Wednesday, 11th December 2024

ಪೂರ್ವಿಕರ ಪುಣ್ಯವೇ ಪ್ರಗತಿಗೆ ಪೂರಕ

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ವಯಸ್ಸಾದಂತೆಲ್ಲ ಹೆಚ್ಚು ಹೆಚ್ಚು ನೆನಪಾಗುವುದು ಬಾಲ್ಯದ ದಿನಗಳೇ. ಯೌವ್ವನದ ಹುಚ್ಚಾಟ ಗಳನ್ನು ನೆನಪಿಸಿಕೊಂಡು ನಗು ಬರುತ್ತದೆಯಾಗಲಿ, ಮನಸ್ಸಿಗೆ ಮುದ ಕೊಡುವುದು, ಹತ್ತು – ಹನ್ನೆರಡನೆಯ ವಯಸ್ಸಿನ ಘಟನೆಗಳು, ಆಗ ನಮ್ಮೊಡನಿದ್ದ, ನಮ್ಮ ಈಗಿನ ವಯಸ್ಸಿನ ಆ ಹಿರಿಯರ ಮಾತು, ವರ್ತನೆ, ಅವರ ತಲ್ಲಣಗಳು, ಅವರ ಶ್ರದ್ಧೆಗಳು, ಅವರ ಸಂತೃಪ್ತ ಜೀವನ, ಇಂಟರ್‌ನೆಟ್,
ಕಂಪ್ಯೂಟರ್, ಟಿ.ವಿ ಗಳಿಲ್ಲದ ಆ ಕಾಲ ಓಹ್! ಎಷ್ಟು ನೆಮ್ಮದಿ ಇತ್ತು.

ಶೆಟ್ಟರ ಮನೆಯಲ್ಲಿ ಮೊದಲ ಬಾರಿಗೆ ಕ್ಯಾಲ್ಕುಲೇಟರ್ ನೋಡಿದಾಗ, ಮೊದಲೇ ಲೆಕ್ಕದಲ್ಲಿ ವೀಕ್ ಇದ್ದ ನಾನು ಇಂಥದೊಂದನ್ನು ಎಂದು ಕೊಳ್ಳುತ್ತೇನೆಯೋ? ಎಂದು ಹಳಹಳಿಸಿದ್ದೆ. ನಾಲ್ಕಾಣೆ, ಎಂಟಾಣೆಗಳ ಕಾಲ ಅದು. ಮಣ್ಣಿನ ಕುಳಿಯೊಂದರಲ್ಲಿ ಐದು, ಹತ್ತು ಪೈಸೆ ಹಾಕುತ್ತಾ ವಾರಕ್ಕೋ, ಹದಿನೈದು ದಿನಕ್ಕೋ ಸಿನಿಮಾಗೆ, ಆಗಿನ ಆದರ್ಶ ಕೆಫೆಯ ಮಸಾಲ ದೋಸೆಗೆ ಅದರಿಂದ ಹಣ ತೆಗೆಯುತ್ತಿದ್ದೆ.

ಕ್ಯಾಲ್ಕುಲೇಟರ್‌ಗೆ ಇಪ್ಪತ್ತೈದು ರುಪಾಯಿಯೆಂದು ಅದರ ಆಸೆಯನ್ನೇ ಬಿಟ್ಟಿದ್ದೆ. ಹದಿನೈದು ಪೈಸೆ ಪೋಸ್ಟ್ ಕಾರ್ಡ್ ಹಾಕಿ ಪರ ಊರಿನ ಬಂಧುಗಳ ಕ್ಷೇಮ, ಸಮಾಚಾರ ಒಂದು ವಾರ ಕಾಯುತ್ತಿದ್ದ ಆ ದಿನಗಳ ಸೊಗಸು ಏನುಕೊಟ್ಟರೆ, ಎಷ್ಟು ಕೊಟ್ಟರೆ
ಸಿಕ್ಕೀತು ಹೇಳಬಲ್ಲವರೇ ಇಲ್ಲ. ನನ್ನ ತಂದೆ, ತಾಯಿ ಇಬ್ಬರದೂ ಗಂಗಾವತಿಯೇ ಜನ್ಮಸ್ಥಳ. ರಾಯರ ಮಠದ ಬಳಿ ತಾಯಿಯ
ತವರು ಮನೆ ಇದ್ದರೆ, ಎರಡನೇ ಬೀದಿ ಹೇರೂರು ಓಣಿಯಲ್ಲಿ ತಂದೆಯ ತಂದೆ, ತಾಯಿ ಅಂದರೆ ನಮ್ಮ ತಾಯಿ ಅತ್ತೆ ಮನೆ,
ತಂದೆಯ ತಂದೆ ಎಂದರೆ ನನ್ನ ಗಂಡಜ್ಜ ಹನುಮಂತಾಚಾರ್, ಅಜ್ಜಿ ಜೀವಮ್ಮ ಹೇರೂರು ಓಣಿಯಲ್ಲಿದ್ದರೆ, ತಾಯಿಯ ತಂದೆ
ಅಂದರೆ ನನ್ನ ಹೆಣ್ಣಜ್ಜ ಶ್ಯಾಮರಾವ್ ಕುಲಕರ್ಣಿ ಅವರ ಮನೆ, ಅಜ್ಜಿ ಇರಲಿಲ್ಲ.

ನಾನು ಹೆಚ್ಚು ಬೆಳೆದದ್ದೆ ಶ್ಯಾಮರಾವ್ ತಾತನ ಮನೆಯಲ್ಲಿ. ತಾತನಿಗೆ ಹೆಂಡತಿ ಇರಲಿಲ್ಲ. ಆದರೆ ಹೆಂಡತಿ ಅಕ್ಕ ಅಂಬಕ್ಕ ಎನ್ನುವ ಮಡಿ ಹೆಂಗಸು ತಾತನಿಗೆ, ಅಡಿಗೆ ಊಟಕ್ಕಾಗಿ, ತಂಗಿ, ತಂಗಿ ಗಂಡನ, ಆತನ ಮಕ್ಕಳ ಸೇವೆಯಲ್ಲಿಯೇ ಕಾಲ, ಆಯುಷ್ಯ ಕಳೆದಳು. ಸದಾ ಹಲ್ಲು ಕಡಿಯುತ್ತಾ, ಸಣ್ಣ ಸಣ್ಣದಕ್ಕೇ ರೇಗುತ್ತಿದ್ದಳು. ಎಲ್ಲರನ್ನು ಅಂಜಿಸಿಕೊಂಡು ಅಂಕೆಯಲ್ಲಿಟ್ಟುಕೊಂಡಿ ದ್ದಳು. ಗಂಡನ ಮುಖದ ಪರಿಚಯವೇ ಈಕೆಗೆ ಇರಲಿಲ್ಲ.

ತಾತ ಶ್ಯಾಮರಾಯನ ತಂಗಿ ಸಾವಿತ್ರವ್ವ ಎಂಬಾಕೆಯೂ ಆ ದಿನಗಳಲ್ಲಿ ತನ್ನ ಮಗನೊಂದಿಗೆ ತಾತನ ಮನೆಗೆ ರಜೆಗೆ ಬರುತ್ತಿದ್ದಳು. ಈಕೆಯೂ ಮಡಿ ಹೆಂಗಸು. ಆಗ ನಾನು ಅದೇ ಹತ್ತನೆಯ ಕ್ಲಾಸ್ ಪಾಸಾಗಿ, ಪಿ.ಯು.ಸಿ ಮೊದಲ ವರ್ಷದಲ್ಲಿದ್ದೆ. (ಪಿ.ಯು.ಸಿ ಎಂದರೆ ಪ್ಯಾಂಟ್ ಯೂಸರ‍್ಸ್ ಕಂಪನಿ ಎಂದೂ ಹೆಸರಿತ್ತು ಆಗ) ಹತ್ತನೆಯ ವರ್ಗದವರೆಗೂ ಪ್ಯಾಂಟ್ ಹಾಕುವಂತಿರಲಿಲ್ಲ. ಪ್ಯಾಂಟ್ ಹಾಕಿದೆವೆಂದರೆ ಕವಿತೆ ಬರೆಯುವ ಹುಚ್ಚೂ ಅಂಟಿಕೊಳ್ಳುತ್ತಿತ್ತು. ನಾನಂತೂ ಮೊದಲೇ ಕಾವ್ಯ, ಹಾಸ್ಯ, ಕಾದಂಬರಿ ಓದಿನ ಗೀಳಿನವನು ಕೇಳಬೇಕೆ? ಅಂತ್ಯ ಪ್ರಾಸದ ಕವನಗಳನ್ನೇ ಒಂದರ ಕೆಳಗೊಂದು ಬರೆದು ಕವನ ಮಾಡುತ್ತಿದ್ದೆ.

ಅದರ ಮೊದಲ ಕೇಳುಗರೇ ತಾತ ಶ್ಯಾಮರಾವ್, ತಾತನ ತಂಗಿ ಸಾವಿತ್ರವ್ವ. ಹುಡುಗನ ಹುಚ್ಚಾಟ ಎಂದು ಬೇಸರಿಸಿಕೊಳ್ಳದೇ ಅದೆಷ್ಟು ತನ್ಮಯರಾಗಿ ಕೇಳುತ್ತಿದ್ದರೆಂದರೆ, ಇಂದಿಗೂ ನನಗೆ ಯಾರಾದರೂ ನನ್ನ ಮುಂದೇನಾದರೂ ಓದುತ್ತಿದ್ದರೆಂದರೆ,
ನಾನೂ ಹಾಗೆ ಕೇಳಬೇಕೆಂಬ ತನ್ಮೂಲಕ ಓದುವವರನ್ನು ಪ್ರೋತ್ಸಾಹಿಸಬೇಕೆಂಬ ಪಾಠ ಕಲಿತಿದ್ದೇ ಅವರನ್ನು ನೋಡಿ
ಎನಿಸುತ್ತಿರುತ್ತದೆ. ತಾತನ ತಂಗಿ ಸಾವಿತ್ರವ್ವ ಬಲು ಸಮಾಧಾನಿ ಹೆಣ್ಣು ಮಗಳು, ಆಕೆಗೆ ಸಿಟ್ಟು ಬಂದಿದ್ದನ್ನು, ಬಿರುಸು, ಕಟು
ಮಾತನಾಡಿದ್ದನ್ನು ನಾನು ಕಾಣಲೇ ಇಲ್ಲ. ಅಸ್ತಮಾ ಆಕೆಯನ್ನು ತುಂಬಾ ಪೀಡಿಸುತ್ತಿತ್ತು.

ಅಪರಾತ್ರಿಗಳಲ್ಲಿ ಒಬ್ಬಳೇ ಎದ್ದು ಕೂತು ಭರ್ರರ್ರರ್ರ ಎನ್ನುವ ಪಂಪ್ ಸ್ಟೌವ್ ಹಚ್ಚಿಕೊಂಡು ಹಂಚಿನ ಮೇಲೆ ಬಟ್ಟೆ ಇಟ್ಟು ಎದೆಗೆ ಅದರ ಕಾವು ಕೊಟ್ಟುಕೊಳ್ಳುತ್ತಿದ್ದಳು. ಬೇಸಿಗೆಯಲ್ಲಿ ಸೆಖೆಗೆ ಅಸ್ತಮಾ ರೋಗಿಗಳಿಗೆ ಹೆಚ್ಚಿನ ಕಷ್ಟವಿರುತ್ತದೆ ಎಂದು ನನಗೆ ತಿಳಿದಿದ್ದೇ ಆಗ. ಆಕೆಯ ಒಬ್ಬ ಮಗ ನನ್ನ ತಮ್ಮನ ವಾರಿಗೆಯವ, ಚಿದಂಬರ ಎಂದು ಹೆಸರಿತ್ತು. ತಾವಿಬ್ಬರೂ ಅಣ್ಣನ ಮನೆಗೆ ಬಂದದ್ದು, ಬೇಸಿಗೆಯ ರಜೆಯ ತಿಂಗಳು ಕಳೆಯೋದು ತಮ್ಮ ಖರ್ಚು ಅಣ್ಣನ ಮೇಲೆ ಬೀಳುತ್ತದೆ ಎಂದು ಆಕೆ ಅದೆಷ್ಟು ಕಷ್ಟಪಟ್ಟು ಅಣ್ಣನ ಮನೆಯ ಕೆಲಸ ಮಾಡುತ್ತಿದ್ದಳೆಂದರೆ ಅಪರಾತ್ರಿಯಲ್ಲಿ ಆಕೆಯ ಅಸ್ತಮಾ ಉಬ್ಬಸ ಜಾಸ್ತಿ ಆಗುತ್ತಿದ್ದುದೇ ಆಕೆಯ ಹಗಲಿನ ಹೆಚ್ಚಿನ ಆಯಾಸದ ಕೆಲಸಗಳಿಂದ.

ಹೀಗಾಗಿ ಆಕೆಗೆ ಕೈಲಾದ ಸಹಾಯ ಮಾಡುತ್ತಿದ್ದ ನನ್ನನ್ನು ಆಕೆ ತುಂಬಾ ಹರಸುತ್ತಿದ್ದಳು. ಅವೆಲ್ಲ ಹರಕೆಗಳೇ ನನ್ನ ಈಗಿನ ಏಳಿಗೆಗೆ ಪೂರಕವೇನೋ ಎನಿಸುತ್ತಿರುತ್ತದೆ. ಈಗಿನ ಪೀಳಿಗೆಗೆ ಇಂಥ ಹಿರಿಯರ ಸೇವೆಯ ಹರಕೆಗಳೇ ಇಲ್ಲ. ಇಂದಿನ ಮಕ್ಕಳಿಗೆ ಮೊಬೈಲ್ ಬಿಟ್ಟರೆ ಬೇರೇನೋ ಹೊರಗಿದೆ ಎಂಬ ಸತ್ಯವೇ ತಿಳಿಯುತ್ತಿಲ್ಲ. ನನ್ನ ತಂದೆಯ ತಂದೆ ಗಂಡಜ್ಜ ಹನುಮಂತಾಚಾರ್ ಗೋಸೇವಾ ದುರಂಧರರು. ಹೆಸರಿಗೆ ಕುಲಕರ್ಣಿಕಿ ಮಾಡುತ್ತಿದ್ದರೂ, ಸದಾ ಮನೆಯಲ್ಲಿ ಕಟ್ಟಿದ್ದ ಆಕಳಿಗೆ ಮಾರ್ಕೆಟ್ ಎಲ್ಲ ಹುಡುಕಾಡಿ ಎಳೆ ಹಸಿರು ಹುಲ್ಲು ತಂದು ತಿನ್ನಿಸೋದು, ಅದರ ಕೊಟ್ಟಿಗೆಯನ್ನು ಶುಚಿಯಾಗಿಡುವುದರಲ್ಲಿ ಆತನಿಗೆ ಅದ್ಭುತ ಶ್ರದ್ಧೆ ಇತ್ತು.

ಆಕಳು ಗರ್ಭಧರಿಸಿದರಂತೂ ಅದನ್ನು ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದ. ರಾತ್ರಿಯೆಲ್ಲ ಎದ್ದು ಕೂತು ಅದರ ಆರೈಕೆ
ಮಾಡುತ್ತಿದ್ದ, ಚಳಿಯಾಗಬಾರದೆಂದು ಕಂಬಳಿ ಹೊದಿಸುತ್ತಿದ್ದ, ಅದು ಪ್ರಸವಿಸುವ ದಿನ ಬಂದಾಗ ಎರಡೂ ಕೈಯ್ಯೊಡ್ಡಿ ಮರಿ
ನೆಲಕ್ಕೆ ಬೀಳದಂತೆ ಕೈಯಲ್ಲೇ ಹಿಡಿಯುತ್ತಿದ್ದ. ಅದರ ಮೈಮೇಲೆ ನೊಣ, ಸೊಳ್ಳೆ ಕೂರಬಾರದೆಂದು ಹೊಗೆ ಹಾಕುತ್ತಿದ್ದ.

ಹೋಗುತ್ತಾ, ಬರುತ್ತಾ ಅದರ ಮೇಲೆ ಕೈಯ್ಯಾಡಿಸುತ್ತಾ ಅದರ ಕಿವಿಯಲ್ಲಿ ಮುದ್ದು ಮುದ್ದಾಗಿ ಮಾತನಾಡಿಸುತ್ತಿದ್ದ. ಕರು
ಹಾಲು ಕುಡಿದು ಬಿಟ್ಟ ಮೇಲೆ ಹಿಂಡಿಕೊಳ್ಳುತ್ತಿದ್ದ. ಕೆಚ್ಚಲಿಗೆ ಹತ್ತಿದ ತೊಣಚಿಗಳನ್ನು ಕಿತ್ತೆಸೆಯುತ್ತಿದ್ದ. ಒಂದೇ.. ಎರಡೇ..
ಅದು ತನ್ನ ಮಗಳೇನೋ ಎನ್ನುವಂತೆ ಕಾಯುತ್ತಿದ್ದ..ಮುದ್ದಿಸುತ್ತಿದ್ದ.

ಒಮ್ಮೆ ಯಾರೋ ಹೊಸ ಮನೆ ಪ್ರವೇಶಕ್ಕೆ ಮೊದಲು ಆಕಳನ್ನು ನುಗ್ಗಿಸಬೇಕೆಂದು ಆಕಳನ್ನು ಒಯ್ದು ಅದು ಅಲ್ಲಿನ ನುಣುಪಾದ ಟೈಲ್ಸ್‌ಗಳ ಪಾವಟಿಗೆ ಏರುವಾಗ ಬಿದ್ದು ಕಾಲು ಮುರಿದುಕೊಂಡು ಬಿಟ್ಟಿತು, ತಾತ ಅಕ್ಷರಶಃ ಕಣ್ಣೀರು ಹಾಕಿಬಿಟ್ಟ. ಅಲ್ಲಿಂದ ಅದರ ಆರೈಕೆ ಇನ್ನೂ ಹೆಚ್ಚು ಮಾಡಿದ. ಸದಾ ಮುರಿದ ಕಾಲನ್ನೇ ನೇವರಿಸುತ್ತಾ ಕೂರುತ್ತಿದ್ದ. ನಾವು ಮೊಮ್ಮಕ್ಕಳು ನಾನು, ನಮ್ಮಣ್ಣ ಹೋದರೆ ‘ಪಲ್ಲಿ ಬಬ್ಬ, ಪ್ರಾಣೇಶ ಬಬ್ಬ’ ಬಂದ್ರು ಅಂತ ಮಕ್ಕಳ ಭಾಷೆಲೇ ನಮ್ಮನ್ನು ಮಾತನಾಡಿಸುತ್ತಿದ್ದ. ಆತನಿಗೆ ಎಲೆ ಅಡಿಕೆ ತಿನ್ನುವ ಅಭ್ಯಾಸ. ಆಗ ಹತ್ತುಪೈಸೆಗೊಂದು ಪಾನ್ ‘ಸುಣ್ಣದ ಎಲಿ, ದೆಹಲಿ ಜರ್ದಾ’ ಅಂತ ಹೇಳಿ ಕಟ್ಟಿಸಿಕೊಂಡು ಬರ್ರಿ’ ಎಂದು ಇಪ್ಪತ್ತು ಪೈಸೆ ಕೊಡುತ್ತಿದ್ದ, ಹತ್ತು ಪೈಸೆ ಪಾನಿಗೆ, ಉಳಿದ ಹತ್ತು ಪೈಸೆಯಲ್ಲಿ ನಾನು, ನಮ್ಮಣ್ಣ ತಲಾ ಐದೈದು ಪೈಸೆ ತೆಗೆದುಕೊಳ್ಳುತ್ತಿದ್ದಿವಿ.

ಮಧ್ಯಾಹ್ನ ತೆಳ್ಳನೆಯ ಧೋತರವೊಂದನ್ನು ಹೊದ್ದು ಒಂದರ್ಧ ಗಂಟೆ ಮಲಗುತ್ತಿದ್ದ. ಉಳಿದಂತೆ ಅತ್ಯಂತ ಕಷ್ಟ ಜೀವಿ, ಯಾವ
ಊರನ್ನೂ ನೋಡಲಿಲ್ಲ. ಆತನ ಕಷ್ಟದ ಜೀವನ, ಗೋಸೇವೆಗಳು ಇಂದು ಆತನ ಮಕ್ಕಳನ್ನು, ಮೊಮ್ಮಕ್ಕಳಾದ ನಮ್ಮನ್ನು
ಗೋಸೇವೆಯ ಪುಣ್ಯದ -ಲವೆಂಬಂತೆ ಕಾಪಾಡುತ್ತಿವೆ. ‘ಕಷ್ಟೇ-ಲಿ’ ಎಂಬ ಸಂಸ್ಕೃತ ಉಕ್ತಿ, ‘ರಕ್ಷಂತಿ ಪುಣ್ಯ ಪುರಾ ಕೃತಾನಿ’ ಅಂದರೆ ಹಿಂದೆ ಮಾಡಿದ ಪುಣ್ಯವೇ ನಮ್ಮನ್ನಿಂದು ಕಾಯುವುದು ಎಂಬ ಈ ಉಕ್ತಿಯಲ್ಲಿ ಹಿಂದೆ ಎಂಬುದಕ್ಕೆ ಬರೀ ಕಾಲ ಮಾತ್ರ ಗಣನೆಯಲ್ಲ, ಹಿಂದಿನ ಹಿರಿಯರೂ ಎಂದು ಅರ್ಥೈಸಿಕೊಳ್ಳಬೇಕಿದೆ.

ನನ್ನ ತಂದೆ, ನನ್ನ ತಾಯಂದಿರು ಬಡತನಕ್ಕಿಂತಲೂ ಸ್ವಲ್ಪ ಮೇಲೆ, ಮಧ್ಯಮ ವರ್ಗಕ್ಕಿಂತಲೂ ಸ್ವಲ್ಪ ಕೆಳಗೆ ಬದುಕಿದವರು. ಒಮ್ಮೊಮ್ಮೆ ನನಗೆ ಕನ್ನಡ ಜನತೆ ಹೊದಿಸಿದ ಸನ್ಮಾನದ ಜರತಾರಿ, ರೇಷ್ಮೆಯ ಶಾಲುಗಳ ರಾಶಿ ನೋಡಿದಾಗ ತೆಳ್ಳನೆಯ ಧೋತರ ಹೊದ್ದು ಮಲಗುತ್ತಿದ್ದ ತಾತಂದಿರು ನೆನಪಾಗುತ್ತಾರೆ. ಅಭಿಮಾನಿ ಸ್ನೇಹಿತರು ಕೊಡಿಸಿದ ಜಾಕೀಟು, ಪ್ಯಾಂಟ್, ಶರ್ಟ್, ರಾಮರಾಜ್ ಧೋತಿ, ಲುಂಗಿಗಳನ್ನು ಧರಿಸಿದಾಗ ಕಾಲರ್ ಬಳಿ, ಪ್ಯಾಂಟಿನ ತಳದಲ್ಲಿ ಪಿಸಿದುಹೋಗಿದ್ದ ಅಂಗಿ, ಪ್ಯಾಂಟು ಧರಿಸುತ್ತಿದ್ದ ನನ್ನಪ್ಪ ನೆನಪಾಗುತ್ತಾನೆ.

ನನ್ನಪ್ಪ ಕರ್ಚೀಫನ್ನು ಮುಖ, ಕೈಗಳನ್ನು ಒರೆಸಿಕೊಳ್ಳಲು ಪ್ಯಾಂಟಿನ ಜೇಬಿನಲ್ಲಿಟ್ಟುಕೊಳ್ಳದೇ ಪಿಸಿದು, ಹರಿದು ಹೋಗಿದ್ದ ಅಂಗಿ
ಕಾಲರ್‌ನ್ನು ಮುಚ್ಚಲು ಕುತ್ತಿಗೆ ಸುತ್ತ ಕಟ್ಟಿಕೊಳ್ಳಲು ಬಳಸುತ್ತಿದ್ದುದೇ ನೆನಪಾಗುತ್ತದೆ. ತರಹೇವಾರಿ ಪೆನ್ನುಗಳ ಗಿಫ್ಟ್  ತೆಗೆದು ಕೊಳ್ಳುವಾಗ, ಸ್ಕೂಲ್ ಮೇಸ್ಟ್ರು ಆಗಿದ್ದ ನನ್ನಪ್ಪ ಭಾನುವಾರ ದಿವಸ ತನ್ನ ಮರ್ಚೆಂಟ್, ಇಂಕ್ ಪೆನ್ನಿನ ಎಲ್ಲ ಭಾಗಗಳನ್ನು ಬೇರ್ಪಡಿಸಿ ಬಿಸಿ ನೀರಿನಲ್ಲಿ ನೆನೆ ಇಟ್ಟು ರಾತ್ರಿ ಹೊತ್ತಿಗೆ ಅವನ್ನು ತೊಳೆದು ಒರೆಸಿ ಇಂಕು ತುಂಬಿ, ಮೂಡಿಸಿ ನೋಡಿ, ಕಚ್ಚಾ ಪೇಪರ್ ಮೇಲೆ ಪೆನ್ನು ಮೂಡುತ್ತದೆಯೋ ಇಲ್ಲವೋ ಎಂದು ನೋಡಲು ತನ್ನ ಸಹಿ ಮಾಡಿ, ಪರೀಕ್ಷಿಸಿ, ಅಂಗಿಯ ಜೇಬಿಗೆ ಸಿಕ್ಕಿಸಿಕೊಂಡು ಸೋಮವಾರದ ಬೆಳಗಿನ ಶಾಲೆಗೆ ರೆಡಿಯಾಗುತ್ತಿದ್ದುದೇ ನೆನಪಾಗುತ್ತದೆ.

ಹಿರಿಯರು ತಮಗಿದ್ದ ಮಾಮೂಲು ವಸ್ತುಗಳನ್ನು ಜೋಪಾನ ಮಾಡಿ ಕಾಯ್ದುಕೊಂಡು ಬಳಸಿದ ಪುಣ್ಯವೇ ನಮಗಿಂದು ಹೀಗೆ ಎಲ್ಲ ಕಡೆಯಿಂದಲೂ ಅನುಕೂಲಗಳು ಒದಗುತ್ತವೆಯಾಗಲಿ, ನನ್ನ ವೈಯಕ್ತಿಕ ಪ್ರತಿಭೆ, ಸಾಧನೆ, ಶ್ರಮಗಳಲ್ಲ ಎಂಬುದೇ ನನ್ನ ಪ್ರಾಮಾಣಿಕ ನಂಬಿಗೆಯಾಗಿದೆ. ಮಿತವ್ಯಯ, ಭಗವಂತ ನೀಡಿದ ವಸ್ತುಗಳ ಸದ್ಬಳಕೆ, ಇದ್ದುದರಲ್ಲಿಯೇ ದಾನ, ಮೃದು ಮಾತು, ಕೈಲಾದ ಪರೋಪಕಾರ, ಇನ್ನೊಬ್ಬರ ಕಷ್ಟಕ್ಕೆ ಮರುಗುವುದು, ಆತ್ಮ ಪ್ರಶಂಸೆಯೂ ಬೇಡ, ಪರನಿಂದೆಯನ್ನೂ ಮಾಡದೆ ಬದುಕುವ ರೀತಿಯಿದೆಯಲ್ಲ ಇದೇ ಮುಂದಿನ ನಮ್ಮ ಮಕ್ಕಳ ಸುಖಕ್ಕೆ ದಾರಿಯಾಗುತ್ತದಾಗಲಿ, ನಾವು ಗಳಿಸಿಟ್ಟ ಧನ, ಕನಕ, ವಸ್ತು
ವಾಹನಗಳಲ್ಲ.

ನಿನ್ನ ಕಾಲ ಚಪ್ಪಲಿಯನ್ನು ಬಿಸಿಲಲ್ಲಿ ತಿರುಗಲೇಬೇಕಾದ ಭಿಕ್ಷುಕನಿಗೆ ನೀನು ನೀಡಿದ್ದೇ ಆದರೆ, ಮುಂದಿನ ನಿನ್ನ ಸಂತಾನ, ವಂಶದಲ್ಲಿಯ ಮಕ್ಕಳು, ಮೊಮ್ಮಕ್ಕಳು ಆನೆಯ ಮೇಲೆ ಕೂರುವುದರಲ್ಲಿ, ಮೆರೆಯುವುದರಲ್ಲಿ ಸಂದೇಹವೇ ಇಲ್ಲ. ಇಂದು ನಮ್ಮ ಮುಂದೆ ವೈಭವೋಪೇತವಾಗಿ ಮೆರೆಯುತ್ತಿರುವವರ ವೈಭವದ ಗುಟ್ಟು ಅವರ ಹಿರಿಯರದೇ ಆಗಿರುತ್ತದೆ. ಇವರ ಅಕ್ರಮ, ಅನ್ಯಾಯ, ದುರಾಚಾರಗಳು ಮಿತಿಮೀರಿದ ದಿನ ಇವರು ಆನೆಯ ಮೇಲಲ್ಲ, ಚಪ್ಪಲಿಗೆ ಹೊಡೆಯುವ ಮೊಳೆಗಿಂತಲೂ ಕಡೆಯಾಗಿರುತ್ತಾರೆ.

ಎಲ್ಲ ವ್ಯಕ್ತಿ, ವಸ್ತುಗಳಿಗೂ ಇದೇ ಹಿನ್ನೆಲೆ. ಇದನ್ನೇ ಶಾಸಗಳು ನಮಗೆ ತಿಳಿಸಿಕೊಡುವುದು. ಅರಿತರೆ ಸ್ವರ್ಗ, ಮರೆತರೆ ನರಕ,
ಮಿತಿಮೀರಿದರೆ ಮಾನಗೇಡಿತನ, ಈಗ ಎಲ್ಲೆಡೆ ನಡೆಯುತ್ತಿರುವುದು ಇದೇ ಅಲ್ಲವೇ..?