Monday, 11th November 2024

’ಒಸಾಮಾ ಬಿನ್-ಲಾಡೆನ್ ಸಿಕ್ಕಿದ …ಗೆರೊನಿಮೊ EKIA !’

ಬರಾಕ್‌ ಒಬಾಮಾ ಹೇಳಿದೆ ಲಾಡೆನ್‌ ಹತ್ಯೆ ಕಥೆ (ಭಾಗ – 5)

ಡಾ.ಶ್ರೀಕಾಂತ್ ಭಟ್‌ ಜರ್ಮನಿ

ಮರುದಿನ ಭಾನುವಾರ (ಮೇ 1, 2011) ಬೆಳಗ್ಗೆ, ವೈಟ್-ಹೌಸ್‌ನ ಪರಿಚಾರಕರು ಎಬ್ಬಿಸುವ ಮುನ್ನವೇ ಎದ್ದು-ಕೂತಿದ್ದೆ. ಆ ದಿನ ವೈಟ್-ಹೌಸ್‌ಗೆ ಸಾರ್ವಜನಿಕರ ಭೇಟಿಯ ಅವಕಾಶವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿತ್ತು.

ಯಾವುದೇ ಹೊತ್ತಿನಲ್ಲಿ ಪ್ರಮುಖ ಮೀಟಿಂಗ್ ನಡೆಸಬೇಕಾದ ಸಂದರ್ಭ ಒದಗಿ ಬರಬಹುದೆಂದು ಆ ನಿರ್ಧಾರಕ್ಕೆ ಬರಲಾಗಿತ್ತು. ನನ್ನ ಕೈಗಡಿಯಾರವನ್ನೇ ದಿಟ್ಟಿಸಿ ಕೂರುವ ಬದಲು, ಒಂದು ಆಟ ಗಾಲ್ ಆಡಿ (2-3 ತಾಸು) ಬರೋಣವೆಂದು ನನ್ನ ಸಹಾಯಕನೊಡನೆ ಹೊರಟೆ. ಬಹುತೇಕ ರವಿವಾರದಂದು, ಉಳಿದ ಮಾಮೂಲಿ ಏಕತಾನತೆಯ ಕೆಲಸಗಳನ್ನು ತಪ್ಪಿಸಿಕೊಳ್ಳಲು ಗಾಲ್ ಆಡುವುದು ಒಂದು ಸಹಜ ಹವ್ಯಾಸವೂ ಆಗಿತ್ತು.

ಆ ದಿನದ ತಂಪಾದ, ಗಾಳಿಯಿಲ್ಲದ ವಾತಾವರಣ ಆಟಕ್ಕೆ ಬಹು ಮುದ ನೀಡಿತ್ತು. ನನ್ನ ಹೊಡೆತದ ಭರಕ್ಕೆ 3-4 ಚೆಂಡುಗಳು ಕಾಣೆಯಾಗಿದ್ದವು. ಹಿಂದಿರುಗುತ್ತಲೇ ಟಾಮ್ (ಥಾಮಸ್ ಡೊನಿಲೊನ್: ರಾಷ್ಟ್ರೀಯ ಭದ್ರತಾ ಸಲಹೆಗಾರ) ಅವರ ಬಳಿ ಕೇಳಿ ವಿವರ ಪಡೆದೆ. ಅವರು ಮತ್ತು ತಂಡದ ಪ್ರಮುಖರೆಲ್ಲರೂ ‘ಸಿಚುಯೇಶನ್ ರೂಮ್’ ನಲ್ಲಿ ಸೇರಿದ್ದರು. ಆಗಲೇ ನನ್ನ ಹಾಜರಾತಿ ಅವಶ್ಯಕತೆ ಇಲ್ಲವಾದ್ದರಿಂದ, ಹೆಲಿಕಾಪ್ಟರ್‌ಗಳು ದಾಳಿಗೆ ಹೊರಡುವ ಹೊತ್ತಿಗೆ ಸೂಚಿಸಿರಿ ಎಂದು ನಾನು ಓವೆಲ್ ಆಫೀಸಿಗೆ ಬಂದು ಕುಳಿತೆ.

ದಿನ ಪತ್ರಿಕೆಗಳ ಮೇಲೆ ಕಣ್ಣುಹಾಯಿಸಲು ಶುರು ಮಾಡಿದರೆ, ಓದು ಸಾಗುತ್ತಲೇ ಇರಲಿಲ್ಲ, ಓದಿದ ಸಾಲುಗಳನ್ನೇ ಮತ್ತೆ ಓದುತ್ತಿದ್ದೆ. ಕೊನೆಗೆ ಸಾಕಾಗಿ, ನನ್ನ ಮೂರು ಸಹಾಯಕ ಸಿಬ್ಬಂದಿಗಳ ಜತೆಗೂಡಿ, ಅಂದರೆ ಒಟ್ಟು ನಾಲ್ಕು ಜನ ಸೇರಿ, ಓವೆಲ್ ಆಫೀಸಿನ ಊಟದ ಕೊಣೆಯಲ್ಲಿ ಇಸ್ಪೀಟು ಆಡುತ್ತಾ ಕುಳಿತೆವು. ಅವರಿಗೂ ಆ ದಿವಸದ ಪರಿಸ್ಥಿತಿ ಯಾಕೊ ವಿಭಿನ್ನ ಎನಿಸಿರಲಿಕ್ಕೆ ಸಾಕು. ಮುಂಚಿತವಾಗಿ ದಾಳಿಯ ವಿಷಯ ಅವರಿಗೆ ತಿಳಿದಿಲ್ಲದಿದ್ದರೂ, ಆ ದಿನದ ಪ್ರಮುಖ ಘಟನೆಯ ಅರಿವು ಇತ್ತು.

‘ಸೀಲ್ ಕಮಾಂಡೋಗಳ’ ಜತೆ ನಿರಂತರ ನೇರ ಸಂಪರ್ಕ: ಈಸ್ಟರ್ನ್ ಟೈಮ್ ಮಧ್ಯಾಹ್ನ 2 ಗಂಟೆ (ಪಾಕಿಸ್ತಾನದಲ್ಲಿ ರಾತ್ರಿ 12 ಗಂಟೆ), ಕಾರ್ಯಾ ಚರಣೆಯ ವಿದ್ಯುಕ್ತ ಆರಂಭವಾಯಿತು. ಈ ಕಾರ್ಯಾಚರಣೆಗೆ “ಆಪರೇಷನ್ ನೆಪ್ಟ್ಯೂನ್ಸ್ ಸ್ಪಿಯರ್” ಎಂಬ ಹೆಸರನ್ನು ನೀಡಲಾಗಿತ್ತು. 23 ಸೀಲ್ ಕಮಾಂಡೋಗಳು, ಒಬ್ಬ ಪಾಕಿಸ್ತಾನಿ ಗುಪ್ತಚರ ಮಾಹಿತಿಯುಳ್ಳ ಅನುವಾದಕ, ಮತ್ತು
ಒಂದು ಮಿಲಿಟರಿ ನಾಯಿ – ಹೆಸರು ‘ಕೈರೊ’ – ಎರಡು ‘”BlACK HAWK ಹೆಲಿಕಾಪ್ಟರ್‌ನಲ್ಲಿ ಜಲಾಲಾ ಬಾದ್ ವಾಯು ನೆಲೆಯಿಂದ ಹೊರಟವು.

ಹೆಲಿಕಾ ಪ್ಟರ್‌ಗಳನ್ನು ಪಾಕಿಸ್ತಾನಿ ರೇಡಾರ್‌ಗಳಿಗೆ ಪತ್ತೆಹಚ್ಚಲು ಆಗದಂತೆ ವಿಶೇಷವಾಗಿ ತರ್ಜಿಮೆಗೊಳಿಸಲಾಗಿತ್ತು. ಒಂದುವರೆ ಗಂಟೆಯಲ್ಲಿ ಅಬ್ಬೊಟ್ಟಾಬಾದ್ ತಲುಪುವ ನಿರೀಕ್ಷೆ ಇತ್ತು. ನಾನು ಊಟದ ಕೋಣೆಯಿಂದ ‘ಸಿಚುಯೇಶನ್ ರೂಮ್’ ಗೆ ತಲುಪಿದೆ. ಅದಾಗಲೇ ಆ ಕೋಣೆ ‘ವಾರ್-ರೂಮ್’ ಆಗಿ ಬದಲಾದಂತೆ ಗೋಚರಿಸಿತು. ಲಿಯೋನ್ (ಗುಪ್ತಚರ ವಿಭಾಗದ ಪ್ರಮುಖ) ಅವರು ವಿಡಿಯೋ ಕಾಲ್ ಮೂಲಕ, ಮೆಕ್-ರಾವೆನ್ ಜತೆ ನೇರ ಸಂಪರ್ಕದಲ್ಲಿದ್ದರು.

ಮೆಕ್-ರಾವೆನ್ ಜಲಾಲಾಬಾದ್‌ನಲ್ಲಿಯೇ ಇದ್ದು, ಕಾರ್ಯಾಚರಣೆಯಲ್ಲಿ ನಿರತವಾಗಿರುವ ‘ಸೀಲ್ ಕಮಾಂಡೋಗಳ’ ಜತೆ ನಿರಂತರ ನೇರ ಸಂಪರ್ಕದಲ್ಲಿದ್ದರು. ಆ ಕೋಣೆಯಲ್ಲಿ ಸ್ವಲ್ಪ ಬಿಗುವಾದ ವಾತಾವರಣವೇ ಇತ್ತು ಎಂದು ಹೇಳಬಹುದು. ಜೋ ಬೈಡನ್, ಥಾಮಸ್ ಡೊನಿಲೊನ್, ಹಿಲರಿ ಕ್ಲಿಂಟನ್ ಮತ್ತು ರಾಷ್ಟ್ರೀಯ ಭದ್ರತಾ ತಂಡದ ಪ್ರಮುಖರೆಲ್ಲರೂ ಆ ಕೋಣೆಯೊಳಗೆ ಅದಾಗಲೇ ಉಪಸ್ಥಿತರಿದ್ದರು.

ನಮ್ಮ ಕಾರ್ಯಾಚರಣೆಯ ಬಗ್ಗೆ ಪಾಕಿಸ್ತಾನಕ್ಕೆ ಮತ್ತು ಉಳಿದ ದೇಶಗಳಿಗೆ ತಿಳಿಸುವ ಬಗೆಗೆ ಮತ್ತೂ, ನಮ್ಮ ರಾಜತಾಂತ್ರಿಕ ನಿಲುವಿನ ಬಗೆಗಿನ ಯೋಜನೆಯನ್ನು ಚರ್ಚಿಸಲಾಯಿತು. ದಾಳಿಯು ಯಶಸ್ಸು ಸಾಧಿಸಿದರೆ ಅಥವಾ ವ್ಯರ್ಥವಾದರೆ ತೆಗೆದು ಕೊಳ್ಳಬೇಕಾದ ರಾಜತಾಂತ್ರಿಕ ನಿಲುವು ಮತ್ತು ಅದಕ್ಕೆ ತಕ್ಕದಾದ ಎರಡೂ ರೀತಿಯ ಸಂದೇಶಗಳನ್ನು ಚರ್ಚಿಸಿ ಸಿದ್ದಪಡಿಸ ಲಾಯಿತು.

ದಾಳಿಯಲ್ಲಿ ಒಮ್ಮೆಲೇ ‘ಬಿನ್-ಲಾಡೆನ್’ ಹತ್ಯೆಯಾದರೆ, ಹೆಣವನ್ನು ಇಸ್ಲಾಮಿಕ್ ಸಂಪ್ರದಾಯದ ಅನುಗುಣವಾಗಿ ಸಮುದ್ರದಲ್ಲಿ ಹೂಳುವ ಯೋಜನೆಗೆ ಅದಾಗಲೇ ನಿರ್ಧರಿಸಿಯಾಗಿತ್ತು. ಜಿಹಾದಿಗಳಿಗೆ ಒಸಾಮಾ ಹೂಳಲ್ಪಟ್ಟ ಜಾಗ, ಯಾತ್ರಾ ಸ್ಥಳವಾಗುವು ದನ್ನು ತಪ್ಪಿಸಲು, ಸಮುದ್ರದಲ್ಲಿ ಅಂತ್ಯ ಸಂಸ್ಕಾರಕ್ಕೆ ಯೋಜನೆ ರೂಪಿಸಲಾಗಿತ್ತು. ಇನ್ನೂ ಸ್ವಲ್ಪ ಸಮಯ ‘ಸಿಚುಯೇಶನ್ ರೂಮ್’ನ ಕಳೆದೆ.

ವಾತಾವರಣದ ಬಿಗುವು ತಟಸ್ಥ ಸ್ಥಿತಿಯನ್ನು ಬೇಡುತಿತ್ತು. ನಾನು ಮತ್ತೆ ನನ್ನ ಓವೆಲ್ ಆಫೀಸಿಗೆ ಹೋಗಿ ಕುಳಿತೆ. ‘ಸಿಚುಯೇಶನ್ ರೂಮ್’ ಆಗಿ ಬದಲಾವಣೆ: ನಾನು ಈ ದಾಳಿಯ ಕಾರ್ಯಾಚರಣೆಯನ್ನು ಪರೋಕ್ಷವಾಗಿ ‘ಲಿಯೋನ್’ ಮೂಲಕ ತಿಳಿದುಕೊ
ಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು. ನಾನು ಕಾರ್ಯಾಚರಣೆಯ ವೇಳೆ ಮೆಕ್-ರಾವೆನ್ ಜತೆ ನೇರ ಸಂಪರ್ಕದಲ್ಲಿ ಇರುವುದು ಬೇಡ ಎಂಬುದು ಥಾಮಸ್ ಡೊನಿಲೊನ್ ರ ಅಭಿಮತವಾಗಿತ್ತು.

ಹಾಗೆ ಮಾಡಿದರೆ ‘ಮೈಕ್ರೋಮ್ಯಾನೇಜ್’ ಮಾಡಿದಂತೆ ಭಾಸವಾಗುವ ಸಂಭವ ಇರುತ್ತದೆ. ಸಾಮಾನ್ಯವಾಗಿ ಅದು ಒಳ್ಳೆಯ ಪದ್ಧತಿಯೂ ಅಲ್ಲ, ಒಮ್ಮೆ ಏನಾದರೂ ಕಾರ್ಯಾಚರಣೆ ವಿಫಲವಾದರೆ ರಾಜಕೀಯವಾಗಿಯೂ ಬಹಳ ಕ್ಲಿಷ್ಟಕರ ಸನ್ನಿವೇಶ
ಎದುರಾಗುತ್ತದೆ. ಅದು ಸರಿಯಾದ ಯೋಚನೆಯೂ ಆಗಿತ್ತು. ಇಲ್ಲಿಯ ಮಧ್ಯಾಹ್ನ 3:30ರ ಹೊತ್ತಿಗೆ (ಪಾಕಿಸ್ತಾನದಲ್ಲಿ ಮೇ 1ರ ರಾತ್ರಿ 1:30 ಗಂಟೆ), ‘ಲಿಯೋನ್’ ಹೆಲಿಕಾಪ್ಟರ್ ಗಳು ಅಬ್ಬೊಟ್ಟಾಬಾದ್ ಕಾಂಪೌಂಡ್ ಹತ್ತಿರ ತಲುಪುತ್ತಿರುವುದಾಗಿ ಪ್ರಕಟಿಸಿದರು.

ನಾನು ಸಿಚುಯೇಶನ್ ರೂಮಿಗೆ ಓಡುವ ಧಾವಂತದಲ್ಲಿದ್ದಾಗ, ಅ ಪಕ್ಕದಲ್ಲಿನ ‘ಕಾನರೆನ್ಸ್ ರೂಮಿನ’ ಪರದೆಯ ಮೇಲೆ, ಆ
ಕಾಂಪೌಂಡ್‌ನ ‘ಏರಿಯಲ್ ವ್ಯೂ’ ಬಿತ್ತರಗೊಳ್ಳುತಿತ್ತು. ಜತೆಗೆ ಮೆಕ್ರಾವೆನ್ ಅವರ ಧ್ವನಿಯೂ ಕೇಳಿಸುತ್ತಾ ಇತ್ತು.  ಹೆಲಿಕಾಪ್ಟರ್ ‌ಗಳು ಕಾಂಪೌಂಡ್ ಹತ್ತಿರ ಪ್ರವೇಶಿಸುತ್ತಿದ್ದುದು ಕಂಡು ಬಂತು. “i need to watch this” ಅಂದುಕೊಂಡು, ನಾನೂ ಸಿಚುಯೇಶನ್ ರೂಮಿಗೆ ಹೋಗದೆ, ನೇರವಾಗಿ ವಿಡಿಯೋ ಕಾಣಿಸುತ್ತಿರುವ ರೂಮಿನ ಒಳಗಡೆ ಹೋಗಿ ನಿಂತೆ. ಅವೆಲ್ಲವನ್ನು ನೀಲಿ-ಯುನಿಫಾರ್ಮ್‌ ನಲ್ಲಿದ್ದ ಏರ್ ಫೋರ್ಸ್‌ನ ಬ್ರಿಗೇಡಿಯರ್ ‘ಬ್ರಾಡ್ ವೆಬ್ಬ್’ ಕಂಪ್ಯೂಟರ್ ಮೂಲಕ ಕುಳಿತಲ್ಲಿಂದಲೇ ವೀಕ್ಷಿಸುತ್ತಿದ್ದರು.

ನಾನು ಒಳಗಡೆ ಹೋದ ತಕ್ಷಣ ನನಗೆ ಖುರ್ಚಿ ಬಿಟ್ಟುಕೊಟ್ಟು, ಏಳಲು ಸಿದ್ದರಾದರು. ನಾನು ನಿಂತೇ ಇದ್ದು, ಅವರ ಹೆಗಲ ಮೇಲೆ ಕೈ ಹಾಕಿ ತಡೆದು, ಅಲ್ಲಿಯೇ ಕುಳ್ಳಿರಿಸಿದೆ. ವೆಬ್ಬ್, ಮೆಕ್ರಾವೆನ್ ಮತ್ತು ಲಿಯೋನ್ ಇಬ್ಬರಿಗೂ ‘ನಾನು ಸ್ಥಾನ ಬದಲಿಸಿದ್ದೇನೆ, ಮತ್ತು
ನೇರ ಪ್ರಸಾರವನ್ನು ನೋಡುತ್ತಿದ್ದೇನೆ ಎಂದು ತಿಳಿಸಿ’ ಎಂದೆ. ಸ್ವಲ್ಪ ಹೊತ್ತಿನಲ್ಲಿ ಸಿಚುಯೇಶನ್ ರೂಮಿನಲ್ಲಿದ್ದ ನಮ್ಮ ಟೀಮಿನ ಎಲ್ಲರೂ ಅದೇ ರೂಮಿಗೆ ಬಂದು ತುರುಕಿ ಕೊಂಡರು. ಕ್ಷಣಾರ್ಧದಲ್ಲಿ, ಕಾನೆರೆನ್ಸ್ ರೂಮ್ ಒಂದು, ಹೊಸ ‘ಸಿಚುಯೇಶನ್ ರೂಮ್’ ಆಗಿ ಬದಲಾವಣೆಗೊಂಡದ್ದು ಒಂದು ವಿಪರ್ಯಾ ಸವೇ.

ಮಿಲಿಟರಿ ಕಾರ್ಯಾಚರಣೆಯ ನೇರಪ್ರಸಾರ ನೋಡಿದೆ: ಅಮೆರಿಕಾದ ಅಧ್ಯಕ್ಷನಾಗಿ ನಾನು ಒಂದು ಮಿಲಿಟರಿ ಕಾರ್ಯಾ ಚರಣೆಯ ನೇರಪ್ರಸಾರ ನಡೆಯುತ್ತಿರುವುದನ್ನು ನೋಡಿದ್ದು, ಅದು ಮೊತ್ತ ಮೊದಲು ಹಾಗೂ ಅದೊಂದೇ ಬಾರಿ. ನಾವೆಲ್ಲರೂ ನೋಡ-ನೋಡುತ್ತಿದ್ದಂತೆ, ಒಂದು “Black Hawk”‘ ಹೆಲಿಕಾಪ್ಟರ್ ತತ್ತರಗೊಂಡು ಇಳಿಯುತ್ತಿರುವಂತೆ ಭಾಸವಾಯಿತು.

ಮೆಕ್ರಾವೆನ್ ತಕ್ಷಣ ಒಂದು ಹೆಲಿಕಾಪ್ಟರ್, ತನ್ನ ಸಮತೋಲನ ಕಾಯ್ದುಕೊಳ್ಳುವಲ್ಲಿ ವಿಫಲವಾಗಿ, ಕಾಂಪೌಂಡಿನ ಗೋಡೆಯಾ ಕಡೆಗೆ ವಾಲುತ್ತಿದೆ ಎಂದರು. ನನಗೆ ತಕ್ಷಣ ಶಾಕ್ ಹೊಡೆದ ಅನುಭವ. ಮನಸ್ಸಿನಲ್ಲಿ ದುರ್ಘಟನೆಗಳ ಆಲೋಚನೆಯ ಸರಮಾಲೆಯೇ ಹಾದು ಹೋಯಿತು. ಹೆಲಿಕಾಪ್ಟರ್ ಬೆಂಕಿಗೆ ಆಹುತಿಗೊಂಡು, ಸೀಲ್ ಕಮಾಂಡೋಗಳು ಹೊರಬರಲು
ಕಷ್ಟಪಟ್ಟಂತೆ, ಸುತ್ತಮುತ್ತಲಿನ ಮನೆಯ ಜನರೆ ಹೊರಗಡೆ ಬಂದಂತೆ, ಅಷ್ಟರಲ್ಲಿ ಪಾಕಿಸ್ತಾನಿ ಮಿಲಿಟರಿಯೂ ಸ್ಥಳಕ್ಕೆ ಧಾವಿಸಿ ದಂತೆ ಕಾಣಿಸುವ ಚಿತ್ರದ ಸುರುಳಿ ತಲೆಯಲ್ಲಿ ಓಡುತಿತ್ತು.

ಮೆಕ್ರಾವೆನ್ ಅವರ ಮಾತು ನನ್ನ ದುಃಸ್ವಪ್ನದ ಸುರುಳಿಯನ್ನು ಕೊನೆಗೊಳಿಸಿತ್ತು. ‘it will be fine’ ಶಾಪಿಂಗ್ ಮಾಲಿನ ತಳ್ಳುವ
ಬುಟ್ಟಿಗೆ, ಕಾರ್ ಬಂಪರ್ ತಗುಲಿದಂತೆ ಆಗಿದೆ’ ಎಂದು ಚಟಾಕಿ ಹಾರಿಸಿ ವಾತಾವರಣವನ್ನು ತಿಳಿಗೊಳಿಸಿ, ಈ ಎರಡೂ ಹೆಲಿಕ್ಯಾಪ್ಟರ್ ಪೈಲೆಟ್ ಗಳು ನಮ್ಮ ಮಿಲಿಟರಿಯ ಅತ್ಯಂತ ಪರಿಣತರು. ಯಾವುದೇ ತೊಂದರೆ ಇಲ್ಲದೆ ನಿಧಾನವಾಗಿ ಕೆಳಗೆ ಇಳಿಸುತ್ತಾರೆ ಎಂದು ವಿಶ್ವಾಸದಿಂದ ನುಡಿದರು ಮೆಕ್ರಾವೆನ್.

ಕೆಲ ಕಾಲ ಮೂಕ ಪ್ರೇಕ್ಷಕನಾಗಿದ್ದೆ: ಅವರು ಹೇಳಿದಂತೆಯೇ ಆಯಿತು. ಹೆಲಿಕಾಪ್ಟರ್ ಪಂಕಗಳ ಗಾಳಿ, ಎತ್ತರದ ಕಂಪೌಂಡಿನ ಗೋಡೆಗಳ ಮದ್ಯದಲ್ಲಿ ಸಿಲುಕಿ ಸುಳಿಗಾಳಿಯಂತೆ ಮಾರ್ಪಟ್ಟಿದ್ದರಿಂದ ಒಳಗಡೆ ಹೆಲಿಕಾಪ್ಟರ್ ಇಳಿಸುವ ಮತ್ತು ವಾಪಾಸ್
ಹೊರಡುವ ಕ್ರೀಯೆ ಯೋಚಿಸಿದ್ದಕ್ಕಿಂತ ಕಷ್ಟಕರವಾಗಿತ್ತು. ಮತ್ತು ಸಂದರ್ಭಕ್ಕೆ ತಕ್ಕಂತೆ ಸಣ್ಣ ಪುಟ್ಟ ಮಾರ್ಪಾಡಿನ ಅವಶಕತೆ ಇತ್ತು. ಅದೇ ಕಾರಣದಿಂದ ಒಂದು ಹೆಲಿಕಾಪ್ಟರ್ ಸಮತೋಲನ ತಪ್ಪಿದರೂ, ಅದರ ಹಿಂದಿನ ಉದ್ದದ ಭಾಗವನ್ನು ಕಾಂಪೌಂಡ್ ಗೋಡೆಗೆ ತಾಗಿಸಿ ಇಳಿಸಿದ್ದರಿಂದ ಭಾರೀ ಅನಾಹುತ ತಪ್ಪಿತ್ತು.

ಕೆಲವೇ ಕ್ಷಣಗಳಲ್ಲಿ ನಿಜವಾದ ದಾಳಿಯ ವಿಶ್ವರೂಪ ನಮ್ಮ ಪರದೆಯ ಮೇಲೆ ಮೂಡಿಬರಲು ಪ್ರಾರಂಭವಾಗಿತ್ತು. ಮುಂದಿನ 20
ನಿಮಿಷಗಳು ತುಂಬಾ ತಳಮಳದಿಂದ ಕೂಡಿತ್ತು. ನಮ್ಮ ಎದುರಿನ ವಿಡಿಯೋ ಕೂಡ ಕತ್ತಲಿನಲ್ಲಿ ಮಸುಕಿನಿಂದ ಕೂಡಿತ್ತು. ಮೆಕ್-ರಾವೆನ್ ಅವರಿಗೂ ಸೀಮಿತ ವೀಕ್ಷಣೆಗೆ ಅವಕಾಶ ಇತ್ತು ಅನ್ನಿಸುತ್ತದೆ. ಅವರೂ ಕೂಡ ಕೆಲ ಕಾಲ ಮೂಕ ಪ್ರೇಕ್ಷಕನಾಗಿ,
ಅವರ ಕಂಪ್ಯೂಟರ್ ಪರದೆಯನ್ನು ದಿಟ್ಟಿಸುತ್ತಾ ಇರುವುದು ನನ್ನ ಗಮನಕ್ಕೆ ಬಂತು.

ಕಮಾಂಡೋಗಳು ಕೋಣೆಯಿಂದ-ಕೋಣೆಗೆ ತಲಾಶೆ ಮಾಡಿದ್ದನ್ನು, ಕೆಲವೊಂದು ಬರ್ಬರವಾದ ವಿಚಾರಗಳನ್ನು ನಮಗೆ ತಿಳಿಸಬಾರದೆಂದು ತಟಸ್ಥವಾಗಿದ್ದರು ಎಂಬುದು ನನ್ನ ಅಭಿಪ್ರಾಯ. ಸ್ವಲ್ಪ ಸಮಯದ ನಂತರ ಹಠಾತ್ತಾಗಿ, ನನ್ನ ನೀರಿಕ್ಷೆ ಯನ್ನೂ ಮೀರಿ, ವರ್ಷಾನುಗಟ್ಟಲೆ ಯೋಜನೆಯ ಮತ್ತು ಗುಪ್ತಚರ್ಯದ ಕಾರ್ಯಕ್ಕೆ ಸಿಕ್ಕ ಪರಮೋಚ್ಚ ಪ್ರಶಸ್ತಿಯೋ ಎಂಬಂತೆ, ನಾವು ಏನನ್ನು ಕೇಳಲು ಬಯಸಿದ್ದೆವೋ ಅದನ್ನು, ಮೆಕ್ -ರಾವೆನ್ ಮತ್ತು ಲಿಯೋನ್ ಒಟ್ಟಿಗೆ ಹೇಳಿದರು.

ನ್ಯಾಯಕ್ಕೆ ಜಯ: ಒಸಾಮಾ ಬಿನ್-ಲಾಡೆನ್ ಗೆ “ಗೆರೊನಿಮೊ” ಎಂಬ ಕೋಡ್ ನೇಮ್ ಅನ್ನು ಈ ಕಾರ್ಯಾಚರಣೆಗೋಸ್ಕರ ಕೊಡಲಾಗಿತ್ತು. ಅಮೆರಿಕಾದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಭಯೋತ್ಪಾದನೆ ಕೃತ್ಯ ಎಸಗಿದ ಮನುಷ್ಯ, ಸಾವಿರಾರು ಅಮಾಯಕ
ಜನರ ಸಾವಿಗೆ ನೇರ ಹೊಣೆಯಾಗಿದ್ದ ಮನುಷ್ಯ, ಜಗತ್ತಿನ ಇತಿಹಾಸದಲ್ಲಿ ಭಯದ, ಅರಾಜಕತೆಯ, ಹೊಳೆಯನ್ನು ಹರಿಸಿದ ಮನುಷ್ಯ, ನೆಲದಲ್ಲಿ ಸತ್ತು ಬಿದ್ದಿದ್ದ!

ಅಮೆರಿಕಾದ ಸೀಲ್ ಕಮಾಂಡೋಗಳು ನ್ಯಾಯಕ್ಕೆ ಜಯ ಒದಗಿಸಿದರು ಎಂದು ಎನಿಸಿತು. ನಮ್ಮ ಕಾನರೆನ್ಸ್ ರೂಮಿನಲ್ಲಿ ಎಲ್ಲರೂ ಕಟ್ಟಿದ ಉಸಿರನ್ನು ಒಂದು ಸಲ ಒಟ್ಟಿಗೆ ಬಿಟ್ಟಂತೆ ಭಾಸವಾಯಿತು. ನನ್ನಕಣ್ಣುಗಳು ಇನ್ನೂಆ ನೇರ ವಿಡಿಯೋ ಪ್ರಸಾರವನ್ನೇ ನೋಡುತಿತ್ತು. we got him ಎಂದು ಹೂಂಕರಿಸಿದೆ.

Congratulation boss ಎಂದರು: ಮುಂದಿನ 20 ನಿಮಿಷ ತಮ್ಮ ಕುರ್ಚಿಯಿಂದ ಯಾರೂ ಕದಲಲಿಲ್ಲ. ಸೀಲ್ ಕಮಾಂಡೋ ಗಳ ಕೆಲಸ ಇನ್ನೂ ಮುಗಿದಿರಲಿಲ್ಲ. ಮನೆಯೊಳಗಿನ ಮೂರು ಹೆಂಗಸರು ಮತ್ತು ಒಂಬತ್ತು ಮಕ್ಕಳನ್ನು ಒಂದು ಮೂಲೆಯಲ್ಲಿ ಕ್ಷೇಮವಾಗಿ ಹಿಡಿದಿಟ್ಟಿದ್ದರು. ಅವರನ್ನು ಪ್ರಶ್ನಿಸಿ ಕೆಲವು ಮಾಹಿತಿಯನ್ನು ಪಡೆಯಲಾಯಿತು.

ಬಿನ್-ಲಾಡೆನ್ ಹೆಣವನ್ನು ಪ್ಯಾಕ್ ಮಾಡಿದರು. ಮನೆಯೊಳಗಿನ ಕೆಲವು ಕಾಗದ ಪತ್ರಗಳು, ಕಡತಗಳು, ಕಂಪ್ಯೂಟರ್, ಹಾರ್ಡ್‌ ಡಿಸ್ಕ್ ಮತ್ತು ಹತ್ತು ಹಲವು ವಸ್ತುಗಳನ್ನು, ಗುಪ್ತಚರ ಮಾಹಿತಿಯ ದೃಷ್ಟಿಯಿಂದ ವಶಪಡಿಸಿಕೊಂಡರು. ವಾಲಿಬಿದ್ದಿದ್ದ ಒಂದು ಹೆಲಿಕಾಪ್ಟರ್‌ಗೆ, ಸೋಟಕಗಳನ್ನು ಇರಿಸಿ ಧ್ವಂಸಗೊಳಿಸಲಾಯಿತು. ಅದೇ ಸ್ವಲ್ಪ ದೂರದಲ್ಲಿ ಹಾರುತ್ತಿದ್ದ ಮತ್ತೊಂದು
‘chinook‘ ರೆಸ್ಕ್ಯೂ ಹೆಲಿಕಾಪ್ಟರನ್ನು ಬದಲಿಯಾಗಿ ಬಳಸಿಕೊಳ್ಳಲಾಯಿತು. ಆ ಜಾಗದಿಂದ ಹೆಲಿಕಾಪ್ಟರ್ ಗಳು ಸುರಕ್ಷಿತವಾಗಿ ಹೊರಟ ಕೂಡಲೇ, ಜೋ ಬೈಡನ್ ನನ್ನ ತೋಳಮೇಲೆ ಕೈಯನ್ನಿಟ್ಟು ಒತ್ತುತ್ತಾ ‘Congratulation boss”‘ಎಂದು ಹೇಳಿದರು.
ನಾನು ಎದ್ದು ನಿಂತು ಒಮ್ಮೆ ತಲೆ ಬಾಗಿಸಿದೆ.

ಎಲ್ಲರ ಜತೆ ಕೈಕುಲುಕಿದೆ. ಹೆಲಿಕಾಪ್ಟರ್‌ಗಳು ಅಲ್ಲಿಂದ ಹೊರಟರೂ, ಇನ್ನೂ ಪಾಕಿಸ್ತಾನಿ ಗಡಿರೇಖೆಯ ಒಳಗಡೆಯೇ ಇತ್ತು. 90 ನಿಮಿಷದ ಹಾದಿ ದೂರ ಎನಿಸುತಿತ್ತು. ಎಲ್ಲರೂ ಶಾಂತವಾಗಿಯೇ ಇದ್ದರು.

(ಮುಂದುವರಿಯುವುದು)