Wednesday, 11th December 2024

ಸೌಜನ್ಯಕ್ಕಾದರೂ ಸೌಜನ್ಯದ ನಡವಳಿಕೆ ಕಲಿಯಬಾರದೆ ?

ನಾಡಿಮಿಡಿತ

ವಸಂತ ನಾಡಿಗೇರ

vasanth.nadiger@gmail.com

ಇದು ಬಹಳ ಹಳೆಯ ದಿನಗಳ ಮಾತು. ನಾನು ಆಗಷ್ಟೇ ಪತ್ರಿಕಾ ವೃತ್ತಿ ಆರಂಭಿಸಿದ್ದೆ. ಹುರುಪು, ಉತ್ಸಾಹ, ಆಸಕ್ತಿ, ಎಲ್ಲವನ್ನೂ
ಬೆರಗು ಗಣ್ಣಿನಿಂದ ನೋಡುವುದು – ಇವೆಲ್ಲ ಸಹಜವಾಗಿ ಜಾಸ್ತಿಯೇ ಇತ್ತು. ಆಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದವರು ಪತ್ರಕರ್ತರಿಗಾಗಿ ಪುಟ ವಿನ್ಯಾಸ ಕುರಿತ ತರಬೇತಿ ಶಿಬಿರವನ್ನು ಏರ್ಪಡಿಸಿದ್ದರು.

ಹೊಸ ಕಲಿಕೆಯ ಹಸಿವಿದ್ದ ನಾನೂ ಅದರಲ್ಲಿ ಭಾಗವಹಿಸಿದ್ದೆ. ನಮಗೆ ತರಬೇತಿ ನೀಡಲು ಬಂದಿದ್ದವರು ಜರ್ಮನಿಯವರು. ಪೇಜ್ ಡಿಸೈನ್‌ನಲ್ಲಿ ಸಾಕಷ್ಟು ಪರಿಣತಿ, ಅನುಭವ ಹೊಂದಿದ್ದವರು. ಬಹಳ ತಮಾಷಿ ಮನುಷ್ಯ. ಪತ್ರಿಕೋದ್ಯಮ ತರಬೇತಿ ಜತೆ ಜೀವನದ ಪಾಠವನ್ನೂ ಪ್ರಾಸಂಗಿಕವಾಗಿ ಹೇಳುತ್ತಿದ್ದರು. ಅವರ ಹೆಸರು ‘ಪೀಟರ್ ಮೇ’ ಅಂತ. ಆಗ ಅದೇ ಹೆಸರಿನ ಒಬ್ಬ
ಕ್ರಿಕೆಟಿಗ ಇದ್ದ. ‘ನಾನು ನನ್ನ ಪರಿಚಯ ಮಾಡಿಕೊಂಡಾಗಲೆಲ್ಲ, ಓಹ್ ನೀವು ಗೊತ್ತು ಸರ್ ಅಂತ ಹೇಳುವವರು ಜಾಸ್ತಿ.

ಏಕೆಂದರೆ ಅವರು ನನ್ನನ್ನು ಕ್ರಿಕೆಟಿಗ ಮೇ ಎಂದು ತಪ್ಪಾಗಿ ಭಾವಿಸುತ್ತಿದ್ದರು. ಅಥವಾ ಆ ಹೆಸರು ಪರಿಚಿತವಾಗಿದ್ದರಿಂದ ಅಂಥ
ಭಾವನೆ ಬರುತ್ತಿರಲೂ ಬಹುದು. ಆದರೆ ಆಗಾಗ ಇಂಥ ಪ್ರಸಂಗ ಎದುರಿಸಿರುವುದರಿಂದ ನನಗಿದು ರೂಢಿಯಾಗಿದೆ’ ಎಂದು ತಮಾಷೆಯಿಂದಲೇ ಹೇಳುತ್ತಿದ್ದರು. ಹೀಗೊಂದು ದಿನ ಅವರು ಹೇಳಿದ ಮತ್ತೊಂದು ಮಾತು ಕೂಡ ಇವತ್ತಿಗೂ ನೆನಪಿದೆ. ಅಲ್ಲದೆ ಅಂದು ಅವರು ಹೇಳಿದ ಮಾತು ನಮ್ಮ ದೇಶದಲ್ಲಿ ಇಂದಿಗೂ ಪ್ರಸ್ತುತವಾಗಿದೆ.

ಅವರು ಆಗ ಹೇಳಿದ್ದು: ‘ನಮ್ಮ ದೇಶದಲ್ಲಿ ನಾವು ಯಾವುದೋ ವ್ಯವಹಾರಕ್ಕೆಂದು ಬ್ಯಾಂಕಿಗೆ ಹೋದರೆ, ಅಲ್ಲಿನ ಸಿಬ್ಬಂದಿ ನಮಗೆ ಹಲೋ ಹೇಳುತ್ತಾರೆ. ಕುಳಿತುಕೊಳ್ಳಿ ಎಂದು ಮನವಿ ಮಾಡುತ್ತಾರೆ. ಕಾಫಿ, ಟೀ ಏನು ತೆಗೆದುಕೊಳ್ಳುವಿರಿ? ಎಂದು ಕೇಳುತ್ತಾರೆ. ಆದರೆ ನಾನು ಭಾರತಕ್ಕೆ ಬಂದಾಗಿನಿಂದ ಗಮನಿಸುತ್ತಿದ್ದೇನೆ. ಬ್ಯಾಂಕಿಗೆ ಹೋದರೆ ಯಾರೂ ನಮ್ಮನ್ನು ಮಾತನಾಡಿಸುವುದಿಲ್ಲ. ಏನಾಗಬೇಕಿತ್ತು ಎಂದು ಕೇಳುವಷ್ಟು ಸೌಜನ್ಯವೂ ಇಲ್ಲ. ಹೀಗೇಕೆ ಎಂದು ನನಗೆ ಅರ್ಥವಾಗಿಲ್ಲ…’ ಪೀಟರ್ ಮೇ ಅವರ ಈ ಪ್ರಶ್ನೆಗೆ ಈಗಲೂ ಉತ್ತರವಿಲ್ಲ.

ಅಥವಾ ಯಾಕೆ ಹೀಗೆ ಎಂದು ಇದುವರೆಗೆ ಅರ್ಥವೂ ಆಗಿಲ್ಲ. ಹಳೆಯ ಕಾಲದ ಈ ಪ್ರಸಂಗ ನನಗೆ ನೆನಪಾಗಲು ಕಾರಣವಾಗಿದ್ದು ರಾಜ್ಯ ಸರಕಾರ ಈಚೆಗೆ ಹೊರಡಿಸಿರುವ ಒಂದು ಸುತ್ತೋಲೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಪ್ರಕಟಣೆ ಇದು. ಅದರ ವಿವರ, ಒಕ್ಕಣೆ ಸಂಕ್ಷಿಪ್ತವಾಗಿ ಹೀಗಿದೆ ‘ಸರಕಾರಿ ಸೇವೆಯು ಸಾರ್ವಜನಿಕ ಸೇವೆಯಾಗಿರುವುದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಯ ಕುರಿತು ವ್ಯವಹರಿಸಲು ಸರಕಾರಿ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕ ರೊಂದಿಗೆ ಸೌಜನ್ಯಯುತವಾಗಿ/ ಸಮಾಧಾನವಾಗಿ ವರ್ತಿಸಬೇಕು.

ತಾರತಮ್ಯ ಮಾಡದೇ ಬಂದವರೆಲ್ಲರಿಗೂ ಕುರ್ಚಿಗಳಲ್ಲಿ ಕುಳಿತುಕೊಳ್ಳಲು ಹೇಳಬೇಕು. ಸಚಿವಾಲಯದ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಅಧೀನ ಇಲಾಖೆಗಳ ಮುಖ್ಯಸ್ಥರ ಮೂಲಕ ಎಲ್ಲಾ ಸರಕಾರಿ ಅಧಿಕಾರಿ ಮತ್ತು ಸಿಬ್ಬಂದಿಗೆ ಈ ವಿಷಯವನ್ನು ತಿಳಿಸಬೇಕು’ ಈ ವಿಷಯವನ್ನು ಗಮನಿಸುತ್ತಲೇ ನನಗೆ ಥಟ್ಟನೆ ನೆನಪಾಗಿದ್ದು ಇದೇ ಪೀಟರ್ ಮೇ ಅವರ ಮಾತುಗಳು.
ಅವರು ಅಂದು ಆಡಿದ ಆ ಮಾತುಗಳು ಈಗಲೂ ನಿತ್ಯ ಮತ್ತು ಸತ್ಯ ಸಂಗತಿಗಳಾಗಿದೆ ಎಂಬುದಕ್ಕೆ ಈ ಸುತ್ತೋಲೆಯೇ ಸಾಕ್ಷಿ. ಹಾಗೆಂದು ಈ ಸುತ್ತೋಲೆ ಹೊರಡಿಸಿದಾಕ್ಷಣ ಎಲ್ಲ ಬದಲಾವಣೆ ಆಗಿಬಿಡುತ್ತದೆ, ಸರಕಾರಿ ಸಿಬ್ಬಂದಿಯ ವರ್ತನೆಯಲ್ಲಿ ಸೌಜನ್ಯ ತುಂಬಿ ತುಳುಕಾಡುತ್ತದೆ ಎಂಬ ಭ್ರಮೆ ಖಂಡಿತವಾಗಿಯೂ ಇಲ್ಲ.

ಆದರೆ ಈ ಸರ್ಕ್ಯುಲರ್ ಹಲವು ಜಿಜ್ಞಾಸೆಗಳನ್ನು ಮೂಡಿಸಿದೆ. ಈ ಜಿಜ್ಞಾಸೆಗಳ ಬಗ್ಗೆ ಚರ್ಚಿಸುವ ಮುನ್ನ ಸೌಜನ್ಯದ ವಿಚಾರದಲ್ಲಿ (ಎಲ್ಲರಿಗೂ ಆಗಿರಬಹುದಾದ ಅನುಭವಗಳಿಗೆ) ಕೆಲವು ಸಂಗತಿ ಗಳನ್ನು ಗಮನಿಸೋಣ. ನಮಗೆ ಹಣದ ತುರ್ತು ಅಗತ್ಯ ಇರುತ್ತೆ. ಬೆಳಗ್ಗೆ, ಬೆಳಗ್ಗೆ, ಬ್ಯಾಂಕ್ ಆರಂಭಕ್ಕೆ ಒಂದರ್ಧ ಗಂಟೆ ಮುಂಚೆಯೇ ಹೋಗಿ ಕಾಯುತ್ತಿರುತ್ತೇವೆ. ಆದರೆ ಕ್ಯಾಷಿಯರ್ ಎಂಬ ವ್ಯಕ್ತಿ ಎಷ್ಟೊತ್ತಾದರೂ ಬರುವುದೇ ಇಲ್ಲ. ನಾವು ಅಸಹನೆಯಿಂದ ಕಾಯುತ್ತಲೇ ಇರುತ್ತೇವೆ.

ಅವರು ಬರುತ್ತಿಲ್ಲ. ಹೋಗಲಿ, ಇತರ ಸಿಬ್ಬಂದಿ ಯವರಾದರೂ ಸ್ಪಂದಿಸುತ್ತಾರಾ ಎಂದರೆ ಅದೂ ಇಲ್ಲ. ತಮಗೆ ಸಂಬಂಧವೇ ಇಲ್ಲ ಎಂಬಂತಿರುತ್ತಾರೆ. ಇತರ ಸೇವೆಗಳೂ ಅಷ್ಟೇ. ಸರಿಯಾದ ಮಾಹಿತಿ ಕೊಡುವುದಿಲ್ಲ. ನಾವು ಕೇಳಿದರೂ ಸೂಕ್ತವಾಗಿ ಸ್ಪಂದಿಸುವುದಿಲ್ಲ. ಇನ್ನೂ ಹೆಚ್ಚು ಕೇಳಿದರೆ ಮುಖ ಸಿಂಡರಿಸುತ್ತಾರೆ. ಪಾಸ್‌ಬುಕ್ ಅಪ್‌ಡೇಟ್ ಮಾಡುವುದಕ್ಕೂ ಹರಸಾಹಸ ಪಡಬೇಕು. ಏನ್ರೀ ಇಷ್ಟೊಂದು ಎಂಟ್ರಿ ಇದೆ ? ಬುಕ್ ಬಿಟ್ಟು ಹೋಗಿ, ನಾಳೆ ತೆಗೆದುಕೊಂಡು ಹೋಗಿ ಎನ್ನುತ್ತಾರೆ.

ಮತ್ತೆ ಕೆಲವು ಸಂದರ್ಭದಲ್ಲಿ ಕೆಲವು ಹಾಳೆಗಳು ಪ್ರಿಂಟೇ ಆಗಿರುವುದಿಲ್ಲ. ಅಥವಾ ಬೇರೆ ನಂಬರ್ ಹಾಕಿ ಅವರ ವಿವರಗಳನ್ನು ಮುದ್ರಿಸಿ ಕೊಟ್ಟಿರುತ್ತಾರೆ. ಇದನ್ನು ಕೇಳಿದರೆ ಸರಿಯಾಗಿ ಉತ್ತರಿಸುವ ಸೌಜನ್ಯವೂ, ವ್ಯವಧಾನವೂ ಅವರಿಗೆ ಇರುವುದಿಲ್ಲ. ಮತ್ತೆ ಕೆಲವೆಡೆ ಪಾಸ್‌ಬುಕ್ ಪ್ರಿಂಟಿಂಗ್ ಮಷಿನ್ ಇಟ್ಟಿರುತ್ತಾರೆ. ಹೋಗಲಿ ಅಲ್ಲೇ ನಮ್ಮ ಕೆಲಸ ಮಾಡಿಕೊಳ್ಳೋಣ ಎಂದರೆ ಅವು ಕೆಟ್ಟು ಕೂತಿರುತ್ತವೆ.

ಇದು ಸರಕಾರಿ ಸ್ವಾಮ್ಯದ ಬ್ಯಾಂಕ್‌ನ ಕತೆ. ಆದರೆ ನನ್ನ ಅಭಿಪ್ರಾಯವೇ ಬದಲಾಗುವಂಥ, ಬೇರೆಯದೇ ಆದ ರೀತಿಯ ಅನುಭವ ನೀಡಿದ ಇನ್ನೊಂದು ಪ್ರಸಂಗ ಹೀಗಿದೆ. ನಾನು ಖಾತೆ ಹೊಂದಿರುವ ಖಾಸಗಿ ಬ್ಯಾಂಕಿಗೆ ಒಂದಷ್ಟು ಕೆಲಸಗಳ ನಿಮಿತ್ತ ಹೋಗಿದ್ದೆ. ಒಳಗೆ ಹೋಗುತ್ತಿದ್ದಂತೆಯೇ ಅಲ್ಲೊಬ್ಬ ಮಹಿಳಾ ಸಿಬ್ಬಂದಿ ನನ್ನ ಬಳಿ ಬಂದು ವೆಲ್‌ಕಮ್ ಹೇಳಿದರು. ಏನಾಗಬೇಕಿತ್ತು ಎಂದು ವಿಚಾರಿಸಿದರು. ನಾನು ಹೀಗ್ಹೀಗೆ ಎಂದು ಹೇಳಿದಾಗ, ಸಂಬಂಧಪಟ್ಟವರ ಬಳಿ ಕರೆದುಕೊಂಡು ಹೋದರು. ಆ ಕೌಂಟರ್‌ನಲ್ಲಿದ್ದ ವರು ಎಲ್ಲವನ್ನೂ (ಸಮಾಧಾನದಿಂದ) ಕೇಳಿದ ಬಳಿಕ ಏನೇನು ಮಾಡಬೇಕು ಎಂದು ವಿವರಿಸಿದರು.

ತಾವೇ ಎಲ್ಲ ಅರ್ಜಿಯನ್ನು ತುಂಬಿಕೊಂಡರು. ಕೊನೆಗೆ ನಾನು ಹಣ ಡ್ರಾ ಮಾಡಬೇಕು ಎಂದು ತಿಳಿಸಿದಾಗ, ನನ್ನಿಂದ ಚೆಕ್
ಪಡೆದು ಸ್ವತಃ ಕ್ಯಾಷ್‌ಕೌಂಟರ್‌ಗೆ ಹೋಗಿ ಹಣ ತಂದು  ಕೊಟ್ಟರು. ಆದರೆ, ಅವರು ಯಾಕೆ ಹಾಗೆ, ಇವರ‍್ಯಾಕೆ ಹೀಗೆ? ಎಂಬ ಪ್ರಶ್ನೆ ನನ್ನನ್ನು ಅನೇಕ ಬಾರಿ ಕಾಡಿದ್ದಿದೆ. ಇನ್ನೂ ಉತ್ತರ ಸಿಕ್ಕಿಲ್ಲ. ಇನ್ನು ಸರಕಾರಿ ಕಚೇರಿಗಳಿಗೆ ಹೋದರೆ ದೇವರೇ ಗತಿ. ಏಕೆಂದರೆ ಸೌಜನ್ಯ ಎಂದರೆ ಅಲ್ಲಿ ಬಹುತೇಕರು ಹಾಗೆಂದರೇನು ಎಂದು ಕೇಳಬಹುದು.

ಸೌಜನ್ಯದ ನಡವಳಿಕೆ ಒತ್ತಟ್ಟಿಗಿರಲಿ. ದೌರ್ಜನ್ಯ ಮಾಡದಿದ್ದರೆ ಅಷ್ಟೇ ಸಾಕು ಎಂಬ ಸ್ಥಿತಿ ಬಹುತೇಕ ಕಡೆ ಇದೆ. ನಾವು ಯಾವುದೋ ಕೆಲಸಕ್ಕಾಗಿ ಯಾವುದಾದರೂ ಆಫೀಸಿಗೆ ಹೋದರೆ ಅಲ್ಲಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದೂ ಕಷ್ಟ. ಏಕೆಂದರೆ ಸಾರ್ವಜನಿಕರು ಹೋದರೆ ಕೂರಲು ಕುರ್ಚಿ ಕೊಡುವ ಮಾತು ಹಾಗಿರಲಿ. ನಮ್ಮನ್ನು ತಲೆಎತ್ತಿಯೂ ನೋಡುವುದಿಲ್ಲ.
ನಾವೇ ಮೇಲೆಬಿದ್ದು, ‘ಎಕ್ಸ್‌ಕ್ಯೂಸ್ ಮಿ’ ಎಂದೋ, ಹಲೋ ಎಂದೋ ಗಮನ ಸೆಳೆದಾಗ ಈ ಕಡೆ ನೋಡುತ್ತಾರೆ. ಮತ್ತೆ ಕೆಲವರು ತಮ್ಮ ತಮ್ಮಲ್ಲೇ ಹಾಳು ಹರಟೆಯಲ್ಲಿ ತೊಡಗಿರುತ್ತಾರೆಯೇ ಹೊರತು ಜನರ ಕಡೆ ಗಮನ ಇರುವುದಿಲ್ಲ.

ಅಥವಾ ಸೀಟಿನಲ್ಲಿ ಇರುವುದೇ ವಿರಳ. ಕೇಳಿದರೆ ಕಾಫಿಗೆ ಹೋಗಿರುತ್ತಾರೆ. ಇಲ್ಲವೆ ಲಂಚ್ ಟೈಮ್. ಇಲ್ಲವೆ ರಜಾ. ಆದರೆ ಎಲ್ಲೆಡೆ ಇದೇ ರೀತಿ ಇರುತ್ತದೆ ಎಂದೇನೂ ಅಲ್ಲ. ಸೌಜನ್ಯಯುತವಾಗಿ ಮಾತನಾಡಿ ಕೆಲಸವನ್ನೂ ಮಾಡಿಕೊಡುವ ಜನರೂ ಇರುತ್ತಾರೆ. ಆದರೆ ಅವರ ಸಂಖ್ಯೆ ತೀರ ವಿರಳ. ಅದೂ ಅಲ್ಲದೆ ಈ ಸೌಜನ್ಯ ಎಂಬುದು ಸಾಪೇಕ್ಷವಾದುದು. (ರಿಲೇಟಿವ್ ಟರ್ಮ್) ಮೊದಲು ಉಪೇಕ್ಷೆ ಮಾಡಿದವರು, ಜೋರು ಮಾಡಿದವರು, ಆಗೋದಿಲ್ಲ ಎಂದು ಹೇಳಿದವರು, ಕೈಬೆಚ್ಚಗೆ ಮಾಡಿದ ಬಳಿಕ ತಮ್ಮ ವರ್ತನೆಯ ವರಸೆಯನ್ನೇ ಬದಲಾಯಿಸಿಬಿಡುತ್ತಾರೆ.

ಇದ್ದಕ್ಕಿದ್ದಂತೆ ನಯ ವಿನಯ, ಕಾಳಜಿ, ಸೌಜನ್ಯ ಎಲ್ಲವೂ ಬಂದುಬಿಡುತ್ತವೆ. ಇವರೊಂಥರಾ ಊಸರವಳ್ಳಿಗಳಿದ್ದ ಹಾಗೆ. ಬಲುಬೇಗ ಬಣ್ಣ ಬದಲಾಯಿಸಿಬಿಡುತ್ತಾರೆ. ಒಂದು ಫೈಲನ್ನು ತಿಂಗಳು ಗಟ್ಟಲೆ ಇರಿಸಿಕೊಂಡಿರುತ್ತಾರೆ. ಆದರೆ ಅವರಿಗೆ ಮಾಮೂಲು ಸಂದಾಯವಾದ ಬಳಿಕ ಚಕಚಕನೆ ಎಲ್ಲ ಕೆಲಸ ಆಗಿಬಿಡುತ್ತದೆ. ನಮ್ಮಬಂಧುವೊಬ್ಬರದು ಒಂದು ಕೆಲಸ ಆಗಬೇಕಿದೆ. ಕೆಲಸ  ಕಾಯಂ, ಬಡ್ತಿ ಇತ್ಯಾದಿಗೆ ಸಂಬಂಧಿಸಿದ್ದು. ಇದರಲ್ಲಿ ಅಕ್ರಮ ಸಕ್ರಮ ಮಾಡುವಂಥದ್ದೇನೂ ಇಲ್ಲ. ಗೋಲ್
ಮಾಲ್ ಕೂಡ ಇಲ್ಲ. ಸರಕಾರಿ ಆದೇಶದ ಪ್ರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಷ್ಟೇ.

ಆದರೆ ಅದು ಟೇಬಲ್ಲಿನಿಂದ ಟೇಬಲ್ಲಿಗೆ ಮೂವ್ ಆಗುವುದೇ ಕಷ್ಟ. ಆಮೆಯಾದರೂ ಇದಕ್ಕಿಂತ ವೇಗವಾಗಿ ಚಲಿಸಬಹುದೇನೊ. ಆದರೆ ಈ ಸರಕಾರಿ ವ್ಯವಸ್ಥೆಯಲ್ಲಿ ಜಪ್ಪಯ್ಯ ಅಂದರೂ ಅದು ಅಸಾಧ್ಯ. ಪ್ರತಿಬಾರಿ ಫೈಲ್ ಮುಂದೆ ಹೋಗಬೇಕಾದರೆ ಅಲ್ಲಿರುವ ಕೇಸ್ ವರ್ಕರ್ ಗಳಿಂದ ಒಂದು ಸಂದೇಶ ಬರುತ್ತದೆ. ‘ಒಮ್ಮೆ ಮುಖ ತೋರಿಸಬೇಕು’ ಎಂಬ ಈ ಸಂದೇಶದ ‘ಅರ್ಥ’ ಅತ್ಯಂತ ಸರಳ. ಹಾಗೆಂದು ಇವರು ವಿಪರೀತ ಸ್ನೇಹಪರರಾಗಿರುತ್ತಾರೆ. ಸೌಜನ್ಯಕ್ಕೆ ಕೊರತೆ ಏನೂ ಇಲ್ಲ.

ಆದರೆ… ಇಲ್ಲಿ ಆದರೆ ಎಂದು ನಾನು ಹೇಳಹೊರಟಿರುವುದೇನೆಂದರೆ, ಈ ಸೌಜನ್ಯ ಎಂಬುದು ಕೂಡ ಸ್ಟಾರ್ ಮಾರ್ಕ್ ಇರುವ ಜಾಹೀರಾತುಗಳಂತೆಯೇ. ಅಂದರೆ ಏನೇನೋ ಆಫರ್‌ಗಳ ಬಗ್ಗೆ ಹೇಳುವಾಗ ಸಣ್ಣದಾಗಿ ಒಂದು ಸ್ಟಾರ್ ಹಾಕಿರುತ್ತಾರೆ ನೋಡಿ. ಕೆಳಗಡೆ ಅದರ ಬಗ್ಗೆ ಅತಿ ಸಣ್ಣ ಅಕ್ಷರಗಳಲ್ಲಿ ಟರ್ಮ್ಸ್ ಅಂಡ್ ಕಂಡೀಶನ್ಸ್ (ಟಿ ಅಂಡ್‌ಸಿ) ಅಪ್ಲೆ  ಎಂದಿರುತ್ತದೆ. ಆ ಕುರಿತು ವಿವರಣೆ ಇರುತ್ತದೆ. ನಮ್ಮ ವ್ಯವಸ್ಥೆಯೂ ಅಷ್ಟೆ. ಸೌಜನ್ಯ ಇಲ್ಲವಾ ಎಂದರೆ ಇದೆ, ಆದರೆ ಟಿಅಂಡ್‌ಸಿ ಅಪ್ಲೆಸ್ ಥರ. ಟ್ರಾಫಿಕ್ ಪೊಲೀಸರು, ಪೊಲೀಸ್ ಠಾಣೆ, ಆಸ್ಪತ್ರೆ ಈ ಕಡೆಗಳಲ್ಲೆಲ್ಲ ಸೌಜನ್ಯಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತು.

ದರ್ಪ, ದಬ್ಬಾಳಿಕೆ, ಅಸಡ್ಡೆ, ನಿರ್ಲರ್ಕ್ಷ್ಯಗಳೇ ಇವರ ಲಾಂಛನ. ಆದರೆ ಹಣ, ಅಧಿಕಾರ, ಪ್ರಭಾವ ಇದ್ದರೆ ಅವರ ಮುಖದಲ್ಲಿ,
ನಡೆನುಡಿಯಲ್ಲಿ ಸೌಜನ್ಯ ಒಡಮೂಡಿಬಿಡುತ್ತದೆ. ಇಷ್ಟೆಲ್ಲ ವಿವರಣೆಗಳ ಬಳಿಕ ಮತ್ತೆ ಏಳುವ ಪ್ರಶ್ನೆ ಎಂದರೆ, ಹಾಗಾದರೆ ಇವೆಲ್ಲದರ ಅರಿವು ಸಂಬಂಧಿಸಿದವರಿಗೆ ಇಲ್ವಾ ಎಂಬುದು. ಇದಕ್ಕೆ ಉತ್ತರ ಹೌದು ಮತ್ತು ಇಲ್ಲ. ಹೌದು ಏಕೆಂದರೆ ಇದರ ಬಗ್ಗೆ
ಕಾಲಕಾಲಕ್ಕೆ ಸೂಚನೆ, ಸುತ್ತೋಲೆಗಳನ್ನು ಹೊರಡಿಸಲಾಗುತ್ತದೆ. ಎಚ್ಚರಿಕೆ ಕೊಡಲಾಗುತ್ತದೆ.

ಶಿಸ್ತು ಕುರಿತಾದ ನಿಯಮಗಳಿವೆ. ಇಲ್ಲ ಏಕೆಂದರೆ ನಮ್ಮ ಜಡ್ಡುಗಟ್ಟಿದ, ಉತ್ತರದಾಯಿತ್ವ ಇಲ್ಲದಂಥ ವ್ಯವಸ್ಥೆ. ಸೇವಾ ಭದ್ರತೆ
ಇರುವವರೆಗೆ ಬಹುತೇಕರು ಬಗ್ಗುವುದಿಲ್ಲ. ಹಾಗೆಂದು ಅಭದ್ರತೆ ಇರಬೇಕು ಎಂದಲ್ಲ. ಆದರೆ ಉತ್ತರದಾಯಿತ್ವಮತ್ತು ಹೊಣೆಗಾರಿಕೆ ಎಂಬುದಿರಬೇಕು. ಇಲ್ಲದಿದ್ದರೆ ಇಂಥ ಎಷ್ಟೇ ಸುತ್ತೋಲೆಗಳನ್ನು ಹೊರಡಿಸಿದರೂ ಅವು ಸತ್ತೋಲೆಯಾಗುತ್ತವೆ ಅಷ್ಟೆ.

ಇನ್ನು ಸರಕಾರದ ಕಡೆಯಿಂದಲೂ ಈ ನಿಟ್ಟಿನಲ್ಲಿ ಕೆಲವು ಕ್ರಮಗಳು ಆಗಬೇಕಾಗುತ್ತದೆ. ಬಂದವರಿಗೆ ಕುರ್ಚಿಗಳನ್ನು ಒದಗಿಸಿ ಎಂದರೆ ಆಯಿತೆ? ಅಸಲಿಗೆ ಆ ಕಚೇರಿಗೆ ಹೋದರೆ ಕುರ್ಚಿಗಳೇ ಇರುವುದಿಲ್ಲ. ಇಲ್ಲದ ಕುರ್ಚಿಗಳನ್ನು ಹೇಗೆ ತಾನೆ ಕೊಟ್ಟಾರು? ಇಂಟರ್‌ನೆಟ್ ಸೌಲಭ್ಯ ಒದಗಿಸದೆ, ಎಲ್ಲ ಕೆಲಸಗಳನ್ನು ಇ ವ್ಯವಸ್ಥೆಯಲ್ಲಿ ಮಾಡಿಕೊಡಿ ಎಂದರೆ ಹೇಗೆ ಸಾಧ್ಯ? ಸಿಬ್ಬಂದಿ
ಕೊರತೆ ಇರುವಾಗ ದಕ್ಷತೆ ಇರುವುದಿಲ್ಲ. ಕೆಲಸಗಳು ವಿಳಂಬವಾಗುವುದು ಸಹಜ. ಆದರೂ ಜನರು ಪದೇ ಪದೆ ಬಂದಾಗ ಅವರೂ ತಾಳ್ಮೆಗೆಡುವುದು ಸಹಜ.

ಇಂತಿರುವಾಗ ಸೌಜನ್ಯವನ್ನು ನಿರೀಕ್ಷಿಸುವುದು ಎಂತು? ಕೊನೆಯದಾಗಿ ಒಂದು ಮಾತು. ಸೌಜನ್ಯದಿಂದ ವರ್ತಿಸುವಂತೆ ಇಷ್ಟು ವರ್ಷಗಳ ಬಳಿಕವೂ ಸುತ್ತೋಲೆ ಹೊರಡಿಸುವ ಅಗತ್ಯವಿದೆಯೇ ಎಂಬುದು ಮೂಲಭೂತ ಪ್ರಶ್ನೆ. ಹೌದು, ಇದೆ ಎಂದಾದರೆ ಅದನ್ನು ಜಾರಿಗೆ ತರುವುದು ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಅಥವಾ ಇಂಥದೊಂದು ನಡವಳಿಕೆ ಯನ್ನು ಬೆಳೆಸಿಕೊಳ್ಳುವಲ್ಲಿ ಅವರಿಗೆ ಕಾಲಕಾಲಕ್ಕೆ ತರಬೇತಿ ನೀಡಲಾಗುತ್ತಿದೆಯೇ? ತಪ್ಪೆಸಗಿದವರ, ದೂರು ಬಂದಿರುವವರ ವಿರುದ್ಧ ಕ್ರಮ ಕೈಗೊಂಡ ಎಷ್ಟು ಉದಾಹರಣೆಗಳಿವೆ? ಇವೆಲ್ಲ ಉತ್ತರ ಸಿಗದ ಪ್ರಶ್ನೆಗಳಾಗಿವೆ.

ಇತ್ತ, ಸಾರ್ವಜನಿಕ ಸೇವಾಕ್ಷೇತ್ರದಲ್ಲಿ ಕೆಲಸ ಮಾಡುವವರೂ ಕೂಡ ಈ ನಿಟ್ಟಿನಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ನಿರ್ಲಕ್ಷಿಸಬಾರದು ಎಂಬ ಸೌಜನ್ಯ ಅಲ್ಲಿನ ಸಿಬ್ಬಂದಿಗೆ ಇರಬೇಕು; ಚಿಲ್ಲರೆಯನ್ನು ಹಿಂದುರಿಗಿಸಬೇಕು, ಕಡೇಪಕ್ಷ ಕೇಳಿದ ಬಳಿಕವಾದರೂ ವಾಪಸ್ ಮಾಡಬೇಕು ಎಂಬ ಸೌಜನ್ಯ ಕಂಡಕ್ಟರ್‌ಗಳಿರಬೇಕು; ಸಾರ್ವಜನಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕೆಂಬ ವಿವೇಕ, ವಿವೇಚನೆಯನ್ನು ಪೊಲೀಸ್ ಮತ್ತಿತರ ಸಾರ್ವಜನಿಕ
ಸೇವೆಯಲ್ಲಿರುವ ಸಿಬ್ಬಂದಿ ಅಳವಡಿಸಿಕೊಳ್ಳಬೇಕು.

ಕಡೆಯದಾಗಿ: ಸೌಜನ್ಯ ಎಂಬುದನ್ನು ಹೇಳಿಕೊಡುವುದರಿಂದಲೇ ಬರಬೇಕಾಗಿಲ್ಲ. ಅದನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ ಅಗತ್ಯವಿದ್ದೆಡೆ ಸೌಜನ್ಯ ಬೆಳೆಸಿಕೊಳ್ಳುವಂಥ ವಾತಾವರಣವನ್ನೂ ಬೆಳೆಸಬೇಕು.

ನಾಡಿಶಾಸ್ತ್ರ
ಸೌಜನ್ಯ ಎಂಬುದು ಪ್ರಾಣಿಜನ್ಯ
ಸಸ್ಯಜನ್ಯ ಉತ್ಪನ್ನವಲ್ಲ, ಅದು
ಮನುಷ್ಯಜನ್ಯ ಸಾಮಾನ್ಯ ಗುಣ
ಮಾಡಬೇಕು ಅದನ್ನು ಮಾನ್ಯ