Saturday, 14th December 2024

ಎರಡು ಹಾರುವ ಓತಿಗಳನ್ನು ಕಂಡ ಬೆರಗಿನ ಕ್ಷಣ !

ಶಶಾಂಕಣ

shashidhara.halady@gmail.com

ಒಂದು ಮರದಿಂದ ಇನ್ನೊಂದಕ್ಕೆ ‘ಗ್ಲೈಡ್’ ಮಾಡುತ್ತಾ ಸಾಗುವ ಹಾರುವ ಓತಿಯ ಹಾರಾಟವನ್ನು ಹತ್ತಿರದಿಂದ ನೋಡುವ ಅನುಭವ ಅನನ್ಯ. ಅದೃಶ್ಯವಾಗಿರುವ ರೆಕ್ಕೆಯಂಥ ರಚನೆಯನ್ನು ತಕ್ಷಣ ಹೊರಕ್ಕೆ ತೆಗೆದು, ಗ್ಲೈಡ್ ಮಾಡುತ್ತಾ ಹಾರುವ ಅದರ ನೋಟ ಚಿತ್ತಾಕರ್ಷಕ. ಅದಕ್ಕೇ ಇರಬೇಕು, ಪೂರ್ಣಚಂದ್ರ ತೇಜಸ್ವಿ ಯವರು ತಮ್ಮ ‘ಕರ್ವಾಲೋ’ ಕಾದಂಬರಿಯಲ್ಲಿ, ಇದರ ಹಾರಾಟವನ್ನು ಒಂದು ರೂಪಕದಂತೆ ಚಿತ್ರಿಸಿದ್ದಾರೆ.

ಹಾರುವ ಓತಿ ಎಂದಾಕ್ಷಣ ನಮಗೆಲ್ಲಾ ಮೊದಲಿಗೆ ನೆನಪಾಗುವುದು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿ. ಆ ಕಾದಂಬರಿಯಲ್ಲಿ ನಮ್ಮ
ಸುತ್ತಲಿನ ಪರಿಸರದ ಪ್ರತೀಕವಾಗಿ ಕಾಣಿಸಿಕೊಂಡ ಹಾರುವ ಓತಿಯು ಕನ್ನಡ ಅಕ್ಷರ ಲೋಕದಲ್ಲಿ ಗಳಿಸಿರುವ ಸ್ಥಾನವು ಅನನ್ಯ. ತೇಜಸ್ವಿಯವರ ಆ ಅದ್ಭುತ
ಕಾದಂಬರಿಯ ಕೊನೆಯಲ್ಲಿ, ಪರ್ವತ ಕಲ್ಲಿನ ಅಂಚಿನಿಂದ ದಿಗಂತದೆಡೆಗೆ ಆ ಹಾರುವ ಓತಿ, ನಿಶ್ಶಬ್ದವಾಗಿ ತೇಲಿಕೊಂಡು ಹೋಗುವ ಚಿತ್ರಣವಂತೂ, ಒಂದು ಅನನ್ಯ ರೂಪಕದ ರೂಪದಲ್ಲಿ, ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ.

ನಿಗೂಢದಲ್ಲಿ ನಿಗೂಢ ಎನ್ನಬಹುದಾದ, ನಮ್ಮ ಸಹ್ಯಾದ್ರಿ ಕಾಡುಗಳಲ್ಲಿ, ಕರಾವಳಿಯ ಹಕ್ಕಲುಗಳಲ್ಲಿ, ಅಡಕೆ ತೋಟಗಳಲ್ಲಿ ಅಲ್ಲಲ್ಲಿ ಕಾಣಸಿಗುವ ಈ ಹಾರುವ
ಓತಿಯೊಂದಿಗೆ ನನ್ನ ಮುಖಾಮುಖಿ ಹಲವು ಮಜಲು ಗಳದ್ದು. ಮರದಿಂದ ಮರಕ್ಕೆ ತೇಲುತ್ತಾ ಹಾರಬಲ್ಲ ಆ ಅಪರೂಪದ ಜೀವಿಯನ್ನು ನಾನು ನೋಡಿದ್ದೆಲ್ಲವೂ
ಹಾಲಾಡಿಯಲ್ಲಿ, ಅಲ್ಲಿನ ಹಕ್ಕಲು, ಹಾಡಿ ಮತ್ತು ಅಡಿಕೆ ತೋಟದಲ್ಲಿ. ಪಶ್ಚಿಮ ಘಟ್ಟಗಳ ಕಾಡು, ಅಡಕೆ ತೋಟ ಗಳು ಇವೆಲ್ಲವೂ ಹಾರುವ ಓತಿಯ ವಾಸಸ್ಥಳ.
ನಮ್ಮೂರಿನ ಸರಕಾರಿ ಪ್ರಾಥಮಿಕ ಶಾಲೆಗೆ ಪ್ರತಿದಿನ ೩ ಕಿ.ಮೀ. ನಡೆದು ಹೋಗಬೇಕಿತ್ತು. ಬಯಲಿನ ಅಂಚಿನ ಪುಟ್ಟ ಅಡಕೆ ತೋಟದ ಅಂಚಿನಲ್ಲಿ ಸಾಗುತ್ತಿತ್ತು ನಮ್ಮ ದಾರಿ.

ಅಲ್ಲಿದ್ದ ಪುರಾತನ ಅಡಕೆ ಮರಗಳ ಮೇಲೆ ಕೂತು, ತನ್ನ ಗಂಟಲಿನ ಹೊರಭಾಗದಲ್ಲಿರುವ ಹಳದಿ ನಾಲಗೆ ಯನ್ನು ಅಲ್ಲಾಡಿಸುತ್ತಾ ಕುಳಿತಿರುತ್ತಿತ್ತು ಹಾರುವ ಓತಿ.
ಶಾಲೆ ಮಕ್ಕಳನ್ನು ನೋಡಿ ತನ್ನ ತಲೆ ಕುಣಿಸುತ್ತಾ, ಹಳದಿ ನಾಲಗೆ ಅಲ್ಲಾಡಿಸುತ್ತಾ ಅಣಕಿಸುತ್ತಿದೆ ಎಂಬ ಭಾವ ನಮ್ಮಲ್ಲಿ! ನಮ್ಮೂರಿನ ಭಾಷೆಯಲ್ಲಿ ಅದನ್ನು ‘ಓಂತಿ’ ಎಂದು ಕರೆಯುತ್ತಿದ್ದರು. ಪೇಟೆಯಿಂದ ಸ್ವಲ್ಪ ಕೆಳಭಾಗ ದಲ್ಲಿದ್ದ ಹಂದಿಕೊಡ್ಲು ಎಂಬ ಜಾಗದ ಮನೆ ಮತ್ತು ಪುಟ್ಟ ತೋಟದಲ್ಲಿ, ಶಾಲೆಗೆ ಹೋಗುವಾಗ ನಾನು ಹಲವು ಬಾರಿ ಆ ಹಾರುವ ಓತಿಯನ್ನು ಕಂಡಿದ್ದೆ. ವಿದ್ಯಾಭ್ಯಾಸ ಮುಗಿಸಿ, ಹಾಲಾಡಿಯನ್ನು ತೊರೆದು, ಬಯಲು ಸೀಮೆಯ ಪುಟ್ಟ ಹಳ್ಳಿಯಲ್ಲಿ ಉದ್ಯೋಗಸ್ಥ ನಾದ ನಂತರ ಎರಡನೆಯ ಹಂತದಲ್ಲಿ ಹಾರುವ ಓತಿಯನ್ನು ಸ್ಪಷ್ಟವಾಗಿ ಕಂಡಿದ್ದು ನಮ್ಮ ಮನೆಯ ಪಕ್ಕದಲ್ಲೇ ಇರುವ ಅಡಕೆ ತೋಟದಲ್ಲಿ.

ನಮ್ಮ ಮನೆ ಸನಿಹದ ಅಡಕೆ ತೋಟದಲ್ಲಿ ಒಂದು ದಿನ ಸುತ್ತಾಡುತ್ತಿದ್ದೆ. ಎತ್ತರವಾದ ಒಂದು ಅಡಕೆ ಮರದಿಂದ ಹಾರಿದ ಹಾರುವ ಓತಿಯನ್ನು ಕಂಡಾಗ, ಅದು ಚಿಟ್ಟೆ ಇರಬಹುದು ಎನಿಸಿತು. ತುಸು ಗಮನವಿಟ್ಟು ನೋಡಿದಾಗ, ಸ್ಪಷ್ಟವಾಯಿತು, ಅದು ಹಾರುವ ಓತಿ! ತನ್ನ ಬಗಲಿನಲ್ಲಿದ್ದ ಚರ್ಮವನ್ನು ಬಿಚ್ಚಿ, ಸುಮಾರು ೩೦ ಅಡಿ ಎತ್ತರದ ಮರದಿಂದ ನೆಗೆದ ಆ ಹಾರುವ ಓತಿಯು, ನಿಧಾನವಾಗಿ ತೇಲುತ್ತಾ ಕೆಳಗಿನ ಮತ್ತೊಂದು ಅಡಕೆ ಮರದ ಮೇಲೆ ಹೋಗಿ ಕುಳಿತುಕೊಂಡಿತು! ಹಕ್ಕಿಯಂತೆ ರೆಕ್ಕೆಗಳನ್ನು ಬಡಿದು ಹಾರಲು ಹಾರುವ ಓತಿಯಿಂದ ಸಾಧ್ಯವಿಲ್ಲ.

ಅದಕ್ಕೆ ರೆಕ್ಕೆಗಳಿರಲಿಲ್ಲ. ಬದಲಿಗೆ, ಪಕ್ಕೆಲುಬುಗಳಿಗೆ ಅಂಟಿಕೊಂಡ ಚರ್ಮವನ್ನೇ ಅಗಲವಾಗಿ ಬಿಡಿಸಿ ಹಾರಬಲ್ಲ ಆ ಜೀವಿಗೆ, ಹಾರುವ ಕಲೆಯು ಒಂದು ರಕ್ಷಣಾ ತಂತ್ರ. ಜತೆಗೆ, ತನ್ನ ಗಾತ್ರವನ್ನು ಹಿಗ್ಗಿಸಿಕೊಂಡು ಹೆಣ್ಣು ಓಂತಿಯನ್ನು ಆಕರ್ಷಿಸುವ ತಂತ್ರವೂ ಇದ್ದೀತು. ಅದಾಗಲೇ ನಾನು ತೇಜಸ್ವಿಯವರ ಕರ್ವಾಲೋ
ಕಾದಂಬರಿಯನ್ನು ಓದಿದ್ದರಿಂದ, ನಮ್ಮದೇ ತೋಟದಲ್ಲಿ ಕಂಡ ಹಾರುವ ಓತಿಯನ್ನು ಸಾಕಷ್ಟು ಚೆನ್ನಾಗಿಯೇ ಗಮನಿಸಿದೆ, ಮುದಗೊಂಡೆ, ಬೆರಗುಗೊಂಡೆ. ಕಾದಂಬರಿಯಲ್ಲಿ ವರ್ಣಿತಗೊಂಡ ಈ ಅಪರೂಪದ ಜೀವಿಯನ್ನು ನಮ್ಮ ಹಿತ್ತಲಿನಲ್ಲೇ ಕಂಡಾಗ ತುಸು ಸಂಭ್ರಮವೂ ಆಯಿತು. ನಂತರ, ಅದು ಅಡಕೆ ಮರಗಳ ಸಂದಿಯಲ್ಲಿ ಹಾರಿ ಕಣ್ಮರೆಯಾಯಿತು. ನಂತರ ರಜೆಯ ಸಮಯದಲ್ಲಿ ಹಾಲಾಡಿಗೆ ಬಂದಿದ್ದಾಗ, ಹಲವು ಬಾರಿ ನಮ್ಮ ತೋಟದಲ್ಲಿ ಒಂದು ಅಡಕೆ ಮರದಿಂದ ಇನ್ನೊಂದು ಮರಕ್ಕೆ ಅದು ಹಾರುತ್ತಿರುವುದನ್ನು ಕಂಡಿದ್ದುಂಟು.

ಮೂರು ದಶಕಗಳ ನಂತರ ಮೂರನೆಯ ಬಾರಿ ಹಾರುವ ಓತಿಯೊಡನೆ ನನ್ನ ಮುಖಾಮುಖಿಯಾದದ್ದು, ಹಾಲಾಡಿ ಪೇಟೆಯಲ್ಲಿದ್ದ ನಮ್ಮ ಮನೆ ಎದುರು. ಇಲ್ಲಿ ತೋಟವಿರಲಿಲ್ಲ, ಮನೆ ಸುತ್ತಲೂ ಹತ್ತಾರು ತೆಂಗಿನ ಮರ, ನಾಲ್ಕಾರು ಅಡಕೆ ಮರ, ಒಂದು ಮಾವಿನ ಮರ, ತೇಗದ ಮರ, ಕುರುಚಲು ಗಿಡಗಳು, ಪಕ್ಕದಲ್ಲೇ ನಾಗರ ಬನದ ದಟ್ಟ ಬಳ್ಳಿ ಎಲ್ಲಾ ಸೇರಿ, ಅಲ್ಲಿ ಪುಟ್ಟ ಹಕ್ಕಲಿನ ಪರಿಸರ ರೂಪುಗೊಂಡಿತ್ತು. ಅಕ್ಕ ಪಕ್ಕದ ಮನೆಗಳ ಸುತ್ತಮುತ್ತ ಸಹಾ ಸಾಕಷ್ಟು ಗಿಡಮರಗಳಿದ್ದವು. ೨೦೧೭ರ ಸಮಯದಲ್ಲಿ ಸುಮಾರು ಐದು ತಿಂಗಳು ಅಲ್ಲೇ ನನ್ನ ವಾಸ. ಆಗ ನಮ್ಮ ತಂದೆ ಅನಾರೋಗ್ಯದಿಂದಾಗಿ ಸಾಮಾನ್ಯವಾಗಿ ಒಂದೆಡೆ ಕುಳಿತಿರುತ್ತಿದ್ದರು ಅಥವಾ ಮಲಗಿರುತ್ತಿದ್ದರು.

ಅಂದು ಆ ಓತಿಯು ತಮ್ಮ ದೃಷ್ಟಿಗೆ ಬಿದ್ದ ಕೂಡಲೇ, ನಿಶ್ಶಕ್ತಿ ಇದ್ದರೂ, ತಾವು ಕುಳಿತ ಜಾಗ ದಿಂದ ಎದ್ದು ಬಂದು, ಅದರತ್ತ ಕೈತೋರಿ ‘ನೋಡಲ್ಲಿ, ಅದನ್ನು ಓಡಿಸು’ ಎಂದು ನನ್ನತ್ತ ನೋಡುತ್ತಾ ಸನ್ನೆ ಮಾಡಿದರು. ಅವರು ಕೈತೋರಿದ ದಿಕ್ಕಿನಲ್ಲಿ ನೋಡಿದರೆ, ಒರಟು ದೇಹದ ಪುಟ್ಟ ಓತಿಕ್ಯಾತದಂಥ ಜೀವಿ ಕುಳಿತಿತ್ತು. ತನ್ನ ವಿಚಿತ್ರ ಶೈಲಿಯಲ್ಲಿ ಕತ್ತನ್ನು ತಿರುಗಿಸುತ್ತಾ ಭಾವ ಭಂಗಿಗಳನ್ನು ಪ್ರದರ್ಶಿಸುತ್ತಿತ್ತು! ತಲೆಯನ್ನು ಅತ್ತಿತ್ತ ಅಲ್ಲಾಡಿಸುತ್ತಾ, ಕಣ್ಣನ್ನು ಹೊಳೆಯಿಸುತ್ತಿತ್ತು. ಆ ಓತಿಕ್ಯಾತವು ವಿಶಿಷ್ಟ ಜೀವಿ ಎಂದು ಮೊದಲಿಗೆ ಗೊತ್ತಾಗಲಿಲ್ಲ! ನಾನು ಬಳಿಸಾರಿದಾಗ, ಎರಡಡಿ ದೂರ ವಿದ್ದ ಬಾವಿಯ ಮೋಟುಗೋಡೆಯತ್ತ ಅದು ಹಾರಿತು.
ಹೌದೋ ಅಲ್ಲವೋ ಎಂಬಂತೆ, ಅದರ ಎರಡೂ ಬಗಲಿನಲ್ಲಿದ್ದ ಚರ್ಮದ ಹಾಳೆ ಬಿಡಿಸಿಕೊಂಡಿತು.

ತಕ್ಷಣ ನನಗೆ ಗೊತ್ತಾಯಿತು, ಅದು ಸಾಮಾನ್ಯ ಓತಿಕ್ಯಾತ ಅಲ್ಲ, ಅದೊಂದು ಹಾರುವ ಓತಿ ಎಂದು! ನಾನು ಕ್ಯಾಮೆರಾ ಹಿಡಿದು ಆ ಹಾರುವ ಓತಿಯ ಹಿಂದೆ ಹೊರಟೆ. ಮುಂದಿನ ಒಂದೆರಡು ಗಂಟೆಗಳ ಕಾಲ ಹಾರುವ ಓತಿಯ ಓಡಾಟವನ್ನು ನೋಡುವುದು, ಅದನ್ನು ಕ್ಲಿಕ್ಕಿಸುವುದು, ನನ್ನ ಪರಿಮಿತಿಯಲ್ಲಿ ಅದರ ಶೈಲಿ, ನೋಟವನ್ನು ಅಧ್ಯಯನ ಮಾಡುವುದೇ ನನ್ನ ಕೆಲಸವಾಯಿತು. ಅದು ಬಾವಿಕಟ್ಟೆಯ ಮೇಲೆ ಅತ್ತಿತ್ತ ಓಡಾಡುತ್ತಾ, ಸುತ್ತಲಿದ್ದ ನರಮನುಷ್ಯರನ್ನು ಸಂಪೂರ್ಣ ಅಲಕ್ಷ್ಯ ಮಾಡಿ ತನ್ನ ಪಾಡಿಗೆ ಅದರದೇ ಲೋಕದಲ್ಲಿತ್ತು! ನಾವು ಮನುಷ್ಯರು ಹತ್ತಿರ ಸುಳಿದರೂ ಅದಕ್ಕೆ ಭಯವಿಲ್ಲ.

ಪಕ್ಕದ ಮರ ವೊಂದನ್ನು ಏರಿ, ಅಲ್ಲಿಂದ ಇನ್ನೊಂದು ಮರಕ್ಕೆ ಹಾರು ವಾಗ ಅದರ ‘ರೆಕ್ಕೆ’ ಸ್ವಲ್ಪ ಬಿಚ್ಚಿದ್ದು ಕಾಣಿಸಿತು. ಭುಜ ಮತ್ತು ಪಕ್ಕೆಲುಬಿನ ನಡುವೆ ಇರುವ ಚರ್ಮವನ್ನೇ ರೆಕ್ಕೆಯ ರೂಪಕ್ಕೆ ಬದಲಿಸಿಕೊಂಡು, ಒಂದು ಮರದಿಂದ ಇನ್ನೊಂದು ಮರಕ್ಕೆ ‘ಗ್ಲೈಡ್’ ಮಾಡುತ್ತಾ (ತೇಲುತ್ತಾ) ಸಾಗುವ ಆ ಹಾರುವ ಓತಿಯ ಹಾರಾಟವನ್ನು ಹತ್ತಿರ ದಿಂದ ನೋಡುವ ಅನುಭವ ಅನನ್ಯ. ಅದೃಶ್ಯವಾಗಿರುವ ರೆಕ್ಕೆಯಂಥ ರಚನೆಯನ್ನು ತಕ್ಷಣ ಹೊರಕ್ಕೆ ತೆಗೆದು, ಗ್ಲೈಡ್ ಮಾಡುತ್ತಾ ಹಾರುವ ಅದರ ನೋಟ ಒಂದು ರೂಪಕ. ಅದಕ್ಕೇ ಇರಬೇಕು, ಪೂರ್ಣಚಂದ್ರ ತೇಜಸ್ವಿಯವರು ತಮ್ಮ ‘ಕರ್ವಾಲೋ’ ಕಾದಂಬರಿಯ ಕೊನೆಯಲ್ಲಿ, ಹಾರುವ ಓತಿಯು ಕೋಡುಗಲ್ಲಿನ ತುದಿಯಿಂದ ನೆಗೆದು ತೇಲುತ್ತಾ, ಎರಡು ಸಾವಿರ ಅಡಿ ಆಳದಲ್ಲಿರುವ ಕಾಡಿನತ್ತ ಸಾಗುವ ಹಾರಾಟವನ್ನು ಒಂದು ರೂಪಕದಂತೆ ಚಿತ್ರಿಸಿದ್ದಾರೆ. ಆ ಹಾರುವ ಓತಿಯ ಆ ದಿನದ ಕೊನೆಯ ಹಾರಾಟ ಅಥವಾ ‘ಲಾಸ್ಟ್ ಗ್ಲೈಡ್’ (ಲಾಸ್ಟ್ ಲೆಕ್ಚರ್ ಕಾದಂಬರಿ ನೆನಪಾಗುತ್ತಿದೆ!) ಇಡೀ ಕಾದಂಬರಿಯ ಚೌಕಟ್ಟಿಗೊಂದು ಹೊಸ ಅರ್ಥವನ್ನು ನೀಡುವುದರ ಮೂಲಕ, ಆ ಕಾದಂಬರಿಗೆ ಕನ್ನಡ ಸಾಹಿತ್ಯದಲ್ಲೇ ಅನನ್ಯ ಸ್ಥಾನವನ್ನು ಒದಗಿಸಿಕೊಟ್ಟಿದೆ.

ಬಾವಿಯ ಕಟ್ಟೆಯ ಮೇಲೆ ಕುಳಿತ ಹಾರುವ ಓತಿಯು ನಿಧಾನವಾಗಿ ನಡೆದು, ಪಕ್ಕದ ಕಾಂಪೌಂಡ್ ಮೇಲೆ ನೆಗೆದು ಕುಳಿತುಕೊಂಡಿತು. ಅಲ್ಲಿ ಬೆಳೆದಿದ್ದ ಪಾಚಿ,
ಹಾವಸೆಯ ಬಣ್ಣದೊಂದಿಗೆ ಅದರ ಬಣ್ಣ ಸಂಪೂರ್ಣ ಮಿಳಿತಗೊಂಡಿತ್ತು! ಕಾಂಪೌಂಡ್ ಮೇಲೆ ತುಂಬಾ ಹೊತ್ತು ಮಿಸುಕಾಡದೇ ಕುಳಿತಿದ್ದ ಆ ಓತಿ, ನಾನು
ಕ್ಯಾಮೆರಾ ಕ್ಲಿಕ್ಕಿಸುವಾಗಲೇ, ತನ್ನ ನಾಲಿಗೆಯನ್ನು ಛಕ್ಕೆಂದು ಝಳಪಿಸಿ, ಅಲ್ಲೇ ಸಾಲಾಗಿ ಹರಿದಾಡುತ್ತಿದ್ದ ನಾಲ್ಕೆಂಟು ಕೆಂಪು ಇರುವೆಗಳನ್ನು ಸ್ವಾಹಾ ಮಾಡಿದ್ದೂ
ಆಯಿತು! ಈ ರೀತಿಯ ಹಾರುವ ಓತಿಗಳು ಇರುವೆ ಗಳನ್ನು ತಿನ್ನುತ್ತವೆ ಎಂಬ ವಿಚಾರವನ್ನು ಕಣ್ಣಾರೆ ಕಂಡೆ. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಮ್ಮ
ಮನೆಯ ಸುತ್ತಮುತ್ತ ಸುಳಿದಾಡುತ್ತಿದ್ದ ಹಾರುವ ಓತಿಯು, ನಂತರ ಅಡಕೆ ಗಿಡವೊಂದಕ್ಕೆ ನೆಗೆದು, ಇತರ ಕುರುಚಲು ಗಿಡಗಳ ನಡುವೆ ಕಣ್ಮರೆಯಾಯಿತು!

ನಾಲ್ಕಾರು ವಾರಗಳ ನಂತರ ಇನ್ನೊಂದು ಅದ್ಭುತ ದೃಶ್ಯಕ್ಕೆ ಸಾಕ್ಷಿಯಾದೆ. ಮಧ್ಯಾಹ್ನ ಮೂರು ಗಂಟೆಯ ಸಮಯ. ಒಳ್ಳೆಯ ಬಿಸಿಲು. ಮನೆ ಮುಂಭಾಗದ ಸಿಟ್
ಔಟ್‌ನಲ್ಲಿ, ಬರೆಯುತ್ತಾ ಕುಳಿತಿದ್ದೆ. ಪಕ್ಕದ ಮಹಾ ಬಲಣ್ಣನ ಮನೆಯ ಎದುರು ನಾಲ್ಕು ತೆಂಗಿನ ಮರಗಳಿವೆ. ಕೊನೆಯ ಮರದಿಂದ ಒಂದು ಹಾರುವ ಓತಿ ತೇಲುತ್ತಾ ಬಂದು ಮೂರನೆಯ ಮರದ ಕಾಂಡದ ಮೇಲೆ ಕುಳಿತಿತು. ಅದರ ಹಿಂದೆಯೇ ಇನ್ನೊಂದು ಹಾರುವ ಓತಿ ಹಾರುತ್ತಾ ಬಂದು ಅದೇ ಮರವನ್ನು ಅಪ್ಪಿತು. ನನಗೆ ಮರೆಯಾಗಿದ್ದ ಭಾಗದಲ್ಲಿ ತೆಂಗಿನ ಮರವನ್ನೇ ಸ್ವಲ್ಪ ಮೇಲೇರಿ, ಎರಡನೆಯ ಮರಕ್ಕೆ ಒಂದು ಓತಿ, ಅದರ ಹಿಂದೆಯೇ ಓತಿ ತೇಲುತ್ತಾ ಬಂದವು.

ನಾಲ್ಕಾರು ನಿಮಿಷ ಗಳಲ್ಲಿ, ಮೊದಲನೆಯ ಮರಕ್ಕೂ ಒಂದರ ಹಿಂದೆ ಒಂದರಂತೆ, ತೇಲುತ್ತಾ ಹಾರಿ, ಕೊನೆಗೆ ಎರಡೂ ಬಂದ ದಾರಿಯಲ್ಲೇ ಮರದಿಂದ ಮರಕ್ಕೆ ಹಾರುತ್ತಾ, ವಾಪಸಾದವು. ಕೊನೆಯ ಮರದಾಚೆ ಇರುವ ದಟ್ಟವಾದ ಹಲಸಿನ ಮರವನ್ನೇರಿ ಕಣ್ಮರೆಯಾದವು! ಒಂದರ ಹಿಂದೆ ಒಂದನ್ನು ಅನುಸರಿಸಿದ್ದ ರಿಂದಾಗಿ, ಅವನ್ನು ದಂಪತಿ ಎಂದು ಕರೆದೆ. ಅವೆರಡೂ ಹಾರುವ ಓತಿಗಳು ದಂಪತಿಯಾಗಿರಲಿ, ಇಲ್ಲದಿರಲಿ, ಒಂದು ಜೋಡಿ ಹಾರುವ ಓತಿ ಈ ರೀತಿ ಮರದಿಂದ ಮರಕ್ಕೆ ಹಾರಾಡುವ ದೃಶ್ಯ ನೋಡಲು ಸಿಕ್ಕಿದ್ದು ನಿಜಕ್ಕೂ ಅಪೂರ್ವ. ಆಗ ನನ್ನ ಬಳಿ ಇದ್ದ ಕ್ಯಾಮೆರಾದಲ್ಲಿ ಅಷ್ಟು ದೂರದ ದೃಶ್ಯ ಸೆರೆ ಹಿಡಿಯುವ ಜೂಂ ಇರಲಿಲ್ಲ.

ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿರುವ ದೃಶ್ಯವೆಂದರೆ, ಮಕ್ಕಳು ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಜೂಟಾಟ ಆಡುವ ರೀತಿ ಇತ್ತು ಅವುಗಳ ಆ ದಿನದ ಹಾರಾಟ!
ಹಾರುವ ಓತಿಯು ಪ್ರತಿ ಹಾರಾಟದಲ್ಲೂ ತನ್ನ ಎತ್ತರ ವನ್ನು ಕಳೆದುಕೊಳ್ಳುತ್ತದೆ, ಕಳೆದುಕೊಳ್ಳಲೇಬೇಕು. ಅದು ಅನಿವಾರ್ಯ, ಮಿತಿ. ಗ್ಲೈಡಿಂಗ್ ಮಾದರಿಯ ಹಾರಾಟ ವಾದ್ದರಿಂದ, ಎತ್ತರದಿಂದ ತುಸು ತಗ್ಗಿನ ಜಾಗಕ್ಕೆ ಅದು ಹಾರಬಲ್ಲದೇ ಹೊರತು, ಮೇಲ್ಭಾಗಕ್ಕೆ ಹಾರಲು ಅದರಿಂದ ಅಸಾಧ್ಯ. ಆದ್ದರಿಂದಲೇ ಇರಬೇಕು, ಹಾರಿಬಂದು ಕುಳಿತ ತೆಂಗಿನ ಮರದ ಕಾಂಡವನ್ನು ಅಪ್ಪಿ ಹಿಡಿದು, ನಾಲ್ಕೆಂಟು ಅಡಿ ಮೇಲಕ್ಕೆ ಚಲಿಸಿ, ಮತ್ತೆ ಹಾರಲು ಅನುವಾಗುತ್ತಿತ್ತು!

ಹಿಂಬಾಲಿಸಿಕೊಂಡು ಬಂದ ಎರಡನೆಯು ಹಾರುವ ಓತಿ ಸಹ, ಅದೇ ರೀತಿ ಮೇಲಕ್ಕೆ ಏರುತ್ತಿತ್ತು. ಅವು ಒಂದರ ಹಿಂದೆ ಒಂದು ಏಕೆ ಹಾರುತ್ತಿದ್ದವು? ಎರಡು ಹಾರುವ ಓತಿಗಳು ಮರದಿಂದ ಮರಕ್ಕೆ ತೇಲುತ್ತಾ ಆ ಕ್ಷಣದಲ್ಲಿ ಕಂಡಾಗ ನನ್ನ ಮನದಲ್ಲಿ ಮೂಡಿದ ಬೆರಗು ಅಪಾರ! ಈ ರೀತಿಯ ಹಲವು ಪ್ರಶ್ನೆಗಳು ಮೂಡಿದ್ದು ಒಂದೆಡೆಯಾದರೆ, ಹಾರುವ ಓತಿಗಳಿಗೆ ಆ ರೀತಿ ರೆಕ್ಕೆ ಬಿಚ್ಚಿ ಹಾರಲು (ಗ್ಲೈಡಿಂಗ್) ಮಾಡಲು ಕಲಿಸಿದವರಾದರೂ ಯಾರು ಎಂಬ ಮೂಲಭೂತ ಪ್ರಶ್ನೆ ಇನ್ನೊಂದೆಡೆ.

ಏಕೆಂದರೆ, ಈ ಪ್ರಶ್ನೆಗೆ ನಾನಾ ಆಯಾಮಗಳಿವೆ, ಅದರಲ್ಲೂ ಮುಖ್ಯವಾಗಿ ವಿಕಾಸವಾದದ ಹಿನ್ನೆಲೆಯಲ್ಲಿ. ಎಲ್ಲಾ ಓತಿಕ್ಯಾತಗಳೂ ನೆಲದ ಮೇಲೆ, ಮರದ ಮೇಲೆ
ಓಡಾಡುತ್ತಾ ಜೀವನ ನಡೆಸುತ್ತಿರಬೇಕಾದರೆ, ಹಾರುವ ಓತಿ ಮಾತ್ರ ಅಗಲಿಸುವಂಥ ಚರ್ಮವನ್ನು ಬೆಳೆಸಿಕೊಂಡು, ಒಂದು ಮರದಿಂದ ಇನ್ನೊಂದು ಮರಕ್ಕೆ
ಹಾರಲು ಕಲಿತ ವಿಚಾರವೇ ಒಂದು ವಿಸ್ಮಯ ಎನಿಸುವುದಿಲ್ಲವೆ? ಬೇರೆ ಓತಿಕ್ಯಾತಗಳು, ಕೆಲವು ಅಡಿಗಳಷ್ಟು ದೂರ ಕುಪ್ಪಳಿಸಿ ನೆಗೆಯಬಲ್ಲವು. ಆದರೆ ತನ್ನ ಬಗಲಿನಲ್ಲಿರುವ ಚರ್ಮದ ಪದರವನ್ನು ಬಳಸಿ ಹತ್ತಾರು ಅಡಿ ದೂರದ ತನಕ ಹಾರಬಹುದು ಎಂದು ಹಾರುವ ಓತಿಗೆ ಹೇಳಿಕೊಟ್ಟವರಾರು! ಈ ರೀತಿಯ
ನಿಸರ್ಗ ಲೋಕದ ವಿಸ್ಮಯಗಳನ್ನು ಗುರುತಿಸುತ್ತಾ, ಯೋಚಿಸುತ್ತಾ ಹೋದರೆ ಬೇರೊಂದು ಅಚ್ಚರಿ ತುಂಬಿದ ಲೋಕವನ್ನೇ ಪ್ರವೇಶಿಸುತ್ತೇವೆ!

(ಬೆಂಗಳೂರಿನ
‘ಅಭಿನವ’ ಪ್ರಕಟಿಸಿರುವ ‘ಹಾಲಾಡಿಯಲ್ಲಿ ಹಾರುವ ಓತಿ’ ಕೃತಿಯಲ್ಲಿ ಅಡಕಗೊಂಡ ಒಂದು ಬರಹ).