ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Ramanand Sharma Column: ಬೆಂಗಳೂರಿನ ಸುಗಮ ಸಂಚಾರಕ್ಕೆ ನೂರೆಂಟು ಅಡ್ಡಿ

ಇತ್ತೀಚಿನ ವರ್ಷಗಳಲ್ಲಿ ಉತ್ತರ, ಪೂರ್ವ ಮತ್ತು ಈಶಾನ್ಯ ರಾಜ್ಯಗಳಿಂದ ಬಹುದೊಡ್ಡ ಸಂಖ್ಯೆ ಯಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ವಲಸಿಗರು ಧಾಂಗುಡಿ ಇಡುತ್ತಿದ್ದಾರೆ. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾದಂತೆ, ವಾಹನಗಳು ಹೆಚ್ಚಾದಂತೆ ಮೂಲಭೂತ ಸೌಕರ್ಯಗಳು ಅದೇ ಅನುಪಾತದಲ್ಲಿ ಹೆಚ್ಚಾಗಿವೆಯೇ ಎಂದು ನೋಡಿದರೆ ಉತ್ತರ ನಿರಾಶಾದಾಯಕವಾಗಿ ಕಾಣು ತ್ತದೆ

ಬೆಂಗಳೂರಿನ ಸುಗಮ ಸಂಚಾರಕ್ಕೆ ನೂರೆಂಟು ಅಡ್ಡಿ

Profile Ashok Nayak Feb 27, 2025 10:25 AM

ಪ್ರಸ್ತುತ

ರಮಾನಂದ ಶರ್ಮಾ

ಬೆಂಗಳೂರನ್ನು ಕೇವಲ 2-3 ವರ್ಷಗಳಲ್ಲಿ ಬದಲಾಯಿಸಲು, ಅದು ಭಗವಂತನೇ ಇಳಿದು ಬಂದರೂ ಸಾಧ್ಯವಿಲ್ಲದ ಕೆಲಸ ಎನ್ನುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರವರ ಅಭಿಪ್ರಾಯ ನೂರಕ್ಕೆ ನೂರರಷ್ಟು ಸತ್ಯ. ಇದು ಬಹುತೇಕ ಬೆಂಗಳೂರಿಗರ ಅನಿಸಿಕೆಯೂ ಹೌದು. ಅವರ ಅನಿಸಿಕೆ ಉಪಮುಖ್ಯಮಂತ್ರಿಗಳ ಬಾಯಲ್ಲಿ ಮಾರ್ಧನಿಸಿದೆ ಅಷ್ಟೇ, ಎಲ್ಲಾ ನಗರಗಳಂತೆ ಬೆಂಗಳೂರು ಕೂಡಾ ಬೆಳೆಯುತ್ತಿದೆ. ಅದರೆ,ಇದರ ಬೆಳವಣಿಗೆ ಊಹಿಸಲಾರ ದಷ್ಟು, ನಿಯಂತ್ರಣಕ್ಕೆ ನಿಲುಕದಷ್ಟು ವ್ಯಾಪಕವಾಗಿದೆ. ಹಾಗೆಯೇ ಅದರ ಸಮಸ್ಯೆ ಗಳೂ ಪರಿಹರಿಸಲಾರದಷ್ಟು ಸಂಕೀರ್ಣವಾಗಿವೆ.ಬೆಂಗಳೂರು ಎಷ್ಟು ಬೆಳೆದಿದೆ ಎಂದರೆ, ಸಂಚಾರ ದಟ್ಟನೆ ಎಷ್ಟು ಹೆಚ್ಚಿದೆ ಎಂದರೆ, 7-8 ತಾಸಿನ ಕಚೇರಿ ಕೆಲಸಕ್ಕೆ ಸುಮಾರು ಅದರ ಅರ್ಧ ದಷ್ಟು ಅವಧಿಯನ್ನು ಅಫೀಸಿಗೆ ಹೋಗಿ ಬರಲು ವ್ಯಯಿಸಬೇಕಾಗಿದೆ. ಬೆಂಗಳೂರಿನ ಜನಸಂಖ್ಯೆ 1.43 ಕೋಟಿ ಇದ್ದು, ಸುಮಾರು ಅಷ್ಟೇ ವಾಹನಗಳು ಇವೆ ಎನ್ನುವುದು ಆಶ್ಚ ರ್ಯ ಮತ್ತು ವಿಶೇಷ.

ಇತ್ತೀಚಿನ ವರ್ಷಗಳಲ್ಲಿ ಉತ್ತರ, ಪೂರ್ವ ಮತ್ತು ಈಶಾನ್ಯ ರಾಜ್ಯಗಳಿಂದ ಬಹುದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ವಲಸಿಗರು ಧಾಂಗುಡಿ ಇಡುತ್ತಿದ್ದಾರೆ. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾದಂತೆ, ವಾಹನಗಳು ಹೆಚ್ಚಾದಂತೆ ಮೂಲಭೂತ ಸೌಕರ್ಯಗಳು ಅದೇ ಅನುಪಾತದಲ್ಲಿ ಹೆಚ್ಚಾಗಿವೆಯೇ ಎಂದು ನೋಡಿದರೆ ಉತ್ತರ ನಿರಾಶಾದಾಯಕವಾಗಿ ಕಾಣುತ್ತದೆ.

ಇದನ್ನೂ ಓದಿ: Ramanand Sharma Column: ಉಚಿತ ಯೋಜನೆಗಳ ಬಗ್ಗೆ ಮರುಚಿಂತನೆಯಾಗಬಹುದೇ ?

ಸರಕಾರವು ಜನತೆಯ ಅನುಕೂಲಕ್ಕಾಗಿ ತೆರಿಗೆದಾರರ ಹಣವನ್ನು ನೀರಿನಂತೆ ಹಣವನ್ನು ಖರ್ಚು ಮಾಡಿದೆ. ಅದರೆ, ಸರಕಾರದಲ್ಲಿ, ಅಡಳಿತಗಾರರಲ್ಲಿ, ನೌಕರಶಾಹಿಯಲ್ಲಿ ಮತ್ತು ರಾಜಕಾರಣಿಗಳಲ್ಲಿ ದೂರದೃಷ್ಟಿಯ ಅಭಾವದಿಂದಾಗಿ ಯೋಜನೆಗಳ ಫಲ ನಿರೀಕ್ಷೆಯ ಮಟ್ಟದಲ್ಲಿ ಜನತೆಗೆ ದೊರಕಲಿಲ್ಲ.

ಎಲ್ಲಿ ದ್ವಿಪಥ ರಸ್ತೆ, ಮೇಲು ಸೇತುವೆ, ಕೆಳ ಸೇತುವೆ, ವರ್ತುಲ ರಸ್ತೆ, ಹೊರ ವರ್ತುಲ ರಸ್ತೆ, ಫೆರಿಪೆರಲ್ ರಸ್ತೆ ಮತ್ತು ನಿಲುಗಡೆ ಬೇಕು ಎನ್ನುವ ಬಗೆಗೆ ವೈಜ್ಞಾನಿಕ ಅಥವಾ ಶಾಸ್ತ್ರೀಯ ಆಧ್ಯಯನ ನಡೆಸದೆ,ಸಂತೆಗೆ ಮೂರು ಮೊಳ ಎನ್ನುವಂತೆ ಯೋಜನೆಗಳನ್ನು ಕಾರ್ಯಗತ ಮಾಡಲಾಗಿದೆ ಎನ್ನುವ ಅರೋಪದಲ್ಲಿ ಹುರುಳಿಲ್ಲದಿಲ್ಲ. ಅಡ್ಡರಸ್ತೆಗಳು ಮತ್ತು ಮುಖ್ಯ ರಸ್ತೆಗಳು ಸೇರುವ ವೃತ್ತದಲ್ಲಿ ದಟ್ಟನೆಯನ್ನು ನಿಯಂತ್ರಿಸಲು ಮೇಲು ಸೇತುವೆ ಮತ್ತು ಕೆಳ ಸೇತುವೆಗಳನ್ನು ನಗರದ ಅನೇಕ ಕಡೆ ನಿರ್ಮಿಸಲಾಗಿದೆ. ಅದರೂ ಹಲವು ಕಡೆ ವಾಹನ ಸವಾರರು ಸಿಗ್ನಲ್ ಗಾಗಿ ಕಾಯುವ ಅನಿವಾರ್ಯತೆ ಇದೆ.

ಮೇಲುಸೇತುವೆ ಮತ್ತು ಕೆಳ ಸೇತುವೆಗಳನ್ನು ನಿರ್ಮಿಸುವುದೇ ಸಿಗ್ನಲ್‌ಗಳನ್ನು ತಪ್ಪಿಸಿ ಸಮಯ ಉಳಿತಾಯ ಮಾಡಲು. ಲಕ್ಷಾಂತರ ಕೋಟಿ ಖರ್ಚು ಮಾಡಿ, ಸೇತುವೆಗಳನ್ನು ನಿರ್ಮಿಸಿದ ಮೇಲೂ ಸಿಗ್ನಲ್‌ಗೆ ಕಾಯುವುದಾದರೆ ಇವುಗಳ ನಿರ್ಮಾಣ ಮಾಡುವುದಾ ದರೂ ಏಕೆ? ಹೆಬ್ಬಾಳ, ರಿಚ್‌ಮಂಡ್ ಸರ್ಕಲ್- ಡಬಲ್ ರೋಡ್ ,ಜೆ.ಪಿ.ನಗರ 15ನೇ ಕ್ರಾಸ್, ಕೆ.ಆರ್ ಪುರಂ, ಸಿಲ್ಕ್ ಬೋರ್ಡ್ ಇವು ಕೆಲವು ಉದಾಹರಣೆಗಳು ಮಾತ್ರ. ಇಲ್ಲಿ ಸಿಗ್ನಲ್‌ಗಾಗಿ ವಾಹನಗಳು ಕಾಯುತ್ತಿರುವದನ್ನು ನೋಡಿದರೆ ಸಮಸ್ಯೆಯ ಅಳ, ಉದ್ದ ಮತ್ತು ಅಗಲದ ಅರ್ಥವಾಗುತ್ತದೆ.

ಸಿಗ್ನಲ್‌ಗಳ ಕಿರಿ ಕಿರಿ ಇಲ್ಲದೇ ಸಂಚಾರ ಸುಗಮವಾಗಿ, ಸರಾಗವಾಗಿ ನಡೆಯುವಂತೆ ಆಗಲು ಈ ಸೇತುವೆಗಳ ವಿನ್ಯಾಸವನ್ನು ಇನ್ನೂ ಜನಸ್ನೇಹಿ ಮಾಡಬಹುದಾಗಿತ್ತೇ ಏನೋ ಎನ್ನುವ ಚಿಂತನೆ ಕಾಣುತ್ತದೆ. ಇವುಗಳನ್ನು ವಿನ್ಯಾಸ ಮಾಡುವಾಗ ಸಾರ್ವಜನಿಕವಾಗಿ ಸಲಹೆ ಮತ್ತು ಸೂಚನೆಗಳನ್ನು ಕೇಳಿದ್ದರೆ ಇನ್ನೂ ಉತ್ತಮ ವಿನ್ಯಾಸಗಳು ದೊರಕುತ್ತಿದ್ದವೇನೋ? ಎಷ್ಟೋ ಕಡೆ ಟಿ.ಡಿ.ಅರ್ ಪ್ರಕರಣಗಳಿಂದ ರಸ್ತೆಗಳ ಅಗಲೀಕರಣ ಅಗುತ್ತಿಲ್ಲ.

ಹಾಗೆಯೇ ಅಗಲೀಕರಣ ಮತ್ತು ಹೊಸ ರಸ್ತೆಗೆ ಸಂಬಂಧಪಟ್ಟ ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ತಡೆಯಾe ಇದ್ದು ಅದರ ತೆರವಿಗೆ ನಿರಂತರ ಫಾಲೋ ಅಪ್ ಅಗ ಬೇಕು. ಅದು ಅಗುತ್ತಿಲ್ಲ ಎನ್ನುವ ದೂರುಗಳಲ್ಲಿ ಸತ್ಯವಿಲ್ಲದಿಲ್ಲ. ಇಕ್ಕಟ್ಟಾದ ರಸ್ತೆಯನ್ನು ಅಗಲ ಮಾಡಲು ಅಕ್ಕಪಕ್ಕದವರು ಯಾರೂ ಅಷ್ಟು ಸುಲಭವಾಗಿ ಜಾಗವನ್ನು ಬಿಟ್ಟು ಕೊಡುತ್ತಿಲ್ಲ.

ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದರೆ, ಇನ್ನು ಕೆಲವರು ಕೇಳುವ ಪರಿಹಾರ ಕೊಡಲಾರದಷ್ಟು ದೊಡ್ಡದಿರುತ್ತದೆ. ಕೆಲವು ಕಡೆ ಧಾರ್ಮಿಕ ಸ್ಥಳಗಳ ಅಡ್ಡಿ. ಅದಕ್ಕೂ ಮೇಲಾಗಿ ಯೋಜನೆಗಳ ಅನುಷ್ಟಾನದಲ್ಲಿ ಅಗುವ ವಿಳಂಬ ಯೋಜನೆಗಳ ಉದ್ದೇಶವನ್ನೇ ನಿರರ್ಥಕಗೊಳಿಸುತ್ತಿವೆ. ವಿವಿಧ ಇಲಾಖೆಗಳ ಮಧ್ಯ ಸಮನ್ವಯದ ಕೊರತೆಯಿಂದಾಗಿ ಕಟ್ಟುವುದು ಮತ್ತು ಒಡೆಯುವುದು ನಡೆಯುತ್ತಲೇ ಇರುತ್ತದೆ. ಯೋಜನೆಗಳಿಗ ಅನುಮತಿ ದೊರಕಿಸುವುದರಲ್ಲಿ, ಅದನ್ನು ಟೆಂಡರ್ ಮಾಡುವಲ್ಲಿ ಇರುವ ಉತ್ಸಾಹ, ಅವೇಗ, ಧಾವಂ ತವು ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುವುದರಲ್ಲಿ, ರಿಬ್ಬನ್ ಕಟ್ ಮಾಡು ವುದರಲ್ಲಿ ಕಾಣುವುದಿಲ್ಲ.

ವಿಧಾನ ಸೌಧದಿಂದ ನಾಲ್ಕೈದು ಕಿ. ಮಿ ದೂರವಿರುವ,ಬೆಂಗಳೂರಿನ ಪ್ರತಿಷ್ಠಿತರು ಅಡ್ಡಾ ಡುವ, ಹಲವು ಐಟಿ ಕಂಪನಿಗಳು ಲಾಗ್ ಇನ್ ಅಗಿರುವ ಕೋರಮಂಗಲಕ್ಕೆ ಹೆಬ್ಬಾಗಿಲು ಅಗಿರುವ ಕೋರಮಂಗಲ-ಈಜಿಪುರ ಮೇಲು ಸೇತುವೆ ಸುಮಾರು ಐದು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಇದು ಒಂದು ಉದಾಹರಣೆ ಮಾತ್ರ.

ಇಂಥಹ ಅದೆಷ್ಟು ಪ್ರಕರಣಗಳು ಇವೆಯೋ? ಎಷ್ಟೋ ಪ್ರಕರಣಗಳಲ್ಲಿ ಗುತ್ತಿಗೆದಾರರು ಹೊರರಾಜ್ಯದವರಾಗಿದ್ದು ಅವರು ಸಬ್ ಕಾಂಟ್ರಾಕ್ಟ್ ನೀಡಿ ಹೋಗುತ್ತಾರೆ ಎನ್ನುವ ದೂರೂ ಇದೆ.

ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದಿರು ವುದು ಸಮಸ್ಯೆಗಳು ಇನ್ನೂ ಉಲ್ಭಣವಾಗುವಂತೆ ಮಾಡಿದೆ. ಇಲ್ಲಿ ನೌಕರಶಾಹಿಗಳ ಅಡಳಿತ ನಡೆಯುತ್ತಿದೆ. ರಸ್ತೆ ಹೊಂಡಗಳು ಮತ್ತು ತ್ಯಾಜ್ಯ ವಿಲೇವಾರಿ ಇನ್ನೊಂದು ಬೃಹತ್ ಸಮಸ್ಯೆಯಾಗಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಸದಾ ಹೊಂಡಗಳನ್ನು ತುಂಬುತ್ತಿರುವುದು ಕಾಣುತ್ತದೆ.

ತುಂಬಿದ ಹೊಂಡಗಳು ಬೆಳಗಾಗುವುದರೊಳಗಾಗಿ ಪುನ: ಬಾಯಿ ತೆರೆದಿರುತ್ತವೆ. ಅದರೊಟ್ಟಿಗೆ ಅಕಾಲಿಕ ಮಳೆಯೂ ಸಮಸ್ಯೆಯನ್ನು ಬಿಗಡಾಯಿಸುತ್ತಿದೆ. ಅನುಭವದ ಆಧಾರದ ಮೇಲೆ ಹೊಂಡ ತುಂಬುವ ಓಬಿರಾಯನ ಕಾಲದ ವೈಖರಿ ಮತ್ತು ತಂತ್ರಜ್ಞಾನ ವನ್ನು ಬದಲಿಸುವ ನಿಟ್ಟಿನಲ್ಲಿ ಚಿಂತಿಸದಿರುವುದು ಇನ್ನೊಂದು ದುರಂತ.

ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು ೫೦೦೦ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರ ಸಂಗ್ರಹ ಮತ್ತು ವಿಲೇವಾರಿ ಬಿಬಿಎಂಪಿಗೆ ಸವಾಲಾಗಿದೆ. ತ್ಯಾಜ್ಯ ವಿಲೇವಾರಿಯಲ್ಲಿ ಭ್ರಷ್ಟಾ ಚಾರದ ಅರೋಪ ಕೂಡಾ ಇದೆ. ಒಂದು ಘನ ಉದ್ದೇಶದಿಂದ ಮನೆಬಾಗಿಲಿನಿಂದ ಕಸ ಮತ್ತು ತ್ಯಾಜ್ಯವನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಆರಂಭಿಸಿದರೂ, ಅದರ ವ್ಯವಸ್ಥಿತ ಬಳಕೆಯಾಗದೇ ಎಂದರಲ್ಲಿ ಕಸ ಚೆಲ್ಲುವ ಹುಚ್ಚಾಟ ನಡೆದೇ ಇದೆ.

ಬೆಂಗಳೂರಿನ ದುರಂತವೆಂದರೆ ಇಲ್ಲಿ ಮುಖ್ಯರಸ್ತೆಗಳು, ಅಡ್ಡರಸ್ತೆಗಳು, ಡಬಲ್ ರೋಡ್‌ ಗಳು, ರಿಂಗ್ ರೋಡ್, ಹೊರ ರಿಂಗ್ ರೋಡ್, ಫೆರಿಫೆರಲ್ ರೋಡ್, ನೈಸ್ ರೋಡ್, ರಾಜ್ಯ ಮತ್ತು ರಾಷ್ಟ್ರೀಯ ಹೆzರಿಗಳೆಲ್ಲವೂ ನಗರದಲ್ಲಿ ಕಾಣುತ್ತವೆ. ರಿಂಗ್ ರೋಡ್ ಎನ್ನುವ ಪರಿಕಲ್ಪನೆ ಇನ್ನೂ ಪೂರ್ಣವಾಗದೆ ಭಾರೀ ವಾಹನಗಳು ಮತ್ತು ಟ್ರಕ್ಕುಗಳು ನಗರದಲ್ಲಿ ಓಡಾಡುವುದನ್ನು ನೋಡಬಹುದು.

ನಗರದ ಟ್ರಾಫಿಕ್ ಸಮಸ್ಯೆಗೆ ರಾಮಬಾಣ ಎನ್ನುವ ಉಪನಗರ ರೈಲು ಸೌಲಭ್ಯ ಬೆಂಗ ಳೂರಿಗೆ ತುಂಬಾ ತಡವಾಗಿ ಬಂದಿದ್ದು. ಅದಿನ್ನೂ ಶೈಶಾವಾವಸ್ಥೆಯಲ್ಲಿದೆ. ಅದು ಜನತೆಯ ಸೇವೆಗೆ ದೊರಕಲು ಇನ್ನೂ ದಶಕಗಳೇ ಬೇಕು. ಮೆಟ್ರೋ 2011ರಲ್ಲಿ ಅರಂಭವಾದರೂ, ಎಲ್ಲಾ ಮೆಟ್ರೋ ರೂಟ್ ಗಳು ಬಳಕೆಗೆ ಲಭ್ಯವಾಗಲು ಇನ್ನೂ ವರ್ಷಗಳು ಬೇಕು. ಈ ಮಧ್ಯೆ ಸುರಂಗ ರಸ್ತೆ ಮತ್ತು ಡಬಲ್ ಡೆಕರ್ ರಸ್ತೆಗಳ ಮಾತು ಜೋರಾಗಿ ಕೇಳುತ್ತಿದ್ದು, ಪರ ವಿರೋಧ ರಾಜಕೀಯದಲ್ಲಿ ಅದು ವಿಳಂಬವಾಗುವ ಸಾಧ್ಯತೆ ಕಾಣುತ್ತದೆ.

ಬೆಂಗಳೂರಿನ ಇಂದಿನ ಸರಿಪಡಿಸಲಾಗದ ಸಮಸ್ಯೆ ಮುಖ್ಯ ಕಾರಣ ಜನಸಂಖ್ಯೆ, ದೂರ ದೃಷ್ಟಿ ಇಲ್ಲದ ಯೋಜನೆಗಳು, ವಲಸಿಗರ ಪ್ರವಾಹ , ಬೆಂಗಳೂರಿನಲ್ಲಿಯೇ ಅಡಳಿತ ಮತ್ತು ಕಚೇರಿಗಳ ಕೇಂದ್ರೀಕರಣ, ಎಲ್ಲವೂ ಬೆಂಗಳೂರಿನಲ್ಲಿ ಇರಬೇಕು ಎನ್ನುವ ಅಗೋಚರ ಒತ್ತಡ ಮತ್ತು ಬೆಂಗಳೂರು ಹೊರತಾಗಿ ಬೇರೆ ನಗರ ಪಟ್ಟಣಗಳನ್ನು ಮಾರ್ಕೆಟಿಂಗ್ ಮಾಡ ಲಾಗದ ಮನ ಸ್ಥಿತಿ ಮತ್ತು ಅಸಹಾಯಕತೆ. ಇವುಗಳನ್ನು ಸರಿಪಡಿಸಿದರೆ ಬೆಂಗಳೂರು ತಾನಾಗಿಯೇ ಸರಿಹೋಗುತ್ತದೆ. ಇದಕ್ಕೆ ರಾಜಕೀಯ ಇಚ್ಛಾ ಶಕ್ತಿ ಇದೆಯೇ ?

(ಲೇಖಕರು, ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)