ತನ್ನಿಮಿತ್ತ
ರಮೇಶ್ ಬಾಬು, ವಿಧಾನಪರಿಷತ್ ಮಾಜಿ ಸದಸ್ಯರು
ಅಪ್ರತಿಮ ಸಂಸದೀಯ ಪಟುವಾಗಿದ್ದ ಜೆ.ಎಚ್. ಪಟೇಲರು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅಷ್ಟೇ ಸ್ನೇಹ ಜೀವಿ. ಇಂದಿಗೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 25ನೇ ವರ್ಷ ಕಳೆದಿವೆ. 1996ರ ಮೇ.31ರಂದು ಈ ರಾಜ್ಯದ ಮುಖ್ಯಮಂತ್ರಿ ಯಾಗಿ ಜಯದೇವಪ್ಪ ಹಾಲಪ್ಪ ಪಟೇಲ (ಜೆ.ಎಚ್.ಪಟೇಲ್) ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1999ರಲ್ಲಿ ಕರ್ನಾಟಕ ವಿಧಾನಸಭೆ ವಿಸರ್ಜನೆ ಮಾಡುತ್ತಾರೆ. ಹೊಸ ಸರಕಾರ ಬಂದು ಕಾಂಗ್ರೆಸ್ ಪಕ್ಷದ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಜೆ.ಎಚ್. ಪಟೇಲರು ಪ್ರಮಾಣ ವಚನ ಸಮಾರಂಭಕ್ಕೆ ಬರುವ ಮೂಲಕ ತಮ್ಮ ಹೃದಯ ವೈಶಾಲ್ಯತೆ ಮೆರೆದರು. ತಮ್ಮ ಸೋಲಿನ ಕಿಂಚಿತ್ತೂ ಭಾವನೆ ಇಲ್ಲದೆ ಹೊಸ ಸರಕಾರಕ್ಕೆ ಶುಭ ಹರಸಿದರು. ಅದು ಪಟೇಲರ ವ್ಯಕ್ತಿತ್ವ. ಇತರ ಮುಖ್ಯಮಂತ್ರಿಗಳೂ ಇವರ ಹಾದಿಯಲ್ಲಿ ಸಾಗುವುದು ಇಂದಿನ ಅವಶ್ಯಕತೆ. ಆದ್ದರಿಂದ ತನ್ನಿಮಿತ್ತ ಈ ಲೇಖನ.
ಕರ್ನಾಟಕ ರಾಜ್ಯದ 15ನೇ ಮುಖ್ಯಮಂತ್ರಿಯಾಗಿ ಜಾತಿ – ಪಕ್ಷ ರಾಜಕಾರಣ ಮೀರಿ ಅಪ್ಪಟ ಸಮಾಜವಾದವನ್ನು ಅಳವಡಿಸಿ
ಕೊಂಡು ಸಂಸದೀಯ ವ್ಯವಸ್ಥೆಯನ್ನು ನಮ್ಮ ರಾಜ್ಯದಲ್ಲಿ ಶ್ರೀಮಂತ ಗೊಳಿಸಿದ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿ ಮೇ 31ಕ್ಕೆ 25ವರ್ಷಗಳು. ಒಬ್ಬ ಮುಖ್ಯಮಂತ್ರಿ ವಾಸ್ತವದಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಿ ಆಡಳಿತ ನಡೆಸಲು ಸಾಧ್ಯ ಎಂದು ಇಡೀ ದೇಶದಲ್ಲಿ ಅಕ್ಷರಶಃ ರುಜುವಾತು ಮಾಡಿದ ಏಕೈಕ ಮುಖ್ಯಮಂತ್ರಿ.
ಕರ್ನಾಟಕದ ಇತಿಹಾಸದಲ್ಲಿ ಪ್ರತಿಯೊಬ್ಬ ಮುಖ್ಯಮಂತ್ರಿ ತಮ್ಮದೇ ಆದ ಇತಿಹಾಸ ಮತ್ತು ನಡೆಯ ಜಾಡನ್ನು ಬಿಟ್ಟು ಹೋಗಿ ದ್ದಾರೆ. ಆದರೆ ಒಬ್ಬ ಮುಖ್ಯಮಂತ್ರಿ ತನ್ನ ಸಂಪುಟದ ಸಚಿವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡದೇ ಸಹದ್ಯೋಗಿಗಳಿಗೆ ಮುಕ್ತ ವಾತಾವರಣ ನಿರ್ಮಾಣ ಮಾಡಿ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ನೀಡಿದ ಮತ್ತು ತನ್ನ ಕುಟುಂಬದ ಸದಸ್ಯರು ವಿಧಾನ ಸೌಧದ ಹತ್ತಿರಕ್ಕೆ ಸುಳಿಯಲೂ ಅವಕಾಶ ನೀಡದ ಪಾರದರ್ಶಕವಾಗಿ ಅಧಿಕಾರದ ಸಮಯದಲ್ಲಿ ನಡೆದುಕೊಂಡು ಕಾರಣಕ್ಕೆ ಜೆ.ಎಚ್.ಪಟೇಲರು ಇತಿಹಾಸದಲ್ಲಿ ಉಳಿಯುವ ಜೊತೆಗೆ ಸಂಸದೀಯ ವ್ಯವಸ್ಥೆಗೆ ಒಂದು ಮುಕಟವಾಗಿ ಕಾಣುತ್ತಾರೆ.
ಅವರ ಪಾರದರ್ಶಕ ನಡೆ ಮತ್ತು ಆಡಳಿತವನ್ನು ಪಕ್ಷ ರಾಜಕಾರಣ ಹೊರತುಪಡಿಸಿ ಇಂದಿನ ಸರಕಾರದ ಆಡಳಿತ ವ್ಯವಸ್ಥೆಗೆ ಹೋಲಿಕೆ ಮಾಡ ಬೇಕಾಗುತ್ತದೆ. ಒಬ್ಬ ಸಂಸದೀಯ ಪಟುವಾಗಿ ಎಂದೂ ವಿಧಾನಸಭಾ ಅಧಿವೇಶನದಲ್ಲಿ ಅಸಂಸದೀಯ ಪದ ಬಳಕೆ ಮಾಡುತ್ತಿರಲಿಲ್ಲ. ಬೇಜವಾಬ್ದಾರಿ ಉತ್ತರ ನೀಡುತ್ತಿರಲಿಲ್ಲ. ಸಭಾ ನಾಯಕರಾಗಿ ಉತ್ತರ ನೀಡಲು ನಿಂತರೆ ಇಡೀ ಸದನ ಗೌರವ ಕೊಟ್ಟು ಅವರ ಮಾತು ಕೇಳುತ್ತಿದ್ದರು. ತಮ್ಮ ಆಡು ಭಾಷೆಯಲ್ಲಿ ನಗೆ ಮಿಶ್ರಿತ ಉತ್ತರದೊಂದಿಗೆ ಎಲ್ಲರನ್ನೂ ವಿಶ್ವಾಸಕ್ಕೆ
ತೆಗೆದುಕೊಳ್ಳುತ್ತಿದ್ದರು. ಎಷ್ಟೇ ಗಂಭೀರ ಪ್ರಶ್ನೆ ವಿರೋಧ ಪಕ್ಷದ ಸಾಲಿನಿಂದ ಬಂದರೂ ಹಾಸ್ಯ ಭರಿತ ಉತ್ತರ ನೀಡಿ ಸೂಕ್ತ ಕ್ರಮದ ನಂಬಿಕೆಯನ್ನೂ ಮೂಡಿಸುತ್ತಿದ್ದರು.
ಅವರ ಸರಕಾರ ಟೀಕೆ ಮುಕ್ತವಾಗಿರಲಿಲ್ಲ ಎನ್ನುವುದೂ ಸತ್ಯ. ಆದರೆ ಯಾವತ್ತೂ ಜೆ.ಎಚ್.ಪಟೇಲರ ಮೇಲೆ ಅವರ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ಆರೋಪ ಬರಲಿಲ್ಲ. ಆದರೂ ಅವರ ಸಂಪುಟದ 8 ಜನ ಸಚಿವರು ಬೇರೆ ಬೇರೆ ಕಾರಣಕ್ಕೆ ಅವರ ಸರಕಾರದಲ್ಲಿ ರಾಜೀನಾಮೆ ನೀಡಿದರು. ಅವರ 45 ಜನರ ಮಂತ್ರಿ ಮಂಡಲ ಜಂಬೋ ಜೆಟ್ ಮಂತ್ರಿ ಮಂಡಲ ಎಂಬ ಟೀಕೆಗೆ
ಒಳಗಾಯಿತು. ಅವರ ಅವಧಿಯಲ್ಲಿ ಸಚಿವರಾದ ಬಿ.ಸೋಮಶೇಖರ್, ಬಿ.ಟಿ.ಲಲಿತಾ ನಾಯಕ್, ಮಿರಾಜ್ ಉದ್ದೀನ್ ಆರೋಪ ಗಳ ಕಾರಣ ರಾಜೀನಾಮೆ ನೀಡಿದರೆ, ಸದನದ ಸದಸ್ಯ ಆಗದ ಕಾರಣ ಕೆ.ಬಿ. ಶಾಣಪ್ಪ ರಾಜೀನಾಮೆ ನೀಡಿದರು.
ರಮೇಶ್ ಜಿಗಜಿನಗಿ, ಅಜಯ್ ಕುಮಾರ್ ಸರನಾಯಕ್ ಲೋಕಸಭೆಗೆ ಆಯ್ಕೆ ಆಗಿ ರಾಜೀನಾಮೆ ನೀಡಿದರು. ಎಸ್.ಡಿ. ಜಯರಾಮ್
ನಿಧನರಾಗಿದ್ದರಿಂದ ಮತ್ತು ಹೆಗಡೆಯವರನ್ನು ಬೆಂಬಲಿಸಿ ದೇಶಪಾಂಡೆ ರಾಜೀನಾಮೆ ನೀಡಿ ಆ ಸ್ಥಾನ ತೆರವಾದವು. ರಾಜ್ಯದ ಇತಿಹಾಸದಲ್ಲಿ ಒಬ್ಬ ಮುಖ್ಯಮಂತ್ರಿ ತನ್ನ ಸಂಪುಟದ ಮಂತ್ರಿಗಳಿಗೆ (ರಾಜ್ಯ ಮತ್ತು ಸ್ವತಂತ್ರ ಖಾತೆಯೂ ಸೇರಿ) ಅವರ ಇಲಾಖೆ ಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಏಕೈಕ ವ್ಯಕ್ತಿ ಜೆ.ಎಚ್.ಪಟೇಲ್.
1967ರಲ್ಲಿ ಮೊದಲು ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಆಯ್ಕೆಯಾದ ಜೆ.ಎಚ್.ಪಟೇಲರು
ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಅನಿಸಿಕೆಗಳನ್ನು ನೇರವಾಗಿ ಸರಳವಾಗಿ ಮಂಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಪಟೇಲರು 1930ರ ಅಕ್ಟೋಬರ್ 1ರಂದು ಇಂದಿನ ದಾವಣಗೆರೆ ಜಿಯ
ಚೆನ್ನಗಿರಿ ತಾಲೂಕಿನ ಕಾರಿಗನೂರಿನಲ್ಲಿ ಜನಿಸಿದರು.
ಸಮಾಜವಾದಿ ಚಳವಳಿಗೆ ಆಕರ್ಷಣೆಗೊಂಡು ಅಂದಿನ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೂಲಕ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡು 1942 ರಲ್ಲಿ ಸೆರೆವಾಸವನ್ನು ಅನುಭವಿಸಿದರು. ರಾಮ್ ಮನೋಹರ್ ಲೋಹಿಯಾ ಅವರ ಅಪ್ಪಟ
ಅನುಯಾಯಿ ಆಗಿದ್ದ ಇವರು ಶಾಂತವೇರಿ ಗೋಪಾಲಗೌಡರ ಹೋರಾಟಗಳಿಂದ ಪ್ರೇರೇಪಣೆಗೊಂಡರು. 1978ರಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಮೂಲಕ ವಿಧಾನಸಭೆ ಪ್ರವೇಶ ಮಾಡಿದರು.
ಆಗರ್ಭ ಶ್ರೀಮಂತ ಕುಟುಂಬದಿಂದ ಬಂದ ಪಟೇಲರು, ಮನೆಯಿಂದ ಹಣ ತಂದು ರಾಜಕಾರಣ ಮಾಡಿದರು. ಎಂದೂ ರಾಜಕಾರಣದಿಂದ ಕುಟುಂಬಕ್ಕೆ ಗಳಿಸಿದ್ದೂ ಇಲ್ಲ, ಉಳಿಸಿದ್ದೂ ಇಲ್ಲ. ಕರ್ನಾಟಕದ ಅನೇಕ ರಾಜಕಾರಣಿಗಳಿಗೆ ಅವರು ಆರ್ಥಿಕ ವಾಗಿ ಆಶ್ರಯದಾತ ಆಗಿದ್ದರು. 1983ರಲ್ಲಿ ಕರ್ನಾಟಕದಲ್ಲಿ ಜನತಾ ರಂಗ ಸರಕಾರ ಅಧಿಕಾರಕ್ಕೆ ಬರುತ್ತದೆ. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮಂತ್ರಿ ಮಂಡಲ ಸೇರ್ಪಡೆಗೆ ಹೆಸರು ಕೇಳಿದಾಗ, ತಮ್ಮ ಹೆಸರಿನ ಬದಲು ಗುಂಡ್ಲುಪೇಟೆಯ ನೀರ್ ಸಾಬ್ ಎಂದು ಹೆಸರು ಪಡೆದ ನಜೀರ್ ಸಾಬ್ ಮತ್ತು ದಲಿತ ನಾಯಕರಾದ ಬಿ. ರಾಚಯ್ಯ ಅವರ ಹೆಸರನ್ನು ನೀಡುತ್ತಾರೆ.
ಅಷ್ಟರ ಮಟ್ಟಿಗೆ ಸಮಾಜದ ಅಳವಡಿಸಿಕೊಂಡ ರಾಜಕಾರಣಿ.
ಮೇ 31ರಂದು ಈ ರಾಜ್ಯದ ಮುಖ್ಯಮಂತ್ರಿ ಆದ ಪಟೇಲರು ಸುಮಾರು 40 ತಿಂಗಳು ತಮ್ಮ ಅಧಿಕಾರದಲ್ಲಿ ಇದ್ದರು. ತಮ್ಮ ಅವಧಿಯಲ್ಲಿ ಏಳು ಹೊಸ ಜಿಗಳ ರಚನೆಯ ಮೂಲಕ ಆಡಳಿತ ವಿಕೇಂದ್ರೀಕರಣಕ್ಕೆ ಹೆಚ್ಚು ಒತ್ತು ನೀಡಿದರು. ರಾಜ್ಯದ
ನೀರಾವರಿ ಯೋಜನೆಗೆ ಸುಮಾರು 4800 ಕೋಟಿ ರುಪಾಯಿ ವಿನಿಯೋಗಿಸಿದ ಇವರು ರಾಜ್ಯದ ಅಭಿವೃದ್ಧಿಗೆ ಬಹಳಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿದರು.
ಅಪ್ರತಿಮ ಸಂಸದೀಯ ಪಟುವಾಗಿದ್ದ ಪಟೇಲರು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅಷ್ಟೇ ಸ್ನೇಹ ಜೀವಿ. 1999ರಲ್ಲಿ ಕರ್ನಾಟಕ ವಿಧಾನಸಭೆ ವಿಸರ್ಜನೆ ಮಾಡುತ್ತಾರೆ. ಹೊಸ ಸರಕಾರ ಬಂದು ಕಾಂಗ್ರೆಸ್ ಪಕ್ಷದ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಜೆ.ಎಚ್. ಪಟೇಲರು ಪ್ರಮಾಣ ವಚನ ಸಮಾರಂಭಕ್ಕೆ ಬರುವ ಮೂಲಕ ತಮ್ಮ ಹೃದಯ ವೈಶಾಲ್ಯತೆ ಮೆರೆದರು. ಇವರನ್ನು ಗಮನಿಸಿದ ಎಸ್.ಎಂ. ಕೃಷ್ಣ ಕೂಡಲೇ ಕೆಳಗೆ ಬಂದು ಇವರ ಆಶೀರ್ವಾದ ಕೋರಿದರು. ತಮ್ಮ ಸೋಲಿನ ಕಿಂಚಿತ್ತೂ ಭಾವನೆ ಇಲ್ಲದೆ ಹೊಸ ಸರಕಾರಕ್ಕೆ ಶುಭ ಹರಿಸಿದರು. ಅದು ಪಟೇಲರ ವ್ಯಕ್ತಿತ್ವ. ಸಂಸದೀಯ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ರಾಜಕಾರಣಿ ಅಳವಡಿಸಿ ಕೊಳ್ಳಬೇಕಾದ ಅವಶ್ಯಕ ನಡೆ.
ಇತ್ತೀಚೆಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಮಗನ ಆಡಳಿತ ಹಸ್ತಕ್ಷೇಪ ಕುರಿತು ಬಹಿರಂಗ ಚರ್ಚೆ ನಡೆಯುತ್ತಿದೆ. ನಿರಂತರವಾಗಿ ಈ ಸಂಬಂಧ ಅದೇ ಪಕ್ಷದ ಶಾಸಕರು ಮಾಧ್ಯಮಗಳ ಮೂಲಕ ಅಸಮಧಾನ ಹೊರ ಹಾಕುತ್ತಿದ್ದಾರೆ. ಒಬ್ಬ ಸಂಪುಟ ಸಚಿವರು ಹೈ ಕಮಾಂಡ್ಗೆ ದೂರು ನೀಡುವುದರ ಜತೆಗೆ ನೇರವಾಗಿ ಬಹಿರಂಗವಾಗಿ ಆರೋಪ ಮಾಡಿದ್ದಾರೆ. ಆ ಪಕ್ಷದ ಅಧ್ಯಕ್ಷರು ನಿರಾಕರಿಸುವ
ದೈನಂದಿನ ಕೆಲಸಕ್ಕೆ ಸೀಮಿತಗೊಂಡಿದ್ದಾರೆ.
ಜೆ.ಎಚ್.ಪಟೇಲರು ಮತ್ತು ಬಿ.ಎಸ್.ಯಡಿಯೂರಪ್ಪ ಹಳೆಯ ಶಿವಮೊಗ್ಗ ಜಿಲ್ಲೆಗೆ ಸೇರಿದ್ದು, 90ರ ದಶಕದಲ್ಲಿ ಜೊತೆಯ ಶಾಸಕರಾಗಿ ಕೆಲಸ ಮಾಡಿದ್ದಾರೆ. ಒಬ್ಬ ಮುಖ್ಯಮಂತ್ರಿಯಾಗಿ ಪಟೇಲರು ಸದನ ನಡೆಸಲು, ಸದನದಲ್ಲಿ ಉತ್ತರಿಸಲು ಎಂದೂ ಹಿಂದೆ ನೋಡುತ್ತಿರಲಿಲ್ಲ. ಅದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಿಗೆ, ಅವರ ಅನಿಸಿಕೆಗಳಿಗೆ ಸದನದ ಒಳಗೆ ಮತ್ತು ಹೊರಗೆ ಗೌರವ ನೀಡುತ್ತಿದ್ದರು. ಆದರೆ ಈಗಿನ ಸರಕಾರ ವಿರೋಧ ಪಕ್ಷದ ನಾಯಕರು ಅಧಿಕಾರಿಗಳ ಮಾಹಿತಿ ಸಭೆ ನಡೆಯದಂತೆ
ತಡೆಯುತ್ತದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು ಸಭೆ ನಡೆಸದಂತೆ ತಡೆಯುತ್ತದೆ.
ಸಂಸದೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರೆ ಸರಕಾರ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯ. ಯಾವುದೋ ನಿಯಮಗಳನ್ನು ತೋರಿ ನೆಪಗಳನ್ನು ಒಡ್ಡಿ ವಿರೋಧ ಪಕ್ಷದ ನಾಯಕ ಮತ್ತು ಸಾರ್ವಜನಿಕ ಲೆಕ್ಕ ಪತ್ರ
ಸಮಿತಿಯನ್ನು ಕಟ್ಟಿ ಹಾಕಿದರೆ ಇದು ಪ್ರಜಾಪ್ರಭುತ್ವದ ಆಶಯವನ್ನು ಅಳಿಸುತ್ತದೆ.
25 ವರ್ಷಗಳ ಹಿಂದೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಸಂಸದೀಯ ವ್ಯವಸ್ಥೆಗೆ ಮೆರುಗು ನೀಡಿದ ಜಯದೇವಪ್ಪ ಹಾಲಪ್ಪ ಪಟೇಲರ ಹಾದಿಯಲ್ಲಿ ಇತರ ಮುಖ್ಯಮಂತ್ರಿಗಳೂ ಸಾಗುವುದು ಇಂದಿನ ಅವಶ್ಯಕತೆ. ಅದೇ ನಾವು ಒಬ್ಬ ಅಪ್ಪಟ ಸಮಾಜವಾದಿಗೆ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಸಲ್ಲಿಸಬಹುದಾದ ಗೌರವ.