ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ಕ್ಲಬ್ ಹೌಸ್ !
ಇದು ಈ ಹೊತ್ತಿನ ಹೊಸ ಸಂಚಲನ. ಇದು ಹೊಸ ಹುಚ್ಚು. ಇದು ಮುಕ್ತ ಸಂವಾದಕ್ಕೆ ತೆರೆದುಕೊಳ್ಳುವ ಪ್ರಶಸ್ತವಾದ ಹೊಸ ತಾಣ. ಯಾವ ವಿಷಯದ ಕುರಿತು ಯಾರು, ಎಷ್ಟು ಹೊತ್ತು ಬೇಕಾದರೂ, no holds barred ಚರ್ಚೆಗೆ ಅವಕಾಶ ಮಾಡಿ ಕೊಡುವ ಬೃಹತ್ ವೇದಿಕೆ. ಏಕ ಕಾಲದಲ್ಲಿ ಐದು ಸಾವಿರ ಜನ ಚರ್ಚಿಸಬಹುದಾದ ವಿಶಾಲ ಬೋರ್ಡ್ ರೂಮ!
ಕರೋನಾ ಕಾಲದಲ್ಲಿ ಜೀವ ಹಿಡಿದುಕೊಂಡು ನಾವೆ ನಮ್ಮ ನಮ್ಮ ಮನೆಗಳಲ್ಲಿ ಕುಳಿತಿರುವಾಗ, ಜಗತ್ತಿನೆಡೆ ಇರುವ ಆಸಕ್ತರನ್ನು ತಮ್ಮ ತಮ್ಮ ಆಸಕ್ತ ವಿಷಯಗಳ ಚರ್ಚೆಯ ನೆಪದ, ಮನರಂಜನೆಗೋ ಅಥವಾ ಸುಮ್ಮನೆ ಕಾಲಕ್ಷೇಪಕ್ಕೋ, ನಮ್ಮ ಮೊಬೈಲನ್ನೇ ಸಭಾಂಗಣವಾಗಿ ಸೃಷ್ಟಿಸಿಕೊಳ್ಳಬಹುದಾದ ಒಂದು ವಿನೂತನ, ಸೊಗಸಾದ ಆಪ್.
ಇಲ್ಲಿ ಸಾವಿರಾರು ಜನ ಕುಳಿತು ಉಪನ್ಯಾಸ ಕೇಳಬಹುದು, ಚರ್ಚೆ- ಸಂವಾದ ಮಾಡಬಹುದು, ಹತ್ತಾರು ಜನ ಕುಳಿತು ಮೀಟಿಂಗ್ ಮಾಡಬಹುದು, ಬೇರೆ ಬೇರೆ ಊರುಗಳಲ್ಲಿರುವ ಮನೆ – ಮಂದಿಯೆ ಕುಳಿತು ಪಟ್ಟಾಂಗ ಹೊಡೆಯಬಹುದು, ಇಬ್ಬರೇ ಕುಳಿತು ಆಪ್ತ ಸಂವಾದವನ್ನೂ ಮಾಡಬಹುದು, ಹರಟೆ ಹೊಡೆಯಬಹುದು. ಯಾವ ವಿಷಯವೂ ಸಿಗದಿದ್ದರೆ, ಹತ್ತಾರು ಜನ ಅಂತ್ಯಾಕ್ಷರಿ ಯನ್ನು ಹೇಳಬಹುದು. ಈ ಗುಂಪಿನಲ್ಲಿ ನಿಮಗೆ ಪರಿಚಿತರಾದವರು ಇದ್ದರೆ, ಅಲ್ಲಿಯೇ ಪ್ರತ್ಯೇಕ ಕೋಣೆ ಸೃಷ್ಟಿಸಿಕೊಂಡು ಪರಸ್ಪರ ಹರಟೆ ಹೊಡೆಯಬಹುದು.
ಒಂದಲ್ಲ, ಎರಡಲ್ಲ, ಕ್ಲಬ್ ಹೌಸ್ ನಲ್ಲಿ ನೂರಾರು ಸಾಧ್ಯತೆಗಳಿವೆ. ನಾನು ಕಳೆದ ಮೂರು ತಿಂಗಳುಗಳಿಂದ ಈ ಕ್ಲಬ್ ಹೌಸ್
ನಲ್ಲಿದ್ದೇನೆ. ಜಗತ್ತಿನ ಅದ್ಭುತ ವ್ಯಕ್ತಿಗಳು, ಗಣ್ಯ ವ್ಯಕ್ತಿಗಳು, ಸಾಧಕರು, ಶ್ರೇಷ್ಠರು, ಪಂಡಿತರು, ಸಿಲೆಬ್ರಿಟಿಗಳು… ಹೀಗೆ ನೂರಾರು ಜನರ ಮಾತುಗಳನ್ನು, ಭಾಷಣಗಳನ್ನು, ಸಂದರ್ಶನಗಳನ್ನು, ಹರಟೆಗಳನ್ನು ಕೇಳಿದ್ದೇನೆ. ಕೆಲವು ದಿನ ಏಳೆಂಟು ಗಂಟೆ ಆ ಕ್ಲಬ್ ಹೌಸ್‌ನಲ್ಲಿ ಕಳೆದು ಹೋಗಿದ್ದೇನೆ. ರಾತ್ರಿ ಎರಡು ಗಂಟೆಗೆ ಎಚ್ಚರವಾದರೆ, ಕ್ಲಬ್ ಹೌಸಿನಲ್ಲಿ ಸ್ವಾರಸ್ಯಕರ ಚರ್ಚೆ ನಡೆಯುತ್ತಿದ್ದರೆ, ಎದ್ದು ಕುಳಿತು ಕೇಳಿದ್ದೇನೆ.
ನಮಗೆ ರಾತ್ರಿಯಾದರೆ, ಜಗತ್ತಿನ ಇನ್ನೆ ಉತ್ತಮ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರೆ ಕಿವಿಯಾಗದೇ ಇರುವುದೆಂತು? ನಾವು ಕುಳಿತುಕೊಳ್ಳುವ ರೂಮಿನಲ್ಲಿ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್, ಓಫ್ರಾ ವಿನ್ ಫ್ರೆ, ಇಲಾನ್ ಮಸ್ಕ್, ಅಸ್ಟೋನ್ ಕುರ್ಚ, ಡ್ರೇಕ್, ಕ್ರಿಸ್ಸಿ ಟೇಗನ್, ಅನುಪಮ್ ಖೇರ್, ಶಶಿ ತರೂರ್, ಆಶೀಶ್ ವಿದ್ಯಾರ್ಥಿ, ದಿಗ್ವಿಜಯ್ ಸಿಂಗ್, ರಾಘವೇಶ್ವರ ಭಾರತಿ ಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ, ರೋಹಿತ್ ಚಕ್ರತೀರ್ಥ, ಸಿ.ಟಿ.ರವಿ, ಕವಡಿಕೆರೆ ಬೊಮ್ಮ … ಮುಂತಾದವರೆಲ್ಲ ಕುಳಿತು ಚರ್ಚೆಯನ್ನು ಆಲಿಸುತ್ತಿರಬಹುದು, ಮಾತಾಡುತ್ತಿರಬಹುದು.
ಈ ಸಂದರ್ಭದಲ್ಲಿ ಇವರನ್ನೆ ಒಂದು ಸಭಾಂಗಣದಲ್ಲಿ ಸೇರಿಸಿ ಒಂದು ಕಾರ್ಯಕ್ರಮ ಮಾಡಬೇಕು ಅಂದ್ರೆ ಅದು ಸಾಧ್ಯವಿಲ್ಲದ ಮಾತು. ಆದರೆ ಕ್ಲಬ್ ಹೌಸ್ ಅದನ್ನು ಸಾಧ್ಯವಾಗಿಸಿದೆ. ಈ ಕಾರಣದಿಂದ ಅದು ವಯಸ್ಸಿನ ಪರಿವೆಯಿಲ್ಲದೇ ವಿಶ್ವದೆಡೆ ಶ್ರೋತೃ ಗಳನ್ನು (ಶ್ರವಣ ಕುಮಾರರನ್ನು) ಚುಂಬಕದಂತೆ ಆಕರ್ಷಿಸುತ್ತಿದೆ. ಅದರಲ್ಲೂ ಹದಿಹರೆಯದವರಂತೂ ದಿನದಲ್ಲಿ ಬಹು ಸಮಯ ಕ್ಲಬ್ ಹೌಸಿನಲ್ಲಿಯೇ ಮನೆ ಮಾಡಿಕೊಳ್ಳುವಂತಾಗಿದೆ.
ಹಿಂದಿನ ವರ್ಷದ ಏಪ್ರಿಲ್‌ನಲ್ಲಿ ಕ್ಲಬ್ ಹೌಸ್ ಆರಂಭವಾದರೂ, ಅದರ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಆರಂಭವಾಗಿ ಒಂದು ತಿಂಗಳಲ್ಲಿ ಒಂದು ಸಾವಿರ ಮಂದಿ ಸಹ ಕ್ಲಬ್ ಹೌಸ್ ಸೇರಿರಲಿಲ್ಲ. ಹಿಂದಿನ ವರ್ಷದ ಡಿಸೆಂಬರ್ ಹೊತ್ತಿಗೆ ಕ್ಲಬ್ ಹೌಸ್ ಸೇರಿದವರ ಸಂಖ್ಯೆ ಕೇವಲ 3500. ಅದಾಗಿ ಆರು ತಿಂಗಳಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿ ಕ್ಲಬ್ ಹೌಸ್ ಸೇರಿದ್ದಾರೆ. ಇವರೆಲ್ಲ ಅಲ್ಲಿ ಸರಾಸರಿ ನಲವತ್ತು ನಿಮಿಷ ಕಳೆಯುತ್ತಿದ್ದಾರೆ. ಅಲ್ಲಿನ ಚರ್ಚೆಯ ನಿರ್ವಹಣಾಕಾರರು ನಾನ್ ಸ್ಟಾಪ್ ಹತ್ತು ಗಂಟೆ ಕಾರ್ಯಕ್ರಮ ನಿರ್ವಹಿಸಿದ್ದಿದೆ.
ಫ್ರಾನ್ಸಿನ ಗಾಯಕನೊಬ್ಬ ಸತತ ಹದಿಮೂರು ಗಂಟೆಗಳ ಕಾಲ ಕ್ಲಬ್ ಹೌಸ್ ನಲ್ಲಿ ಸಂಗೀತ ಕಾರ್ಯಕ್ರಮ ಕೊಟ್ಟಿದ್ದಾನೆ. ಕೆಲವರಂತೂ ರಾತ್ರಿಯಿಡಿ ಇಯರ್ ಫೋನ್ ಸಿಕ್ಕಿಸಿಕೊಂಡು, ನಿದ್ದೆ ಬಿಟ್ಟು ಕ್ಲಬ್ ಹೌಸಿನಲ್ಲಿಯೇ ನಿದ್ದೆ ಹೋಗುತ್ತಿದ್ದಾರೆ. ಮೊನ್ನೆ ನಾನು ಸ್ನೇಹಿತರಾದ ನಂಜನಗೂಡು ಮೋಹನ್ ಅವರಿಗೆ ಕ್ಲಬ್ ಹೌಸ್‌ನ ಸ್ವಾರಸ್ಯಗಳನ್ನೆ ಹೇಳಿ, ಆ ಆಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಹೇಳಿದೆ. ಅವರು ಹಾಗೆ ಮಾಡಿದರು. ಪ್ರಯೋಗಾರ್ಥವಾಗಿ, ಹದಿನೈದು ನಿಮಿಷ ಚರ್ಚೆ ಮಾಡೋಣ ಬನ್ನಿ ಎಂದು ಕರೆದೆ. ಅವರು ಬಂದರು. ಆ ಕಾರ್ಯಕ್ರಮಕ್ಕೆ Evening Coffee With Bhat ಎಂದು ಹೆಸರಿಟ್ಟು ನಾವಿಬ್ಬರೂ ಚರ್ಚೆಗೆ ಕುಳಿತುಕೊಂಡರೆ, ನೋಡನೋಡುತ್ತಿದ್ದಂತೆ ಸುಮಾರು ಮೂನ್ನೂರು ಮಂದಿ ನಮ್ಮ ಮಾತನ್ನು ಕೇಳಲು ಆಗಮಿಸಿದ್ದರು!
ಹದಿನೈದು ನಿಮಿಷವೆಂದು ಶುರು ಮಾಡಿದ ಮಾತುಕತೆ, ಎರಡೂವರೆ ಗಂಟೆಗಳವರೆಗೆ ವಿಸ್ತರಿಸಿತು. ಇಂದಿನ ಪತ್ರಿಕೋದ್ಯಮ, ಭವಿಷ್ಯ, ತವಕ – ತಲ್ಲಣ, ಆತಂಕ.. ಮುಂತಾದ ವಿಷಯಗಳ ಬಗ್ಗೆ free – wheeling ಚರ್ಚೆ ನಡೆಯಿತು. ಒಂದು ವೇಳೆ ಬೆಂಗಳೂರಿನ ವಾಡಿಯಾ ಸಭಾಂಗಣದ, ಸಂಸ ರಂಗಮಂದಿರದ, ನಾವು ಇದೇ ಚರ್ಚೆ ಮಾಡಬೇಕೆಂದು ನಿರ್ಧರಿಸಿದ್ದರೆ, ಅಷ್ಟು ಜನರನ್ನು ಸೇರಿಸಲು ಆಗುತ್ತಿರಲಿಲ್ಲ. ಅದಕ್ಕೆ ಎಷ್ಟು ಪರಿಶ್ರಮಪಡಬೇಕಾಗುತ್ತಿತ್ತು ಮತ್ತು ಎಷ್ಟು ಖರ್ಚಾಗುತ್ತಿತ್ತು ಎಂಬುದು ಬೇರೆ ಮಾತು. (ಮುಖತಃ ಭೇಟಿ ಮಾಡುವುದಕ್ಕೂ, ಅವರ ಮಾತುಗಳನ್ನು ಮೊಬೈಲಿನಲ್ಲಿ ಕೇಳುವುದಕ್ಕೂ ವ್ಯತ್ಯಾಸವಿದೆ, ಅದು ಬೇರೆ ಮಾತು.) ಅದೇ ದಿನ ಇನ್ನೊಂದು ಅಚ್ಚರಿ.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಅರುಣ್ ಶಾಮ್ ಅವರು ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಗೆ ಕ್ಲಬ್ ಹೌಸ್ ಬಗ್ಗೆ ಹೇಳಿ, ಆ ಆಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಹೇಳಿದರು. ಸ್ವಾಮೀಜಿ ಯವರು ತಮ್ಮ ಮೊಬೈಲಿನಲ್ಲಿ ಡೌನ್ ಲೋಡ್ ಮಾಡಿಕೊಂಡರು. ಅದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸ್ವಾಮೀಜಿಯವರಿಗೆ ತಿಳಿಸಲು, á, Meeting With Sri Swamiji ಎಂಬ ಚಾಟ್ ರೂಮ್ ಮಾಡಿದ್ದರು. ನನಗೆ ಅದು ಕಾಣಿಸಿತು. ನಾನು ಕುತೂಹಲದಿಂದ ಆ ಚಾಟ್ ರೂಮ್ ಪ್ರವೇಶಿಸಿದರೆ, ರಾಘವೇಶ್ವರ ಭಾರತಿ ಸ್ವಾಮೀಜಿ !
ಅವರು ಆಗ ತಾನೇ ಕ್ಲಬ್ ಹೌಸ್ ‘ಶಿಷ್ಯತ್ವ’ ಪಡೆದಿದ್ದರು. ಕ್ಲಬ್ ಹೌಸ್ ಗುಣಕಥನವನ್ನು ಹೇಳುತ್ತಿರುವಾಗಲೇ, ಮುನ್ನೂರಕ್ಕೂ
ಹೆಚ್ಚು ಜನ ಆ ರೂಮಿಗೆ ಬಂದು ಸ್ವಾಮೀಜಿ ಯವರ ಜತೆ ಮಾತುಕತೆಗೆ ತೊಡಗಿದ್ದರು. ಸ್ವಾಮೀಜಿಯವರು ಗೋಕರ್ಣದಲ್ಲಿ
ಕುಳಿತಿದ್ದರೆ, ಅವರ ಮಾತುಗಳನ್ನು ಬೆಹರೈನ್, ಜರ್ಮನಿ, ಅಮೆರಿಕ, ಲಂಡನ್, ಬೀದರ್, ಬೆಂಗಳೂರು, ಶಿರಸಿ… ಹೇಗೆ ನೂರಾರು ಊರುಗಳಲ್ಲಿರುವವರು ಕೇಳಿಸಿಕೊಳ್ಳುತ್ತಿದ್ದರು.
ಕೆಲವರು ಅವರೊಂದಿಗೆ ಸಂವಾದ ನಡೆಸುತ್ತಿದ್ದರು. ಕ್ಲಬ್ ಹೌಸ್ ದಿನೇ ದಿನೆ ಬೆಳೆಯುತ್ತಿರುವ, ಹೊಸ ಹೊಸ ಸಾಧ್ಯತೆಗಳನ್ನು ತೋರಿಸಿಕೊಡುತ್ತಿರುವ, ಕಿವಿಯ ಮೂಲಕ ಹೃದಯ ಮತ್ತು ಮನಸ್ಸನ್ನು ತಟ್ಟುವ, ತಡವುವ ಒಂದು ಹೊಸ ವೇದಿಕೆ, ಹೊಸ ಆಪ್. ‘ವಿಶ್ವವಾಣಿ’ ಪತ್ರಿಕೆ ಈ ಆಪ್ ಮೂಲಕ ಪ್ರತಿದಿನ ಸಾಯಂಕಾಲ ಏಳು ಗಂಟೆಗೆ ‘ವಿಶ್ವವಾಣಿ ಕ್ಲಬ್’ ಹೆಸರಿನಲ್ಲಿ ಚರ್ಚೆ – ಸಂವಾದಕ್ಕೆ ಅವಕಾಶ ಮಾಡಿಕೊಡಲಿದೆ.
ಅಲ್ಲಿ ನಾನು ಪ್ರತಿದಿನ ನಿಮಗೆ ಸಿಗಲಿದ್ದೇನೆ. ಅದಕ್ಕಿಂತ ಮುಖ್ಯವಾಗಿ ನೀವೆಲ್ಲರೂ ನನಗೆ ಅಲ್ಲಿ ಸಿಗಲಿದ್ದೀರಿ. ನಿತ್ಯವೂ ಕ್ಲಬ್ ಹೌಸಿನಲ್ಲಿ ಭೇಟಿ ಮಾಡೋಣ.
ಓದುಗರು ಮತ್ತು ಅವರ ಪ್ರಶ್ನೆಗಳು ! ನಮ್ಮ ಪತ್ರಿಕೆಯ ‘ಭಟ್ಟರ್ ಸ್ಕಾಚ್’ ಅಂಕಣಕ್ಕೆ ಪ್ರತಿದಿನ ನೂರಾರು ಪ್ರಶ್ನೆಗಳು ಬರುತ್ತವೆ. ಎಲ್ಲಿಂದಲೋ ಓದುಗರು ಪ್ರಶ್ನೆಗಳನ್ನು ಕಳಿಸುತ್ತಾರೆ. ಕಳೆದ ವಾರ ಒಂದೇ ದಿನ ಬಂದ ಪತ್ರಗಳ ಪೈಕಿ ಸುಮಾರು ಎಪ್ಪತ್ತು ಪ್ರಶ್ನೆಗಳು ವೀರಪ್ಪ ಮೊಯಿಲಿ ಅವರಿಗೆ ಸಂಬಂಧಿಸಿದ್ದವು. ನಾನಾದರೂ ಎಷ್ಟೂ ಅಂತ ಅವರ ಬಗ್ಗೆ ಬರೆಯಲಿ? ಓದುಗರಿಗೆ ಅವರ ಬಗ್ಗೆ ಎಷ್ಟು ಆಸಕ್ತಿ (?) ಇರಬಹುದು ಯೋಚಿಸಿ. ಕೆಲವರು ನಿತ್ಯವೂ ಪ್ರಶ್ನೆಗಳನ್ನು ಕಳಿಸುತ್ತಾರೆ.
ಇನ್ನು ಕೆಲವರು ಪ್ರತಿ ದಿನ ಹತ್ತಕ್ಕೂ ಹೆಚ್ಚು ಪ್ರಶ್ನೆಗಳನ್ನು ಕಳಿಸುತ್ತಾರೆ. ಕನಿಷ್ಠ ಒಂದಾದರೂ ಪ್ರಕಟವಾಗಲಿ ಎಂಬುದು ಅವರ ಆಶಯವಿರಬಹುದು. ಪ್ರಶ್ನೆ ಕೇಳುವುದೂ ಒಂದು ಕಲೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲಾಗುವುದಿಲ್ಲ. ಅಲ್ಲದೇ ಉತ್ತರಿಸಬೇಕು ಎಂದು ಅನಿಸುವುದೂ ಇಲ್ಲ. ಭಟ್ರೇ, ನೀವು ಯಾಕೆ ಮೀಸೆ ಬಿಡುವುದಿಲ್ಲ?’ ಎಂದು ಕನಿಷ್ಠ ಒಬ್ಬರಾದರೂ ಪ್ರಶ್ನೆ ಕಳಿಸಿರುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿ ಸಾಕಾಗಿ ಹೋಗಿದೆ. ತಮಾಷೆ ಅಂದ್ರೆ ಈ ಪ್ರಶ್ನೆಗಳನ್ನು ಕಳಿಸುವವರು ಹೆಂಗಸರೇ!
ಮೊನ್ನೆ ಒಬ್ಬಳು ಪ್ರಶ್ನೆ ಕೇಳಿದ್ದಳು – ‘ಭಟ್ರೇ, ನೀವು ಮೀಸೆ ಬಿಟ್ಟಾಗ ನನಗೆ ತಿಳಿಸುತ್ತೀರಿ ಆಲ್ವಾ?’ ಮೀಸೆ ಬಿಟ್ಟರೆ ಎಲ್ಲರಿಗೂ ಕಾಣಿಸುತ್ತದೆ. ಅದನ್ನು ಮುಚ್ಚಿಟ್ಟುಕೊಳ್ಳಲು ಆಗುತ್ತಾ? ಕೆಲವರಿಗೆ ಗೊತ್ತು, ಯಾವ ಪ್ರಶ್ನೆ ಕೇಳಿದರೆ ತಟ್ಟನೆ ಉತ್ತರ ಸಿಗುತ್ತದೆಂದು. ಅಂಥವರು ಜಾಣ ಪ್ರಶ್ನೆಗಳನ್ನು ಕೇಳುತ್ತಾರೆ.
ಈ ಪ್ರಶ್ನೋತ್ತರ ಅಂಕಣ ಆ ಕ್ಷಣ ಓದಿ, ನಕ್ಕು ಹಗುರಾಗಿ ಮರೆತುಬಿಡಬಹುದಾದ ಅಂಕಣ. ನಾನು ಆಗಾಗ ಒಬ್ಬ ರಾಜಕಾರಣಿ ಬಗ್ಗೆ (ಮೊಯಿಲಿ ಅಲ್ಲ) ಈ ಅಂಕಣದಲ್ಲಿ ಪ್ರಸ್ತಾಪಿಸುತ್ತಿದ್ದೆ. ಅದರಿಂದ ಮನನೊಂದ ಅವರು ನಮ್ಮ ಕಚೇರಿಗೆ ಬಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು. ಅವರನ್ನು ಸಮಾಧಾನ ಮಾಡುವ ಹೊತ್ತಿಗೆ ನಾನು ಸುಸ್ತು. ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸಿದ್ದು ನೆನಪಿರುವುದಿಲ್ಲ. ಮೊನ್ನೆ ಓದುಗರೊಬ್ಬರು ನಮ್ಮ ಕಚೇರಿಗೆ ಬಂದಿದ್ದರು. ನಾನು ಕನ್ನಡ ಪ್ರಭದಲ್ಲಿದ್ದಾಗಲೂ ಇಂಥದೇ ಅಂಕಣ ಬರೆಯುತ್ತಿದ್ದೆ. ಅದಕ್ಕೆ ಕೇಳ್ರಪ್ಪೋ ಕೇಳಿ ಅಂತ ಹೆಸರಿತ್ತು. ಆ ಅಂಕಣದಲ್ಲಿ ಪ್ರಕಟವಾದ ಒಂದು ಪ್ರಶ್ನೆ ಮತ್ತು ಅದಕ್ಕೆ ನಾನು ನೀಡಿದ ಉತ್ತರವನ್ನು ಅವರು ನೆನಪಿಸಿದರು.
ಪ್ರಶ್ನೆ: ‘ನನಗೆ ಈಗ ಐವತ್ತೊಂಬತ್ತು ವರ್ಷ. ಹೇಳಿಕೊಳ್ಳುವಂಥ ಯಾವ ಕೆಲಸವೂ ಇಲ್ಲ. ಅಡುಗೆ ಮಾಡಲು ಬರುವುದಿಲ್ಲ. ಮನೆ
ಕೆಲಸ ಗೊತ್ತಿಲ್ಲ. ಹೇಳಿಕೊಳ್ಳುವಂಥ ಸೌಂದರ್ಯವೂ ಇಲ್ಲ. ಆದರೂ ನನ್ನನ್ನು ಯಾರಾದರೂ ಮದುವೆ ಆಗ್ತಾರಾ ?’
ನನ್ನ ಉತ್ತರ: ಮದುವೆ ಆಗದಿರಲು ಇವ್ಯಾವೂ ಕಾರಣಗಳಲ್ಲ. ನಿಮ್ಮನ್ನು ವರಿಸುವ ಮೂರ್ಖ ಈ ಜಗತ್ತಿನಲ್ಲಿ ಎಲ್ಲಾ ಇದ್ದಾನೆ
ಎಂಬುದು ನಿಮಗೆ ಗೊತ್ತಿರಲಿ, ಆದರೆ ನೀವು ಮಾಯಾವತಿ ಆಗಿದ್ದರೆ ಡೌಟು !’
ಮರೆಯಲಾಗದ ದುರ್ಲಭಜೀ ಭಾಷಣ
ಅಧ್ಯಕ್ಷತೆ ವಹಿಸಿದ್ದ ಯೋಗಿ ದುರ್ಲಭಜೀ ಮಾತಾಡುವ ಹೊತ್ತಿಗೆ ನಾಲ್ಕು ಗಂಟೆ ಸರಿದು ಹೋಗಿದ್ದವು. ಅವರಿಗಿಂತ ಮೊದಲು ಮಾತಾಡಿದ ಮೂವರು, ತಾಸುಗಟ್ಟಲೆ ಕೊರೆದು ಹಾಕಿದ್ದರು. ಸಭಿಕರು ಸುಸ್ತಾಗಿದ್ದರು. ಆದರೆ ದುರ್ಲಭಜೀ ಮಾತಿಗಾಗಿ ಅವರೆಲ್ಲ ಕಾದು ಕುಳಿತಿದ್ದರು. ಸಾಮಾನ್ಯವಾಗಿ, ಯೋಗಿಯವರು ಕಾರ್ಯಕ್ರಮಕ್ಕೆ ಹೋಗುವವರಲ್ಲ.
ಆದರೆ ಅಂದು ಅವರ ಆತ್ಮೀಯರು ಆಮಂತ್ರಿಸಿದಾಗ, ಇಲ್ಲ ಎನ್ನಲು ಮನಸ್ಸಾಗಲಿಲ್ಲ. ಆದರೆ ಮೊದಲು ಮಾತಾಡಿದವರಲ್ಲ ತಲೆಚಿಟ್ಟು ಹಿಡಿಸುವಂತೆ ಮಾತಾಡಿ, ಎಲ್ಲರ ಸಹನೆ ಪರೀಕ್ಷಿಸಿದ್ದರು. ಎಲ್ಲರ ಮಾತು ಮುಗಿಯಿತು. ಎಲ್ಲರೂ ಯೋಗಿ ಅವರ
ಮಾತಾಗಾಗಿ ಎದುರು ನೋಡುತ್ತಿದ್ದರು. ಕಾರ್ಯಕ್ರಮದ ನಿರೂಪಕರು, “Dear friends, Now we have Yogi Durlabhaji, a great scholar will give you his address’ ಎಂದು ಹೇಳಿ ಮೈಕನ್ನು ಯೋಗಿಜೀಗೆ ಕೊಟ್ಟರು.
ಯೋಗಿಜೀ ಮೈಕನ್ನು ಹಿಡಿದು ಇಡೀ ಸಭೆಯನ್ನು ಸಾವಧಾನದಿಂದ ದಿಟ್ಟಿಸಿದರು. ನಂತರ ತಮ್ಮ ಗಡಸು ದನಿಯಲ್ಲಿ, Dear friends, Ladies and Gentlemen, my address is 27, Ideal Homes, R.R.Nagar, Bengaluru & 98 ಎಂದು ಹೇಳಿ ಕುಳಿತು ಕೊಂಡು ಬಿಟ್ಟರು. ಎಲ್ಲರೂ ಎದ್ದು ನಿಂತು ಹರ್ಷೋದ್ಗಾರದಿಂದ ಚಪ್ಪಾಳೆ ಹೊಡೆದರು. ಯೋಗಿಜೀ ಏನೇ ಮಾತಾಡಿದರೂ, ನೆನಪಿರುತ್ತಿತ್ತೋ, ಇಲ್ಲವೋ ಗೊತ್ತಿಲ್ಲ, ಆದರೆ ಈ ಮಾತುಗಳನ್ನಂತೂ ಮರೆಯುವಂತೆಯೇ ಇಲ್ಲ.
ಅದಕ್ಕಿಂತ ಹೆಚ್ಚಾಗಿ, ಯೋಗಿಜೀ ಐದು ನಿಮಿಷ ಮಾತಾಡಿದ್ದರೂ, ಹಸಿದ ಸಭಿಕರು ಶಾಪ ಹಾಕದೇ ಹೋಗುತ್ತಿರಲಿಲ್ಲ. ಹೀಗಾಗಿ ಏನೂ ಮಾತಾಡದೇ ಇರುವುದೇ ಲೇಸು ಎಂದು ಭಾವಿಸಿ, ನಿರೂಪಕರ ಆದೇಶದಂತೆ ತಮ್ಮ ಅಡ್ರೆಸ್ ಹೇಳಿ ಕುಳಿತುಕೊಂಡು ಬಿಟ್ಟರು.
ಸ್ಕೂಪ್ ಸುದ್ದಿ ಅಂದ್ರೆ..
ಆತ ಟ್ರೈನಿ ರಿಪೋರ್ಟರ್ ಎಂದು ಪತ್ರಿಕೆ ಸೇರಿ ಒಂದು ವಾರವಾಗಿತ್ತು. ರಾತ್ರಿ ಹತ್ತು ಗಂಟೆ ಹೊತ್ತಿಗೆ, ಸಂಪಾದಕರಿಗೆ ಒಂದು ಕರೆ ಬಂತು. ನಗರದ ಹೊರವಲಯದಲ್ಲಿರುವ ಫ್ಯಾಕ್ಟರಿಯಲ್ಲಿ ಬೆಂಕಿ ಬಿದ್ದಿದೆಯೆಂದು. ತಕ್ಷಣ ಯಾರನ್ನು ಕಳಿಸುವುದು? ವರದಿಗಾರ ರೆಲ್ಲ ಡ್ಯೂಟಿ ಮುಗಿಸಿ ಮನೆಗೆ ಹೋಗಿದ್ದರು. ಟ್ರೈನಿ ರಿಪೋರ್ಟರ್ ಮಾತ್ರ ಇದ್ದ. ಅವನನ್ನು ಕರೆದ ಸಂಪಾದಕರು, ‘ನೋಡು, ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆಯಂತೆ.
ತಕ್ಷಣ ಹೋಗು, ವಾಹನ ಸಿದ್ಧವಾಗಿದೆ’ ಎಂದರು. ಟ್ರೈನಿ ರಿಪೋರ್ಟರ್ ಅವಸರದಲ್ಲಿ ಕಾರಿನಲ್ಲಿ ಕುಳಿತುಕೊಂಡ. ಡ್ರೈವರ್ ವೇಗ ವಾಗಿ ಓಡಿಸಿದ. ಅದು ಅವನ ಮೊದಲ ಔಟ್ ಸೈಡ್ ಅಸೈನ್ ಮೆಂಟ್. ಸರಿ, ಘಟನಾ ಸ್ಥಳ ತಲುಪಿದ. ಬೇರೆ ಯಾವ ಪತ್ರಿಕೆಯ ವರದಿಗಾರರೂ ಬಂದಿರಲಿಲ್ಲ. ಟ್ರೈನಿ ರಿಪೋರ್ಟರ್‌ಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ.
ಸಂಪಾದಕರಿಗೆ ಮೆಸೇಜ್ ಮಾಡಿದ – ‘ನಾನು ಬೆಂಕಿ ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ಬಂದಿದ್ದೇನೆ. ಮುಂದೇನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ದಯವಿಟ್ಟು ತಿಳಿಸಿ, ನಿಮ್ಮ ಸೂಚನೆಯ ನಿರೀಕ್ಷೆಯಲ್ಲಿದ್ದೇನೆ.’ ಅದಾಗಿ ಕೆಲವೇ ಕ್ಷಣಗಳಲ್ಲಿ ಸಂಪಾ ದಕರು ಪ್ರತಿಕ್ರಿಯಿಸಿದರು – ‘ಬೆಂಕಿ ದುರ್ಘಟನೆ ಸಂಭವಿಸಿದ ಯಾವ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ತೀವ್ರವಾಗಿದೆ ಎಂಬುದನ್ನು ಪರೀಕ್ಷಿಸು.. ಹಿಂದೆ ಮುಂದೆ ನೋಡದೇ ಅಲ್ಲಿ ಧುಮುಕು. ಯಾರಿಗೂ ಸಿಗದ ಸ್ಕೂಪ್ ಸುದ್ದಿಯನ್ನು ನಾನು ಇಲ್ಲಿ ಕುಳಿತೇ ಬರೆಯು ತ್ತೇನೆ.’
ಅದು ರಂಗಭೂಮಿ ಅಲ್ಲ, ಹುಚ್ಚಾಸ್ಪತ್ರೆ
ಒಮ್ಮೆ ಮಾಸ್ಟರ್ ಹಿರಣ್ಣಯ್ಯ ಅವರ ಜತೆಗೆ ವೇದಿಕೆ ಹಂಚಿಕೊಂಡಿದ್ದೆ. ಆ ದಿನ ಅವರು ಅದ್ಭುತವಾಗಿ ಮಾತಾಡಿದರು. ಕಾರ್ಯಕ್ರಮ ಮುಗಿದ ಬಳಿಕ ಹಲವರು ಅವರನ್ನು ಸುತ್ತುವರಿದು ಅಭಿನಂದಿಸಿದರು. ಅವರಬ್ಬ, ‘ಹಿರಣ್ಣಯ್ಯನವರೇ, ನೀವು ರಂಗಭೂಮಿಯ ನಟರಾಗುವ ಬದಲು, ಲೋಕಸಭಾ ಸದಸ್ಯರಾಗಿದ್ದರೆ, ಎಷ್ಟು ಚೆನ್ನಾಗಿತ್ತು. ನಿಮ್ಮ ಮಾತಿನಿಂದ ಇಡೀ ಲೋಕಸಭೆ ತಲೆದೂಗುವಂತೆ ಮಾಡಬಹುದಾಗಿತ್ತು. ಲೋಕಸಭೆಗಿಂತ ದೊಡ್ಡ ರಂಗಭೂಮಿ ಯಾವುದಿದೆ? ಈಗಲೂ ಕಾಲ ಮಿಂಚಿಲ್ಲ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ’ ಎಂದು ಹೇಳಿದ.
ಅದಕ್ಕೆ ತಟ್ಟನೆ ಹಿರಣ್ಣಯ್ಯನವರು ಹೇಳಿದರು – ‘ಅಲ್ಲಯ್ಯಾ, ನಾನು ಲೋಕಸಭಾ ಸದಸ್ಯನಾಗಿದ್ದಿದ್ದರೆ ಮೂರ್ಖನ ಹಾಗೆ
ಬಾಯಿಮುಚ್ಚಿ ಕುಳಿತು ಎದ್ದು ಬರಬೇಕಾಗುತ್ತಿತ್ತು. ನಮ್ಮ ರಾಜ್ಯದಿಂದ ಹೋದ ಒಬ್ಬನೇ ಒಬ್ಬ ಲೋಕಸಭಾ ಸದಸ್ಯ ಮಾತಾಡಿದ್ದನ್ನು ನೀವೆಲ್ಲ ಕೇಳಿದ್ದೀರಾ, ನೋಡಿದ್ದೀರಾ? ಇಲ್ಲಿ ನೀವೆಲ್ಲ ನನ್ನ ಮಾತನ್ನು ಕೇಳಿದಿರಿ ಎಂದು ಅಲ್ಲಿ ಯಾರು
ಕೇಳುತ್ತಾರೆ? ಅಲ್ಲಿದ್ದವರಿಗೆ ಮಾತನ್ನು ಕೇಳುವ ವ್ಯವಧಾನ ಇಲ್ಲ.
ಲೋಕಸಭಾ ಸದಸ್ಯನಾದರೆ ಪಕ್ಷದ ನಾಯಕರು ಹೇಳಿದಂತೆ ಮೂಕನಾಗಿ ಇರಬೇಕಾಗುತ್ತದೆ. ನಾನು ಹಾಗೆ ಇರುವುದುಂಟಾ?
ಅಷ್ಟಕ್ಕೂ ಲೋಕಸಭೆ ಅನ್ನೋದು ರಂಗಭೂಮಿ ಅಲ್ಲ. ಅದೊಂದು ಹುಚ್ಚಾಸ್ಪತ್ರೆ. ಹೀಗಾಗಿ ನಾನು ನನ್ನ ಪಾಡಿಗೆ ನಾಟಕ
ಮಾಡಿಕೊಂಡಿರುತ್ತೇನೆ. ಅದೇ ನನಗೆ ಇಷ್ಟ. ನನಗೆ ಮೂಕನ ಪಾತ್ರ ಮಾಡಿ ಗೊತ್ತಿಲ್ಲ.’