Friday, 13th December 2024

ಪಿಂಚಣಿ ಹಳೆಯದಾದರೇನು, ನಷ್ಟ ನವನವೀನ !

ಅಶ್ವತ್ಥಕಟ್ಟೆ

ranjith.hoskere@gmail.com

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಕಳೆದ ಆರು ತಿಂಗಳಲ್ಲಿ ದೇಶದಲ್ಲಿ ನಡೆದಿರುವ ಎಲ್ಲ ಚುನಾವಣೆಯಲ್ಲಿಯೂ
ಒಪಿಎಸ್/ಎನ್‌ಪಿಎಸ್ ಯೋಜನವೇ ಬಹುದೊಡ್ಡ ಚುನಾವಣಾ ಅಸವಾಗಿರುವುದನ್ನು ಬಿಜೆಪಿ ನೋಡಿದೆ.

ಯಾವುದೇ ಸರಕಾರಕ್ಕೆ ಸರಕಾರಿ ನೌಕರರ ಬಲ ಅತಿದೊಡ್ಡ ಬಲವೆಂದೇ ವಿಶ್ಲೇಷಿಸಲಾಗುತ್ತದೆ. ಅದಕ್ಕಾಗಿಯೇ ಸರಕಾರಿ ನೌಕರರ ಸಂಘಕ್ಕೆ ಯಾವುದೇ ಸರಕಾರದಲ್ಲಿ ಎಲ್ಲಿಲ್ಲದ ಬೇಡಿಕೆ. ಏಕೆಂದರೆ, ಈ ವರ್ಗದ ‘ವೋಟ್‌ಬ್ಯಾಂಕ್’ ಜ್ಯಾತ್ಯತೀತ ಹಾಗೂ ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಂಡಿರುವ ಮತಬ್ಯಾಂಕ್ ಅಲ್ಲ. ಒಂದು ವೇಳೆ ಗಟ್ಟಿಯಾಗಿ ಈ ಮತಬ್ಯಾಂಕ್ ಯಾವುದೋ ಒಂದು ನಿರ್ದಿಷ್ಟ ಪಕ್ಷದ ವಿರುದ್ಧ ನಿಂತರೆ, ಚುನಾವಣೆಯಲ್ಲಿ ಆ ಪಕ್ಷಕ್ಕೆ ಬಹುದೊಡ್ಡ ಹೊಡೆತವನ್ನು ಕೊಡುವ ಶಕ್ತಿಯೂ ಸರಕಾರಿ ನೌಕರರಿಗೆಯಿದೆ.

ಸರಕಾರಿ ನೌಕರರ ವಿಷಯದಲ್ಲಿ ಇಷ್ಟೆಲ್ಲ ಪೀಠಿಕೆ ಹಾಕುವುದಕ್ಕೆ ಪ್ರಮುಖ ಕಾರಣ, ಇತ್ತೀಚಿಗೆ ನಡೆಯುತ್ತಿರುವ ‘ಹಳೇ ಪಿಂಚಣಿ’ ಹಾಗೂ ‘ಹೊಸ ಪಿಂಚಣಿ’ ಎನ್ನುವ ವಿಷಯದಲ್ಲಿ ಸರಕಾರ ಹಾಗೂ ನೌಕರರ ನಡುವೆ ಬಹು ದೊಡ್ಡ ಯುದ್ಧವೇ ನಡೆಯುತ್ತಿದೆ. ಇದು ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದೆ. ಕರ್ನಾಟಕದ ವಿಷಯದಲ್ಲಿ ನೋಡುವುದಾದರೆ, ಪಿಂಚಣಿ ವ್ಯವಸ್ಥೆಯ ಜತೆಗೆ ಏಳನೇ ವೇತನ ಆಯೋಗದ ಹಗ್ಗಜಗ್ಗಾಟವೂ ನಡೆಯುತ್ತಿದೆ.

ಅದರಲ್ಲಿಯೂ ಚುನಾವಣಾ ಹೊಸ್ತಿಲಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಸರಕಾರಿ ನೌಕರರಿಗೆ ನಿರಾಸೆ ಉಂಟು ಮಾಡಿರುವುದು, ಇದೀಗ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರಕಾರಕ್ಕೆ ಯಾವ ರೀತಿಯಲ್ಲಿ ‘ಪರಿಣಾಮ’ ಬೀರಲಿದೆ ಎನ್ನುವ ಚರ್ಚೆಗಳು ಆರಂಭವಾಗಿದೆ. ಪಿಂಚಣಿ ವ್ಯವಸ್ಥೆಯ ವಿವಾದದಿಂದ ಚುನಾವಣೆಯಲ್ಲಿ ಪರಿಣಾಮ ಬೀರುವುದಕ್ಕಿಂತ, ಈ ಹಿಂದೆ ಇದ್ದ ಹಳೇ ಪಿಂಚಣಿ ವ್ಯವಸ್ಥೆಗೂ ಈಗ ಜಾರಿಯಲ್ಲಿರುವ ಹೊಸ ಪಿಂಚಣಿ ವ್ಯವಸ್ಥೆಗೂ ಇರುವ ವ್ಯತ್ಯಾಸದ ಬಗ್ಗೆ ಮೊದಲು ತಿಳಿಯಬೇಕಿದೆ. ಇದರೊಂದಿಗೆ ಹಳೇ ಪಿಂಚಣಿ ವ್ಯವಸ್ಥೆಯಿಂದ ಸರಕಾರಕ್ಕೆ ಆಗುವ ಹೊರೆಯ ಬಗ್ಗೆಯೂ ಯೋಚಿಸಬೇಕಿದೆ.

ಹಾಗೇ ನೋಡಿದರೆ, ಹಳೇ ಪಂಚಣಿ ವ್ಯವಸ್ಥೆ ರಾಜ್ಯ ಸರಕಾರಕ್ಕೆ ನಿರಂತರ ಹೊಣೆ ಎನ್ನುವುದು ಒಂದು ಭಾಗವಾದರೆ, ಹೊಸ ಪಿಂಚಣಿ ವ್ಯವಸ್ಥೆ ಯಲ್ಲಿರುವ ಲೋಪದೋಷದಿಂದಾಗಿ ನೌಕರರಿಗೆ ಆಗುತ್ತಿರುವ ಭವಿಷ್ಯದಲ್ಲಿ ಆಗಬಹುದಾದ ಸಮಸ್ಯೆ ಮತ್ತೊಂದೆಡೆ. ಹಳೇ ಪಿಂಚಣಿ ವ್ಯವಸ್ಥೆಯ ಬಗ್ಗೆ ಮಾತನಾಡುವ ಮೊದಲು, ನೂತನ ಪಿಂಚಣಿ ವ್ಯವಸ್ಥೆ ಅಥವಾ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಬಗ್ಗೆ ನೋಡುವುದಾದರೆ, ಹಳೇ ಪಿಂಚಣಿ ವ್ಯವಸ್ಥೆ ಯಲ್ಲಿ ಶೇ.೧೦ರಷ್ಟು ಮೊತ್ತವನ್ನು ನೌಕರರ ಮೂಲವೇತನದಿಂದ ಕಟ್ ಮಾಡಲಾಗುವುದು. ಇದಾದ ಬಳಿಕ ನಿವೃತ್ತಿಯ ಸಮಯದಲ್ಲಿ ಈ ಎಲ್ಲ ಕೂಡಿಟ್ಟ ಹಣ ವನ್ನು ಸರಕಾರ ವಾಪಸು ನೌಕರರಿಗೆ ಒಟ್ಟು ಮೊತ್ತವನ್ನಾಗಿ ನೀಡುವ ಜತೆಗೆ, ಪ್ರತಿತಿಂಗಳು ಮೂಲ ವೇತನದ ಶೇ.೫೦ ರಷ್ಟು ಮೊತ್ತವನ್ನು ನೌಕರರಿಗೆ ನೀಡುತ್ತಾರೆ.

ಉದಾಹರಣೆಗೆ, ನೌಕರ ನಿವೃತ್ತಿಯಾದ ಸಮಯದಲ್ಲಿ ೫೦ಸಾವಿರ ಮೂಲವೇತನವನ್ನು ಪಡೆಯುತ್ತಿದ್ದರೆ, ಆತನ ಪಿಂಚಣಿ 25ಸಾವಿರ
ರು. ಫಿಕ್ಸ್ ಆಗಲಿದೆ. ಇದಿಷ್ಟೇ ಅಲ್ಲದೇ, ಕಾಲಕಾಲಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹೆಚ್ಚಿಸುವ ಡಿಎ (ತುಟಿಭತ್ಯೆಯೂ) ನಿವೃತ್ತಿ ಹೊಂದಿದ ಬಳಿಕವೂ, ಪಿಂಚಣಿದಾರರಿಗೆ ಸಿಗುವ ಮೂಲಕ, ಪಿಂಚಣಿ ಹೆಚ್ಚಾಗಲಿದೆ. ಆದರೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ, ನೌಕರನ ಮೂಲ ವೇತನದ ಶೇ.೧೦ರಷ್ಟನ್ನು ನೌಕರನ ವೇತನದಿಂದ ಪಡೆಯುವುದಷ್ಟೇ ಅಲ್ಲದೇ, ಸರಕಾರವೂ ಶೇ.೧೪ರಷ್ಟು ಮೊತ್ತವನ್ನು ನೌಕರರ ಪಿಂಚಣಿಗೆಂದು ಮೀಸಲಿಡುವ ಈ ಖಾತೆಗೆ ಹಾಕುತ್ತದೆ.

ಇದಾದ ಬಳಿಕ, ನಿವೃತ್ತಿಯ ಸಮಯ ದಲ್ಲಿ ನೌಕರ ಕಟ್ಟಿರುವ ಮೊತ್ತ ಹಾಗೂ ಸರಕಾರ ಹಾಕಿರುವ ಶೇ.14ರ ಮೊತ್ತವೆರಡನ್ನು ಒಟ್ಟುಗೂಡಿಸಿ ನೌಕರರಿಗೆ ನೀಡಲಾಗುತ್ತದೆ. ಉದಾಹರಣೆಗೆ ನೌಕರ 10 ಲಕ್ಷ ರು. ಗಳನ್ನು ಕಟ್ಟಿದ್ದರೆ ಅದಕ್ಕೆ ಸರಕಾರ 14 ಲಕ್ಷ ರು.ಗಳನ್ನು ಸೇರಿಸಿ, ಒಟ್ಟಾರೆ ಇರುವ 24 ಲಕ್ಷ ರು.ನಲ್ಲಿ ಶೇ.60ರಷ್ಟು ಪಾಲನ್ನು ಒಂದೇ ಬಾರಿಗೆ ನೌಕರರಿಗೆ ನೀಡುತ್ತದೆ. ಇನ್ನುಳಿದಿರುವ 49ರಷ್ಟು ಮೊತ್ತವನ್ನು ಆ ವ್ಯಕ್ತಿ ಜೀವಂತವಿರುವ ತನಕ ನೀಡುತ್ತಾ ಹೋಗುತ್ತದೆ. ಆದರೆ ಇದರಲ್ಲಿರುವ ಬಹುದೊಡ್ಡ ಹಿನ್ನಡೆ ಏನೆಂದರೆ, ಈ ಹಿಂದಿನ ಪಿಂಚಣಿ ಯೋಜನೆಯ
ರೀತಿಯಲ್ಲಿ ಪಿಂಚಣಿಗೆ ಹೆಚ್ಚುವರಿ ಡಿ.ಎ ಸೇರುವುದಿಲ್ಲ.

ಬದಲಿಗೆ ಒಂದು ಮೊತ್ತವನ್ನು ಫಿಕ್ಸ್ ಮಾಡಿ ಜೀವನ ಪರ್ಯಂತ ಇದೇ ಮೊತ್ತವನ್ನು ಪಡೆಯುವಂತಾಗುತ್ತದೆ. ಹಾಗೇ ನೋಡಿದರೆ, ಸರಕಾರ ನೀಡಿರುವ ನೂತನ ಪಿಂಚಣಿ ಯೋಜನೆಯ ಈ ಎಲ್ಲ ಅಂಶವನ್ನು ಬಹುತೇಕರು ಒಪ್ಪಿದ್ದಾರೆ. ಆದರೆ ನೌಕರನ ಅಕಾಲಿಕ ಮರಣದ ಸಮಯದಲ್ಲಿ ಎನ್‌ಪಿಎಸ್‌ನಲ್ಲಿ, ನೌಕರನ ಕುಟುಂಬಸ್ಥರಿಗೆ ಪೂರ್ಣ ಪ್ರಮಾಣದ ಹಣ ಸಿಗುವುದಿಲ್ಲ ಹಾಗೂ ಪಿಂಚಣಿ ಸೌಲಭ್ಯವೂ ಇರುವುದಿಲ್ಲ. ಇದರೊಂದಿಗೆ ಸರಕಾರ ಹಾಕಿರುವ ಶೇ.೧೪ರಷ್ಟು ಪಾಲನ್ನು ನೀಡುವುದಿಲ್ಲ.

ಇದರಿಂದಾಗಿ ಸರಕಾರಿ ನೌಕರ ಒಂದು ವೇಳೆ ಅಕಾಲಿಕ ನಿಧನವನ್ನು ಹೊಂದಿದರೆ, ಅವಲಂಭಿತರಿಗೆ ಯಾವುದೇ ಆರ್ಥಿಕ ಬೆಂಬಲ ಸಿಗುವುದಿಲ್ಲ ಎನ್ನುವುದು ಮೊದಲ ಆರೋಪ. ಎರಡನೇಯದ್ದಾಗಿ, ಸರಕಾರ ಹಾಗೂ ನೌಕರ ಇಬ್ಬರೂ ತುಂಬುವ ಹಣವನ್ನು ಒಟ್ಟುಗೂಡಿಸಿ, ಈಕ್ವಿಟಿ ಷೇರ್‌ನಲ್ಲಿ ಅಥವಾ ಸರಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಷೇರಿನಲ್ಲಿ ಹೂಡಿಕೆ ಮಾಡಿದಾಗ, ಹತ್ತಾರು ಪಟ್ಟು ಲಾಭ ಬಂದರೆ ಆ ಎಲ್ಲ ಲಾಭಾಂಶ ಸರಕಾರಿ ನೌಕರನಿಗೆ ಸಿಗುತ್ತದೆ. ಒಂದು ವೇಳೆ ಆ ನೌಕರ ನಿವೃತ್ತಿಹೊಂದುವ ಸಮಯದಲ್ಲಿ, ಷೇರು ಮಾರುಕಟ್ಟೆ ಕುಸಿದಿದ್ದರೆ, ಅದರ ನಷ್ಟವನ್ನು ನೌಕರನೇ ಹೋರಬೇಕು.

ಉದಾಹರಣೆಗೆ ಷೇರು ಮಾರುಕಟ್ಟೆ ಉತ್ತಮವಾಗಿದ್ದರೆ 10ಲಕ್ಷ ಬರುವ ಕಡೆ 15 ಲಕ್ಷವೂ ಬರಬಬಹುದು ಅಥವಾ ಆ ಮೊತ್ತ ಎಂಟು ಲಕ್ಷಕ್ಕೂ ಇಳಿಯಬಹುದು. ಈ ವಿಷಯದಲ್ಲಿ ನೌಕರರ ತಕರಾರಿದೆ. ಹಾಗೆಂದು, ಸರಕಾರಿ ನೌಕರರ ಒತ್ತಡಕ್ಕೆ ಮಣಿದು ಹಳೇ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಿದರೆ, ಮುಂದಿನ ದಿನದಲ್ಲಿ ರಾಜ್ಯ ಸರಕಾರಕ್ಕೆ ನಿವೃತ್ತಿ ನೌಕರರಿಗೆ ನೀಡುವ ಪಿಂಚಣಿಗೆಂದೇ ಸಾವಿರಾರು ಕೋಟಿ ರುಗಳನ್ನು
ಮಾಸಿಕವಾಗಿ ಎತ್ತಿಡಬೇಕಾದ ಪರಿಸ್ಥಿತಿ ಎದುರಾಗಲಿದೆ.

ಆದ್ದರಿಂದ ಆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಸರಕಾರಿ ನೌಕರರು ಭವಿಷ್ಯದ, ತಮ್ಮ ಇಳಿಕಾಲದಲ್ಲಿ ಆರ್ಥಿಕ ಭದ್ರತೆ ಹಾಗೂ ಒಂದು ವೇಳೆ ತಾವು ಅಕಾಲಿಕ ಮೃತಪಟ್ಟರೆ ತಮ್ಮ ಅವಲಂಭಿತರಿಗೆ ಆರ್ಥಿಕ ಸಹಾಯ ಸಿಗಬೇಕು ಎನ್ನುವ ಕಾರಣಕ್ಕೆ ನೂತನ
ಪಿಂಚಣಿ ಯೋಜನೆಯನ್ನು ಒಪ್ಪುತ್ತಿಲ್ಲ. ಈ ಹೊಯ್ದಾಟದ ನಡುವೆ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಕಳೆದ ಆರು ತಿಂಗಳಲ್ಲಿ
ದೇಶದಲ್ಲಿ ನಡೆದಿರುವ ಎಲ್ಲ ಚುನಾವಣೆಯಲ್ಲಿಯೂ ಒಪಿಎಸ್/ಎನ್‌ಪಿಎಸ್ ಯೋಜನವೇ ಬಹುದೊಡ್ಡ ಚುನಾವಣಾ ಅಸವಾಗಿರುವುದನ್ನು ಬಿಜೆಪಿ ನೋಡಿದೆ.

ಈಗಾಗಲೇ ರಾಜಸ್ತಾನ, ಚತ್ತೀಸ್‌ಗಡ, ದೆಹಲಿ ಸರಕಾರಗಳು ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದರೆ, ಇನ್ನುಳಿದ ರಾಜ್ಯದಲ್ಲಿ ಪ್ರತಿಪಕ್ಷಗಳು ನಾವು ಅಧಿಕಾರಕ್ಕೆ ಬಂದರೆ ಒಪಿಎಸ್ ಜಾರಿಗೊಳಿಸುವ ಭರವಸೆಗಳನ್ನು ನೀಡುತ್ತಿದ್ದಾರೆ. ಆದ್ದರಿಂದ ಇದೀಗ ಕರ್ನಾಟಕ ದಲ್ಲಿಯೂ ಒಪಿಎಸ್ ಜಾರಿಗೆ ಆಗ್ರಹಗಳು ದೊಡ್ಡಪ್ರಮಾಣದಲ್ಲಿ ಶುರುವಾಗಿದೆ. ಚುನಾವಣಾ ದೃಷ್ಟಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಬಿಜೆಪಿಯ ಕೆಲ ಶಾಸಕರು ಒಪಿಎಸ್ ಜಾರಿಗೊಳಿಸುವ ಘೋಷಣೆ ಮಾಡುವಂತೆ ಒತ್ತಡ ಹೇರಿದ್ದರು. ಆದರೆ ಒಪಿಎಸ್ ‘ಭವಿಷ್ಯದ ಯುವಕರಿಗೆ, ಆರ್ಥಿಕತೆಗೆ ಮಾರಕ’ ಎನ್ನುವ ಮಾತನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದರಿಂದ, ಈ ವಿಷಯವಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಬೊಮ್ಮಾಯಿ ಅವರಿದ್ದಾರೆ. ಆದರೆ ಏಳನೇ ವೇತನವನ್ನೂ ಘೋಷಣೆ ಮಾಡದೇ, ಹಳೇ ಪಿಂಚಣಿ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸದೇ ಇರುವುದರಿಂದ ಭಾರಿ ವಿರೋಧ ವ್ಯಕ್ತವಾಗಿರುವುದಷ್ಟೇ ಅಲ್ಲದೇ, ತುರ್ತು ಕಾರ್ಯಕಾರಣಿಯನ್ನೂ ರಾಜ್ಯ ಸರಕಾರಿ ನೌಕರರ ಸಂಘ ಮಂಗಳವಾರ ನಡೆಸಲಿದೆ.

ಒಂದೆಡೆ ೨೫ಲಕ್ಷಕ್ಕೂ ಹೆಚ್ಚು ಮತಬ್ಯಾಂಕ್ ಇರುವ ಸರಕಾರಿ ನೌಕರರ ವಲಯವನ್ನೂ ಬಿಡಲಾಗದೇ, ಆರ್ಥಿಕ ಹೊರೆಯನ್ನು ಮಾಡಿಕೊಳ್ಳಲಾಗದೇ ಇರುವ ಸ್ಥಿತಿಯಲ್ಲಿ ರಾಜ್ಯ ಸರಕಾರವಾಗಿದೆ. ಆದ್ದರಿಂದ ಚುನಾವಣಾ ಹೊಸ್ತಿಲಲ್ಲಿ ಎದ್ದಿರುವ ಈ ಹಳೇ ಹಾಗೂ ಹೊಸ ಪಿಂಚಣಿ ವ್ಯವಸ್ಥೆಯ ವಿವಾದ, ಸರಕಾರ ನುಂಗಲಾರದ ತುತ್ತಾಗಿದೆ. ಆದರೆ ಸರಕಾರಿ ನೌಕರರು, ಅವರ ಮೇಲಿನ ಅವಲಂಭಿತರು ಸೇರಿದಂತೆ ಒಟ್ಟು 25ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ.

ಒಂದು ವೇಳೆ ಇವೆಲ್ಲ ಉಲ್ಟಾ ಹೊಡೆದರೆ ಬಿಜೆಪಿಗೆ ಬಹುದೊಡ್ಡ ಸಮಸ್ಯೆಯಾಗುವುದರಲ್ಲಿ ಎರಡನೇ ಮಾತಿಲ್ಲ. ಹಾಗೆಂದು ಇದನ್ನು ಒಪ್ಪಿಕೊಂಡರೆ, ಬದ್ಧತಾ ವೆಚ್ಚ ಇನ್ನಷ್ಟು ಹೆಚ್ಚಾಗಿ, ಸರಕಾರಕ್ಕೆ ಭವಿಷ್ಯದಲ್ಲಿ ಅಭಿವೃದ್ಧಿಗೆ ಆರ್ಥಿಕ ಸಮಸ್ಯೆಯಾಗುವ ಆತಂಕವೂ ಇದೆ. ಆದ್ದರಿಂದ ‘ಅತ್ತ ಧರಿ.. ಇತ್ತು ಪುಲಿ’ ಎನ್ನುವ ಈ ಪರಿಸ್ಥಿತಿಯಲ್ಲಿ ‘ಹ್ಯಾಂಡಲ್’ ಮಾಡುವುದು ಬಿಜೆಪಿ ಮುಂದಿರುವ ಬಹುದೊಡ್ಡ ಸವಾಲಾಗಿದೆ.