Vishweshwar Bhat Column: ಆಮೆಗಳ ಹಿತರಕ್ಷಣೆ ಯೋಚಿಸಿ, ಅಭಿವೃದ್ಧಿ ಯೋಜನೆ ಕೈಬಿಟ್ಟ ಒಮಾನ್ !
ಒಮಾನ್ ದೇಶವು ಒಂದು ದಿಟ್ಟ ನಿರ್ಧಾರವನ್ನು ಕೈಗೊಂಡಿದೆ- ‘ನಾವು ಪ್ರಕೃತಿಯನ್ನು ತಿದ್ದಲು ಹೋಗುವುದಿಲ್ಲ, ಪ್ರಕೃತಿ ಹೇಗಿದೆಯೋ ಹಾಗೆಯೇ ಅದನ್ನು ಪ್ರೀತಿಸುತ್ತೇವೆ’. ಒಮಾನ್‌ನ ಪರಿಸರ ಪ್ರೇಮಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ‘ರಾಸ್ ಅಲ್ ಜಿನ್ಜ್’ ಆಮೆ ಸಂರಕ್ಷಣೆ ಕೇಂದ್ರ. ಇದು ಅರೇಬಿಯನ್ ಸಮುದ್ರದ ತೀರದಲ್ಲಿರುವ ಒಂದು ಸುಂದರವಾದ ಬೀಚ್.
-
ಇದೇ ಅಂತರಂಗ ಸುದ್ದಿ
ನಾವು ಮಧ್ಯಪ್ರಾಚ್ಯ ಅಥವಾ ಅರಬ್ ರಾಷ್ಟ್ರಗಳ ಬಗ್ಗೆ ಯೋಚಿಸಿದ ತಕ್ಷಣ, ನಮ್ಮ ಕಣ್ಣ ಮುಂದೆ ಬರುವುದು ಗಗನಚುಂಬಿ ಕಟ್ಟಡಗಳು, ಕಣ್ಣು ಕೋರೈಸುವ ಕೃತಕ ದ್ವೀಪಗಳು ಮತ್ತು ಮನುಷ್ಯ ನಿರ್ಮಿಸಿದ ಅದ್ಭುತಗಳು. ದುಬೈನಲ್ಲಿ ಸಮುದ್ರದ ಒಡಲಿಗೆ ಟನ್‌ಗಟ್ಟಲೆ ಮಣ್ಣು ಮತ್ತು ಬಂಡೆ ಗಳನ್ನು ಸುರಿದು, ಪ್ರಕೃತಿಯ ನಿಯಮವನ್ನೇ ಮೀರಿ ‘ಪಾಮ್ ಜುಮೇರಾ’ದಂಥ ಕೃತಕ ದ್ವೀಪ ಗಳನ್ನು ಸೃಷ್ಟಿಸಿರುವುದನ್ನು ಜಗತ್ತು ಬೆರಗುಗಣ್ಣಿನಿಂದ ನೋಡುತ್ತಿದೆ.
ಅಭಿವೃದ್ಧಿಯ ಅಂಥ ಮಾದರಿಯನ್ನು ‘ಯಶಸ್ಸು’ ಎಂದು ಕರೆಯಲಾಗುತ್ತಿದೆ. ಸಮುದ್ರವನ್ನು ಹುಗಿದು ಐಷಾರಾಮಿ ಬಡಾವಣೆಯನ್ನೇ ನಿರ್ಮಿಸಲಾಗಿದೆ. ಆದರೆ, ಇವೆಲ್ಲದರ ನಡುವೆ, ಒಮಾನ್ ಮಾತ್ರ ಅತ್ಯಂತ ಭಿನ್ನವಾಗಿ, ಮೌನವಾಗಿ ಮತ್ತು ಘನತೆಯಿಂದ ಎದ್ದು ನಿಲ್ಲುತ್ತದೆ.
ಒಮಾನ್ ದೇಶವು ಒಂದು ದಿಟ್ಟ ನಿರ್ಧಾರವನ್ನು ಕೈಗೊಂಡಿದೆ- ‘ನಾವು ಪ್ರಕೃತಿಯನ್ನು ತಿದ್ದಲು ಹೋಗುವುದಿಲ್ಲ, ಪ್ರಕೃತಿ ಹೇಗಿದೆಯೋ ಹಾಗೆಯೇ ಅದನ್ನು ಪ್ರೀತಿಸುತ್ತೇವೆ’. ಒಮಾನ್‌ನ ಪರಿಸರ ಪ್ರೇಮಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ‘ರಾಸ್ ಅಲ್ ಜಿನ್ಜ್’ ಆಮೆ ಸಂರಕ್ಷಣೆ ಕೇಂದ್ರ. ಇದು ಅರೇಬಿಯನ್ ಸಮುದ್ರದ ತೀರದಲ್ಲಿರುವ ಒಂದು ಸುಂದರವಾದ ಬೀಚ್.
ಪ್ರತಿ ವರ್ಷ ಸಾವಿರಾರು ಮೈಲಿ ದೂರದಿಂದ ‘ಆಮೆಗಳು’ ಬಂದು ಮೊಟ್ಟೆ ಇಡುವುದು ಇಲ್ಲ. ಜಗತ್ತಿನ ಬೇರೆ ಯಾವುದೇ ದೇಶವಾಗಿದ್ದರೆ, ಇಂಥ ಸುಂದರವಾದ ಬೀಚ್‌ನಲ್ಲಿ ಬೃಹತ್ ಪಂಚತಾರಾ ಹೋಟೆಲ್‌ಗಳನ್ನು ಕಟ್ಟಿ, ರೆಸಾರ್ಟ್‌ಗಳನ್ನು ನಿರ್ಮಿಸಿ, ಪ್ರವಾಸಿಗರಿಂದ ಕೋಟಿಗಟ್ಟಲೆ ಹಣವನ್ನು ಬಾಚಿಕೊಳ್ಳುತ್ತಿತ್ತು. ಸಮುದ್ರ ತೀರದಲ್ಲಿ ಮೋಜು ಮಸ್ತಿ, ರಾತ್ರಿಯಿಡೀ ಬೆಳಗುವ ನಿಯಾನ್ ಲೈಟ್‌ಗಳು ಇರುತ್ತಿದ್ದವು. ಆದರೆ, ಒಮಾನ್ ಸರಕಾರ ಇಲ್ಲಿ ಅಭಿವೃದ್ಧಿಗೆ ಕಟ್ಟುನಿಟ್ಟಾದ ‘ನೋ’ ಹೇಳಿದೆ.
ಇದನ್ನೂ ಓದಿ: Vishweshwar Bhat Column: ವಿಮಾನದ ಚಲನೆಯ ಆಯಾಮ
ಯಾಕೆಂದರೆ, ರಾತ್ರಿ ಹೊತ್ತು ಕೃತಕ ದೀಪಗಳಿದ್ದರೆ ಆಮೆಗಳಿಗೆ ದಿಕ್ಕು ತಪ್ಪುತ್ತದೆ. ಮೊಟ್ಟೆಯಿಂದ ಹೊರಬರುವ ಆಮೆಯ ಪುಟ್ಟ ಮರಿಗಳು ಸಮುದ್ರದ ಕಡೆಗೆ ಹೋಗುವ ಬದಲು, ದೀಪದ ಬೆಳಕಿನ ಕಡೆಗೆ ಬಂದು ಸಾವನ್ನಪ್ಪುತ್ತವೆ. ಈ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡ ಒಮಾನ್, ಅಲ್ಲಿ ದೊಡ್ಡ ಹೋಟೆಲ್‌ಗಳನ್ನು ನಿಷೇಧಿಸಿದೆ. ಅಲ್ಲಿಗೆ ಹೋಗುವ ಪ್ರವಾಸಿಗರು ಟಾರ್ಚ್ ಬಳಸು ವಂತಿಲ್ಲ, ಜೋರಾಗಿ ಮಾತನಾಡುವಂತಿಲ್ಲ, ಫ್ಲ್ಯಾಶ್ ಹಾಕಿ ಫೋಟೋ ತೆಗೆಯುವಂತಿಲ್ಲ.
‘ನಮಗೆ ಪ್ರವಾಸಿಗರ ಹಣಕ್ಕಿಂತ, ಆ ಮೂಕಪ್ರಾಣಿಗಳ ಜೀವ ಮುಖ್ಯ’ ಎಂದು ಸಾರುವ ಈ ನಿಲುವು, ಆಧುನಿಕ ಜಗತ್ತಿಗೆ ಒಂದು ದೊಡ್ಡ ಪಾಠ.ಒಮಾನ್‌ನ ಮತ್ತೊಂದು ನೈಸರ್ಗಿಕ ವಿಸ್ಮಯವೆಂದರೆ ‘ವಾಡಿ’ಗಳು. ಇವು ಒಣಗಿದ ಪರ್ವತಗಳ ನಡುವೆ ಇರುವ ನೈಸರ್ಗಿಕ ನೀರಿನ ಹೊಂಡಗಳು. ಉದಾಹರಣೆಗೆ ‘ವಾಡಿ ಶಬ್’ ಅಥವಾ ‘ವಾಡಿ ಬಾನಿ ಖಾಲಿದ್’.
ಸುಡು ಬಿಸಿಲಿನ ಮರುಭೂಮಿಯ ಪರ್ವತಗಳ ಮಧ್ಯೆ, ಎಲ್ಲಿಂದಲೋ ಬರುವ ಸಿಹಿನೀರು ಸಂಗ್ರಹ ವಾಗಿ, ಪಚ್ಚೆ ಹಸಿರು ಬಣ್ಣದ ಈಜುಕೊಳಗಳಾಗಿ ಮಾರ್ಪಟ್ಟಿವೆ. ಇಲ್ಲಿಯೂ ಒಮಾನ್ ಕೃತಕತೆ ಯನ್ನು ತಂದಿಲ್ಲ. ಈ ವಾಡಿಗಳಿಗೆ ಹೋಗಲು ಸುಸಜ್ಜಿತ ರಸ್ತೆಗಳಿಲ್ಲ, ಲಿಫ್ಟ್ ಗಳಿಲ್ಲ. ನೀವು ಕಲ್ಲು ಬಂಡೆಗಳ ಮೇಲೆ ಹತ್ತಿ, ಇಳಿದು, ನಿಸರ್ಗದ ಜತೆ ಸೆಣಸಾಡಿಯೇ ಅಲ್ಲಿಗೆ ತಲುಪಬೇಕು.
ಈಜಾಡಲು, ಕೃತಕ ಟೈಲ್ಸ್ ಹಾಕಿದ ಸ್ವಿಮ್ಮಿಂಗ್ ಪೂಲ್‌ಗಳ ಬದಲು, ಮೀನುಗಳು ಓಡಾಡುವ ನೈಸರ್ಗಿಕ ಹೊಂಡಗಳನ್ನೇ ಉಳಿಸಿಕೊಳ್ಳಲಾಗಿದೆ. ಪ್ರಕೃತಿಯ ಸ್ಪರ್ಶವನ್ನು ಹಾಗೆಯೇ ಉಳಿಸಿ ಕೊಂಡಿರುವುದರಿಂದಲೇ ಇಲ್ಲಿ ಸಿಗುವ ಅನುಭವ ದೈವಿಕ ಹಾಗೂ ಅನನ್ಯ.
ಮಸ್ಕತ್ ನಗರವನ್ನೊಮ್ಮೆ ಗಮನಿಸಿ. ಅಲ್ಲಿ ಎತ್ತರದ ಪರ್ವತಗಳಿವೆ. ಅಭಿವೃದ್ಧಿಯ ಹೆಸರಿನಲ್ಲಿ ಆ ಪರ್ವತಗಳನ್ನು ಸಿಡಿಸಿ, ನೆಲಸಮ ಮಾಡಿ, ಫ್ಲ್ಯಾಟ್ ಆಗಿ ಪರಿವರ್ತಿಸಿ ಟೌನ್‌ಶಿಪ್ಗಳನ್ನು ಕಟ್ಟಬಹು ದಿತ್ತು. ಆದರೆ ಒಮಾನ್ ಹಾಗೆ ಮಾಡಿಲ್ಲ. ಅವರು ಪರ್ವತಗಳಿಗೆ ಗೌರವ ಕೊಟ್ಟು, ಪರ್ವತಗಳ ಆಕಾರಕ್ಕೆ ತಕ್ಕಂತೆ ರಸ್ತೆಗಳನ್ನು ಮತ್ತು ಮನೆಗಳನ್ನು ನಿರ್ಮಿಸಿದ್ದಾರೆ.
ಬಿಳಿ ಬಣ್ಣದ ಮನೆಗಳು ಕಂದು ಬಣ್ಣದ ಪರ್ವತಗಳ ಮಡಿಲಲ್ಲಿ ಕುಳಿತಂತೆ ಕಾಣುತ್ತವೆಯೇ ಹೊರತು, ಪರ್ವತವನ್ನು ಆಕ್ರಮಿಸಿದಂತೆ ಕಾಣುವುದಿಲ್ಲ. ಉತ್ತರದ ‘ಮುಸಂದಮ’ ಪ್ರದೇಶದಲ್ಲಿ ಸಮುದ್ರವು ಪರ್ವತಗಳ ಒಳಗೆ ನುಗ್ಗಿ ಸೃಷ್ಟಿಸಿರುವ ಕೊಲ್ಲಿಗಳು (Fjords) ನಾರ್ವೆ ದೇಶವನ್ನು ನೆನಪಿಸುತ್ತವೆ. ಈ ಪ್ರದೇಶವು ಭೌಗೋಳಿಕ ವಿಸ್ಮಯವಾಗಿದೆ.
ಸುಣ್ಣದ ಕಲ್ಲಿನ ಎತ್ತರದ ಪರ್ವತಗಳು ನೇರವಾಗಿ ಸಮುದ್ರಕ್ಕೆ ಇಳಿಯುವ ದೃಶ್ಯ ರೋಮಾಂಚಕ. ಇಲ್ಲಿ ಡಾಲಿನ್‌ಗಳು ರಾಜಾರೋಷವಾಗಿ ಅಡ್ಡಾಡುತ್ತವೆ. ಸಮುದ್ರದ ನೀರನ್ನು ಕಲುಷಿತ ಗೊಳಿಸ ದಂತೆ ಇಲ್ಲಿನ ಮೀನುಗಾರರಿಗೆ ಮತ್ತು ಬೋಟ್ ಮಾಲೀಕರಿಗೆ ಕಠಿಣ ನಿಯಮಗಳಿವೆ. ಪ್ಲಾಸ್ಟಿಕ್-ಮುಕ್ತ ವಲಯವನ್ನಾಗಿ ಇದನ್ನು ಕಾಪಾಡಿಕೊಂಡು ಬರಲಾಗುತ್ತಿದೆ.
ಸಮುದ್ರ ಜೀವಿಗಳಿಗೆ ತೊಂದರೆಯಾಗದಂತೆ, ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳುವುದು ಇಲ್ಲಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ‘ಪ್ಲಾಸ್ಟಿಕ್ ಮುಕ್ತ’ ಪರಿಸರವೇ ಇಲ್ಲಿನ ಡಾಲಿನ್ ಮತ್ತು ಇತರೆ ಜಲಚರಗಳ ಸ್ವಚ್ಛಂದ ಜೀವನಕ್ಕೆ ಕಾರಣವಾಗಿದೆ.
ಒಮಾನ್‌ನಲ್ಲಿ ನೀವು ಗಮನಿಸಬಹುದಾದ ಇನ್ನೊಂದು ಸಂಗತಿ ಎಂದರೆ ಅಲ್ಲಿನ ಮೌನ. ದುಬೈ ನಗರಗಳಲ್ಲಿ ಯಂತ್ರಗಳ, ವಾಹನಗಳ ಸದ್ದು ಅಬ್ಬರಿಸುತ್ತಿದ್ದರೆ, ಒಮಾನ್‌ನ ಮರುಭೂಮಿಗಳಲ್ಲಿ ಮತ್ತು ಬೀಚ್‌ಗಳಲ್ಲಿ ನೀರವ ಮೌನವಿದೆ. ‘ವಾಹಿಬಾ ಸ್ಯಾಂq’ ಮರುಭೂಮಿಯಲ್ಲಿ ರಾತ್ರಿ ಮಲಗಿ ದರೆ, ಹುಲ್ಲುಕಡ್ಡಿ ಅಲುಗಾಡಿದ್ದರ ಸದ್ದು ಕೇಳಿಸುವಷ್ಟು ಶಾಂತಿ ಇರುತ್ತದೆ. ಈ ಶಾಂತಿಯೇ ಒಮಾನ್‌ನ ಆಸ್ತಿ. ಮೈಲುಗಟ್ಟಲೆ ಹಬ್ಬಿರುವ ಬಂಗಾರದ ಬಣ್ಣದ ಮರಳು ದಿಬ್ಬಗಳು ಹಗಲಿನಲ್ಲಿ ಎಷ್ಟು ಸುಂದರವೋ, ರಾತ್ರಿ ಅಷ್ಟೇ ನಿಗೂಢ ಮತ್ತು ಶಾಂತ.
ಒಮಾನ್ ಜಗತ್ತಿಗೆ ಕಲಿಸುತ್ತಿರುವ ಪಾಠವಿಷ್ಟೇ. ಹಣ ಸಂಪಾದಿಸಲು ಅಡ್ಡದಾರಿಗಳಿವೆ, ಪ್ರಕೃತಿ ಯನ್ನು ದೋಚಬಹುದು, ಕೃತಕ ದ್ವೀಪಗಳನ್ನು ಕಟ್ಟಬಹುದು. ಆದರೆ, ಒಮ್ಮೆ ಕಳೆದುಕೊಂಡ ನಿಸರ್ಗವನ್ನು ಮತ್ತೆ ಸೃಷ್ಟಿಸಲು ಯಾರಿಂದಲೂ ಸಾಧ್ಯವಿಲ್ಲ.
ಆಮೆಗಳು ಬಂದು ಮೊಟ್ಟೆ ಇಡುವ ಆ ದೃಶ್ಯ, ವಾಡಿಗಳ ತಣ್ಣನೆಯ ನೀರು ಮತ್ತು ಮಲಿನವಾಗದ ಗಾಳಿ- ಇವುಗಳಿಗೆ ಯಾವ ಕ್ರೆಡಿಟ್ ಕಾರ್ಡ್‌ನಿಂದಲೂ ಬೆಲೆ ಕಟ್ಟಲಾಗದು. ಅಭಿವೃದ್ಧಿ ಎಂದರೆ ಕಾಂಕ್ರೀಟ್ ಕಾಡು ನಿರ್ಮಿಸುವುದಲ್ಲ, ಪ್ರಕೃತಿಯ ಮಡಿಲಲ್ಲಿ ಮಗುವಿನಂತೆ ಬದುಕುವುದು ಎಂಬು ದನ್ನು ಒಮಾನ್ ತೋರಿಸಿ ಕೊಟ್ಟಿದೆ. ಅಲ್ಲಿ ಪ್ರಕೃತಿಯೇ ನಿಜವಾದ ದೇವರು ಮತ್ತು ಆ ದೇವರನ್ನು ಅವರು ಅತ್ಯಂತ ಭಕ್ತಿಯಿಂದ ಕಾಪಾಡಿಕೊಳ್ಳುತ್ತಿದ್ದಾರೆ.
ಒಂಟೆಗಳಿವೆ ಎಚ್ಚರಿಕೆ!
ಅನುಮಾನವೇ ಇಲ್ಲ, ಒಮಾನ್ ದೇಶವು ತನ್ನ ಅತ್ಯುತ್ತಮ ರಸ್ತೆ, ಮೂಲಸೌಕರ್ಯಗಳಿಗೆ ಹೆಸರು ವಾಸಿಯಾಗಿದೆ. ಮಸ್ಕತ್ ನಂಥ ಸುಂದರ ನಗರಗಳಿಂದ ಹಿಡಿದು ಸಲಾಲಾದ ಹಸಿರು ಬೆಟ್ಟಗಳವರೆಗೆ ಅಥವಾ ವಿಸ್ತಾರವಾದ ಮರುಭೂಮಿಯ ನಡುವೆ ಹಾದು ಹೋಗುವ ಹೆzರಿಗಳಲ್ಲಿ ಡ್ರೈವ್ ಮಾಡುವುದು ಒಂದು ಆನಂದದಾಯಕ ಅನುಭವ. ಆದರೆ, ಈ ಸುಂದರ ಪ್ರಯಾಣದ ನಡುವೆ ಚಾಲಕರು ಕ್ಷಣಮಾತ್ರವೂ ಮೈಮರೆಯುವಂತಿಲ್ಲ. ಇಲ್ಲಿನ ರಸ್ತೆಗಳಲ್ಲಿ ಕಾದು ಕುಳಿತಿರುವ ಅತ್ಯಂತ ದೊಡ್ಡ ಅಪಾಯವೆಂದರೆ ಅದು ‘ಮರುಭೂಮಿಯ ಹಡಗು’ ಎಂದೇ ಕರೆಯಲ್ಪಡುವ ಒಂಟೆಗಳು!
ಬೇರೆ ದೇಶಗಳಲ್ಲಿ ನಾವು ನಾಯಿ, ಹಸು ಅಥವಾ ಜಿಂಕೆಗಳು ರಸ್ತೆಗೆ ಅಡ್ಡ ಬರುವುದನ್ನು ನೋಡಿರು ತ್ತೇವೆ. ಆದರೆ ಒಮಾನ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಒಂಟೆಗಳು ರಸ್ತೆಗೆ ಅಡ್ಡ ಬರುವುದು ಸಾಮಾನ್ಯ ಸಂಗತಿಯಾದರೂ, ಅದು ತಂದೊಡ್ಡುವ ಅಪಾಯ ಮಾತ್ರ ಊಹೆಗೂ ನಿಲುಕದ್ದು. ನಿಮ್ಮ ವಾಹನ ಒಂಟೆಗೆ ಡಿಕ್ಕಿ ಹೊಡೆದರೆ ಏನಾಗುತ್ತದೆ? ಒಂಟೆಗೆ ವಾಹನ ಡಿಕ್ಕಿ ಹೊಡೆಯುವುದು ಮತ್ತು ಬೇರೆ ಪ್ರಾಣಿಗಳಿಗೆ ಡಿಕ್ಕಿ ಹೊಡೆಯುವುದರ ನಡುವೆ ವ್ಯತ್ಯಾಸವಿದೆ.
ಹಸು ಅಥವಾ ಕತ್ತೆಗೆ ಕಾರು ಡಿಕ್ಕಿ ಹೊಡೆದಾಗ, ಸಾಮಾನ್ಯವಾಗಿ ಬಂಪರ್ ಅಥವಾ ಬಾನೆಟ್ ಭಾಗಕ್ಕೆ ಹಾನಿಯಾಗುತ್ತದೆ. ಪ್ರಾಣಿಯು ವಾಹನದ ಕೆಳಗೆ ಅಥವಾ ಬದಿಗೆ ಬೀಳುತ್ತದೆ. ಆದರೆ ಒಂಟೆ ಯ ವಿಚಾರದಲ್ಲಿ ಹಾಗಿಲ್ಲ. ಒಂಟೆಯು ಬಹಳ ಎತ್ತರದ ಪ್ರಾಣಿ. ಅದರ ದೇಹದ ಪ್ರಮುಖ ಭಾರ ವಿರುವುದು ಅದರ ಮೇಲ್ಭಾಗದಲ್ಲಿ (ಹೊಟ್ಟೆ ಮತ್ತು ಡುಬ್ಬ). ಅದರ ಕಾಲುಗಳು ಉದ್ದವಾಗಿರುತ್ತವೆ.
ಒಂದು ಸಾಮಾನ್ಯ ಕಾರು (ಸೆಡಾನ್) ಒಂಟೆಗೆ ಡಿಕ್ಕಿ ಹೊಡೆದಾಗ, ಕಾರಿನ ಬಂಪರ್ ಒಂಟೆಯ ತೆಳ್ಳಗಿನ ಕಾಲುಗಳಿಗೆ ತಾಗುತ್ತದೆ. ಆ ಕ್ಷಣದಲ್ಲಿ ಕಾಲುಗಳು ಮುರಿದುಹೋಗುತ್ತವೆ ಅಥವಾ ಮಡಚಿ ಕೊಳ್ಳುತ್ತವೆ. ನೂರಾರು ಕಿಲೋ ತೂಕದ ಒಂಟೆಯ ಬೃಹತ್ ದೇಹವು ನೇರವಾಗಿ ಕೆಳಗೆ ಬೀಳುತ್ತದೆ. ದುರದೃಷ್ಟವಶಾತ್, ಅದು ಬೀಳುವ ಜಾಗ ಕಾರಿನ ಬಾನೆಟ್ ಅಲ್ಲ, ಬದಲಾಗಿ ಕಾರಿನ ಮುಂಭಾಗದ ಗಾಜು ( Windshield ) ಮತ್ತು ಮೇಲ್ಚಾವಣಿ ( Roof).
ವೇಗವಾಗಿ ಚಲಿಸುತ್ತಿರುವ ಕಾರು ಒಂಟೆಯ ಕಾಲುಗಳಿಗೆ ತಾಗಿದ ರಭಸಕ್ಕೆ, ಒಂಟೆಯ ಇಡೀ ಶರೀರವು ಮುಂಭಾಗದ ಗಾಜನ್ನು ಪುಡಿಪುಡಿ ಮಾಡಿಕೊಂಡು ನೇರವಾಗಿ ಚಾಲಕ ಮತ್ತು ಮುಂದಿನ ಸೀಟಿನಲ್ಲಿ ಕುಳಿತವರ ಮೇಲೆ ಬಂದು ಅಪ್ಪಳಿಸುತ್ತದೆ. ಸುಮಾರು 500 ರಿಂದ 800 ಕಿಲೋ ತೂಕದ ಪ್ರಾಣಿಯೊಂದು ಗಂಟೆಗೆ ೧೦೦ ಕಿಮೀ ವೇಗದಲ್ಲಿ ಚಾಲಕನ ಮುಖಕ್ಕೆ ಅಥವಾ ಎದೆಗೆ ಅಪ್ಪಳಿಸಿದರೆ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ.
ಅನೇಕ ಪ್ರಕರಣಗಳಲ್ಲಿ ಕಾರಿನ ಮೇಲ್ಭಾಗವೇ ಸಂಪೂರ್ಣವಾಗಿ ಕಿತ್ತು ಹೋಗುತ್ತದೆ. ಇದೇ ಕಾರಣಕ್ಕೆ ಒಮಾನಿನಲ್ಲಿ ಒಂಟೆಗಳ ಅಪಘಾತಗಳನ್ನು ‘ಮಾರಣಾಂತಿಕ’ ಎಂದು ಪರಿಗಣಿಸಲಾಗುತ್ತದೆ.
ಒಂಟೆಗಳು ಬಹಳ ಶಾಂತ ಸ್ವಭಾವದ ಪ್ರಾಣಿಗಳು, ಆದರೆ ರಸ್ತೆಯ ವಿಚಾರದಲ್ಲಿ ಅವು ಅನಿರೀಕ್ಷಿತ ವಾಗಿ ವರ್ತಿಸುತ್ತವೆ. ಒಮಾನಿನ ರಸ್ತೆಗಳು ಹೆಚ್ಚಾಗಿ ಮರುಭೂಮಿ ಅಥವಾ ಕಂದು ಬಣ್ಣದ ಬೆಟ್ಟ ಗಳ ನಡುವೆ ಸಾಗುತ್ತವೆ. ಒಂಟೆಯ ಬಣ್ಣವು ಮಣ್ಣಿನ ಬಣ್ಣದೊಂದಿಗೇ ಬೆರೆತು ಹೋಗುವು ದರಿಂದ, ಹಗಲಿನಲ್ಲಿಯೂ ದೂರದಿಂದ ಅವುಗಳನ್ನು ಗುರುತಿಸುವುದು ಕಷ್ಟ.
ಇನ್ನು ರಾತ್ರಿಯ ವೇಳೆ ರಸ್ತೆ ದೀಪಗಳಿಲ್ಲದ ಹೆzರಿಗಳಲ್ಲಿ ಇವು ಕಣ್ಣಿಗೆ ಕಾಣುವುದೇ ಇಲ್ಲ. ಒಂಟೆಗಳು ರಸ್ತೆಯ ಬದಿಯಲ್ಲಿ ನಿಂತಿದ್ದು, ವಾಹನ ಹತ್ತಿರ ಬಂದಾಗ ಏಕಾಏಕಿ ರಸ್ತೆ ದಾಟಲು ಮುಂದಾ ಗಬಹುದು. ವಾಹನದ ಹಾರ್ನ್ ಶಬ್ದಕ್ಕೆ ಬೆದರಿ ರಸ್ತೆಯ ಮಧ್ಯೆಯೇ ನಿಂತುಬಿಡುವ ಸಾಧ್ಯತೆಯೂ ಇರುತ್ತದೆ. ಒಂದು ಒಂಟೆ ರಸ್ತೆ ದಾಟುತ್ತಿದೆ ಎಂದರೆ, ಅದರ ಹಿಂದೆ ಇನ್ನೂ ಹಲವು ಒಂಟೆಗಳು ಇರಬಹುದು.
ಒಮಾನ್‌ನಲ್ಲಿ ಒಂಟೆಗಳಿಗೆ ಸಾಂಸ್ಕೃತಿಕವಾಗಿ ಮತ್ತು ಆರ್ಥಿಕವಾಗಿ ಹೆಚ್ಚಿನ ಮಹತ್ವವಿದೆ. ಅಲ್ಲಿನ ಕಾನೂನುಗಳು ಒಂಟೆಗಳನ್ನು ರಕ್ಷಿಸುತ್ತವೆ. ಒಂದು ವೇಳೆ ನೀವು ಒಂಟೆಗೆ ಡಿಕ್ಕಿ ಹೊಡೆದರೆ, ಕೇವಲ ನಿಮ್ಮ ಪ್ರಾಣಕ್ಕೆ ಅಥವಾ ವಾಹನಕ್ಕೆ ಹಾನಿಯಾಗುವುದಲ್ಲದೇ, ಕಾನೂನು ಸಂಕಷ್ಟಗಳನ್ನೂ ಎದುರಿಸಬೇಕಾಗುತ್ತದೆ. ಅನೇಕ ಸಂದರ್ಭಗಳಲ್ಲಿ, ಅಪಘಾತಕ್ಕೆ ಚಾಲಕನ ಅತಿಯಾದ ವೇಗವೇ ಕಾರಣ ಎಂದು ಪರಿಗಣಿಸಲಾಗುತ್ತದೆ. ಒಂಟೆ ಸಾವನ್ನಪ್ಪಿದರೆ, ಚಾಲಕನು ಒಂಟೆಯ ಮಾಲೀಕರಿಗೆ ಪರಿಹಾರ ಧನವನ್ನು ನೀಡಬೇಕಾಗಬಹುದು.
ಉತ್ತಮ ತಳಿಯ ಒಂಟೆಗಳ ಬೆಲೆ ಲಕ್ಷಾಂತರ ರುಪಾಯಿಗಳಷ್ಟಿರುತ್ತದೆ. ನಿಮ್ಮ ವಾಹನದ ಇನ್ಶೂರೆನ್ಸ್ (ವಿಮೆ) ಕಂಪನಿಗಳು ಕೂಡ, ಒಂಟೆ ಅಪಘಾತದ ಸಂದರ್ಭದಲ್ಲಿ ನಿಯಮಗಳನ್ನು ಕಠಿಣವಾಗಿ ಪರಿಶೀಲಿಸುತ್ತವೆ. ಒಮಾನ್ ದೇಶವು ಪ್ರವಾಸಿಗರಿಗೆ ಸ್ವರ್ಗವಾಗಿದೆ. ಆದರೆ ಇಲ್ಲಿನ ರಸ್ತೆಗಳಲ್ಲಿನ ವಾಸ್ತವವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಒಂಟೆಗಳಿಗೆ ಡಿಕ್ಕಿ ಹೊಡೆದರೆ ಆಗುವ ಪರಿಣಾಮ ಕೇವಲ ವಾಹನದ ಹಾನಿಯಲ್ಲ, ಅದು ಚಾಲಕನ ಪ್ರಾಣವನ್ನೇ ತೆಗೆಯಬಲ್ಲದು.
ಒಂಟೆಯ ಬೃಹತ್ ದೇಹ ವಿಂಡ್‌ಶೀಲ್ಡ್ ಮೂಲಕ ಒಳನುಗ್ಗುವ ದೃಶ್ಯವನ್ನು ಊಹಿಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ಆದ್ದರಿಂದ, ‘ನಿಧಾನವೇ ಪ್ರಧಾನ’ ಎಂಬ ಮಾತನ್ನು ನೆನಪಿಡಬೇಕು.
ಇಂಗ್ಲಿಷಿನ ’ O ’ ಅಕ್ಷರದ ಏಕೈಕ ಒಡೆಯ!
ಜಗತ್ತಿನಲ್ಲಿ ಒಟ್ಟು 195ಕ್ಕೂ ಹೆಚ್ಚು ದೇಶಗಳಿವೆ. ಇಂಗ್ಲಿಷ್ ವರ್ಣಮಾಲೆಯ ’ಅ’ ಇಂದ ಹಿಡಿದು ’ Z ’ವರೆಗೆ ದೇಶಗಳ ಪಟ್ಟಿಯನ್ನು ನೋಡುತ್ತಾ ಹೋದರೆ, ಒಂದೊಂದು ಅಕ್ಷರಕ್ಕೂ ಹಲವು ದೇಶಗಳು ಸಿಗುತ್ತವೆ. ಉದಾಹರಣೆಗೆ ’ಅ’ ಅಕ್ಷರದಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಬಂದರೆ, ’ಐ’ ಅಕ್ಷರದಲ್ಲಿ ಐಸ್ಲ್ಯಾಂಡ್, ಇಂಡಿಯಾ, ಇಂಡೋನೇಷ್ಯಾ, ಇರಾನ್, ಇರಾಕ್ ಮುಂತಾದವು ಸಾಲು ಗಟ್ಟಿ ನಿಲ್ಲುತ್ತವೆ. ಆದರೆ, ನೀವು ’ O ’ (ಓ) ಅಕ್ಷರಕ್ಕೆ ಬಂದಾಗ ಆ ಪಟ್ಟಿ ಥಟ್ಟನೆ ನಿಂತು ಬಿಡುತ್ತದೆ.
ಅಲ್ಲಿರುವುದು ಕೇವಲ ಒಂದೇ ಒಂದು ಹೆಸರು- ಅದು ‘ Oman ’ (ಒಮಾನ್). ಇದು ಮೇಲ್ನೋಟಕ್ಕೆ ಒಂದು ಸಾಮಾನ್ಯ ಭೌಗೋಳಿಕ ಅಥವಾ ವ್ಯಾಕರಣದ ಸಂಗತಿಯಂತೆ ಕಂಡರೂ, ರಸಪ್ರಶ್ನೆ ಪ್ರಿಯರಿಗೆ ಮತ್ತು ಭೂಗೋಳ ಶಾಸ್ತ್ರಜ್ಞರಿಗೆ ಇದೊಂದು ಅತ್ಯಂತ ಕುತೂಹಲಕಾರಿ ವಿಷಯ. ಇಡೀ ಪ್ರಪಂಚದಲ್ಲಿ ಇಂಗ್ಲಿಷ್ ಭಾಷೆಯ ’ O ’ ಅಕ್ಷರದಿಂದ ಪ್ರಾರಂಭವಾಗುವ ಬೇರೆ ಯಾವುದೇ ಸಾರ್ವ ಭೌಮ ರಾಷ್ಟ್ರವಿಲ್ಲ. ಈ ಒಂದು ವಿಷಯ ಒಮಾನ್ ಅನ್ನು ವರ್ಣಮಾಲೆಯ ಪಟ್ಟಿಯಲ್ಲಿ ‘ಏಕಾಂಗಿ ರಾಜ’ನನ್ನಾಗಿ ಅಥವಾ ‘ಅಕ್ಷರಮಾಲೆಯ ಒಂಟಿ ಸಲಗ’ನನ್ನಾಗಿ ನಿಲ್ಲಿಸಿದೆ. ಯಾಕೆ ಹೀಗೆ? ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರವಿಲ್ಲದಿದ್ದರೂ, ಇದು ಆ ದೇಶದ ವಿಶಿಷ್ಟತೆಯನ್ನು ಪರೋಕ್ಷವಾಗಿ ಸಾರು ವಂತಿದೆ. ’ O ’ ಎಂಬ ಆಕಾರವು ಒಂದು ಪೂರ್ಣ ವೃತ್ತ.
ವೃತ್ತಕ್ಕೆ ಆರಂಭವೂ ಇಲ್ಲ, ಅಂತ್ಯವೂ ಇಲ್ಲ. ಅದು ಪರಿಪೂರ್ಣತೆಯ ಸಂಕೇತ. ಒಮಾನ್ ದೇಶದ ಸ್ವಭಾವವೂ ಹಾಗೆಯೇ ಇದೆ. ಮಧ್ಯಪ್ರಾಚ್ಯದ ಪ್ರಕ್ಷುಬ್ಧ ವಾತಾವರಣದ ನಡುವೆಯೂ, ಯಾರ ತಂಟೆಗೂ ಹೋಗದೇ, ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ, ಎಲ್ಲರೊಂದಿಗೂ ಬೆರೆತು ಬಾಳುವ ‘ಪರಿಪೂರ್ಣ’ ಶಾಂತಿಯನ್ನು ಈ ದೇಶ ಮೈಗೂಡಿಸಿಕೊಂಡಿದೆ.
ಬಹುಶಃ 'O' ಅಕ್ಷರದ ವೃತ್ತಾಕಾರವು ಒಮಾನ್‌ನ ಈ ಒಳಗೊಳ್ಳುವ ( Inclusive) ಗುಣವನ್ನು ಸಂಕೇತಿ ಸುತ್ತದೆಯೇನೋ! ನಾವು ಆನ್‌ಲೈನ್‌ನಲ್ಲಿ ಫಾರ್ಮ್ ತುಂಬುವಾಗ ’Country’ ಆಯ್ಕೆ ಮಾಡುವ ಡ್ರಾಪ್-ಡೌನ್ ಮೆನು ( Drop-down menu ) ಬರುತ್ತದೆ. ಅಲ್ಲಿ ಸ್ಕ್ರೋಲ್ ಮಾಡುತ್ತಾ ಹೋದರೆ, ’N’ ಅಕ್ಷರದ ದೇಶಗಳು (Norway, Nepal, Netherlands) ಮುಗಿಯುತ್ತಿದ್ದಂತೆ, ಒಂಟಿ ಯಾಗಿ ರಾರಾಜಿಸುವುದು ‘Oman’ ಮಾತ್ರ.
ನಂತರ ತಕ್ಷಣವೇ ’P’ ಅಕ್ಷರದ ( Pakistan, Peru ) ದೇಶಗಳು ಬರುತ್ತವೆ. ಹೀಗಾಗಿ ಅಂತರ್ಜಾಲದ ಪಟ್ಟಿಗಳಲ್ಲಿ ಒಮಾನ್ ಅನ್ನು ಹುಡುಕುವುದು ಅತ್ಯಂತ ಸುಲಭ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಈ ಹೆಸರಿನ ಮೂಲದ ಬಗ್ಗೆ ಹಲವು ರೋಚಕ ಕಥೆಗಳಿವೆ. ಕೆಲವರು ಇದು ಅರೇಬಿಕ್ ಪದ ‘ಆಮೆನ್’ನಿಂದ ಬಂದಿದೆ ಎಂದರೆ, ಇನ್ನು ಕೆಲವರು ಇದು ಬೈಬಲ್ ಕಾಲದ ವ್ಯಕ್ತಿಯೊಬ್ಬರ ಹೆಸರೆಂದು ಹೇಳುತ್ತಾರೆ.
ಏನೇ ಇರಲಿ, ಸಾವಿರಾರು ವರ್ಷಗಳಿಂದ ಈ ಹೆಸರು ಬದಲಾಗಿಲ್ಲ ಮತ್ತು ಅಂದಿನಿಂದಲೂ ಇದು ತನ್ನ ಅನನ್ಯತೆಯನ್ನು ಉಳಿಸಿಕೊಂಡು ಬಂದಿದೆ. ’ O ’ ಅಕ್ಷರವು ಒಮಾನ್ ಪಾಲಿಗೆ ಕೇವಲ ಹೆಸರಿನ ಮೊದಲ ಅಕ್ಷರವಲ್ಲ, ಅದೊಂದು ಕಿರೀಟವಿದ್ದಂತೆ. ಜಗತ್ತಿನ ನೂರಾರು ದೇಶಗಳ ನಡುವೆ, ಅಕ್ಷರದ ಮೂಲಕವೂ ತಾನು ಯಾರಿಗೂ ಸಾಟಿಯಿಲ್ಲ, ತಾನು ಏಕೈಕ ಎಂದು ಸಾರಿ ಹೇಳುವ ಹೆಗ್ಗಳಿಕೆ ಒಮಾನ್ ದೇಶದ್ದು. ರಸಪ್ರಶ್ನೆ ಸ್ಪರ್ಧೆಗಳಲ್ಲಿ ’ O ’ ಅಕ್ಷರದಿಂದ ಶುರುವಾಗುವ ದೇಶ ಯಾವುದು?’ ಎಂದು ಕೇಳಿದರೆ, ಕಣ್ಮುಚ್ಚಿಕೊಂಡು ಉತ್ತರಿಸಬಹುದಾದ, ಸ್ಪರ್ಧಿಗಳ ಪಾಲಿನ ವಿಶಿಷ್ಟ, ಅನನ್ಯ ದೇಶವಿದು!
ಜೀವನ ಗುಣಮಟ್ಟದಲ್ಲಿ 4ನೇ ಸ್ಥಾನ
೨೦೨೫ರ ಜೀವನ ಗುಣಮಟ್ಟದ ಸೂಚ್ಯಂಕದಲ್ಲಿ (Quality of Life Index) ಒಮಾನ್ ದೇಶವು ಅರಬ್ ಜಗತ್ತಿನಲ್ಲಿ ಮೊದಲ ಸ್ಥಾನ ಮತ್ತು ಜಾಗತಿಕವಾಗಿ ೪ನೇ ಸ್ಥಾನ ಪಡೆದಿರುವುದು ಗಮನಾರ್ಹ. ಸಾಮಾನ್ಯವಾಗಿ ಅರಬ್ ದೇಶಗಳೆಂದರೆ ಕಣ್ಣಿಗೆ ರಾಚುವುದು ಗಗನಚುಂಬಿ ಕಟ್ಟಡಗಳು, ಅತಿವೇಗದ ಜೀವನಶೈಲಿ ಮತ್ತು ಕೃತಕ ವೈಭೋಗ. ಆದರೆ, ಇವೆಲ್ಲವನ್ನೂ ಬದಿಗಿಟ್ಟು, ಶಾಂತಿ, ನೆಮ್ಮದಿ ಮತ್ತು ಅತ್ಯುತ್ತಮ ಜೀವನಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಒಮಾನ್, 2025ರಲ್ಲಿ ಜೀವನ ಗುಣಮಟ್ಟದ ಸೂಚ್ಯಂಕದಲ್ಲಿ ಅರಬ್ ರಾಷ್ಟ್ರಗಳ ಪೈಕಿ ಅಗ್ರಸ್ಥಾನದಲ್ಲಿದ್ದರೆ, ಇಡೀ ವಿಶ್ವದಲ್ಲಿಯೇ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.
ಒಮಾನ್ ಈ ಪಟ್ಟಿಯಲ್ಲಿ ಮೇಲೇರಲು ಅತ್ಯಂತ ಮುಖ್ಯ ಕಾರಣವೆಂದರೆ ಅಲ್ಲಿನ ಸುರಕ್ಷತೆ. ವಿಶ್ವದ ಅತ್ಯಂತ ಸುರಕ್ಷಿತ ದೇಶಗಳಲ್ಲಿ ಒಮಾನ್ ಕೂಡ ಒಂದು. ಇಲ್ಲಿ ಅಪರಾಧದ ಪ್ರಮಾಣ ತೀರಾ ಕಡಿಮೆ. ಮಹಿಳೆಯರು, ಮಕ್ಕಳು ಮತ್ತು ವಿದೇಶಿಯರು ಇಲ್ಲಿ ಯಾವುದೇ ಭಯವಿಲ್ಲದೇ ಓಡಾಡ ಬಹುದು. ರಾಜಕೀಯ ಸ್ಥಿರತೆ ಮತ್ತು ಭಯೋತ್ಪಾದನೆ ಮುಕ್ತ ವಾತಾವರಣವು ಇಲ್ಲಿನ ನಾಗರಿಕರ ನೆಮ್ಮದಿಯ ಬದುಕಿಗೆ ಬುನಾದಿಯಾಗಿದೆ.
ಒಮಾನ್‌ನಲ್ಲಿ ಜನರ ಆದಾಯ ಮತ್ತು ಜೀವನ ವೆಚ್ಚದ ನಡುವೆ ಉತ್ತಮ ಸಮತೋಲನವಿದೆ. ಇಲ್ಲಿನ ಕರೆನ್ಸಿಯಾದ ‘ಒಮಾನಿ ರಿಯಾಲ್’ ವಿಶ್ವದ ಬಲಿಷ್ಠ ಕರೆನ್ಸಿಗಳಲ್ಲಿ ಒಂದು. ಜನರ ಕೊಳ್ಳುವ ಶಕ್ತಿ ಹೆಚ್ಚಿದ್ದು, ಐಷಾರಾಮಿ ಜೀವನ ನಡೆಸಲು ಸಾಧ್ಯವಾಗುತ್ತಿದೆ. ಜತೆಗೆ, ಇಲ್ಲಿನ ತೆರಿಗೆ ವ್ಯವಸ್ಥೆಯು ಜನಸ್ನೇಹಿಯಾಗಿದ್ದು, ಗಳಿಸಿದ ಹಣವನ್ನು ಉಳಿತಾಯ ಮಾಡಲು ಅಥವಾ ಖರ್ಚು ಮಾಡಲು ಹೆಚ್ಚಿನ ಸ್ವಾತಂತ್ರ್ಯವಿದೆ.
ಒಮಾನ್ ಪರಿಸರಕ್ಕೆ ನೀಡುವ ಮಹತ್ವ ಅಪಾರ. ಪ್ಲಾಸ್ಟಿಕ್ ನಿಷೇಧ ಮತ್ತು ಕಠಿಣ ಸ್ವಚ್ಛತಾ ನಿಯಮಗಳು ಇಲ್ಲಿನ ಗಾಳಿ ಮತ್ತು ನೀರನ್ನು ಶುದ್ಧವಾಗಿಟ್ಟಿವೆ. ಮಾಲಿನ್ಯದ ಪ್ರಮಾಣ ತೀರಾ ಕಡಿಮೆ ಇರುವ ಕಾರಣ, ಇಲ್ಲಿನ ಜನರ ಆರೋಗ್ಯ ಸುಧಾರಿಸಿದೆ. ನಗರಗಳಲ್ಲಿ ವಾಹನಗಳ ದಟ್ಟಣೆ ಇದ್ದರೂ, ಅದನ್ನು ನಿರ್ವಹಿಸುವ ರೀತಿ ಮತ್ತು ಹಸಿರೀಕರಣಕ್ಕೆ ನೀಡುವ ಒತ್ತು, ಜೀವನದ ಗುಣಮಟ್ಟವನ್ನು ಹೆಚ್ಚಿಸಿದೆ. ಯಾವುದೇ ದೇಶದ ಜೀವನಮಟ್ಟವನ್ನು ಅಳೆಯಲು ಆರೋಗ್ಯ ಸೇವೆ ಪ್ರಮುಖ ಮಾನದಂಡ. ಒಮಾನ್ ತನ್ನ ನಾಗರಿಕರಿಗೆ ಮತ್ತು ವಲಸಿಗರಿಗೆ ಅತ್ಯುತ್ತಮ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದೆ.
ಒಮಾನ್ ಅರಬ್ ಜಗತ್ತಿನ ‘ಶಾಂತಿದೂತ’ ಎಂದೇ ಕರೆಯಿಸಿಕೊಂಡಿದೆ. ಇಲ್ಲಿನ ಜನರು ವಿದೇಶಿಯ ರೊಂದಿಗೆ ವರ್ತಿಸುವ ರೀತಿ, ಅವರ ಆತಿಥ್ಯ ಮತ್ತು ಪರಧರ್ಮ ಸಹಿಷ್ಣುತೆ ಜಗತ್ತಿಗೆ ಮಾದರಿ. ದುಬೈನಂಥ ನಗರಗಳ ಗದ್ದಲದ ಬದುಕಿಗಿಂತ, ಒಮಾನ್‌ನ ನಿಧಾನಗತಿಯ, ಆದರೆ ನೆಮ್ಮದಿಯ ಜೀವನಶೈಲಿಯನ್ನು ( Slow and peaceful life ) ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂಬುದಕ್ಕೆ ಈ ಶ್ರೇಯಾಂಕವೇ ಸಾಕ್ಷಿ.