ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ
ಒಂದು ದೇಶ ಒಂದು ಚುನಾವಣೆ’ ಈಗ ದೇಶದೆಡೆ ಕೇಳಿ ಬರುತ್ತಿರುವ ಕೂಗು, ಕಳೆದ ವಾರ ಕರ್ನಾಟಕದ ವಿಧಾನಸಭೆಯಲ್ಲಿ ಈ ವಿಷಯದ ಕುರಿತು ಚರ್ಚೆ ಆರಂಭವಾಗಿತ್ತು. ಕಾಂಗ್ರೆಸ್ ಈ ಚರ್ಚೆಯಲ್ಲಿ ಪಾಲ್ಗೊಳ್ಳದೆ, ಇದು ಪ್ರಜಾಪ್ರಭುತ್ವಕ್ಕೆ ಮಾರಕ ವೆಂದು ಕೂಗಾಡುವ ಮೂಲಕ ಸದನವನ್ನು ಬಹಿಷ್ಕರಿಸಿತ್ತು.
ವರ್ಷದ 365 ದಿವಸವೂ ಒಂದ ಒಂದು ಚುನಾವಣೆ ನಮ್ಮ ದೇಶದಲ್ಲಿ ನಡೆಯುತ್ತಿರುತ್ತದೆ. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ವಿಧಾನ ಸಭೆ, ಲೋಕಸಭೆ, ವಿಧಾನ ಪರಿಷತ್, ರಾಜ್ಯಸಭೆ, ಉಪಚುನಾವಣೆಗಳು, ಶಿಕ್ಷಕರ ಕ್ಷೇತ್ರದ ಚುನಾವಣೆ ಹೇಗೆ ಒಂದಲ್ಲ ಒಂದು ರೀತಿಯಲ್ಲಿ ಚುನಾವಣಾ ಆಯೋಗವಂತೂ ಪ್ರತಿನಿತ್ಯ ಕೆಲಸ ಮಾಡುತ್ತಲೇ ಇರುತ್ತದೆ.
ಭಾರತ ದೇಶದಲ್ಲಿ ವರ್ಷದ 365 ದಿವಸವು ನಿರಂತರವಾಗಿ ಕೆಲಸ ಮಾಡುವ ಸಂಸ್ಥೆಯೆಂದರೆ ಚುನಾವಣಾ ಆಯೋಗ. ಪ್ರತಿ ಯೊಂದು ಚುನಾವಣೆಯು ಸಹ ಆಯೋಗದ ಮೇಲ್ವಿಚಾರಣೆಯಲ್ಲಿಯೇ ನಡೆಯಬೇಕು. ಸಂವಿಧಾನಾತ್ಮಕವಾಗಿ ರಚನೆ ಯಾಗಿರುವ ಆಯೋಗವು ತನ್ನದೇ ಆದ ನಿಯಮಾವಳಿಗಳ ಅಡಿಯಲ್ಲಿ ಚುನಾವಣೆಯನ್ನು ನಡೆಸುತ್ತದೆ. ಪ್ರತಿಯೊಂದು ಚುನಾವಣೆಯೂ ಪಾರದರ್ಶಕ ಹಾಗೂ ನ್ಯಾಯಯುತವಾಗಿ ನಡೆಯಲು ಚುನಾವಣಾ ಆಯೋಗ ಹಗಲು ರಾತ್ರಿಯೆನ್ನದೆ ಕೆಲಸ
ಮಾಡುತ್ತದೆ. ನಮ್ಮ ಸಂವಿಧಾನದ ಮೂಲ ರಚನೆಯು ಅತ್ತ ಅಮೆರಿಕಾ ದೇಶದ ರೀತಿಯಲ್ಲಿ ಸಂಪೂರ್ಣ ‘ಫೆಡರಲ್
ವ್ಯವಸ್ಥೆ’ಯೂ ಅಲ್ಲ, ಬ್ರಿಟನ್ನಿನ ರೀತಿಯಲ್ಲಿ ‘ಸಂಪೂರ್ಣ ಏಕಪಕ್ಷೀಯ’ವೂ ಅಲ್ಲ.
ಕೆಲವೊಂದು ವಿಚಾರದಲ್ಲಿ ‘ಫೆಡರಲ್ ವ್ಯವಸ್ಥೆ’ ಮತ್ತೆ ಕೆಲವು ವಿಚಾರದಲ್ಲಿ ‘ಏಕಪಕ್ಷೀಯ’ ವ್ಯವಸ್ಥೆಯಲ್ಲಿದೆ. ಇಂತಹ ಸಂದರ್ಭ ದಲ್ಲಿ ಒಂದು ದೇಶ ಒಂದು ಚುನಾವಣೆ ಸಾಧ್ಯವೇ? ನಮ್ಮ ಸಂವಿಧಾನದಲ್ಲಿ ಕೆಲವೊಂದು ವಿಷಯಗಳ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲು ಸಂಪೂರ್ಣ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಲಾಗಿದೆ. ಮತ್ತೆ ಕೆಲವೊಂದು ವಿಷಯಗಳ ಬಗ್ಗೆ ಸಂಪೂರ್ಣ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಲಾಗಿದೆ.
ಇವೆರಡನ್ನೂ ಬಿಟ್ಟು ಮತ್ತೊಂದಷ್ಟು ವಿಷಯ ಗಳನ್ನು ಪಟ್ಟಿ ಮಾಡಿ, ಆ ವಿಷಯಗಳ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ‘ಕೇಂದ್ರ’ ಹಾಗೂ ‘ರಾಜ್ಯ’ ಸರಕಾರ ಇಬ್ಬರಿಗೂ ನೀಡಲಾಗಿದೆ. ಇಷ್ಟೊಂದು ಕ್ಲಿಷ್ಟಕರವಾದ ಸಂವಿಧಾನವನ್ನು ತಿದ್ದುಪಡಿ ಮಾಡಿ ‘ಒಂದು ದೇಶ ಒಂದು ಚುನಾವಣೆ’ಯನ್ನು ಮಾಡಬೇಕಿದೆ. ಒಳ್ಳೆಯ ವಿಚಾರಗಳಿಗೆ ಸಂವಿಧಾನವನ್ನು ತಿದ್ದುಪಡಿ
ಮಾಡುವುದರಲ್ಲಿ ತಪ್ಪಿಲ್ಲ, ಇಂದಿರಾ ಗಾಂಧಿಯ ರೀತಿಯಲ್ಲಿ ತನ್ನ ಸ್ವಾರ್ಥಕ್ಕೆ ದೇಶದ ಸಂವಿಧಾನವನ್ನು ತಿದ್ದುಪಡಿ ಮಾಡುವು ದನ್ನು ಯಾರೂ ಸಹ ಒಪ್ಪುವುದಿಲ್ಲ. ತನ್ನ ಸ್ವಾರ್ಥದ ಚುನಾವಣಾ ಅಕ್ರಮವನ್ನು ಮುಚ್ಚಿಹಾಕಲು ಇಂದಿರಾ ಗಾಂಧಿ ಅಂದು ಸಂವಿಧಾನವನ್ನು ತಿದ್ದುಪಡಿ ಮಾಡಿದರು. ಈಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಒಳಿತಿನ ದೃಷ್ಟಿಯಿಂದ ‘ಒಂದು ದೇಶ ಒಂದು ಚುನಾವಣೆ’ ಮಾಡಲು ಸಂವಿಧಾನವನ್ನು ತಿದ್ದುಪಡಿ ಮಾಡಬೇಕಿದೆ.
ದೇಶದ ಆರ್ಥಿಕತೆಯ ವೇಗವನ್ನು ಹೆಚ್ಚಿಸಲು ಒಂದು ದೇಶ ಒಂದು ಚುನಾವಣೆಯ ಅಗತ್ಯವಿದೆ. ಪ್ರತಿನಿತ್ಯವೂ ಒಂದಿಂದು ಚುನಾವಣೆ ನಡೆಯುತ್ತಿದ್ದರೆ ಆರಿಸಿ ಬಂದಂಥ ಸರಕಾರಗಳು ತಮ್ಮ ತಮ್ಮ ರಾಜ್ಯಗಳ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ಹರಿಸದೆ ಚುನಾವಣೆಯ ಮೇಲೆ ಗಮನ ಹರಿಸಬೇಕಾಗುತ್ತದೆ. ಅಭ್ಯರ್ಥಿಯ ಆಯ್ಕೆ, ಚುನಾವಣಾ ಪೂರ್ವ ತಯಾರಿ, ಮತದಾರರ ಪರಿಷ್ಕರಣ ಪಟ್ಟಿ, ಚುನಾವಣಾ ಪ್ರಣಾಳಿಕೆ, ಸಾರ್ವಜನಿಕ ಸಭೆಗಳು ಹೀಗೆ ಪ್ರತಿನಿತ್ಯವೂ ಕೇವಲ ಚುನಾವಣಾ ಪೂರ್ವಸಿದ್ಧತೆ ಯಲ್ಲಿಯೇ ಕಳೆದುಹೋಗುತ್ತದೆ.
ಸರಕಾರಿ ನೌಕರರು ತಾವು ತಮ್ಮ ದಿನನಿತ್ಯದ ಕೆಲಸ ಮಾಡುವ ಬದಲು ಚುನಾವಣಾ ಕೆಲಸದಲ್ಲಿಯೇ ನಿರತರಾಗಿರುತ್ತಾರೆ. ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಸರಕಾರಿ ನೌಕರರನ್ನು ನಗರ ಪಾಲಿಕೆ ಚುನಾವಣೆಗೂ ಬಳಸಲಾಗುತ್ತದೆ. ವಿಧಾನಸಭೆ ಚುನಾವಣೆಗೂ ಬಳಸಲಾಗುತ್ತದೆ. ಲೋಕಸಭಾ ಚುನಾವಣೆಗೂ ಬಳಸಲಾಗುತ್ತದೆ. ಒಂದೇ ಕೆಲಸವನ್ನು ಕನಿಷ್ಠವೆಂದರೂ ನಾಲ್ಕರಿಂದ ಐದು ಬಾರಿ ಮಾಡಬೇಕಾಗುತ್ತದೆ. ಈ ಕೆಲಸದ ಹಿಂದೆ ಸಾವಿರಾರು ಕೋಟಿಯ ಹಣವು ಖರ್ಚಾಗುತ್ತದೆ. ಸರಕಾರಿ ಶಾಲಾ ಶಿಕ್ಷಕರಿಗೆ ಚುನಾವಣೆ ಕೆಲಸವೆಂಬುದು ಒಂದು ರೀತಿಯ ‘ಅರೆಕಾಲಿಕ’ ಕೆಲಸವಾಗಿದೆ.
ಮಕ್ಕಳಿಗೆ ಬೇಸಿಗೆ ರಜ ಸಿಗುತ್ತದೆ. ಆದರೆ ಶಿಕ್ಷಕರಿಗೆ ರಜೆಯಿರುವುದಿಲ್ಲ. ಇಷ್ಟೆ ಪರಿಷ್ಕರಣೆಯಾದರೂ ಸಹ ಮತದಾರ ಪಟ್ಟಿಯಲ್ಲಿ ಹೆಸರಿಲ್ಲವೆಂದು ಮತದಾರರು ಚುನಾವಣೆಯ ದಿನದಂದು ಬೊಬ್ಬೆ ಇಡುವುದು ಕಡಿಮೆಯಾಗಿಲ್ಲ. ಪ್ರತಿಯೊಂದು ಚುನಾವಣೆಯಲ್ಲೂ ಶಾಂತಿ ಕಾಪಾಡಲು ಪೊಲೀಸರು ಹಾಗೂ ಅರೆಸೇನಾ ಪಡೆಗಳನ್ನು ಬಳಕೆ ಮಾಡಲಾಗುತ್ತದೆ. ಈ ಪಡೆಗಳಿಗೆ ನೀಡುವ ಸಂಬಳ, ಊಟದ ಖರ್ಚು, ವಸತಿಯ ಖರ್ಚು, ಓಡಾಡಲು ಬಳಕೆಯಾಗುವ ಪೆಟ್ರೋಲ್ ಖರ್ಚುಗಳು ಚುನಾವಣೆಗಳು
ಹೆಚ್ಚಾದಂತೆ ಹೆಚ್ಚುತ್ತಿರುತ್ತದೆ.
ಇದೆಲ್ಲವೂ ಯಾರ ಹಣ? ನಾವು ನೀವು ಸರಕಾರಕ್ಕೆ ಕಟ್ಟುವ ತೆರಿಗೆಯ ಹಣ. ನಮ್ಮ ತೆರಿಗೆಯ ಹಣವು ಈ ರೀತಿಯಲ್ಲಿ ಪದೇ ಪದೆ ಚುನಾವಣಾ ನೆಪದಲ್ಲಿ ಖರ್ಚು ಮಾಡುತ್ತಿದ್ದರೆ ದೇಶದ ಅಭಿವೃದ್ಧಿಗೆ ಹಣದ ಕೊರತೆ ಬೀಳುವುದಿಲ್ಲವೇ? ಹಣದ ಜತೆಗೆ ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ. ಕಳೆದುಕೊಂಡಂಥ ಸಮಯವಂತೂ ವಾಪಾಸ್ ಬರುವುದಿಲ್ಲ, ಈ ಸಮಯವನ್ನು ಸರಿಯಾಗಿ ಬಳಸಿಕೊಳ್ಳದೆ ಪದೇ ಪದೆ ಚುನಾವಣೆಗೋಸ್ಕರ ವ್ಯರ್ಥ ಮಾಡಿದರೆ ಅಭಿವೃದ್ಧಿಯು ಹೇಗೆ ತಾನೇ ಆದೀತು? ಒಂದು ಅಂದಾಜಿನ
ಪ್ರಕಾರ 2019ರ ಚುನಾವಣೆಯಲ್ಲಿ ಸುಮಾರು 55000 ಕೋಟಿಯಷ್ಟು ಹಣವನ್ನು ಖರ್ಚು ಮಾಡಲಾಗಿದೆ.
1998ರಲ್ಲಿ 9000 ಕೋಟಿಯಷ್ಟಿದ್ದಂಥ ಚುನಾವಣಾ ಖರ್ಚು ಇಪ್ಪತ್ತು ವರ್ಷಗಳಲ್ಲಿ ಆರು ಪಟ್ಟು ಏರಿಕೆಯಾಗಿದೆಯಂತೆ. ಈ
ಖರ್ಚಿನಲ್ಲಿ ಸರಕಾರದ ಖರ್ಚು ಮಾತ್ರವಲ್ಲದೇ ಅಕ್ರಮವಾಗಿ ಅಭ್ಯರ್ಥಿಗಳು ಮಾಡುವ ಖರ್ಚು ಸೇರಿದೆ, ಒಂದೇ ಒಂದು
ಚುನಾವಣೆಯಲ್ಲಿ ಈ ಮಟ್ಟಿನ ಹಣ ಖರ್ಚಾಗಿದೆಯೆಂದರೆ ಇನ್ನು ರಾಜ್ಯಗಳ ಚುನಾವಣೆಯಲ್ಲಿ ಅದೆಷ್ಟು ಹಣ ಖರ್ಚಾಗಿರಬೇಡ ನೀವೇ ಊಹಿಸಿಕೊಳ್ಳಿ. ಗ್ರಾಮ ಪಂಚಾಯತ್ ಚುನಾವಣೆಯಲ್ಲಂತೂ ಆಯಾ ಪಂಚಾಯಿತಿ ಗಳಿಗೆ ಬರುವ ಅನುದಾನದ ಆಧಾರದ ಮೇಲೆ ಅಭ್ಯರ್ಥಿಗಳು ಹಣವನ್ನು ಖರ್ಚು ಮಾಡುತ್ತಾರೆ. ಹೆಚ್ಚಿನ ಅನುಧಾನವಿರುವ ಪಂಚಾಯಿತಿಗಳಿಗೆ ಕೋಟಿಗಟ್ಟಲೆ ಹಣವನ್ನು ಅಭ್ಯರ್ಥಿಗಳು ಖರ್ಚು ಮಾಡುತ್ತಾರೆ. ಚುನಾವಣೆಗಳು ಹೆಚ್ಚಾದಂತೆ ಭ್ರಷ್ಟಾಚಾರವೂ ಹೆಚ್ಚಾಗುತ್ತದೆ.
ಚುನಾವಣೆಯಲ್ಲಿ ಮತದಾರನಿಗೆ ಆಮಿಷವೊಡ್ಡಿ ವೋಟು ಪಡೆಯುವವರು ಹಣದ ಅವಶ್ಯಕತೆಗಾಗಿ ಹೆಚ್ಚಿನ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಗೆಲ್ಲಲೇಬೇಕೆಂಬ ಹಠದಿಂದ ತಮ್ಮ ಆಡಳಿತಾವಧಿಯಲ್ಲಿ ಹೆಚ್ಚಿನ ಭ್ರಷ್ಟಾಚಾರ ಮಾಡುತ್ತಾರೆ. ಚುನಾವಣೆಗಳು
ಹೆಚ್ಚಾದಂತೆ ಮತದಾರರಿಗೆ ಆಮಿಷವೊಡ್ಡಲು ಬೇಕಿರುವ ಹಣದ ಅವಶ್ಯಕತೆಯೂ ಹೆಚ್ಚಾಗುತ್ತದೆ. ‘ಒಂದು ದೇಶ ಒಂದು
ಚುನಾವಣೆ’ಯನ್ನು ನಡೆಸಿದರೆ ಆಮಿಷವೂ ಕಡಿಮೆ ಯಾಗುತ್ತದೆ, ಅಕ್ರಮ ಖರ್ಚು ಕಡಿಮೆಯಾಗುತ್ತದೆ, ಭ್ರಷ್ಟಾಚಾರವೂ ಸಹ ಕಡಿಮೆಯಾಗುತ್ತದೆ.
ಒಂದಂತೂ ಸ್ಪಷ್ಟ, ಹೆಚ್ಚಿನ ಭ್ರಷ್ಟಾಚಾರದ ಹಣವು ಬಳಕೆಯಾಗುವುದು ಚುನಾವಣೆಯಲ್ಲಿ ಮಾತ್ರ. ಮತದಾರರು ಒಂದು ದಿನದಲ್ಲಿ ಸಿಗುವ ಹಣದ ಆಸೆಗಾಗಿ ಹೆಚ್ಚಿನ ಭ್ರಷ್ಟಾಚಾರವಾಗುವಂತೆ ಮಾಡುತ್ತಾರೆ. ‘ಒಂದು ದೇಶ ಒಂದು ಚುನಾವಣೆ’ ಮಾಡುವುದು ಅಷ್ಟು ಸುಲಭವೇ? ಹೌದು ಸುಲಭವಲ್ಲ, ಆದರೆ ಅಸಾಧ್ಯವಾದುದೇನಲ್ಲ. ಭಾರತದಲ್ಲಿ ಅಸಾಧ್ಯವೆಂದು ಕೊಂಡಂಥ ಹಲವಾರು ಜಟಿಲ ಸಮಸ್ಯೆಗಳು ನೋಡನೋಡುತ್ತಲೇ ಕಳೆದ ಏಳು ವರ್ಷಗಳಿಂದ ಬಗೆಹರಿದಿರುವಾಗ ಇದು ಅಸಾಧ್ಯವೇನು ಅಲ್ಲ. ಈಗಾಗಲೇ ಅಧಿಕಾರದಲ್ಲಿರುವ ರಾಜ್ಯ ಸರಕಾರಗಳನ್ನು ಬೇಗನೆ ವಜಾ ಮಾಡಬೇಕಾದಂಥ ಪರಿಸ್ಥಿತಿ ಬರಬಹುದು ಅಥವಾ ಅವಧಿ ಮುಗಿಯುವ ಸರಕಾರಗಳ ಅಧಿಕಾರವನ್ನು ರಾಜ್ಯಪಾಲರ ಅಥವಾ ರಾಷ್ಟ್ರಪತಿಗಳ ಆಡಳಿತಕ್ಕೆ
ಒಳಪಡಿಸುವಂಥ ಪರಿಸ್ಥಿತಿ ಬರಬಹುದು ಅಥವಾ ಅರ್ಧದಲ್ಲಿಯೇ ಅವಿಶ್ವಾಸ ಮಂಡನ ನಿರ್ಣಯದಿಂದಲೋ ಅಥವಾ ಪಕ್ಷಗಳ ಬೆಂಬಲ ಹಿಂಪಡೆದಿದ್ದರಿಂದ ಉರುಳುವ ಸರಕಾರವನ್ನು ಪುನಃ ಚುನಾಯಿಸುವ ಪರಿಸ್ಥಿತಿ ಬರಬಹುದು, ಹೀಗೆ ಹತ್ತು ಹಲವಾರು ಸಮಸ್ಯೆಗಳಿವೆ.
ಎಲ್ಲದಕ್ಕಿಂತಲೂ ಮೊದಲು ‘ಒಂದು ದೇಶ ಒಂದು ಚುನಾವಣೆ’ ಯನ್ನು ನಡೆಸಲು ಸಂವಿಧಾನದ ತಿದ್ದುಪಡಿಯ ಅವಶ್ಯಕತೆ ಯಿದೆ. ಸಂವಿಧಾನವನ್ನು ತಿದ್ದುಪಡಿ ಮಾಡಬೇಕೆಂದರೆ ಸರ್ವ ಪಕ್ಷಗಳೂ ಒಪ್ಪಿಗೆಯನ್ನು ನೀಡಬೇಕು. ನೀಡಿದ ನಂತರವಷ್ಟೇ ಸಂವಿಧಾನದ ತಿದ್ದುಪಡಿ ಸಾಧ್ಯ. ಪ್ರಾದೇಶಿಕ ಪಕ್ಷಗಳು ಅಷ್ಟು ಸುಲಭವಾಗಿ ಒಪ್ಪಿಗೆಯನ್ನು ನೀಡುವುದಿಲ್ಲ. ಯಾಕೆಂದರೆ ಅಲ್ಪ
ಸ್ವಲ್ಪ ಸೀಟುಗಳನ್ನು ಗೆದ್ದು ಬೆಂಬಲವನ್ನು ನೀಡಿ ಸದಾ ಸರಕಾರಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳ ಬಯಸುವ ಪ್ರಾದೇಶಿಕ ಪಕ್ಷಗಳು ಒಂದೇ ಚುನಾವಣೆ ನಡೆದರೆ ಎಲ್ಲಿ ತಮ್ಮ ಅಸ್ಥಿತತ್ವಕ್ಕೆ ಧಕ್ಕೆ ಬರುತ್ತದೆಯೆಂಬ ಭಯ ಇವರನ್ನು ಸದಾ ಕಾಡುತ್ತಿರುತ್ತದೆ.
ಒಮ್ಮೆಲೇ ‘ರಾಜ್ಯ’ ಹಾಗೂ ‘ಕೇಂದ್ರ’ ಸರಕಾರಕ್ಕೆ ಚುನಾವಣೆ ನಡೆದರೆ ಮತದಾರನ ಮನಸ್ಸು ಎಲ್ಲಿ ತಮ್ಮ ಪ್ರಾದೇಶಿಕ ಪಕ್ಷದಿಂದ ರಾಷ್ಟ್ರೀಯ ಪಕ್ಷದೆಡೆಗೆ ವಾಲುತ್ತದೆಯೆಂಬ ಭಯ ಅವರನ್ನು ಕಾಡುತ್ತಿರುತ್ತದೆ. ಆದರೆ ಈ ಹಿಂದೆಯೂ ಹಲವು ಬಾರಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಒಟ್ಟಿಗೆ ಚುನಾವಣೆಯಾಗಿರುವ ಹಲವು ಉದಾಹರಣೆಗಳಿವೆ. ಒಟ್ಟಿಗೆ ನಡೆದ ಚುನಾವಣೆಯಲ್ಲಿ
ಮತದಾರ ರಾಜ್ಯ ಹಾಗೂ ಕೇಂದ್ರಕ್ಕೆ ಬೇರೆ ಬೇರೆ ಪಕ್ಷಗಳಿಗೆ ಮತ ಹಾಕಿದ ಉದಾಹರಣೆಯಿದೆ.
‘ಒಡಿಶಾ’ ರಾಜ್ಯದಲ್ಲಿ 2019ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯ ಹಾಗೂ ಕೇಂದ್ರಕ್ಕೆ ಬೇರೆಯದ್ದೇ ಮಾದರಿಯ ಮತದಾನ ವನ್ನು ಗಮನಿಸಿದ್ದೇವೆ. 1952ರಿಂದ 1967ವರೆಗೂ ಕೇಂದ್ರ ಹಾಗೂ ರಾಜ್ಯದ ಚುನಾವಣೆಗಳು ಒಟ್ಟಿಗೆ ನಡೆದಿದ್ದವು. ಈ ಅವಧಿಯಲ್ಲಿ ಅಧಿಕಾರದಲ್ಲಿ ಇದ್ದದ್ದು ಕಾಂಗ್ರೆಸ್ ಸರಕಾರ. ನೆಹರು ಪ್ರಧಾನಮಂತ್ರಿಯಾಗಿದ್ದವರೆಗೂ ಒಟ್ಟಿಗೆ ಚುನಾವಣೆಗಳು ನಡೆಯು ತ್ತಿದ್ದವು. ತಮ್ಮ ಅಧಿಕಾರವಧಿಯಲ್ಲಿಯೇ ‘ಒಂದು ದೇಶ ಒಂದು ಚುನಾವಣೆ’ ನಡೆದಿರುವಾಗ ಕಾಂಗ್ರೆಸ್ ಇಂದು ಅದನ್ನೇ ಮೋದಿ ಮಾಡಲು ಹೊರಟರೆ ವಿರೋಧಿಸುತ್ತದೆ.
ಹಲವು ತಜ್ಞರು ‘ಒಂದು ದೇಶ ಒಂದು ಚುನಾವಣೆ’ ಅಷ್ಟು ಸುಲಭವಲ್ಲವೆಂದು ಹೇಳುತ್ತಿದಾರೆ ಹೊರತು, ಅಸಾಧ್ಯವಲ್ಲ
ವೆಂದು ಹೇಳುತ್ತಿಲ್ಲ. ‘ರಷ್ಯಾ’ ದೇಶದ ಅಧ್ಯಕ್ಷ ‘ಪುಟಿನ್’ ತನ್ನ ದೇಶದ ಸಂವಿಧಾನವನ್ನು ತಿದ್ದುಪಡಿ ಮಾಡಿ 2036ರವೆರೆಗೂ
ತಾನೇ ಅಧ್ಯಕ್ಷನೆಂದು ಘೋಷಿಸಿಕೊಂಡಿದ್ದಾನೆ. ಚೀನಾ ದೇಶದ ಅಧ್ಯಕ್ಷ ‘ಕ್ಸಿ ಜಿಂಗ್ಪಿಂಗ್’ ಸಂವಿಧಾನವನ್ನು ತಿದ್ದುಪಡಿ ಮಾಡಿ
ಕೇವಲ ಒಂದು ರಾಜಕೀಯ ಪಕ್ಷ ಮಾತ್ರ ಅಸ್ತಿತ್ವದಲ್ಲಿರುವಂತೆ ನೋಡಿಕೊಂಡಿದ್ದಾನೆ.
ಚೀನಾದಲ್ಲಿ ನಡೆದ ಚುನಾವಣೆಯಲ್ಲಿ ಶೇ.99ರಷ್ಟು ಮತವು ಒಂದೇ ಪಕ್ಷಕ್ಕೆ ಬಿದ್ದಿತ್ತು, ಇವನ ನಂತರ ಇವನದ್ದೇ ಪಕ್ಷದಿಂದ ಮತ್ತೊಬ್ಬ ಹುಟ್ಟುತ್ತಾನೆ. ಚೀನಾದಲ್ಲಿ ವಿರೋಧ ಪಕ್ಷವೆಂಬುದೇ ಇಲ್ಲ. ಇಂತಹ ಚೀನಾ ದೇಶದ ಪರವಾಗಿ ನಮ್ಮ ದೇಶದ ಕಮ್ಯುನಿಸ್ಟರು ನಿಲ್ಲುತ್ತಾರೆ. ನಮ್ಮಲ್ಲಿನ ಪ್ರಜಾಪ್ರಭುತ್ವವನ್ನು ಅಣಕಿಸಿ, ಸಂವಿಧಾನ ಅಪಾಯ ದಲ್ಲಿದೆಯೆಂದು ಬೊಬ್ಬೆ ಹೊಡೆಯುತ್ತಾರೆ. ನರೇಂದ್ರ ಮೋದಿ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ‘ಒಂದು ದೇಶ ಒಂದು ಚುನಾವಣೆ’ ಮಾಡಬಯಸಿದರೆ ಇವರಿಗೆ ಸರ್ವಾಧಿಕಾರತ್ವ ಎದ್ದು ಕಾಣುತ್ತದೆ.
ಆದರೆ ತಮಗಿಷ್ಟ ಬಂದಂತೆ ಸಂವಿಧಾನವನ್ನು ತಿದ್ದುಪಡಿ ಮಾಡಿಕೊಂಡಿರುವ ಚೀನಾ ಹಾಗು ರಷ್ಯಾ ದೇಶಗಳು ಇವರಿಗೆ ಸ್ವರ್ಗದಂತೆ ಕಾಣುತ್ತದೆ. ಭಾರತದ ಸಂವಿಧಾನದ ಪರಿಚ್ಛಯ 356ರನ್ನು ಬಳಸಿಕೊಂಡು ಒಮ್ಮೆಲೆ ಒಂಬತ್ತು ರಾಜ್ಯ ಸರಕಾರ ಗಳನ್ನು ವಜಾ ಮಾಡಿದ ಪಕ್ಷವಿಂದು ‘ಸರ್ವಾಧಿಕಾರ’ದ ಬಗ್ಗೆ ಪಾಠಹೇಳುತ್ತಿದೆ. ‘ಒಂದು ದೇಶ ಒಂದು ಚುನಾವಣೆ’ ನಡೆಸ ಬೇಕೆಂದರೆ ಸಂವಿಧಾನದ ಪರಿಚ್ಛಯ 83, 85, 172, 174 ಹಾಗು 356ರ ತಿದ್ದುಪಡಿ ಮಾಡಬೇಕಾಗಬಹುದು.
ಪರಿಚ್ಛಯ 83ರನ್ವಯ ಸಂಸತ್ತಿನ ಈಗಿನ ಅವಧಿಯು ಐದು ವರ್ಷವಿರುವುದರಿಂದ ಈ ಅವಧಿಯನ್ನು ಕಡಿಮೆ ಅಥವಾ ಹೆಚ್ಚು (1976ರಲ್ಲಿ ಇಂದಿರಾ ಗಾಂಧಿ ತಮ್ಮ ಸ್ವಾರ್ಥಕ್ಕೆ ಮಾಡಿದ್ದರು) ಮಾಡಬೇಕಾಗಬಹುದು. ಸಂವಿಧಾನದ ಪರಿಚ್ಛಯ 85ರನ್ವಯ ರಾಷ್ಟ್ರಪತಿಗಳು ಕರೆಯುವ ಸಂಸತ್ತಿನ ಅಧಿವೇಶನದ ಅವಧಿಯ ನಡುವೆ ಇರಬೇಕಾದಂಥ ಸಮಯವನ್ನು ತಿದ್ದುಪಡಿ ಮಾಡಬೇಕಾಗಬಹುದು. ಎರಡು ಅಧಿವೇಶನದ ನಡುವೆ ಆರು ತಿಂಗಳಿಗಿಂತ
ಹೆಚ್ಚಿನ ಅಂತರವಿರಬಾರದು. ಪರಿಚ್ಛಯ 172ರನ್ವಯ ರಾಜ್ಯ ಸರಕಾರದ ‘ವಿಧಾನಸಭೆ’ಯ ಅವಧಿಯು 5 ವರ್ಷವಾಗಿರು
ವುದರಿಂದ ಒಂದು ದೇಶ ಒಂದು ಚುನಾವಣೆ ನಡೆಸಬೇಕಾದರೆ, ತಿದ್ದುಪಡಿಯನ್ನು ಮಾಡಿ ರಾಜ್ಯಗಳ ಬಾಕಿ ಇರುವ ಅಧಿಕಾರದ
ಅವಧಿಯನ್ನು ಕಡಿಮೆ ಮಾಡಬೇಕಾಗುತ್ತದೆ ಅಥವಾ ಅವಧಿಯನ್ನು ಹೆಚ್ಚು ಮಾಡಲು ಸಂವಿಧಾನದಲ್ಲಿ ಕೇವಲ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಅವಕಾಶವಿರುವುದರಿಂದ ಕೆಲವು ರಾಜ್ಯ ಸರಕಾರಗಳ ಅವಧಿಯನ್ನು ಹೆಚ್ಚು ಮಾಡಲೂ ಸಹ ತಿದ್ದುಪಡಿಯ ಅವಶ್ಯಕತೆಯಿದೆ. ಅದೇ ರೀತಿ ಪರಿಚ್ಛಯ 174ರನ್ವಯ ರಾಜ್ಯ ಸರಕಾರಗಳ ವಿಧಾನಸಭಾ ಕಲಾಪಗಳ ನಡುವೆ ಇರಬೇಕಾದ ಅವಧಿಯನ್ನೂ ಸಹ ತಿದ್ದುಪಡಿ ಮಾಡಬೇಕಾಗುತ್ತದೆ.
ಸಂವಿಧಾನದ ಪರಿಚ್ಛಯ 356ರನ್ವಯ ರಾಜ್ಯ ಸರಕಾರದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿಯು ಎದುರಾದಾಗ, ರಾಜ್ಯಪಾಲರು ರಾಷ್ಟ್ರ ಪತಿಯವರಿಗೆ ವರದಿ ಸಲ್ಲಿಸಿ ವಿಧಾನಸಭೆಯನ್ನು ವಿಸರ್ಜಿಸುವ ಹಕ್ಕನ್ನು ಹೊಂದಿzರೆ. ರಾಜ್ಯಪಾಲರು ಸಲ್ಲಿಸಿದ ವರದಿಯನ್ನು ‘ಸಂಸತ್ತಿನಲ್ಲಿ’ ಅಂಗೀಕರಿಸಿದ ಮೇಲೆ ವಿಧಾನಸಭೆಯನ್ನು ವಿಸರ್ಜಿಸಿ ರಾಜ್ಯಪಾಲರು ರಾಜ್ಯದ ಆಡಳಿತವನ್ನು ತಮ್ಮ ಆಡಳಿತಕ್ಕೆ ತೆಗೆದುಕೊಳ್ಳಬಹುದು.
ಸಾಮಾನ್ಯವಾಗಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳನ್ನು ಆಡಳಿತ ಪಕ್ಷದವರೇ ಚುನಾಯಿಸುವುದರಿಂದ 1976ರಲ್ಲಿ ಈ
ಪರಿಚ್ಛಯವನ್ನು ಇಂದಿರಾಗಾಂಧಿ ತಮ್ಮ ಸ್ವಾರ್ಥಕ್ಕೆ ತುಂಬಾ ಚೆನ್ನಾಗಿ ಬಳಸಿಕೊಂಡರು. ‘ಒಂದು ದೇಶ ಒಂದು ಚುನಾವಣೆ’
ನಡೆಯಬೇಕಾದರೆ ಈ ಪರಿಚ್ಛಯವನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ ಅವಧಿ ಮುಗಿಯದ ವಿಧಾನಸಭೆಯನ್ನು ವಿಸರ್ಜಿಸಬೇಕಾಗುತ್ತದೆ ಅಥವಾ ಅವಧಿ ಮುಗಿದ ವಿಧಾನಸಭೆಯನ್ನು ಒಟ್ಟಿಗೆ ಚುನಾವಣೆ ನಡೆಸುವವರೆಗೂ ರಾಜ್ಯಪಾಲರ ಆಡಳಿತಕ್ಕೆ ನೀಡಬೇಕಾಗುತ್ತದೆ. ಈ ಎರಡೂ ತಿದ್ದುಪಡಿಗಳು ಕೇವಲ ತಾತ್ಕಾಲಿಕವಾದ್ದರಿಂದ ತಿದ್ದುಪಡಿಯಾದ ಮೇಲೆ, ಒಟ್ಟಿಗೆ ಚುನಾವಣೆಯನ್ನು ನಡೆಸಿ ಪುನಃ ಹಳೆಯ ನಿಬಂಧನೆಗಳನ್ನು ವಾಪಾಸ್ ತರಬೇಕಾಗುತ್ತದೆ.
ಅರ್ಧದಲ್ಲಿ ಅವಿಶ್ವಾಸ ಮಂಡನೆಯಿಂದ ಉರುಳುವ ಸರಕಾರವನ್ನು ಒಟ್ಟಿಗೆ ನಡೆಸುವ ಚುನಾವಣೆಯವರೆಗೂ ಮುಂದುವರಿ ಸಲು ರಾಜ್ಯಪಾಲರಿಗೆ ಅಧಿಕಾರವನ್ನು ನೀಡುವ ತಿದ್ದುಪಡಿಯನ್ನು ಮಾಡಬೇಕಾಗುತ್ತದೆ ಅಥವಾ ಕೂಡಲೇ ಚುನಾವಣೆಯನ್ನು ಮಾಡಿ ವಿಧಾನಸಭೆಯ ಅವಧಿಯನ್ನು ಐದು ವರ್ಷಗಳಿಗಿಂತ ಕಡಿಮೆ ಅವಧಿಗೆ ಇಳಿಸಬೇಕಾಗುತ್ತದೆ. ಇಷ್ಟೆ ಮಾಡಿದರೆ ಮಾತ್ರ
ಒಂದು ದೇಶ ಒಂದು ಚುನಾವಣೆಯನ್ನು ಮಾಡಲು ಸಾಧ್ಯ. ಇವುಗಳಲ್ಲದೇ ಇನ್ನು ಹಲವು ಪರಿಚ್ಛಯಗಳ ತಿದ್ದುಪಡಿಯನ್ನು ಮಾಡಬೇಕಾದಂಥ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ. ಯಾವುದೇ ಕಾನೂನನ್ನು ಮಾಡಬೇಕಾದರೆ ಸಂವಿಧಾನಾ ತ್ಮಕವಾಗಿ ಮಾಡಬೇಕು. ಇಲ್ಲವಾದಲ್ಲಿ, ಆ ಕಾನೂನು ಊರ್ಜಿತವಾಗುವುದಿಲ್ಲ. ಅಪ್ಪಿ ತಪ್ಪಿ ಒಂದೇ ಒಂದು ತಪ್ಪನ್ನು ಮಾಡಿದರೆ ಮರುದಿನವೇ ಒಂದಷ್ಟು ವಕೀಲರು ನ್ಯಾಯಾಲಕ್ಕೆ ಅರ್ಜಿ ಹಾಕಿ ಇದು ಸರಿಯಿಲ್ಲವೆಂದು ಹೇಳಲು ತಯಾರಾಗಿರುತ್ತಾರೆ.
ಸಂವಿಧಾನ ತಿದ್ದುಪಡಿಯೆಂಬ ವಿಷಯವನ್ನೇ ಮುಂದೆ ಇಟ್ಟುಕೊಂಡು ವೋಟಿಗಾಗಿ ಜನರ ಭಾವನೆಯೊಟ್ಟಿಗೆ ಆಟವಾಡುವ ಕಾಂಗ್ರೆಸ್ ಅಷ್ಟು ಸುಲಭವಾಗಿ ತಿದ್ದುಪಡಿಯನ್ನು ಒಪ್ಪುವುದಿಲ್ಲ. ‘ಅನಂತ್ ಕುಮಾರ್ ಹೆಗ್ಡೆ’ ತಮ್ಮ ಭಾಷಣದಲ್ಲಿ ಸಂವಿಧಾನದ ತಿದ್ದುಪಡಿಯ ಬಗ್ಗೆ ಮಾತನಾಡಿದ್ದಕ್ಕೆ ದೊಡ್ಡದೊಂದು ಬಂಡೆಯೇ ತಲೆಯ ಮೇಲೆ ಬಿದ್ದಂತೆ ಸುಳ್ಳು ಸುದ್ದಿಯನ್ನು ಕಾಂಗ್ರೆಸ್ ಹಬ್ಬಿಸಿತ್ತು, ಅದರ ಫಲವಾಗಿ ಅವರು ಸಂಸತ್ತಿನಲ್ಲಿ ಕ್ಷಮೆ ಕೇಳಬೇಕಾಯಿತು.
ಅವರು ಕ್ಷಮೆ ಕೇಳಿದರು ಯಾಕೆಂದರೆ ಅವರು ಸ್ವಾರ್ಥಕ್ಕಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಿದ ಇಂದಿರಾ ಗಾಂಧಿಯಲ್ಲ.
ದೇಶದೆಡೆ ವಿವಿಧ ಹಂತಗಳಲ್ಲಿ ಚುನಾವಣೆಗಳು ನಡೆಯುವುದರಿಂದ ‘ನೀತಿ ಸಂಹಿತೆ’ಯು ಯಾವಾಗಲು ಎದರೊಂದು ಕಡೆ ಜಾರಿಯಲ್ಲಿರುತ್ತದೆ, ಇದು ಒಮ್ಮೆ ಜಾರಿಯಲ್ಲಿದ್ದರೆ ಆ ಪಂಚಾಯಿತಿ ಅಥವಾ ಜಿಲ್ಲೆ ಅಥವಾ ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಲಾಗುವುದಿಲ್ಲ. ನೋಡನೋಡುತ್ತಲೇ ಒಂದು ತಿಂಗಳು ಯಾವ ಕೆಲಸಗಳೂ ಆಗುವುದಿಲ್ಲ.
ಸರಕಾರದಿಂದ ಬಂದಂಥ ಹಣವು ಬ್ಯಾಂಕಿನಲ್ಲಿರುತ್ತದೆ. ಅದನ್ನು ಬಳಸಲಾಗದೆ ರಸ್ತೆಯಲ್ಲಿನ ಗುಂಡಿಗಳು ಮುಚ್ಚದೆ ಹಾಗೆಯೇ ಇರುತ್ತವೆ. ಏನೇ ಆದರೂ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ‘ಒಂದು ದೇಶ ಒಂದು ಚುನಾವಣೆ’ಯ ಚರ್ಚೆಯಂತೂ ಶುರು ವಾಗಬೇಕಿದೆ. ಎಲ್ಲ ರಾಜಕೀಯ ಪಕ್ಷಗಳು ಒಮ್ಮೆಲೇ ಒಪ್ಪಿಗೆ ನೀಡುವುದಿಲ್ಲ. ತಮ್ಮದೇ ಆದ ಕಾರ್ಯಸೂಚಿಯಲ್ಲಿ ಕೆಲಸ ಮಾಡುವ ಪಕ್ಷಗಳು ಎಲ್ಲಿ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆಯೆಂಬ ಭಯದಿಂದ ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಆದರೆ ಒಮ್ಮೆ ಇದರ ಬಗ್ಗೆ ದೇಶದಲ್ಲಿ ಚರ್ಚೆ ಶುರುವಾದರೆ, ಇದರಿಂದಾಗುವ ಲಾಭಗಳು, ನಷ್ಟಗಳು, ಅಭಿವೃದ್ಧಿಗೆ ಮಾರಕವಾಗುವ ಅಂಶಗಳು, ಉಳಿತಾಯವಾಗುವ ಹಣ, ಉಳಿತಾಯವಾಗುವ ಸಮಯ ಎಲ್ಲದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟ ದಲ್ಲಿ ಚರ್ಚೆಯೊಂದು ಶುರುವಾಗುತ್ತದೆ.
ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಕೈ ಜೋಡಿಸಿದರೆ ಈ ಕೆಲಸ ಸುಲಭವಾಗಿ ಆಗುತ್ತದೆ. ಜೋಡಿಸದ ಪಕ್ಷದಲ್ಲಿ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಶುರುವಾದರೆ ವಿಧಿಯಿಲ್ಲದೆ ಎಲ್ಲರೂ ಸಹ ಒಪ್ಪಿಕೊಳ್ಳಲೇ ಬೇಕಾದಂಥ ಪರಿಸ್ಥಿತಿ ಬರುತ್ತದೆ.