Friday, 13th December 2024

ಒಂದು ವರ್ಣ ಚಿತ್ರ, ಒಂದು ಪುರಾಣ ಕಥೆ, ಒಂದು ಪ್ರಕೃತಿ ವಿಸ್ಮಯ

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅದೊಂದು ಸುಂದರ ತೈಲವರ್ಣ ಚಿತ್ರ. ಚಿತ್ರಕಾವ್ಯ ಎಂದೇ ಬಣ್ಣಿಸಬಹುದಾದ ಕಲಾಕೃತಿ. ಕಾವ್ಯದ ರಸಭಾವವಷ್ಟನ್ನೂ ಬಣ್ಣಗಳಲ್ಲದ್ದಿದ ಕುಂಚದಿಂದ ಸೆರೆ ಹಿಡಿದಿರು ವಂತೆ ಭಾಸವಾಗುತ್ತದೆ. ಅಂತಹ ಕೈಚಳಕ ತೋರಿದ ಕಲಾವಿದ ಜಾನ್ ವಿಲಿಯಂವಾಟರ್ ಹೌಸ್ (1849-1917)ಎಂಬ ಪ್ರಖ್ಯಾತ ಬ್ರಿಟಿಷ್ ಚಿತ್ರಕಾರ.

ಆತ ಆ ಚಿತ್ರಕ್ಕೆ ಕೊಟ್ಟಿರುವ ಶೀರ್ಷಿಕೆ The Danaides ಎಂದು. ಡೆನೌಸ್ ಎಂಬ ಗ್ರೀಕ್ ಅರಸನ ಪುತ್ರಿಯರು (ರಾಜಕುಮಾರಿಯರು) ಎಂಬರ್ಥದಲ್ಲಿ ಆ ಹೆಸರು. ವಾಟರ್‌ಹೌಸ್‌ನ ಪೇಂಟಿಂಗ್‌ಗಳಲ್ಲಿ ಹೆಚ್ಚಾಗಿ ಗ್ರೀಕ್ ಮತ್ತು ರೋಮನ್ ಪುರಾಣಗಳಲ್ಲಿನ ಸ್ತ್ರೀಪಾತ್ರಗಳೇ ಚಿತ್ರದ ಪ್ರಧಾನವಸ್ತು. ಪ್ರಸ್ತುತ ಚಿತ್ರದಲ್ಲಿ ಬಿಂಬಿತ ವಾಗಿರುವುದೂ ಸ್ವಾರಸ್ಯಕರವಾದ, ರೋಮಾಂಚಕಾರಿಯೂ ಕರುಣಾಜನಕವೂ ಎನ್ನಬಹುದಾದ ಒಂದು ಗ್ರೀಕ್ ಪುರಾಣಕಥೆ.

ಆ ಕಥೆ ಹೀಗಿದೆ: ಒಂದಾನೊಂದು ಕಾಲದಲ್ಲಿ ಈಜಿಪ್ಟ್ ದೇಶವನ್ನು ಬೇಲಸ್ ಎಂಬ ಅರಸನು ಆಳುತ್ತಿದ್ದನು. ಈತ ಗ್ರೀಕ್ ದೇವತೆ ‘ಇಯೊ’ಳವಂಶದವನು. ಬೇಲಸ್‌ನಿಗೆ ಅವಳಿ ಗಂಡು ಮಕ್ಕಳು. ಡೆನೌಸ್ ಮತ್ತು ಎಜಿಪ್ಟಸ್ ಎಂದು ಅವರ ಹೆಸರು. ತನ್ನ ಕೊನೆಯ ದಿನಗಳು ಸಮೀಪಿಸುತ್ತಿವೆ ಎಂದರಿತ ಬೇಲಸ್ ಮಕ್ಕಳಿಬ್ಬರನ್ನೂ ಕರೆದು ಸಾಮ್ರಾಜ್ಯದ ಸಮ ಪಾಲುಮಾಡಿ ಡೆನೌಸ್‌ನಿಗೆ ಲಿಬಿಯಾ ರಾಜ್ಯವನ್ನೂ ಎಜಿಪ್ಟಸ್‌ನಿಗೆ ಅರೇಬಿಯಾ ರಾಜ್ಯವನ್ನೂ ಆಳುವಂತೆ ನಿರ್ದೇಶಿಸುತ್ತಾನೆ. ಅವರು ಸುಖಶಾಂತಿ ಯಿಂದ ನೆಲೆಸಲಿ ಎಂದು ಹರಸಿ ಕಣ್ಮುಚ್ಚುತ್ತಾನೆ.

ಸುಖಶಾಂತಿಯೇ ನೆಲೆಸಬೇಕಿತ್ತು ಹೌದು, ಆದರೆ ಸೋದರರಿಬ್ಬರಲ್ಲಿ ಕಾಲಕ್ರಮೇಣ ಅಸೂಯೆಯ ಕಿಡಿ ಹೊತ್ತಿಕೊಳ್ಳುತ್ತದೆ. ಪರಸ್ಪರ ರಾಜ್ಯಗಳನ್ನು ಲಪಟಾಯಿ ಸುವ ದುರಾಸೆ ಹುಟ್ಟಿಕೊಳ್ಳುತ್ತದೆ. ಅಧಿಕಾರದಾಹ ಎಂದರೆ ಹಾಗೆಯೇ ಅಲ್ಲವೇ? ಸಿಕ್ಕಷ್ಟೂ ಇನ್ನೂ ಬೇಕು ಎಂಬ ಹಪಹಪಿ. ಏತನ್ಮಧ್ಯೇ ಡೆನೌಸ್ ಮದುವೆಯಾಗಿ ನಾಲ್ವರು ಹೆಂಡತಿ ಯರಿಂದ ಐವತ್ತು ಮಕ್ಕಳನ್ನು ಪಡೆಯುತ್ತಾನೆ. ಐವತ್ತೂ ಹೆಣ್ಣು ಮಕ್ಕಳು. ಅವರೇ ‘ಡೆನೈಡ್ಸ್’ ಎಂದು ಕರೆಯಲ್ಪಟ್ಟ ಸುಂದರಿಯರು. ಇತ್ತ ಎಜಿಪ್ಟಸ್ ಕೂಡ ಮದುವೆ ಮಾಡಿಕೊಂಡು ಒಬ್ಬಳೇ ಪತ್ನಿಯಿಂದ ಐವತ್ತು ಗಂಡುಮಕ್ಕಳನ್ನು ಪಡೆಯುತ್ತಾನೆ.

ಆಟಪಾಠ ಗಳಲ್ಲಿ, ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡ ಮಕ್ಕಳು ನೋಡ ನೋಡುತ್ತಿದ್ದಂತೆಯೇ ಬೆಳೆದು ದೊಡ್ಡವರಾಗಿಬಿಡುತ್ತಾರೆ. ಹೀಗಿರಲು ಎಜಿಪ್ಟಸ್‌ನಿಗೆ ಒಂದು ದೂ(ದು)ರಾಲೋಚನೆ ಹೊಳೆಯುತ್ತದೆ. ತನ್ನ ಐವತ್ತು ಗಂಡು ಮಕ್ಕಳಿಗೆ ಡೆನೌಸ್‌ನ ಐವತ್ತು ಹೆಣ್ಣು ಮಕ್ಕಳ ಜತೆ ಮದುವೆಮಾಡಿಸಿದರೆ ಹೇಗೆ!? ಇದರಿಂದ ಡೆನೌಸ್‌ನ ರಾಜ್ಯವನ್ನು ಕಬಳಿಸುವ ಮಾರ್ಗ ಸಲೀಸಾಗುತ್ತದೆ ಎನ್ನುವುದು ಎಜಿಪ್ಟಸ್‌ನ ಸಂಚು. ಇದು ಡೆನೌಸ್‌ನಿಗೆ ಹೇಗೋ ಗೊತ್ತಾಗಿಬಿಡುತ್ತದೆ. ಈ ಏರ್ಪಾಡು ಅವನಿಗೆ ಸ್ವಲ್ಪವೂ ಇಷ್ಟವಿಲ್ಲ.

ಒಂದನೆಯದಾಗಿ ಎಲ್ಲ ಐವತ್ತು ಹೆಣ್ಣು ಮಕ್ಕಳ ಮದುವೆಯನ್ನು ಒಟ್ಟಿಗೇ ಮಾಡಿ ಅವರೆಲ್ಲರನ್ನೂ ಕಳಿಸಿಕೊಟ್ಟ ಮೇಲೆ ಅರಮನೆಯ ಅಂತಃಪುರ ಬಿಕೋ ಎನ್ನುವುದು ಅವನಿಂದ ಕಲ್ಪಿಸಲಿಕ್ಕೂ ಆಗುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ಎಜಿಪ್ಟಸ್‌ನ ಆ ಐವತ್ತೂ ಗಂಡುಮಕ್ಕಳು ಮಹಾ ಪುಂಡರು, ಕೆಟ್ಟ ಸ್ವಭಾವದವರು ಎಂದು
ಗೊತ್ತಿದ್ದರಿಂದ ಅವರನ್ನು ಅಳಿಯಂದಿರನ್ನಾಗಿಸುವುದಕ್ಕೆ ಆತ ಸಿದ್ಧನಿರುವುದಿಲ್ಲ. ಈಗೇನು ಮಾಡುವುದು? ವಿರೋಧ ವ್ಯಕ್ತಪಡಿಸಿದರೆ ಎಜಿಪ್ಟಸ್ ತನ್ನ ಗಂಡು ಮಕ್ಕಳೊಂದಿಗೆ ಸೈನ್ಯವನ್ನೂ ಕರೆತಂದು ಯುದ್ಧ ಮಾಡಬಹುದು. ರಕ್ತಪಾತವಾಗಬಹುದು.

ಅದು ದೇವರಿಗೂ ಇಷ್ಟವಾಗಲಿಕ್ಕಿಲ್ಲ. ಹಾಗಾಗಿ ಶಾಂತಿಯಿಂದಿರ ಬೇಕಾದರೆ ರಾಜ್ಯವನ್ನು ತಾನಾಗಿಯೇ ಎಜಿಪ್ಟಸ್‌ನಿಗೆ ಒಪ್ಪಿಸಿ, ತನ್ನ ಹೆಣ್ಣುಮಕ್ಕಳನ್ನೆಲ್ಲ ಕರೆದು ಕೊಂಡು ದೇಶಾಂತರ ವಲಸೆ ಹೋಗಬೇಕು. ಅದೊಂದೇ ತನಗಿರುವ ದಾರಿ ಎಂದುಕೊಳ್ಳುತ್ತಾನೆ ಡೆನೌಸ್. ಪಲಾಯನದ ತಯಾರಿಯ ಮೊದಲ ಹಂತವಾಗಿ ಒಂದು ದೊಡ್ಡಹಡಗನ್ನು ಕಟ್ಟುತ್ತಾನೆ. ಐವತ್ತು ಮಂದಿ ಹುಟ್ಟು ಹಾಕುತ್ತ ಮುನ್ನಡೆಸಲಿಕ್ಕಾಗುವಂತೆ ಇರುತ್ತದೆ ಆ ಹಡಗು. ರಾತೋ ರಾತ್ರಿ ಎಂಬಂತೆ ತನ್ನ ಐವತ್ತು ಹೆಣ್ಮಕ್ಕಳನ್ನೂ ಕಟ್ಟಿಕೊಂಡು ಗ್ರೀಸ್ ದೇಶದತ್ತ ಹಡಗಿನಲ್ಲಿ ಹೊರಟೇಬಿಡುತ್ತಾನೆ ಡೆನೌಸ್.

ದಿನಗಟ್ಟಲೆ ಪಯಣದ ಬಳಿಕ ಅವರೆಲ್ಲ ಗ್ರೀಸ್ ದೇಶದ ಆರ್ಗೊಸ್ ಪಟ್ಟಣವನ್ನು ತಲುಪುತ್ತಾರೆ. ಅದು ಡೆನೌಸ್‌ನ ಮುತ್ತಜ್ಜಿ ‘ಇಯೊ’ಳ ಜನ್ಮಸ್ಥಳ. ಆರ್ಗೊಸ್ ಪಟ್ಟಣವನ್ನು ಆಗ ಗೆಲನೊರಾಸ್ ಎಂಬ ರಾಜ ಆಳುತ್ತಿದ್ದನು. ಡೆನೌಸ್ ತನ್ನ ರಾಜ್ಯವನ್ನೇನೋ ಎಜಿಪ್ಟಸ್‌ನಿಗೆ ಬಿಟ್ಟುಬಂದಿದ್ದನು, ಆದರೂ ರಕ್ತಗತವಾಗಿರುವ
ಅಽಕಾರ ದಾಹ, ಸಿಂಹಾಸನದ ಮೋಹ ಸುಲಭವಾಗಿ ಹೋಗುತ್ತದೆಯೇ? ಆರ್ಗೊಸ್ ಪಟ್ಟಣದ ಆಧಿಪತ್ಯ ತನಗೆ ಸೇರ ಬೇಕೆಂದು ಆತ ಗೆಲನೊರಾಸ್‌ನ ಸಿಂಹಾಸನದ ಮೇಲೆ ಕಣ್ಣಿಟ್ಟನು.

ತಾನು ‘ಇಯೊ’ಳ ವಂಶಸ್ಥನೂ ಆಗಿರುವುದರಿಂದ ತಾನೇ ಆ ಪೀಠಕ್ಕೆ ಸಮರ್ಥ ಉತ್ತರಾಽಕಾರಿ ಎಂದು ಸಾರಿದನು. ಅದೇ ಹೊತ್ತಿಗೆ ಒಂದು ತೋಳವು ಆರ್ಗೊಸ್ ಪಟ್ಟಣವನ್ನು ಪ್ರವೇಶಿಸಿ ಅಲ್ಲಿನ ಒಂದು ಬಲಶಾಲಿ ಎತ್ತನ್ನು ಸಿಗಿದು ಕೊಲ್ಲುತ್ತದೆ. ಇದೇನೋ ಶುಭಶಕುನವೇ ಇರಬೇಕು ಎಂದುಕೊಂಡ ಆರ್ಗೊಸ್ ಪ್ರಜೆಗಳು
ಗೆಲನೊರಾಸ್‌ನನ್ನು ಸಿಂಹಾಸನದಿಂದಿಳಿಸಿ ಡೆನೌಸ್‌ನನ್ನೇ ತಮ್ಮ ರಾಜನೆಂದು ಒಪ್ಪಿಕೊಳ್ಳುತ್ತಾರೆ. ದೈವೇಚ್ಛೆಯೇ ಹಾಗೆ ಇರಬಹುದು ಎಂದುಕೊಳ್ಳುತ್ತಾರೆ. ಆರ್ಗೊಸ್ ಪಟ್ಟಣಕ್ಕೆ ಅಧಿಪತಿಯಾದ ಡೆನೌಸ್ ತನ್ನ ಐವತ್ತು ಮಂದಿ ಹೆಣ್ಮಕ್ಕಳೊಂದಿಗೆ ಸುಖವಾಗಿಜೀವನ ನಡೆಸುತ್ತಾನೆ. ಆಗಲಾದರೂ ಸುಖಶಾಂತಿ ನೆಲೆಸಿತೇ? ಇಲ್ಲ! ಒಂದು ದಿನ ಆರ್ಗೊಸ್ ಪಟ್ಟಣ ತೀರಕ್ಕೆ ಐವತ್ತು ಹುಟ್ಟುಗಳ ಇನ್ನೊಂದು ಹಡಗು ಬಂದು ಲಂಗರು ಹೂಡಿತು. ಅದರಲ್ಲಿದ್ದವರು ಬೇರಾರೂ ಅಲ್ಲ, ಎಜಿಪ್ಟಸ್‌ನ ಐವತ್ತು ಗಂಡುಮಕ್ಕಳು! ಡೆನೌಸ್ ಎಲ್ಲಿದ್ದಾನೆಂದು ಪತ್ತೆಹಚ್ಚಿ ಅವನ ಸಂಪತ್ತನ್ನು ವಶಪಡಿಸಿಕೊಳ್ಳುವಂತೆ ಎಜಿಪ್ಟಸ್ ತನ್ನ ಮಕ್ಕಳನ್ನು ಕಳಿಸಿದ್ದನು.

‘ನಿನ್ನ ಅಧಿಕಾರಕ್ಕೇನೂ ಕುಂದು ತರುವುದಿಲ್ಲ, ಈಗಲಾದರೂ ಮಕ್ಕಳನ್ನು ನಮಗೆ ಮದುವೆಮಾಡಿಕೊಡು’ ಎಂದು ಕೇಳಿಕೊಳ್ಳುತ್ತಾರೆ ಆ ರಾಜಕುಮಾರರು. ಡೆನೌಸ್‌ಗೆ ಈಗ ಮತ್ತೊಮ್ಮೆ ಇಬ್ಬಂದಿಯ ಸನ್ನಿವೇಶ. ಯುದ್ಧವಾದರೆ ಆರ್ಗೊಸ್ ಪಟ್ಟಣದ ಅಮಾಯಕ ಪ್ರಜೆಗಳು ಸಾವುನೋವಿಗೆ ಈಡಾಗುತ್ತಾರೆ. ಹಾಗಂತ ಶರಣಾಗುವುದಕ್ಕೂ ಮನಸ್ಸಿಲ್ಲ. ಕೊನೆಗೂ ಹೆಣ್ಮಕ್ಕಳ ಮದುವೆ ಮಾಡಿಕೊಡುತ್ತೇನೆಂದು ಒಪ್ಪಿಕೊಳ್ಳುತ್ತಾನೆ. ವಿಜೃಂಭಣೆಯೇನೂ ಬೇಡ, ವಿವಾಹ ಸಮಾರಂಭ ಸರಳವಾಗಿಯೇ ಇರಲಿ ಎಂದು ಬಿನ್ನವಿಸಿಕೊಳ್ಳುತ್ತಾನೆ.

ಹಾಗೆಯೇ ಆಗಲಿ ಎನ್ನುತ್ತಾರೆ ಎಜಿಪ್ಟಸ್‌ನ ವೀರಸುಪುತ್ರರು. ಡೆನೌಸ್‌ನ ಮನದಲ್ಲಿ ಯೋಜನೆ ಬೇರೆಯೇ ಇರುತ್ತದೆ. ಮದುವೆ ಯ ದಿನ ತನ್ನ ಹೆಣ್ಮಕ್ಕಳನೆಲ್ಲ ಕರೆದುತನ್ನ ಮನದಲ್ಲಿರುವುದನ್ನು ಅವರಿಗೆ ವಿವರಿಸುತ್ತಾನೆ. ಅವರೆಲ್ಲರಿಗೂ ಒಂದೊಂದು ಖಡ್ಗವನ್ನೂ ಕೊಡುತ್ತಾನೆ. ಶೋಭನ ರಾತ್ರಿಯಲ್ಲಿ ಅವರೆಲ್ಲರೂ ತಂತಮ್ಮ ಗಂಡಂದಿರನ್ನು ಖಡ್ಗದಿಂದ ಇರಿದು ಕೊಂದು ಮುಗಿಸಬೇಕು. ಅಬ್ಬಾ! ಎಜಿಪ್ಟಸ್‌ನದಕ್ಕಿಂತಲೂ ಹೇಯವಾದ ಸಂಚು ಡೆನೌಸ್‌ನದು! ಪಾಪ, ಆ ಹೆಣ್ಮಕ್ಕಳೂ ತಂದೆಗೆ ಎದುರುತ್ತರ ಕೊಡುವ ಸ್ಥಿತಿಯಲ್ಲಿರುವುದಿಲ್ಲ.

ಆಗಿನ ಕಾಲದಲ್ಲಿ ತಂದೆ ಹೇಳಿದ್ದನ್ನು ಮಕ್ಕಳು (ವಿಶೇಷವಾಗಿ ಹೆಣ್ಮಕ್ಕಳು) ಕಟ್ಟುನಿಟ್ಟಾಗಿ ಪಾಲಿಸಬೇಕಿತ್ತು, ಇಲ್ಲವಾದರೆ ಬಾಳುಗೋಳು ಮಾಡಿಕೊಂಡಂತೆಯೇ. ಆವತ್ತು ರಾತ್ರಿ ಹಾಗೆಯೇ ಆಯಿತು. ಸಿಂಗರಿಸಿದ ಶೃಂಗಾರ ಮಂಚಗಳು ಘೋರಹತ್ಯಾಕಾಂಡಕ್ಕೆ ಸಾಕ್ಷಿಯಾದವು. ಐವತ್ತರಲ್ಲಿ ನಲವತ್ತೊಂಬತ್ತು ವಧುಗಳು ಅಪ್ಪನ ಆಜ್ಞೆಯನ್ನು ಶಿರಸಾವಹಿಸಿ ತಮ್ಮ ತಮ್ಮ ಗಂಡಂದಿರನ್ನು ಇರಿದುಕೊಂದರು. ಆರ್ಗೊಸ್ ಪಟ್ಟಣದ ದಕ್ಷಿಣ ಭಾಗದಲ್ಲಿ ಸರೋವರಗಳಿದ್ದ ಲೆರ್ಮಾ ಪ್ರದೇಶ ದಲ್ಲಿ ರಾತೋರಾತ್ರಿಯೇ ಆ ಶವಗಳನ್ನೆಲ್ಲ ಪುರಜನರಿಗೆ ಗೊತ್ತಾಗದಂತೆ ಹೂಳಲಾಯ್ತು.

ಹೈಪರ್ಮ್‌ನೆಸ್ಟ್ರಾ ಎಂಬ ಒಬ್ಬ ವಧು ಮಾತ್ರ ಏನಾದರಾಗಲಿ ತಾನೇ ಕೈಯಾರೆ ವಿಧವೆಯಾಗಿಸಿ ಕೊಳ್ಳುವ ಹೀನ ಕೃತ್ಯ ಎಸಗಲಾರೆ ಎಂದು ಕೊಂಡು ಧೈರ್ಯ ದಿಂದಲೇ ತಂದೆಯ ಆಜ್ಞೆಯನ್ನು ಉಲ್ಲಂಘಿಸಿದಳು. ತನಗೆ ಸಿಕ್ಕ ಗಂಡಲಿನ್ಸಿಯಸ್‌ನ ಮೇಲೆ ಅವಳಿಗೆ ಕರುಣೆ ಉಕ್ಕಿಬಂದುದಷ್ಟೇ ಅಲ್ಲ, ಅವನ ಸುಂದರ ರೂಪ, ಕಟ್ಟುಮಸ್ತಾದ ಶರೀರವನ್ನು ಕಂಡ ಆಕೆ ಮೋಹಪರವಶಳಾದಳು. ಮೊದಲರಾತ್ರಿಯ ರಸಾನುಭವದಲ್ಲಿ ಅವರಿಬ್ಬರೂ ಮಿಂದೆದ್ದರು. ತನ್ನ ಯೋಜನೆ ತೊಂಬ ತ್ತೆಂಟು ಪ್ರತಿಶತದಷ್ಟು ಸಫಲವಾದರೂ ಇದೊಂದು ಎಡವಟ್ಟಾಯಿತೆಂದು ಡೆನೌಸ್ ಪರಿತಪಿಸಿದನು.

ಆಜ್ಞೆ ಉಲ್ಲಂಘಿಸಿದ್ದಕ್ಕಾಗಿ ಹೈಪರ್ಮ್‌ನೆಸ್ಟ್ರಾಳನ್ನು ಗಂಡ ಲಿನ್ಸಿಯಸ್ ನೊಂದಿಗೆ ನ್ಯಾಯಾಲಯಕ್ಕೆ ಬರುವಂತೆ ಹೇಳಿದನು. ಅವರಿಬ್ಬರಿಗೆ ಆತ ಘೋರಶಿಕ್ಷೆ ವಿಧಿಸುವವನಿದ್ದನು, ಆದರೆ ಗ್ರೀಕ್ ಪ್ರೇಮದೇವತೆ ಆಫ್ರೋಡೈಟ್‌ಳ ಮಧ್ಯಪ್ರವೇಶದಿಂದಾಗಿ ಅದು ತಪ್ಪಿತು. ಆಮೇಲೆ ಲಿನ್ಸಿಯಸ್ಸನೇ ಡೆನೌಸ್‌ನನ್ನು ಕೊಂದು, ತನ್ನ ಸೋದರರ ಹೀನಾಯ ಹತ್ಯೆಗೆ ತಕ್ಕುದಾದ ಪ್ರತೀಕಾರ ಸಲ್ಲಿಸಿದನು. ಆರ್ಗೊಸ್ ಪಟ್ಟಣವನ್ನು ವಶಪಡಿಸಿಕೊಂಡು ಅಲ್ಲಿ ತನ್ನ ಆಧಿಪತ್ಯವನ್ನು ಸ್ಥಾಪಿಸಿದನು.
ಕಥೆ ಅಲ್ಲಿಗೇ ಮುಗಿಯುವುದಿಲ್ಲ. ನಲವತ್ತೊಂಬತ್ತು ಮಂದಿ ‘ಡೆನೈಡ್’ಗಳು ಆಮೇಲೆ ಏನಾದರು? ಮಧುಚಂದ್ರ ಮಂಚದ ಮೇಲೆಯೇ ಗಂಡಂದಿರನ್ನು ಕೊಂದಿದ್ದಕ್ಕೆ ಅವರಿಗೆ ಶಿಕ್ಷೆ ಆಗಲಿಲ್ಲವೇ? ಅಷ್ಟೊಂದು ಘೋರ ಅಪರಾಧವೆಸಗಿಯೂ ಯಾವ ಶಿಕ್ಷೆಯೂ ಇಲ್ಲದೆ ಅವರೆಲ್ಲ ಪಾರಾದರೇ? ಸಾಧ್ಯವೇ ಇಲ್ಲ. ಆ ನಲವತ್ತೊಂಬತ್ತು ‘ಕನ್ಯೆ’ಯರಿಗೆ ಗ್ರೀಕ್ ದೇವತೆಗಳೇ ಒಂದು ವಿಚಿತ್ರರೀತಿಯ ಶಿಕ್ಷೆ ವಿಧಿಸಿದರು. ಅದು ಕಠಿಣವಾದದ್ದೇನಲ್ಲ, ಒಬ್ಬೊಬ್ಬರೂ ಒಂದೊಂದು ಕೊಡಪಾನ ಹೊತ್ತು ಕೊಂಡು ಹತ್ತಿರದ ಸರೋವರದಿಂದ ನೀರು ತುಂಬಿಕೊಂಡು ಬಂದು ದೊಡ್ಡದಾದ ಒಂದು ಬೋಗುಣಿಯಲ್ಲಿ ತುಂಬಿಸಬೇಕು. ಆದರೆ, ಆ ಬೋಗುಣಿಯ ತಳ ಭಾಗದಲ್ಲಿ ರಂಧ್ರಗಳಿವೆ, ಹಾಗಾಗಿ ತುಂಬಿಸಿದ ನೀರುಹರಿದು ಹೋಗುತ್ತದೆ.

ಏನೂ ಮಾಡುವಂತಿಲ್ಲ. ಶಿಕ್ಷೆ ಎಂದಮೇಲೆ ಶಿಕ್ಷೆಯೇ. ಅದೂ ದೇವತೆಗಳೇ ವಿಧಿಸಿದ್ದೆಂದರೆ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಆದ್ದರಿಂದಲೇ ಆ ನಲವತ್ತೊಂಬತ್ತು
ಡೆನೈಡ್ ಕನ್ಯೆಯರು ಈಗಲೂ ‘ಕೊಡ ಹಿಡಿದ ಬೆಡಗಿ’ಯರಾಗಿ ‘ಬುಡ ಒಡೆದಗಡಿಗೆ’ಯನ್ನು ತುಂಬಿಸುತ್ತಲೇ ಇದ್ದಾರೆ. ಅಥವಾ, ತುಂಬಿಸುವ ಪ್ರಯತ್ನ ಮಾಡು ತ್ತಲೇ ಇದ್ದಾರೆ. ಡೆನೈಡ್‌ಗಳು ಹಾಗೆ ‘ವಾಟರ್ ಫಿಲ್ಲಿಂಗ್’ ಮಾಡುತ್ತ ಅಜರಾಮರ ಶಿಕ್ಷೆ ಅನುಭವಿಸುತ್ತಿರುವ ದೃಶ್ಯವನ್ನೇ ಅದ್ಭುತವಾದ ಒಂದು ಚಿತ್ರಕಾವ್ಯವಾಗಿ ಪ್ರಸ್ತುತಪಡಿಸಿದ್ದಾನೆ ‘ವಾಟರ್‌ಹೌಸ್’. ಬಹುಶಃ ನೀವು ಇದಿಷ್ಟನ್ನು ಓದುವ ಮುನ್ನವೇ ಒಮ್ಮೆ ಚಿತ್ರದ ಮೇಲೆ ಕಣ್ಣಾಡಿಸಿದ್ದೀರಿ. ಈಗ ಅದನ್ನೇ ಇನ್ನೊಮ್ಮೆ ನೋಡಿ. ಮತ್ತಷ್ಟು ಜೀವಂತಿಕೆ ಅದರಲ್ಲಿ ನಿಮಗೆ ಕಂಡುಬರುತ್ತದೆ!

ನಿಜ, ಒಂದು ಕಲಾಕೃತಿಯನ್ನು ಮೊದಲು ಹಾಗೇ ಸುಮ್ಮನೆ ನೋಡುವುದಕ್ಕೂ, ಅದರ ಹಿಂದಿನ ಕಥೆಯನ್ನು ತಿಳಿದುಕೊಂಡು ನೋಡುವುದಕ್ಕೂ ಎಷ್ಟೊಂದು
ವ್ಯತ್ಯಾಸವಿದೆಅಲ್ಲವೇ? ಸರಿ. ವರ್ಣಚಿತ್ರ ಆಯ್ತು, ಪುರಾಣ ಕಥೆಯೂ ಆಯ್ತು. ಪ್ರಕೃತಿ ವಿಸ್ಮಯ ಏನು? ಇದು ಉತ್ತರ ಅಮೆರಿಕಖಂಡ ದಲ್ಲಿ ವಿಪುಲವಾಗಿ ಕಂಡು ಬರುವ ‘ಮೊನಾರ್ಕ್’ ಚಿಟ್ಟೆಗಳ ‘ಮೆಕ್ಸಿಕೊ ಮಹಾ ಯಾತ್ರೆ’ ಎಂಬ ಸೋಜಿಗ. ಹೂವಿಂದ ಹೂವಿಗಷ್ಟೇ ಹಾರುತ್ತಿರುತ್ತವೆ ಎಂದು ನಾವಂದುಕೊಳ್ಳುವ ಜುಜುಬಿ ದುಂಬಿಗಳು ಸಾವಿರಾರು ಮೈಲುಗಳ ವಲಸೆ ಹಾರಾಟ ನಡೆಸುವ, ಮೂರು ದೇಶಗಳ ಸೀಮೋಲ್ಲಂಘನ ಮಾಡುವ, ಅಷ್ಟರಲ್ಲಿ ನಾಲ್ಕು ತಲೆಮಾರುಗಳು ಸಂದು ಹೋಗುವ ಅದ್ಭುತ ಪ್ರಕ್ರಿಯೆ.

ಮೊನಾರ್ಕ್ ಚಿಟ್ಟೆಗಳು ವಿಭಿನ್ನವೆನಿಸುವುದೇ ಅವುಗಳ ವಲಸೆ ಸಾಮರ್ಥ್ಯದಿಂದ. ಅದಕ್ಕಿಂತ ಹೆಚ್ಚಾಗಿ ವಲಸೆ ಗೋಸ್ಕರವೇ ಒಂದು ತಲೆಮಾರಿನ ಆಯುಷ್ಯವನ್ನು ನಾಲ್ಕು ಪಟ್ಟು ಹೆಚ್ಚಿಸಿಕೊಳ್ಳುವ ಶಕ್ತಿಯಿಂದ. ಮೋನಾರ್ಕ್ ಚಿಟ್ಟೆಗಳ ಸರಾಸರಿ ಆಯುಷ್ಯ-ತತ್ತಿ, ಮರಿಹುಳ, ಕೋಶಾವಸ್ಥೆ ಮತ್ತು ಚಿಟ್ಟೆ- ಹೀಗೆ ರೂಪಾಂತರದ ಅವಧಿಯೂ ಸೇರಿ ಸುಮಾರು ಎರಡು ತಿಂಗಳು ಮಾತ್ರ. ಈ ರೀತಿ ಮೂರು ತಲೆಮಾರುಗಳು ಅಲ್ಪಾಯುಷ್ಯದವೇ ಆಗಿಹೋಗುತ್ತವೆ.

ನಾಲ್ಕನೆಯ ತಲೆಮಾರು ಮಾತ್ರ ಸುಮಾರು ಎಂಟು ತಿಂಗಳ ಆಯುಷ್ಯ ಹೊಂದುತ್ತದೆ. ಅದೇ ಕೆನಡಾದಿಂದ ಅಮೆರಿಕ ಸಂಯುಕ್ತ ಸಂಸ್ಥಾನಗಳ ಮೂಲಕ ಮೆಕ್ಸಿಕೊಗೆ ವಲಸೆ ಹೋಗುವ ತಲೆಮಾರು. ಗಮ್ಯಸ್ಥಳವಾದ ಮೆಕ್ಸಿಕೊವನ್ನು ಅವು ತಮ್ಮ ಜನ್ಮದಲ್ಲಿ ನೋಡಿರುವುದಿಲ್ಲ. ಅಷ್ಟೇಏಕೆ ಅವುಗಳ ಅಪ್ಪ- ಅಜ್ಜಂದಿರೂ
ನೋಡಿರುವುದಿಲ್ಲ. ಆದರೂ ಕರಾರುವಾಕ್ಕಾಗಿ ಅದೇ ಪ್ರದೇಶಕ್ಕೆ ಹೋಗಿ ನೆಲೆಸುವ ಚಾಕಚಕ್ಯತೆ ಮೊನಾರ್ಕ್ ಗಳಿಗಿರುತ್ತದೆ. ನಾಲ್ಕೂ ತಲೆಮಾರುಗಳ ಒಂದು ಆವರ್ತನವನ್ನು ಗಮನಿಸಿದರೆ ಅದು ಮಗೆ ಅರ್ಥವಾಗುತ್ತದೆ. ಸುಮಾರು ಆಗಸ್ಟ್-ಸಪ್ಟೆಂಬರ್ ಹೊತ್ತಿಗೆ ಬೇಸಿಗೆ ಕಾಲಮುಗಿಯುತ್ತಿದ್ದಂತೆ ವಲಸೆತಲೆಮಾರಿನ ಮೊನಾಕ್ ಗಳು ದಕ್ಷಿಣದತ್ತ ಹಾರಾಟ ಆರಂಭಿಸುತ್ತವೆ.

ದಿನಕ್ಕೆ ಸುಮಾರು ಐವತ್ತು ಮೈಲು ಕ್ರಮಿಸುತ್ತವೆ. ಅಕ್ಟೋಬರ್ ತಿಂಗಳ ಕೊನೆಗೆ ಮೆಕ್ಸಿಕೊ ದೇಶದ ಸಿಯೆರ್ರಾಮಾಡ್ರೆ ಪರ್ವತ ಶ್ರೇಣಿಯನ್ನು ತಲುಪುತ್ತವೆ. ಅಲ್ಲಿನ ‘ಒಯಮೆಲ್’ ಮರಗಳ ಮೇಲೆ ಕ್ಯಾಂಪ್ ಹೂಡುತ್ತವೆ. ಎಷ್ಟು ದಟ್ಟವಾಗಿ ಒತ್ತರಿಸಿಕೊಂಡು ಕೂರುತ್ತವೆಂದರೆ ಚಿಟ್ಟೆಗಳ ಭಾರಕ್ಕೆ ಒಯಮೆಲ್ ಮರದ ಕೊಂಬೆಗಳೇ
ಮುರಿಯುವುದಿದೆಯಂತೆ! ಎಕರೆಗೆ ಸುಮಾರು ಎರಡು-ಮೂರು ಕೋಟಿ ಸಂಖ್ಯೆಯಲ್ಲಿ ಕಡುಕೇಸರಿ ಬಣ್ಣದ ಮೊನಾರ್ಕ್‌ಗಳು ಸೇರಿಕೊಂಡರೆ ಆ ಮರಗಳ ಮೇಲಿನ ‘ಕೇಸರೀಕರಣ’ ದೃಶ್ಯ ಹೇಗಿರಬಹುದು ಊಹಿಸಿ!

ಫೆಬ್ರವರಿ ತನಕವೂ ಹೀಗೆ ನಿಶ್ಚೇಷ್ಟತೆಯಲ್ಲೇ ಕಳೆಯುವ ಮೊನಾರ್ಕ್‌ಗಳಿಗೆ ಆಗ ಮತ್ತೆ ಸಂತಾನೋತ್ಪತ್ತಿ ಶಕ್ತಿ ಬರುತ್ತದೆ. ಮೊಟ್ಟೆಗಳನ್ನಿಡುತ್ತವೆ, ಕ್ರಮೇಣ
ಸತ್ತುಹೋಗುತ್ತವೆ. ಹೊಸದಾಗಿ ಹುಟ್ಟಿದ ಮೊನಾರ್ಕ್‌ಗಳು ಉತ್ತರ ದಿಕ್ಕಿನೆಡೆಗೆ ಪ್ರಯಾಣ ಆರಂಭಿಸುತ್ತವೆ. ವಸಂತ ಋತುವಿನ ಹೊತ್ತಿಗೆ ಅಮೆರಿಕದ ಟೆಕ್ಸಸ್ ಪ್ರದೇಶವನ್ನು ತಲುಪುತ್ತವೆ. ಅಲ್ಲಿನ ಹವಾಮಾನದಲ್ಲಿ ಆಗಲೇ ಉಷ್ಣಾಂಶ ಏರಿರುವುದರಿಂದ ಸಂತಾನೋತ್ಪತ್ತಿಗೆ ಅನುಕೂಲವೇ ಆಗುತ್ತದೆ. ಮೊನಾರ್ಕ್‌ಗಳ ಹೊಸ ತಲೆಮಾರು ಹುಟ್ಟಿ ಅದು ಉತ್ತರದೆಡೆಗೆ ಪಯಣ ಮುಂದುವರಿಸುತ್ತದೆ. ಕೆನಡಾ ತಲುಪುವ ಹೊತ್ತಿಗೆ ಮೂರನೆಯ ತಲೆಮಾರು ಆಗಿರುತ್ತದೆ. ಬೇಸಿಗೆಯ
ಎರಡು ತಿಂಗಳಲ್ಲಿ ಬದುಕುವ ಆ ಮೂರನೆಯ ತಲೆಮಾರು ನಾಲ್ಕನೆಯದಕ್ಕೆ ಜನ್ಮಕೊಡುತ್ತದೆ. ಮತ್ತೊಮ್ಮೆ ವಲಸೆಯ ಚಕ್ರ ಶುರುವಾಗುತ್ತದೆ.

ಮೊದಲು ಹೋದ ಅನುಭವವೂ ಇಲ್ಲದೆ ಸಾವಿರಾರು ಮೈಲು ದೂರಹಾರಾಟ ನಡೆಸಿ ಅತ್ಯಂತ ಕರಾರುವಾಕ್ಕಾಗಿ ನಿರ್ದಿಷ್ಟ ಸ್ಥಳವನ್ನು ತಲುಪುವ ಸಾಮರ್ಥ್ಯ ಮೊನಾರ್ಕ್‌ಗಳಿಗೆ ಹೇಗೆ ಬರುತ್ತದೆ? ಅತಿ ಪುಟ್ಟದಾದ ಅವುಗಳ ತಲೆಯಲ್ಲಿ ಅದೆಂತಹ ಚಾಣಾಕ್ಷ ಮಿದುಳು ಇರುತ್ತದೆ? ಸೂರ್ಯ ರಶ್ಮಿಯೊಂದೇ ಮೊನಾರ್ಕ್‌ಗಳಿಗೆ ದಾರಿದೀಪವೇ? ಭೂಮಿಯ ಕಾಂತ ಗುಣಕ್ಕೆ ಹೊಂದಿಕೊಂಡು ಅವುಗಳಲ್ಲೂ ಏನಾದರೂ ಕಾಂತತ್ವ ಇದೆಯೇ? ಅದೇ ದಿಗ್ದರ್ಶನ ಕೊಡುತ್ತದೆಯೇ? ಜೀವವಿಜ್ಞಾನಿ ಗಳಿಗೆ, ಪರಿಸರ ತಜ್ಞರಿಗೆ, ಮತ್ತು ಜನಸಾಮಾನ್ಯರಿಗೂ ಇದು ಅತ್ಯಂತ ಕುತೂಹಲದ ಸಂಗತಿ.

ಅಷ್ಟೇ ರೋಚಕವಾದ ಇನ್ನೊಂದು ಸಂಗತಿಯೆಂದರೆ ಮೇಲೆ ಹೇಳಿದ ಡೆನೌಸ್‌ನ ಪುರಾಣ ಕಥೆಗೂ ಮೊನಾರ್ಕ್ ಚಿಟ್ಟೆಗಳ ಮೆಕ್ಸಿಕೊ ಮಹಾಯಾತ್ರೆಗೂ ಇರುವ
ಸಂಬಂಧ! ಮೊನಾರ್ಕ್ ಚಿಟ್ಟೆಯ ಜೀವಶಾಸ್ತ್ರೀಯ ಹೆಸರು Danaus plexippus ಎಂದು. ಆ ಹೆಸರಿನಲ್ಲಿರುವ ‘ಡೆನೌಸ್’ ಪದ ಸುಮ್ಮನೆ ಬಂದದ್ದಲ್ಲ. ವಿಜ್ಞಾನಿಗಳು ಗ್ರೀಕ್ ಪುರಾಣ ಕಥೆಯನ್ನು ನೆನಪಿಸಿಕೊಂಡೇ ಅದನ್ನು ಆಯ್ದುಕೊಂಡದ್ದು! ಕಥೆಯಲ್ಲಿ ಡೆನೌಸ್ ತನ್ನ ಐವತ್ತು ಹೆಣ್ಮಕ್ಕಳೊಂದಿಗೆ ಲಿಬಿಯಾದಿಂದ ಗ್ರೀಸ್‌ಗೆ ವಲಸೆ ಹೋಗುತ್ತಾನಷ್ಟೆ? ಬಣ್ಣಬಣ್ಣದ ಮೊನಾರ್ಕ್ ಚಿಟ್ಟೆಗಳು ಗುಂಪಾಗಿ ವಲಸೆ ಹೋಗುವ ಪ್ರಕ್ರಿಯೆಯೂ ಬಹುಶಃ ಡೆನೈಡ್ ಚೆಲುವೆಯರ ವಲಸೆಯನ್ನು ವಿಜ್ಞಾನಿಗಳಿಗೆ ನೆನಪಿಸಿರಬೇಕು. ಆ ನಾಮಕರಣಕ್ಕೆ ಇನ್ನೊಂದು ಕಾರಣವೂ ಇದೆ.

Danaus plexippus ಈ ಗ್ರೀಕ್ ಪದಪುಂಜಕ್ಕೆ ಇಂಗ್ಲಿಷ್‌ನಲ್ಲಿ sleepy transformation ಎಂಬ ಅರ್ಥಬರುತ್ತದೆ. ಮೊನಾರ್ಕ್ ಚಿಟ್ಟೆಗಳು ತಮ್ಮ ಶಿಶಿರಸುಪ್ತಿ (winter hibernation) ಅವಧಿಯಲ್ಲಿ ಸಾಯುತ್ತವೆ, ಹೊಸತಲೆಮಾರು ಹುಟ್ಟಿಕೊಳ್ಳುತ್ತದೆ. ಡೆನೌಸ್‌ನ ಕಥೆಯಲ್ಲಿ ಶೋಭನ ರಾತ್ರಿಯಂದು ಅಳಿಯಂದಿರ ಹತ್ಯೆ ಮಾಡಿಸಲಾಗುತ್ತದೆ. ಎರಡು ಕಡೆಯೂ ನಿದ್ರಾವಸ್ಥೆಯಲ್ಲಿ ಜೀವನ್ಮರಣ ಸಂಚಲನ. ಪ್ರಕೃತಿ ವಿಸ್ಮಯಕ್ಕೆ ಪುರಾಣ ಕಥೆಯ ಲೇಪನ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪುರಾಣ ಕಥೆಯಸುತ್ತ ಕಲೆ ಮತ್ತು ವಿಜ್ಞಾನ!