ನೂರೆಂಟು ವಿಶ್ವ
ಕೆಲವು ವರ್ಷಗಳ ಹಿಂದೆ ಪುಣೆಯಲ್ಲಿರುವ ಓಶೋ ಆಶ್ರಮಕ್ಕೆ ಹೋಗಿದ್ದೆ. ಓಶೋ ಅವರ ನಿಕಟವರ್ತಿಯಾಗಿದ್ದ ಹಾಗೂ ‘ಓಶೋ ಇಂಟರ್‌ನ್ಯಾಶನಲ್
ಟೈಮ್ಸ್’ ಪತ್ರಿಕೆ ಸಂಪಾದಕಿಯಾಗಿರುವ ಮಾ ಸಾಧನಾ ಅವರು ನನ್ನನ್ನು ಓಶೋ ಅವರು ವಾಸಿಸುತ್ತಿದ್ದ ಕೋಣೆ, ಅಧ್ಯಯನ ಮಾಡುತ್ತಿದ್ದ ಹಜಾರ, ಅವರ ವಸ್ತುಗಳ ಸಂಗ್ರಹಾಲಯಕ್ಕೆ ಕರೆದುಕೊಂಡು ಹೋದರು. ಅವೆಲ್ಲವನ್ನು ನೋಡಿದ ಬಳಿಕ ಕೊನೆಯಲ್ಲಿ ಓಶೋ ಅವರ ಪುಸ್ತಕ ಸಂಗ್ರಹಾಲಯ ಹಾಗೂ ಓದುವ ಕೋಣೆಗೆ ಕರೆದುಕೊಂಡು ಹೋದರು. ಅದನ್ನು ನೋಡಿ ನಾನು ಮೂಕವಿಸ್ಮಿತನಾದೆ. ಆ ವಿಶಾಲ ಕೋಣೆಯಲ್ಲಿ ಪುಸ್ತಕಗಳನ್ನು ಅತ್ಯಂತ ಶಿಸ್ತಿನಿಂದ, ಅಚ್ಚುಕಟ್ಟಾಗಿ ಜೋಡಿಸಿ ಇಟ್ಟಿದ್ದರು.
ಓಶೋ ಯಾವುದೇ ಊರಿಗೆ, ದೇಶಕ್ಕೆ ಹೋದರೂ ಅಲ್ಲಿನ ಪುಸ್ತಕಗಳ ಅಂಗಡಿಗಳಿಗೆ ತಪ್ಪದೇ ಭೇಟಿ ನೀಡುತ್ತಿದ್ದರು. ಬರುವಾಗ ನೂರಾರು ಪುಸ್ತಕ ಗಳನ್ನು ತರುತ್ತಿದ್ದರು. ಕೆಲವು ಸಲ ಅಲ್ಲಿನ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಿಗೆ ಹೋಗಿ ಕುಳಿತು ನೋಟ್ಸ್ ಮಾಡಿಕೊಂಡು ಬರುತ್ತಿದ್ದರು.
ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಲವತ್ತೊಂದು ದಿನಗಳ ಕಾಲ ಉಳಿದುಕೊಂಡು ಅಲ್ಲಿನ ಗ್ರಂಥಾಲಯದಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಂತೆ ಕುಳಿತು ಅಧ್ಯಯನ, ನೋಟ್ಸ್ ಮಾಡಿಕೊಳ್ಳಲು ವಿಶೇಷ ಅನುಮತಿ ಪಡೆದಿದ್ದರು.
ಮೂಲತಃ ಅಧ್ಯಾಪಕರಾಗಿದ್ದ ಓಶೋ, ಈ ರೀತಿಯ ಅಧ್ಯಯನವನ್ನು ಬಹುವಾಗಿ ಪ್ರೀತಿಸುತ್ತಿದ್ದರು. ಒಮ್ಮೆ ಓಶೋ ಉಪನ್ಯಾಸ ನೀಡಲೆಂದು ಲಂಡನ್‌ಗೆ ಹೋಗಿದ್ದರು. ನ್ಯೂಯಾರ್ಕ್‌ನಲ್ಲಿ ಹದಿಮೂರು ದಿನಗಳ ಕಾಲ ಅವರ ಉಪನ್ಯಾಸ ನಿಗದಿಯಾಗಿತ್ತು. ಅವರಿಗೆ ಅಲ್ಲಿ ಲೈಬ್ರರಿಯನ್ ಜೇಮ್ಸ್ ಕೆಡಿಲಿ ಎಂಬುವವನ ಪರಿಚಯವಾಯಿತು. ಆತ ಓಶೋ ಅವರನ್ನು ಆ ನಗರದಲ್ಲಿರುವ ಪುರಾತನ ಗ್ರಂಥಾಲಯಕ್ಕೆ ಕರೆದುಕೊಂಡು ಹೋದ. ಅಲ್ಲಿ ಸುಮಾರು ಎರಡು ಲಕ್ಷಕ್ಕಿಂತ ಅಽಕ ಪುಸ್ತಕಗಳಿದ್ದವು. ಎಲ್ಲವೂ ಹದಿನೆಂಟು ಹಾಗೂ ಹತ್ತೊಂಬತ್ತನೇ ಶತಮಾನದಲ್ಲಿ ರಚಿಸಿದ ಕೃತಿಗಳು.
ಕೆಲವು ಪುಸ್ತಕಗಳಂತೂ ನೂರು, ನೂರಾ ಐವತ್ತು ವರ್ಷಗಳಷ್ಟು ಹಳೆಯವು. ಕೆಲವಂತೂ ಔಟ್ ಆಫ್ ಪ್ರಿಂಟ್. ಬಹುಶಃ ಜಗತ್ತಿನ ಯಾವ ಗ್ರಂಥಾಲಯಗಳಲ್ಲೂ ಸಿಗದ ಪುಸ್ತಕಗಳು ಅಲ್ಲಿದ್ದವು. ಓಶೋ ಅವರು ತಮ್ಮ ಉಪನ್ಯಾಸ ಮುಗಿಯುವುದನ್ನೇ ಕಾಯುತ್ತಿದ್ದರು. ಹದಿನಾಲ್ಕನೇ ದಿನ ನಾಪತ್ತೆಯಗಿಬಿಟ್ಟರು. ಜೇಮ್ಸ್ ಕೆಡಿಲಿ ಸ್ನೇಹ ಸಂಪಾದಿಸಿ ಆ ಗ್ರಂಥಾಲಯದಲ್ಲಿ ಇಪ್ಪತ್ತೊಂದು ದಿನ ನೋಟ್ಸ್ ಮಾಡಿಕೊಂಡರು. ಕೆಲವು ಕೃತಿಗಳ ನ್ನಂತೂ ಅವರು ನಕಲು ಮಾಡಿಕೊಂಡರು. ಆ ದಿನಗಳಲ್ಲಿ ಜೆರಾಕ್ಸ್ ವ್ಯವಸ್ಥೆ ಇರಲಿಲ್ಲ.
ಓಶೋ ತಮ್ಮನ್ನು ನೋಡಲು ಬರುತ್ತಿದ್ದವರಿಗೆ ನಿರ್ದಾಕ್ಷಿಣ್ಯವಾಗಿ ತಾವು ಯಾರನ್ನೂ ಭೇಟಿ ಮಾಡಬಯಸುವುದಿಲ್ಲ ಎಂದು ಹೇಳುತ್ತಿದ್ದರು. ಅದು
ಹದಿನೆಂಟು, ಹತ್ತೊಂಬತ್ತನೇ ಶತಮಾನದ ಖ್ಯಾತನಾಮ ಲೇಖಕರು, ಸಾಹಿತಿಗಳು ಆಕರ ಗ್ರಂಥಗಳಿಗಾಗಿ ಹುಡುಕಿಕೊಂಡು ಬರುತ್ತಿದ್ದ ಅಪರೂಪದ ಗ್ರಂಥಾಲಯವಾಗಿತ್ತು. ಆ ಲೈಬ್ರರಿಯಲ್ಲಿ ದೊಡ್ಡ ಗಾಜಿನ ಪಾತ್ರೆಯಲ್ಲಿ ಕುಡಿಯುವ ನೀರನ್ನು ಇಡುವಂತೆ, ಇಂಕ್ (ಶಾಯಿ)ನ್ನು ತುಂಬಿ ಇಡುತ್ತಿದ್ದರು.
ಯಾರು ಬೇಕಾದರೂ ಅಲ್ಲಿ ಹೋಗಿ ಇಂಕನ್ನು ಉಚಿತ ವಾಗಿ ತುಂಬಿಸಿಕೊಳ್ಳಬಹುದಿತ್ತು. ಓಶೋ ಪ್ರತಿದಿನ ಕನಿಷ್ಠ ಎರಡು ಸಲವಾದರೂ ಇಂಕ್ ತುಂಬಿಸಿಕೊಳ್ಳುತ್ತಿದ್ದರಂತೆ. ‘ಓಶೋ ಬರೆಯುವುದನ್ನು ನೋಡಿದರೆ, ಇಂಕ್ ಒಂದೇ ಅಲ್ಲ, ನಿಬ್ ಅನ್ನೂ ಉಚಿತವಾಗಿ ಕೊಡಬೇಕಾಗುತ್ತದೆ. ಬರೆದು
ಬರೆದೂ ನಿಬ್ ಸವೆದುಹೋಗಬಹುದು’ ಎಂದು ಕೆಡಿಲಿ ತಮಾಷೆ ಮಾಡುತ್ತಿದ್ದರಂತೆ.
ಓಶೋಗೆ ಸದಾ ಪೆನ್ನು, ಕಾಗದ ಪಕ್ಕದಲ್ಲೇ ಇರಬೇಕು. ಒಮ್ಮೊಮ್ಮೆ ಕಾಗದವೇನಾದರೂ ತಕ್ಷಣ ಸಿಗದಿದ್ದರೆ ಅಂಗೈ ಮೇಲೆಯೇ ಬರೆದುಕೊಳ್ಳು ತ್ತಿದ್ದರು. ಕೆಲವು ಸಲ ಈ ಅಂಗೈ ಬರಹ (ನಿಜವಾದ ಅರ್ಥದಲ್ಲಿ ಹಸ್ತಪತ್ರಿ!) ಕೈಯ ಎರಡೂ ಕಡೆಗಳಲ್ಲಿ ತುಂಬಿ, ಮೊಣಕೈವರೆಗೂ ಬಂದು ಬಿಡುತ್ತಿತ್ತಂತೆ. ಕೆಲವು ಸಲ ಅದೂ ತುಂಬಿ, ಪಾದದ ಮೇಲೂ ಬರೆದುಕೊಳ್ಳುತ್ತಿದ್ದರಂತೆ. ನಂತರ ಕಾಗದ ಸಿಕ್ಕ ಬಳಿಕ ಅವನ್ನೆಲ್ಲ ಭಟ್ಟಿ ಇಳಿಸುತ್ತಿ
ದ್ದರಂತೆ. ರಾತ್ರಿ ಏಕಾಏಕಿ ಎಚ್ಚರವಾಗಿ ತಟ್ಟನೆ ಹೊಳೆದಾಗ, ಕೈ, ಕಾಲಿನ ಮೇಲೆಲ್ಲ ಸಂಕ್ಷಿಪ್ತವಾಗಿ ಪಾಯಿಂಟ್‌ಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ಮರುದಿನ ಎಚ್ಚರವಾದಾಗ ಅವನ್ನೆಲ್ಲ ನೋಟ್ ಬುಕ್‌ನಲ್ಲಿ ದಾಖಲಿಸುತ್ತಿದ್ದರು.
‘ಎಲ್ಲರ ಮನಸ್ಸಿನಲ್ಲೂ ಅದ್ಭುತ ಯೋಚನೆಗಳು, ಐಡಿಯಾಗಳು ಆಗಾಗ ಹಾದು ಹೋಗುತ್ತಲೇ ಇರುತ್ತವೆ. ಇದನ್ನು ತಕ್ಷಣ ಹಿಡಿದಿಟ್ಟುಕೊಳ್ಳಬೇಕು.
ಇಲ್ಲದಿದ್ದರೆ ನಮ್ಮ ಮನಸ್ಸಿನಲ್ಲಿ ಹಾದು ಹೋದ ಐಡಿಯಾಗಳೇ ನಮ್ಮದಾಗುವುದಿಲ್ಲ’ ಎಂದು ಓಶೋ ಹೇಳಿದ್ದಾರೆ. ಯಾವುದೇ ಹೊಸ ಪುಸ್ತಕ ಓದಿದರೂ, ಓಶೋ ಪುಸ್ತಕದ ಕೊನೆಯಲ್ಲಿ ನೋಟ್ಸ್ ಮಾಡಿಕೊಳ್ಳುತ್ತಿದ್ದರು. ಕೆಲವು ಸಲ ಪ್ರತ್ಯೇಕ ನೋಟ್‌ಬುಕ್‌ಗಳ ಮೇಲೂ ಟಿಪ್ಪಣಿ ಮಾಡಿಕೊಳ್ಳು
ತ್ತಿದ್ದರು.
ದಾಸ್ಕೋವಸ್ಕಿಯ Notes from the underground ಪುಸ್ತಕ ಅವರ ಮೇಲೆ ಬಹಳ ಪ್ರಭಾವ ಬೀರಿತ್ತು. ದಾಸ್ಕೋವಸ್ಕಿ ಸಹ ಎಲ್ಲಿಯೇ ಇರಲಿ, ತಮ್ಮ ಮನಸ್ಸಿನಲ್ಲಿ ಸುಳಿದು ಹೋದ ಆಲೋಚನೆಗಳನ್ನೆಲ್ಲ ತಟ್ಟನೆ ಬರೆದಿಟ್ಟುಕೊಂಡು ಅದನ್ನೇ ಪುಸ್ತಕ ಮಾಡಿದ್ದರು. ಆ ಮಹಾನ್ ಬರಹಗಾರನ ತಲೆಯಲ್ಲಿ ಎಂಥೆಂಥ ಆಲೋಚನೆಗಳು, ಕಲ್ಪನೆಗಳು ಹಾದುಹೋಗಿದ್ದವು ಎಂಬುದನ್ನು ಊಹಿಸಬಹುದು.
ಅಂದು ನನಗೆ ಮಾ ಸಾಧನಾ ಅವರು ಹೇಳಿದರು- ‘ಇಲ್ಲಿ ಸುಮಾರು ೬೦-೭೦ ಸಾವಿರ ಪುಸ್ತಕಗಳಿವೆ. ದೇಶ-ವಿದೇಶಗಳಿಂದ ಓಶೋ ಸಂಗ್ರಹಿಸಿದ ಕೃತಿಗಳಿವು. ಈ ಪುಸ್ತಕಗಳ ಪೈಕಿ ಯಾವುದಾದರೂ ತೆರೆದು ನೋಡಿ, ಅದರಲ್ಲಿ ಓಶೋ ಹಸ್ತಾಕ್ಷರ, ಮಾಡಿಕೊಂಡ ಟಿಪ್ಪಣಿಗಳು, ಷರಾ ಕಾಣುತ್ತವೆ. ಒಂದೇ ಒಂದು ಪುಸ್ತಕದಲ್ಲೂ ಅವರ ನೋಟ್ಸ್ ಇಲ್ಲ ಎಂದು ಹೇಳುವಂತಿಲ್ಲ. ಅವರು ಓದಿದ ಪುಸ್ತಕಗಳಷ್ಟೇ ಈ ಸಂಗ್ರಹದಲ್ಲಿ ಇರುವುದು. ಬೇಕಾದರೆ ನೀವು ಪರೀಕ್ಷಿಸಬಹುದು’. ನಾನು ಪರೀಕ್ಷಿಸಲು ಅಲ್ಲ, ಆದರೆ ಕುತೂಹಲದಿಂದ ಒಂದೆರಡು ಪುಸ್ತಕಗಳನ್ನು ತೆಗೆದು ಅವುಗಳ ಮೈದಡವಿ, ನಿಧಾನ ವಾಗಿ ಪುಟಗಳನ್ನು ತಿರುವಿದೆ. ಪ್ರತಿಪುಟದ ಮೇಲೂ ಓಶೋ ಷರಾಗಳಿದ್ದವು, ಪ್ರಮುಖ ವಾಕ್ಯಗಳ ಕೆಳಗೆ ಗೆರೆ ಹಾಕಿದ್ದರು.
ಬೇರೆ ಬೇರೆ ಬಣ್ಣಗಳ ಪೆನ್‌ಗಳಲ್ಲೂ ಮಾಡಿದ ನೋಟ್ಸ್ ಗಳಿದ್ದವು. ತಾವು ಆ ಪುಸ್ತಕವನ್ನು ಓದಿದ ದಿನಾಂಕವನ್ನು ಸಹ ಅವರು ನಮೂದಿಸಿದ್ದರು. ಈ
ಪುಸ್ತಕದಲ್ಲಾದರೂ, ಓಶೋ ಬರೆದಿರಲಿಕ್ಕಿಲ್ಲ ಎಂದು ನಾನು ಆ ಕೋಣೆಯಲ್ಲಿನ ಮೂಲೆಯಲ್ಲಿದ್ದ ಪುಸ್ತಕವನ್ನು ಎತ್ತಿಕೊಂಡರೆ, ಓಶೋ ಕೊನೆಯ ಪುಟದಲ್ಲಿ ಮೂರು ಪುಟ್ಟ ಟಿಪ್ಪಣಿ ಬರೆದಿದ್ದರು!
ಓಶೋ ಅಧ್ಯಯನವಿಲ್ಲದೇ ಉಪನ್ಯಾಸ ಮಾಡುತ್ತಿರಲಿಲ್ಲ. ಪ್ರತಿದಿನ ಅಧ್ಯಯನಕ್ಕಾಗಿ ಕನಿಷ್ಠ ಎರಡು ಗಂಟೆಗಳನ್ನಾದರೂ ಮೀಸಲಿಡುತ್ತಿದ್ದರು. ಅವರ ಜತೆ ಕಾಡುಹರಟೆ ಹೊಡೆಯುವ ಬದಲು ಪುಸ್ತಕದ ಬಗ್ಗೆ ಮಾತನಾಡುವುದಾದರೆ ಅದಕ್ಕೆ ಅವಕಾಶ ಒದಗಿಸಿರುತ್ತಿದ್ದರು. ತಮಗೆ ಉಡುಗೊರೆಯಾಗಿ
ಎಂಥ ಪುಸ್ತಕಗಳನ್ನು ಕೊಡುತ್ತಾರೆಂಬುದರ ಬಗ್ಗೆ ಅವರಿಗೆ ತೀವ್ರ ಆಸ್ಥೆ ಇದ್ದಂತಿತ್ತು. ತಾವು ಇಷ್ಟಪಟ್ಟ ಪುಸ್ತಕಗಳ ಬಗ್ಗೆ “Books I have loved” ಎಂಬ ಪುಸ್ತಕವನ್ನು ಸಹ ಅವರು ಬರೆದಿದ್ದಾರೆ. ಓಶೋ ಅವರ ಉಪನ್ಯಾಸ, ಪ್ರಶ್ನೋತ್ತರಗಳನ್ನು ಸೇರಿಸಿ ಸುಮಾರು ೬೫೦ಕ್ಕೂ ಹೆಚ್ಚು ಪುಸ್ತಕಗಳು ಅವರ ಹೆಸರಿ ನಲ್ಲಿವೆ.
ಈ ಕೃತಿಗಳನ್ನು ಓದುವಾಗ ಅವರ ಅಧ್ಯಯನದ ವಿಸ್ತಾರ, ವೈಶಾಲ್ಯ, ಆಳವೇನೆಂಬುದು ಗೊತ್ತಾಗುತ್ತದೆ. ನಾನು ಮಂತ್ರಾಲಯಕ್ಕೆ ಹೋದಾಗಲೆಲ್ಲ ಈಗಿನ ಪೀಠಾಧಿಪತಿಗಳಾದ ಶ್ರೀ. ಸುಭುದೇಂದ್ರತೀರ್ಥ ಸ್ವಾಮೀಜಿಯವರ ಪೂರ್ವಾಶ್ರಮದ ತಂದೆಯವರಾದ ವಿದ್ವಾನ್ ಗಿರಿಯಾಚಾರ್ ಅವರ ಮನೆಗೆ ಹೋಗಿ ಬರುತ್ತೇನೆ. ಅವರ ವಿದ್ವತ್ತು, ಅಧ್ಯಯನ, ಕಲಿಕೆಯ ಆಸಕ್ತಿ, ಕಲಿಸುವ ತುಡಿತದ ಬಗ್ಗೆ ಅಪರಿಮಿತ ಗೌರವ ಮತ್ತು ಕುತೂಹಲ. ಮಂತ್ರಾಲಯದ ರಾಯರ ಬೃಂದಾವನದಿಂದ ಇನ್ನೂರು ಮೀಟರ್ ದೂರದಲ್ಲಿರುವ ಅವರ ಮನೆಯಲ್ಲಿನ ಅಧ್ಯಯನ ಕಮ್ ಬೆಡ್‌ರೂಮನ್ನು
ನೋಡಿದರೆ, ಅವರ ಕಲಿಕೆಯ ದಾಹವೇನೆಂಬುದು ಗೊತ್ತಾಗುತ್ತದೆ.
ಮಂತ್ರಾಲಯ ಮಠದಲ್ಲಿರುವ ಸಾವಿರಾರು ಪುಸ್ತಕಗಳಲ್ಲಿ ಗಿರಿಯಾಚಾರ್ ಅವರು ಅವುಗಳನ್ನೆಲ್ಲ ಓದಿದ ಕುರುಹುಗಳಿವೆ. ಆ ಎಲ್ಲ ಕೃತಿಗಳಲ್ಲಿ ಓಶೋ ಮಾಡಿಕೊಂಡ ನೋಟ್ಸ್ ಗಳಂತೆ ಪುಸ್ತಕವಿಡೀ ಟಿಪ್ಪಣಿಗಳು. ಅವರ ಟೇಬಲ್ ತುಂಬಾ ನೋಟ್ಸ್ ಗಳ ಕಂತೆಕಂತೆ. ಅವರ ಮಂಚಕ್ಕೆ ತಾಕಿಕೊಂಡು ಒಂದು ಸ್ವಿಚ್ ನೇತಾಡುತ್ತಿರುತ್ತದೆ. ರಾತ್ರಿ ಮಲಗಿದಾಗ ಏನೋ ತಟ್ಟನೆ ಹೊಳೆದರೆ, ಕೈಗೆಟಕುವಂತಿರುವ ಆ ಸ್ವಿಚ್‌ನ್ನು ಆನ್ ಮಾಡಿಕೊಂಡು ನೋಟ್ಸ್ ಮಾಡಿಕೊಳ್ಳಲು ಅನುವಾಗಲೆಂದು ಆ ವ್ಯವಸ್ಥೆ. ಒಮ್ಮೊಮ್ಮೆ ರಾತ್ರಿ ಮಲಗಿದಾಗ ತಲೆಯಲ್ಲಿ ಹೊಳೆದ ಸಂಗತಿ ಗಳನ್ನು ತಾಪ್ಡೇತೋಪ್ಡ್ ದಾಖಲಿಸಲು ಅನುಕೂಲವಾಗಲು ದಿಂಬಿನ ಪಕ್ಕದಲ್ಲೇ ಬಳಪ ಹಾಗೂ ಪಾಟಿ (ಸ್ಲೇಟು). ಇದರಲ್ಲಿ ಬರೆಯಲು ಲೈಟ್‌ನ್ನು ಹಾಕಿಕೊಳ್ಳಬೇಕಿಲ್ಲ. ಮಲಗಿದ್ದಂತೆ ಪಾಟಿಯಲ್ಲಿ ಪಾಯಿಂಟ್ ಗುರುತು ಹಾಕಿಕೊಳ್ಳುತ್ತಾರೆ.
ಮನೆಯಲ್ಲಿ ಯಾವುದೇ ರೂಮಿಗೆ ಹೋದರೂ ತಕ್ಷಣ ಸಿಗುವಂತೆ ಎಲ್ಲಡೆ ಪೆನ್ನು, ನೋಟ್‌ಬುಕ್ ಇಟ್ಟುಕೊಂಡಿದ್ದಾರೆ. ಬೆಳಗ್ಗೆ ಬೇಗ ಎದ್ದು ಪ್ರಾತಃ ವಿಽಗಳನ್ನು ಮುಗಿಸಿ ಕೆಲಕಾಲ ಅಧ್ಯಯನದಲ್ಲಿ ತೊಡಗಿದ ನಂತರವೇ ಬೇರೆ ಕೆಲಸ. ಇದನ್ನು ಬದುಕಿನ ನಿತ್ಯಕರ್ಮದಂತೆ ಅರವತ್ತು ವರ್ಷಗಳಿಂದ ಭಕ್ತಿಯಿಂದ ನಡೆಸಿಕೊಂಡು ಬಂದಿದ್ದಾರೆ. ಮಂತ್ರಾಲಯದಲ್ಲಿರುವ ಸಂಸ್ಕೃತ ವಿದ್ಯಾಪೀಠದಲ್ಲಿ ಹಲವು ವರ್ಷಗಳ ಕಾಲ ಮುಖ್ಯಸ್ಥರಾಗಿದ್ದ ಅವರಿಗೆ ಅಧ್ಯಾಪನವೇ ಜೀವನ. ಕಲಿಕೆ ಹಾಗೂ ಕಲಿಸುವಿಕೆಯಲ್ಲೇ ಬದುಕಿನ ಸಾರ್ಥಕ್ಯವನ್ನೂ ಕಂಡುಕೊಂಡವರು!
ಇಂದಿಗೂ ಮಠದಲ್ಲಿ ಶ್ರೀ ಸುಭದೇಂದ್ರ ತೀರ್ಥರಿದ್ದರೆ, ಅವರಿಗೆ ಕನಿಷ್ಠ ಮುಕ್ಕಾಲುಗಂಟೆ ಪಾಠ ಮಾಡಿ ಬರುತ್ತಾರೆ. ವ್ಯಾಕರಣ, ತರ್ಕ, ಅಲಂಕಾರ, ಮೀಮಾಂಸೆ… ಬಗ್ಗೆ ತಮ್ಮ ಪ್ರಖಾಂಡ ಜ್ಞಾನವನ್ನು ಧಾರೆಯೆರೆಯುತ್ತಾರೆ. ಸಾಯಂಕಾಲವಾಗುತ್ತಿದ್ದಂತೆ, ಮನೆಗೆ ಹೋಗಿ ಪುನಃ ಅಧ್ಯಯನದಲ್ಲಿ ತಲ್ಲೀನ. ಅವರು ತಮ್ಮ ಬದುಕನ್ನೇ ಹೀಗೆ ಕಳೆದರು. ಅವರಿಗೆ ಬೇರೆ ಯಾವುದರಲ್ಲೂ ಅಂಥ ಆಸಕ್ತಿ ಇಲ್ಲ. ವಿದ್ಯಾಸಂಪಾದನೆ ಮುಂದೆ ಉಳಿದು ದೆಲ್ಲವೂ ಗೌಣ ಎಂದು ಭಾವಿಸಿದವರು. ತಮ್ಮ ಜೀವನವನ್ನೇ ಹೀಗೆ ಕಳೆಯುವುದು ಸಣ್ಣ ಮಾತಲ್ಲ. ರಾಷ್ಟ್ರಪತಿಯವರಿಂದ ಗಿರಾಯಾಚಾರ್ ಅವರಿಗೆ ‘ಮಹಾಮುಖ್ಯೋಪಾಧ್ಯಾಯ’ ಗೌರವ ಬಂದಿತು.
ಆಚಾರರ ನಡೆವಳಿಕೆಯಲ್ಲಾಗಲಿ, ದಿನಚರಿಯಲ್ಲಾಗಲಿ ವ್ಯತ್ಯಾಸ ಕಾಣಲಿಲ್ಲ. ಗಿರಿಯಾಚಾರ್‌ರು ತಮ್ಮ ಅಧ್ಯಯನದಲ್ಲಿ ಮತ್ತಷ್ಟು ತೀವ್ರವಾಗಿ ತಲ್ಲೀನರಾದರು, ಅದಕ್ಕಿಂತ ದೊಡ್ಡ ಕೈಂಕರ್ಯ ಬೇರಾವುದೂ ಇಲ್ಲ ಎಂಬಂತೆ! ಹಿರಿಯೂರು ಪದ್ಮನಾಭ ಶಾಸಿಯವರು ನನಗಿಂತ ಮೂವತ್ತೆಂಟು ವರ್ಷ ದೊಡ್ಡವರು. ಅವರ ಅಧ್ಯಯನ, ಕಾಯಕ ಪ್ರೇಮ ನನಗೆ ಚಿರಂತನ ಸ್ಫೂರ್ತಿ. ಶಾಸ್ತ್ರಿಗಳು ವ್ಯಾಕರಣ ಪಂಡಿತರು. ಅವರು ಬರೆದಿದ್ದೇ ಎರಡು ಗ್ರಂಥಗಳು, ಅವುಗಳನ್ನು ಅರ್ಥಮಾಡಿಕೊಳ್ಳುವುದೇ ಸವಾಲಿನ ಕೆಲಸ.
ಶಾಸ್ತ್ರಿಗಳು ಬರೆದ ‘ವ್ಯಾಕರಣ ದೀಪಿಕಾ’ವನ್ನು ವಿಮರ್ಶಿಸುವುದು ವಿದ್ವಾಂಸರಿಗೂ ಕಠಿಣವೇ. ಈ ಗ್ರಂಥವನ್ನು ರಚಿಸಲು ಶಾಸ್ತ್ರಿಯವರು ಬರೀ ನಲವತ್ತೊಂದು ವರ್ಷ ತೆಗೆದುಕೊಂ ಡರು. ಇಡೀ ಪುಸ್ತಕವನ್ನು ಪ್ರಕಟಿಸುವ ಮೊದಲು ಶಾಸ್ತ್ರಿಯವರು ಹನ್ನೊಂದು ಸಲ ಕರಡು (proof reading) ತಿದ್ದಿದ್ದರು. ಒಂದೇ ಒಂದು ತಪ್ಪು ಸಹ ಇರಲಾರದೆಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿದರು. ಆರು ಜನರಿಗೆ ಹಸ್ತಪ್ರತಿಯನ್ನು ಕೊಟ್ಟು ಓದಿಸಿದರು. ಗಣಕಕ್ಕೂ, ವ್ಯಾಕರ ಣಕ್ಕೂ ಇರುವ ಸಂಬಂಧದ ಬಗ್ಗೆ ಅಧ್ಯಯನ ಮಾಡಲು ವಾರಾಣಸಿಗೆ ಹೋದರು. ಪತ್ನಿಯ ಮರಣವೂ ಅವರ ಅಧ್ಯಯನಕ್ಕೆ ಅಡ್ಡಬರಲಿಲ್ಲ.
‘ಶಾಸ್ತ್ರಿಯವರು ಈ ಜನ್ಮದಲ್ಲಿ ಮುಗಿಯದ ಬೃಹತ್ ಗ್ರಂಥವನ್ನು ಬರೆಯುತ್ತಿದ್ದಾರೆ. ಅದು ಅವರ ಜೀವಿತ ಕಾಲದಲ್ಲಿ ಹೊರಬಂದರೆ ಅಚ್ಚರಿ’ ಎಂದು ಅವರ ನಿಕಟವರ್ತಿಗಳು, ಸ್ನೇಹಿತರು ಗೇಲಿ ಮಾಡುತ್ತಿದ್ದರು. ಆದರೆ ಶಾಸ್ತ್ರಿಗಳು ಪ್ರತಿಕ್ರಿಯಿಸುತ್ತಿರಲಿಲ್ಲ. ಅವರಿಗೆ ತಮ್ಮ ಅಧ್ಯಯನದ ಮಹತ್ವ
ಗೊತ್ತಿತ್ತು. ಈ ಮಧ್ಯೆ ಶಾಸ್ತ್ರಿಯವರು ಕೌಟುಂಬಿಕ ಕಾರಣಗಳಿಂದ ಮಗನೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದರು. ಮೂರು ಹೊತ್ತು, ಕೃತಿ ರಚನೆಯ ಹೊರತಾಗಿ ಅವರಿಗೆ ಬೇರೇನು ಕೆಲಸವೂ ಇಲ್ಲ. ಯೋಚನೆಯೂ ಇಲ್ಲ. ಈ ಕೃತಿ ಹೊರಬರುವಾಗ ಅವರಿಗಿದ್ದ ಒಂದೇ ಒಂದು ಕೊರಗೇ
ನೆಂದರೆ, ತಮ್ಮ ಕೆಲಸವನ್ನು ಎಷ್ಟು ಮಂದಿ ಅರ್ಥೈಸಿಕೊಳ್ಳ ಬಹುದೆಂದು. ಈ ಕೃತಿ ಒಬ್ಬರಿಗಾದರೂ ಉಪಯುಕ್ತವೆನಿಸಿದರೂ ತಮ್ಮ ಶ್ರಮ ಸಾರ್ಥಕ ಎಂದು ಅವರು ಹೇಳುತ್ತಿದ್ದರು.
ಶಾಸ್ತ್ರಿಯವರು ತಮ್ಮ ಕೃತಿಯನ್ನು ತೆಗೆದುಕೊಂಡು ಹತ್ತಾರು ಪ್ರಕಾಶಕರಿಗೆ ತೋರಿಸಿ ಪ್ರಕಟಿಸುವಂತೆ ದುಂಬಾಲು ಬಿದ್ದರು. ಯಾರೂ ಮುಂದೆ ಬರಲಿಲ್ಲ. ಒಬ್ಬ ಪ್ರಕಾಶಕರಂತೂ ಎರಡುವರ್ಷ ಹಸ್ತಪ್ರತಿಯನ್ನು ತಮ್ಮ ಬಳಿ ಇಟ್ಟಕೊಂಡು ಕಾಡಿಸಿದರು. ಶಾಸ್ತ್ರಿಯವರು ದಿನವೂ ಅವರ ಬಳಿ ಹೋಗಿ ಬರುತ್ತಿದ್ದರು. ಇವರ ಕಾಟ ತಡೆಯಲಾರದೇ ಪ್ರಕಾಶಕ ಮಹಶಯ, ‘ತಗೊಂಡು ಹೋಗ್ರಿ ನಿಮ್ಮ ಹಸ್ತ ಪ್ರತಿಯನ್ನು, ಯಾರಿಗೆ ಬೇಕಾಗಿದೆ ನಿಮ್ಮ ಅಧ್ಯಯನ? ಅದರಿಂದ ಸಾಮಾನ್ಯ ಜನರಿಗೇನು ಪ್ರಯೋಜನ?’ ಎಂದು ಎಸೆದುಬಿಟ್ಟ! ಶಾಸ್ತ್ರಿಗಳು ಬೇಸರಿಸಿಕೊಳ್ಳಲಿಲ್ಲ.
ಆ ಎರಡು ವರ್ಷಗಳಲ್ಲಿನ ತಮ್ಮ ಅಧ್ಯಯನದ ದತ್ತಫಲವನ್ನು ಆ ಕೃತಿಗೆ ಸೇರಿಸಿದರು. ಪುಣ್ಯವಶಾತ್ ಒಬ್ಬ ಪ್ರಕಾಶಕ ಸಿಕ್ಕಿದ. ಈ ನಡುವೆ, ಶಾಸ್ತ್ರಿಯವರ ಮಗ ಅಮೆರಿಕಕ್ಕೆ ಹೋಗಬೇಕಾಗಿ ಬಂತು. ಶಾಸ್ತ್ರಿಯವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ. ಸ್ವಲ್ಪವೂ ಬೇಸರಿಸಿಕೊಳ್ಳದೇ ತಮ್ಮ ಅಧ್ಯಯನ ಮುಂದುವರಿಸಿದರು. ಆದರೆ ಪುಸ್ತಕ ಪ್ರಕಟಣೆಗೆ ಒಪ್ಪಿದ ಪ್ರಕಾಶಕ ವ್ಯವಹಾರಿಕ ಕಾರಣಗಳಿಂದ ಹಸ್ತಪ್ರತಿ ಹಿಂದಿರುಗಿಸಿದ. ಕೊನೆಗೆ ಶಾಸ್ತ್ರಿಯವರು ಬಹಳ ಕಷ್ಟಪಟ್ಟು ಆ ಕೃತಿಯನ್ನು ತಾವೇ ಪ್ರಕಟಿಸಿದರು. ಕೇವಲ ಮುನ್ನೂರು ಕಾಪಿಗಳನ್ನು ಪ್ರಿಂಟ್ ಹಾಕಿಸಿದರು. ತಾವು ನಲವತ್ತೊಂದು ವರ್ಷ ಪ್ರಯಾಸ ಪಟ್ಟ ಕಥನವನ್ನು ಹೇಳಿದರು. ಆ ಪುಸ್ತಕದ ಪ್ರಕಟಣೆ ಕಳಪೆ ಯಾಗಿತ್ತು. ಆದರೆ ಮನೆ, ಮಠ, ಸಂಸಾರ, ವಿಶ್ರಾಂತಿ ಎಲ್ಲ ವನ್ನೂ ಮರೆತು ಆ ಗ್ರಂಥವನ್ನು ರಚಿಸಿದರು. ಇತ್ತೀಚೆಗೆ ಶಾಸ್ತ್ರಿಯವರು ನಿಧನರಾಗಿದ್ದು, ತಿಳಿದು ಬಂದಿತು. ಅವರ ಅಂತಿಮದರ್ಶನಕ್ಕೆ ಮಗ ಬರಲೇ ಇಲ್ಲ. ವೃದ್ಧಾಶ್ರಮದವರಿಗೆ ‘ಹಣಕಳಿಸುವೆ’ ನೀವೇ ಅಂತ್ಯಕ್ರಿಯೆ ಮಾಡಿ ಎಂದು ಹೇಳಿದನಂತೆ.
ಶಾಸ್ತ್ರಿಯವರ ಕೋಣೆಯಲ್ಲಿದ್ದ ಆ ಎಲ್ಲಾ ಪುಸ್ತಕಗಳನ್ನು ವೃದ್ಧಾಶ್ರಮದವರು ರದ್ದಿಗೆ ಹಾಕಿ, ರೂಮು ಖಾಲಿ ಮಾಡಿಸಿ, ಬೇರೆಯವರ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟರು. ಶಾಸ್ತ್ರಿಯವರ ರೂಮು ಖಾಲಿಮಾಡುವಾಗ ಹತ್ತುಸಾವಿರಕ್ಕೂ ಮಿಕ್ಕ ಪುಟಗಳಷ್ಟು ಟಿಪ್ಪಣಿಗಳು ಸಿಕ್ಕವು. ಒಂದು ಪುಸ್ತಕಕ್ಕಾಗಿ ಅವರು ತಮ್ಮ ಜೀವನವನ್ನೇ ಆ ಪರಿ ತೇಯ್ದಿದ್ದರು. ಅವರಿಗೆ ಬೇರೆ ಎಲ್ಲವೂ ಗೌಣವಾಗಿತ್ತು.