ಅನಿಸಿಕೆ
ಮಾರುತೀಶ್ ಅಗ್ರಾರ
ನಾಳೆ ಒನಕೆ ಓಬವ್ವನ ಜಯಂತಿ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ, ರಾಜ್ಯಾದ್ಯಂತ ಒನಕೆ ಓಬವ್ವನ ಜಯಂತಿ ಆಚರಣೆಗೂ ಮುಂದಾಗಿದೆ. ಈ ಶುಭ ಸಂದರ್ಭದಲ್ಲಿ ದುರ್ಗದ ಭವಿಷ್ಯವನ್ನು ಕಾಪಾಡಿ, ದುರ್ಗೆ ಯಾಗಿ ಮೆರೆದಿದ್ದ ಓಬವ್ವನ ವೀರಗಾಥೆಯ ಪುನರ್ ಸ್ಮರಣೆ ಇಲ್ಲಿದೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಒನಕೆ ಓಬವ್ವನ ಜಯಂತಿ ಆಚರಣೆಗೆ ಮುಂದಾಗಿರುವುದು ಸ್ವಾಗತಾರ್ಹ. ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನವರ ಸರಕಾರ ಅಧಿಕಾರದಲ್ಲಿದ್ದಾಗ ಇದೇ ನವೆಂಬರ್ ತಿಂಗಳಲ್ಲಿ ಮತಾಂಧ, ಹಿಂದೂ ವಿರೋಧಿ ಟಿಪ್ಪು ಸುಲ್ತಾನ್ ಜಯಂತಿ ಮಾಡಿದ್ದು ಬಾರಿ ವಿವಾದಕ್ಕೆ ಕಾರಣವಾಗಿತ್ತು. 2018 ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ಟಿಪ್ಪು ಜಯಂತಿ ನಿರ್ಧಾರವೂ ಕಾರಣವೆಂದು ಅನೇಕ ರಾಜಕೀಯ ಪಂಡಿತರು ವಿಶ್ಲೇಷಿಸಿದ್ದರು.
ನಂತರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇzಗಲೂ ಟಿಪ್ಪು ಜಯಂತಿ ಆಚರಣೆ ಯನ್ನ ಮುಂದುವರಿಸಿದ್ದರು ಕುಮಾರ ಸ್ವಾಮಿ. ಆದರೆ ಸಮ್ಮಿಶ್ರ ಸರಕಾರ ಪತನವಾಗಿ ಯಡಿಯೂರಪ್ಪನವರ ಸರಕಾರ ಅಽಕಾರಕ್ಕೆ ಬಂದ ತಕ್ಷಣ ಟಿಪ್ಪು ಜಯಂತಿ ಆಚರಣೆ ರದ್ದು ಮಾಡಲಾಯಿತು. ಈಗ ಬೊಮ್ಮಾಯಿ ಸರಕಾರ ಟಿಪ್ಪು ಜಯಂತಿಗೆ ಸೆಡ್ಡು ಹೊಡೆದು, ಅದೇ ಟಿಪ್ಪುವಿನ ಅಪ್ಪ ಹೈದರ್‌ನ ಸೈನಿಕರನ್ನು ಬಗ್ಗು ಬಡಿದ ವೀರ ವನಿತೆ ಒನಕೆ ಓಬವ್ವನ ಜಯಂತಿಯನ್ನು ರಾಜ್ಯಾದ್ಯಂತ ಆಚರಣೆಗೆ ಮುಂದಾಗಿರು ವುದು ಆಕೆಗೆ ಸಲ್ಲಿಸುವ ಗೌರವವೇ ಸರಿ. ಈಗಾಗಲೇ ವು ಪಠ್ಯಪುಸ್ತಕಗಳಲ್ಲಿ ಕಥೆ-ಕಾದಂಬರಿಗಳಲ್ಲಿ ಹಾಗೂ ಅನೇಕ ಚಲನಚಿತ್ರ ಗಳಲ್ಲಿ ಓಬವ್ವನ ಸಾಹಸದ ಕಥೆಯನ್ನು ಕೇಳಿದ್ದೇವೆ.
ಆದರೂ ಆಕೆಯ ಜಯಂತಿ ಆಚರಣೆಯ ಈ ಶುಭ ಸಂದರ್ಭದಲ್ಲಿ ಓಬವ್ವನ ವೀರಗಾಥೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
18ನೇ ಶತಮಾನದ ಕಾಲಘಟ್ಟದಲ್ಲಿ ಮದಕರಿ ನಾಯಕರ ಅಧಿಕಾರಾವಧಿಯಲ್ಲಿ ದುರ್ಗ ಬಲಾಢ್ಯ ಹಾಗೂ ಬಲಿಷ್ಠ ಸೈನಿಕರ ನ್ನೊಳಗೊಂಡ ಏಳು ಸುತ್ತಿನ ಕೋಟೆಯ ನಾಡಾಗಿತ್ತು. ದುರ್ಗದ ಕೋಟೆ ಕಾಯುವ ಕಾವಲುಗಾರರ ಮುಖ್ಯಸ್ಥನಾಗಿದ್ದ ಮುದ್ದ ಹನುಮಪ್ಪನ ಮುದ್ದು ಮಡದಿಯೇ ಈ ಓಬವ್ವ. ಓದು-ಬರಹ ತಿಳಿಯದ ಮುಗ್ಧ ಹೆಂಗಸು. ಅದೇ ಕಾಲಘಟ್ಟದಲ್ಲಿ ಹೈದರಾಲಿ ಯೂ ದಕ್ಷಿಣದ ಪ್ರಮುಖ ರಾಜರಲ್ಲಿ ಒಬ್ಬನಾಗಿದ್ದ.
ಮತಾಂಧ ಹೈದರ್ ತನ್ನ ರಾಜ್ಯದ ವಿಸ್ತರಣೆಗಾಗಿ ಅಕ್ಕಪಕ್ಕದ ಸಣ್ಣಸಣ್ಣ ರಾಜರ ಮೇಲೆ ದಾಳಿ ನಡೆಸುವುದು ಹೈದರ್ ಸೇನೆಯ ಖಯಾಲಿಯಾಗಿತ್ತು. ದಾಳಿ ನಡೆಸುವ ವೇಳೆ ತನಗೇದುರಾಗುತ್ತಿದ್ದ ಹಳ್ಳಿಗಳನ್ನು ನಾಶಮಾಡಿ, ಅಲ್ಲಿನ ಜನರನ್ನು ಬರ್ಬರವಾಗಿ ಹತ್ಯೆಮಾಡಿ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ, ಅಲ್ಲಿನ ಆಸ್ತಿ-ಪಾಸ್ತಿಯನ್ನು ಕೊಳ್ಳೆ ಹೊಡೆಯುವುದು ಹೈದರನ ಹಾಗೂ ಆತನ ಸೈನ್ಯದ ಖಾಯಂ ಕೆಲಸವಾಗಿತ್ತು. ಆ ಸಮಯದಲ್ಲಿ ಹೈದರ ಸೇನೆಯ ಶಕ್ತಿ-ಸಾಮರ್ಥ್ಯ ನಾಡಿನೆಡೆ ಮನೆಮಾತಾಗಿತ್ತು. ಯಾಕೆಂದರೆ ಆತನ ಸೇನೆ ದಕ್ಷಿಣದ ಅತ್ಯಂತ ಪ್ರಬಲ ಹಾಗೂ ಬಲಾಢ್ಯದಿಂದ ಕೂಡಿದ ಸೈನಿಕರನ್ನೊಳಗೊಂಡಿತ್ತು.
ಮರಾಠ, ನಿಜಾಮ, ಆಂಗ್ಲರಂಥ ಘಟಾನುಘಟಿಗಳನ್ನು ಮೆಟ್ಟಿನಿಂತ ಬಲಾಢ್ಯ ಸೇನೆ ಹೈದರನದ್ದಾಗಿತ್ತು. ಅಂಥ ಸಮಯದಲ್ಲಿ ಯಾರಿಗೂ ಹೆದರದೆ, ಅಳುಕದೆ, ಸೋಲದೆ ನಿರ್ಭಯವಾಗಿ ಆಡಳಿತ ನಡೆಸುತ್ತಿದ್ದ ಸಂಸ್ಥಾನವೆಂದರೆ ಅದು ಚಿತ್ರದುರ್ಗ. ಮದಕರಿ ನಾಯಕರ ಅವಧಿಯಲ್ಲಿ ದುರ್ಗವೆಂದರೆ ಗಂಡುಮೆಟ್ಟಿನ ನಾಡು ಎಂದೇ ಹೆಸರಾಗಿತ್ತು. ಆ ಸಮಯದಲ್ಲಿ ಹೈದರನ ಕಣ್ಣು ದುರ್ಗದ ಮೇಲೆ ಬೀಳುತ್ತದೆ. ಇದನ್ನರಿತ ನಾಯಕರು ಹೈದರಾಲಿ ‘ನಮ್ಮ ಕೋಟೆಯನ್ನು ವಶಪಡಿಸಿಕೊಳ್ಳುವುದಕ್ಕೆ ಇದೇನು ಆತನಿದ್ದ ಅರಮನೆಯಲ್ಲ, ಇದು ಕಸ್ತೂರಿ ರಂಗಪ್ಪನಾಯಕರು ಆಳಿದ ಏಳುಸುತ್ತಿನ ಕೋಟೆ’ ಎಂದು ಅಬ್ಬರಿಸುತ್ತಾರೆ.
ಹೈದರಾಲಿ ಕೋಟೆಯನ್ನು ಮುತ್ತಿಗೆ ಹಾಕಲು ತರಹೇವಾರಿ ಪ್ರಯತ್ನಗಳನ್ನು ಮಾಡಿದರೂ ದುರ್ಗದ ಕೋಟೆಯ ಒಂದು ಕಲ್ಲನ್ನೂ ಅಡಿಸುವುದಕ್ಕೆ ಆತನ ಸೈನ್ಯದಿಂದ ಆಗುವುದಿಲ್ಲ. ಹೈದರನ ಸಿಡಿಮದ್ದು, ಫಿರಂಗಿ ಯಾವುದಕ್ಕೂ ದುರ್ಗದ ಕೋಟೆ ಎದೆ ಗುಂದಲಿಲ್ಲ. ಅಷ್ಟೊಂದು ಗಟ್ಟಿಮುಟ್ಟಾಗಿತ್ತು ದುರ್ಗದ ಮದಕರಿ ನಾಯಕರ ಕೋಟೆ.
ದುರ್ಗವನ್ನು ಗೆಲ್ಲಬೇಕಾದರೆ ಕುಟಿಲ ಮಾರ್ಗದಿಂದ ಮಾತ್ರ ಸಾಧ್ಯ ಎಂದುಕೊಂಡ ಹೈದರಾಲಿ ಅದಕ್ಕೆಂದೇ ಹೊಸ ತಂತ್ರ ಹೆಣೆದ. ದುರ್ಗದ ಪ್ರಧಾನಿಯಾಗಿದ್ದ ಕಳ್ಳಿನರಸಪ್ಪನ ಮಗನನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ದುರ್ಗದ ಕೋಟೆಯನ್ನು ಭೇದಿ ಸುವ ‘ಕಳ್ಳಗಿಂಡಿ(ಕಿಂಡಿ)ಯ ಮಾರ್ಗವನ್ನು ತಿಳಿದುಕೊಂಡ ಹೈದರಾಲಿ ಆ ಮಾರ್ಗದ ಮೂಲಕ ತನ್ನ ಸೈನಿಕರನ್ನು ಕೋಟೆ ಯೊಳಗೆ ನುಗ್ಗಿಸಲು ಮುಂದಾದ. ಅದೊಂದು ರಾತ್ರಿ ಹೈದರನ ಸೇನೆ ಕೋಟೆಯನ್ನು ಆಕ್ರಮಿಸಿಕೊಳ್ಳಲು ಆ ಕಳ್ಳಗಿಂಡಿಯ
ಮೂಲಕ ಧಾವಿಸುತ್ತಿದ್ದರು. ಇದನ್ನು ನೋಡಿದ ಓಬವ್ವ ಒಂದುಕ್ಷಣ ಭಯಭೀತಳಾದಳು.
ತಕ್ಷಣವೇ ಆಕೆಗೆ ಮನವರಿಕೆ ಆಯಿತು. ಹೈದರನ ಸೇನೆ ಕೋಟೆಯನ್ನು ಆಕ್ರಮಿಸಿಕೊಳ್ಳುತ್ತಿದೆ, ಈ ಮತಾಂಧರೇನಾದರೂ
ಕೋಟೆಯನ್ನು ಆಕ್ರಮಿಸಿಕೊಂಡರೆ ದುರ್ಗದ ಪಾಡೇನು?! ಎಂದು ಮನದ ದುರ್ಗದ ಭವಿಷ್ಯವನ್ನು ನೆನೆಸಿಕೊಂಡ ಓಬವ್ವ, ಈ
ಸಮಯದಲ್ಲಿ ತಾನೇ ದುರ್ಗವನ್ನು ರಕ್ಷಣೆ ಮಾಡಬೇಕೆಂದು ಪಣತೊಟ್ಟಳು. ಹತ್ತಿರದ ಇದ್ದ ಮನೆಯ ಬಳಿಗೆ ಓಡಿದ ಓಬವ್ವ
ಮನೆಯ ಮೂಲೆಯಲ್ಲಿದ್ದ ಒನಕೆ ಹಿಡದು ಆವೇಶದಿಂದ ಕಳ್ಳಗಿಂಡಿಯ ಬಳಿ ಬಂದು, ರಾಕ್ಷಸರನ್ನು ಸಂಹರಿಸುವ ಸಿಂಹಿಣಿಯಾಗಿ ನಿಂತಳು ತನ್ನ ಪ್ರಾಣವನ್ನೂ ಲೆಕ್ಕಿಸದೆ!
ಓಬವ್ವನ ಒನಕೆಯ ಏಟಿಗೆ ಹೈದರಾಲಿ ಸೈನಿಕರ ಒಂದೊಂದೇ ತಲೆಗಳು ಉರುಳಿ ಬಿದ್ದವು. ಓಬವ್ವನ ಸುತ್ತಲೂ ಹೆಣಗಳ ರಾಶಿ! ಓಬವ್ವ ತನ್ನ ಒನಕೆಯಿಂದ ಒಬ್ಬಂಟಿಯಾಗಿ ಹೋರಾಡಿ ಹೈದರಾಲಿ ಸೈನಿಕರ ರುಂಡಗಳನ್ನು ಚೆಂಡಾಡಿ ದುರ್ಗದ ರಕ್ಷಣೆ ಮಾಡಿದ್ದಳು. ಓಬವ್ವನ ಪರಾಕ್ರಮವನ್ನು ಕಣ್ಣಾರೆ ಕಂಡ ಮದಕರಿ ನಾಯಕರು ಓಬವ್ವಳನ್ನು ‘ರಣದುರ್ಗೆ’ಗೆ ಹೋಲಿಸಿ, ‘ನೀನು ದುರ್ಗವನ್ನು ಕಾಪಾಡಿದ ಮಹಾತಾಯಿ, ಇಷ್ಟು ದಿನ ನೀನು ನಿನ್ನ ಮಗುವಿಗೆ ಮಾತ್ರ ತಾಯಿಯಾಗಿದ್ದೆ. ಈಗ ನೀನು ದುರ್ಗದ, ಹಾಗೂ ಈ ನಾಡಿನ ತಾಯಿ’ ಎಂದು ಕರೆದು, ನಂತರ ಆಕೆಗೆ ವಂದಿಸಿ ಸಕಲ ಗೌರವಾದಿಗಳನ್ನು ಕೊಟ್ಟು ಸತ್ಕರಿಸಿದರು.
ದುರ್ದೈವವೆಂದರೆ ಮುಂದೆ ಹೈದರನ ಕುಟೀಲ ಪ್ರಯತ್ನಗಳಿಂದಾಗಿ ದುರ್ಗ ಹೈದರನ ವಶವಾಗಿ ಅನೇಕ ನೋವುಗಳನ್ನು ಅನು ಭವಿಸಬೇಕಾಗುತ್ತದೆ. ಆದರೇನಂತೆ ಓಬವ್ವನ ಹೆಸರು ಮಾತ್ರ ನಾಡಿನಾದ್ಯಂತ ಪಸರಿಸಿ ಎಲ್ಲರೂ ಆಕೆಯ ಶೌರ್ಯ, ಪರಾಕ್ರಮ ವನ್ನು ಕೊಂಡಾಡಿ ಆಕೆಯನ್ನು ಹೆಮ್ಮೆಯಿಂದ ‘ಒನಕೆ ಓಬವ್ವ’ ಎಂದು ಕರೆದದ್ದು ಇತಿಹಾಸ. ಈಗ ದುರ್ಗದ ಕೋಟೆಯ ಪ್ರತಿ ಕಲ್ಲೂಗಳು ಆಕೆಯ ಹೆಸರನ್ನು ನೆನಪಿಸುತ್ತವೆ. ಇಂಥ ವೀರವನಿತೆಯ ಜಯಂತಿ ಆಚರಣೆ ಮಾಡಲು ಹೊರಟಿರುವ ಬಸವರಾಜ ಬೊಮ್ಮಾಯಿ ಅವರ ಸರಕಾರದ ನಿರ್ಧಾರವನ್ನು ಅಭಿನಂದಿಸಲೇಬೇಕು.