನ್ಯವಿದೆ. ನೋಡು, ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ? ಎಂದು ತೋರಿಸಲು ಗುಲಾಬಿಗಿಂತ ಮಿಗಿಲಾದ ಹೂವಿಲ್ಲ ಅನ್ನುವುದು ಪ್ರೇಮಿಗಳ ಭಾವನೆ. ಹೀಗಾಗಿ ಪ್ರೇಮಿಗಳ ದಿನದಂದು ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ.

ಆದರೂ, ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ ಎಂದು ಹಾಡುತ್ತಾ ಒಲವಿನ ಓಲೆ ಯನ್ನು ಬರೆಯುವವರಿಗೇನೂ ಕಡಿಮೆಯಿಲ್ಲ. ಮಲ್ಲಿಗೆ ಎಂದ ಕೂಡಲೆ ನೆನಪಿಗೆ ಬರುವುದು ಎಲ್ಲರ ನೆಚ್ಚಿನ ಪ್ರೇಮಕವಿಯಾದ ನಮ್ಮ ಕೆ.ಎಚ್. ನರಸಿಂಹ ಸ್ವಾಮಿ ಯವರು.

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ ನಿನ್ನೊಲುಮೆ ನನ್ನ ಕಂಡು ಎಂದು ಕವಿಯ ಮನಸಿನ ಮಧುರ ಭಾವನೆಗಳನ್ನು ಅದೆಷ್ಟು ನವಿರಾಗಿ ಅರುಹಿದ್ದಾರೆ… ಸ್ವಯಂವರದಲ್ಲಿ ಮತ್ಸ್ಯಯಂತ್ರವನ್ನು ಭೇದಿಸಿ ದ್ರೌಪದಿಯನ್ನು ಪಡೆದದ್ದು ಅರ್ಜುನನೇ ಆದರೂ ಮನದಾಳದಿಂದ ಪ್ರೇಮಿಸಿ ಸದಾ ಅವಳ ರಕ್ಷಣೆಗೆ ಬಂದವನು ಮಾತ್ರ ಭೀಮ ಸೇನ! ಜೂಜಾಟದಲ್ಲಿ ಸೋತು ಹೆಂಡತಿಯನ್ನೂ ಪಣಕ್ಕಿಟ್ಟ ಧರ್ಮರಾಯನೊಂದಿಗೆ ಉಳಿದ ಮೂರೂ ಸಹೋದರರು ತಲೆತಗ್ಗಿಸಿ ನಿಂತಾಗ ದ್ಯೂತಸಭೆಗೆ ಅವಳ ತಲೆಗೂದಲನ್ನು ಹಿಡಿದೆಳದು ಬಂದ ದುಶ್ಶಾಸನನ ಎದೆ ಬಗೆದು ರಕ್ತವನ್ನು ಅವಳ ಶಿಖೆಗೆ ಹಚ್ಚುವವರೆಗೂ ಅವನ ಕ್ರೋಧ ತಣ್ಣಗಾಗಿರಲಿಲ್ಲ.

ಹಾಗೇ ಅಜ್ಞಾತವಾಸದಲ್ಲಿ ದಾಸೀ ವೇಷದಲ್ಲಿದ್ದ ಅಪ್ರತಿಮ ಸುಂದರಿ ಸೈರಂಧಿಯನ್ನು ಕೀಚಕ ಬಯಸಿದಾಗಲೂ ಅವಳ ರಕ್ಷಣೆಗೆ ಬಂದು ಕೀಚಕ ಸಂಹಾರ ಮಾಡಿದವನು ಭೀಮ! ಹಿಮಾಲಯದ ತಪ್ಪಲಲ್ಲಿ ಮಾತ್ರ ಬೆಳೆಯುವ ಸೌಗಂಧಿಕಾ ಪುಷ್ಪವನ್ನು ಕೇಳಿದ ಕೂಡಲೇ ಅದು ಹಾರಿಬಂದ ದಿಕ್ಕಿಗೆ ಹುಡುಕುತ್ತಾ ಹೋಗಿ ಅವಳ ಬಯಕೆಯ ಹೂವನ್ನು ತಂದುಕೊಟ್ಟ ಅವನೊಲವಿಗೆ ಬೆಲೆ ಕಟ್ಟಲಾದೀತೇ? ಒಂದು ಜೀವ ಎರಡು ಪ್ರಾಣದಂತಿದ್ದ ರಾಧೆ ಎಂದೆಂದಿಗೂ ಕೃಷ್ಣನ ನೆಚ್ಚಿನ ಪ್ರೇಯಸಿಯಾಗಿ ಅವನ ಮನದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿಕೊಂಡು
ಎಲ್ಲರಿಂದ ದೂರವಾಗಿ ಸದಾ ಕೃಷ್ಣನ ಒಲವಿನ ಧ್ಯಾನದಲ್ಲೇ ಉಳಿದು ಹೋದಳು.

ರುಕ್ಮಿಣೀ-ಸತ್ಯಭಾಮೆಯರೊಂದಿಗೆ ಹದಿನಾರು ಸಾವಿರ ಹೆಂಡತಿಯರ ಗಂಡನಾದ ಶ್ರೀಕೃಷ್ಣನು ದೇವಲೋಕದಿಂದ ರುಕ್ಮಿಣಿಗಾಗಿ ತಂದ ಪಾರಿಜಾತದ ಹೂವು ಸತ್ಯಭಾಮೆಯ ಮನದಲ್ಲಿ ಅದೆಂಥಾ ಕಿಚ್ಚನ್ನು ಹಚ್ಚಿತ್ತು? ಎಷ್ಟೇ ಆಗಲಿ, ಕೃಷ್ಣನೊಂದಿಗೆ ಸರಿಸಮನಾಗಿ ನಿಂತು ಯುದ್ಧದಲ್ಲಿ ನರಕಾಸುರನನ್ನು ಕೊಂದು ಕೃಷ್ಣನನ್ನು ಉಳಿಸಿಕೊಂಡವಳೆಂಬ ಗರ್ವಕ್ಕೇನು ಕೊರತೆಯೇ? ಅವಳ ಮನವೊಲಿಸಲು ಬಂದ ಜಗದೊಡೆಯನ ಕಿರೀಟವನ್ನೇ ಮುನಿಸಿನಿಂದ ಕಾಲಿನಿಂದ ಒದ್ದಾಗಲೂ ಸ್ವಲ್ಪ ಕೂಡ ಸಿಟ್ಟಾಗದೇ, ನಿನ್ನ ಮೃದುವಾದ ಪಾದಗಳಿಗೆ ನೋವಾಯಿತೇ ಎಂದು ಕೇಳಿದ ಸತ್ಯಾಪತಿಯ ಮಾತಿನಿಂದ ಕರಗಿ ನೀರಾಗಿ ಪಶ್ಚಾತ್ತಾಪಗೊಂಡ ಸತ್ಯಭಾಮೆಯ ಒಲವಿನಲಿ ತಪ್ಪು
ಹುಡುಕಲಾದೀತೇ? ಅಷ್ಟೆಲ್ಲ ಹೆಂಡತಿಯರಿದ್ದರೂ ಒಂದು ದಿನಕ್ಕೂ ಯಾರೊಂದಿಗೂ ಜಗಳವಾಡಿದ್ದು, ಕೋಪಗೊಂಡಿದ್ದು ಮಾತ್ರ ಎಲ್ಲೂ ಕಂಡಿಲ್ಲ.

ಅದಕ್ಕೇ ಇರಬೇಕು ಸದಾ ಸರ್ವಜನಪ್ರಿಯ, ಸರ್ವಲೋಕಪ್ರಿಯ ಶ್ರೀ ಕೃಷ್ಣ! ಒಲವೆಂಬ ಭಾವದಲ್ಲಿ ಅದೆಷ್ಟು ಜೀವಂತಿಕೆಯಿದೆ. ಬಂಧವನ್ನು ಗಟ್ಟಿಗೊಳಿಸುವ ಆಯಸ್ಕಾಂತೀಯ ಗುಣ ವಿದೆ. ಒಲಿದ ಜೀವ ಜೊತೆಯಲಿರಲು ಬಾಳು ಸದಾ ಸುಂದರ. ಒಲವೆ ಜೀವನ ಸಾಕ್ಷಾತ್ಕಾರ; ಒಲವೇ ಮರೆಯದ ಮಮಕಾರ!

ಒಂದೇ ವರ್ಷದಲ್ಲಿ ಹಾಯ್ ಕಚೇರಿ ಎರಡು ಕೋಣೆಯ ಬಾಡಿಗೆ ಕಟ್ಟಡದಿಂದ ವಿಶಾಲವಾದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಎಲ್ಲರ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ. ಪಟ್ಟ ಶ್ರಮವೆಲ್ಲ ಸಾರ್ಥಕಗೊಂಡಂಥ ಕ್ಷಣಗಳು. ಪುಸ್ತಕಗಳು ಮರುಮುದ್ರಣಗೊಳ್ಳುತ್ತಿದ್ದವು.
ಅದರೊಡನೆ ಪಾ.ವೆಂ. ಹೇಳಿದ ಕತೆ ಎಂಬ ಕಥಾ ಸಂಕಲನ ಪುಸ್ತಕವೂ ಮರುಮುದ್ರಣಗೊಂಡು ಬಂದಿತ್ತು.

ಅವರದೇ ಮುತ್ತಿನಂಥ ಅಕ್ಷರಗಳಲ್ಲಿ ಮೊದಲ ಆಟೋಗ್ರಾ- ಹಾಕಿ ಕೈಗಿತ್ತಿದ್ದರು. ಮನೆಗೆ ಬಂದು ಪುಸ್ತಕ ತೆರೆದವಳಿಗೆ ಕಂಡದ್ದು ಒಲವೆ ಜೀವನ ಸಾಕ್ಷಾತ್ಕಾರ ಎಂಬ ಸಾಲುಗಳು. ಇಂದಿಗೂ ನೆನಪಾಗಿ ನನ್ನೊಂದಿಗೇ ಉಳಿದುಕೊಂಡಿದೆ. ಇವತ್ತಿಗೂ ಆ ಹಾಡು ಕೇಳುವಾಗೆಲ್ಲ
ಆ ದಿನಗಳ ನೆನಪುಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ನಂತರ ಸಾಕಷ್ಟು ಪುಸ್ತಕಗಳು ಪ್ರಕಟವಾದವು. ಪ್ರತಿಯೊಂದು ಪುಸ್ತಕ ಪ್ರಿಂಟಾಗಿ ಬಂದಾಗಲೂ ಅದರ ಮೊದಲ ಪ್ರತಿಯಲ್ಲಿ ಅದೇ ಮುತ್ತಿನಂಥ ಅಕ್ಷರಗಳ ಆಟೋಗ್ರಾಫ್ ನೊಂದಿಗೆ ನನ್ನ ಕೈ ಸೇರುತ್ತಿತ್ತು. ಆದರೆ ದಿನಾಂಕ ಹಾಕುತ್ತಿರಲಿಲ್ಲ. ನಾನು ನೆನಪು ಮಾಡಿ ಮರೆಯದೆ ದಿನಾಂಕನ್ನು ಹಾಕಿಸಿಕೊಳ್ಳುತ್ತಿದ್ದೆ.

ಎಷ್ಟೇ ಆಗಲಿ ಅಕೌಂಟ್ಸ್ ಓದಿದೀಯಲ್ಲ ಅದಕ್ಕೇ ಅಂಕಿಗಳ ಮೇಲೆ ಅಷ್ಟು ವ್ಯಾಮೋಹ ನಿನಗೆ ಎಂದು ನಗುತ್ತಾ ದಿನಾಂಕವನ್ನು
ನಮೂದಿಸಿ ಹೊಚ್ಚ ಹೊಸ ಪುಸ್ತಕ ಕೈಗಿಡುತ್ತಿದ್ದರು. ನಂತರ ಅವರು ವಿದೇಶಗಳಿಂದ ಹಿಂತಿರುಗಿದಾಗಲೆಲ್ಲ ಅಲ್ಲಿಯ ಕರೆನ್ಸಿಯೊಂದನ್ನು ನೆನಪಿಗಾಗಿ ಕೊಡುತ್ತಿದ್ದರು. ಅದರ ಮೇಲೂ ಅದೇ ಮುತ್ತಿನಂಥ ಹಸ್ತಾಕ್ಷರ! ಅದೆಲ್ಲದರ ಹಿಂದಿದ್ದ ಒಲವಿಗೆ ಬೆಲೆ ಕಟ್ಟಲಾದೀತೆ? ಅದಕ್ಕಾಗಿಯೇ ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು ಬೆಲೆಯೆಷ್ಟು ಎಂದು ಕೇಳುವೆಯಾ ಹುಚ್ಚಾ! ಎಂದು ಒಲವಿನ ಆಳ-ವಿಸ್ತಾರವನ್ನು ಅಳೆಯಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ ವರಕವಿ ದ.ರಾ.ಬೇಂದ್ರೆ.

ಏಳು ವರುಷ ಸತತವಾಗಿ ದೇವರ ಮುಂದಿನ ಭಕ್ತನಂತೆ ಆರಾಽಸುತ್ತ ಪ್ರೀತಿಸಿದ ಹುಡುಗಿ ಅವರ ಬಳಿ ದುಡ್ಡಿಲ್ಲವೆಂಬ ಒಂದೇ ಕಾರಣಕ್ಕೆ ತೊರೆದು ಹೋದದ್ದರಿಂದಾಗಿ ಅನುಭವಿಸಿದ ನೋವು, ಯಾತನೆ, ಸಂಕಟಗಳೆಲ್ಲವನ್ನೂ ಅವರು ಒಂದೊಂದಾಗಿ ಯಶಸ್ಸಿನ ಮೆಟ್ಟಿಲು ಹತ್ತುತ್ತ ಆ ನೋವನ್ನು ಮರೆಯಲೆತ್ನಿಸುತ್ತಿದ್ದರು. ಆ ಪ್ರೇಮದ ಸವಿನೆನಪಾಗಿ ತಮ್ಮ ಕೈಮೇಲೆ ಹಾಕಿಸಿಕೊಂಡಿದ್ದ ಹಸಿರು ನೆರಿಗೆ ಲಂಗದ ಹುಡುಗಿಯ ಹೆಸರಿನ ಹಚ್ಚೆ ಶಾಶ್ವತವಾಗಿ ಅವರೊಂದಿಗೇ ಉಳಿದುಹೋಗಿತ್ತು.

ಇಷ್ಟಾಗಿಯೂ ಇಂದಿಗೂ ಒಲವೆಂಬುದೊಂದು ಸದಾ ವಿಸ್ಮಯವೇ! ಮೊದಲ ನೋಟದಲ್ಲೇ ಇಷ್ಟವಾಗುವ  love at first sight, ಕಾಡುವ crush, ಎಳವೆಯಲ್ಲೇ ಚಿಗಿತು ನಿಲ್ಲುವ calf love, ಮೋಹ ತುಂಬಿದ infatuation love ಗಳೆಲ್ಲ ಕ್ಷಣಿಕವಾದಂಥವುಗಳು. ಪ್ರೀತ್ಸೆ ಪ್ರೀತ್ಸೆ… ಅಂತ ಹಿಂದೆ ಬಿದ್ದು ಕಾಡದೆ ಒಲಿಸಿಕೊಳ್ಳುವ ಸಹನೆಯಿದ್ದರೆ ಎಂಥ ಕಲ್ಲುಮನಸುಗಳೂ ಕರಗದೆ ಶರಣಾಗದಿರದು. ಒಮ್ಮೆ ಕಮಲಹಾಸನ್‌ರನ್ನು ಸಂದರ್ಶಿಸುತ್ತಿದ್ದ ಸಿಮಿ ಗರೇವಾಲ್ ಪ್ರಶ್ನಿಸಿದ್ದರು: ಅರಂಭದಲ್ಲಿರುವ ಆ ಉತ್ಕಟ ಪ್ರೀತಿ ನಂತರ ಎಲ್ಲಿ
ಮರೆಯಾಗಿ ಹೋಗುತ್ತದೆ ಎಂದು? Don’t fall in love. Always rise in love ಎನ್ನುತ್ತಾರೆ ಆಚಾರ್ಯ ರಜನೀಶರು.

ಪ್ರೀತಿ ಮಾಡುವುದು ಸುಲಭ. ಆದರೆ ಅದನ್ನು ಜತನದಿಂದ ಉಳಿಸಿ ಬೆಳೆಸುವುದಕ್ಕೆ ಸಾಕಷ್ಟು ಸಹನೆ ಬೇಕು. ಇಬ್ಬರ ನಡುವೆಯೂ ಅಗಾಧವಾದ ನಂಬಿಕೆ ಇರಬೇಕು. ಅನುಮಾನಗಳಿಗೆ ಆಸ್ಪದ ಕೊಡದಂತೆ ಕಾಯುವ ಹೊಣೆ ಇಬ್ಬರದೂ ಆಗಿರಬೇಕು. ಅರಿಯದೇ ಆಗುವ ಸಣ್ಣಪುಟ್ಟ ತಪ್ಪುಗಳನ್ನು ಕ್ಷಮಿಸುವ ಗುಣವನ್ನು ರೂಢಿಸಿಕೊಳ್ಳಬೇಕು. ನನ್ನ ಮಾತೇ ನಡೆಯಬೇಕೆಂಬ ಹಟಕ್ಕೆ ಬೀಳದೆ ಪರಸ್ಪರರ
ಮಾತಿಗೆ ಮನ್ನಣೆ ನೀಡಬೇಕು. ಅನಗತ್ಯವಾದ ವಾದ-ವಿವಾದಗಳಿಗೆ ತಡೆ ಹಾಕಿ ವಿಚಾರಗಳನ್ನು ಚರ್ಚಿಸುವ ಹಾಗೂ ಪರಸ್ಪರರ ವಿಚಾರ ಧೋರಣೆಗಳನ್ನು ಗೌರವಿಸುವ ಮನೋಭಾವ ಹೊಂದಿರಬೇಕು.

ಪ್ರೀತಿಯೊಂದು ಬೆಳಕಿನಂತೆ ಅದನ್ನು ಆರದಂತೆ ಅನ್ಯೋನ್ಯತೆಯಿಂದ ರಕ್ಷಿಸಿಕೊಂಡರೆ ಮನೆಯ ಮನದ ಕತ್ತಲೆಯನ್ನು ದೂರವಾಗಿಸಿ ಕೊಳ್ಳಬಹುದು. ಸ್ವಲ್ಪ ಎಚ್ಚರ ತಪ್ಪಿದರೂ ಅದು ಬೆಂಕಿಯ ಜ್ವಾಲೆಗಳಾಗಿ ಬದುಕನ್ನೇ ಸುಟ್ಟು ಹಾಕಲೂ ಬಹುದು. ಹೀಗಾಗಿ ಪ್ರೀತಿಯಲ್ಲಿ
ಮೈಮರೆಯದಂತೆ ಎಚ್ಚರವಿರಲಿ. ಆದರೆ ಪ್ರೀತಿಯೆಂಬ ಮಾಯೆ ಎಲ್ಲರಿಗೂ ಒಲಿಯುವುದಿಲ್ಲ. ಪ್ರೀತಿಯನ್ನು ಪಡೆದವರಿಗಿಂತಲೂ ಅದನ್ನು ಕಳೆದುಕೊಂಡವರಿಗೇ ಅದರ ನಿಜವಾದ ಬೆಲೆಯೇನೆಂಬುದರ ಅರಿವಿರುತ್ತದೆ. ಎಲ್ಲವನ್ನೂ ಬೊಗಸೆತುಂಬ ಕೊಟ್ಟರೂ ಕಾರಣ ಹೇಳದೇ ಕೈಜಾರಿ ಹೋಗುತ್ತದೆ. ಬಿಟ್ಟು ಹೋದವರಿಗಿಂತ ಉಳಿದುಹೋದವರಿಗೇ ಅದನ್ನು ಸಹಿಸುವುದು, ಅನುಭವಿಸುವುದು ಅಸಾಧ್ಯ ನೋವನ್ನು ತರುತ್ತದೆ.

ಎಲ್ಲರೆದುರು ಅವಮಾನಿತರಾಗಿ ತಲೆ ತಗ್ಗಿಸುವಂತಾಗುತ್ತದೆ. ಅತಿಯಾದ ನೋವನ್ನು ಮರೆಯಲು ಮತ್ತದೇ ಪ್ರೀತಿಯ ಬಲೆಗೆ ಬೀಳುತ್ತಾರಾದರೂ ತಮ್ಮ ಮೊದಲ ಪ್ರೀತಿಯನ್ನು ಮರೆಯಲಾಗದೆ ಎಲ್ಲರಲ್ಲಿ ಅದನ್ನು ಹುಡುಕುತ್ತಾ ಮತ್ತೆ ಮತ್ತೆ ಕಳೆದುಕೊಳ್ಳುತ್ತಾ
ಸೋಲುತ್ತಾರೆ. ದುಶ್ಚಟಗಳ ದಾಸರಾಗುತ್ತಾರೆ. ಅಸಹನೆಯಿಂದ, ಆಕ್ರೋಶದಿಂದ ಸಿಡಿಯುತ್ತಾರೆ. ನನಗೆ ಸಿಗದವಳು ಮತ್ಯಾರಿಗೂ ಸಿಗಬಾರದೆಂಬ ನಿರ್ಧಾರಕ್ಕೆ ಬಂದು ಅವಳ ಜೀವನವನ್ನೇ ಕೊನೆಗಾಣಿಸುವವರೆಗೂ ಯೋಚಿಸಿಬಿಡುತ್ತಾರೆ. ಆದರೆ ಇವೆಲ್ಲ ಆಲೋಚನೆ ಗಳು ಅವರನ್ನು ಅಧಃಪತನಕ್ಕೆ ಒಯ್ಯುತ್ತಿರುವ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ.

ಹೀಗಾಗಿ ತಾವೂ ನೆಮ್ಮದಿಯನ್ನು ಕಳೆದುಕೊಂಡು ಜೊತೆಗಿರುವವರ ನೆಮ್ಮದಿಯನ್ನೂ ನಾಶಮಾಡಿ ಬಿಡುತ್ತಾರೆ. ಬದಲಿಗೆ ಬಿಟ್ಟು ಹೋದವರ ಬಗ್ಗೆ ಚಿಂತಿಸುತ್ತಾ ಕೂತು ತಮ್ಮನ್ನು ನಾಶಗೊಳಿಸಿಕೊಳ್ಳುವುದನ್ನು ಬಿಟ್ಟು ಜೀವನ್ಮುಖಿಯಾಗಬೇಕು. ಎಂಥಾ ಅದ್ಭುತವಾದ ಸಾಂಗತ್ಯವನ್ನು ಕಳೆದುಕೊಂಡೆ ಎಂದು ದೂರಾದವರು ಪಶ್ಚತ್ತಾಪ ಪಡುವಂತೆ ನಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಬೇಕು. ಎಲ್ಲರೂ ಬಯಸುವ, ಕನಸುವ ವ್ಯಕ್ತಿಯಾಗಿ ಬೆಳೆದು ತಮ್ಮ ಬದುಕನ್ನು ಇನ್ನಷ್ಟು ಚೆಂದವಾಗಿ ರೂಪಿಸಿಕೊಳ್ಳಬೇಕು. ಮನಸಿಗೆ ಉಲ್ಲಾಸ ಕೊಡುವ ಉತ್ತಮವಾದ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.

ಪ್ರತಿ ದಿನವನ್ನು ಗೆಲುವಿನೆಡೆಗೆ ಹಾಕುತ್ತಿರುವ ಒಂದೊಂದು ಹೆಜ್ಜೆಯೆಂದು ಭಾವಿಸುತ್ತಾ ನಡೆದಾಗ ಆ ಸೋಲಿಗೂ ನಮ್ಮನ್ನು ಸೋಲಿಸಲು ಸಾಧ್ಯವಾಗದೆ, ಹಿಂದೆ ಸರಿದು ಹೋಗುತ್ತದೆ. ಒಲವಿನ ಪೂಜೆಗೆ ಒಲವೇ ಮಂದಾರ ಎಂಬಂತೆ ನಿಜವಾದ ಪ್ರೀತಿಯಲ್ಲಿ ಅನಗತ್ಯವಾದ ಬೇಡಿಕೆಗಳಿರುವುದಿಲ್ಲ. ಪರಸ್ಪರರ ಏಳಿಗೆಯನ್ನು ಬಯಸುತ್ತಾ, ಅಗತ್ಯಗಳನ್ನು ಅರಿಯುತ್ತಾ ಪೂರಕವಾಗಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಾ ನಿಸ್ವಾರ್ಥದಿಂದ ಒಲವಿಗೆ ಒಲವು ಜೊತೆಯಾಗುತ್ತಾ ಐಕ್ಯಗೊಂಡಾಗ ಬದುಕೇ ಸುಂದರ ಕವಿತೆಯಂತೆ ಭಾಸವಾಗುವುದು. ಅಂಥ ಪ್ರೀತಿ ನಿಮ್ಮೆಲ್ಲರದಾಗಿರಲಿ.